stat Counter



Saturday, January 3, 2015

ಕೆರೋಡಿ ಗುಂಡೂ ರಾವ್ ಸಮಗ್ರ ನಾಟಕ ಸಂಪುಟ -ಮುರಳೀಧರ ಉಪಾಧ್ಯ ಹಿರಿಯಡಕ

ಉಡುಪಿಯಲ್ಲಿ ’ಕೃಷ್ಣ ಸೂಕ್ತಿ ’{ 1906 } ಮಾಸಪತ್ರಿಕೆಯನ್ನು ಆರಂಭಿಸಿದ ಕೆರೋಡಿ ಸುಬ್ಬರಾಯರು ಹೊಸಗನ್ನಡ ಸಾಹಿತ್ಯದ ಅರುಣೋದಯ ಕಾಲದಲ್ಲಿ ತನ್ನ ವಿಶಿಷ್ಟ  ಸೇವೆ ಸಲ್ಲಿಸಿದವರು . ಅವರನ್ನು ಕುರಿತ ಡಾ / ಹಾ. ತಿ. ಕೃಷ್ಣೇಗೌಡರ ಸಂಶೋಧನ ಗ್ರಂಥ 1989 ರಲ್ಲಿ ಪ್ರಕಟವಾಗಿದೆ. ಕೆರೋಡಿ ಗುಂಡೂ ರಾವ್ {1922 - 2010 ]  ಸುಬ್ಬರಾಯರ ಮೊಮ್ಮಗ . ತಾಂಬರಮ್ ನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ. ಎಸ್ಸಿ ಪದವಿ ಪಡೆದ ಗುಂಡೂ ರಾವ್ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲು , ಸೈಂಟ್ ಸಿಸಿಲೀಸ್ ಕಾನ್ವೆಂಟ್ , ಹೈದರಾಬಾದಿನ ಲಿಟ್ಲ್ ಫ಼್ಲವರ್ ಹೈಸ್ಕೂಲುಗಳಲ್ಲಿ ಅಧ್ಯಾಪಕರಾಗಿ , ವೆಲ್ಲೂರಿನಲ್ಲಿ ಮೀನುಗಾರಿಕಾ ಅಧಿಕಾರಿಯಾಗಿದ್ದರು .1963-1982 ರಲ್ಲಿ ಅವರು ಹೈದರಾಬಾದಿನ ನ್ಯೂ ಸೈನ್ಸ್ ಕಾಲೇಜಿನಲ್ಲಿ ರಸಾಯನ  ಶಾಸ್ತ್ರ  ಪ್ರಾಧ್ಯಾಪಕರಾಗಿದ್ದರು . ಯುವಕ ಗುಂಡೂ ರಾವ್ ಬರೆದ ’ ದೀಪಾವಳಿ ಅಥವಾ ನರಕಾಸುರ ವಧೆ ’ ಯನ್ನು ಉಡುಪಿಯ ಲಕ್ಷ್ಮೀ ನರಸಿಂಹ ಕರ್ನಾಟಕ               ಅಮೆಚೂರ್  ನಾಟಕ ಮಂಡಳಿ , ಮದ್ರಾಸ್ ಗವರ್ನರ್ ಅವರ ಯುದ್ದ ನಿಧಿಯ ಸಹಾಯಾರ್ಥವಾಗಿ 1942 ರಲ್ಲಿ  ಉಡುಪಿಯಲ್ಲಿ ಪ್ರದರ್ಶಿಸಿ ರೂ 500  ಸಂಗ್ರಹಿಸಿತು. ಹೈದರಾಬಾದ್ ನ ಕನ್ನಡ ನಾಟ್ಯ ರಂಗ ಕೆರೋಡಿ ಗುಂಡೂ ರಾಯರ ನಿರ್ದೇಶನದಲ್ಲಿ 1968-2010 ರ ಅವಧಿಯಲ್ಲಿ 41  ವಿವಿಧ ಕನ್ನಡ ನಾಟಕಗಳನ್ನು ಪ್ರದರ್ಶಿಸಿದೆ .
  ಕೆರೋಡಿ ಗುಂಡೂ ರಾಯರ ’ ದೀಪಾವಳಿ ಮತ್ತು ಇತರ ನಾಟಕಗಳು ’ ಗ್ರಂಥದಲ್ಲಿ ಒಂಬತ್ತು ನಾಟಕಗಳಿವೆ.ಕೆರೋಡಿಯವರ’ ಧನ ಪ್ರಭಾವ ’ [ 1940 ]  ಪುರುಷಾರ್ಥಗಳಲ್ಲಿ ಅರ್ಥವೇ ಮುಖ್ಯವಾಗುವ ಮೌಲ್ಯ ಪಲ್ಲಟವನ್ನು ಚಿತ್ರಿಸುತ್ತದೆ. ಪ್ರಗತಿ ಶೀಲ ಚಳುವಳಿಯ ಕಾಲದ ’ ಪವಿತ್ರ ಪ್ರೇಮ ’ [1941 ]  ಭಗವಾನಂದ ಪರಮಹಂಸ ಎಂಬ ಸಂನ್ಯಾಸಿಯ ಅನಾಚಾರಗಳನ್ನು ಅನಾವರಣಗೊಳಿಸುತ್ತದೆ.. ದ್ವಾರಕಾನಗರ ಮತ್ತು ಪ್ರಾಗ್ಜೋತಿಷ ನಗರಗಳು ಕ್ರಿಯಾ ಕೇಂದ್ರಗಳಾಗಿರುವ ’ ದೀಪಾವಳಿ ’ ಯಲ್ಲಿ ಕೃಷ್ಣ , ನರಕಾಸುರ , ಭಗದತ್ತ ಮುಖ್ಯ ಪಾತ್ರಗಳು .’ ಸ್ವರಾಜ್ಯ ನಿಷ್ಠೆ ಅಥವಾ ಪ್ರತೀಕಾರ ’ ರಾಜಸ್ಥಾನದ ಹಿನ್ನೆಲೆಯಿರುವ ಐತಿಹಾಸಿಕ ನಾಟಕ.  ವಜ್ರಾಯುಧ ’  ಅಥವಾ      ವೃತ್ರ ವಧೆ  ’    ಪೌರಾಣಿಕ ನಾಟಕ. ಬೆಂಗಳೂರು ಮತ್ತು ಪಾಂಡಿಚೇರಿ ಕ್ರಿಯಾ ಕೇಂದ್ರಗಳಾಗಿರುವ ’ ವಿಚಿತ್ರ ಸಮಾಜ ಅಥವಾ ಮನೆ ಅಳಿಯ ’ {1970] ಸಾಮಾಜಿಕ ನಾಟಕ.  ’ ಮೈಸೂರು ಮಲ್ಲಿ ’   ಬರ್ನಾಡ್  ಷಾ ನ ’ ಪಿಗ್ಮೇಲಿಯನ್ ’ ನಾಟಕದ ರೂಪಾಂತರ. ’ ಹೊಯ್ಸಳ  ವೀರ ಎರೆಯಂಗ ’ [1970 ]  ನಾಟಕದಲ್ಲಿ ವಿಷ್ಣುವರ್ಧನನ ಪಟ್ಟದ ರಾಣಿ  ಶಾಂತಲೆಯ ಪಾತ್ರ ಗಮನ ಸೆಳೆಯುತ್ತದೆ .
            ಎಂಟನೆಯ ಶತಮಾನದ ರಾಷ್ತ್ರಕೂಟ ದೊರೆ ದಂತಿದುರ್ಗನ ಜೀವನವನ್ನು ಕುರಿತ’ ವಿಷಕನ್ಯಾ   ’ ಕೆರೋಡಿ ಗುಂಡೂರಾಯರ ಮುಖ್ಯ ಕೄತಿ.ಇದು ಬಿ. ಪುಟ್ಟಸ್ವಾಮಯ್ಯನವರ ’ ನೆನಹಾಗಿ ಕಾಡಿತ್ತು ಮಾಯೆ ’    ಎಂಬ ಸಣ್ಣ ಕತೆಯನ್ನು ಆಧರಿಸಿದ ನಾಟಕ. ಶೂದ್ರ ಶಬರ ರಾಜ ಜಯವರ್ಧನ ಅಶ್ವಮೇಧ ಯಾಗ ಮಾಡಿದ್ದನ್ನು  ದಂತಿದುರ್ಗ ಸಹಿಸುವುದಿಲ್ಲ . ವಿಶಾಖದತ್ತನ ’ ಮುದ್ರಾ ರಾಕ್ಷ್ನಸ    ’ ನಾಟಕದಂತೆ ಈ ನಾಟಕದಲ್ಲೂ ರಾಜಕೀಯದ ಕುಟಿಲ ತಂತ್ರಗಳಿವೆ. ಶಬರರಾಜನ ಮಗಳು  ನಯನ ಮಂಜರಿ   ವಿಷಕನ್ಯೆಯಾಗಿ ಬಂದು ದಂತಿ ದುರ್ಗನ  ಮೇಲೆ ಸೇಡು ತೀರಿಸುತ್ತಾಳೆ.
    ಕಂಪೆನಿ ನಾಟಕಗಳ ಮೋಡಿಗೆ ಮರುಳಾದ ಹವ್ಯಾಸಿ ರಂಗಭೂಮಿ ಕನ್ನಡ ನಾಟಕ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸಮೀಕ್ಷಿಸುವಾಗ ಕೆರೋಡಿ ಗುಂಡೂ ರಾಯರ ಕೊಡುಗೆಯನ್ನು ಅಲಕ್ಷಿಸುವಂತಿಲ್ಲ. ಹೈದರಾಬಾದಿನಲ್ಲಿ ಕನ್ನಡ ರಂಗಭೂಮಿಯನ್ನು ಆರಾಧಿಸಿದ ಕೆರೋಡಿಯವರ ಸಮಗ್ರ ನಾಟಕ ಸಂಪುಟವನ್ನು ಅವರ ಮಗ - ಸೊಸೆ ಸುಮತಿ ನಿರಂಜನ್ ಅಚ್ಚುಕಟ್ಟಾಗಿ ಶ್ರದ್ದೆಯಿಂದ ಸಂಪಾದಿಸಿದ್ದಾರೆ.
 ದೀಪಾವಳಿ ಮತ್ತು ಇತರ ನಾಟಕಗಳು
    - ಕೆರೋಡಿ ಗುಂಡೂ ರಾವ್
ಸಂ- ಕೆರೋಡಿ ನಿರಂಜನ ರಾವ್ / ಕೆರೋಡಿ ಸುಮತಿ ನಿರಂಜನ್
 ಪ್ರ- ಗೋವಿಂದ ಪೈ ಸಂಶೊಧನ ಕೇಂದ್ರ
 ಉಡುಪಿ- 576102
 2014         ಬೆಲೆ ರೂ. 540    

No comments:

Post a Comment