Tuesday, November 22, 2016

ಬಿಲ್ಹಣನ ’ವಿಕ್ರಮಾಂಕ ದೇವ ಚರಿತಂ - ಮುರಳೀಧರ ಉಪಾಧ್ಯ ಹಿರಿಯಡಕ

 ಬಿಲ್ಹಣ ಹನ್ನೊಂದನೆಯ ಶತಮಾನದಲ್ಲಿ ಕಾಶ್ಮೀರದಿಂದ ಕರ್ನಾಟಕಕ್ಕೆ ಬಂದು, ಕಲ್ಯಾಣದ ಚಾಲುಕ್ಯ ರ ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಸಂಸ್ಕೃತ ಕವಿ. ಅವನು ’ವಿಕ್ರಮಾಂಕದೇವ ಚರಿತೆ’ ಯಲ್ಲಿ ತನ್ನ ಆಶ್ರಯದಾತನಾಗಿದ್ದ ವಿಕ್ರಮಾದಿತ್ಯನ (೧೦೭೬-೧೧೨೭)ಚರಿತ್ರೆ ಯನ್ನು ವೈಭವೀಕರಿಸಿ ವರ್ಣಿಸಿದ್ದಾನೆ.
 ಕ್ರಿ.ಶ. ೯೯೩ರಲ್ಲಿ ಎರಡನೆಯ ತೈಲನು ರಾಷ್ಟ್ರಕೂಟ ಸಾಮ್ರಾಜ್ಯವನ್ನು ವಶಪಡಿಸಿ ಕೊಂಡಾಗ ಚಾಲುಕ್ಯರ ಆಳ್ವಿಕೆ ಆರಂಭವಾಯಿತು. ವಿಕ್ರಮಾದಿತ್ಯನಿಗಿಂತ ಮೊದಲು ಚಾಲುಕ್ಯ ರಾಜ್ಯವನ್ನು ಆಳಿದ ತೈಲ, ಸತ್ಯಾಶ್ರಯ, ಎರಡನೆಯ ಜಯಸಿಂಹ, ಒಂದನೆಯ ಸೋಮೇಶ್ವರ, ಎರಡನೆಯ ಸೋಮೇಶ್ವರ ಇವರ ಆಡಳಿತ ಕಾಲದ ಮುಖ್ಯ ಘಟನೆಗಳನ್ನು ಬಿಲ್ಹಣ ತನ್ನ  ಕಾವ್ಯದಲ್ಲಿ ವರ್ಣೆಸಿದ್ದಾನೆ. ಬಿಲ್ಹಣನ ಪ್ರಕಾರ, ಒಂದನೆಯ ಸೋಮೇಶ್ವರ (೧೦೪೪-೧೦೬೮) ಭಯಾನಕ ರೋಗವೊಂದರಿಂದ ನರಳಿ, ತುಂಗಭದ್ರೆಯಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿದನು. ಚಾಲುಕ್ಯರಿಗೂ, ಚೋಳರಿಗೂ ನಡೆದ ಹಲವು ಯುದ್ಧಗಳನ್ನು ಬಿಲ್ಹಣ ವರ್ಣಿಸಿದ್ದಾನೆ. ಕರಾಡಾದ ರಾಜಕುಮಾರಿ ಚಂದ್ರಲೇಖೆ ಹಾಗೂ ವಿಕ್ರಮಾದಿತ್ಯನ ಮದುವೆಯ ಪ್ರಸಂಗದಲ್ಲಿ ಬಿಲ್ಹಣನ ವರ್ಣನಾಚಾತುರ್ಯ, ರಸಿಕತೆಗಳು ಕಾಣಿಸುತ್ತವೆ
ಕಲ್ಹಣನಂತೆ ಇತಿಹಾಸದ ಅಪ್ರಿಯ ಸತ್ಯಗಳನ್ನು , ಜನಸಾಮಾನ್ಯರ   ಗೋಳಿನ ಕತೆಯನ್ನು ದಾಖಲು ಮಾಡುವುದರಲ್ಲಿ ಬಿಲ್ಹಣನಿಗೆ ಆಸಕ್ತಿ ಇಲ್ಲ. ಚಾಲುಕ್ಯ ರಾಜವಂಶದ ಕಾಳಗ-ಕಲ್ಯಾಣಗಳೇ ಅವನ ಕಾವ್ಯದ ವಸ್ತು. ಬಿಲ್ಹಣನ ’ವಿಕ್ರಮಾಂಕ ದೇವ ಚರಿತ’ ಪ್ರಥಮ ದರ್ಜೆಯ ಕಾವ್ಯವೇನೂ ಅಲ್ಲ. ಅವನ ಕಾವ್ಯ ಕರ್ನಾಟಕ-ತಮಿಳುನಾಡುಗಳ ಇತಿಹಾಸ ರಚನೆಗೆ ಬೇಕಾದ ಕೆಲವು ಐತಿಹಾಸಿಕ ಘಟನೆಗಳನ್ನು ದಾಖಲಿಸುತ್ತದೆ.
ನೀರ್ಪಾಜೆ ಭೀಮ ಭಟ್ಟರು ಕಲ್ಹಣನ ’ರಾಜ ತರಂಗಿಣೆ’ಯ ಕನ್ನಡ ಭಾಷಾಂತರ ಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಪಡೆದಿರುವ ಹಿರಿಯ ವಿದ್ವಾಂಸರು. ಬಿಲ್ಹಣನ’ ವಿಕ್ರಮಾಂಕದೇವ ಚರಿತಂ’ನ ಕನ್ನಡ ಗದ್ಯಾನುವಾದವನ್ನು ನೀರ್ಪಾಜೆಯವರು ಈ ಗ್ರಂಥದಲ್ಲಿ ನೀಡಿದ್ದಾರೆ. ಕರ್ನಾಟಕ ಅ ಇತಿಹಾಸದ ಆಕರ ಗ್ರಂಥವೊಂದನ್ನು ಭಾಷಾಂತರಿಸಿರುವ ಲೇಖಕರು ಅಭಿನಂದನಾರ್ಹರು.

ಮಹಾಕವಿ ಬಿಲ್ಹಣನ
’ವಿಕ್ರಮಾಂಕ ದೇವ ಚರಿತಂ’
ಕನ್ನಡ ಗದ್ಯಾನುವಾದ: ನೀರ್ಪಾಜೆ ಭೀಮಭಟ್ಟ
ಪ್ರ: ಅಭ್ಯುದಯ ಪ್ರಕಾಶಾನ, ಕನ್ಯಾನ
ಮೊದಲ ಮುದ್ರಣ:೧೯೯೮ ಬೆಲೆ:ರೂ.೧೦೦.೦೦
ಮುರಳೀಧರ   ಉಪಾಧ್ಯ ಹಿರಿಯಡಕ

Kannada Classical Poetry Text VIKRAMANKADEVACHARITAM by Bilhana , Kannada Prose translation by  Neerpaje Bhima Bhat - Book Review by Muraleedhara Upadhya HiriadkaNo comments:

Post a Comment