stat CounterSunday, December 25, 2016

ಜನ ನುಡಿ -2016 - - ಕವಿ ಗೋಷ್ಠಿ ವರದಿ - ಅಭಿಮತ ಮಂಗಳೂರು

ಕವಿಗೋಷ್ಠಿ ವರದಿ
“ಇಲ್ಲಿ ಬಣ್ಣಗಳೆಲ್ಲವ ಗುತ್ತಿಗೆ ಹಿಡಿದಿದ್ದಾರೆ,
ಮತ್ತೆ ತಮ್ಮ ತಮ್ಮ ಬಾವುಟಗಳಿಗೆ ಮೆತ್ತಿಕೊಂಡಿದ್ದಾರೆ,
ಸತ್ತ ಪ್ರಾಣಿಯೂ ಈಗ ದೈವವಾಗಿದೆ,
ಹೊಟ್ಟೆಗಿಲ್ಲದೇ ಜನ ಸತ್ತರೂ ದನ ಸಾಯಕೂಡದು,
ದನ ಸತ್ತರೂ ಜನ ತಿನ್ನಕೂಡದು”
ಮಂಗಳೂರು ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ಅಭಿಮತ ಆಯೋಜಿಸಿರುವ ಜನನುಡಿ-2016 ಸಮಾವೇಶದ ಎರಡನೇ ದಿನವಾದ ಭಾನುವಾರ ಕವಿಗೋಷ್ಠಿಯಲ್ಲಿ ಸಚಿನ್ ಅಂಕೋಲ ಅವರು ಹಿಂದೆ ಮತ್ತು ಮುಂದೆ ಎಂಬ ಶೀರ್ಷಿಕೆಯ ಈ ಕವನ ವಾಚಿಸಿದಾಗ ಚಪ್ಪಾಳೆಯ ಸುರಿಮಳೆಯಾಗಿತ್ತು.
ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಕವಿಗಳು ವರ್ತಮಾನದ ಸ್ಥಿತಿಗತಿಗಳನ್ನೇ ವಿಶ್ಲೇಷಿಸಿದ್ದು ವಿಶೇಷ.
ವಾಸುದೇವ ನಾಡಿಗ್ ಅವರು “ಕವಿತೆಯೊಂದರ ಮರಣೋತ್ತರ ಪರೀಕ್ಷೆ” ಕವನವನ್ನು ಮುಗಿಸುವಾಗ “ಇನ್ನು ಬರೆಯಲಾಗುತ್ತಿಲ್ಲ, ಸೋತ ಕವಿತೆಯೊಂದರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ” ಎನ್ನುತ್ತಾ ಕವಿತೆ ಬರೆಯಲಾಗದ, ಗೆದ್ದ ಕವಿತೆಗಳ ಪೊಳ್ಳುತನಗಳನ್ನು ವಿಶ್ಲೇಷಿಸಿದರು. “ಕತ್ತರಿಸಿಟ್ಟ ಮರದ ಬೊಡ್ಡೆಯ ಮೇಲೆ ನಾಳಿನ ಭವಿಷ್ಯ ಬರೆಯಲು ನೂಕುನುಗ್ಗಲು” ಎಂದರು.
ರಮೇಶ್ ಅರೋಲಿ ಅವರು ತಮ್ಮ ಕವನವನ್ನು ಹಾಡುತ್ತಾ “ಮೇಕೆಗೆ ಮೇವಿಲ್ಲ, ಮೇಕಿಂಗ್ ಇಂಡಿಯಾ” ಎಂದು ರಾಜಕೀಯ ವಿಡಂಬನಾತ್ಮಕ ಸ್ಥಿತಿಯನ್ನು ಹೇಳಿದರು.
ಹೇಮಲತಾ ಮೂರ್ತಿ ಅವರು “ಅಂತರಂಗದ ಅಳಲಿಗೆ ಕಣ್ಣು ಕಿವಿ ಮುಚ್ಚಿ ಕುಳಿತ” ಸ್ಥಿತಿಯನ್ನು ಬಿಂಬಿಸಿದರು.
ಪ್ರದೀಪ್ ಮಾಲ್ಗುಡಿ ಅವರು “ಮಾದ್ಯಮ ಉದ್ಯಮ” ಕವಿತೆಯಲ್ಲಿ ಮಾದ್ಯಮ ಕ್ಷೇತ್ರದ ಕೆಲವರ ನೈತಿಕತೆಯನ್ನು ಪ್ರಶ್ನಿಸುವಂತೆ “ಕೊಟ್ಟದ್ದು ಯಾರೋ, ಆದರೆ ಪಡೆದಿದ್ದು ನಾನೇ, ಈಗ ಕೈಸೋತು ಬರೆಯಲಾಗುತ್ತಿಲ್ಲ” ಎಂದರು.
ಯಂಶ ಬೆಂಗಿಲ ಅವರು “ಅಪ್ಪ ಮತ್ತು ವಾಸು” ಎಂಬ ಕವನದಲ್ಲಿ ಸಮಾಜದಲ್ಲಿನ ತಾರತಮ್ಯ-ಧ್ವೇಷವನ್ನು ತೆರೆದಿಡುತ್ತಾ ಕರಾವಳಿ ಸಾಗುತ್ತಿರುವ ದಿಕ್ಕಿನತ್ತ ಬೆಳಕು ಚೆಲ್ಲಿದರು.
ಡಾ. ಕಾವ್ಯಶ್ರೀ ಎಚ್. ಅವರು “ಕ್ಷಮಿಸಿಬಿಡು ವೇಮುಲ ಸಹಿಸುವುದನ್ನು ಕಲಿಯುತ್ತಾ ಕಲಿಯುತ್ತಾ ನಾನು ಅಸಹನೆಯನ್ನು ಅಡವಿಟ್ಟಿದ್ದೇನೆ, ಬೀದಿಗಿಳಿಯಲಾರೆ” ಎಂದರು.
ವೀರಪ್ಪ ತಾಳದವರ್ ಅವರು, “ತಲೆ ಚಿಟ್....ಹಿಡಿದದ” ಕವನ ವಾಚಿಸುತ್ತಾ, “ನನಗಿಗ ತಲಿ ಚಿಟ್ ಹಿಡಿದದ! ದಿನಕ್ಕೊಂದು ಕಾಯ್ದೆ ಜಾರಿ ಕಂಡು ದೇಶ ಆಳೋರ್ದ ನೀತಿ ಕಂಡು ತಲಿ ಕೆಟ್ಟಂಗ ಆಗೆದ ನನಗಿಗ ನೋಡಿ ಎತ್ಲಾಗರ ಓಡಿ ಹೋಗುವಂಗ ಆಗೆದ” ಎನ್ನುತ್ತಾ ಪ್ರಸ್ತುತ ಭಾರತದ ಪರಿಸ್ಥಿತಿ ತೆರೆದಿಟ್ಟರು.
ಡಾ. ಅರುಂಧತಿ ಅವರು “ಅಂಬೇಡ್ಕರ್” ಕವನವನ್ನು ಮಗುವಿನ ಕಣ್ಣುಗಳಲ್ಲಿ ನೋಡುತ್ತಾ, “ಅಮ್ಮಾ ಅಲ್ಲಿ ಅಂಬೇಡ್ಕರ್ ಅನ್ನೋ ತಿಂಡಿ ಕೊಡ್ತಾರಾ” ಎಂದಾಗ ತಾಯಿಯು “ತಿಂಡಿಯಲ್ಲ ಮಗಳೇ, ಮುಟ್ಟಲಾಗದ ಅಕ್ಷರಗಳ ದಕ್ಕಿಸಿಕೊಟ್ಟ ಸಂಜೀವಿನಿ”ಯನ್ನ ಎಂದು ಮಾರ್ಮಿಕವಾಗಿ ಉತ್ತರಿಸಿದ್ದನ್ನು ವಾಚಿಸಿದರು.
ದೀಪಾ ಗಿರೀಶ್ ಅವರು, “ಅವರು ನಿಮ್ಮನ್ನು ಒದ್ದ ಕಾಲಿಗೆ ಹುಟ್ಟಿದ ಕೂಸು ನಾನು” ಎಂದು ಅಂಬೇಡ್ಕರ್ ಅವರನ್ನು ಸ್ಮರಿಸಿದರು.
ಚಾಂದಿನಿ ಅವರು ನಾನು ಅವಳಾಗಲು ಹೋದಾಗ ಆದ ಅನುಭವಗಳನ್ನು ಹಂಚಿಕೊಂಡರು.
ಸೈಫ್ ಜಾನ್ಸೆ ಕೊಟ್ಟೂರು, “ಕಡಲ ಚೂರುಗಳು ಜೋಳಿಗೆಗೆ ತುಂಬಿ ಊರ ಹಬ್ಬಿದ್ದು, ನೀರಡಿಸಿದೆ ಕರಾವಳಿಗೆ” ಎಂದರು.
ವಿಪ್ಲವಿ ರಾಯಚೂರು ಅವರು “ಸ್ತ್ರೀಸಂಭೂತೆ” ಕವನ ವಾಚಿಸುತ್ತಾ “ನಿರುತ್ತರಳಾಗಿದ್ದೇನೆ ಅನೈತಿಕತೆಯ ಮಾರಣಹೋಮದಲ್ಲಿ” ಎಂದರು.
ಚೀಮನಹಳ್ಳಿ ರಮೇಶ್ ಬಾಬು ಅವರು, “ಅಪ್ಪನ ಹಣೆಯ ಕಿಂಡಿ”, ಕಾವ್ಯಶ್ರೀ ಎಚ್. ನಾಯ್ಕ್ ಅವರು, “ನಿನ್ನ ಮೌನದ ಮಹಾಮನೆ” ಎಂಬ ಕವನ ವಾಚಿಸಿದರು. ಮಂಜುಳಾ ಹುಲಿಕುಂಟೆ ಅವರು, “ಯುದ್ಧದ ಬಗ್ಗೆ ನನಗೆ ಮೋಹವಿಲ್ಲ” ಎನ್ನುತ್ತಾ ಅದರ ಭಯಾನಕತೆಯನ್ನು ತೆರೆದಿಟ್ಟರು. ರಮೇಶ್ ಹಿರೇಜಂಬೂರು ಅವರು, “ಕೋವಿಯೊಳಗಿನ ಸತ್ಯ”, ಅಸಂಗಿ ಗಿರಿಯಪ್ಪ ಅವರು, “ಹೆಜ್ಜೆ ಮೂಡಿಸಿದ ಸದ್ದು” ಕವನ ವಾಚಿಸಿದರು. ಗುರು ಸುಳ್ಯ, ದುರ್ಗೇಶ್ ಪೂಜಾರಿ, ರೂಪಶ್ರೀ ಕಲ್ಲಿಗನೂರು, ಚಾಂದ್ ಬಾಷಾ ಅವರೂ ಸಹ ಕವನ ವಾಚಿಸಿದರು.
***
ಅಭಿವೃದ್ಧಿ ಎಂಬುದು ಪೋಷಾಕು- ಮೂಡ್ನಾಕೂಡು ಚಿನ್ನಸ್ವಾಮಿ
ಅಭಿವೃದ್ಧಿ ಎಂಬುದು ಒಂದು ಪೋಷಾಕು ಆಗಿದೆ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂಸ್ಕೖತಿಕ ಯಜಮಾನಿಕೆಯನ್ನು ಮರುಸ್ಥಾಪಿಸುವ ಪ್ರಯತ್ನಗಳು ಅವರಿಂದ (ಸಂಘ ಪರಿವಾರ) ನಡೆಯುತ್ತಿದೆ ಎಂದು ವಿಶ್ಲೇಷಿಸಿದರು.
ಇಂದು ಪ್ರಜಾಪ್ರಭುತ್ವ ಅನೀಮಿಕ್ ಆಗಿದೆ. ಶಕ್ತಿ ಸಂಚಾರ ಕಡಿಮೆ ಆಗಿದೆ. ಯಾವಾಗ ಕೋಮಾಕ್ಕೆ ಹೋಗುತ್ತದೆಯೋ ಗೊತ್ತಿಲ್ಲ ಎನ್ನುತ್ತಾ ಪ್ರಸ್ತುತ ಪರಿಸ್ಥಿತಿಯನ್ನು ಬಿಡಿಸಿಟ್ಟರು.
ಜಾತಿ ಎನ್ನುವುದು ಒಂದು ಕ್ಯಾನ್ಸರ್. ಜಾತಿ ವಿನಾಶ ಆಗದೇ ನಮ್ಮ ದೇಶ ಅಭಿವೖದ್ಧಿ ಆಗದು ಎಂದರು. ನಂತರ ಅವರು ತಮ್ಮ ಎರಡು ಕವನಗಳನ್ನು ವಾಚಿಸಿದರು.
ಹನುಮಂತಪ್ಪ ದುರ್ಗದ್ ಅವರು ಗೋಷ್ಠಿ ನಿರ್ವಹಿಸಿದರು.
Like
Comment

No comments:

Post a Comment