Sunday, March 30, 2014

ಡಾ / ಸಿದ್ದಲಿಂಗಯ್ಯ - ಇದು ಯಾರ ಯುಗಾದಿ ?

ನೆಲದ ಹೆರಿಗೆಯ ನೋವು ಅಂಗುಲಂಗುಲ ಕರಗಿ
ಹಸಿರು ಚಿಗುರಿನ ಕುಣಿತ ಹೂನಗೆಯ ನೋಟ
ಅವಳಿ ಫಲ ತಂದಿತ್ತು ಆಕಾಶದೊರೆನಂಟು
ಮರಗಿಡದ ಬಳಗಕ್ಕೆ ಉಡುಗೊರೆಯ ಹಬ್ಬ
ಹೂಗೊಂಚಲಿಗೆ ಬಣ್ಣ, ಪುಟ್ಟ ಹಕ್ಕಿಗೆ ಹಾಡು
ಬೆಟ್ಟಕ್ಕೆ ಎದೆಯೆತ್ತಿ ನಿಲ್ಲುವ ಧೈರ್ಯ
ಹೊಳೆಯ ನೀರಿಗೆ ಉಗುರ ಬಿಸಿ
ಗಾಳಿ ನೆರಳಿಗೆ ತಂಪು ತಂದ ಯುಗಾದಿ
ಕುಸಿದು ಕೊರಗುವ ಬಾಳಿಗೇನ ತಂದೆ
ಬೇವು ಬೆಲ್ಲದ ಅದೇ ಹಳೆಯ ಪಾಠ
ಸ್ವಂತದ್ದೋ ಸಾಲದ್ದೋ ಒಬ್ಬಟ್ಟಿನೂಟ
ಬದುಕೇ ಇಲ್ಲದ ಅನಾದಿಯ ಲೆಕ್ಕಕ್ಕೆ
ನೀನೊಂದು ಶಬ್ದ ಮಾತ್ರ
ಅರಳದೆ ಕಮರಿ ಹೋಗುವ ಜೀವಗಳು
ನಕ್ಷತ್ರದಂತೆ ನಗಲಾರದ ಬಾಳುಗಳು
ಎದೆಸೆಟೆದು ನಿಲ್ಲಲಾರದ ದೇಹಗಳು
ಕಣ್ಣು ಕುಕ್ಕುವಾಗ ಇದು ಯಾರ ಯುಗಾದಿ?
ಬೀದಿವಾಸಿಯ ಅಳಲು ಜೋಪಡಿಯ ಕತ್ತಲು
ದಿನದಿನದ ಅನ್ನಕ್ಕೆ ಮಾರಿಕೊಳ್ಳುವ ಮಯ್ಯಿ
ಆಸೆಯಲಿ ಚಾಚಿರುವ ಲಂಚಕೋರನ ಕೈಯಿ
ಯುಗಯುಗವು ಕಳೆದರೂ ಅಳಿಯದೇನು?
***

No comments:

Post a Comment