. ಪುರುಷೋತ್ತಮ ಬಿಳಿಮಲೆಯವರ ಘಟಿಕೋತ್ಸವ ಭಾಷಣದ ಪೂರ್ಣ ಪಾಠ
ಕರ್ನಾಟಕದ ಘನತೆವೆತ್ತ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಶ್ರೀ ವಾಜುಬಾಯಿ ಪಟೇಲ ಅವರೇ, ಕರ್ನಾಟಕ ಸರ್ಕಾರದ ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರೂ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆದ ಶ್ರೀ ಟಿ ಬಿ ಜಯಚಂದ್ರ ಅವರೇ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮಲ್ಲಿಕಾ ಘಂಟಿ ಅವರೇ, ಕುಲಸಚಿವರಾದ ಡಾ. ಪಾಂಡುರಂಗ ಬಾಬು ಅವರೇ, ಸಿಂಡಿಕೇಟ್ ಮತ್ತು ಶೈಕ್ಷಣಿಕ ಪರಿಷತ್ತಿನ ಸದಸ್ಯರೆ, ಇವತ್ತು ನಾಡೋಜ ಪ್ರಶಸ್ತಿಯನ್ನು ಸ್ವೀಕರಿಸಲು ಆಗಮಿಸಿರುವ ಮಹನೀಯರೇ, ವಿವಿಧ ನಿಕಾಯಗಳ ಡೀನರುಗಳೇ, ವಿಶ್ವವಿದ್ಯಾಲಯದ ಎಲ್ಲ ಉದ್ಯೋಗಿಗಳೆ, ಮಾಧ್ಯಮದ ಪ್ರತಿನಿಧಿಗಳೆ, ಮತ್ತು ಎಲ್ಲ ಕನ್ನಡ ಬಂಧುಗಳೇ,
ಮೊದಲಿಗೆ, ಈ ನುಡಿ ಹಬ್ಬದಲ್ಲಿ ವಿವಿಧ ಪದವಿಗಳನ್ನು ಸ್ವೀಕರಿಸುತ್ತಿರುವ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಅಭಿನಂದನೆಗಳು. ಹಾಗೆಯೇ ನಾಡೋಜ ಪ್ರಶಸ್ತಿಗೆ ಭಾಜನರಾದ ಮಹನೀಯರಿಗೆ ಅಭಿವಂದನೆಗಳನ್ನು ಸಲ್ಲಿಸುತ್ತಿದ್ದೇನೆ. ತಮ್ಮ ಮಾರ್ಗದರ್ಶನದಲ್ಲಿ ಕನ್ನಡ ಮತ್ತು ಕರ್ನಾಟಕ ಇನ್ನಷ್ಟು ಆರೋಗ್ಯಕರವಾಗಿ ಬೆಳೆಯಲಿ ಎಂದು ಪ್ರಾಮಾಣಿಕವಾಗಿ ಆಶಿಸುತ್ತೇನೆ.
ನಾನು ಇಲ್ಲಿ ಕೆಲವು ಮಾತುಗಳನ್ನು ಹೇಳುವ ಹೊತ್ತಿಗೆ ಕನ್ನಡ ವಿಶ್ವ ವಿದ್ಯಾಲಯವು ಬೆಳ್ಳಿ ಹಬ್ಬದ ಹೊಸ್ತಿಲಲ್ಲಿ ಬಂದು ನಿಂತಿದೆ. ಕಳೆದ 23 ವರ್ಷಗಳಲ್ಲಿ ಇಲ್ಲಿ ನಡೆದ ನುಡಿಹಬ್ಬಗಳಲ್ಲಿ ಅನೇಕ ಮಹನೀಯರುಗಳು ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ವಿಸ್ತರÀಣೆಯ ಬಗೆಗೆ ಅತ್ಯಂತ ಮೌಲಿಕವಾದ ಮಾತುಗಳನ್ನು ಹೇಳಿದ್ದಾರೆ. ಅವು ನಮ್ಮ ಕನ್ನಡ ಪರ ಚಿಂತನಾಕ್ರಮಗಳ ಶಕ್ತಿಯನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿವೆ. ಇಲ್ಲಿ ಇದುವರೆಗೆ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ವಿದ್ವಾಂಸರುಗಳು ನಮ್ಮ ಅಧ್ಯಯನ ಕ್ರಮದ ವಿಭಿನ್ನ ಶಿಸ್ತುಗಳಿಗೆ ಸೇರಿದ್ದಾರೆ. ಅವರೆಲ್ಲರೂ ಕನ್ನಡ ವಿಶ್ವವಿದ್ಯಾಲಯದ ಅಪೂರ್ವ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿರುವರಲ್ಲದೆ, ಅದು ಮುಂದೆ ಮಾಡಬೇಕಾದ ಕೆಲವು ಕೆಲಸಗಳ ಬಗೆಗೆಯೂ ಮುನ್ಸೂಚನೆಗಳನ್ನು ನೀಡಿದ್ದಾರೆ. ಈ ಸಲಹೆಗಳಲ್ಲಿ ವಿಶ್ವವಿದ್ಯಾಲಯ ಎಷ್ಟನ್ನು ಅಂಗೀಕರಿಸಿದೆ, ಎಷ್ಟÀ್ಟನ್ನು ನಿರಾಕರಿಸಿದೆ ಮತ್ತು ಎಷ್ಟನ್ನು ನಿರ್ಲಕ್ಷಿಸಿದೆ ಎಂಬುದನ್ನು ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಒಂದು ವಿಶ್ಲೇಷಣೆಗೆ ಒಳ ಪಡಿಸಲು ಸಾಧ್ಯವಾದರೆ ಅದರಿಂದ ತುಂಬಾ ಪ್ರಯೋಜನವಾದೀತು.
1992ರಲ್ಲಿ ಈ ವಿಶ್ವವಿದ್ಯಾಲಯ ಆರಂಭಗೊಂಡಾಗ ಇಲ್ಲಿದ್ದದ್ದು ಬೆಣಚುಕಲ್ಲಿನ ಬೋಳುಗುಡ್ಡ ಮತ್ತು ನೀಲಿ ಪರದೆ ಹಾಸಿಕೊಂಡ ಕಮಲಾಪುರ ಕೆರೆ. ಆದರೆ ಈಗ ಈ ಕೆರೆಯಿಂದ ಸಾಕಷ್ಟು ನೀರು ಹರಿದಿದೆ, ಬೋಳುಗುಡ್ಡದ ಬೆಣಚುಕಲ್ಲುಗಳು ಹಸನಾದ ಕನಸುಗಳನ್ನು ಬಿತ್ತುತ್ತಾ ಹಸಿರು ಗಿಡಮರಗಳಿಗೆ ಆಸರೆ ನೀಡಿ ನಮ್ಮನ್ನು ಇಲ್ಲಿವರೆಗೆ ಕರೆದುತಂದಿದೆ. ಈ ನಡಿಗೆಯನ್ನು ಹತ್ತಿರದಿಂದ ಮತ್ತು ದೂರದಿಂದ, ಒಳಗಿನಿಂದ ಮತ್ತು ಹೊರಗಿನಿಂದ ಕಂಡವನು ನಾನು. ಹೀಗೆ ಈ ವಿಶ್ವವಿದ್ಯಾಲಯದ ಭಾಗವಾಗಿ ಬೆಳೆದ ನನ್ನನ್ನು ಇಲ್ಲಿಗೆ ಈಗ ಅತಿಥಿಯಾಗಿ ಕರೆದಿದ್ದೀರಿ. ಇದನ್ನು ಒಂದು ದೊಡ್ಡ ಗೌರವ ಎಂದು ನಾನು ಭಾವಿಸುತ್ತೇನೆ. ಆದರೆ ಇದು ಒಂದು ಬಗೆಯ ಕಷ್ಟವನ್ನೂ ತಂದು ಕೊಟ್ಟಿದೆ. ಜೊತೆಗೆ ಓಡಾಡಿದ ಜನಗಳ ಮುಂದೆಯೇ ಅತಿಥಿಯಾಗಿ ಮಾತಾಡುವುದು ಸುಲಭವಲ್ಲ. ಈ ಸಂಕೋಚದಲ್ಲಿ ಕನ್ನಡ ಸಂಶೋಧನೆಗೆ ಸಂಬಂಧಿಸಿದಂತೆ ಕೇವಲ ಎರಡು ವಿಷಯಗಳನ್ನು ತಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ.
1. ಸಂಶೋಧಕರ ಮುಂದಿರುವ ಆತಂಕಗಳು, ಅಪಾಯಗಳು ಮತ್ತು ಸವಾಲುಗಳು
ಈ ವಿಶ್ವವಿದ್ಯಾಲಯನ್ನು ಸಂಶೋಧನೆಗಾಗಿಯೇ ಕಟ್ಟಲಾಯಿತು. ‘ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಉನ್ನತ ಮಟ್ಟದ ಸಂಶೋಧನಾ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದು ಇದರ ಗುರಿ’ ಎಂದು ಮೊದಲಿನಿಂದಲೂ ಹೇಳುತ್ತಾ ಬರಲಾಗಿದೆ. ಈ ಗುರಿ ಸಾಧನೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಬಹುತೇಕ ಯಶಸ್ವಿಯಾಗಿದೆ. ದೇಸೀ ಚಿಂತನಾಕ್ರಮವೊಂದನ್ನು ಕಟ್ಟಲು ಬೇಕಾದ ಮೂಲಸಾಮಗ್ರಿಗಳನ್ನು ಇಲ್ಲಿನ ಅನೇಕ ಸಂಶೋಧಕರು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಜೊತೆಗೆ ಇತಿಹಾಸ, ಶಾಸನ, ಹಸ್ತಪ್ರತಿ, ಗ್ರಂಥ ಸಂಪಾದನೆ, ಜಾನಪದ, ಛಂದಸ್ಸು, ಸ್ಥಳನಾಮ, ಮೊದಲಾದ ಕನ್ನಡದ ಮಾಹಿತಿಗಳ ಮೂಲಕವೇ ಕನ್ನಡವನ್ನು ಕಟ್ಟಿದ ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಅವರಂಥವರು ಇಲ್ಲಿ ಕುಲಪತಿಗಳಾಗಿ ಕೆಲಸ ಮಾಡಿದ್ದಾರೆ. ಅವರು ಬರೆದ ಸಾವಿರಕ್ಕೂ ಹೆಚ್ಚು ಲೇಖನಗಳು ಮತ್ತು ನೂರಕ್ಕೂ ಹೆಚ್ಚು ಕೃತಿಗಳು ಕನ್ನಡ ಸಂಶೋಧಕನೊಬ್ಬನ ಚರಮ ಸಿದ್ಧಿಯ ಹಾಗೆ ಭಾಸವಾಗುತ್ತದೆ. ಆದರೆ ಇಂದು ಪರಿಸ್ಥಿತಿ ಬದಲಾಗುತ್ತಿರುವಂತೆ ತೋರುತ್ತಿದೆ. ಕಲಬುರ್ಗಿಯವರು ತಮ್ಮ ಸಂಶೋಧನೆಯ ಸತ್ಯಗಳಿಂದಾಗಿಯೇ ಅಮಾನುಷವಾಗಿ ಕೊಲೆಯಾದರು.ಸಂಶೋಧಕ ಆಗಾಗ ಶಿಲುಬೆಗೇರಬೇಕಾಗುತ್ತದೆ ಎಂಬ ಅವರ ಮಾತು ಅವರಲ್ಲಿಯೇ ನಿಜವಾಯಿತು. ಕೊಲೆಗಾರರನ್ನು ಇವತ್ತಿನವರೆಗೆ ಸರಕಾರಕ್ಕೆ ಹಿಡಿಯಲಾಗಿಲ್ಲ. ಅಂದರೆ ಸಂಶೋಧಕರು ಇಂದು ತಮ್ಮ ಓದಿನಲ್ಲಿ ಕಂಡುಕೊಂಡ ಅಥವಾ ಕ್ಷೇೀತ್ರಕಾರ್ಯದಲ್ಲಿ ತಾವು ಸಂಗ್ರಹಿಸಿದ ಮಾಹಿತಿಗಳ ಆಧಾರದ ಮೇಲೆ ತಮ್ಮ ಸಂಶೋಧನೆಯನ್ನು ಮುಂದುವರಿಸುವುದು ಕಷ್ಟವಾಗುತ್ತಿದೆ. ಬದಲು ಸಮಕಾಲೀನ ಸಮಾಜ ಏನನ್ನು ನಿರೀಕ್ಷಿಸುತ್ತದೆಯೋ ಅದನ್ನೇ ಹೇಳಬೇಕಾಗಿರುವ ಒತ್ತಡದಲ್ಲಿ ನಾವು ಸಿಲುಕಿದ್ದೇವೆ. ಟಿಪ್ಪೂ ಸುಲ್ತಾನನ ಲಾವಣಿಯೊಂದರಲ್ಲಿ ಬರುವ –
‘ಟೀಪು ರಾಜ್ಯದೊಳು ಶರಾಬು, ಶೇಂದಿ, ಗಾಂಜಾ ಅಫೀಮು ಇರಲಿಲ್ಲ,
ಟೀಪುವಿನ ಕಾಲದೊಳು ಜೂಜಿನಾಟ ಮೇಣ್ ವೈಭಿಚಾರದ ಸುಳಿವಿಲ್ಲ’
ಎಂಬ ಸಾಲುಗಳನ್ನು ಉದ್ಧರಿಸಿದ್ದಕ್ಕೆ ನಾನು ಅನೇಕ ಕೆಟ್ಟ ಮತ್ತು ಅಶ್ಲೀಲ ಮಾತುಗಳನ್ನು ಕೇಳಬೇಕಾಯಿತು. ಪಂಡರಾಪುರ ವಿಠ್ಠಲನು ವಲಸೆಗಾರ ಪಶುಪಾಲಕರ ದೈವವಾಗಿರುವ ಸಾಧ್ಯತೆ ಇದೆ ಎಂಬ ಮಾತನ್ನು ಬರೆದದ್ದಕ್ಕೆ ನಾನು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ‘ದೇವನಹಳ್ಳಿಯಲ್ಲಿ ಟಿಪ್ಪು ಹುಟ್ಟಿದ್ದರಿಂದ ಅವನ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬಹುದಾಗಿತ್ತು’ ಎಂಬ ಒಂದು ಸಣ್ಣ ಅಭಿಪ್ರಾಯನ್ನು ಗಿರೀಶ್ ಕಾರ್ನಾಡರು ವ್ಯಕ್ತಪಡಿಸಿದ್ದೇ ದೊಡ್ಡ ಅಪರಾಧವಾಗಿ ಅನೇಕರಿಗೆ ಕಂಡು ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕಾಯಿತು. ಕರ್ನಾಟಕವೂ ಸೇರಿದಂತೆ, ಈ ದೇಶದ ಸುದೀರ್ಘ ಇತಿಹಾಸದಲ್ಲಿ ಇಲ್ಲಿಗೆ ವಲಸೆ ಬಂದು ನೆಲೆಸಿದ ಜನಾಂಗಗಳ ಮತ್ತು ಸಮುದಾಯಗಳ ಲೆಕ್ಕ ಇಟ್ಟವರಿಲ್ಲ. ಒಂದು ಬಗೆಯ ನಿರಂತರತೆಯನ್ನು ಸದಾ ಕಾಪಾಡುತ್ತಲೇ, ಜೊತೆ ಜೊತೆಗೆ ಬದಲಾಗುತ್ತಾ ಹೋಗಿರುವ ಈ ನೆಲವು, ಬಗೆ ಬಗೆಯ ಸಂಸ್ಕøತಿಗಳನ್ನು ಉದಾರವಾಗಿ ಸ್ವೀಕರಿಸಿ ಬೆಳೆಯಲು ಅನುವು ಮಾಡಿಕೊಟ್ಟಿದೆ. ಈ ಹಂತದಲ್ಲಿ ನಡೆದ ಹೊಸ ಆವಿಷ್ಕಾರಗಳು, ಸೇರ್ಪಡೆಗಳು, ನಿರಾಕರಣೆಗಳು, ಸಂಘರ್ಷಗಳು ಮತ್ತು ಸಮನ್ವಯಗಳು ನಮ್ಮ ದೇಶವನ್ನು ಇತರ ದೇಶಗಳಿಂದ ಬೇರೆಯಾಗಿಸಿದೆ. ಜಗತ್ತಿನ ಮೂಲೆ ಮೂಲೆಗಳಿಂದ ಇಲ್ಲಿಗೆ ಬೌದ್ಧಿಕತೆ ಹರಿದು ಬಂದಿದೆ, ಭೌತಿಕ ಸಾಮಗ್ರಿಗಳು ಸಾಗಿ ಬಂದಿವೆ. ಅವು ಕಾಲಾಂತರದಲ್ಲಿ ಇಲ್ಲಿಯವರಿಗೆ ಗೊತ್ತಾಗದ ಹಾಗೆ ಇಲ್ಲಿಯವೇ ಆಗಿವೆ. ಇಂದು ಕರ್ನಾಟಕ ಸಂಗೀತದ ಮೂಲ ದ್ರವ್ಯವಾಗಿರುವ ವಯೋಲಿನ್, ಮಧ್ಯ ಏಷಿಯಾದಿಂದ ಇಲ್ಲಿಗೆ ಆಗಮಿಸಿದೆ. ಜನಪದ ಸಂಗೀತದ ಅದರಲ್ಲೂ ಭಾರತದ ದಲಿತರ ಸುಖ ದು:ಖಗಳ ಭಾಗವಾಗಿರುವ ದಪ್ಪು ಕೂಡಾ ಮೂಲತಹ ನಮ್ಮದಲ್ಲ. ಇಂಥ ಘಟನೆಗಳು ನಮಗೆ ಸಹನೆಯನ್ನು ಹೇಳಿಕೊಟ್ಟಿದೆ. ಈ ನೆಲದಲ್ಲಿ ನಡೆದ ಬಹುದೊಡ್ಡ ಸಂವಾದಗಳು ಇಂದು ನಮ್ಮ ಪ್ರಜಾಪ್ರಭುತ್ವದ ತಳಹದಿಯಾಗಿ ಕೆಲಸ ನಿರ್ವಹಿಸುತ್ತಿದೆ. ಕ್ಷಮೆಯನ್ನು ಧರ್ಮದ 10 ಲಕ್ಷಣಗಳಲ್ಲಿ ( ಕ್ಷಮಾ ದಮೋ ಆಸ್ತೇಯಂ..) ಒಂದು ಎಂದು ಪ್ರಾಚೀನ ಹಿಂದೂಗಳು ನಂಬಿದ್ದರು. ಆದರೆ ಈಗ ಏನನ್ನು ಹೇಳಿದರೆ ನಾನು ಅಪಾಯದಿಂದ ಪಾರಾಗಬಹುದು ಎಂದು ಎರಡೆರೆಡು ಬಾರಿ ಯೋಚಿಸಿ ಬರೆಯಬೇಕಾದ ಮತ್ತು ಮಾತಾಡಬೇಕಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಸಂಶೋಧನೆಗಳು ಪೇಲವವಾಗುವುದರಲ್ಲಿ ಅನುಮಾನವಿಲ್ಲ.
ಈ ಸಮಸ್ಯೆ ಇನ್ನೂ ಜಟಿಲವಾಗಿರುವುದು ಸಂಶೋಧನೆಗೆ ಜಾತಿ ಮತ್ತು ಸಮುದಾಯಗಳು ಗಟ್ಟಿಯಾಗಿ ಅಂಟಿಕೊಂಡಿರುವುದರಿಂದ. ಪಂಪ, ಬಸವಣ್ಣ, ಕನಕದಾಸ ಕುವೆಂಪು, ಸಂಗೊಳ್ಳಿ ರಾಯಣ್ಣ , ಕೆಂಪೇ ಗೌಡ ಮೊದಲಾದ ಇತಿಹಾಸ ಪ್ರಸಿದ್ಧರು, ಎಲ್ಲ ಕನ್ನಡಿಗರ ಸೊತ್ತಾಗಿ ಬೆಳೆಯಬೇಕಾಗಿತ್ತು, ಆದರೆ ಅವರೆಲ್ಲ ಇಂದು ಒಂದೊಂದು ಸಮುದಾಯಗಳಿಗೆ ಸೀಮಿತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಮತ್ತು ನಿರೀಕ್ಷೆಗೂ ಮೀರಿ ಎಲ್ಲ ಬಗೆಯ ವಿಮರ್ಶೆಗಳ ಗಡಿದಾಟಿ ಬೆಳೆದು ನಿಲ್ಲುತ್ತಿದ್ದಾರೆ. ಕರ್ನಾಟಕದ ಅನೇಕ ಚಾರಿತ್ರಿಕ ಘಟನೆಗಳನ್ನು, ಇತಿಹಾಸ ನಿರ್ಮಾಪಕರನ್ನು ಮತ್ತು ಸಾಹಿತಿಗಳನ್ನು ಜಾತಿಯ ಕಬಂಧ ಬಾಹುಗಳಿಂದ ಬಿಡಿಸದೇ ಹೋದರೆ ಯಾವ ಬಗೆಯ ಚರ್ಚೆಯೂ ಸಾಧ್ಯವಿಲ್ಲ, ಸಂಶೋಧನೆಯೂ ಸಾಧ್ಯವಿಲ್ಲ. ಈ ಮಾತು ಅನೇಕ ಜನಪದ ಕಲೆಗಳಿಗೂ ಅನ್ವಯವಾಗುತ್ತದೆ. ಯಕ್ಷಗಾನದಂಥ ಜನಪ್ರಿಯ ಕಲೆಯಲ್ಲಿ ವಿದೂಷಕನಿಗಿದ್ದ ಮುಕ್ತ ಅವಕಾಶ ಈಗ ಸಂಕುಚಿತವಾಗಿಬಿಟ್ಟಿದೆ. ಅರಸರನ್ನೂ, ದೇವಾನು ದೇವತೆಗಳನ್ನು, ಋಷಿಗಳನ್ನೂ ರಂಗದ ಮೇಲೆ ಎಗ್ಗಿಲ್ಲದೆ ಹಾಸ್ಯ ಮಾಡುವ ಅವಕಾಶ ಸಂಸ್ಕøತ ರಂಗಭೂಮಿಯಿಂದ ತೊಡಗಿ ಜನಪದ ರಂಗಭೂಮಿಯವರೆಗೆ ವಿದೂಷಕನಿಗೆ ಮೊದಲಿನಿಂದಲೂ ಇತ್ತು. ಆದರೆ ಈಗ ಇಲ್ಲ ಅಥವಾ ಅಂಥ ಅವಕಾಶ ಕಡಿಮೆಯಾಗಿದೆ. ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗಿ ಕಲಾವಿದರ ಮುಕ್ತ ಅಭಿವ್ಯಕ್ತಿಗೆ ಈಗ ಅಂಕುಶ ಬಿದ್ದಿದೆ. ಇಂಥಲ್ಲಿ ಸೃಜನಶೀಲತೆ, ಸಂಶೋಧನೆ ಮತ್ತು ವಿಮರ್ಶೆ ಆರೋಗ್ಯಕರವಾಗಿ ಬೆಳೆಯುವುದು ಅಸಾಧ್ಯ. ಮಾರ್ಗ- 4 ರಲ್ಲಿ ಕಲಬುರ್ಗಿಯವರು ಹೀಗೆ ಬರೆಯುತ್ತಾರೆ-
‘ಇತ್ತೀಚೆಗೆ ಸಮಾಜದಲ್ಲಿ ಸಹಜ ಬದಲಾವಣೆಯ ಜೊತೆಗೆ ರಾಜಕೀಯ –ಧಾರ್ಮಿಕ ಧುರೀಣರಿಂದಾಗಿ ಕೃತಕ ಬದಲಾವಣೆಗಳು ಸಂಭವಿಸುತ್ತಲಿವೆ. ಇವರು ಸುಳ್ಳು ಇತಿಹಾಸದ ಮೂಲಕ ವರ್ತಮಾನದಲ್ಲಿ ಹುಟ್ಟು ಹಾಕುತ್ತಲಿರುವ ಶೋಷಣೆಯನ್ನು ಹತ್ತಿಕ್ಕಲು ನಿಜ ಇತಿಹಾಸವನ್ನು ಶೋಧಿಸಿಕೊಡುವುದು ಸಂಶೋಧಕನ ಕರ್ತವ್ಯವಾಗಿದೆ. ಅಂದರೆ ಸಂಶೋಧನೆ ಎನ್ನುವುದು ಕೇವಲ ಇತಿಹಾಸದ ಶೋಧವಲ್ಲ, ಇತಿಹಾಸವನ್ನು ಮುಂದು ಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟವಾಗಿದೆ (ಮಾರ್ಗ – 4, ಮಾರ್ಗಕ್ಕೆ ಮೊದಲು, 2004)
ಬಹುಶ: ಕನ್ನಡ ಎಂದೂ ಇಂಥ ಪರಿಸ್ಥಿತಿಯನ್ನು ಇದಿರಿಸಿಲ್ಲ ಎಂಬ ಅಂಶವು ನಮ್ಮ ಆತಂಕವನ್ನು ಇನ್ನೂ ಹೆಚ್ಚು ಮಾಡುತ್ತಿದೆ.
ಅರಿಕೇಸರಿಯ ಆಸ್ಥಾನ ಕವಿಯಾಗಿದ್ದ ಪಂಪನಿಗೆ ‘ಓಲಗಿಸಿ ಬಾಳ್ವುದು ಕಷ್ಟಂ ಇಳಾಧಿನಾಥರಾ’ ಎಂದು ಹೇಳುವ ಧೈರ್ಯವಿತ್ತು. ‘ಮೂರ್ಧಾಭಿಷಿಕ್ತರಾದ ಹಲವು ಅರಸರು ವಿಷಯ ಭೋಗಗಳಿಂದಾಗಿ ಮದೋನ್ಮತ್ತರಾಗಿ ತಮ್ಮಂ ಮರೆತು ಧರ್ಮವೆಂಬ ದೋಣಿಯಿಂದ ಜಾರಿ ಬೀಳುತ್ತಾರೆ’ ಎಂದು ಅವನು ಕೆಂಡ ಕಾರುತ್ತಾನೆ. ಊರೆಲ್ಲಾ ತುಂಬಿಕೊಂಡಿರುವ ಬ್ರಹ್ಮಚಾರಿಗಳನ್ನು ಕಂಡ ಉರಿಲಿಂಗ ಪೆದ್ದಿಯು –‘ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು, ಬ್ರಹ್ಮಚಾರಿಗಳಾಗಬೇಕೆಂದು ಬಣ್ಣವಿಟ್ಟು ನುಡಿವ ಅಣ್ಣಗಳ ಪರಿಯ ನೋಡಿರೋ’ ಎಂದು ಕೆಣಕುತ್ತಾನೆ. ಮಧ್ಯಕಾಲೀನ ಕರ್ನಾಟಕದ ವೈಭವದ ಅರಸೊತ್ತಿಗೆಯನ್ನು ಕಣ್ಣಾರೆ ಕಂಡ ಕುಮಾರವ್ಯಾಸನು ‘ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು, ಉರಿವುರಿವುತಿದೆ ದೇಶ, ನಾವಿನ್ನಿರಲು ಬಾರದು’ ಎಂದು ಗುಡುಗಿದ್ದಲ್ಲದೆ, ‘ಸಿರಿಯನುಳ್ಳವನವನೆ ಕುಲಜನು, ಸಿರಿಯನುಳ್ಳವನೇ ವಿದಗ್ಧನು, ಸಿರಿಯನುಳ್ಳವನೇ ಮಹಾತ್ಮನು ಸಕಲಗುಣಯುತನು’ ಎಂದು ವ್ಯಂಗ್ಯವಾಡುತ್ತಾನೆ. ಹಂಪಿಯ ಅಪಾರ ಸಂಪತ್ತನ್ನು ತಾತ್ವಿಕವಾಗಿ ನಿರಾಕರಿಸುವ ಪುರಂದರದಾಸರು
‘ ಲೊಳಲೊಟ್ಟೆ, ಎಲ್ಲಾ ಲೊಳಲೊಟ್ಟೆ,
ಆನೆಕುದುರೆ ಎಲ್ಲ ಲೊಳಲೊಟ್ಟೆ
ಸೇನೆ ಭಂಡಾರವು ಲೊಳಲೊಟ್ಟೆ
ಮುತ್ತು ಮಾಣಿಕ್ಯ ಲೊಳಲೊಟ್ಟೆ
ಛತ್ರಚಾಮರ ಧ್ವಜ ಲೊಳಲೊಟ್ಟೆ’
ಎಂದು ಹೇಳಿ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂದು ಘೋಷಿಸುತ್ತಾನೆ. ಆ ಕಾಲದ ವರ್ತಕರು ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರಾಟಮಾಡುತ್ತಿದ್ದಾಗ, ಅದೇ ಬೀದಿಯಲ್ಲಿ ಓಡಾಡಿದ ದಾಸರು – ‘ ಲಂಗೋಟಿ ಬಲು ಒಳ್ಳೇದಣ್ಣ ಒಬ್ಬರ ಹಂಗಿಲ್ಲದೆ ಮಡಿಗೆ ಒದಗುವುದಣ್ಣ, ‘ ಎಂದು ಹಾಡಿ ಪ್ರತಿಭಟಿಸಿದರು. ‘ಕೆಂಡಗಣ್ಣ ನೊಸಲೊಳಗಿಟ್ಟ ನಮ್ಮ ಶಿವ ಕೆಂಡವ ಸೋಂಕಲು ಅಳುವೆಯಲ್ಲೋ ಖೋಡಿ’ ಎಂದು ದೈವವನ್ನೇ ಹಾಸ್ಯ ಮಾಡಲು ಅವರು ಹಿಂಜರಿಯಲಿಲ್ಲ.
ಹೀಗೆ ಎಲ್ಲ ಬಗೆಯ ಸ್ಥಾಪಿತ ಹಿತಾಸಕ್ತಿಗಳನ್ನು ವಿರೋಧಿಸಿಯೇ ಕನ್ನಡ ಸಾಹಿತ್ಯ ಬೆಳೆದಿದೆ. ಈ ಮಾತಿಗೆ ಕನ್ನಡದಲ್ಲಿ ಬರೆದ ಸೂಫಿ ಸಂತರು ಕೂಡಾ ಹೊರತಲ್ಲ. ಸಾಲಗುಂದ ಗುರು ಖಾದರಿ ಪೀರನು ‘ಮಸೀದಿ ಎಂಬುದು ಹಾಳಾದ ಜಾಗ, ಅದರ ಗೊಡವಿ ನಿನಗ್ಯಾಕಂತೆ ? ಎಂದು ಸಡ್ಡು ಹೊಡೆಯುತ್ತಾನೆ. ಹೀಗೆ ನಮ್ಮ ಸಾಹಿತ್ಯ ಪರಂಪರೆಗೆ ಅದರದ್ದೇ ಒಂದು ಗುಣವಿದೆ, ಅದು ಕನ್ನಡವನ್ನು ಕರ್ನಾಟಕವನ್ನು ಇದುವರೆಗೆ ಬದುಕಿಸಿದೆ. ಆದರೆ ಈಗ ಅದರ ಹಾದಿ ಬದಲುವಂತಿದೆಯಾದ್ದರಿಂದ ನಾವೆಲ್ಲ ಅರೆಕ್ಷಣ ನಿಂತು, ಯೋಚಿಸಿ, ಮುಂದುವರೆಯಬೇಕಾಗಿದೆ.
ಹಾಗೆ ನೋಡಿದರೆ, ಆಧುನಿಕತೆಯ ಪರಿಣಾಮವಾಗಿ ನಮ್ಮ ಸಮಾಜ ತೀವ್ರಗತಿಯಲ್ಲಿ ಬದಲಾಗುತ್ತಾ ಪ್ರಗತಿಗಾಮಿಯಾಗಬಹುದೆಂದು ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ ಹುಟ್ಟಿದ್ದ ನಾವೆಲ್ಲ ನಂಬಿದ್ದೆವು. ಆದರೆ ಅದು ಹಾಗಾಗದೆ, ಮತ್ತೆ ನಮ್ಮ ಸಮಾಜದ ಪ್ರತಿಗಾಮೀ ಬೇರುಗಳು ಗಟ್ಟಿಗೊಳ್ಳುತ್ತಿವೆ. ಜಾತಿಯ ಪ್ರಜ್ಞೆ ಹೊಸ ರೂಪ ತಾಳುವುದರ ಜೊತೆಗೆ ಅದರೊಂದಿಗೆ ಕೋಮುವಾದವೂ ಸೇರಿಕೊಂಡು, ಸೃಜಶೀಲವಾಗಿದ್ದ ಜನ ಸಂಸ್ಕøತಿಗಳು ಇಂದು ಪತನಮುಖಿಯಾಗುತ್ತಲಿವೆ. ಈ ಬೆಳವಣಿಗೆಯ ತಕ್ಷಣದ ಪರಿಣಾಮವೆಂದರೆ ಸಮುದಾಯ, ಜಾತಿ ಮತ್ತು ಕೋಮುಗಳು ತಮ್ಮ ಆಂತರಿಕ ವಿಮರ್ಶನ ಪ್ರಜ್ಞೆಯನ್ನು ಕಳೆದುಕೊಂಡು, ಸ್ವಯಂ ವಿನಾಶದ ಕಡೆಗೆ ಚಲಿಸುವುದು. ನಿಖರ ಮತ್ತು ಪ್ರಖರ ವಿಮರ್ಶೆಗೆ ತೆರೆದುಕೊಂಡಿದ್ದ ಸಮುದಾಯಗಳು ಇಂದು ಒಂದು ಸಣ್ಣ ಠೀಕೆಗೆ ಬೆಚ್ಚಿ ಬೀಳುತ್ತಿವೆ ಎಂದರೆ ಅವು ಆಂತರಿಕವಾಗಿ ಕುಸಿದಿವೆ ಎಂದೇ ಅರ್ಥ. ಹಾಗಾಗಿಯೇ ಅವು ತಮ್ಮ ಕೀಳರಿಮೆಯನ್ನು ಕಳೆದುಕೊಳ್ಳಲು ಇತರರ ಮೇಲೆ ಆಕ್ರಮಣ ಮಾಡಲಾರಂಭಿಸಿವೆ. ಮೊದಲು ದಲಿತರನ್ನು ಸಜೀವವಾಗಿ ಸುಡಲಾಗುತ್ತಿತ್ತು, ಆದರೆ ಈಗ ದಲಿತರು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಡಲಾಗುತ್ತಿದೆ. ಕೋಮುವಾದಕ್ಕೆ ಕೋಮುವಾದ ಉತ್ತರವಾದರೆ, ಜಾತಿಗೆ ಜಾತಿ ಉತ್ತರವಾದರೆ, ದ್ವೇಷಕ್ಕೆ ದ್ವೇಷ ಉತ್ತರವಾದರೆ ಅವೆಲ್ಲವೂ ದ್ವಿಗುಣಗೊಳ್ಳುತ್ತವೆ ಎಂಬ ಸರಳ ಸತ್ಯವನ್ನು ನಾವೀಗ ಮನಗಾಣಲಾರದಾಗಿದ್ದೇವೆ.
ಈ ಬಗೆಯ ಬೆಳವಣಿಗೆಗಳು ಜನರು ಸುದೀರ್ಘ ಕಾಲಾವಧಿಯಲ್ಲಿ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬೆಳೆಸಿಕೊಂಡು ಬಂದ ಸಂಸ್ಕøತಿಯನ್ನು ಅಧೋಮುಖಿಯಾಗಿಸುತ್ತವೆ, ಇಲ್ಲವೇ ಅನ್ಯ ಸಂಸ್ಕøತಿಯ ಅಧೀನಕ್ಕೆ ಒಳಗಾಗಿ ತಮ್ಮ ಸೃಜನಶೀಲತೆಯನ್ನು ಕಳೆದುಕೊಳ್ಳಲು ಒತ್ತಡ ಹೇರುತ್ತವೆ. ನಮ್ಮ ಸಂಶೋಧನೆಗಳು ಈ ಬಗೆಯ ಬೆಳವಣಿಗೆಗಳಿಗೆ ಮುಖಾಮುಖಿಯಾಗದೇ ಹೋದರೆ ಅವು ಅನುಪಯುಕ್ತವಾಗಿಬಿಡುತ್ತವೆ. ಸಾಮಾಜಿಕ ಆಯಾಮವಿಲ್ಲದ ಸಂಶೋಧನೆಗಳು ಭಾರತದಲ್ಲಿ ವಿಶೇಷವಾದ್ದೇನನ್ನೂ ಸಾಧಿಸಲಾರವು.
ಕರ್ನಾಟಕದ ಸಾಂಸ್ಕøತಿಕ ವೈವಿಧ್ಯದ ಸಂಕೇತಗಳೆಂದರೆ ಇಲ್ಲಿನ ಜನಪದ ಕಲೆಗಳು. ಗೀಗೀ ಪದಗ¼ಲ್ಲಿ ಗಂಡು ಹೆಚ್ಚೋ, ಹೆಣ್ಣು ಹೆಚ್ಚೋ ಚರ್ಚೆ ನಡೆಯುತ್ತದೆ. ಮುಸಲ್ಮಾನರ ರಂಜಾನ್ ಪದಗಳಲ್ಲಿ ಎಳೆ ವಯಸ್ಸಿನಲ್ಲಿ ಸತ್ತು ಹೋದ ಅಸಗರನನ್ನು ಅಭಿಮನ್ಯುವಿಗೆ ಹೋಲಿಸಲಾಗಿದೆ. ಅಕಾಲ ಮರಣಕ್ಕೀಡಾದ ಕುಂಬಳೆಯ ಆಲಿ, ಮತ್ತು ಕಡಲ ಪಯಣದಲ್ಲಿ ವಿಕ್ರಮ ಸಾಧಿಸಿದ ಬೊಬ್ಬರ್ಯ ಇಬ್ಬರೂ ಸಾಂಸ್ಕøತಿಕ ವೀರರೆಂದು ಗುರುತಿಸಿಕೊಂಡು ತುಳುನಾಡಿನ ಭೂತಾರಾಧನೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಸ್ಲಾಂ ಧರ್ಮವು ಭೂತಾರಾಧನೆಯನ್ನು ತಾತ್ವಿಕವಾಗಿ ಒಪ್ಪದು, ಹಿಂದೂ ಧರ್ಮವು ಮುಸ್ಲಿಂ ನಾಯಕರನ್ನು ತಮ್ಮ ದೈವವಾಗಿ ಅಂಗೀಕರಿಸದು. ಆದರೆ ಇವೆರಡೂ ಕರಾವಳಿಯ ಮಣ್ಣಲ್ಲಿ ಸಾಧ್ಯವಾಗಿದೆ. ತನಗೆ ದೇವಸ್ಥಾನ ಕಟ್ಟಿಕೊಟ್ಟ ಬಪ್ಪ ಬ್ಯಾರಿಗೆ ಮೂಲ್ಕಿಯ ದುರ್ಗಾ ಪರಮೇಶ್ವರಿಯು ಇಂದಿಗೂ ಗಂಧ ಪ್ರಸಾದ ನೀಡುತ್ತಾಳೆ, ಮಾತ್ರವಲ್ಲ ಆ ಊರಿಗೆ ಬಪ್ಪನಾಡೆಂಬ ಹೆಸರು ಪ್ರದಾನ ಮಾಡುತ್ತಾಳೆ. ಹಡಗಲಿಯ ಮೈಲಾರ ಲಿಂಗಪ್ಪನು ಅತಿಯಾದ ಹಣದಾಸೆಯ ತಿರುಪತಿ ತಿಮ್ಮಪ್ಪನ ಮಗಳನ್ನು ಮೋಸದಿಂದ ಮದುವೆಯಾಗುವುದಲ್ಲದೆ, ಚಿಕ್ಕಾಸು ಕೂಡಾ ಕೊಡದೆ ತಿಮ್ಮಪ್ಪನನ್ನು ನಿರಂತರವಾಗಿ ಗೋಳಾಡಿಸುತ್ತಾನೆ. ವಿಲೋಮ ವಿವಾಹ ನಿಷಿದ್ಧ ಎಂದು ಶಾಸ್ತ್ರಗಳು ಸಾರುತ್ತಿರುವಾಗಲೇ ಬಾವಿಗೆ ಬಿದ್ದ ದಲಿತ ಹುಡುಗನನ್ನು ಸೀರೆಯ ಸೆರಗಿಳಿಸಿ ಮೇಲೆತ್ತಿದ ಬ್ರಾಹಣ ಕನ್ಯೆಯ ಕತೆಗಳನ್ನು ಜನರು ಹೇಳುತ್ತಾ ಬಂದಿದ್ದಾರೆ. ಮುಸಲ್ಮಾನ ಅರಸರು ಹಿಂದೂ ರಾಜ್ಯವನ್ನು ನಾಶ ಮಾಡಿದರು ಎಂದು ಅನೇಕರು ಬರೆಯುತ್ತಿದ್ದಾಗ ಮುಸಲ್ಮಾನ ಹುಡುಗಿಯು ಹಿಂದೂ ಯುವಕನ್ನು ಪ್ರೀತಿಸಿದ ಕತೆಯನ್ನು ನಮ್ಮ ಜನಪದ ಕಲೆಗಳು ರಂಗದ ಮೇಲೆ ಪ್ರದರ್ಶಿಸುತ್ತಾ ಬಂದಿವೆ. ಇಂಥ ಹಲವು ಮುಕ್ತ ಮತ್ತು ಅದ್ಭುತ ನಿರೂಪಣೆಗಳಿರುವ ನಾಡು ಇದೀಗ ತನ್ನ ಬಾಗಿಲುಗಳನ್ನು ಮತ್ತಷ್ಟು ವಿಸ್ತಾರವಾಗಿ ತೆರೆದುಕೊಳ್ಳಬೇಕಿತ್ತು. ಆದರೆ ಅವು ಹೆಚ್ಚು ಹೆಚ್ಚು ಸಂಕುಚಿತಗೊಂಡು ಮುಚ್ಚಿಕೊಳ್ಳುತ್ತಿವೆ. ಜನಪದ ಸಂಸ್ಕøತಿಗಳ ಅವನತಿಯು ಪ್ರಚಲಿತ ಕರ್ನಾಟಕದ ಪ್ರಮುಖ ಸಾಂಸ್ಕøತಿಕ ವಿದ್ಯಮಾನಗಳಲ್ಲಿ ಒಂದು. ಇಂಥ ಬೆಳವಣಿಗೆಗಳ ಬಗೆಗೆ ಗಂಭೀರವಾದ ಚರ್ಚೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ನಡೆಯಲು ಸಾಧ್ಯ್ಯವಾದರೆ ಅದರಿಂದ ಸಮಾಜಕ್ಕೆ ತುಂಬಾ ಪ್ರಯೋಜನವುಂಟು. ಭಾಷೆ, ಗಡಿ ಮತ್ತು ಸಂಸ್ಕøತಿಯ ವಿಷಯಗಳು ಬಹುಬೇಗ ಜನರನ್ನು ತಪ್ಪುದಾರಿಗೆಳೆದದ್ದನ್ನು ವಿಶ್ವದ ಇತಿಹಾಸ ರುಜುವಾತು ಪಡಿಸಿದೆ. ಜಗತ್ತಿನ ಎಲ್ಲೆಡೆಯೂ ಈ ಮೂರು ಶಬ್ದಗಳನ್ನು ಉಪಯೋಗಿಸಿಯೇ ಫ್ಯಾಸಿಸ್ಟ್ ಶಕ್ತಿಗಳು ವಿಜೃಂಭಿಸಿವೆ. ಕಾರಣ ನಮ್ಮ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನೆಗಳು ಈ ಬೆಳವಣೆಗೆಗಳ ಕುರಿತು ವಿಶೇಷ ಎಚ್ಚರ ವಹಿಸಬೇಕೆಂದು ನಾನು ಭಾವಿಸುತ್ತೇನೆ.
2. ಜ್ಞಾನದ ಅಂತಾರಾಷ್ಟ್ರೀಕರಣ ಮತ್ತು ಕನ್ನಡ
ಹೀಗೆ ಕನ್ನಡ ಭಾಷೆಯು ಒಳಗಿನಿಂದ ಒಂದು ಬಗೆಯ ಒತ್ತಡಕ್ಕೆ ಒಳಗಾಗುತ್ತಿದ್ದರೆ, ಇನ್ನೊಂದೆಡೆಯಲ್ಲಿ ಅದು ಇಂದಿನ ಜಾಗತೀಕರಣ ಪ್ರಕ್ರಿಯೆಯ ತೀವ್ರ ಹೊಡೆತಕ್ಕೆ ಸಿಕ್ಕಿ ಇನ್ನೊಂದು ಬಗೆಯಲ್ಲಿ ನಲುಗುತ್ತಿದೆ. ಭಾರತದ ಅನೇಕ ಭಾಷೆಗಳು ಈ ವಿಷಯದಲ್ಲಿ ಕನ್ನಡದೊಂದಿಗಿವೆ. ನಮ್ಮ ದೇಶಕ್ಕೆ ರಾಷ್ಟ್ರೀಯ ಭಾಷಾ ನೀತಿ ಎಂಬುದು ಇಲ್ಲವಾದ್ದರಿಂದ ಈ ಗೊಂದಲವು ಅನೇಕ ಭಾಷೆಗಳನ್ನು ಸುಲಭವಾಗಿ ಕೊಂದು ಹಾಕುವ ಮಟ್ಟಕ್ಕೆ ಬೆಳೆದಿದೆ.
ಖಚಿತವಾಗಿ ಇದು ಜಾಗತೀಕರಣದ ಕಾಲ. ಆದರೆ ಜಾಗತೀಕರಣವು ಭಾರತಕ್ಕೆ ಹೊಸದೇನೂ ಅಲ್ಲ. ಭಾರತದ ಭೌಗೋಳಿಕತೆಯು ಚಾರಿತ್ರಿಕವಾಗಿ ಅದನ್ನು ವಿಶ್ವದೊಂದಿಗೆ ಸಹಜವಾಗಿ ಜೋಡಿಸಿದೆ. ನಮ್ಮ ಊಟದ ಮೂಲಭೂತ ಘಟಕಗಳಾದ ಬಟಾಟೆ, ಟೊಮೆಟೋ, ಗೆಣಸು, ಜೋಳ, ಮೆಣಸು ಮೊದಲಾದುವುಗಳೆಲ್ಲ ಎಂದೋ ಹೊರದೇಶದಿಂದ ಬಂದು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಕೊಂಡಿವೆ. ಅನಾನಾಸು, ಪೇರಳೆ ಚಿಕ್ಕು ಮೊದಲಾದ ಹಣ್ಣುಗಳೂ ಮೂಲತಹ ನಮ್ಮವಲ್ಲ. ಬೆಳ್ಳುಳ್ಳಿ, ಅರಸಿನ, ಶುಂಠಿ ಮೊದಲಾದ ಪರಕೀಯ ಪದಾರ್ಥಗಳು ಇಂದು ನಮ್ಮ ದೇಸೀ ಎನ್ನಲಾದ ವೈದ್ಯ ಪದ್ಧತಿಯೊಂದಿಗೂ ಸೇರಿಕೊಂಡಿವೆ. ರೈಮಂಡೋ ಪಣಿಕ್ಕರ್ ಅವರ ಪ್ರಕಾರ ಚೈನಾದಲ್ಲಿ ಅತಿ ಪ್ರಾಚೀನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಅನ್ನದ ಉಂಡೆಯೇ ಇಂದು ಇಡ್ಲಿಯಾಗಿ ನಮ್ಮ ಮುಂದೆ ಕಾಣಿಸಿಕೊಂಡಿದೆ. ಹೀಗೆ ಹೊರಗಿನಿಂದ ಬಂದ ಈ ಪದಾರ್ಥಗಳನ್ನು ನಮ್ಮ ದೇವರುಗಳು ಇಂದಿಗೂ ಸ್ವೀಕರಿಸಲಾರವು.
ಇಷ್ಟಿದ್ದರೂ ತೊಂಭತ್ತರ ದಶಕದಿಂದೀಚೆಗೆ ಕಾಣಿಸಿಕೊಂಡ ಉದಾರೀಕರಣ, ಜಾಗತೀಕರಣ, ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು ಹಿಂದಿಗಿಂತ ತುಂಬಾ ಭಿನ್ನವಾಗಿದ್ದು ಜಗತ್ತನ್ನು ಅಮೂಲಾಗ್ರವಾಗಿ ಬದಲಾಯಿಸಿವೆ. ಮೇಲಿನ ಪರಿಭಾಷೆಗಳು ಮೂಲತಹ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿವೆಯಾದರೂ ಇಂದು ಅವು ನಮ್ಮ ಸಮಾಜವನ್ನು ಇಡಿಯಾಗಿ ಆಕ್ರಮಿಸಿಕೊಂಡಿವೆ. ಪರಿಣಾಮವಾಗಿ ಅವು ಇದೀಗ ಉನ್ನತ ಶಿಕ್ಷಣ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ಒಗ್ಗಿಸಿಕೊಳ್ಳಲು ಸಜ್ಜಾಗಿದೆ. ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣ ಹಾಗೂ ಜ್ಞಾನೋತ್ಪತ್ತಿಯ ಅಂತಾರಾಷ್ಟ್ರೀಕರಣ (Internationalization of higher education and Internationalization of knowledge production) ಇಂದಿನ ತೀವ್ರವಾದ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ‘ ವಿಶ್ವದ ಕುರಿತಾದ ಭಾರತದ ತಿಳುವಳಿಕೆಗಳಿಗಾಗಿ ಹಾಗೂ ಭಾರತದ ಕುರಿತಾಗಿ ವಿಶ್ವದ ತಿಳುವಳಿಕೆಗಾಗಿ ( To the world understanding and understanding of India in the world) ಈ ಅಂತಾರಾಷ್ಟ್ರೀಕರಣ ಪ್ರಕ್ರಿಯೆ ಬಹಳ ಅಗತ್ಯ ಎಂದು ಎಲ್ಲ ಸರಕಾರಗಳೂ ಇಂದು ಭಾವಿಸತೊಡಗಿವೆ. ಉನ್ನತ ಶಿಕ್ಷಣದ ಜಾಗತೀಕರಣದ ಪರವಾಗಿ ಯುನೆಸ್ಕೋ (United Nations Educational, Scientific and Cultural Organization- UNESCO) ಮತ್ತು ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ಸಂಸ್ಥೆಯು ( International Association of Universities-IAU) ಜಂಟಿಯಾಗಿ ಪ್ರಬಲವಾದ ವಾದ ಮಂಡಿಸಿವೆ. ಸರಕಾರಗಳ ಪಾಲಿಗೆ ‘ಅನುತ್ಪಾದಕ’ ವಸ್ತುವಾಗಿರುವ ಉನ್ನತ ಶಿಕ್ಷಣವನ್ನು ‘ಉತ್ಪಾದಕ ಅಥವಾ ಲಾಭದಾಯಕ’ ವನ್ನಾಗಿ ಪರಿವರ್ತಿಸುವುದು ಈ ವಾದಗಳ ಉದ್ದೇಶ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರಗಳು ತಮ್ಮ ಆರ್ಥಿಕ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಉನ್ನತ ಶಿಕ್ಷಣದ ಖಾಸಗೀಕರಣಕ್ಕೆ ಕ್ರಮ ಕೈಕೊಳ್ಳಲಾರಂಭಿಸಿದುವು. ಪರಿಣಾಮವಾಗಿ ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು, ಮತ್ತು ವಿದೇಶೀ ವಿಶ್ವವಿದ್ಯಾಲಯಗಳು ದೊಡ್ಡ ಪ್ರಮಾಣದಲ್ಲಿ ಉನ್ನತ ಶಿಕ್ಷಣದತ್ತ ಹೊರಳಿಕೊಂಡವು. ಅವು ತಮ್ಮ ಆರ್ಥಿಕ ಭದ್ರತೆಗಾಗಿ ನಯವಾದ ಬಗೆಯಲ್ಲಿ ‘ಶುಲ್ಕ’ ವಸೂಲು ಮಾಡಲು ಹೊರಟಿವೆ. ಈ ಪ್ರಕ್ರಿಯೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳೂ ಸರಕಾರಗಳೂ ಜೊತೆಯಾಗಿ ಹಣ ಮಾಡಲಾರಂಭಿಸಿದುವು. ಒಂದು ವರದಿಯ ಪ್ರಕಾರ 2013-2014 ರಲ್ಲಿ ಅಮೆರಿಕಾ ದೇಶದಲ್ಲಿ ಹೊರದೇಶದಿಂದ ಆಗಮಿಸಿದ 11,30,000ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದು ಅದರಿಂದ ಆ ದೇಶಕ್ಕೆ 25 ಬಿಲಿಯನ್ ಡಾಲರ್ ಆದಾಯವಾಗಿದೆ. ಆಸ್ಟ್ರ್ರೇೀಲಿಯಾದಲ್ಲಿ 2001-2002ರಲ್ಲಿ ಸುಮಾರು 2 ಲಕ್ಷ ಹೊರದೇಶದ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು ಆಗ ಆ ದೇಶದ ಆದಾಯ 4.2ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಆಗಿತ್ತು. ಜಾಗತೀಕರಣದ ಪರಿಣಾಮವಾಗಿ ಈ ಆದಾಯವು 2013-14ರಲ್ಲಿ 14 ಬಿಲಿಯನ್ ಡಾಲರ್ಗೆಲ ಏರಿತು. ಸಣ್ಣ ದೇಶ ನ್ಯೂಜಿಲೇಂಡ್ ನಲ್ಲಿ 2001-2012ರಲ್ಲಿ ಸುಮಾರು ಒಂದು ಲಕ್ಷ ವಿದೇಶೀ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದು ಆ ದೇಶದ ಬೊಕ್ಕಸಕ್ಕೆ 1.7 ಬಿಲಿಯನ್ ಡಾಲರ್ ಆದಾಯವಾಗಿದ್ದು 2013-14ರಲ್ಲಿ ಅದು 6 ಬಿಲಿಯನ್ ಡಾಲರ್ಗದಳಿಗೆ ಏರಿತು. ಈ ಬಗೆಯ ಆದಾಯದ ಕುರಿತು ಅಭಿವೃದ್ಧಿಶೀಲ ದೇಶಗಳು ಕಣ್ಣು ಮುಚ್ಚಿ ಕುಳಿತಿರಲು ಸಾಧ್ಯವಿಲ್ಲ. ಏಕೆಂದರೆ 21ನೇ ಶತಮಾನದ ಮೊದಲ ದಶÀಕದಲ್ಲಿ ಉನ್ನತ ಶಿಕ್ಷಣವು ಬಿಲಿಯನ್ ಡಾಲರ್ ಆದಾಯದ ಪ್ರಶ್ನೆಯಾಗಿ ಮಾರ್ಪಟ್ಟಿದೆ.
ಭಾರತದಲ್ಲಿ ಶಿಕ್ಷಣದ ಅಂತಾರಾಷ್ಟ್ರೀಕರಣ ಪ್ರಕ್ರಿಯೆಯು ಗ್ಯಾಟ್ (General Agreement of Trade in Servises ಹಾಗೂ ಡಬ್ಲ್ಯುಟಿಒ ( World Trade Organizations) ಒಪ್ಪಂದದ ಮೇರೆಗೆ ಆರಂಭವಾಯಿತು. ಎಪ್ರಿಲ್ 1, 2005 ರಂದು ಜಾರಿಗೆ ಬಂದ ಈ ಒಪ್ಪಂದದ ಅನುಸಾರವಾಗಿ 10ನೇ ಪಂಚವಾರ್ಷಿಕ ಯೋಜನೆಯಲ್ಲಿ (2002-2007) ಉನ್ನತ ಶಿಕ್ಷಣವನ್ನು ‘Educational Services as sector of industry under GATS’ ಎಂದು ಇತರ 12 ವಿಷಯಗಳೊಂದಿಗೆ ಸೇರಿಸಿ ಘೋಷಿಸಲಾಗಿದೆ. 11 ಮತ್ತು 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ‘ ನಮ್ಮ ತರುಣರನ್ನು ಲೇಬರ್ ಮಾರುಕಟ್ಟೆಗೆ’ ಸಿದ್ಧಪಡಿಸಬೇಕಾದ ಅಗತ್ಯವಿದೆ’ (It equips young people with skills relevant for the labour market) ಎಂದು ಹೇಳಲಾಗಿದೆ ಮಾತ್ರವಲ್ಲ 2020ರ ಹೊತ್ತಿಗೆ ಚೀನಾ ದೇಶಕ್ಕೆ ಅಗತ್ಯವಾಗಿರುವ 40 ಕೋಟಿ ಪರಿಣಿತರನ್ನು ನಾವು ಸೃಷ್ಟಿ ಮಾಡಬೇಕಾಗಿದೆ ಎಂದೂ ಅದು ಘೋಷಿಸಿದೆ. ಹೀಗಾಗಿ ಈಗ ಇದು ಸರಕಾರದ ಒಂದು ಅಂಗೀಕೃತ ಮತ್ತು ಆದ್ಯತೆಯ ಯೋಜನೆಯಾಗಿದೆ. ಈ ಯೋಜನೆಯ ಭಾಗವಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗವು ಈ ಕೆಳಗಿನ ಮೂರು ಅಂಶಗಳನ್ನು ಜ್ಯಾರಿಗೆ ತರಲು ಇದೀಗ ಕಾರ್ಯಪ್ರವೃತ್ತವಾಗಿದೆ. ಅವುಗಳೆಂದರೆ.
1.ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ
2.ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಜಂಟಿಯಾಗಿ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ( twinning programs) ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ( exchange programs) ಮತ್ತು
3.ಅತ್ಯುತ್ತಮ ಶಿಕ್ಷಣದ ರಫ್ತಿಗಾಗಿ ವಿಶೇಷ ವಲಯಗಳ ಸ್ಥಾಪನೆ ( Special educational excellence and export zones - SEEEZ)
ಈ ಬದಲಾದ ಪರಿಸ್ಥಿತಿಗೆ ಅನುಗುಣವಾದ ಪಠ್ಯಕ್ರಮ, ಅಧ್ಯಯನದ ಅವಧಿ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ. ಮುಖ್ಯವಾಗಿ ಇದೀಗ ಆಗಲೇ ಅನೇಕ ಖಾಸಗಿ ವಿಶ್ವವಿದ್ಯಾಲಯಗಳು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಂಬಂಧ ಸ್ಥಾಪಿಸಿಕೊಂಡಿವೆ. ವಿದೇಶೀ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಅಧ್ಯಯನ ಕೇಂದ್ರಗಳನ್ನು ತೆರೆದಿವೆ. ವಿದೇಶೀ ಅಧ್ಯಾಪಕರುಗಳು ಮತ್ತು ಭಾರತೀಯ ಅಧ್ಯಾಪಕರುಗಳು ಒಟ್ಟಿಗೇ ಕೆಲಸ ಮಾಡಲು ಸಾಧ್ಯವಾಗುವ ಹಾಗೆ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ವಿಶ್ವವಿದ್ಯಾಲಯಗಳ ನಡುವೆ ಗುಣಾಂಕಗಳ (ಕ್ರೆಡಿಟ್ಸ್) ವರ್ಗಾವಣೆ ಸಾಧ್ಯವಾಗುತ್ತಿದೆ. ಈ ಕ್ರಮಗಳು ಉನ್ನತ ಶಿಕ್ಷಣದ ರೀತಿ ನೀತಿಗಳನ್ನು ಈಗಾಗಲೇ ಗಮನಾರ್ಹವಾಗಿ ಬದಲಾಯಿಸುತ್ತಿವೆ. ಸದ್ಯಕ್ಕೆ ಈ ಪ್ರಯೋಗವು ಕಾರ್ಪೋರೇಟ್ ಜಗತ್ತಿಗೆ ಬೇಕಾದ ಬುದ್ಧಿವಂತರನ್ನು ಮತ್ತು ಪರಿಣಿತ ಕೆಲಸಗಾರರನ್ನು ಸೃಷ್ಟಿಸಿಕೊಡುವಲ್ಲಿ ಸಫಲವಾಗಿವೆ.
ಇಂಥ ಬದಲಾದ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ ಎಂಬುದು ಚಲಾವಣೆಯಲ್ಲಿಲ್ಲದ ನಾಣ್ಯವಾಗುತ್ತಿದೆ. ಜೊತೆಗೆ ಮಾನವಿಕಗಳು ಬೇಡಿಕೆಯಿಲ್ಲದ ಅಧ್ಯಯನ ಶಿಸ್ತುಗಳಾಗಿ ಪರಿವರ್ತನೆಗೊಂಡು ದುರ್ಬಲವಾಗುತ್ತಿವೆ. 10 ನೇ ಪಂಚವಾರ್ಷಿಕ ಯೋಜನೆಯಲ್ಲಿ ಸಂಸ್ಕøತ ಮತ್ತು ಹಿಂದೀ ಭಾಷೆಯ ಅಭಿವೃದ್ಧಿಗೆ ಕೆಲವು ಯೋಜನೆಗಳನ್ನು ರೂಪಿಸಿದ್ದರೂ ಉಳಿದ ಭಾರತೀಯ ಭಾಷೆಗಳ ಬಗೆಗೆ ಅದು ದಿವ್ಯ ಮೌನವನ್ನು ತಾಳಿದೆ. 11 ಮತ್ತು 12 ನೇ ಪಂಚವಾರ್ಷಿಕ ಯೋಜನೆಗಳಲ್ಲಿ ಭಾರತೀಯ ಭಾಷೆಗಳ ಬಗ್ಗೆ ಯಾಂತ್ರಿಕವಾಗಿ ನಾಲ್ಕು ಮಾತು ಹೇಳಲಾಗಿದೆಯಲ್ಲದೆ, ಅವುಗಳ ಅಭಿವೃದ್ಧಿಯ ಬಗೆಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಹೀಗೆ ಮಾರುಕಟ್ಟೆಯ ಧ್ಯೇಯ ಧೋರಣೆಗಳೇ ಉನ್ನತ ಶಿಕ್ಷಣವನ್ನು ನಿಯಂತ್ರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಕನ್ನಡದಂಥ ಸಣ್ಣ ಭಾಷೆಗಳ ಭವಿಷ್ಯವೇನು? ಎಂಬುದರ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕು.
ಮೇಲೆ ಹೇಳಿದ ಮಾರುಕಟ್ಟೆ ಕೇಂದ್ರಿತ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನದ ಉತ್ಪತ್ತಿ ಮತ್ತು ವಿತರಣೆಯು ಅಂತಾರಾಷ್ಟ್ರೀಯವಾಗುವುದು ಅನಿವಾರ್ಯ. ಈ ಪ್ರಕ್ರಿಯೆಯಲ್ಲಿ ಆಳುವ ಶಕ್ತಿ ಶಾಲೀ ಭಾಷೆಯಾಗಿ ಇಂಗ್ಲಿಷ್ ಹೊರಹೊಮ್ಮಿದೆ. ‘ಇಂಗ್ಲಿಷ್ ಭಾಷೆ ಕಲಿತರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು‘ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಜನರೂ ಈ ಬೆಳವಣಿಗೆಯನ್ನು ಒಪ್ಪಿಕೊಂಡಿದ್ದಾರೆ. ಇದು ಕನ್ನಡವೂ ಸೇರಿದಂತೆ ಜಗತ್ತಿನ ಅನೇಕ ಸಣ್ಣ ಭಾಷೆಗಳ ಕುರಿತು ಆಯಾ ದೇಶದ ಸರಕಾರಗಳು ಮತ್ತು ಜನರು ನಿರ್ಲಕ್ಷ್ಯ ವಹಿಸುವಂತೆ ಮಾಡಿದೆ. ಇದರಿಂದ ಜಗತ್ತಿನಾದ್ಯಂತ ಇಂದು ಅನೇಕ ಭಾಷೆಗಳು ಅವಸಾನದ ಅಂಚಿಗೆ ಬಂದು ನಿಲ್ಲುವಂತಾಗಿದೆ. ಸಣ್ಣ ಭಾಷೆಗಳ ಧ್ವನಿ ಉಡುಗಿವೆ, ಅವುಗಳ ನಾಲಗೆ ಕಟ್ಟಿಹೋಗಿವೆ. ಉಳಿಯುವಿಕೆಗಾಗಿ ಅವು ಹೆಣಗಾಡುತ್ತಿವೆ. ಕಲಿಕೆ ಮತ್ತು ಉಪಯೋಗಗಳ ವಿಷಯದಲ್ಲಿ ಇಂಗ್ಲಿಷ್ ಸಾವಿರಾರು ಸಣ್ಣ ಭಾಷೆಗಳನ್ನು ಅಪಾಯದ ಅಂಚಿಗೆ ತಳ್ಳಿದೆ.
ಭಾರತದಲ್ಲಿ ಈ ಸಮಸ್ಯೆ ಇನ್ನೂ ತೀವ್ರತರವಾಗಿದ್ದರೂ, ಕೋಮುವಾದ, ಧರ್ಮ, ಭ್ರಷ್ಟಾಚಾರ, ಜಾತಿ, ರಾಜಕೀಯ, ಮತ್ತಿತರ ವಿಷಯಗಳ ಕುರಿತು ಇಲ್ಲಿ ಚರ್ಚೆ ನಡೆದ ಹಾಗೆ, ಅವಸಾನದ ಅಂಚಿನಲ್ಲಿರುವ ಭಾಷೆಗಳ ಉಳಿಯುವಿಕೆಯ ಕುರಿತು ಸಂವಾದ ನಡೆಯುತ್ತಿಲ್ಲ. ಇಂದು ಬಹಳ ಪ್ರಭಾವಶಾಲಿಯಾಗಿರುವ ಮಾಧ್ಯಮಗಳಿಗೂ ಈ ಕುರಿತು ಆಸಕ್ತಿಯಿಲ್ಲ. ಭಾಷೆಯ ಅವನತಿಯ ಅಪಾಯಗಳ ಕುರಿತು ತಿಳುವಳಿಕೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ.
ಇಂದು ವಿಶ್ವದಾದ್ಯಂತÀ ಜೀವಂತವಿರುವ ಸುಮಾರು 7000 ಭಾಷೆಗಳನ್ನು ಸಣ್ಣ ಭಾಷೆಗಳೆಂದು ಗುರುತಿಸಲಾಗಿದೆ. ಇದರಲ್ಲಿ ಸುಮಾರು 3700 ರಷ್ಟು ಭಾಷೆಗಳು ಭಾರತದಲ್ಲಿಯೇ ಇವೆ. ಇದು ಸ್ಥೂಲ ರೂಪದ ತಿಳುವಳಿಕೆ. ಆದರೆ ಸೂಕ್ಷ್ಮವಾಗಿ ಮತ್ತು ಭಿನ್ನವಾಗಿ ನೋಡಿದರೆ ಇವುಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಉದಾಹರಣೆಗೆ ಇಂಗ್ಲಿಷಿಗೆ ಹೋಲಿಸಿದರೆ, ಹಿಂದಿ ಸಣ್ಣ ಭಾಷೆ ಮತ್ತು ಅದಕ್ಕೆ ಇಂಗ್ಲಿಷಿನಿಂದ ಅಪಚಾರವಾಗುತ್ತಿದೆ, ಆದರೆ ರಾಜಸ್ಥಾನಿ, ಭೋಜಪುರಿ ಮೈಥಿಲಿ ಮತ್ತಿತರ ಭಾಷೆಗಳನ್ನು ಗಮನಿಸಿದಾಗ ಅವುಗಳ ಮೇಲೆ ಹಿಂದಿ ಭಾಷೆಯಿಂದಲೇ ಅಪಚಾರವಾಗುವುದನ್ನು ಕಾಣುತ್ತೇವೆ. ಹಿಂದಿಗೆ ಹೋಲಿಸಿದರೆ ಕನ್ನಡ ಭಾಷೆ ಸಣ್ಣದು. ಕಾರಣ ಹಿಂದಿ ಕನ್ನಡದ ಮೇಲೆ ಆಕ್ರಮಣ ಮಾಡುತ್ತದೆ. ಕನ್ನಡ ತುಳುವನ್ನು ಆಕ್ರಮಿಸಿಕೊಳ್ಳುತ್ತದೆ. ತುಳುವನ್ನು ಮಾತ್ರ ಗಮನಿಸಿದರೂ ಸಾಕು, ಅಲ್ಲಿ ದಲಿತರ ತುಳು ಸಾಮಾನ್ಯವಾಗಿ ಸವರ್ಣೀಯರ ತುಳುವಿಗೆ ತಲೆಬಾಗುತ್ತದೆ. ನಾವು ನೋಡುತ್ತಿದ್ದಂತೆಯೇ ಕೊರಗ ಭಾಷೆಯ ಜಾಗವನ್ನು ತುಳು ಪೂರ್ತಿಯಾಗಿ ಆಕ್ರಮಿಸಿಕೊಂಡಿತು. ಹೀಗೆ ಕೊನೆಯಿಲ್ಲದ ಈ ಸಂಕಷ್ಟದಲ್ಲಿ ಭಾಷಾ ಅಲ್ಪಸಂಖ್ಯಾಕರನ್ನು ನಾವು ಇದುವರೆಗೆ ಸರಿಯಾಗಿ ನಿರ್ವಚಿಸಿಯೇ ಇಲ್ಲ. ನಮ್ಮ ದೇಶಕ್ಕೆ ರಾಷ್ಟ್ರೀಯ ಭಾಷಾ ನೀತಿ ಎಂಬುದೇ ಇಲ್ಲ.
ಭಾರತದಲ್ಲಿ ಇದೀಗ 22 ಭಾಷೆಗಳನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸಿ ಅವುಗಳನ್ನು ಸಬಲೀಕರಣಗೊಳಿಸಲು ಯತ್ನಿಸಲಾಗಿದೆ. ಇದರಲ್ಲಿ 18 ಭಾಷೆಗಳು ಉತ್ತರ ಭಾರÀತಕ್ಕೆ ಸೇರಿದರೆ, ಕೇವಲ ನಾಲ್ಕು ಭಾಷೆಗಳು ದ್ರಾವಿಡ ಭಾಷಾ ವರ್ಗಕ್ಕೆ ಸೇರಿವೆ. ಈ ನಡುವೆ ಇತರ 38 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಲು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದು ಅದರಲ್ಲಿ ಕೇವಲ ಎರಡು (ತುಳು ಮತ್ತು ಕೊಡವ) ದ್ರಾವಿಡ ವರ್ಗಕ್ಕೆ ಸೇರಿವೆ. ಈ ಬೇಡಿಕೆಗಳನ್ನು ಸವಾಲಾಗಿ ಸ್ವೀಕರಿಸಿ, ಭಾಷೆಗಳ ಅಭಿವೃದ್ಧಿಗೆ ಕೆಲಸ ಮಾಡಬೇಕಾಗಿದ್ದ ಸರಕಾರ ಇದೀಗ ಎಂಟನೆಯ ಪರಿಚ್ಛೇದದ ಕೆಲವು ಸವಲತ್ತುಗಳನ್ನೇ ಕಡಿತಗೊಳಿಸಲು ಆರಂಭಿಸಿದೆ. ಉದಾಹರಣೆಗೆ, ಕೇಂದ್ರ ಲೋಕಸೇವಾ ಆಯೋಗವು ಎಂಟನೇ ಪರಿಚ್ಛೇದದಲ್ಲಿ ಹೊಸದಾಗಿ ಸೇರುವ ಭಾಷೆಗಳಲ್ಲಿ ಇದೀಗ ಪರೀಕ್ಷೆಗಳನ್ನು ನಡೆಸಬೇಕಾಗಿಲ್ಲ. ಅಂದರೆ, ಸ್ಪರ್ಧಿಯೊಬ್ಬನ ಮಾತೃ ಭಾಷೆಗೆ ಅಲ್ಲಿ ಅವಕಾಶವಿಲ್ಲ. ಸಣ್ಣ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಮಾಡುವವರಿಲ್ಲವೆಂದು ಅದು ಹೇಳುತ್ತದೆ. ಪ್ರಶ್ನೆ ಪತ್ರಿಕೆ ತಯಾರು ಮಾಡುವಂಥ ವಿದ್ವಾಂಸರ ಸೃಷ್ಟಿಗೆ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಕೇಳಿದರೆ ಅದರ ಬಳಿ ಉತ್ತರವಿಲ್ಲ. ಇಂಥ ಪ್ರಕ್ರಿಯೆಗಳ ಜೊತೆಗೆ ಕೆಲವು ರಾಜ್ಯ ಸರಕಾರಗಳೂ ಸೇರಿಕೊಂಡಿವೆ. ಉದಾಹರಣೆಗೆ ದೆಹಲಿಯಲ್ಲಿ ಹಿಂದಿ, ಪಂಜಾಬಿ ಮತ್ತು ಉರ್ದು ಅಧಿಕೃತ ಭಾಷೆಗಳಾದರೆ, ಪಶ್ಚಿಮ ಬಂಗಾಲದಲ್ಲಿ ಬಾಂಗ್ಲಾ, ನೇಪಾಲಿ, ಹಿಂದಿ, ಉರ್ದು, ಮತ್ತು ಸಂತಾಲಿ ಭಾಷೆಗಳು ಅಧಿಕೃತ ರಾಜ್ಯ ಭಾಷೆಗಳಾಗಿವೆ. ತೆಲಂಗಾಣದಲ್ಲಿ ತೆಲುಗುವಿನ ಜೊತೆಗೆ ಉರ್ದುವನ್ನು ಅಂಗೀಕರಿಸಲಾಗಿದೆ. ಆದರೆ ಕರ್ನಾಟಕವು ತುಳು ಮತ್ತು ಕೊಡವ ಭಾಷೆಗಳನ್ನು ಅಧಿಕೃತ ರಾಜ್ಯ ಬಾಷೆಯಾಗಿ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದೆ. ರಾಜ್ಯಕ್ಕೇ ಬೇಡವಾದ ಭಾಷೆಯನ್ನು ಕೇಂದ್ರ ಅಂಗೀಕರಿಸುವುದಾದರೂ ಹೇಗೆ? ಹೀಗೆ ನಮ್ಮ ಭಾಷಾ ರಾಜಕೀಯವು ಜಾಗತೀಕರಣ ಪ್ರಕ್ರಿಯೆಗಳೊಂದಿಗೆ ಸೇರಿಕೊಂಡು ಸಂಕೀರ್ಣವಾದ ಸನ್ನಿವೇಶ ನಿರ್ಮಾಣಗೊಂಡಿದೆ.
ಯೂನೆಸ್ಕೋವು ಸಿದ್ಧಪಡಿಸಿದ ‘ಭಾಷೆಗಳ ಜಾಗತಿಕ ಭೂಪಟ’ ವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, ಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ. (Christopher Moseley, ed., UNESCO, Paris 2010) ಈ ಸಣ್ಣ ಭಾಷೆಗಳನ್ನಾಡುವ ಜನರಲ್ಲಿಯೂ ತಮ್ಮ ಮಾತೃ ಭಾಷೆಗಳ ಬಗೆಗೆ ಅಭಿಮಾನ ಕಡಿಮೆಯಾಗಿ, ಇಂಗ್ಲಿಷಿನ ಮೇಲೆ ಮೋಹ ಹೆಚ್ಚಾಗುತ್ತಲಿದೆ. ಹೀಗೆ ಭಾರತದಲ್ಲಿ ಸುಮಾರು ಮೂರು ಕೋಟಿಯ ಅರುವತ್ತು ಲಕ್ಷ ಜನಗಳ ಮಾತೃ ಭಾಷೆಗಳು ಇಂದು ಪತನಮುಖಿಯಾಗಿವೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಬಂದುವು, ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದುವು. ಸುಮಾರು ಒಂದು ಕೋಟಿ ಜನರಾಡುವ ತುಳುವನ್ನು ಕರ್ನಾಟಕ ರಾಜ್ಯ ಇಂದಿನವರೆಗೆ ಅಧಿಕೃತ ಭಾಷೆಯೆಂದೇ ಘೋಷಿಸಿಲ್ಲ್ಲವಲ್ಲ! ಖಾಸಿ, ಜೈಂಟಿಯಾ, ಕೊಡವ, ಬೃಜ ಮೊದಲಾದ ಅನೇಕ ಸುಂದರ ಭಾಷೆಗಳ ಕತೆಯಾದರೂ ಅಷ್ಟೆ. ಕರ್ನಾಟಕದಲ್ಲಿ ಇವತ್ತಿಗೂ ತುಳು- ಕೊಡವದಂಥ ಭಾಷೆಗಳಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಾಧ್ಯಾಪಕರೇ ಇಲ್ಲ. ಕನ್ನಡದ ಅಧ್ಯಾಪಕರೇ ಈ ಭಾಷೆಗಳ ಉದ್ಧಾರದ ಕೆಲಸಗಳನ್ನೂ ಮಾಡಬೇಕಾಗಿದೆ. ದ್ರಾವಿಡಾ ಭಾಷಾ ವರ್ಗದಲ್ಲಿ ತಮಿಳು, ಮಲೆಯಾಳಂ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಮಾತ್ರ ಸಾವಿರಾರು ಅಧ್ಯಾಪಕರಿದ್ದಾರೆ, ಉಳಿದ ಸುಮಾರು 24 ಸ್ವತಂತ್ರ ಭಾಷೆಗಳಲ್ಲಿ ಪ್ರಾಧ್ಯಾಪಕರು ಏಕಿಲ್ಲ.? ಒಟ್ಟಾರೆಯಾಗಿ ಇದರರ್ಥ ಇಷ್ಟೇ-
ಇಂದು ಸಣ್ಣ ಭಾಷೆಗಳ ಅಭಿವೃದ್ಧಿಯ ಕುರಿತು ಸರಕಾರಗಳಾಗಲೀ ವಿಶ್ವವಿದ್ಯಾಲಯಗಳಾಗಲೀ ಮಾಡಬೇಕಾದಷ್ಟು ಕೆಲಸಗಳನ್ನು ಮಾಡುತ್ತಿಲ್ಲ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಜನರ ಭಾಷೆಗಳು ಎಲ್ಲ ಸವಲತ್ತುಗಳನ್ನೂ ಪಡೆದುಕೊಳ್ಳುತ್ತಿವೆ. ದುರ್ಬಲರ ನಾಲಗೆ ಕಟ್ಟಿ ಹೋಗಿದೆ, ಅವರ ಭಾಷೆಗಳು ವಿನಾಶದತ್ತ ಚಲಿಸುತ್ತಿವೆ. ಸಂಸ್ಕøತಿಯ ಬಗೆಗೆ ತಿಳುವಳಿಕೆಯಿಲ್ಲದ ಅಭಿವೃದ್ಧಿಯ ಪರಿಕಲ್ಪನೆಯು ಮೂಲತಹ ಅನಾಹುತಕಾರಿಯಾದುದು ಎಂಬುದನ್ನು ಜಗತ್ತಿನ್ನೂ ಅರ್ಥಮಾಡಿಕೊಂಡಿಲ್ಲ.
ಇಂಥ ಸಂದರ್ಭದಲ್ಲಿ ನಾವು ನಮ್ಮ ಸಂಶೋಧನೆಗಳ ಬಗೆಗೆ ಹೊಸದಾಗಿ ಯೋಚಿಸುವ ಕಾಲ ಬಂದಿದೆ. ಕನ್ನಡ ವಿಶ್ವವಿದ್ಯಾಲಯದಂಥ ಭಾಷಾ ಕೇಂದ್ರಿತ ಸಂಸ್ಥೆಯ ಜವಾಬ್ದಾರಿಗಳನ್ನೂ ನಾವು ಪುನರ್ ರೂಪಿಸಿಕೊಳ್ಳಬೇಕಾಗಿದೆ. ಒಂದೆಡೆ ಸಂಶೋಧನೆಯ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಇನ್ನೊಂದೆಡೆ ತಿಳುವಳಿಕೆಗಳು ಅಂತಾರಾಷ್ಟ್ರೀಯಗೊಳ್ಳುತ್ತಿರುವ ಆಧುನಿಕ ಪ್ರಕ್ರಿಯೆ, ಇವೆರಡರ ನಡುವೆ ನಾವು ಬದುಕುತ್ತಾ, ನಮ್ಮ ಧ್ವನಿಯು ಇತರರಿಗೆ ಕೇಳುವಂತೆ ಕೆಲಸ ಮಾಡಬೇಕಾಗಿದೆ. ನಮಗೆ ನಾವೇ ಮಾತಾಡಿಕೊಳ್ಳುವ ಕಾಲ ಮುಗಿದುಹೋಗಿದೆ. ಜಗತ್ತಿನೊಡನೆ ಗಂಭೀರವಾಗಿ ಸಂವಾದಿಸಬೇಕಾದ ಕಾಲ ಸನ್ನಿಹಿತವಾಗಿದೆ.
ನಮ್ಮ ಯೋಚನೆಗಳ ಬಗ್ಗೆ ಎಚ್ಚರದಿಂದಿರೋಣ,
ಅವು ಪದಗಳಾಗುತ್ತವೆ
ನಮ್ಮ ಪದಗಳ ಬಗ್ಗೆ ಎಚ್ಚರದಿಂದಿರೋಣ
ಅವು ಕ್ರಿಯೆಗಳಾಗುತ್ತವೆ,
ನಮ್ಮ ಕ್ರಿಯೆಗಳ ಬಗ್ಗೆ ಎಚ್ಚರದಿಂದಿರೋಣ
ಅವು ಅಭ್ಯಾಸಗಳಾಗುತ್ತವೆ,
ನಮ್ಮ ಅಭ್ಯಾಸಗಳ ಬಗ್ಗೆ ಎಚ್ಚರದಿಂದಿರೋಣ
ಅವು ವ್ಯಕ್ತಿತ್ವವಾಗಿರುತ್ತದೆ,
ನಮ್ಮ ವ್ಯಕ್ತಿತ್ವದ ಬಗ್ಗೆ ಎಚ್ಚರದಿಂದಿರೋಣ
ಅವು ನಾಡಿನ ಭವಿಷ್ಯವಾಗಿರುತ್ತದೆ.
ಡಾ. ಪುರುಷೋತ್ತಮ ಬಿಳಿಮಲೆ
ಪ್ರಾಧ್ಯಾಪಕರು
ಕನ್ನಡ ಅಧ್ಯಯನ ಪೀಠ
ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ
ನವದೆಹಲಿ-110070
pbilimale@mail.jnu.ac.in