stat CounterMonday, March 27, 2017

ರಾಮಪ್ರಸಾದ್ ಕಾಂಚೋಡು - ಉಡುಪಿಯಲ್ಲಿ ಸಾಹಿತ್ಯಲಹರಿ ವಾಟ್ಸಪ್ ಬಳಗದ ಸಾಹಿತ್ಯ ಸಮ್ಮಿಲನ

ಇವತ್ತು ಬೆಳಗ್ಗೆ ಸಾಹಿತ್ಯ ಸಮ್ಮಿಲನ ಹತ್ತುಗಂಟೆಗೆ ಸರಿಯಾಗಿ ಪ್ರಾರಂಭಗೊಳ್ಳಬೇಕಾಗಿತ್ತು. ಆದರೆ ನಾನು ಬರುವುದು ೧೦.೦೫ ಆದ ಪರಿಣಾಮ ಕಾರ್ಯಕ್ರಮ ಶುರುವಾಗುವುದು ವಿಳಂಬವಾಯಿತು.

ಸಂತೆಯ ಹೊತ್ತಿಗೆ ಮೂರುಮೊಳ ನೇಯ್ದಂತೆ ನನ್ನ ಪಾಡಾಯಿತು.
ಹಾಡಬೇಕಾದ ಗೀತೆಗಳ ಆಯ್ಕೆ ಅಖೈರಾಗಿರಲಿಲ್ಲ.
ನನಗೆ ವೇದಿಕೆಯ ಗಾಯನದಲ್ಲಿ ಹೇಳಿಕೊಳ್ಳುವ ಸಿದ್ಧಿ ಇಲ್ಲದಿರುವುದರಿಂದ ಕೊಂಚ ತಬ್ಲಾ ಕಲಾವಿದರ ಮನೆಯಲ್ಲಿ  ಅಭ್ಯಾಸ ಮಾಡಬೇಕಾಯಿತು. ಇದು ಒಟ್ಟುಕಾರ್ಯಕ್ರಮದ ಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು ನನಗೇ ತಿಳಿದಿರುವ ಕಾರಣ ಈ ಪ್ರಮಾದಕ್ಕೆ ಕ್ಷಮೆಯಾಚಿಸುತ್ತೇನೆ.

*ಜೀವಯಾನ*ದ ಕವಿ ಮಂಜುನಾಥ್ ಅವರ ಸ್ಮೃತಿಯ ಕಾರ್ಯಕ್ರಮದಿಂದ ಅಗಲಿದ ಕವಿಯ ಕುರಿತು ಆಸಕ್ತಿ ಮೂಡುವಂತಾಯಿತು.

ಕವಿಗೋಷ್ಠಿ ಚೆನ್ನಾಗಿ ನಡೆಯಿತು.
ಲಹರಿ ವೇದಿಗೆ ಹೊಸಬರಾದ ಅಂಶುಮಾಲಿಯವರು ತುಂಬಾ ಪರಿಣಾಮವುಂಟುಮಾಡಿದರು. ವಾಸಂತಿಯವರು ಕಟ್ಟಿಕೊಟ್ಟ ಕವಿತೆ  *ತಲೆಮಾರುಗಳ ನಡುವಿನ ಅಂತರ*ಕ್ಕೆ ರೂಪಕವಾಗಿ ಗಮನಸೆಳೆಯಿತು.  

*ನನ್ನ ಕಾವ್ಯಗಾಯನ ನನಗೇ ಇಷ್ಟವಾಗದಂತಿತ್ತು*

*ತಬ್ಲಾ ಕಲಾವಿದರಾದ ಶಶಿಕಿರಣ್ ಮಣಿಪಾಲರು ಎಷ್ಟು ಒತ್ತಾಯಿಸಿದರೂ ಸಂಭಾವನೆ ಸ್ವೀಕರಿಸದೇ ಉಳಿದರು.
ಭಾಗವಹಿಸಿದ ಖುಷಿಯನ್ನು ಸಂಭಾವನೆ ಪಡೆದು ಕಳೆದುಕೊಳ್ಳದ ಅವರ       *ಸಿರಿವಂತಿಕೆ*ಗೆ ನಾನು ಶರಣು.

*ಹರಟೆ*ಯಲ್ಲಿ *ಸಾಹಿತ್ಯ ಎಲ್ಲರಿಗಲ್ಲ* ಎಂಬ ಪಕ್ಷವಹಿಸಿ ಮಾತನಾಡಿದ ಪೈಕಿ ಕೃಷ್ಣಪ್ರಕಾಶ ಉಳಿತ್ತಾಯರು ಹರಟೆಯ ಲಹರಿಯಲ್ಲಿ ಇದ್ದರೆ, ಪಿ.ಬಿ.ಪ್ರಸನ್ನರು ಹರಟೆಯ *ಮುಕ್ತಆವರಣ*ದಿಂದ ಪ್ರತ್ಯೇಕವಾಗಿ, ಗಂಭೀರವಾದಂತೆ ಇತ್ತು.
ವಾದಿಯೊಬ್ಬನಿಗೆ ದೊರಕಬೇಕಾದ ಹ್ಲಾದಮಯ ಆರಂಭ ಪ್ರಸನ್ನರಿಗೆ ದೊರೆಯಲಿಲ್ಲ. ಅವರ ಬರವಣಿಗೆಯಲ್ಲಿ ಕಂಡುಬರುವ *ವಿಮರ್ಶಾತ್ಮಕ ವ್ಯಂಗ್ಯದ ಲಕ್ಷಣ* ಇಂದಿನ ಹರಟೆಯ ವಾಗ್ವೈಖರಿಯಾಗಿ ಅಭಿವ್ಯಕ್ತವಾಗಲಿಲ್ಲ.
ಆದರೆ ಭಾರತೀಯ ಕಾವ್ಯಮೀಮಾಂಸೆಯ ಪ್ರಸಿದ್ಧೋಕ್ತಿ *ಅರಸಿಕೇಶು ಕವಿತ್ವ ನಿವೇದನಮ್ ಮಮ ಶಿರಸಿ ಮಾಲಿಖಾ ಮಾಲಿಖಾ ಮಾಲಿಖಾ* ಇದನ್ನು *ಸಾಹಿತ್ಯ ಎಮಲ್ಲರಿಗಲ್ಲ* ಎಂಬ ಸರ್ವಜ್ಞನ ಮಾತಿಗೆ ಸಮೀಕರಿಸಿಕೊಂಡದ್ದು
ಔಚಿತ್ಯಪೂರ್ಣವಾಗಿತ್ತು.
ಪ್ರಾಯಶಃ ಪ್ರಸನ್ನರು ಸಭಿಕರನ್ನು ಅವಲೋಕಿಸಿ ಹೇಳಿದ ಒಂದು ಅಂಶ ಗಮನಾರ್ಹ. ಅದೆಂದರೆ ಕೇಳುಗತನ ಮರೆತು ಸಭಿಕರನೇಕರು(ನಾನೂ ಸಹಿತ) ಮೊಬೈಲಾಧೀನರಾಗಿದ್ದುದು. ಇದು ವೈಯ್ಯಕ್ತಿಕವಾಗಿ ಪ್ರಸನ್ನರಿಗೆ ಹಿತವಾಗಿ ಕಂಡಿರದಿದ್ದರೆ ಅದು ಸಹಜವೇ. ಇದು ಅವರು ತುಸು ಗಂಭೀರವಾದಂತೆ ಕಾಣಲು ಕಾರಣವಿದ್ದಿರಬಹುದು.

ಹರಟೆಯ ನಿರ್ವಾಹಕರಾದ ಕವಿತಾ ಅಡೂರ್ ಚಾಟಿಬೀಸಲು ಇಲ್ಲೊಂದು ಅರ್ಹ ಅವಕಾಶವಿತ್ತು. ಅದನ್ನು ಆಕ್ಷೇಪಿಸಲು ಅವಕಾಶವೇ ಇರದ ವಿಷಯವದು!
ಇಲ್ಲೂ ನಾನು ತಪ್ಪುಗಾರನೇ( ಅವಧಾನಿಯಾಗಿಯೂ ವ್ಯವಧಾನ ರಹಿತ!)
 
ಕೃಷ್ಣಪ್ರಕಾಶ ಉಳಿತ್ತಾಯರು *ಕಾನೂನು ಸಾಹಿತ್ಯ ಹಾಗೂ ಅದರ ಆನ್ವಯಿಕ ಅಪ್ರಯೋಜಕತೆ*ಯ ಅಂಶವನ್ನು ನ್ಯಾಯವಿದರಾಗಿ ಹರಟೆಯ ಪರಿಧಿಗೆ ತಂದುದು ಸಮಯೋಚಿತವೇ ಆಗಿತ್ತು. ಸಾಹಿತ್ಯಲೋಕದಲ್ಲಿ ಬರೆಹಗಾರನಿಗೆ ಸಿಗುವ ದೇಶಾವರಿ ಮೆಚ್ಚುಗೆಯ ಪ್ರಾಮಾಣ್ಯದ ಕುರಿತು ಉಳಿತ್ತಾಯರು ಎತ್ತಿದ ಪ್ರಶ್ನೆ *ಹಾಸ-ಗಂಭೀರ*ವೇ ಸರಿ!

ಹರಟೆಗೆ ಹೇಳಿಮಾಡಿಸಿದ *ಲಾಲಿತ್ಯಪೂರ್ಣ  ಸಂಭಾಷಣಕ್ರಮ* ವಿಷಯದ ಪರವಾಗಿ ಮಾತನಾಡಿದ ಹರೀಶರ ಬೊಳಂತಿಮೊಗೆರು ಅವರಲ್ಲಿದೆ. ಅವರಿಗೆ ಯಕ್ಷಗಾನದ ವಾಗ್ಮಿತೆಯ ಆನುಷಂಗಿಕ ವರವಾಗಿ ಹರಟೆಯ ಶೈಲಿ ಸಿದ್ಧಿಸಿದೆ.
ಅವರ ನಿರ್ವಹಣೆ ಚೆನ್ನಾಗಿತ್ತು. 
ಡಾ.ರಾಜೇಶ್ ಬೆಜ್ಜಂಗಳರು ಹರಟೆಯ ವಿಷಯವನ್ನು ಸಾಕಷ್ಟು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಕಾವ್ಯಮೀಮಾಂಸಕ ಮಮ್ಮಟನನ್ನು ಉಲ್ಲೇಖಿಸಿ ಹೇಳಿದ ಕಾವ್ಯಪ್ರಯೋಜನದ ಕುರಿತಾದ ಮಾತು *ಕಾಂತಾಸಮ್ಮಿತ ಉಪದೇಶಯುಜೇ* ಇದು *ಕಾಂತಾಸಮ್ಮಿತತಯೋsಪದೇಶಯುಜೇ* ಎಂದಾಗಬೇಕಿತ್ತು. ಏನಿದ್ದರೂ ವಿಷಯದ ಮನವರಿಕೆಗೆ ಅಡ್ಡಿಯಿರಲಿಲ್ಲ. 

ಹರಟೆಯಲ್ಲಿ ಭಾಗಿಗಳಾದ ನಾಲ್ವರದೂ ನಾಲ್ಮೊಗ!
ಪ್ರಸನ್ನರಲ್ಲಿ ವಿಮರ್ಶಕನ ನೈಷ್ಠುರ್ಯ ಅಧಿಕ,
ಕೆ.ಪಿ.ಉಳಿತ್ತಾಯರದ್ದು ಯಕ್ಷಗಾನ, ಕಾನೂನು ಪರಿಜ್ಞಾನ, ಕಲಾಮೀಮಾಂಸಕನ ಹಾಗೂ ಹರಟೆಯ ಬೆರಸಶೈಲಿ,
ರಾಜೇಶರದು ಅಧ್ಯಾಪಕನ ಆಯಾಮದ ಶೈಲಿ,
ಹಾಗೂ ಹರೀಶರದು ಸೃಜನಶೀಲ ಕಲಾವಿದನ ಅನುಭವ ಹಾಗೂ ಪ್ರತ್ಯುತ್ಪನ್ನಕಾರಕ ಮುಖ.

ಒಪೀನಿಯನ್ ಪೋಲಿನಲ್ಲಿ ಹರಟೆ ಇನ್ನೂ *ರೈಸಬೇಕಾಗಿತ್ತು* ಎಂಬ ಮಾತೇ ಕೇಳಿಬಂದುದು ಸತ್ಯ!

ಯಥಾಪ್ರಕಾರ ಮುರಳೀಧರ ಉಪಾಧ್ಯರು ತನ್ನ ಓದಿಗೊದಗಿದ ಹೊಸರುಚಿಯನ್ನು(ತಿರುಮಲೇಶರ *ಅಕ್ಷಯ ಕಾವ್ಯ)* ಉಣಬಡಿಸುವ ಔದಾರ್ಯ ತೋರಿದರು.

ಕಾರ್ಯಕ್ರಮದ ಆಯೋಜನೆಯ ಶ್ರೇಯಸ್ಸು ಜ್ಯೋತಿ- ಮಹಾದೇವ, ಕವಿತಾ ಅಡೂರು, ಮುರಳೀಧರ ಉಪಾಧ್ಯಾಯ, ವರದೇಶ ಹಿರೇಗಂಗೆ ಇವರಿಗೆ ಸಂದರೆ,
ಭಾಗವಹಿಸಿದ ಎಲ್ಲರಿಗೂ ಆದಿತ್ಯವಾರವು ಫಲಪ್ರದವಾದ ಧನ್ಯತೆಯ ಖುಷಿ.

No comments:

Post a Comment