ವೈದೇಹಿ ---- ರಥಬೀದಿ ಗೆಳೆಯರ - ಮಹಿಳಾ ಭಾರತ [ ನಿ-ಡಾ / ಶ್ರೀಪಾದ ಭಟ್



ಮಹಿಳಾ ಭಾರತ .......
ಮಹಾಭಾರತದ ವಿವಿಧ ಪಾತ್ರಗಳ ಮೂಲಕ ವರ್ತಮಾನವನ್ನು ಶೋಧಿಸಿಕೊಳ್ಳುವಂತಹ ವಿಶೇಷ ಅಂತರ್ಬಂಧವುಳ್ಳ ನಾಟಕ ಮಹಿಳಾ ಭಾರತ.ಇವತ್ತಿನ ಪಾತ್ರಗಳು ಪುರಾಣದ ಅವೆಅವೇ ಪಾತ್ರಗಳೊಂದಿಗೆ ತಮಗೆ ಅರಿಯದಂತೆ ಸಂವಾದಿಸುತ್ತಾ ಸ್ಪಂದಿಸುತ್ತವೆ. ಹಾಗೆ ಮಾಡುತ್ತಲೇ ತಾವೇ ಆ ಪಾತ್ರಗಳು ಆಗುತ್ತಾ, ಹೊರ ಬರುತ್ತ ಇವತ್ತಿಗೂ ಮಹಾಭಾರತ ಮುಗಿಯದ ಕಥೆಯಾಗಿದೆ ಎಂಬುದನ್ನು ಸಶಕ್ತವಾಗಿ ತೋರಿಸಿಕೊಡುತ್ತದೆ.ಡಾ.ಶ್ರೀಪಾದ ಭಟ್ಟರ ನುರಿತ ನಿರ್ದೇಶನ ಸಾಮರ್ಥ್ಯ ನಾಟಕ ಕೃತಿಯನ್ನು ರಂಗದ ಮೇಲೆ ಇನ್ನಿಲ್ಲದಂತೆ ಅರಳಿಸಿದೆ. ಎಳೆಯ ಕಲಾವಿದರನ್ನು ನೀರ್ದೇ಼ಶಕರು ದುಡಿಸಿ ಕೊಂಡ ರೀತಿ ಅದ್ಭುತವೆನ್ನಲೇ ಬೇಕು.ಮನಸ್ಸಿನಲ್ಲಿ ಕೆತ್ತಿ ನಿಲ್ಲಿಸುವ ವಿನ್ಯಾಸ ಸೂಕ್ಷ್ಮವುಳ್ಳ ದೃಶ್ಯಾವಳಿಗಳು, ನೆಳಲು ಬೆಳಕು ಸಂಯೋಜನೆ,ಸಂಗೀತ,ಬೇರೆ ಭಾ಼ಷೆಯದು ಎಂದು ಒಂದಿನಿತು ಅನಿಸದಂತಹಾ ಮೂಲಕೃತಿಯ ಕನ್ನಡ ರೂಪಾಂತರ ( ಅಭಿಲಾಷಾ ಎಸ್.) ,ಇದೇ ಪ್ರಥಮವಾಗಿ ರಂಗವೇರುವ ನಟನಟಿಯರ ಭಾವಪೂರ್ಣ ನಟನೆ - ಎಲ್ಲವೂ ನಾಟಕದ ಆಶಯವನ್ನು ಎತ್ತಿ ಹಿಡಿಯುವಲ್ಲಿ ತಮ್ಮದೇ ಸಾರ್ಥಕ ಕೊಡುಗೆ ನೀಡಿವೆ. ನೋಡಿದ ಮೇಲೆ ಕಾಡುವ ಹಾಗೆ, ನಾಟಕ ವೀಕ್ಷಣೆಯನ್ನು ಒಂದು ಅನುಭವವಾಗಿಸಿದ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರಿಗೆ ಮತ್ತು ಪ್ರಸ್ತುತ ಪಡಿಸಿದ ರಥಬೀದಿ ಗೆಳೆಯರು ಸಂಸ್ಥೆಗೆ ಹಾರ್ದಿಕ ಅಭಿನಂದನೆಗಳು.

Sunday, July 26, 2015

ಡಾ/ಶ್ರೀಪಾದ ಭಟ್ ನಿರ್ದೇಶಿಸಿದ - ಮಹಿಳಾ ಭಾರತ -- ಉದಯ ಗಾಂವ್ಕರ್

ಗೆಳೆಯ ಶ್ರೀಪಾದ ಭಟ್ ನಿರ್ಧೇಶನದ ಮಹಿಳಾ ಮಹಾಭಾರತದ ಮೊದಲ ಪ್ರದರ್ಶನ ನೋಡಿದೆ. ನಿಜಕ್ಕೂ ಅದ್ಭುತ. ಮಹಾಭಾರತವನ್ನು ವರ್ತಮಾನದೊಂದಿಗೆ ಸಮೀಕರಿಸುವ ಪ್ರಯತ್ನ ಹೊಸದಲ್ಲ, ಮಹಾಭಾರತವನ್ನು ಮಹಿಳೆಯ ಕಣ್ಣಿನಿಂದ ಕಾಣುವ ಪ್ರಯತ್ನವೂ ಹೊಸದಲ್ಲ. ಆದರೆ, ಹೆಣ್ತನವನ್ನು ಜಗದ ಎಲ್ಲ ವೈರುಧ್ಯಗಳ ಜೊತೆ ಮುಖಾಮುಖಿಯಾಗಿಸುತ್ತ ಯಾವುದೇ ತೀರ್ಪುಗಳನ್ನು ನೀಡದೇ ನೋಡುಗರನ್ನು ಸಂವಾದಕ್ಕೆಳೆಯುವ ನಿರೂಪಣೆ ಬಹಳ ಹೊಸದು. ಒಂದುವರೆ ಗಂಟೆಗಳ ಕಾಲ ಎಮ್ ಜಿ ಎಮ್ ಕಾಲೇಜಿನ ಹಾಲಿನಲ್ಲಿ ಕಿಕ್ಕಿರಿದ ಪ್ರೇಕ್ಷಕರನ್ನು ಹಿಡಿದಿಟ್ಟಿದಷ್ಟೇ ಅಲ್ಲ ಆನಂತರವೂ ನಾಟಕದಿಂದ ಹೊರಬಂದು ಆ ನಾಟಕಕ್ಕೆ ಹೊರತಾದದ್ದನ್ನು ಯೋಚಿಸಲು ಸಾಧ್ಯವಾಗದಂತೆ ಮಾಡಿರುವುದು ಶ್ರೀಪಾದರ ಶಕ್ತಿ. ಕಥನಗಳ ನಡುವಿನ transition, ನೆರಳು ಬೆಳಕುಗಳನ್ನು ಭಾಷೆಯಂತೆ ಬಳಸಿದ ರೀತಿ, ಹಿಂಸೆಯ ಎಲ್ಲ ಆಯಾಮಗಳೂ ಅಂತಿಮವಾಗಿ ಇಡೀ ಜಗದ ಮಮತೆಯನ್ನು ತನ್ನೊಳಗೆ ಅಡಗಿಸಿಕೊಂಡ ಹೆಣ್ತನದ ಮೇಲಿನ ದಾಳಿಗಳು ಎಂಬುದನ್ನು ಸೂಚಿಸುವ ಅಂತ್ಯ ಎಲ್ಲವೂ ಅದ್ಭುತ. ನಾಟಕದುದ್ದಕ್ಕೂ ಸ್ಥಾಯಿಯಾಗಿ ಕಾಣುವ ತೊಟ್ಟಿಲು ನನಗೆ ತಾಯ್ತನದ ಸಂಕೇತವಾಗಷ್ಟೇ ತೋರದೇ ತಕ್ಕಡಿಯ ಒಂದು ಬದಿಯಂತೆ ಕಂಡಿತು ನಾಟಕದ ನಿರೂಪಣೆ ತಕ್ಕಡಿಯ ಇನ್ನೊಂದು ಬದಿಯನ್ನು ಶೋಧಿಸುವಂತಿತ್ತು.-ಉದಯ ಗಾಂವ್ಕರ್

Thursday, July 23, 2015