ಜಾತಿ ಅಪಮಾನ ಬಹಿಷ್ಕಾರಗಳ ತಲ್ಲಣಗಳೊಳಗೆ...........
ಕಲ್ಯಾಣವೆಂಬ ಪ್ರಣತೆಯಲ್ಲಿನ ಮಂದ ಬೆಳಕಿನ ಬತ್ತಿಯ ಕುಡಿ ಚಾಚಿ, ಪ್ರಖರ ಬೆಳಕಾಗಿಸುವ ಕನಸು ಕಂಡವರು ಅಸಂಖ್ಯಾತ ಜನ. ಕಾಯಕ ಜೀವಿಗಳು ಹೊತ್ತಿಸಿದ ಅರಿವಿನ ಬೆಳಕೊಂದು ಕಣ್ಣ ಪಾಪೆಯಲ್ಲಿ ಕಾಪಿಟ್ಟುಕೊಂಡು ನಂದಲಾರದ ದೃಷ್ಟಿ-ದೀಪದೊಂದಿಗೆ ಮತ್ತೆ ಮತ್ತೆ ಕಲ್ಯಾಣದತ್ತ ಅಡಿಯಿಟ್ಟವರ ಪಟ್ಟಿಯಲ್ಲಿ ಈ ಬಾರಿ ಪ್ರಗತಿಪರ ಮಠದ ಸ್ವಾಮಿಗಳೂ ಸೇರಿರುವರು. ಅಸ್ಪೃಷ್ಯತೆ ನಿವಾರಣೆಗಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ಮತ್ತು ದಲಿತರ ಕೇರಿಯಲ್ಲಿನ ಸಹಪಂಕ್ತಿಭೋಜನದಲ್ಲಿ ಎರಡುನೂರ ಐವತ್ತಕ್ಕೂ ಹೆಚ್ಚು ಪ್ರಗತಿಪರ ಮಠದ ಸ್ವಾಮಿಗಳು ಭಾಗವಹಿಸಿರುವರು.
ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ, ಇಷ್ಟಕ್ಕೂ ಸಾವಿರಾರು ವಚನಗಳಲ್ಲಿ ಕೆಲವು ವಚನಗಳು ಮಾತ್ರ ಜಾತಿ ತಾರತಮ್ಯದ ಬಗ್ಗೆ ಮಾತನಾಡಿವೆ. ಅಷ್ಟಕ್ಕೇ ಜಾತಿ ತಾರತಮ್ಯ ಇದೆಯೆಂದು ಹೇಳಿದಂತಾಗುವುದಿಲ್ಲ ಎಂದು ಅತಿಬುದ್ಧಿಜೀವಿಗಳ ಗುಂಪೊಂದು ಜಾತಿಭೇದವೇ ಇಲ್ಲವೆಂದು ಪ್ರಚಾರದಲ್ಲಿ ತೊಡಗಿದೆ. ಇಂಥ ಸಂದರ್ಭದಲ್ಲಿ ಪ್ರಗತಿಪರ ಮಠದ ಸ್ವಾಮಿಗಳು ಜೀವಂತವಾಗಿರುವ ಅಸ್ಪೃಷ್ಯತೆ ನಿವಾರಣೆಗಾಗಿ ಉಪವಾಸ ಕೈಗೊಂಡಿರುವರು. ನಾನೂ ನನ್ನ ತವರು ಕಲ್ಯಾಣದತ್ತ ಪಯಣ ಹೊರಟೆ. ನೂರಾರು ಮಹಿಳಾ ಸಂಗಾತಿಗಳೂ, ವಿದ್ಯಾಥರ್ಿಗಳೂ ಹೆಜ್ಜೆ ಹಾಕತೊಡಗಿದೆವು. ಮನುಷ್ಯರನ್ನೇ ಮನುಷ್ಯರೆಂದು ಪರಿಗಣಿಸದ ಜಾತಿ ಭೇದ ಅಂತರಂಗದಿಂದಲೇ ಕಿತ್ತೊಗೆದು ಮನದ ಮೈಲಿಗೆ ತೊಳೆಯುವ ಘೋಷಣೆಗಳು ಎಲ್ಲರ ಕಂಠದಿಂದ ಮೊಳಗುತ್ತಿದ್ದವು.
ಇದೇ ಕಲ್ಯಾಣದ ಸುತ್ತ-ಮುತ್ತಲಿನ ಹಳ್ಳಿಗಳಲ್ಲಿ ಇಂದಿಗೂ ಅಪಮಾನಜನಕವಾದ ಅಸ್ಪೃಷ್ಯತೆ ಆಚರಣೆಯಲ್ಲಿರುವುದು ಕರುಳು ಕಲಕುವ ಸಂಗತಿಯಾಗಿದೆ. ಚಿಟ್ಟಾ ಗ್ರಾಮದಲ್ಲಿ ಮಂದಿರ ಪ್ರವೇಶಿಸಿದ ಯುವಕನ ಮೇಲೆ ಹಲ್ಲೆ ನಡೆದು ಬಾಯಿಯಲ್ಲಿ ಮೂತ್ರ ಹೊಯ್ಯಲಾಗಿತ್ತು. ಉಕರ್ಿಯ ದಲಿತ ಕೇರಿಯ ಮೇಲೆ ಧಾಳಿ ಮಾಡಲಾಗಿತ್ತು. ಉದ್ಯೋಗ ಖಾತ್ರಿಯಲ್ಲಿ ಪ್ರಾಮಾಣಿಕ ಕೂಲಿ ಪಡೆಯುವಲ್ಲಿ ಸಂಘಟಿತ ಹೋರಾಟ ನಡೆದು ಯಶಸ್ವಿಯಾಗಿದ್ದಕ್ಕೆ ಹಳ್ಳಿಖೇಡ(ಬಿ) ಗ್ರಾಮದಲ್ಲಿ ದಲಿತ ಯುವಕನ ತಲೆ ಒಡೆಯಲಾಗಿತ್ತು. ಎಷ್ಟೊಂದು ಘಟನೆಗಳು ಮೆದುಳು ಹೃದಯದಲ್ಲಿ ತಲ್ಲಣಗೊಳಿಸುತ್ತ ಹರಿದಾಡತೊಡಗಿದವು. ನ್ಯಾಯಕ್ಕಾಗಿ ದಲಿತ ಸಮುದಾಯವು ಕೋಟರ್ಿನ ಬಾಗಿಲು ತಟ್ಟಿದ್ದಕ್ಕೆ ಮೇಲ್ಸಮುದಾಯದವರು ಅಟ್ರಾಸಿಟಿ ಕಾಯ್ದೆಯನ್ನೇ ಕಿತ್ತು ಹಾಕಿ ಎಂದು ಹೂಂಕರಿಸುತ್ತ ನೆಲಗುದ್ದುತ್ತ ಇದೇ ಕಲ್ಯಾಣದಲ್ಲಿ ಮೆರವಣಿಗೆ ಮಾಡಿದ್ದರು. ಮನುಷ್ಯರಂತೆ ಬದುಕಬೇಕೆಂದು ಬಯಸಿದರೂ ಭಯಪಡಿಸುವ ವ್ಯವಸ್ಥೆಯೊಂದು ಗಟ್ಟಿಗೊಳ್ಳುತ್ತಲೇ ಇದೆ. ಮಹಿಳೆಯರೊಂದಿಗೆ ದಲಿತರೊಂದಿಗೆ ಚೂರಾದರೂ ಗೌರವದಿಂದ ನಡೆದುಕೊಳ್ಳಲು ಸಿದ್ದವಿಲ್ಲದವರ ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನೆ ಕೇಳಿದ್ದೆಷ್ಟೊ ಸಲ. ತಿರಸ್ಕಾರದ ಹೊರತಾಗಿ ಅಲ್ಲಿ ಸಿಕ್ಕಿದ್ದು ಮತ್ತೇನಿಲ್ಲ. ಬಸವಣ್ಣ ನಮ್ಮ ಕನಸಲ್ಲಿ 'ಮಾದಾರ ಚೆನ್ನಯ್ಯನ ಮನೆಯ ದಾಸಿಯ ಮಗಳು, ಡೋಹಾರ ಕಕ್ಕಯ್ಯನ ಮನೆಯ ದಾಸಿಯ ಮಗನು ಬೆರಣಿಗೆಂದು ಹೋಗಿ ಸಂಗವ ಮಾಡಿದಲ್ಲಿ ಅವರಿಗೆ ಹುಟ್ಟಿದ ಮಗ ನಾನು. ಎನಗೆ ಹಾರುವನೆನಬೇಡಿರಯ್ಯ'ಎಂದು ತನ್ನ ಹುಟ್ಟನ್ನು ತಿರಸ್ಕರಿಸಿ ಮಾದಾರ ಚೆನ್ನಯ್ಯನ ಗೋತ್ರ ನಮ್ಮದೆಂದು ತಲೆಯೆತ್ತಿ ನಡೆಯಲು ಹೇಳಿದಂತೆ ಈಗಲೂ ಭಾಸವಾಗುತ್ತದೆ. ಆದರೆ ವಾಸ್ತವದಲ್ಲಿ ಬಾಡಿಗೆ ಮನೆಯೂ ಸಿಗದಾಗ ಎದೆ ಝಲ್ಲೆನ್ನುವುದು. ಅಷ್ಟೇ ಏಕೆ? ಜಾತಿ ಮೀರಿ ಮದುವೆಯಾಗಿದ್ದಕ್ಕೆ ಕರುಳ ಬಳ್ಳಿಗಳೂ ಉರುಳಾಗಿ ಕಾಡಿಲ್ಲವೇನು? ಬಹಿಷ್ಕಾರ, ತಿರಸ್ಕಾರ, ಅಪಮಾನಗಳು ನಾನಾ ಸ್ವರೂಪದಲ್ಲಿ ಹೆಡೆಯೆತ್ತುತ್ತಿವೆ. ಗುಲಬಗರ್ಾದ ತಾಜಸುಲ್ತಾನಪುರದಲ್ಲಿ, ಬೀದರನ ಔರಾದನಲ್ಲಿ ಜಾತಿ ಕಾರಣಕ್ಕಾಗಿ ಹತ್ಯೆಗೀಡಾದ ಯುವಜೋಡಿಗಳು ನಮ್ಮಂಥವರ ನಿದ್ದೆ ಕಸಿಯುವರು. ಜಾತಿಯೇ ಶ್ರೇಷ್ಠವಾಗಿ ಕರುಳ ಕುಡಿಯೂ ಬೇಡವಾಗುತ್ತಿದೆಯಲ್ಲವೇ?
ಕಲ್ಯಾಣವೆಂದರೆ ನೆನಪಾಗುವುದು ಬೀದಿ. ಹೌದು ಬೀದಿ ಮಾತ್ರ. ಇದೇ ಬೀದಿಯ ಉದ್ದಕ್ಕೂ ಹರಳಯ್ಯ ಮಧುವರಸ ಮತ್ತವರ ಮಕ್ಕಳಾದ ಕಲಾವತಿ ಶೀಲವಂತರ ಕಣ್ಣು ಕಿತ್ತು, ಆನೆ ಕಾಲಿಗೆ ಕಟ್ಟಿ ಎಳೆದರು. ಜಾತಿ ಗೋಡೆ ಕೆಡವಿದ್ದಕ್ಕೆ ಸನಾತನಿಗಳು ಕೊಟ್ಟ ಕ್ರೂರ ಶಿಕ್ಷೆಯದು. ಈ ಬೀದಿಯ ಮೈಗೆ ಮೆತ್ತಿಕೊಂಡ ರಕ್ತದ ಕಲೆಗಳು ಈಗಲೂ ನಿಚ್ಚಳವಾಗಿವೆ. ಮಾತ್ರವಲ್ಲ ಮತ್ತೆ ಮತ್ತೆ ರಕ್ತಕ್ಕೆ ರಕ್ತ ಸೇರುತ್ತಿದೆ. ಜಾತಿ ಕಾರಣದಿಂದ ನರಳುತ್ತಿರುವ ಹನಿಗಳು ನೆಲಕ್ಕುರುಳುತ್ತಿವೆ. ಇದೇ ಬೀದಿಯ ಮೇಲೆ ಎಲ್ಲರೂ ಹೆಜ್ಜೆಯೂರಿ ನಡೆಯುವರು. ರಕ್ತದ ಹನಿಯಿಲ್ಲದ ನೆಲ ಹುಡುಕುತ್ತಿರುವೆನು, ಹೆಜ್ಜೆಯಿಟ್ಟು ನಡೆಯಲು....ಇದೇ ಕಲ್ಯಾಣ ಕ್ರಾಂತಿಯ ಬೀಜ. ಈ ಬೀಜವೇ ಅಲ್ಲವೇನು, ನಮ್ಮೆದೆಯೊಳಗೆ ಜಾತಿ ಧಿಕ್ಕರಿಸುವ ಮೊಳಕೆಯಾಗಿದ್ದು... ಅದಕ್ಕೇ ಕಲ್ಯಾಣ ತನ್ನತ್ತ ಸೆಳೆಯುತ್ತದೆ.. ಎಲ್ಲ ಭೇದಗಳ ಕಿತ್ತೊಗೆಯುವ ಪ್ರೇರಣೆಯಾಗಿ. ಶಕ್ತಿಯಾಗಿ.
ತುಳಿತಕ್ಕೊಳಗಾದ ಜಾತಿಯವರು ದನಿಯೆತ್ತಿದರೂ ಸಾಕು ಬಹಿಷ್ಕಾರಗಳು ಭುಗಿಲ್ಲೆನ್ನುತ್ತವೆ. ಕಾಯ್ದೆ ಬರುವ ಮುನ್ನವಂತೂ ಬಹಿರಂಗ ಬಹಿಷ್ಕಾರಗಳು ಇನ್ನೂ ಪೈಶಾಚಿಕವಾಗಿದ್ದವು. ಈಗ ಕಾಯ್ದೆಯ ಸಣ್ಣ ಭೀತಿಯೊಂದಿರುವುದರಿಂದ ಬಹಿಷ್ಕಾರಗಳು ತಮ್ಮ ಸ್ವರೂಪ ಬದಲಿಸಿಕೊಂಡಿವೆ. ಕಾನೂನಿನ ಹಲ್ಲಿಗೆ ಸಿಕ್ಕಿಬೀಳದಂತೆ ಜಾರಿಯಲ್ಲಿವೆ. ಬಾಡಿಗೆ ಮನೆ ಖಾಲಿಯಿದ್ದರೂ ಕೊಡುವುದಿಲ್ಲ. ಅಪರೂಪಕ್ಕೆ ಕೊಟ್ಟರೂ ಮಾಂಸದಡುಗೆ ನಿಷೇಧ. ಕ್ಷೌರ ಮಾಡದಿರುವುದು. ಕಿರಾಣಿ ಅಂಗಡಿಯಲ್ಲಿ ಉಪ್ಪು ಅಥವ ಬೆಲ್ಲ ಕೊಡದಿರುವುದು. ಬಾವಿಯಿಂದ ನೀರು ತೆಗೆದುಕೊಳ್ಳುವಂತಿಲ್ಲ. ನಡೆಯುವ ಬೀದಿಯೂ ಬೇರೆ. ಇತ್ಯಾದಿಯೊಂದಿಗೆ ಮುಂದುವರೆದು ಈಗ ಅರಿವಿನ ಬಹಿಷ್ಕಾರವು ಚಾಲ್ತಿಯಲ್ಲಿದೆ. ಮೀಸಲಾತಿಯನ್ನು ಒಪ್ಪಿಕೊಳ್ಳಬೇಕಿರುವುದರಿಂದ ವ್ಯಕ್ತಿ ಬಹಿಷ್ಕಾರ ಸಾಧ್ಯವಿಲ್ಲ. ಹೀಗಾಗಿ ಅರಿವಿನ ಬಹಿಷ್ಕಾರ ರಾಜಾರೋಷವಾಗಿದೆ. ಉಧಾಹರಣೆಗೆ ದಲಿತರಿಗಾಗಿ ಮೀಸಲಿದ್ದ ಸ್ಥಾನಕ್ಕೆ ಜಾಣ ದಲಿತನನ್ನು ಆಯ್ಕೆಯಾಗದಂತೆ ನೋಡಿಕೊಳ್ಳುವುದು. ಜಾತಿವಾದವನ್ನು ಪುರಸ್ಕರಿಸುವ ತಮ್ಮ ಕೈಗೊಂಬೆಯಾಗುವ ದಲಿತ ವ್ಯಕ್ತಿಯನ್ನು ಆಯ್ಕೆ ಮಾಡುವುದು. ಕೆಲವು ರಾಜಕಾರಣಿಗಳು ಚುನಾವಣೆಯಲ್ಲಿ ಆಯ್ಕೆಯಾಗಲಿಕ್ಕಾಗಿ ಮತ್ತು ಮೇಲ್ಜಾತಿಯವರ ಕೃಪೆಗೆ ಪಾತ್ರವಾಗಲೆಂದು ಕಿಸೆಯಲ್ಲಿ ಚಹಾ ಗ್ಲಾಸು ಇಟ್ಟುಕೊಳ್ಳುವರು. ಮೇಲ್ಜಾತಿಯವರ ಮನೆಗೆ ಹೋದಾಗ ತಮ್ಮದೇ ಗ್ಲಾಸಿನಲ್ಲಿ ಚಹಾ ಕುಡಿದು ತೊಳೆದಿಟ್ಟುಕೊಂಡು ಬರುವರು. ಈ ಪ್ರವೃತ್ತಿಯು ಮೇಲ್ಜಾತಿಯವರ ಮೆಚ್ಚುಗೆ ಗಳಿಸುವುದು. ಹೀಗಾಗಿ ಪ್ರಜ್ಞಾವಂತ ಸ್ವಾಭಿಮಾನಿ ದಲಿತ-ಶೂದ್ರರು ಸ್ಪಧರ್ಿಸಿದ್ದರೆ ಅವರು ತಿರಸ್ಕರಿಸಲ್ಪಡುವರು. ಇದು ನೇರವಾಗಿಯೇ ಎಚ್ಚೆತ್ತ ದಲಿತ ಸ್ವಾಭಿಮಾನದ ಪ್ರಜ್ಞೆಯನ್ನು ತಿರಸ್ಕರಿಸುವ-ಬಹಿಷ್ಕರಿಸುವ ತಂತ್ರ. ಜಾಗತಿಕರಣದ ಹೊತ್ತಿನಲ್ಲಿ ಖಾಸಗಿಯವರು ಜಾಣತನ ಮತ್ತು ಕೌಶಲ್ಯಕ್ಕೆ ಮಣೆ ಹಾಕುವ ದಾಳ ಉರುಳಿಸುತ್ತಿರುವುದು ನೇರವಾಗಿಯೇ ಉದ್ಯೋಗದಿಂದ ಬಹಿಷ್ಕಾರವೆಂದಂತೆ. ದಲಿತ-ಶೂದ್ರ ವ್ಯಕ್ತಿಗಳನ್ನು ಮತ್ತು ಓಣಿಗಳನ್ನು ಸಂಸ್ಕಾರವಂತಗೊಳಿಸಲಿಕ್ಕಾಗಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ಗಮನಿಸಬಹುದು. ಕೊಳಚೆ ಪ್ರದೇಶದಲ್ಲಿ ದಲಿತರ ಓಣಿಯಲ್ಲಿ ವರಮಹಾಲಕ್ಷ್ಮಿ ಪೂಜೆ ನೆರವೇರಿಸುವ ಮೂಲಕ ಸುಸಂಸ್ಕೃತರನ್ನಾಗಿಸುವರಂತೆ. ಅಂದರೆ ದಲಿತ-ಶೂದ್ರರ ಈವರೆಗಿನ ಸಾಂಸ್ಕೃತಿಕ ಆಚರಣೆಗಳು ತಿರಸ್ಕಾರಯೋಗ್ಯ ಎಂದಂತೆ. ತನ್ಮೂಲಕ ದಲಿತ-ಶೂದ್ರರ ಅಸ್ತಿತ್ವವನ್ನೇ ಅಲ್ಲಗಳೆದು ಅವರ ವಿರೋಧಿ ಮೌಲ್ಯದ ಆಚರಣೆ ನಂಬಿಕೆಗಳನ್ನು ಹೇರುವುದು ಸಹ ತಿರಸ್ಕಾರ-ಬಹಿಷ್ಕಾರವೆಂದೇ ಅರ್ಥ.
ಅಸ್ಪೃಷ್ಯತೆ ನಿವಾರಣೆಗಾಗಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲಿಸಿ ಕಂದಾಯ ಮಂತ್ರಿಗಳಾದ ಶ್ರೀನಿವಾಸ ಪ್ರಸಾದ ಮಾತಾಡುತ್ತ, 'ಅಸ್ಪೃಷ್ಯತೆ ಆಚರಿಸುವ ಮತ್ತು ಪಂಕ್ತಿಭೇದ ಮಾಡುವ ಮಠ ಮಂದಿರಗಳಿಗೆ ಹೋಗಬಾರದು' ಎಂದು ಹೇಳಿದ್ದಕ್ಕೆ ತಖರಾರಿಲ್ಲ. ಆದರೆ ಸನಾತನಿ ಸಂಸ್ಕೃತಿಯು ಬಹು ಆಕರ್ಷಣೆಯಿಂದ ಹೆಣೆದ ಬಲೆಯಲ್ಲಿ ದಲಿತ-ಶೂದ್ರರಾದಿಯಾಗಿ ಬಹತೇಕರು ಬೀಳುತ್ತಿರುವಾಗ ಕಾನೂನು ನೆರವಿನ ಜರೂರಿಯಿದೆಯಲ್ಲವೇ? ರಾಜಾರೋಷವಾಗಿ ನಡೆಯುವ ಉಡುಪಿಯ, ಮಂತ್ರಾಲಯದಲ್ಲಿನ ಪಂಕ್ತಿಭೇದ, ಸುಬ್ರಹ್ಮಣ್ಯಂದಲ್ಲಿನ ಮಡೆಮಡೆ ಸ್ನಾನವು ಭಕ್ತಾದಿಗಳ ಇಚ್ಛೆಯೆಂದು ಜಾರಿಕೊಳ್ಳುತ್ತಿಲ್ಲವೇ? ತಮ್ಮ ದುರುಳ ವಿಚಾರಗಳನ್ನೇ ಜನತೆಯ ವಿಚಾರಗಳನ್ನಾಗಿಸುವ ಕುತಂತ್ರ ಅರಿಯದಂಥ ಮುಗ್ಧರಾಗುವುದು ಅಪಾಯಕಾರಿ. ತಮ್ಮದೇ ಸರಕಾರವಿದ್ದಾಗಲೂ ಮೂಢನಂಬಿಕೆ ಮತ್ತು ಪಂಕ್ತಿಭೇದ ನಿಷೇಧ ಕಾಯ್ದೆ ತರುವ ಮೂಲಕವೇ ಅಸ್ಪೃಷ್ಯ ನಿವಾರಣೆಯಂಥ ಸತ್ಯಾಗ್ರಹಕ್ಕೆ ಬೆಂಬಲಿಸುವ ನೈತಿಕತೆ ಬರುವುದು.
ಸಭೆಯಲ್ಲಿ ಭೂಮಿಯ ಪ್ರಶ್ನೆ ಎತ್ತಿದರು. ಅಸ್ಪೃಷ್ಯರಿಗೆ ಭೂಮಿಯಿಲ್ಲ. ಆಥರ್ಿಕವಾಗಿ, ಶೈಕ್ಷಣಿಕವಾಗಿ ಸಬಲಗೊಳಿಸದೆ ಅಸ್ಪೃಷ್ಯತೆ ಹೇಗೆ ನಿಲ್ಲುವುದು? ಹೌದು. ಹದಿನಾಲ್ಕು ಜಿಲ್ಲೆಯಲ್ಲಿರುವ ಎಂಬತ್ತು ಸಾವಿರ ದೇವದಾಸಿ ಮಹಿಳೆಯರು ಭೂರಹಿತರು. ಭೂರಹಿತರಲ್ಲಿ ದಲಿತ ಹಿಂದುಳಿದವರೇ ಬಹುದೊಡ್ಡ ಸಂಖ್ಯೆಯಲ್ಲಿರುವರು. ದಲಿತರು 40-50 ವರ್ಷಗಳ ಹಿಂದೆ ಸಾಗುವಳಿ ಮಾಡಿಕೊಂಡ ಬಗರ್ ಹುಕುಂ ಭೂಮಿಯನ್ನೂ ನಿದರ್ಾಕ್ಷಿಣ್ಯವಾಗಿ ಕಿತ್ತುಕೊಳ್ಳುವಂತೆ ಆದೇಶಿಸಲಾಗಿದೆ. ಅನೇಕ ದಲಿತರನ್ನು ಜೈಲಿಗಟ್ಟಲಾಗಿದೆ. ಭೂಮಿಯಿಲ್ಲ, ಉದ್ಯೋಗವಿಲ್ಲ, ಕಿತ್ತು ತಿನ್ನುವ ಬಡತನ ಇಂಥದ್ದರಲ್ಲಿ ಅಸ್ಪೃಷ್ಯತೆ ತನ್ನ ತಾನೇ ಹೋಗುವುದೇ? ಚಿಟ್ಟಾದಿಂದ ಬಂದವರೊಬ್ಬರು 'ಅಕ್ಕಾ, ಕನ್ನಡ್ ಶಾಳಾ ಬಂದ್ ಝಾಲಾ, ಕಾಯ್ ಕರ್ಣಾರ್?'(ಕನ್ನಡ ಶಾಲೆ ಮುಚ್ಚಿವೆ. ಏನು ಮಾಡುವುದು?) ಕೇಳಿದ್ದಕ್ಕೆ ಚಿಂತಿತಳಾದೆ.
ಚಾರಿತ್ರಿಕ ಉಪವಾಸ ಸತ್ಯಾಗ್ರಹದಲ್ಲಿ ಬಹು ದೊಡ್ಡ ಮಠದ ಸ್ವಾಮಿಜಿಗಳೂ ಇದ್ದರು. ಭಕ್ತಾದಿಗಳೆಲ್ಲಿ? ಮನದಂಗಳದ ರಜ ಗುಡಿಸಬೇಕಿದೆ. ಸೂರ್ಯ ಮುಳುಗಿದ. ಊಟಕ್ಕಾಗಿ ಮಾದಿಗರ ಓಣಿಗೆ ಎಲ್ಲರೂ ಹೊರಟರು. ಚಿಕ್ಕಂದಿನಲ್ಲಿ ಕೂಡಿ ಆಡಿದ ಗೆಳತಿ ಗಾಂಧಾರಿಗಾಗಿ ನಾನು, ನನಗಾಗಿ ಗಾಂಧಾರಿ ಪರಸ್ಪರ ಕಾಯುತ್ತಿದ್ದೇವು. ವಿಭೂತಿಯ ಬೇಲಿಯಿಲ್ಲದೆ, ಲಿಂಗ ಧಾರಣೆಯ ಹಂಗಿಲ್ಲದೆ ಪಂಕ್ತಿ ಬೆಳೆಯುತ್ತಿತ್ತು. ಜಗದ ಜಂಗಮವಾಗುತ್ತ.. ನಾನು ಗಾಂಧಾರಿ ಮಾತ್ರ ಬಾಲ್ಯದಲ್ಲಿ ಆಡಿದ ಅಂಗಳು, ದಿನಗಟ್ಟಲೆ ಹರಟೆ ಹೊಡೆದ ಮನೆ, ಕಲೆತುಂಡು ಜೊತೆ ಓದಿದ ದಿನಮಾನಗಳಿಗೆ ಜಾರಿದೆವು. ಜಾತಿಯಿಲ್ಲದ ಭೀತಿಯಿಲ್ಲದ ಗಳಿಗೆಗಳೊಂದಿಗೆ ಭವಿಷ್ಯ ಕಟ್ಟಿಕೊಟ್ಟ ಬಸವ ಮತ್ತು ಸಂಗಾತಿಗಳಿಗೆ ಹೃದಯ ಶರಣೆಂದಿತು. ಸಕಲ ಜೀವಾತ್ಮರಿಗೆ ಲೇಸು ಬಯಸುವ ಶರಣಸಂಗಾತಿಗಳು, ನೊಂದವರ ನೋವಿಗೆ ಮಿಡಿದಲ್ಲಿ ತನ್ನ ಸಂಗಾತಿಯೆಂದ ಕ್ಯೂಬಾದ ಚೇಗುವೆರಾ ಪರಸ್ಪರ ಕೈಕೈ ಹಿಡಿದು ಈ ರಾತ್ರಿಯಲ್ಲಿ ಬೆಳಕ ಬಿಂದುವಾದಂತೆ.....