stat Counter



Saturday, August 3, 2013

ಮಾಧ್ಯಮ ಎನ್ನುವ ಕಾಡುಕುದುರೆ --ಜಿ. ಪಿ. ಬಸವರಾಜು



ಮಾಧ್ಯಮ ಎನ್ನುವ ಕಾಡುಕುದುರೆ 
ಜಿ.ಪಿ.ಬಸವರಾಜು
ಶಾಸ್ತ್ರೀಯ ಸಂಗೀತದಲ್ಲಿ ಭರವಸೆಯ ಪ್ರತಿಭೆಯಾಗಿರುವ ನನ್ನ ಎಳೆಯ ಮಿತ್ರನೊಬ್ಬ ಟಿವಿ ಮಾಧ್ಯಮದ ಝಗಮಗಿಸುವ ಬೆಳಕಿಗೆ ಮರುಳಾದ. ಈತನ ವಯಸ್ಸನ್ನು ಗಮನಿಸಿದರೆ ಇದು ಸಹಜವಾಗಿಯೇ ಇತ್ತು. ಈ ಟಿವಿ ವಾಹಿನಿ ಏರ್ಪಡಿಸಿದ್ದ ಸ್ಪಧರ್ೆಯಲ್ಲಿ ಭಾಗವಹಿಸುವ ಕಲಾವಿದರು ಒಂದೊಂದೇ ಮೆಟ್ಟಿಲನ್ನು ಏರಿ ಹೋಗಬೇಕು. ವರ್ಷಗಟ್ಟಲೆ ನಡೆಯುವ ಈ ಪೈಪೋಟಿಯಲ್ಲಿ ಕೊನೆಯ ಹಂತದಲ್ಲಿ ಜಯಶಾಲಿಯಾದವರಿಗೆ ಬೆಂಗಳೂರಿನಲ್ಲೊಂದು ಫ್ಲಾಟ್ ಸಿಕ್ಕುತ್ತಿತ್ತು. ಈ ಫ್ಲಾಟ್ನ ಬೆಲೆ ಕಡಿಮೆ ಎಂದರೆ ಐವತ್ತು ಲಕ್ಷ. ನಿರಂತರವಾಗಿ, ಕ್ರಮಬದ್ಧವಾಗಿ, ತುಂಬ ಶ್ರದ್ಧೆ ಮತ್ತು ಆಸಕ್ತಿಯಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದ ನನ್ನ ಈ ಮಿತ್ರ ಸ್ಪಧರ್ೆಯ ಬೆನ್ನುಹತ್ತಿ, ಶಾಸ್ತ್ರೀಯ ಸಂಗೀತಾಭ್ಯಾಸಕ್ಕೆ ಬೆನ್ನುತಿರುಗಿಸಿದ. ಟಿವಿ ಎಂದರೆ ಜನಪ್ರಿಯತೆ; ಎಲ್ಲರ ಕಣ್ಣುಗಳೂ ತನ್ನ ಮೇಲಿವೆ ಎನ್ನುವ ಭ್ರಮೆ. ಈ ಭ್ರಮಾಲೋಕದ ನಡೆಯೇ ಬೇರೆ. ಎರಡು ವರ್ಷಗಳ ಕಾಲ ನಡೆದ ಈ ಸ್ಪಧರ್ೆಯಲ್ಲಿ ಭಾಗವಹಿಸುವುದೆಂದರೆ ಬಗೆಬಗೆಯ ಸಿದ್ಧತೆ; ರೆಕಾಡರ್ಿಂಗ್ಗಾಗಿ ಸಾಕಷ್ಟು ಸಮಯ. ತನ್ನ ನಿಯಮಿತ ಅಭ್ಯಾಸವನ್ನು ತಪ್ಪಿಸಿ ಈತ ಟಿವಿಗಾಗಿ ಓಡಾಡಿದ. ಕೊನೆಯ ಹಂತದವರೆಗೂ ಸಾಗಿದ ನನ್ನ ಮಿತ್ರ, ಅಂತಿಮ ಜಯ ಪಡೆಯಲಿಲ್ಲ. ಇದು ಈತನನ್ನು ನಿರಾಶೆಗೆ ತಳ್ಳಿತು. ಪ್ರತಿವಾರವೂ ಬೀಗುತ್ತಿದ್ದವ ಕೊನೆಯಲ್ಲಿ ಕುಸಿದು ಕುಳಿತ. ಆಳ ಕಣಿವೆಗೆ ಬಿದ್ದವನಂತೆ ಕುಗ್ಗಿಹೋದ. ಅಲ್ಲಿಂದ ಮತ್ತೆ ಮೇಲೇಳಲು ಹೆಣಗಬೇಕಿತ್ತು. ತನ್ನ ಬದುಕಿನ ಬಹಳ ಬೆಲೆಯುಳ್ಳ ಎರಡು ವರ್ಷಗಳು ಈತನ ಪಾಲಿಗೆ 'ಅರ್ಥ'ವಿಲ್ಲದೆ ಕಳೆದುಹೋಗಿದ್ದವು.
ಹಿರಿಯರಿಗಿರಲಿ, ಕಿರಿಯರಿಗಿರಲಿ, ಟಿವಿಯ ಪರದೆ ಎನ್ನುವುದು ಬಹುದೊಡ್ಡ ಆಕರ್ಷಣೆ. ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಈ ಪರದೆಯ ಮೇಲೆ ಪ್ರದಶರ್ಿಸಿದರೆ ತಂದೆತಾಯಿಗಳಿಗೆ ಹಿಗ್ಗೋ ಹಿಗ್ಗು. ಹೀಗಾಗಿಯೇ ಯಾವುದೇ ವಾಹಿನಿ ಏರ್ಪಡಿಸುವ ಸ್ಪಧರ್ೆಗಳಲ್ಲಿ ನಮ್ಮ ಮಕ್ಕಳು ಗೆಲ್ಲುವುದು ಹೇಗೆ ಎಂಬುದರ ಬಗ್ಗೆ ತಂದೆತಾಯಿಗಳು ತಲೆಕೆಡಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ಅವರು ವಿಶೇಷ ತರಬೇತಿಯನ್ನು, ಮುಖ್ಯವಾಗಿ ಅಗತ್ಯ ಟೆಕ್ನಿಕ್ಗಳನ್ನು ತಮ್ಮ ಮಕ್ಕಳಿಗೆ ಕೊಡಿಸಲು ನೋಡುತ್ತಾರೆ. ತಾತ್ಕಾಲಿಕ ಪ್ರತಿಫಲದ ಮೇಲೆ ಗಮನವಿಡುವ ಟೆಕ್ನಿಕ್ಗಳು ಬೇರೆ, ನಿಜವಾದ ಕಲೆಯ ಆಳ ಅಗಲಗಳು ಬೇರೆ ಎಂಬುದು ಅವರಿಗೆ ತಿಳಿಯುವುದೇ ಇಲ್ಲ. ನಿಜವಾಗಿಯೂ ಒಂದು ಕಲೆಯನ್ನು ತನ್ನದಾಗಿ ಮಾಡಿಕೊಳ್ಳುವ ಹಂಬಲವಿರುವ ಮಕ್ಕಳು ಆ ಕಲೆಯನ್ನು ಕರಗತಮಾಡಿಕೊಳ್ಳಲು ಹತ್ತಾರು ವರ್ಷ ತರಬೇತಿಯನ್ನು ಪಡೆಯಬೇಕಾಗುತ್ತದೆ; ಶ್ರಮವಹಿಸಿ, ಶ್ರದ್ಧೆಯಿಂದ ಕಲಿಯಬೇಕಾಗುತ್ತದೆ. ಅಷ್ಟು ತಾಳ್ಮೆ ಪೋಷಕರಿಗೆ ಇರುವುದಿಲ್ಲ. ತಕ್ಷಣದ ಫಲಿತಾಂಶ ಅವರಿಗೆ ಬೇಕು; ತಮ್ಮ ಮಕ್ಕಳು ಬೆಳಗಾಗುವುದರೊಳಗೆ ಜಗತ್ಪ್ರಸಿದ್ಧರಾಗಬೇಕು ಎಂಬುದು ಅವರ ಹತ್ತಿಕ್ಕಲಾಗದ ಆಸೆ. ಟಿವಿಯ ವಾಹಿನಿಗಳು ಇಂಥ ಮನೋಭಾವವನ್ನು ಪ್ರಚೋದಿಸುತ್ತವೆ, ಬೆಂಬಲಿಸುತ್ತವೆ. ಅಷ್ಟೇ ಅಲ್ಲ, ಹತ್ತಾರು ವರ್ಷಗಳ ದುಡಿಮೆಯಲ್ಲಿ ತೊಡಗಿರುವ ನಿಜವಾದ ಆಸಕ್ತ ಮಕ್ಕಳು, ತೆರೆಯ ಮರೆಯಲ್ಲಿರುವ ಪ್ರತಿಭಾವಂತರು ಎಷ್ಟೋ ಸಲ ನಮ್ಮ ಮಾಧ್ಯಮಗಳಿಗೆ ಕಾಣಿಸುವುದೂ ಇಲ್ಲ. ಇದು ಹಗಲುಗುರುಡೊ, ರಾತ್ರಿಗುರುಡೋ ಅಥವಾ ಶಾಶ್ವತ ಕುರುಡೋ.
ಪ್ರಚಾರ ಎನ್ನುವುದು ಮಕ್ಕಳನ್ನು ಮತ್ತು ತಂದೆತಾಯಿಯರನ್ನು ದಿಕ್ಕುತಪ್ಪಿಸುತ್ತದೆ. ಮಾಧ್ಯಮ ಯಾವುದೇ ಇರಲಿ, ಪ್ರಚಾರವಂತೂ ಭರ್ಜರಿಯಾಗಿಯೇ ಸಿಕ್ಕುತ್ತದೆ. ಪ್ರತಿಭಾವಂತರ ಧ್ಯಾನಕ್ಕೆ, ಪರಿಶ್ರಮಕ್ಕೆ, ಶಿಸ್ತಿಗೆ ಈ ಪ್ರಚಾರ ಮಾರಕವಾಗಿಯೇ ಇರುತ್ತದೆ. ಆದರೆ ಈ ಅಪಾಯವನ್ನು ಗುರುತಿಸುವವರು ಕಡಿಮೆ. ಇದು ಕೇವಲ ಟಿವಿ ವಾಹಿನಿಗಳ ಪರಿಸ್ಥಿತಿಯಲ್ಲ, ಮುದ್ರಣ ಮಾಧ್ಯಮದ ಸ್ಥಿತಿಗತಿಯೂ ಹೀಗೆಯೇ ಇದೆ.
ಹಣ, ಪ್ರಚಾರ, ಜನಪ್ರಿಯತೆ ನಿಜವಾದ ಕಲಾವಿದರ ಹಾದಿಯಲ್ಲಿ ಕಂಟಕಗಳೇ. ಪ್ರಚಾರ ಅವಕಾಶದ ಬಾಗಿಲುಗಳನ್ನು ತೆರೆದುಬಿಡುತ್ತದೆ ಎಂಬುದೂ ನಿಜ. ಕಲಾವಿದನಿಗೆ ಅವಕಾಶಗಳು ಅಗತ್ಯ. ಆದರೆ ಈ ಪ್ರಚಾರ ಎನ್ನುವುದು ಕಾಡುಕುದುರೆಯ ಬೆನ್ನೇರಿದಂತೆ. ಅದು ವೇಗವಾಗಿ ಓಡುವಾಗ ಸಿಕ್ಕುವ ಸಂತೋಷ ಬಹಳ ಕಾಲ ಉಳಿಯಲಾರದು. ಈ ಕಾಡುಕುದುರೆ ತನ್ನ ಸವಾರನನ್ನು ಎಲ್ಲಿಯೋ ಎಸೆದು ಕಣ್ಮರೆಯಾಗುವ ಸಂಭವವೂ ಇರುತ್ತದೆ.
ನಮ್ಮ ಮಾಧ್ಯಮಗಳು ಇಂಥ ಸ್ಥಿತಿಯನ್ನು ಬೆಳೆಸುತ್ತಿವೆ; ಬೆಂಬಲಿಸುತ್ತಿವೆ. ಅವರು ಕೊಡುತ್ತಿರುವ ಪ್ರಚಾರ ಅರ್ಹರಿಗೆ ಸಿಕ್ಕುತ್ತದೆಯೇ, ಅಥವಾ ಮಾಧ್ಯಮದ ಸುತ್ತಮುತ್ತ ಗಸ್ತು ಹಾಕುವವರ ಪಾಲಾಗುತ್ತಿದೆಯೇ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡರೆ ಪರಿಸ್ಥಿತಿಯ ಸ್ಪಷ್ಟ ಚಿತ್ರ ಕಣ್ಮುಂದೆ ತೆರೆದುಕೊಳ್ಳುತ್ತದೆ.
ಇವತ್ತು ಮಾಧ್ಯಮಗಳು ಅಬ್ಬರಿಸುತ್ತಿವೆ. ಆಧುನಿಕ ತಂತ್ರಜ್ಞಾನ ಈ ಮಾಧ್ಯಮಗಳಿಗೆ ತಂದುಕೊಟ್ಟಿರುವ ಬಲ ಯಾರ ಊಹೆಗೂ ಸಿಕ್ಕುವುದಿಲ್ಲ. ಬೆಳಗಾಗುವುದರೊಳಗಾಗಿ ಅನಾಮಿಕನೊಬ್ಬ ಜಗತ್ಪ್ರಸಿದ್ಧವಾಗುವುದು, ಅವನಿಗೆ ಜಗತ್ತಿನ ಎಲ್ಲ ಬಾಗಿಲುಗಳೂ ತೆರೆದುಕೊಳ್ಳುವುದು ಈ ಮಾಧ್ಯಮಗಳ ಪ್ರಭಾವೀ ಪ್ರಚಾರದಿಂದಾಗಿಯೇ. ಇಷ್ಟು ಶಕ್ತಿಯುತವಾಗಿರುವ ಮಾಧ್ಯಮಗಳು ಹೇಗೆ ಕೆಲಸ ನಿರ್ವಹಿಸುತ್ತಿವೆ? ಇವುಗಳ ಕಿವಿ ಮತ್ತು ಕಣ್ಣು ಚುರುಕಾಗಿವೆಯೇ? ರಾಗ ತಾಳಗಳ ಪರಿಚಯವಿಲ್ಲದಿದ್ದರೂ, ಶಾಸ್ತ್ರೀಯ ಸಂಗೀತ ಕಚೇರಿಗಳ ಬಗ್ಗೆ ಅಂಜಿಕೆಯಿಲ್ಲದೆ  ಬರೆಯುವ ಮತ್ತು ಮಾತನಾಡುವ ಅಖಂಡ ಆತ್ಮವಿಶ್ವಾಸದ ಮಾಧ್ಯಮ ಮಿತ್ರರು ನಮ್ಮಲ್ಲಿದ್ದಾರೆ. ನವಿರಾದ ಭಾಷೆ, ಬಣ್ಣಬಣ್ಣದ ಮಾತುಗಳಿದ್ದರೆ ನಾವು ಏನನ್ನಾದರೂ ಬಣ್ಣಿಸಬಲ್ಲೆವು, ಯಾವುದರ ಬಗೆಗಾದರೂ ತೀಪರ್ು ಕೊಡಬಲ್ಲೆವು, ಕಲೆಯಾದರೇನು, ಸಾಹಿತ್ಯವಾದರೇನು? ಎಲ್ಲವನ್ನೂ ಬಣ್ಣದ ಭಾಷೆಯಲ್ಲಿ, ಬೆಡಗಿನಲ್ಲಿ ತೇಲಿಸಬಲ್ಲೆವು ಎನ್ನುವ ನಂಬಿಕೆ ಈ ಮಿತ್ರರದು. ವಾಣಿಜ್ಯ, ಕ್ರೀಡೆ, ವಿಜ್ಞಾನಗಳಂತೆಯೇ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಚಿತ್ರಕಲೆಗಳೂ ವಿಶೇಷ ಪರಿಣತಿಯನ್ನು ಬೇಡುವ ಕ್ಷೇತ್ರಗಳು. ಈಗ ಮಾಧ್ಯಮಗಳಲ್ಲಿ ಇಂಥ ಪರಿಣತರ ಸಂಖ್ಯೆ ಕ್ಷೀಣಿಸುತ್ತಿದೆ. ಈ ಪರಿಣತಿ ಇಲ್ಲದಿದ್ದರೆ ಬರಹಗಳು ಪೇಲವವಾಗುತ್ತವೆ; ಬೆಲೆಯನ್ನು ಕಳೆದುಕೊಳ್ಳುತ್ತವೆ. ಜೊತೆಗೆ ಪ್ರತಿಭಾವಂತ ಕಲಾವಿದರ ಮೌಲ್ಯಮಾಪನವೂ ಸರಿಯಾಗಿ ಆಗದೆ ಅನರ್ಹರಿಗೆ ಹೆಚ್ಚು ಪ್ರಚಾರ ಸಿಕ್ಕುವ ಅಪಾಯವೂ ಇರುತ್ತದೆ. ಇವತ್ತು ಅನೇಕ ಕಲಾವಿದರು, ನಿಜವಾದ ಪ್ರತಿಭಾವಂತರು ಮೂಲೆಗುಂಪಾಗಿರುವುದಕ್ಕೆ ಇದೂ ಒಂದು ಕಾರಣವಾಗಿರಬಹುದು. ಇದನ್ನು ಮಾಧ್ಯಮಗಳು ಅರ್ಥಮಾಡಿಕೊಳ್ಳದಿದ್ದರೆ ಇಡೀ ಸಮಾಜದ ರುಚಿ ಹದಗೆಡಬಹುದು. ಸೂಕ್ಷ್ಮತೆ ಹಾಳಾಗಿ ರೂಕ್ಷತೆಯೇ ವಿಜೃಂಭಿಸಬಹುದು.
ನಮ್ಮ ಮಾಧ್ಯಮಗಳ ಹೆಚ್ಚಿನ ಒಡನಾಟ ಇವತ್ತು ಕಲೆ, ಸಾಹಿತ್ಯ, ಸಂಸ್ಕೃತಿಯ ವಿಭಿನ್ನ ಮುಖಗಳ ಜೊತೆಗಿಲ್ಲ. ಅದೇನಿದ್ದರೂ ರಾಜಕೀಯದ ಜೊತೆಗೇ. ಸುದ್ದಿಯ ಮೂಲವೇ ರಾಜಕಾರಣಿಗಳು ಎಂದು ತಿಳಿದಿರುವ ಮಾಧ್ಯಮಗಳು, ಬದುಕಿನ ಇನ್ನಿತರ ಮುಖಗಳನ್ನು ಕಡೆಗಣಿಸುತ್ತಿವೆ. ಕಲೆ, ಸಾಹಿತ್ಯವಂತೂ ಲೆಕ್ಕಕ್ಕೇ ಇಲ್ಲದ ಸಂಗತಿಗಳಾಗಿವೆ. ಕಲಾಮೇಳವನ್ನು ರಾಜಕಾರಣಿಯೊಬ್ಬ ಉದ್ಘಾಟಿಸುವುದಾದರೆ, ಅಲ್ಲಿ ಮಾಧ್ಯಮದವರು ಸಂತೆಸೇರುತ್ತಾರೆ. ರಾಜಕಾರಣಿಗಳಿಲ್ಲ ಎಂದರೆ ಅಂಥ ಮೇಳಗಳಿಗೆ ಬರುವುದು ಬಿಡುವುದು ಮಾಧ್ಯಮದವರ ಮಜರ್ಿಗೆ ಸೇರಿದ ಸಂಗತಿಯಾಗಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ.
ನಿತ್ಯವೂ ರಾಜಕೀಯ ಸುದ್ದಿಗಳಲ್ಲೇ ಮಿಂದೇಳುವ ಮಾಧ್ಯಮಗಳು ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ವಿದ್ಯಮಾನಗಳನ್ನು ಗ್ರಹಿಸುವ ಕ್ರಮವೇ ದೋಷಪೂರ್ಣವಾಗಿದೆ. ಕಣ್ಣು ಮತ್ತು ಕಿವಿಗಳನ್ನು ಚುರುಕಾಗಿಟ್ಟುಕೊಂಡಾಗ ನಮಗೆ ಸಂಗೀತ ಮತ್ತು ಕಲೆಗಳ ನಿಜ ಸ್ವರೂಪ ತಿಳಿಯುತ್ತದೆ.
ಮಾಧ್ಯಮಗಳಿಂದ ಸಾಹಿತ್ಯಕ್ಕೆ ಸಿಕ್ಕುವ ಪ್ರಚಾರವೂ ಇದೇ ಬಗೆಯದು. ಯಾರು ಅರ್ಹರು, ಯಾರು ಅಲ್ಲ, ಯಾರಿಗೆ ಪ್ರಚಾರ ಎಷ್ಟು ಕೊಡಬೇಕು, ಯಾವ ಪ್ರಮಾಣದಲ್ಲಿ ಕೊಡಬೇಕು ಎಂಬ ತಾರತಮ್ಯ ಜ್ಞಾನವನ್ನೂ ನಮ್ಮ ಮಾಧ್ಯಮಗಳು ಕಳೆದುಕೊಳ್ಳುತ್ತಿವೆ. ಎಲ್ಲರೂ 'ಖ್ಯಾತ ಸಾಹಿತಿಗಳೇ', ಎಲ್ಲರೂ 'ಗಣ್ಯ ಬರಹಗಾರರೇ'; ಎಲ್ಲರೂ 'ಸಮಾಜ ಚಿಂತಕರೇ', ಎಲ್ಲರೂ 'ಪ್ರಗತಿಪರರೇ', ಎಲ್ಲರೂ 'ಹೋರಾಟಗಾರರೇ'. ಮಾಧ್ಯಮಗಳಲ್ಲಿ ಬಳಕೆಯಾಗುತ್ತಿರುವ ಈ ಗುಣವಿಶೇಷಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ, ಪಟ್ಟಿಮಾಡುತ್ತ ಹೋದರೆ ನಮ್ಮ ವಿವೇಚನೆ ಎಂಥ ಸ್ಥಿತಿಗಿಳಿದಿದೆ ಎಂಬುದು ತಿಳಿಯುತ್ತದೆ.
  ಸಾಹಿತ್ಯದ ಹಿನ್ನೆಲೆ ಇದ್ದರೆ ಸಾಹಿತ್ಯ ಕಾರ್ಯಕ್ರಮಗಳನ್ನು ವರದಿ ಮಾಡುವುದು ಕಷ್ಟವಾಗಲಾರದು. ಇಲ್ಲವಾದರೆ ಸಾಹಿತಿಯೊಬ್ಬ ಮಾತನಾಡುವುದಕ್ಕೂ, ರಾಜಕಾರಣಿ ಮಾತನಾಡುವುದಕ್ಕೂ ವ್ಯತ್ಯಾಸ ತಿಳಿಯುವುದಿಲ್ಲ. ಇವತ್ತು ಆಗುತ್ತಿರುವುದೂ ಇದೇ. ಸಾಹಿತಿ ಮತ್ತು ರಾಜಕಾರಣಿಯ ನಡುವಿನ ಅಂತರ ಕಡಿಮೆಯಾಗುತಿದೆ ಎಂಬ ವಾದವನ್ನೂ ಒಡ್ಡಬಹುದು. ಅದು ಬೇರೆಯ ದಿಕ್ಕಿನ ಚಚರ್ೆ. ಆದರೆ ನಿಜವಾದ ಒಬ್ಬ ಸಂಶೋಧಕ, ವಿಮರ್ಶಕ, ಕವಿ, ಕಲಾವಿದ ಮಾತನಾಡುತ್ತಿರುವ ಸಂಗತಿಗಳ ಪೂಣರ್ಾರ್ಥ ಮಾಧ್ಯಮದವರಿಗೆ ಆಗುತ್ತಿದೆಯೇ? ಆಗಬೇಕೆಂದರೆ ಮಾಧ್ಯಮದವರು, ಸಾಹಿತ್ಯದ ಓದನ್ನು ನಿರಂತರವಾಗಿ ನವೀಕರಿಸಿಕೊಳ್ಳುತ್ತಿರಬೇಕು. ಕಲೆ, ಸಾಹಿತ್ಯಗಳ ಜೊತೆಗಿನ ತಮ್ಮ ಸಂಪರ್ಕವನ್ನು ನಿಕಟವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಇದು ಇತ್ತೀಚೆಗಂತೂ ಕಾಣಿಸುತ್ತಿಲ್ಲ. ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸವಂತೂ ಮಾಧ್ಯಮದ ಮಿತ್ರರಲ್ಲಿ ಕಣ್ಮರೆಯಾಗುತ್ತಿದೆ. ಒಂದು ಕಾಲಕ್ಕೆ ಚೆನ್ನಾಗಿ ಓದುತ್ತಿದ್ದವರು, ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು, ಬರೆಯಬಲ್ಲವರು ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿದ್ದರು. ಅವರು ಸಾಹಿತಿಗಳನ್ನಾಗಲೀ, ಕಲಾವಿದರನ್ನಾಗಲೀ ಸಂದಶರ್ಿಸಿದರೆ, ಅಥವಾ ಅವರ ಬಗ್ಗೆ ಬರೆದರೆ, ಸಾಹಿತ್ಯ ಕಾರ್ಯಕ್ರಮಗಳ ಚಿತ್ರಗಳನ್ನು ಕಟ್ಟಿಕೊಟ್ಟರೆ ಅವು ಜೀವಂತವಾಗಿರುತ್ತಿದ್ದವು. ಓದುವವನ ಕುತೂಹಲ, ಆಸಕ್ತಿಗಳನ್ನು ಕೆರಳಿಸುತ್ತಿದ್ದವು; ಸಾಹಿತಿಯ ಕೃತಿಗಳನ್ನು ಓದಲು ಪ್ರೇರೇಪಿಸುತ್ತಿದ್ದವು. ಅದರ ಪರಿಣಾಮ ಓದುವವರ ಮೇಲೆ ಗಾಢವಾಗಿಯೇ ಇರುತ್ತಿತ್ತು. ಇವತ್ತು ವಿವಾದಗಳು, ಗದ್ದಲಗಳು, ಅನಗತ್ಯ ವಾಗ್ವಾದಗಳು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿವೆ. ಇಂಥವನ್ನೇ ಬಿತ್ತಿ ಬೆಳೆಯುವ ಮಾಧ್ಯಮಗಳೂ ಇವೆ. ಕಿರುದಾರಿಗಳ ಮೂಲಕವೇ ಓದುಗರನ್ನು, ನೋಟಕರನ್ನು ಸೆರೆಹಿಡಿಯುವ ಉದ್ದೇಶಗಳೂ ಮಾಧ್ಯಮದವರಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ. ಇದನ್ನು ತಡೆಯುವುದು ಹೇಗೆ? ತಡೆಯುವವರು ಯಾರು? ಇಂಥ ಪ್ರಶ್ನೆಗಳನ್ನಾದರೂ ಕೇಳಿಕೊಳ್ಳುವ ಮನೋಧರ್ಮವನ್ನು ನಾವು ಕಾಪಾಡಿಕೊಳ್ಳಬೇಕು.
(ಸೌಜನ್ಯ: ಸಂಯುಕ್ತ ಕನರ್ಾಟಕ)
G.P. Basavaraju



No comments:

Post a Comment