ದುರ್ಗಾಪುರದ ಕೇವಲ ಮನುಷ್ಯರು
ದುರ್ಗಾಪುರ ಎಂ. ವ್ಯಾಸರ ಕತೆ, ಕಾದಂಬರಿಗಳ ಕಾಲ್ಪನಿಕ ಖಾಯಂ ಕ್ರಿಯಾಕೇಂದ್ರ. ಅಲ್ಲಿನ ಶಂಕರೀನದಿ, ಶಂಕರಗುಡ್ಡ, ಮುರಿದ ಸೇತುವೆ, ಮಠ, ಇವೆಲ್ಲ ವ್ಯಾಸರ ಓದುಗರಿಗೆ ಚಿರಪರಿಚಿತ. ದುರ್ಗಾಪುರದ ಗಂಡು-ಹೆಣ್ಣುಗಳಕ್ರಿಯೆಗಳ ಹಿಂದಿನ ಮಾನಸಿಕ ಒತ್ತಡವನ್ನು ಕತೆಗಾರ ವ್ಯಾಸ ಅನಾವರಣಗೊಳಿಸುತ್ತಾರೆ.
"ರಥ" ಕಾದಂಬರಿಯ ಸುಶೀಲೆಗೆ ರವಿಯೊಂದಿಗಿನ ತನ್ನ ವಿವಾಹಪೂರ್ವದ ಗುಪ್ತ ಪ್ರಣಯದ ನೆನಪುಗಳಿಂದ ಬಿಡುಗಡೆ ಇಲ್ಲ. "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಎಂಬಂಥ ಗಂಡು-ಹೆಣ್ಣಿನ ಸೆಳೆತವನ್ನು ವ್ಯಾಸರು ತನ್ನ ಮೋಡಿ ಮಾಡುವ ಗದ್ಯಶೈಲಿಯಲ್ಲಿ ಚಿತ್ರಿಸುತ್ತಾರೆ. ರವಿಯ ಪ್ರತಿಬಿಂಬವಾಗಿ ಕಂಡ ತನ್ನ ಸಹೋದ್ಯೋಗಿ, ಕಲಾವಿದ ಕೃಷ್ಣಕಾಂತನನ್ನು ಸುಶೀಲಾ ಮದುವೆಯಾಗುತ್ತಾಳೆ. ಮರದಿಂದ ಬಿದ್ದ ರವಿ ಪರಾವಲಂಬಿಯಾಗುತ್ತಾನೆ.
"ಕ್ಷೇತ್ರ"ದ ಅನಂತಶರ್ಮ, ನೀತಿ-ಅನೀತಿಗಳ ಚೌಕಟ್ಟನ್ನು ಮೀರಿ ಬದುಕನ್ನು ಸಹಜವಾಗಿ ಸ್ವೀಕರಿಸಬೇಕೆಂಬ ವ್ಯಾಸರ ಪ್ರಾತಿನಿಧಿಕ ಪಾತ್ರ. ಅನಂತಶರ್ಮನ ಮಗ ಮನೋರೋಗಿಯಾಗಲು ತಾಯಿಯನ್ನು ಕುರಿತ ಅವನ ಹಂಬಲ, ಅಘೋಷಿತ ಮಲತಾಯಿ ವಿಲಾಸಿನಿಯ ಮಗ ಭೂಷಣನ ಮೇಲಿನ ಅವನ ಹೊಟ್ಟೆಕಿಚ್ಚು ಕಾರಣವಾಗಿವೆ. ಹೆಂಡತಿ ಮೀನಾಗೆ ಹಿಂಸೆ ನೀಡುತ್ತಿದ್ದ, ಕಾದಂಬರಿಕಾರನಾಗಲು ಬಯಸಿ ಸೋತ ರವಿ ಅಪಘಾತದಲ್ಲಿ ಸಾಯುತ್ತಾನೆ. ಅನಂತಶರ್ಮರು ತನ್ನ ಅನೌರಸ ಪುತ್ರ ಭೂಷಣನನ್ನು ಮನೆಗೆ ಕರೆತಂದಾಗ ರವಿಯ ತಿದ್ದಿದ ರೂಪದಂತೆ ಕಾಣುತ್ತಿದ್ದ ಭೂಷಣನನ್ನು ಮೀನಾ ಬಾಳಸಂಗಾತಿಯಾಗಿ ಸ್ವೀಕರಿಸುತ್ತಾಳೆ. ಮಾಧವ ಕೆದ್ಲಾಯನಂಥ ಒಂದು ಚಿಕ್ಕ ಪಾತ್ರವನ್ನು ಓದುಗರ ಮನದಾಳದಲ್ಲಿ ಅವಿಸ್ಮರಣೀಯವಾಗಿ ಉಳಿಸಬಲ್ಲ ಕಥನಕೌಶಲ ಎಂ. ವ್ಯಾಸರಲ್ಲಿದೆ.
"ಸ್ನಾನ" ಕಾದಂಬರಿಯ, ಸಾಂಧು ಮಠದ ಸತ್ಯಾನಂದ ಸ್ವಾಮಿಗೆ ತನ್ನ ಗುರು ನಿತ್ಯಾನಂದರ ರಹಸ್ಯ ದಿನಚರಿ ಪುಸ್ತಕ ಸಿಗುತ್ತದೆ. ತಾನು ನಿತ್ಯಾನಂದ ಸ್ವಾಮಿ-ಸರಸ್ವತಿಯರ ದಾಂಪತ್ಯೇತರ ಸಂಬಂಧದ ಮಗ ಎಂದು ಸತ್ಯಾನಂದನಿಗೆ ತಿಳಿಯುತ್ತದೆ. ಈ ಸ್ವಾಮಿ, ತನ್ನ ಗುರುಗಳ ದಿನಚರಿಯನ್ನು ಮಾತ್ರವಲ್ಲ, "ಸಂಸ್ಕಾರ" ಕಾದಂಬರಿಯನ್ನು, ರಜನೀಶರ ಪುಸ್ತಕಗಳನ್ನು ಓದಿಕೊಂಡಿದ್ದಾನೆ. ವಿಧವೆ ತರುಣಿ ದೇವಕಿಯ ಸೆಳೆತಕ್ಕೊಳಗಾಗುವ ಮನೋರೋಗಿ ಸತ್ಯಾನಂದನಿಗೆ ಅವಳೊಂದಿಗೆ ಸಹಜ ಸಂಬಂಧ ಸಾಧ್ಯವಾಗುವುದಿಲ್ಲ.
ಎಂ. ವ್ಯಾಸರ ತ್ರಿವಳಿ ಕಾದಂಬರಿಗಳಲ್ಲಿ ಸುಶೀಲಾ, ಮೀನಾ, ದೇವಕಿ ಈ ತರುಣಿಯರು ಉತ್ಸವಮೂರ್ತಿ ಬದಲಾದುದನ್ನು ಒಪ್ಪಿಕೊಳ್ಳುವ ರಥಗಳಂತೆ ಬದುಕನ್ನು ಸಹವಾಗಿ ಸ್ವೀಕರಿಸುತ್ತಾರೆ; ವ್ಯಕ್ತ ಮಧ್ಯದ ಪ್ರವಾಹದಲ್ಲಿ ಈಜುತ್ತಾರೆ. ದಾಂಪತ್ಯದ್ರೋಹ ಮಾಡಿದ ಪಾಪಪ್ರಜ್ಞೆಯಿಂದ ಸರಸ್ವತಿ ಹುಚ್ಚಿಯಾಗುತ್ತಾಳೆ. "ಕ್ಷೇತ್ರ"ದ ರವಿ, "ಸ್ನಾನ"ದ ಸತ್ಯ ತಮ್ಮ ಹಿರಿಯರ ಲೈಂಗಿಕ ಜೀವನ ಅನೈತಿಕವಾಗಿತ್ತು ಎಂಬ ನಂಬಿಕೆಯಿಂದ ಅಸ್ವಸ್ಥರಾಗುತ್ತಾರೆ. ವ್ಯಾಸರ ಪಾತ್ರಗಳು ಬದುಕು ಸಹ್ಯವೋ ಅಸಹ್ಯವೋ ಎಂಬ ಪ್ರಶ್ನೆಯನ್ನು ಕೇಳುತ್ತ ಪುರುಷಾರ್ಥಗಳಲ್ಲಿ ಒಂದಾದ ಕಾಮದ ಹುಡುಕಾಟದಲ್ಲಿ ಚಿರಂಜೀವಿಗಳಾಗುತ್ತವೆ.
"ಮನುಷ್ಯರ ಸಂಬಂಧಗಳಿಗೆ ನೈತಿಕ, ಅನೈತಿಕದ ಕಟ್ಟುಪಾಡುಗಳೆಂದೂ ಅಡ್ಡಿಯಾಗಲಾರವು. ಮಹಾಭಾರತ ಕಾಲದಿಂದಲೂ ಹೀಗೆಯೇ" ಎನ್ನುವ ಎಂ. ವ್ಯಾಸರು ಇಂಗ್ಲಿಷ್ ಕಾದಂಬರಿಕಾರ ಡಿ.ಎಚ್. ಲಾರೆನ್ಸ್‌ನನ್ನು ನೆನಪಿಸುತ್ತಾರೆ. ನವ ನವೋನ್ಮೇಷ ಪ್ರತಿಭೆಯ ಕಾದಂಬರಿಕಾರ, ಸಾಹಿತ್ಯಪ್ರಪಂಚದಲ್ಲಿ ಅವಗಣಿಸಲ್ಪಟ್ಟಿರುವ ಒಂಟಿ ಪ್ರಯಾಣಿಗ ಎಂಬ ಕೊರಗು ವ್ಯಾಸರಲ್ಲಿದೆ. ಗಣನೆ ಅವಗಣನೆಗಳು ಸಾಹಿತ್ಯಪ್ರಪಂಚದಲ್ಲಿ ಜಂಗಮ ಸ್ವರೂಪಿಯಾದ ಸ್ಥಾನಪಲ್ಲಟಗೊಳ್ಳುವ ಕ್ರಿಯೆಗಳು. ಕೇಂದ್ರವನ್ನು ವ್ಯತ್ಯಸ್ತಗೊಳಿಸುವ ವಿಮರ್ಶೆ ಬಂದಾಗ ಅಂಚಿನಲ್ಲಿರುವ ಭವಭೂತಿಯಂಥವರು ಮುಂಚೂಣಿಗೆ ಬರುತ್ತಾರೆ.
- ಮುರಳೀಧರ ಉಪಾಧ್ಯ ಹಿರಿಯಡಕ
"ಪುಸ್ತಕ ಸಮೀಕ್ಷೆ", ಉದಯವಾಣಿ
ಸ್ನಾನ
(ಮೂರು ಕಿರು ಕಾದಂಬರಿಗಳು)
ಲೇ: ಏಂ. ವ್ಯಾಸ
ಪ್ರ: ಅಂಕಿತ ಪುಸ್ತಕ
53, ಶ್ಯಾಂಸಿಂಗ್ ಕಾಂಪ್ಲೆಕ್ಸ್
ಗಾಂಧಿ ಬಜಾರ್ ಮುಖ್ಯರಸ್ತೆ
ಬೆಂಗಳೂರು 560 004
ಮೊದಲ ಮುದ್ರಣ: ೨೦೦೨
ಬೆಲೆ: ರೂ: 80
SNANA[ three kannada novels]
M. VYASA
published by-
ANKITA PUSTAKA
53, shamsingh complex,
gandhi bazar,
BANGALORE--560004
first edition-2009
price- rs- 80
snana[m. vyasa] book review by muraleedhara upadhya hiriadka
SNANA[ three kannada novels]
M. VYASA
published by-
ANKITA PUSTAKA
53, shamsingh complex,
gandhi bazar,
BANGALORE--560004
first edition-2009
price- rs- 80
snana[m. vyasa] book review by muraleedhara upadhya hiriadka
No comments:
Post a Comment