stat Counter



Tuesday, April 12, 2016

ಡಾ/ ಸಿ. ಎನ್. ರಾಮಚಂದ್ರನ್ ಅವರ - ’ ಓದುಗರು ಮತ್ತು ಓದುವಿಕೆ” - ಮುರಳೀಧರ ಉಪಾಧ್ಯ

ಹಿರಿಯ ವಿಮರ್ಶಕ ಡಾ| ಸಿ.ಎನ್. ರಾಮಚಂದ್ರನ್ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿನಂತಿಯ ಮೇರೆಗೆ ೧೯೯೫ರಲ್ಲಿ ಈ ಪುಸ್ತಕವನ್ನು ಬರೆದರು. ಮೂರು ವರ್ಷಗಳ ಅನಂತರ ’ ಹಿಂದಿನ ಅಧ್ಯಕ್ಷರ ಕಾಲದಲ್ಲಿ ಅಚ್ಚಾಗದೇ ಉಳಿದ ಹಸ್ತಪ್ರತಿಗಳನ್ನು ಹಣಕಾಸಿನ ತೊಂದರೆಯಿರುವುದರಿಂದ ಮುದ್ರಣ ಮಾಡಲು ಸಾಧ್ಯವಿಲ್ಲ’ ಎಂದು ಕಾರಣ ನೀಡಿ ಅಕಾಡೆಮಿ ಹಸ್ತಪ್ರತಿಯನ್ನು ಹಿಂದಿರುಗಿಸಿತು.
ಈ ಪುಸ್ತಕದಲ್ಲಿ ಡಾ| ಸಿ.ಎನ್. ರಾಮಚಂದ್ರನ್ ಅವರು ರಾಚನಿಕೋತ್ತರ ಚಿಂತನೆಯ ಪ್ರಮುಖ ಕವಲುಗಳಲ್ಲಿ ಒಂದಾದ ’ ವಾಚಕ ಸ್ಪಂದನ ಸಿದ್ಧಾಂತ’ (Reader Responce Theory)ವನ್ನು ಪರಿಚಯಿಸಿದ್ದಾರೆ. ಅವರು ಈ ಹೊತ್ತಗೆಯ ಮೊದಲ ಭಾಗದಲ್ಲಿ ಆರ್ಷೇಯ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಓದುಗನ ಸ್ಥಾನವನ್ನೂ ಎರಡನೆಯ ಭಾಗದಲ್ಲಿ ಪಾಶ್ಚಾತ್ಯ ವಾಚಕ-ಸ್ಪಂದನ ಸಿದ್ಧಾಂತ ಗಳ ಇತಿಹಾಸ ಹಾಗೂ ಮುಖ್ಯ ಪರಿಕಲ್ಪನೆಗಳಾನ್ನು ಚರ್ಚಿಸಿದ್ದಾರೆ. ಮೂರನೆಯ ಅಧ್ಯಾಯದಲ್ಲಿ ’ವಾಚಕ-ಸ್ಪಂದನ ಸಿದ್ಧಾಂತ’ವನ್ನು ಪ್ರತಿಪಾದಿಸಿದ ವಿಮರ್ಶಕರಾದ ಫಿಷ್, ಕಲರ್ ಹಾಗೂ ಇಜರ್ ಇವರೆಲ್ಲರ ಚಿಂತನೆಯ ಸಾರಾಂಶವಿದೆ. ಕೊನೆಯ ಅಧ್ಯಾಯದಲ್ಲಿ ವಾಚಕ-ಸ್ಪಂದನ ಸಿದ್ಧಾಂತದ ಮಹತ್ವವನ್ನು ಅವರು ಹೀಗೆ ಗುರುತಿಸಿದ್ದಾರೆ.-" ಈ ಶತಮಾನದ ಉತ್ತರಾರ್ಧದಲ್ಲಿ  ರೂಪನಿಷ್ಠ, ನವ್ಯ ವಿಮರ್ಶೆಗೆ ಪ್ರತಿಕ್ರಿಯೆಯಾಗಿ ಮೂಡಿ ಬಂದ ಅನೇಕ ಚಿಂತನಾ ಕ್ರಮಗಳಲ್ಲಿ ಒಂದು ಮುಖ್ಯ ಧಾರೆಯೆಂದು ವಾಚಕ-ಸ್ಪಂದನ ಸಿದ್ಧಾಂತಗಳನ್ನು ಗುರುತಿಸಬಹುದು. ಕೃತಿಯೊಂದನ್ನು ಸಾವಯವ, ಸ್ವಯಂಪೂರ್ಣ ಹಾಗೂ ಸ್ವಯಂವೇದ್ಯವೆಂಬಂತೆ ಕಾಣುವ ಕೃತಿಕೇಂದ್ರಿತ ಚಿಂತನೆಯನ್ನು ವಿರೋಧಿಸಿ, ಕೃತಿ ಸೃಷ್ಟಿಯಲ್ಲಿ ಲೇಖಕನದಷ್ಟೇ ಓದುಗನ ಪಾತ್ರವೂ ಮುಖ್ಯವೆಂದು ವಾಚಕ-ಸ್ಪಂದನ ಸಿದ್ಧಾಂತಿಗಳು ಮಂಡಿಸಿದರು. ’ಅರ್ಥವೆಂಬುದು ಕೃತಿಯಲ್ಲಿ ಹುದುಗಿರುವುದಿಲ್ಲ, ಓದುಗನೊಬ್ಬನು ಕೃತಿಯನ್ನು ಓದುವ ಪ್ರಕ್ರಿಯೆಯಲ್ಲಿ ಓದುಗನಿಗಾಗುವ ಅನುಭವವೇ ಅರ್ಥ ಎಂದು  ಇವರು ಪ್ರತಿಪಾದಿಸಿದರು. ಕೃತಿಯೊಂದರ ಅರ್ಥ ಇದೇ ಹೊರತು ಬೇರೊಂದಿಲ್ಲ ಎಂಬ ನವ್ಯ ವಿಮರ್ಶೆಯ ಅದ್ವೈತ ನಿಲುವನ್ನು ತಿರಸ್ಕರಿಸಿ, ಬಹ್ವರ್ಥ ಸಾಧ್ಯತೆಗಳನ್ನು ನಿದರ್ಶಿಸಿದರು." "ಓದುಗನಿಗೆ ಕಾಡಿನಲ್ಲಿ ಕಳೆದು ಹೋದ ಮಗುವಿನಂತಹ ಅನುಭವ’ ಆಗದಂತೆ ವಾಚಕ ಕೇಂದ್ರಿತ ಸಿದ್ಧಾಂತವನ್ನು ಪರಿಚಯಿಸುವುದರಲ್ಲಿ ಡಾ| ಸಿ.ಎನ್.ರಾಮಚಂದ್ರನ್ ಯಶಸ್ವಿಯಾಗಿದ್ದಾರೆ.
ಮುರಳೀಧರ ಉಪಾಧ್ಯ, ಹಿರಿಯಡಕ

ದುಗರ ಮತ್ತು ಓದುವಿಕೆ
(ಪಾಶ್ಚಾತ್ಯ ವಾಚಕ-ಸ್ಪಂದನ ಸಿದ್ಧಾಂತಗಳು)
ಲೇ:ಡಾ| ಸಿ.ಎನ್. ರಾಮಚಂದ್ರನ್
ಪ್ರ: ಆನಂದಕಂದ, ಗ್ರಂಥಮಾಲೆ,
’ಬಲರಾಮ’ ಅಧ್ಯಾಪಕರ ಕಾಲನಿ,
ಮಲ್ಲಾಡಿಹಳ್ಳಿ ಚಿತ್ರದುರ್ಗ
ಜಿಲ್ಲೆ-೫೩೩೫೩೧.
ಮೊದಲ ಮುದ್ರಣ :೧೯೯೮
ಬೆಲೆ ರೂ,೫೦( ಪುಟಗಳು:೮೨)

No comments:

Post a Comment