Saturday, June 24, 2017

ಶಿವಪಿಳ್ಳೆ ಅಯ್ಯಂಗಾರ್ - ತೆಳ್ಳಾರಿನಲ್ಲಿ ಸಿಕ್ಕಿದ್ದು ಮಧ್ವಾಚಾರ್ಯರ ವಿಗ್ರಹ ಅಲ್ಲ{From Shaiva Pille Iyengar's FaceBook }
ಸನ್ಮಿತ್ರರಾದ Murugesh Turuvekere ಅವರು ಇತಿಹಾಸದ ಅಧ್ಯಾಪಕರು ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡವರು. ಅವರು ಇತ್ತೀಚೆಗೆ ಕಾರ್ಕಳದ ಜಲದುರ್ಗಾ ದೇವಾಲಯದಲ್ಲಿ ಅಲ್ಲಿನ ಅರ್ಚಕರೇ ಆರಾಧನೆ ಮಾಡದೆ ಇಟ್ಟಿದ್ದ ಒಂದು ಪ್ರತಿಮೆಯನ್ನು ನೋಡಿ ""ಅವರೇ ಹೇಳುವಂತೆ "ಆಚಾರ್ಯ ಶಂಕರರು ಮತ್ತು ಆಚಾರ್ಯ ರಾಮಾನುಜರ ಲಕ್ಷಣಗಳಿಗೆ ಭಿನ್ನವಾದ ಅತೀ ಪ್ರಾಚೀನವಾದ 13 ನೇ ಶತಮಾನದ 12 cm ಇರುವ ವಿಗ್ರಹವನ್ನು, ಅದು ಸಿಕ್ಕಿರುವ ಭೌಗೋಳಿಕ ಹಿನ್ನೆಲೆಯ ಮೇಲೆ ಅದನ್ನು ಆಚಾರ್ಯ ಮಧ್ವರ ವಿಗ್ರಹ " ಎಂದು ಗುರುತಿಸಿದ್ದಾರೆ. ಪ್ರತಿಯೊಬ್ಬ ಇತಿಹಾಸಕಾರರಿಗೆ ಇರುವಂತೆ ಇವರಿಗೂ ಒಂದು ಶಾಸ್ತ್ರದ ಬಗ್ಗೆ ಕೆಲವು ಮಿತಿಗಳಿವೆ. ಅವರ ಅಧ್ಯಯನದ ಹಿನ್ನೆಲೆಯಲ್ಲಿ ಅವರು ಈ ಸಂಶೋಧನೆಯ ಸಾರಾಂಶವನ್ನು ಪತ್ರಿಕೆಗಳಿಗೆ ಹೇಳಿಕೆ ನೀಡುವ ಮೂಲಕ ಪ್ರಕಟಪಡಿಸಿದ್ದಾರೆ. ಆದರೆ ಈ ಸಂಶೋಧನೆ ಒಂದು ಮಹತ್ವಪೂರ್ಣ ಸಂಗತಿ ಎನ್ನುವುದು ನನ್ನ ಅಭಿಪ್ರಾಯ.
ಆದರೆ ವಿಗ್ರಹದ ಲಕ್ಷಣಗಳನ್ನು ನಾವು ಗಮನಿಸಿದರೆ ಅದು ಆಚಾರ್ಯ ಮಧ್ವರದ್ದಲ್ಲ ! ಬದಲಿಗೆ‍ ಶ್ರೀವೈಷ್ಣವ ಸಿದ್ಧಾಂತದ ಪ್ರಮುಖರಾದ ನಮ್ಮಾಳ್ವಾರ್ ಅವರದು ಎಂದು ಸ್ಪಷ್ಟ ಪಡುತ್ತದೆ.
1. ಆಳ್ವಾರ್ ಅವರ ಬಲಗೈ ಚಿನ್ಮುದ್ರೆ ಅಥವಾ ಉಪದೇಶ ಮುದ್ರೆಯಲ್ಲಿದೆ. (ದ್ವೈತ ಮುದ್ರೆಯಲ್ಲಿಲ್ಲ. )
2. ಕೊರಳಲ್ಲಿ ಹಾರವಿದೆ ( ಸನ್ಯಾಸಿಗಳಿಗೆ ಇರುವುದಿಲ್ಲ)
3. ಕೈಗಳಲ್ಲಿ ಕಡಗಗಳಿವೆ (ಸನ್ನ್ಯಾಸಿಗೆ ಅಗತ್ಯವಿಲ್ಲ )
4.ಪೀಠದ ಮೇಲೆ ಅಧೋಪದ್ಮದ ಮೇಲೆ ಊರ್ಧ್ವಪದ್ಮದ ಅಲಂಕರಣವಿದ್ದು ಅದರ ಮೇಲೆ ಬದ್ಧ ಪದ್ಮಾಸನದಲ್ಲಿ ಆಳ್ವಾರ್ ಕುಳಿತಿದ್ದಾರೆ. ಇದು ಶ್ರೀವೈಷ್ಣವರ 12ನೇ ಶತಮಾನದ ವಿಗ್ರಹಗಳ ಸಾಮಾನ್ಯ ಲಕ್ಷಣ
5. ಎಡಗೈ ಧ್ಯಾನಮುದ್ರೆಯಲ್ಲಿದ್ದು ಕಾಲುಗಳ ಮೇಲೆ ಇಡಲಾಗಿದೆ. (ಇದು ನಮ್ಮಾಳ್ವಾರ್ ವಿಗ್ರಹಗಳ ಸಾಮಾನ್ಯ ಲಕ್ಷಣ)
6. ತಲೆಯ ಹಿಂಭಾಗದಲ್ಲಿ ಧಮ್ಮಿಲ್ಲ ಮಾದರಿಯ ಶಿಖೆ ಇದೆ. ಇದನ್ನು ಕಾರಿ ಮಾರನ್ ಕೊಂಡೆ ಎಂದು ಹೆಸರಿಸಲಾಗುತ್ತದೆ. ( ಇದು ಏಕದಂಡೀ ಸನ್ಯಾಸಿಗಳಿಗೆ ನಿಷೇಧ. ಅಂದರೆ ಶಿಖೆ ಇರಬಾರದು. ಅವರು ಮುಂಡನ ಮಾಡಿಸಿಕೊಂಡಿರುತ್ತಾರೆ)
7. ಇನ್ನು ಮುಖಭಾವದಲ್ಲಿ ದೇವರ ಸಾಕ್ಷಾತ್ಕಾರದ ಆತ್ಮ ಸಂತೃಪ್ತಿಯ ನಗುವಿದೆ. ಇದೂ ಸಹ ಆಳ್ವಾರರ ವಿಗ್ರಹದ ಪ್ರಮುಖ ಲಕ್ಷಣ.
ಈ ಎಲ್ಲ ಕಾರಣಗಳಿಂದ ಇದು ನಮ್ಮಾಳ್ವಾರರ ವಿಗ್ರಹ ಎಂದು ಸ್ಪಷ್ಟ ಪಡುತ್ತದೆ.
ಕರಾವಳಿಯ ಪ್ರದೇಶದಲ್ಲಿ ಶ್ರೀವೈಷ್ಣವರ ಪ್ರಭಾವ ಇರಲಿಲ್ಲ ಎಂದರೆ ತಪ್ಪಾಗುತ್ತದೆ. ಅಥವಾ ಇರಲಿಲ್ಲ ಎಂದು ಭಾವಿಸಿದರೂ ಸಹ ಶ್ರೀವೈಷ್ಣವರ ವಲಸೆ ಅಥವಾ ಪ್ರಯಾಣ ಇರಲಿಲ್ಲ ಎಂದು ಭಾವಿಸಲಾಗದು. ಹೊಯ್ಸಳ, ವಿಜಯನಗರ ಮತ್ತು ಮೈಸೂರು ಅರಸರ ರಾಜಧರ್ಮ ಶ್ರೀವೈಷ್ಣವ ಧರ್ಮವಾಗಿತ್ತು. ಇಡೀ ದಕ್ಷಿಣಭಾರತ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತ್ತು. ರಾಜಧರ್ಮದ ಪ್ರಭಾವ ಎಲ್ಲೆಡೆ ಇತ್ತು.
ನಮ್ಮಾಳ್ವಾರ್‍ ಅವರು ಮೂಲತಃ ಗೌಡ ಜನಾಂಗಕ್ಕೆ ಸೇರಿದವರಾದರೂ ಸಹ ಭಕ್ತಿಯ ಸಾಧನೆಯಲ್ಲಿ ದೇವತ್ವಕ್ಕೇರಿದರು. ನಾಲ್ಕು ವೇದಗಳನ್ನು ತಮಿಳಿಗೆ ದಿವ್ಯಪ್ರಬಂಧದ ಮೂಲಕ ಸಾರ ರೂಪವಾಗಿ ಅನುವಾದಿಸಿದರು. ಆಳ್ವಾರರುಗಳಿಗೆ ಜಾತಿಯ ಹಂಗಿಲ್ಲ. ದಲಿತ, ಬೇಡ, ನಾಯಕ, ಕ್ಷತ್ರಿಯ, ಗೌಡ, ಬ್ರಾಹ್ಮಣ,ಸ್ತ್ರೀ ಎಲ್ಲ ಜಾತಿಗೆ ಸೇರಿದ ಆಳ್ವಾರರಿದ್ದು ಇಂದಿಗೂ ಇವರನ್ನು ದೇವಾಲಯಗಳಲ್ಲಿ ಮತ್ತು ಮನೆಗಳಲ್ಲಿ ಆರಾಧಿಸಲಾಗುತ್ತದೆ.
ಒಟ್ಟಿನಲ್ಲಿ ಈ ಸಂಶೋಧನೆ ಮಹತ್ವದ್ದಾಗಿದೆ.
ಅಸೂಯೆ ಇಲ್ಲದ ಪಕ್ಷಪಾತವಿಲ್ಲದ ಅಭಿಪ್ರಾಯಗಳಿಗೆ ಸ್ವಾಗತ.

No comments:

Post a Comment