muraleedhara upadhya hiriadka

ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature

Sunday, February 9, 2014

"ಸರಸ್ವತಿ ಸಮ್ಮಾನ್'' ಪಡೆಯಲು ಕುಂ. ವೀ. ಪೀಠಿಕೆಯೇ ? -ಬಿ. ಎಮ್. ಬಶೀರ್

ಲಡಾಯಿ ಪ್ರಕಾಶನ: "ಸರಸ್ವತಿ ಸಮ್ಮಾನ್"ಸರಸ್ವತಿ ಸಮ್ಮಾನ್'' ಪಡೆಯಲು ಕುಂ. ವೀ.  ಪೀಠಿಕೆಯೇ ?

ಜ್ಞಾನಪೀಠ ಪ್ರಶಸ್ತಿ ಪಡೆದವರು ಮಾತ್ರ ಸಾಹಿತಿಗಳಲ್ಲ ಎಂದಿದ್ದಾರೆ ಕುಂ. ವೀರಭದ್ರಪ್ಪ. ನನ್ನ ಕೆಂಡದಂತಹ ಯೌವನದ ಕಾಲದಲ್ಲಿ ಕುಂವೀ ಅವರ ‘ಕೆಂಡದ ಮಳೆ ಸುರಿವಲ್ಲಿ ಉದಕವಾದೋರು’ ಕೃತಿ  ಓದಿ ಮೈಯನ್ನು ಇನ್ನಷ್ಟು ಬೆಚ್ಚ ಮಾಡಿಕೊಂಡವನು ನಾನು. ಆದರೆ ಅವರ ಇತ್ತೀಚಿನ ಕೆಲವು ಬರಹಗಳ ಕುರಿತಂತೆ ನನಗೆ ಕೆಲವು ಆಕ್ಷೇಪಗಳಿವೆ. ಅದು ಪಕ್ಕಕ್ಕಿರಲಿ.
ಜ್ಞಾನಪೀಠ ಪ್ರಶಸ್ತಿ ಮಾತ್ರವಲ್ಲ, ಯಾವ ಪ್ರಶಸ್ತಿಯೂ ಒಂಬ ಸಾಹಿತಿಯ ಪ್ರತಿಭೆಗೆ ಮಾನದಂಡವಲ್ಲ. ನೋಬೆಲ್ ಬಹುಮಾನ ಕೂಡ ಅಷ್ಟೇ. ಗಾಂಧಿಗೆ ಸಿಗದ ನೋಬೆಲ್ ಕುರಿತಂತೆ ಇಂತಹ ಮಾತುಗಳನ್ನು ಧಾರಾಳವಾಗಿ ಆಡಬಹುದು. ಆದರೆ ಒಂದು ಪ್ರಶಸ್ತಿಯನ್ನು ನಾನ್‌ಸೆನ್ಸ್ ಎನ್ನೋದು ಮಾತ್ರ ಸರಿಯಲ್ಲ. ಯಾಕೆಂದರೆ ಜ್ಞಾನ ಪೀಠ ಪ್ರಶಸ್ತಿ ಪಡೆದವರಷ್ಟೇ ಸಾಹಿತಿಗಳಲ್ಲ ಎನ್ನುವುದು ನಿಜ. ಹಾಗೆಂದು ಆ ಕಾರಣಕ್ಕಾಗಿಯೇ  ಜ್ಞಾನಪೀಠ ಪ್ರಶಸ್ತಿ ಪಡೆದವರು ಸಾಹಿತಿಗಳಲ್ಲ ಎನ್ನುವುದು ನಾನು ನಂಬೋಲ್ಲ. ಇದರಲ್ಲಿ ಕುಂ. ವೀ. ಅವರ ಹತಾಶೆಯನ್ನು ನಾನು ಗುರುತಿಸಬಲ್ಲೆ.
ಒಂದೆಡೆ ಜ್ಞಾನಪೀಠವನ್ನು ನಾನ್‌ಸೆನ್ಸ್ ಎಂದೂ ಕುಂವೀ ಕರೆಯುತ್ತಾರೆ. ಮಗದೊಂದೆಡೆ ಅನಂತಮೂರ್ತಿ ಮತ್ತು ಕಾರ್ನಾಡ್ ಅವರು ಜ್ಞಾನಪೀಠಕ್ಕೆ ಅಪಾತ್ರರು ಎಂದೂ ಕರೆಯುತ್ತಾರೆ. ಈ ಸಾಲು ಪರಸ್ಪರ ವಿರೋಧಾಭಾಸದಿಂದ ಕೂಡಿದೆ. ಜ್ಞಾನಪೀಠ ನಾನ್‌ಸೆನ್ಸ್ ಆದ ಕಾರಣಕ್ಕೆ ಅನಂತಮೂರ್ತಿ, ಕಾರ್ನಾಡ್ ಅನರ್ಹರು ಎಂಬಂತಹ ಧ್ವನಿಯೂ ಇದರ ಹಿಂದೆ ಇದೆ. ಅದೇನೇ ಇರಲಿ. ಜ್ಞಾನಪೀಠ ಪ್ರಶಸ್ತಿ ಈ ಹಿಂದೆ ಹತ್ತು ಹಲವು ಮಹನೀಯ ಲೇಖಕರಿಗೆ ದೊರಕಿದೆ. ಪಕ್ಕದ ಕೇರಳ, ಪಂಜಾಬ್, ಪಶ್ಚೀಮ ಬಂಗಾಳ ಸೇರಿದಂತೆ ಹಲವು ಶ್ರೇಷ್ಟ ಲೇಖಕ ಮಹನೀಯರಿಗೆ ಸಿಕ್ಕಿದ ಕಾರಣಕ್ಕಾಗಿಯೇ ಜ್ಞಾನಪೀಠ ಇವತ್ತು ಘನತೆಯನ್ನು ಪಡೆದಿದೆ. ಜ್ಞಾನಪೀಠವನ್ನು ನೀಡಲು ಖಾಸಗಿ ಸಮಿತಿಗೆ  ಅವರದೇ ಆದ ಮಾನದಂಡ ಇರಬಹುದು. ನೋಬೆಲ್ ಪ್ರಶಸ್ತಿಯ ಹಿಂದೆ ರಾಜಕೀಯ ಇದೆ. ಗಾಂಧಿಗೆ ನೋಬೆಲ್ ಸಿಗಲಿಲ್ಲ ಎಂದು, ನೋಬೆಲ್ ದೊರಕಿದವರನ್ನು ನೀವಾಳಿಸಿ ತೆಗೆಯಲು ಸಾಧ್ಯವಿಲ್ಲ. ನೋಬೆಲ್‌ನ್ನು ನಾನ್‌ಸೆನ್ಸ್ ಎಂದವರೂ ಇದ್ದಾರೆ. ಹಾಗೆಂದು ನೋಬೆಲ್ ಇರಬಾರದು ಎಂದರೂ ಅರ್ಥವಿಲ್ಲ.
ಜ್ಞಾನಪೀಠದಂತಹ ಶ್ರೇಷ್ಠ ಪ್ರಶಸ್ತಿ ಇರಲಿ. ಅದು ತನ್ನ ಕೆಲಸ ಮಾಡುತ್ತಿರಲಿ. ಅದು ಸಿಗದೇ ಇದ್ದ ಕಾರಣಕ್ಕಾಗಿ ಯಾರೂ ಲಂಕೇಶನ್ನು, ತೇಜಸ್ವಿಯನ್ನು ತಿರಸ್ಕರಿಸಲಿಲ್ಲ ಎನ್ನೋದು ನೆನಪಿರಲಿ. ಗೋಕಾಕ್‌ರಂತಹ ಲೇಖಕ ಬರೆದ ಭಾರತ ಸಿಂಧೂ ರಶ್ಮಿಗೆ ಜ್ಞಾನಪೀಠ ಸಿಕ್ಕಿದೆ. ಆದರೆ ಆ ಕೃತಿ ಈಗ ಎಲ್ಲಿದೆ, ಎಷ್ಟು ಜನರ ಮನಸ್ಸಿನಲ್ಲಿದೆ? ಎನ್ನೋದನ್ನು ಕುಂವೀ ಹೇಳುತ್ತಾರೆಯೆ? ಹಾಗೆಂದು ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ ಕೃತಿಗಳೆಲ್ಲವೂ ಜನರನ್ನು ತಲುಪಿಯೇ ಇಲ್ಲ ಎಂದೂ ಹೇಳಲಾಗುತ್ತದೆಯೆ? ಎಲ್ಲದಕ್ಕೂ ಅದರದೇ ಆದ ಮಿತಿಗಳಿವೆ. ಯಾವುದೂ ಅಂತಿಮ ಅಲ್ಲ.
ಅಂದ ಹಾಗೆ ಜ್ಞಾನಪೀಠ ಪ್ರಶಸ್ತಿಯ ಮಾತನ್ನು ಆಡುವಾಗ "ಸರಸ್ವತಿ ಸಮ್ಮಾನ್'' ಎನ್ನುವ ಪ್ರಶಸ್ತಿಯೊಂದರ ಬಗ್ಗೆ ಕುಂವೀ ಜಾಣ ವೌನ ತಾಳಿದ್ದರು. ಇದು ಶೀಘ್ರದಲ್ಲೇ ಕುಂ. ವೀರಭದ್ರಪ್ಪ ‘ಸರಸ್ವತಿ ಸಮ್ಮಾನ್’ಗೆ ಆಯ್ಕೆಯಾಗುವ ಸೂಚನೆಯಾಗಿದೆಯೆ? ಅದೇನೇ ಇರಲಿ. ಜ್ಞಾನಪೀಠ ಸಿಕ್ಕಲಿ, ಸಿಗದೇ ಇರಲಿ, ಸಂಸ್ಕಾರದ ಅನಂತಮೂರ್ತಿ ಇಂದಿಗೂ ಈ ನಾಡಿನ ಕಷ್ಟ ಸುಖದ ಸಂದರ್ಭದಲ್ಲಿ ಬಾಯಿತೆರೆದು ಮಾತನಾಡುತ್ತಿದ್ದಾರೆ. ಕುಂವೀಯಂಥಹ ಹಿರಿಯರು ಸದಾ ಸಮಯ ಸಂದರ್ಭ ನೋಡಿ ಬಾಯಿ ತೆರೆಯುತ್ತಾರೆ. ಅನಂತಮೂರ್ತಿಯನ್ನು ಇಷ್ಟ ಪಡಲು ಸಂಸ್ಕಾರ ಒಂದು ಸಾಕು. ಕಾರ್ನಾಡ್‌ನ್ನು ಮೆಚ್ಚಲು ತುಘಲಕ್ ಸಾಕು. ಅನಗತ್ಯವಾಗಿ ಕುಂವೀ ಮಾಡಿರುವ ರಂಪದಿಂದ, ಸಂಘಪರಿವಾದ ಜನರು ಭೂರಿ ಭೋಜನ ಸಿಕ್ಕಿದವರಂತೆ ಹಾರಾಡುತ್ತಿದ್ದಾರೆ. ಸಂಘಪರಿವಾರಕ್ಕೆ ಆಹಾರ ಮಾಡಿಕೊಟ್ಟದ್ದರ ಹಿಂದೆ ಅದೇನು ಸಾಹಿತ್ಯ ರಾಜಕೀಯವಿದೆಯೋ ಕಾಲವೇ ಹೇಳಬೇಕು.'' ಪಡೆಯಲು ಕುಂ. ವೀ. ಪೀಠಿಕೆಯೇ ?
muraleedhara Upadhya Hiriadka at 8:04 AM
Share

No comments:

Post a Comment

‹
›
Home
View web version

Contributors

  • k s somayaji
  • muraleedhara Upadhya Hiriadka
Powered by Blogger.