stat Counter



Thursday, October 12, 2017

ನಾಗ ಐತಾಳ್ -- ಶಿವರಾಮ ಕಾರಂತರ ನೆನಪು

ಕೋಟ ಶಿವರಾಮ ಕಾರಂತರ ಜನ್ಮದಿನದ ಸ್ಮರಣೆಯಲ್ಲಿ
ಸಾಮಾನ್ಯವಾಗಿ ಹೆಚ್ಚಿನ ಪರಿಚಿತರಿಲ್ಲದವರೊಡನೆ ಕಾರಂತರು ಬಿಗುಮಾನದಲ್ಲಿ ವರ್ತಿಸುವುದರಿಂದ ಹಲವರು ಅವರನ್ನು "ಸಿಡುಕಿನವರು" ಅಥವಾ "ನಿಷ್ಟೂರಪರರು" ಎಂದು ತಿಳಿದಿದ್ದಾರೆ. ಆದರೆ, ಆ ತೋರಿಕೆಯ ಬಿಗುಮಾನದ ಪರದೆ ಸರಿಸಿದಾಗ ಕಾಣುವುದು ಅವರ ಆತ್ಮೀಯತೆ, ಆದರತೆ. ಅವರ ಸರಳ ಹೃದಯದಿಂದ ಹೊರಸೂಸುವ ಪ್ರೀತ್ಯಾದರಗಳನ್ನು ಸವಿಯಬೇಕಾದರೆ, ಅವರು ಮಕ್ಕಳೊಡನೆ ಒಡನಾಡುವುದನ್ನು ನೋಡಬೇಕು. ಅವರ "ಅಳಿದಮೇಲೆ" ಕಾದಂಬರಿಯಲ್ಲಿ ನಿರೂಪಕರಾಗಿ ಅವರು, ಯಶವಂತರ ಮೊಮ್ಮೊಕ್ಕಳಾದ, ಯಶವಂತ, ಜಯಂತ, ಭಗವಂತರೊಡನೆ ಮಾಡಿದ ಸಂಭಾಷಣೆಯು, ಅವರ-ಮಕ್ಕಳೊಡನೆಯ ಬೆಚ್ಚನೆಯ ಅರಿವನ್ನು ಬಹಳ ಚೆನ್ನಾಗಿ ಅರಿತುಕೊಳ್ಳಬಹುದಾಗಿದೆ.
ಇಲ್ಲಿ ಅವರ ತಮ್ಮನ ಮೊಮ್ಮಗಳಾದ ಮಾಲಾ ಉಲ್ಲಾಸ್ ಬರೆದಿರುವ ಒಂದು ಪುಟ್ಟ ಘಟನೆಯನ್ನು ಉದ್ಧರಿಸುತ್ತಿದ್ದೇನೆ. (ಕಾರಂತ ಚಿಂತನ, ಕಡಲಾಚೆಯ ಕನ್ನಡಿಗರಿಂದ (೨೦೦೦), ಸಂ. ನಾಗ ಐತಾಳ, ಪ್ರ. ಅಕ್ಷರ ಪ್ರಕಾಶನ, ಹೆಗ್ಗೋಡು):
ನಮ್ಮಜ್ಜನ ಸಮಯಪ್ರಜ್ಞೆಯ ವಿಚಾರವಾಗಿ, ಇದೊಂದು ಹಾಸ್ಯ ಘಟನೆ ಜ್ಞಾಪಕಕ್ಕೆಬರುತ್ತದೆ. ಒಮ್ಮೆ ನನ್ನ ಚಿಕ್ಕಪ್ಪ, ಡೆಲ್ಲಿಯಲ್ಲಿ ಕೆಲಸ ಮಾಡುತ್ತಿದ್ದವರು, ರಜೆಗೆ ಊರಿಗೆ (ಕೋಟ) ಬಂದಿದ್ದರು. ಅವರು, ತಮ್ಮ ದೊಡ್ಡಪ್ಪನನ್ನು(ಕಾರಂತರು) ನೋಡಲು ಸಾಲಿಗ್ರಾಮದ ಅವರ ಮನೆಗೆ ಹೋಗಲು ಬಯಸಿ, ಜೊತೆಗೆ ಅವರ ಸೋದರಳಿಯನನ್ನು ಕರೆದುಕೊಂಡು ಹೊರಟರು.ಅಜ್ಜ ಯಾವಾಗಲೂ, ಮನೆಗೆ ಬಂದವರೊಡನೆ ಮಾತು ಮುಗಿಸಿದ ವಿಷಯ ಮುಗಿದೊಡನೆ, "ಆಯ್ತು, ಇನ್ನೇನೂ ವಿಶೇಷವಿಲ್ಲದಿದ್ದರೆ, ಸರಿ ಹಾಗಾದ್ರೆ.., ಮತ್ತೆಲ್ಲಾದ್ರೂ ನೋಡೋಣ..." ಎಂದು ಬಂದವರಿಗೆ ಸೂಕ್ಷ್ಮವಾಗಿ - ನೀವಿನ್ನು ಹೊರಡಬಹುದು - ಎಂಬ ಸೂಚನೆ ಕೊಡುತ್ತಿದ್ದರು. ತಾವಿಬ್ಬರೂ ಕಾರಂತರಿಂದ ಆ ಮಾತನ್ನು ಆಡಿಸಿಕೊಳ್ಳದೆ, ಅದರ ಮೊದಲೇ ಅಲ್ಲಿಂದ ಕಾಲು ಕೀಳಬೇಕೆಂದು, ನಮ್ಮ ಚಿಕ್ಕಪ್ಪ ಮತ್ತು ಅವರ ಸೋದರಳಿಯ ನಿಶ್ಚಯಿಸಿದರಂತೆ. ತಮ್ಮ ಮಾತುಕತೆ ಮುಗಿದ ತಕ್ಷಣ, ತಾವಿನ್ನು ಹೊರಡುತ್ತೇವೆ - ಎಂದು ಎದ್ದು ನಿಂತರಂತೆ. ಆಗ ನಮ್ಮಜ್ಜ, "ಸ್ವಲ್ಪ ಕೂತ್ಕೊಳ್ಳಿ.., ಯಾಕಿಷ್ಟು ಅವ್ಸ್ರ...." ಎಂದು ಹೇಳಿ ಮಹಡಿ ಮೇಲೆ ಹೋಗಿ, ಒಂದು ಉಲ್ಲನ್ ಶಾಲನ್ನು ತಂದು ನನ್ನ ಚಿಕ್ಕಪ್ಪನಿಗೆ ಹೊದಿಸಿ, "ನೀನು ಡೆಲ್ಲಿಯಲ್ಲಿರುವವನಲ್ಲವೋ? ಅಲ್ಲಿ ತುಂಬಾ ಉಪಯೋಗಕ್ಕೆ ಬರುತ್ತೆ..." ಎಂದು ಹೇಳಿದರಂತೆ. ನನ್ನ ಚಿಕ್ಕಪ್ಪನಿಗೆ ತುಂಬ ಸಂತೋಷವಾಗಿ, ಅವರು ಶಾಲು ಕೊಟ್ಟ ಮೇಲೆ ತಕ್ಷಣವೇ ಹೊರಡುವುದು ಸಮಂಜಸವಲ್ಲವೆಂದು, ಸ್ವಲ್ಪ ಹೊತ್ತು ಕುಳಿತರಂತೆ. ಆಗ ಅಜ್ಜ, "ಅಯ್ತು.., ಇನ್ನು ನೀವು ಹೊರಡಬಹುದು..." ಎಂದು ಆಜ್ಞಾಪಿಸಿದರಂತೆ. ಅಂತೂ, ನಮ್ಮ ಚಿಕ್ಕಪ್ಪ ಅವರಿಂದ ಯಾವುದನ್ನು ಹೇಳಿಸಿಕೊಳ್ಳಬಾರದೆಂದು ನಿಶ್ಚಯಿಸಿದ್ದರೋ, ಅದನ್ನೇ ಹೇಳಿಸಿಕೊಂಡೇ ಬಂದರಂತೆ. ಬರುತ್ತ, ದಾರಿಯಲ್ಲಿ ಆ ಘಟನೆಯನ್ನು ಎಣಿಸುತ್ತ, ನಗುತ್ತಲೇ ಬಂದರಂತೆ.
ನಮ್ಮ ಕಾರಂತಜ್ಜನನ್ನು ಅನುಸರಿಸಬೇಕಾದ ವಿಷಯಗಳು ಹಲವು. ಅವರ ಸಮಯಪ್ರಜ್ಞೆ, ಪ್ರಾಮಾಣಿಕತನ, ದುಡಿಮೆಗೆ ತಕ್ಕ ಫಲ ಗಳಿಸುವ ಛಲ, ಎಲ್ಲವನ್ನೂ ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದುದೇ!

No comments:

Post a Comment