stat Counter



Saturday, August 10, 2013

ಎಲ್ಲ ಸೊಲ್ಲುಗಳೂ ಇಲ್ಲಿ ಕೇಳಬೇಕು

ಗಾಳಿಯ ಗತಿ ಅಂಕಣಕ್ಕೆ
ಜಿ.ಪಿ.ಬಸವರಾಜು

ಎಲ್ಲ ಸೊಲ್ಲುಗಳೂ ಇಲ್ಲಿ ಕೇಳಬೇಕು

'ಒಂದು ನುಡಿ ಕಣ್ಮರೆಯಾಯಿತೆಂದರೆ, ಪ್ರಪಂಚದ ಒಂದು ನೋಟವೇ ಕಣ್ಮರೆಯಾದಂತೆ.'
ನುಡಿ ಅಷ್ಟೊಂದು ಮುಖ್ಯವೇ? ನುಡಿಯನ್ನು ಆಡುವ ಜನರೇ ಹಸಿವೆಯ ಹೊಡೆತಕ್ಕೆ ಸಿಕ್ಕು ತರಗೆಲೆಗಳಂತೆ ಉದುರಿ ಹೋಗುತ್ತಿರುವ ಸನ್ನಿವೇಶದಲ್ಲಿ ನುಡಿಯ ಬಗ್ಗೆ ನಾವು ತೋರುವ ಕಳಕಳಿಯನ್ನು ಜನ ಹೇಗೆ ಅರ್ಥಮಾಡಿಕೊಳ್ಳುತ್ತಾರೆ? ಮೂರನೇ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇವತ್ತಿಗೂ ಹಸಿವೆ ಎಂಬುದು ನಿಗಿನಿಗಿ ಉರಿಯುವ ಕೆಂಡ. ಹಸಿವೆಯಿಂದ ನಮ್ಮ ರಾಷ್ಟ್ರದಲ್ಲಿ ಯಾರೂ ಸತ್ತಿಲ್ಲ ಎಂದು ಅನೇಕ ರಾಷ್ಟ್ರಗಳು ದೊಡ್ಡ ಗಂಟಲಿನಲ್ಲಿ ಹೇಳುತ್ತಿದ್ದರೂ, ಹಸಿವೆಯನ್ನು ಸಂಪೂರ್ಣವಾಗಿ ನೀಗಿಸುವುದು ಇನ್ನೂ ಸಾಧ್ಯವಾಗಿಲ್ಲ. ಅನ್ನವಿಲ್ಲದ ಪ್ರಾಣಬಿಡುವವರ ಸಂಖ್ಯೆ ಸರಿಯಾದ ಲೆಕ್ಕಕ್ಕೆ ಸಿಕ್ಕುವುದೇ ಇಲ್ಲ. ಮನುಷ್ಯ ಬದುಕಬೇಕಾದದ್ದು ಮುಖ್ಯ. ಮೊದಲು ಮನುಷ್ಯ; ನಂತರ ಅವನ ನುಡಿ ಎಂದು ಹೇಳುವ ನಾವು ಮನುಷ್ಯನ ಬಗ್ಗೆ ಚಿಂತಿಸಿದ್ದೇ ಹೆಚ್ಚು; ನುಡಿಯ ದಿಕ್ಕಿನಲ್ಲಿ ನಮ್ಮ ಗಮನ ಹರಿದದ್ದೇ ಕಡಿಮೆ.
ಆದರೂ ನುಡಿಯ ಬಗ್ಗೆ, ಅವುಗಳ ಅಳಿವು ಉಳಿವಿನ ಬಗ್ಗೆ ಜಗತ್ತಿನಾದ್ಯಂತ ಚಿಂತನೆ ನಡೆದಿದೆ. ಒಂದು ನುಡಿ ಕಣ್ಮರೆಯಾದರೆ ಏನಾಗುತ್ತದೆ ಎಂಬುದನ್ನು ಫ್ರೆಂಚ್ ಭಾಷಾತಜ್ಞ ಜೀನ್ ಮೈಕೇಲ್ ಫಿಲಿಪ್ ತಿಳಿಯಾದ ನುಡಿಯಲ್ಲಿ ಹೇಳಿದ್ದಾನೆ. ಒಂದು ನುಡಿ ಮನುಷ್ಯನ ಕತೆ ಹೇಳುತ್ತದೆ. ಸಮುದಾಯದ ಕತೆಗಳನ್ನು ಹೇಳುತ್ತದೆ. ಜನಾಂಗಗಳು ಬದುಕಿದ ಬಾಳಿದ ಇತಿಹಾಸವನ್ನು ಕಟ್ಟಿಕೊಡುತ್ತದೆ. ಮಿಲಿಯಾಂತರ ವರ್ಷಗಳ ಮನುಷ್ಯ ಬದುಕಿನ ದಾಖಲೆಯನ್ನು ಅದು ನೀಡುತ್ತದೆ. ಅನೇಕ ಆಚರಣೆಗಳು, ನಂಬಿಕೆಗಳು, ಮೌಲ್ಯಗಳು, ತತ್ವಗಳು, ಸಾಂಸ್ಕೃತಿಕ ವಿವರಗಳು, ಮನುಕುಲ ಕಟ್ಟಿದ ಹಾಡುಗಳು, ಕತೆಗಳು, ಕಾಲ್ಪನಿಕ ಪ್ರತಿಭಾ ವಿಶೇಷಗಳು ಹೀಗೆ ನೂರಾರು ಸಂಗತಿಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ನುಡಿ ಬಹಳ ಮುಖ್ಯವಾದದ್ದು. ಈ ಅರಿವು ಇಡೀ ಸಮುದಾಯಕ್ಕೆ ಇಲ್ಲದಿರಬಹುದು; ಆದರೆ ಕೆಲವರಿಗಾದರೂ ಇರುವುದರಿಂದ ನುಡಿಯನ್ನು ಪೊರೆಯುವ, ಅದನ್ನು ಮುಂದಿನ ತಲೆಮಾರುಗಳಿಗೆ ಉಳಿಸಿಕೊಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ವಿನಾಶದ ಹಾದಿ ಹಿಡಿದ ನುಡಿಗಳ ಸಂರಕ್ಷಣೆ, ಅವುಗಳ ದಾಖಲಾತಿ, ಸಂಶೋಧನೆ ಹೀಗೆ ಹಲವು ಯೋಜನೆಗಳು ಒಂದಲ್ಲ ಒಂದು ರೀತಿಯಲ್ಲಿ ಜಾರಿಯಲ್ಲಿರುತ್ತವೆ. ಇದಕ್ಕಾಗಿ ಹಲವು ಸಂಘಟನೆಗಳೂ ಇದ್ದು ಅವು ಸದಾ ತಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಿರುತ್ತವೆ. 'ವಿಪತ್ತಿಗೊಳಗಾದ ನುಡಿಗಳ ನಿಧಿ'ಯೊಂದು 1996ರಲ್ಲಿ ಹುಟ್ಟಿಕೊಂಡಿದೆ ಎಂಬುದು ನುಡಿಗಳ ಬಗ್ಗೆ ನಮಗಿರುವ ಕಳಕಳಿಯನ್ನು ತೋರಿಸುತ್ತದೆ.
ನುಡಿ ಮನುಷ್ಯರ ನಡುವಿನ ಸಂಬಂಧವನ್ನು ಗಟ್ಟಿಮಾಡಿರುವ, ಮುರಿದಿರುವ ಸಾಧನವೂ ಹೌದು. ನುಡಿ ಇಲ್ಲದಿದ್ದರೆ ಮನುಷ್ಯ ಮನುಷ್ಯರ ನಡುವಣ ವ್ಯವಹಾರ ಎಷ್ಟು ಬಿಕ್ಕಟ್ಟಿನದಾಗುತ್ತಿತ್ತೆಂಬುದನ್ನು ಊಹಿಸುವುದೂ ಸಾಧ್ಯವಾಗುವುದಿಲ್ಲ. ಕಾಲಾಂತರದಲ್ಲಿ ನುಡಿಯನ್ನು ಕಂಡುಕೊಂಡ ಮನುಷ್ಯ ಅದನ್ನು ನಿರಂತರವಾಗಿ ಬಳಸುತ್ತಿರುವುದರಿಂದ ಅದು ಮನುಷ್ಯ ಇರುವವರೆಗೂ ಇರುತ್ತದೆಂಬ ಬಲವಾದ ನಂಬಿಕೆ ನಮ್ಮಲ್ಲಿ ಉಳಿದಿದೆ. ಇದು ನಿಜವೂ ಹೌದು. ಆದರೆ ಮನುಕುಲ ಎನ್ನುವುದರಲ್ಲಿ ಸಾವಿರಾರು ಸಮುದಾಯಗಳಿವೆ; ಅಸಂಖ್ಯ ಬುಡಕಟ್ಟುಗಳಿವೆ. ಒಂದೊಂದು ಬುಡಕಟ್ಟಿನ ಕಣ್ಮರೆ ಎಂದರೆ ಒಂದೊಂದು ನುಡಿಯ ಕಣ್ಮರೆಯೇ.
 ಗಣನೆಗೇ ಸಿಕ್ಕದ ಸಣ್ಣ ಸಣ್ಣ ಗುಂಪುಗಳು, ಜನಾಂಗಗಳು ತಮ್ಮದೇ ಆದ ನುಡಿಯನ್ನು ಉಳಿಸಿಕೊಂಡು ಬೆಳಸಿಕೊಂಡು ಬಂದಿವೆ. ಹೀಗಾಗಿ ನುಡಿಗಳ ಸಂಖ್ಯೆಯೂ ನಿಖರವಾದ ಲೆಕ್ಕಕ್ಕೆ ಸಿಕ್ಕುವುದೇ ಇಲ್ಲ. ಸುಮಾರು 7000 ದಷ್ಟು ನುಡಿಗಳು ಜಗತ್ತಿನಲ್ಲಿವೆ ಎಂದು ಹೇಳಲಾಗುತ್ತಿದೆ. ಯಾವ ಸಕರ್ಾರಿ ದಾಖಲೆಗೂ ಸಿಕ್ಕದೇ ತಮ್ಮ ಪಾಡಿಗೆ ತಾವು ಕಾಡುಮೇಡುಗಳಲ್ಲಿ ಬದುಕುತ್ತಿರುವ ಸಣ್ಣ ಪುಟ್ಟ ಬುಡಕಟ್ಟುಗಳು ಆಡುತ್ತಿರುವ ನುಡಿಗಳು ಇನ್ನೂ 'ನಾಗರಿಕ' ಜಗತ್ತಿನ ಗಮನಕ್ಕೇ ಬಂದಿಲ್ಲ. ಈ ಪುಟ್ಟ ಸಮುದಾಯಗಳು ಇರುವವರೆಗೂ ಈ ನುಡಿಗಳೂ ಉಳಿದಿರುತ್ತವೆ. ಇವು ನಾಶವಾದಂತೆ ಈ ನುಡಿಗಳೂ ಕಣ್ಮರೆಯಾಗಿಬಿಡುತ್ತವೆ. ಪ್ರಕೃತಿಯೊಂದಿಗೆ ಸೆಣಸುತ್ತ, ಕಾಡುಪ್ರಾಣಿಗಳಂತೆ ಬದುಕುತ್ತಿರುವ ಬುಡಕಟ್ಟುಗಳು ಕುಗ್ಗುತ್ತ ಕುಗ್ಗತ್ತ ಹೋಗುವುದು ಅವರಾಡುವ ನುಡಿಗಳನ್ನು ಸಾವಿನತ್ತ ದೂಡುತ್ತ ಹೋದಂತೆ. ಒಂದು ನುಡಿಯನ್ನಾಡುವ ಸಮುದಾಯ ನಾಶವಾಗಿ ಕೊನೆಗೆ ಒಬ್ಬನೇ ಒಬ್ಬ ಮನುಷ್ಯ ಆ ನುಡಿಯನ್ನು ಆಡುತ್ತ ಉಳಿದಿರುವ ಸನ್ನಿವೇಶಗಳೂ ಇವತ್ತು ಜಗತ್ತಿನಲ್ಲಿವೆ. ಒಬ್ಬನೇ ಒಬ್ಬ ಆಡುವ 18 ಭಾಷೆಗಳು ಜಗತ್ತಿನಲ್ಲಿ ಉಳಿದಿವೆ. ಇಂಥ ಭಾಷೆಗಳನ್ನು ಹೇಗೆ ಉಳಿಸಿಕೊಳ್ಳುವುದು? ಆ ಭಾಷೆಯನ್ನಾಡುವ ಮನುಷ್ಯನನ್ನು ಮೊದಲು ಉಳಿಸಿಕೊಳ್ಳಬೇಕು. ಈ ಸವಾಲೇ ಇವತ್ತು ಜಗತ್ತಿನ ಎದುರಿಗೆ ಬಂದು ನಿಂತಿದೆ.
ನುಡಿಗಳ ಬಗ್ಗೆ ನಾವು ಪ್ರೀತಿ ತೋರಿಸುವುದು ನಿಜವಾದರೆ, ಕಣ್ಮರೆಯಾಗುತ್ತಿರುವ ಬುಡಕಟ್ಟುಗಳ ಬಗೆಗೂ ನಮ್ಮ ಪ್ರೀತಿ ಹರಿಯಬೇಕಾಗುತ್ತದೆ. ಒಂದನ್ನು ಬಿಟ್ಟು ಮತ್ತೊಂದನ್ನು ಪಡೆಯುವುದು ಸಾಧ್ಯವಾಗದ ಮಾತು. ಆದರೆ ನಮ್ಮ ರಾಜಕೀಯ ವ್ಯವಸ್ಥೆ ಹೇಗಿದೆಯೆಂದರೆ, ಬುಡಕಟ್ಟುಗಳ ಬಗ್ಗೆಗೂ ಮಾತನಾಡುತ್ತ, ನುಡಿಗಳ ಬಗೆಗೂ ಪ್ರೀತಿತೋರುತ್ತ ಯಾವುದನ್ನೂ ಉಳಿಸಿಕೊಳ್ಳಲು ನೆರವಾಗದ ಯೋಜನೆಗಳನ್ನು ರೂಪಿಸುತ್ತದೆ; ವಾಷರ್ಿಕ ಬಜೆಟ್ಗಳಲ್ಲಿ ಹಣವನ್ನು ತೆಗೆದಿಡುತ್ತದೆ. ಈ ಹಣ ಬಳಕೆಯಾಗದೆ ಸಕರ್ಾರಕ್ಕೇ ಹಿಂದಿರುಗಿ ಬಂದಾಗಲೂ ಸಕರ್ಾರ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬುಡಕಟ್ಟುಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಉಳಿಕೆಯಾಗಿ ಹಿಂದಕ್ಕೆ ಬಂದರೆ ಅದು ಸಕರ್ಾರದ ಅದಕ್ಷ ಕಾರ್ಯವಿಧಾನವನ್ನು ತೋರಿಸುತ್ತದೆ. ಈ ಅಂಶ ಕೂಡಾ ಎಷ್ಟೋ ಸಕರ್ಾರಗಳಿಗೆ ತಿಳಿಯುವುದೇ ಇಲ್ಲ.
ಕಳೆದ ಐದು ನೂರು ವರ್ಷಗಳಲ್ಲಿ ಜಗತ್ತಿನ ಅರ್ಧದಷ್ಟು ಭಾಷೆಗಳು ಕಣ್ಮರೆಯಾಗಿವೆ, ಅಂದರೆ ಸತ್ತು ಹೋಗಿವೆ. ಇದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಈಗ ಜಗತ್ತಿನಲ್ಲಿ ಉಳಿದುಕೊಂಡಿರುವ ಸುಮಾರು 7000 ಭಾಷೆಗಳಲ್ಲಿ ಈ ಶತಮಾನದ ಕೊನೆಯ ಹೊತ್ತಿಗೆ ಅರ್ಧದಷ್ಟು ಭಾಷೆಗಳು ಸತ್ತುಹೋಗುತ್ತವೆ. ಪುಟ್ಟ ಪುಟ್ಟ ಸಮುದಾಯಗಳನ್ನು ಕಡೆಗಣಿಸುವುದೆಂದರೆ ಈ ಸಮುದಾಯಗಳು ಆಡುವ ನುಡಿಗಳನ್ನು ಕಡೆಗಣಿಸಿದಂತೆ; ಅವುಗಳನ್ನು ಸಾಯಲು ಬಿಟ್ಟಂತೆ. ರಾಜಕೀಯ, ಧಾಮರ್ಿಕ, ಸಾಮಾಜಿಕ, ಸಾಂಸ್ಕೃತಿ ದಬ್ಬಾಳಿಕೆಗಳು ಭಾಷೆ ನಿಧಾನಕ್ಕೆ ಕಣ್ಮರೆಯಾಗಲು ಕಾರಣವಾಗುತ್ತವೆ. ಈ ದಬ್ಬಾಳಿಕೆಗಳು ಸಣ್ಣಪುಟ್ಟ ಸಮುದಾಯಗಳನ್ನು ನುಂಗಲು ನೋಡುತ್ತವೆ. ಈ ಸಮುದಾಯಗಳು ಅನುಸರಿಸಿಕೊಂಡ ಬಂದ ಧರ್ಮಗಳನ್ನು, ಆಚರಣೆಗಳನ್ನು ಹೊಸಕಿ ಹಾಕುತ್ತವೆ. ಧಮರ್ಾಂತರ, ಮತಾಂತರಗಳಿಗೆ ಅವಕಾಶ ಕಲ್ಪಿಸಿ ಪುಟ್ಟ ಸಮುದಾಯಗಳು ದೊಡ್ಡ ಸಮಾಜದಲ್ಲಿ ಕರಗಿ ಹೋಗಲು ಪ್ರೇರೇಪಿಸುತ್ತವೆ. ಇಂಥ ಸನ್ನಿವೇಶಗಳಲ್ಲಿ ಪುಟ್ಟ ಸಮುದಾಯಗಳು ತಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹೆಣಗುವುದೂ ಉಂಟು. ಅದೂ ಸಾಧ್ಯವಾಗದೆ ಹೋದಾಗ, ಭಾಷೆ, ಸಂಸ್ಕೃತಿಗಳು ಕೊನೆಯುಸಿರು ಎಳೆಯುತ್ತವೆ.
ಜಗತ್ತಿನಲ್ಲಿ 7000 ಭಾಷೆಗಳಿವೆ ಎಂದು ಹೇಳಿದರೂ ಇವುಗಳಲ್ಲಿ ತುಂಬ ಪ್ರಭಾವಿಯಾಗಿ, ಅಧಿಕ ಜನರು ಆಡುವ ನುಡಿಗಳಾಗಿ ಪರಿಗಣಿಸಲ್ಪಟ್ಟಿರುವ ಭಾಷೆಗಳು 20. ಜಗತ್ತಿನ ಅರ್ಧದಷ್ಟು ಜನ ಈ 20 ಭಾಷೆಗಳನ್ನು ಬಳಸುತ್ತಾರೆ. ಹೀಗಾಗಿಯೇ ಇವು ಪ್ರಭಾವೀ ಭಾಷೆಗಳು. ಇನ್ನುಳಿದ ಭಾಷೆಗಳನ್ನು ಉಳಿದರ್ಧಭಾಗ ಆಡುತ್ತದೆ. ಇಂಥ ವಸ್ತುಸ್ಥಿತಿಯಲ್ಲಿ ಸಣ್ಣಪುಟ್ಟ ಸಮುದಾಯಗಳ, ಆದಿಮ ಬುಡಕಟ್ಟುಗಳ ನುಡಿಗಳು ಉಳಿಯುವುದು ಹೇಗೆ, ಉಸಿರಾಡುವುದು ಹೇಗೆ? ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗಲು ಹೊಂಚುಹಾಕಿ ಕುಳಿತಿರುವಂತೆ ಸಣ್ಣ ಸಮುದಾಯದ ಭಾಷೆಗಳನ್ನು ನುಂಗಲು ಪ್ರಭಾವೀ ಭಾಷೆಗಳು ಕಾದುಕುಳಿತಿರುತ್ತವೆ. ಪ್ರತಿಯೊಂದು ನುಡಿಯೂ, ಪ್ರತಿಯೊಂದು ಸಮುದಾಯವೂ ಬದುಕಿ ಉಳಿಯಬೇಕಾದದ್ದು ಬಹಳ ಮುಖ್ಯ. ಇದು ನಮ್ಮ ಸಕರ್ಾರಗಳಿಗೆ ತಿಳಿಯಬೇಕು. ಆಗ ಅವು ರಚಿಸುವ ಬುಡಕಟ್ಟು ಆಯೋಗಗಳಿಗೆ, ಆಯೋಗಗಳ ಶಿಫಾರಸುಗಳಿಗೆ, ಬುಡಕಟ್ಟು ನಿದರ್ೇಶನಾಲಯಗಳಿಗೆ, ಬುಡಕಟ್ಟು ಯೋಜನೆಗಳಿಗೆ, ಬುಡಕಟ್ಟುಗಳಿಗಾಗಿ ಬಜೆಟ್ಟಿನಲ್ಲಿ ಮೀಸಲಿಡುವ ಹಣಕ್ಕೆ ಅರ್ಥ ಬರುತ್ತದೆ. ಇಲ್ಲವಾದರೆ ಇವೆಲ್ಲ ಕಾಗದದ ಮೇಲೆಯೇ ಉಳಿದುಬಿಡುತ್ತವೆ. ಬುಡಕಟ್ಟುಗಳು ಕಾಡಿನಲ್ಲಿಯೇ ಕರಗಿಹೋಗುತ್ತವೆ, ತಮ್ಮ ನುಡಿಗಳೊಂದಿಗೆ, ಆಚರಣೆ, ನಡೆ, ವಿಚಾರ, ನಂಬಿಕೆಗಳೊಂದಿಗೆ.
ನೆಲೆಯಿಲ್ಲದ ಅಲೆಮಾರಿ ಸಮುದಾಯಗಳು, ಕಾಡುಮೇಡುಗಳಲ್ಲಿ ಬದುಕುವ ಆದಿಮ ಬುಡಕಟ್ಟುಗಳು, ಪ್ರಭಾವೀ ಸಮಾಜಗಳ ಕಡೆಗಣ್ಣಿಗೆ ಗುರಿಯಾದ ಜನಾಂಗಗಳು ತಮ್ಮ ಬದುಕನ್ನು ಮತ್ತು ನುಡಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಯಾವಾಗಲೂ ಸೆಣಸಾಡುತ್ತಲೇ ಇರಬೇಕಾಗುತ್ತದೆ. ಕನರ್ಾಟಕದಲ್ಲಿ 54 ಭಾಷೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 10 ಭಾಷೆಗಳು ವಿಪತ್ತಿನಲ್ಲಿವೆ. ಇವುಗಳಲ್ಲಿ ಸಿದ್ದಿ ಮತ್ತು ಹಕ್ಕಿಪಿಕ್ಕರ ಭಾಷೆಗಳಿಗೆ ಬಂದೊದಗಿರುವ ವಿಪತ್ತು ತೀರ ಕಳವಳಕಾರಿಯಾದದ್ದು ಎಂಬುದನ್ನು ಭಾಷಾತಜ್ಞರು ನಡೆಸಿದ ಸಮೀಕ್ಷೆ ಸ್ಪಷ್ಟಪಡಿಸಿದೆ.
ವಿಪತ್ತಿಗೆ ಸಿಕ್ಕಿರುವ ಭಾಷೆಗಳು ಯಾವುವು? ಕೊರಗ, ಬಡಗ, ಯೆರವ, ಇರುಳ, ಸೋಲಿಗ, ಗೌಳಿ, ಜೇನುಕುರುಬ ಮತ್ತು ಬೆಟ್ಟಕುರುಬ, ಸಿದ್ದಿ ಮತ್ತು ಹಕ್ಕಿಪಿಕ್ಕ. ಈ ಸಮುದಾಯಗಳ ಸ್ಥಿತಿ ಕನರ್ಾಟಕದಲ್ಲಿ ಹೇಗಿದೆ ಎಂಬುದು ನಮಗೆ ಗೊತ್ತು. ಈಗಲೂ ನಮ್ಮ ರಾಜಕೀಯ ಈ ಸಮುದಾಯಗಳ ಬಗ್ಗೆ ನಿಜವಾದ ಕಳಕಳಿಯನ್ನು ತೋರಿಸದೆ ಹೋದರೆ ಏನಾಗಬಹುದು? ಅದನ್ನು ವಿವರಿಸಬೇಕಾದ ಅಗತ್ಯವಿಲ್ಲ. ಭೂಮಿಯ ಮೇಲೆ ಮಿಲಿಯಾಂತರ ವರ್ಷಗಳಿಂದ ಉಳಿದುಬಂದಿರುವ ಪ್ರತಿಯೊಬ್ಬ ಮನುಷ್ಯನೂ ಉಳಿಯಬೇಕು. ಅವನ ಚರಿತ್ರೆಯನ್ನು ಹೇಳುವ ನುಡಿಯೂ ಉಳಿಯಬೇಕು. ಅದಕ್ಕಾಗಿ ನಮ್ಮದೂ ಒಂದು ಪುಟ್ಟ ಪ್ರಯತ್ನ ನಡೆಯಬೇಕು.
(8.8.2013ರ ಸಂಯುಕ್ತ ಕನರ್ಾಟಕದಲ್ಲಿ ಪ್ರಕಟವಾಗಿರುವ ಲೇಖನ)
-ಜಿ.ಪಿ.ಬಸವರಾಜು
94800 575890
 

No comments:

Post a Comment