Saturday, November 23, 2019

ಮುರಳೀಧರ ಉಪಾಧ್ಯ ಹಿರಿಯಡಕ - ಸುನಂದಾ ಬೆಳಗಾಂಕರ್ ಅವರ -" ಝವಾದಿ"


                             ವಿಘಟನೆಯಿಂದ ಸಂಲಗ್ನದೆಡೆಗೆ
ಝುವಾದಿ (ಕಾದಂಬರಿ)
ಸುನಂದಾ ಬೆಳಗಾಂಕರ್ ಗೆ ಚಿತ್ರದ ಫಲಿತಾಂಶ
sunanda Belgaukar ಝವಾದಿ ,
ಲೇ : ಸುನಂದಾ ಬೆಳಗಾಂವಕರ
ಪ್ರ  : ಮನೋಹರ ಗ್ರಂಥಮಾಲಾ,
ಲಕ್ಷ್ಮೀ ಭವನ, ಸುಭಾಸ ರಸ್ತೆ,
ಧಾರವಾಡ - 580 001
ಮೊದಲ ಮುದ್ರಣ : 1994
ಬೆಲೆ: ರೂ. 120


ಪುಸ್ತಕ ಸಮೀಕ್ಷೆ
          ಕನ್ನಡಿಗ ಶಂಕರ ಗಿಳಿಯೂರ ಟಾಂಝಾಜಿಯಾದ  `ಗೊರೊಂಗೊರೊ ಕ್ರೇಟರ್'ನಲ್ಲಿ ಮೃಗರಾಜ ಸಿಂಬಾಕಿಂಗ್ ಲೈಂಗಿಕ ಸಂಬಂಧಗಳ ಕತೆ ಕೇಳುವುದರೊಂದಿಗೆ ಸುನಂದಾ ಬೆಳಗಾಂವಕರ ಅವರ `ಝವಾದಿ' ಕಾದಂಬರಿ ಆರಂಭವಾಗುತ್ತದೆ. ಮೃಗರಾಜ ಸಿಂಬಾಕಿಂಗ್ ತನ್ನ ಗೆಳತಿ ಕ್ಲಿಯೋಳಿಂದ ದೂರ ಸರಿದು ತನ್ನ ಮಕ್ಕಳ ತಾಯಿ ಸಿಂಬಾಕ್ವೀನ್ಗೆ ಹತ್ತಿರವಾಗಿ ಟಾಂಝಾನಿಯಾದಲ್ಲಿ  ಸಂಭ್ರಮದ ಸುದ್ದಿಯಾಗಿದೆ. ಅಗಲಿಕೆಯಿಂದ ಮಿಲನದತ್ತ ಸಿಂಹ-ಸಿಂಹಿಣಿಯರ ಕತೆ ಶಂಕರ ಗಿಳಿಯೂರನಿಗೆ ಕೌಟುಂಬಿಕ ಪಾಠವೊಂದನ್ನು ಕಲಿಸುತ್ತದೆ. ತನ್ನ ಅಬಚಿ(ಚಿಕ್ಕಮ್ಮ) ಚಾಡಿ ಮಾತು ಕೇಳಿ, ಹೆಂಡತಿ ಸೌದಾಮಿನಿಗೆ ಜಗದೀಶನೊಂದಿಗೆ ಅಕ್ರಮ ಸಂಬಂಧವಿದೆಯೆಂದು ಶಂಕಿಸಿ, ಅವಳನ್ನು ತ್ಯಜಿಸಿ ಝಾಂಬಿಯಾಕ್ಕೆ ಬಂದಿರುವ ಗಿಳಿಯೂರ ಈಗ ಪಶ್ಚಾತ್ತಾಪ ಪಡುತ್ತಾನೆ.
           ಮುಂಬಯಿಗೆ ಬಂದು ತನ್ನ ತಂಗಿ-ಭಾವ(ಜ್ಯೋತ್ಸ್ನಾ - ಶಶಿಧರ)  ಮತ್ತು ಜಗದೀಶರನ್ನು ಭೇಟಿ ಮಾಡಿದ ಶಂಕರ ಗಿಳಿಯೂರನಿಗೆ ತನ್ನ ಪತ್ನಿ ನಿರಪರಾಧಿ ಎಂದು ಅರಿವಾಗುತ್ತದೆ. ``ನನ್ನ ಮಗಾ ಹಾಲು ಕುಡಿಯೋ ಮುಂದ ನನ್ನ ಎದ್ರಿಗೆ ಒದ್ದು ಹೊರಟು ಹೋದ್ರು. ಆವತ್ತಿನ ದಿವಸ ನಾ ಅವರ ಅರ್ಧಾಂಗಿ ಸತ್ತು ಹೋಗಿನಿ, ನಾನು ಕೇವಲ ತಾಯಿ, ನನ್ನ ಮಕ್ಕಳ ತಾಯಿ'' ಎನ್ನುತ್ತಿದ್ದ ಸೌದಾಮಿನಿ ತನ್ನ ಗಂಡನನ್ನು ಕ್ಷಮಿಸುತ್ತಾಳೆ. ಅಬಚಿಯಿಂದಾಗಿ ಅಗಲಿದ ದಂಪತಿಗಳನ್ನು ಅತ್ಯಾ(ಶಶಿಧರನ ತಾಯಿ) ಒಂದುಗೂಡಿಸುತ್ತಾಳೆ. ಶಂಕರ ಗಿಳಿಯೂರ-ಸೌದಾಮಿನಿ ದಂಪತಿಗಳ ಪುನರ್ಮಿಲನದ ಸಂದರ್ಭದಲ್ಲೆ ಅವರ ಮಕ್ಕಳು ಅಭಿಷೇಕ-ಅಂಜಲಿಯರ ಮದುವೆಗಳೂ ನಡೆಯುತ್ತವೆ. ಇದಿಷ್ಟು 546 ಪುಟಗಳಷ್ಟು ಸುದೀರ್ಘವಾಗಿರುವ `ಝವಾದಿ' ಕಾದಂಬರಿಯ ಸಾರಾಂಶ.
              ಶಂಕರ ಗಿಳಿಯೂರನ ಹೃದಯ ಪರಿವರ್ತನೆಯಷ್ಟೆ ಸೌದಾಮಿನಿಯ ತ್ಯಾಗ, ಸಂಯಮ, ಕ್ಷಮೆಗಳೂ ಮುಖ್ಯ. ಆದರೆ ಸರ್ವಸಾಕ್ಷಿ ಪ್ರಜ್ಞೆಯ ಕಥನತಂತ್ರವಿರುವ ಕಾದಂಬರಿಯಲ್ಲಿ ಶಂಕರ ಗಿಳಿಯೂರನ ಪಾತ್ರ ಚಿತ್ರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಬಹುಮುಖ್ಯ ದೃಷ್ಟಿಕೋನದ ತಂತ್ರದಿಂದ ಸೌದಾಮಿನಿಯ ಅಂತರಂಗವನ್ನು ಇನ್ನಷ್ಟು ಚೆನ್ನಾಗಿ ಚಿತ್ರಿಸಲು ಸಾಧ್ಯವಿತ್ತು. ಶಂಕರ ಗಿಳಿಯೂರನ ಪರಾಂಗನ ವಿರತಿಯನ್ನು ಲೇಖಕಿ ಎಚ್ಚರದಿಂದ, ಕಷ್ಟಪಟ್ಟು ಚಿತ್ರಿಸಿದ್ದಾರೆ ಅನ್ನಿಸುತ್ತದೆ. ದಂಪತಿಗಳ ಅಗಲಿಕೆಯಲ್ಲಿ ಖುಷಿಪಡುವ ಅಬಚಿ ಲೈಂಗಿಕ ಅತೃಪ್ತಿಯ ರಾಕ್ಷಸಿಯಾಗಿದ್ದಾಳೆ. ಶಂಕರ ಗಿಳಿಯೂರನ ಮಾನಸಿಕ ಬದಲಾವಣೆಗೆ ಕಾರಣ ನೀಡಿರುವ ಲೇಖಕಿ ಅಬಚಿಯ ದುಷ್ಟತನಕ್ಕೆ ಕಾರಣವೇನೆಂದು ವಿವರಿಸಿಲ್ಲ. ಅದೃಶ್ಯ ರೂಪಿಯಾಗಿರುವ ಅಬಚಿಯ ಪಾತ್ರ ಅಪೂರ್ಣವಾಗಿದೆ.
           ಶಂಕರ-ಸೌದಾಮಿನಿ ದಂಪತಿಗಳ ವಿರಸ ದಾಂಪತ್ಯಕ್ಕೆ ಅಭಿಮುಖವಾಗಿ ಶಶಿ-ಜ್ಯೋತ್ಸ್ನಾರ ಸರಸ ದಾಂಪತ್ಯದ ಚಿತ್ರಣವಿದೆ. ಹಾಸ್ಯ ಪ್ರವೃತ್ತಿಯ ಶಶಿಧರ, `` ಹೆಣ್ಣು ದೇವರ ಝವಾದಿ ಸರ್'' ಎನ್ನುವ ಆಫ್ರಿಕಾದ ಟೂರಿಸ್ಟ್ ಗೈಡ್ ಟೆಂಬೋ, ತನ್ನ ಹದಿಹರೆಯದ ಏಕಮುಖ ಪ್ರಣಯದ ಸವಿನೆನಪುಗಳಲ್ಲಿ ಬದುಕುವ ಜಗದೀಶ, ತಾಯಿಯ ಪಾಪಕ್ಕೆ ತಾನು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಅಬಚಿಯ ಮಗ ಭರತ, ಇಂದಿರಾಗಾಂಧಿಯ ಕುರಿತು ಮಾತನಾಡುವ ಹೊಟೇಲ್ ಮಾಣಿ ಅನಂತಕೃಷ್ಣ ಇಂಥ ಹಲವು ಪಾತ್ರಗಳು ತಮ್ಮ ಜೀವಂತಿಕೆಯಿಂದ ನೆನಪಿನಲ್ಲಿ ಉಳಿಯುತ್ತದೆ.
        `ಝವಾದಿ' ಸ್ವಚ್ಛಂದತೆಯಿಂದ ಕೌಟುಂಬಿಕತೆಯತ್ತ, ವಿಘಟನೆಯಿಂದ ಸಂಲಗ್ನದತ್ತ, ಅಪನಂಬಿಕೆಯಿಂದ ವಿಶ್ವಾಸದತ್ತ, ವಿಪ್ರಲಂಭದಿಂದ ಮಿಲನದತ್ತ, ತುಡಿಯುವ ಕಾದಂಬರಿ. ವಾಸ್ತವ ಮತ್ತು ಆದರ್ಶಗಳನ್ನು ಹಿತಮಿತವಾಗಿ ಬೆಸೆಯುವ ಕಾದಂಬರಿ ಅನೋನ್ಯ ದಾಂಪತ್ಯ, ಕ್ಷಮೆ, ಪಶ್ಚಾತ್ತಾಪದಂಥ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.
         ಮಹಾನಗರಗಳ ಬದುಕಿನ ಅನಿವಾರ್ಯ ಅಂಗವಾದ ಫೋನ್ ಕಾದಂಬರಿಯ ಪಾತ್ರಗಳ ಬದುಕಿನ ಮುಖ್ಯ ಘಟನೆಗಳ ಸಾಕ್ಷಿಯಾಗುತ್ತದೆ. ಜಗದೀಶ ಮತ್ತು ಸೌದಾಮಿನಿಯ ಸಂಭಾಷಣೆಯನ್ನು ಶಂಕರ ಗಿಳಿಯೂರ ಸೌದಾಮಿನಿಗೆ ಗೊತ್ತಾಗದಂತೆ ಕೇಳಿಸಿಕೊಳ್ಳುವ ಘಟನೆಯಲ್ಲಿ ಫೋನ್ ಒಂದು ಆಧುನಿಕ ದಿವ್ಯವಾಗುವುದನ್ನು ಗಮನಿಸಬೇಕು. ಅಬಚಿ, ಕ್ರೌರ್ಯರತಿಸುಖ ಪಡೆಯಲು ಫೋನನ್ನು ಬಳಸುತ್ತಾಳೆ. ಸೌದಾಮಿನಿಗೆ ಫೋನ್ ಮಾಡಿ ವಿಕೃತ ಕಾಮಿಯಂತೆ ಮಾತನಾಡುತ್ತಾಳೆ.
         ಆಫ್ರಿಕದ ಒಂದು ಅಭಯಾರಣ್ಯ ಮತ್ತು ಮುಂಬಯಿ ಮಹಾನಗರದ ಕೆಲವು ಮನೆಗಳು ಕಾದಂಬರಿಯ ಕ್ರಿಯಾ ಕೇಂದ್ರಗಳಾಗಿವೆ. ಕೀರ್ತಿನಾಥ ಕುರ್ತಕೋಟಿಯವರು ಕಾದಂಬರಿಯ ಗ್ರಂಥ ಪ್ರಶಂಸೆಯಲ್ಲಿ ತಿಳಿಸಿರುವಂತೆ ಇಲ್ಲಿ `ವಿವರಗಳ ಶ್ರೀಮಂತಿಕೆ' ಇದೆ, ನಿಜ. ಆದರೆ ಕೆಲವೊಮ್ಮೆ ವಿವರಗಳ ದುಂದುಗಾರಿಕೆಯೂ ಕಾಣಿಸುತ್ತದೆ. ಶಶಿ-ಜೋತ್ಸ್ನಾರ ದಾಂಪತ್ಯ, ಅಂಜಲಿ-ವರುಣ, ಅಭಿಷೇಕ-ಭಕ್ತಿ ಇವರ ಮದುವೆಯ ವಿವರಗಳು ಅಗತ್ಯಕ್ಕಿಂತ ಹೆಚ್ಚು ಸುದೀರ್ಘವಾಗಿವೆ. ಕೆಲವು ಭಾಗಗಳಂತೂ ಜನಪ್ರಿಯ ಟಿ.ವಿ. ಧಾರಾವಾಹಿಗಾಗಿ ಬರೆದ ಬರಹದಂತೆ ಕಾಣಿಸುತ್ತವೆ. ಸುನಂದಾ ಬೆಳಗಾಂವಕರ ಅವರ ಮೊದಲ ಕಾದಂಬರಿ `ನಾಸು'ವಿಗೆ ಹೋಲಿಸಿದರೆ `ಝವಾದಿ' ಬಂದ ಶಿಥಿಲವಾಗಿದೆ ಅನ್ನಿಸುತ್ತದೆ. ಕಾವ್ಯದ ಚೆಲುವಿನ ಬೆಳಗಾಂ ಕನ್ನಡದಲ್ಲಿರುವ ಕಾದಂಬರಿಯಲ್ಲಿ ಬೇಂದ್ರೆಯವರ ಭಾವಗೀತೆಗಳು ಮತ್ತು ದಾಸರಪದಗಳ ತುಣುಕುಗಳು ಬೆಸೆದುಕೊಂಡಿದೆ.
          ಕಾದಂಬರಿಯ ಶೀರ್ಷಿಕೆಯಾಗಿರುವ ಝವಾದಿ `ಆಫ್ರಿಕದ ಕೀನ್ಯಾ, ಟಾಂಝಾನಿಯಾ ದೇಶಗಳ ಸ್ವಹೇಲಿ ಭಾಷೆಯ ಶಬ್ದ. `ಝವಾದಿ' ಎಂದರೆ ಕಾಣಿಕೆ. ``ಹೆಣ್ಣು ಕಾಮಧೇನು. ಸೃಷ್ಟಿ ಗಂಡಸಿಗಿತ್ತ ಝವಾದಿ'' ಎಂದು ಶಂಕರ ಗಿಳಿಯೂರ ಹೇಳುತ್ತಾನೆ. ಕಾದಂಬರಿಯ ಕೊನೆಯ ಸಾಲುಗಳಿವು- ``ಮಾನವ ಜನ್ಮ ದೊಡ್ಡದು ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ'' ಸೌದಾಮಿನಿಯ ಹಾಡು ಶ್ಯಾಮರಾಯರ ರೂಮಿನಿಂದ ಕೇಳಿ ಬರುತ್ತಿತ್ತು. ಮಾನವ ಜನ್ಮವೇ ಸೃಷ್ಟಿಕರ್ತನ ``ಝವಾದಿ''.  ತನ್ನ ಚೊಚ್ಚಲ ಕಾದಂಬರಿ `ನಾಸು'ವಿನಿಂದ ಖ್ಯಾತರಾದ ಅನಿವಾಸಿ ಭಾರತೀಯ ಕಾದಂಬರಿಕಾರ್ತಿ ಸುನಂದಾ ಬೆಳಗಾಂವಕರ ಅವರ ಹೊಸ ಕಾದಂಬರಿ, ಕನ್ನಡ ಕಾದಂಬರಿ ಪ್ರಕಾರಕ್ಕೆ ಒಂದು ಒಳ್ಳೆಯ `ಝವಾದಿ'(ಕಾಣಿಕೆ) ಎನ್ನಲಡ್ಡಿಯಿಲ್ಲ.
                                                                                                                          ಮುರಳೀಧರ ಉಪಾಧ್ಯ ಹಿರಿಯಡಕ