stat Counter



Monday, September 4, 2017

ಅತ್ಮಕತೆಯಲ್ಲಿ ಅಡಗಿದ ಅಮೃತಾ

ದಿನೇಶ್ ಕುಮಾರ್ -- ಅಮೃತಾ ರಕ್ಷಿದಿ ಬರೆದ ಆತ್ಮಕತೆ

Image may contain: 1 person, smiling
ಹಿರಿಯರಾದ ಪ್ರಸಾದ್ ರಕ್ಷಿದ್ಧಿಯವರು ಮಗಳು ಅಮೃತ ಬರೆದ ಅಮೃತಯಾನ ಎಂಬ ಆತ್ಮಚರಿತ್ರೆಯ ಐದು ಸಂಪುಟಗಳ ಪಿಡಿಎಫ್ ಕಳಿಸಿದ್ದರು. ಪ್ರಕಟಣೆಗೆ ಸಿದ್ಧವಾಗಿರುವ ಈ ಬೃಹತ್ ಆತ್ಮಚರಿತ್ರೆಯನ್ನು ಒಮ್ಮೆ ಕಣ್ಣಾಡಿಸಿ ಎಂದು ಹೇಳಿದರು. ನಾನು ಅಕಸ್ಮಾತಾಗಿ ಅದರ ಐದನೇ ಸಂಪುಟವನ್ನೇ ಮೊದಲು ಓದಲು ಶುರು ಮಾಡಿದೆ ಮತ್ತು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಟ್ಟೆ. ಆ ಓದು ಹುಟ್ಟುಹಾಕಿದ ತಲ್ಲಣ, ತಳಮಳಗಳನ್ನು ಶಬ್ದದಲ್ಲಿ ಹೇಳಲಾಗದು. ಹಲವು ದಿನಗಳು ಆ ಗುಂಗಿನಿಂದ ಹೊರಗೆ ಬರುವುದು ಸಾಧ್ಯವೇ ಇರಲಿಲ್ಲ. ಅಮೃತಳಿಗೆ ಕೆಲವು ಸಮಸ್ಯೆಗಳು ಇರುವುದು ನನಗೆ ಗೊತ್ತಿತ್ತು. ಆದರೆ ಹೆಚ್ಚೇನು ವಿವರಗಳು ತಿಳಿದಿರಲಿಲ್ಲ. ಪ್ಯಾರನಾಯ್ಡ್ ಜಗತ್ತಿನಲ್ಲಿ ಬದುಕುವ ಹುಡುಗಿಯೊಬ್ಬಳು ಹೀಗೊಂದು ಆತ್ಮಚರಿತ್ರೆಯನ್ನು ಬರೆಯಬಹುದೇ ಎಂಬುದೇ ನನ್ನ ದೊಡ್ಡ ಆಶ್ಚರ್ಯ. ಅಮೃತಳಿಗೆ ಎಲ್ಲವೂ ಹೆಚ್ಚು, ಅವಳ ನೆನಪಿನ ಶಕ್ತಿ ಹೆಚ್ಚು, ಕ್ರಿಯಾಶೀಲತೆ ಹೆಚ್ಚು, ಆಕಾಂಕ್ಷೆಗಳು ಹೆಚ್ಚು. ಅಮೃತಯಾನದಲ್ಲಿ ಅವಳು ತನ್ನ ಕೇವಲ 24 ವರ್ಷ ವಯಸ್ಸಿನ ಅನುಭವಗಳನ್ನು ಎಷ್ಟು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡು ಹೇಳುತ್ತಾ ಹೋಗುತ್ತಾಳೆಂದರೆ ಅಚ್ಚರಿಯಾಗುತ್ತದೆ. ಅಮೃತಯಾನದ ಆ ಸಂಪುಟ ಓದಿ ಮುಗಿಸಿದ ಕೂಡಲೇ ಪ್ರಸಾದ್ ಅವರಿಗೆ ಫೋನ್ ಮಾಡಿ, ಸರ್, ಇದೆಂಥ ಸುಡುವ ಕೆಂಡವನ್ನು ಬರೆದುಬಿಟ್ಟಿದ್ದಾಳೆ ಈ ಹುಡುಗಿ, ಇದು ಕನ್ನಡದ ಓದುಗರು ಮಾತ್ರವಲ್ಲ ಇಡೀ ಜಗತ್ತಿಗೇ ತಲುಪಬೇಕು, ಇಂಗ್ಲಿಷಿಗೆ, ಜಗತ್ತಿನ ಇತರ ಭಾಷೆಗಳಿಗೆ ಅನುವಾದವಾಗಬೇಕು. ಇಷ್ಟು ಪ್ರಾಮಾಣಿಕವಾದ ಆತ್ಮಚರಿತ್ರೆಯನ್ನು ನಾವು ಯಾರೂ ಓದಿರಲಾರೆವು ಅನಿಸುತ್ತೆ. ನಾವೆಲ್ಲರೂ ಪ್ಯಾರನಾಯ್ಡ್ ಜಗತ್ತಿಗೆ ಹೋಗಿ ಬರುವವರು, ಆದರೆ ಈ ಹುಡುಗಿ ಅಲ್ಲೇ ಉಳಿದುಬಿಟ್ಟಳು. ಆದರೆ ಈ ಪುಸ್ತಕ ಬರೆಯುವಾಗ ಅದರಿಂದ ಹೊರಗೆ ಬಂದೇ ಬರೆದಿದ್ದಾಳೆ. ಇದನ್ನು ಕನ್ನಡಕ್ಕೆ ಮಾತ್ರ ಸೀಮಿತಗೊಳಿಸೋದು ಬೇಡ ಸರ್, ಇದು ಜಗತ್ತಿನ ಎಲ್ಲ ಮನಶಾಸ್ತ್ರಜ್ಞರಿಗೂ ಒಂದು ಟೆಕ್ಸ್ಟ್. ಅಷ್ಟು ಮಾತ್ರವಲ್ಲ, ಶಿಕ್ಷಕರಿಗೆ, ಸಾಹಿತಿಗಳಿಗೆ, ಸಮಾಜಶಾಸ್ತ್ರಜ್ಞರಿಗೂ ಪಠ್ಯವೇ. ನಮಗೆಲ್ಲ ಇವಳು ಪಾಠಗಳನ್ನು ಹೇಳುತ್ತಿದ್ದಾಳೆ. ನಾವು ಈಗ ಒಬ್ಬ ಒಳ್ಳೆಯ ಅನುವಾದಕರನ್ನು ಮತ್ತು ಒಳ್ಳೆಯ ಇಂಗ್ಲಿಷ್ ಪ್ರಕಾಶಕರನ್ನು ಹುಡುಕಬೇಕು ಎಂದು ಹೇಳಿದ್ದೆ. ಕಳೆದ ವಾರ ಮತ್ತೆ ಪ್ರಸಾದ್ ಅವರ ಜತೆ ಮಾತನಾಡುವಾಗ ಅವರ ಧ್ವನಿ ತಗ್ಗಿತ್ತು. ಅಮೃತ ಪುಸ್ತಕ ಪ್ರಕಟವಾದರೆ ಅವಳಿಗೆ ಒಂದು ದೊಡ್ಡ ರಿಲೀಫ್ ಅನಿಸಬಹುದು. ಆದರೆ ಅವಳ ಖಾಯಿಲೆಯ ಸ್ವರೂಪ ನಮ್ಮೆಲ್ಲರಿಗೂ ಗೊತ್ತು. ಎಲ್ಲದಕ್ಕೂ ನಾವು ಮಾನಸಿಕವಾಗಿ ಸಜ್ಜಾಗಲೇಬೇಕು ಎಂದಿದ್ದರು. ಆದರೆ ನಮ್ಮ ಆಸೆ ಈಡೇರಲಿಲ್ಲ. ಇವತ್ತು ಅಮೃತ ಈ ಜಗತ್ತಿನ ವ್ಯವಹಾರ ಮುಗಿಸಿಹೋಗಿಬಿಟ್ಟಿದ್ದಾಳೆ. ಅವಳ ಆತ್ಮಚರಿತ್ರೆ ಪ್ರಕಟವಾಗುವವರೆಗಾದರೂ ಅವಳು ಬದುಕಿರಬೇಕಿತ್ತು. ಹಾಗಾಗಲೇ ಇಲ್ಲ.

No comments:

Post a Comment