stat Counter



Thursday, July 31, 2014

ಅಕ್ಷತಾ ಹುಂಚದಕಟ್ಟೆ - ಸರ್ಕಸ್ ಹುಡುಗಿ

ಸರ್ಕಸ್ ಹುಡುಗಿ

ರಾತ್ರಿಯಿಡಿ ಕುಣಿದ ಹುಡುಗಿ
ಈಗ ಮಲಗಿದ್ದಾಳೆ
ಯಾರು ಬಂದು ಎಬ್ಬಿಸಿದರೂ
ಏಳಲೊಲ್ಲಳು , ಚೆಲುವೆ
ಕುಂಭಕರ್ಣನ ಸುಖನಿದ್ದೆಯಲ್ಲ
ಒಂದಿಷ್ಟು ಬಿಡುಗಡೆ
ಬದುಕಿನಿಂದ ಬದುಕಿನಾಚೆಯ ಲೋಕಕ್ಕೆ
ಒಮ್ಮೆಗೆ ಜಿಗಿಯುವ ತುಡಿತ
ಉಸಿರಿನ ಮಿಡಿತಕ್ಕಾಗಿಯೇ
ಈ ಎಲ್ಲ ದುಡಿತ

ರಾತ್ರಿಯೆಲ್ಲ ಮಾಡಿ ತೋರಿಸಿದ್ದಾಳೆ
ತರ ತರದ ಚಾಕಚಕ್ಯತೆ
ರಿಂಗ್ ಮಾಸ್ಟರ್ ನ ತಾಳಕ್ಕೆ
ತಕ್ಕಂತೆ ಕುಣಿದು ಗಳಿಸಿದ್ದಾಳೆ
ಪ್ರೇಕ್ಷಕ ಪ್ರಭುವಿನ ಮೆಚ್ಚುಗೆ
ರಾತ್ರಿಯ ಕಲೆಕ್ಷನ್ ಗೇನು
ಖೋತಾ ಇಲ್ಲ ಎಂಬ ನಂಬುಗೆಯಲ್ಲಿ
ಆನೆ , ಸಿಂಹ, ಹುಲಿ, ಕರಡಿ
ಬಾಯಿಗೆ ಕೈಯಿಟ್ಟು , ಹತ್ತಿ ಕೂತು,
ತಿವಿದು ತಾನಿನ್ನೂ ಬದುಕಿದ್ದೇನಲ್ಲ
ಎನ್ನುವ ಅಚ್ಚರಿಯಲ್ಲಿ
ಹುಡುಗಿ ಸರ್ಕಸ್ ಕಂಪನಿಯ
ಮೂಲೆಯಲ್ಲಿ ನಿದ್ದೆ ಹೋಗಿದ್ದಾಳೆ

ಬೆಚ್ಚನೆಯ ಹಾಸಿಗೆಯಿಲ್ಲ
ಮೇಲು ಹೊದಿಕೆಯು ಇಲ್ಲ
ಕೊನೆಗೊಂದು ಚಾಪೆಗೂ ಗತಿಯಿಲ್ಲ !
ಕನಸಿಗೆಲ್ಲಿಯ ಬರ ಹೇಳಿ ?
ಎಬ್ಬಿಸಬೇಡಿ. ಅವಳ ಕಾಡಬೇಡಿ
ಸೂರ್ಯ ಬಾಡುವವರೆಗಾದರೂ
ಮಲಗಲು ಬಿಡಿ
ಆಮೇಲಿದ್ದೆ ಇದೆಯಲ್ಲ
ಅವಳ ಬದುಕ ವ್ಯಾಪಾರ
ಅಲ್ಲಿಯವರೆಗಾದರೂ
ಕನಸ ಬರೆಸಿಕೊಳ್ಳಲು
ಅವಳಿಗೆ ಅನುವು ಮಾಡಿಕೊಡಿ.

ಅಕ್ಷತಾ

{ ಅಕ್ಷತಾ ಅವರ   Face Book   ನಿಂದ }

No comments:

Post a Comment