stat Counter



Thursday, February 5, 2015

ರೂಪಾ ಹಾಸನ - ಎಲ್ಲಾ ಮೂರೇ ದಿನಕ್ಕಾಗಿ { ಕವನ ]

ಎಲ್ಲಾ ಮೂರೇ ದಿನಕ್ಕಾಗಿ

ಕುಣಿ ಕುಣಿ ಕುಣಿ ಅಬ್ಬೆಯೇ 
ಬೆರ್ಚಮ್ಮ ಕನ್ನಡಬ್ಬೆಯೇ 
ಕುಣಿಸಲಿಕ್ಕೆಂದೇ ನಾವಿದ್ದೇವೆ
ನೀನು ಸುಮ್ಮನೆ ಕುಣಿ

ನೋಡು, ನಿನ್ನ ಕುಣಿತಕ್ಕಾಗಿಯೇ
ಬಟಾ ಬಯಲೂ
ತಳಿರು ತೋರಣ ಬಣ್ಣ ಧರಿಸಿ
ಝಗಮಗ ಉತ್ಸವಕ್ಕೆ ಸಜ್ಜಾಗಿದೆ.
ಊರಿಗೂರೇ ಸಿಂಗಾರಗೊಂಡು
ಕಣ್ಕಟ್ಟಿಸಿ ಮೆರೆಯುತ್ತಿದೆ.
ಕೋಟಿಕೋಟಿ ಹೂಗಳು
ನಿನ್ನ ಹೆಸರ ತೇರಿನಲಿ
ಪಾದತಳಕ್ಕೆ ಬಿದ್ದು ಹೊರಳಾಡುತ್ತಿವೆ
ಒಪ್ಪಿಸಿಕೊಳ್ಳೇ ತಾಯೇ
ಆಪೋಷಿಸಿ ನುಂಗಿ ನೊಣೆದು
ಕುಣಿ ಕುಣಿ ಕುಣಿಯೆ
ಬೆಂತರದವ್ವೆ ಕುಣಿ.

ನೋಡಿಲ್ಲಿ ನಮ್ಮ ಪಾದ ಬುಡದಲ್ಲಿ
ನಿನ್ನ ಮತ್ತ ಕುಣಿತ
ನಮ್ಮ ಅಂಗೈ ಬುಗುರಿಯಾಗಿ
ಉನ್ಮತ್ತ ಕುಣಿತ
ನಮ್ಮ ಸಿರಿಕಂಠದಲ್ಲಿ
ನಿನ್ನ ಮೆರೆಸಾಡುವ ಕುಣಿತ
ನಮ್ಮ ತಲೆಯ ಮೇಲೆ ನಿನ್ನ
ಹೊತ್ತಾಡುವ ಕುಣಿತ
ಇನ್ನೇನು ಬೇಕೆ ನನ್ನವ್ವೆ!
ಸುಮ್ಮನೆ ನೀ ಕುಣಿ ಕುಣಿ ಕುಣಿ

ಸಜ್ಜಾಗಿದೆ ನಾಟ್ಯ ವೇದಿಕೆ                                                                                                              
ನಿನ್ನ ಮೈಮರೆವಿನ ಕುಣಿತಕ್ಕೆ
ನಾಲಿಗೆಗಳು ಮಂಡಿಯೂರಿವೆ
ಭೋಪರಾಕಿಗೆ 
ವೈಭೋಗಕ್ಕೆ ಹೇಸಿ 
ವೈರಾಗ್ಯವಪ್ಪಿದ ಸಿರಿ 
ಮೂಕವಾಗಿದೆ ಕುಣಿತಕ್ಕೆ ಮೆರೆತಕ್ಕೆ
ಜನಮರುಳೋ ಜಾತ್ರೆಮರುಳೋ
ಮಂಕುಬೂದಿ ಅಬ್ಬರಕ್ಕೆ.
ಇಕೋ ತಗೋ ಎಲ್ಲವೂ
ನಿನಗೇ ಅರ್ಪಿತ ಜೀಯೆ
ನೀನು ಕುಣಿಯೆ ತಾಯೇ.
 
ತಾಯಿ ಭೂತವೇ ಕುಣಿ
ಅಬ್ಬರಿಸಿ ಕುಣಿ
ಬೀದಿಯನ್ನೇ ಹೊದ್ದು ಕುಣಿ
ಥಳುಕನ್ನೇ ಮೆದ್ದು ಕುಣಿ
ನಾವು ಕುಣಿಸುತ್ತೇವೆ
ನೀನು ಸುಮ್ಮನೆ ಕುಣಿ

ಅಲ್ಲಿ ಒಳಮನೆಯಲ್ಲಿ
ತಾಯಿಜೀವ ಶರಶಯ್ಯೆಯಲಿ
ವಿಲವಿಲನೊದ್ದಾಡುತ್ತಿರುವ ಸಂಕಟಕ್ಕೆ
ನಿನ್ನ ಚಿಣಿಮಿಣಿ ಚಿತ್ತಾರದ 
ಪತ್ತಲವನ್ನಡ್ಡಗಟ್ಟಿ ಮರುಳು ಮಾಡಿ
ಕುಣಿ ಕುಣಿ ಕುಣಿ
ಉತ್ಸವಮೂರ್ತಿಯೇ ಕುಣಿ

ವೇಷಕ್ಕುಳಿದವಳೇ 
ಬರೀ ಭೂಷಣಕ್ಕಾದವಳೇ
ಮೂರು ದಿನದುತ್ಸವದಬ್ಬರ
ಮುಗಿದ ಮೇಲೆ
ಮಾಮೂಲಿನಂತೆ
ಮುದುರಿ ಮೂಲೆ ಹಿಡಿ!  




No comments:

Post a Comment