stat Counter



Thursday, June 7, 2018

ಸುಬ್ರಾಯ ಚೊಕ್ಕಾಡಿ - ನಮಿಸುವೆನು ತಾಯೇ , ಹಸಿರುಡೆಯ ಮಾಯೇ

ಕೆಲವು ವರ್ಷಗಳ ಹಿಂದಿನ ಮಾತು.ಅತ್ರಿ ಬುಕ್ ಸೆಂಟರ್ ನ ಅಶೋಕವರ್ಧನರು ಮಂಗಳೂರಿನ ಹೊರವಲಯದ ತಮ್ಮ ಅಭಯಾರಣ್ಯದಲ್ಲಿ ಪುಟ್ಟ ಮನೆಯೊಂದನ್ನು ಕಟ್ಟಿಸಿದ್ದರು.ಅದರ ಆರಂಭೋತ್ಸವಕ್ಕೆ ಒಂದು ಪರಿಸರಗೀತೆಯನ್ನು ಬರೆದುಕೊಡುವಂತೆ ನನಗೆ ತಿಳಿಸಿದ್ದರು.ಹಾಗೆ ಹುಟ್ಟಿದ ಹಾಡು ಇದು.ಅದನ್ನು ಆರಂಭೋತ್ಸವದಂದು ನಾನು ವಾಚಿಸಿದೆ.ಗುರುರಾಜ ಮಾರ್ಪಳ್ಳಿಯವರು ಅದಕ್ಕೆ ಸ್ವರ ಸಂಯೋಜಿಸಿ,ಹಾಡಿದರು.ಅವರ ಅಳಿಯ ಪಂ.ರವಿಕಿರಣ ಅವರಿಗೆ ಸಾಥ್ ನೀಡಿದರು.
ಈಚೆಗೆ ಅದಕ್ಕೆ ಸ್ವರ ಸಂಯೋಜಿಸಿ ತಮ್ಮಶಿಷ್ಯರಿಂದ ಹಾಡಿಸಿ ಜನಪ್ರಿಯಗೊಳಿಸಿದವರು ಉಪಾಸನಾ ಮೋಹನ್ ಅವರು..ಆ ಹಾಡು ಈಗ ನಿಮಗಾಗಿ:
*ನಮಿಸುವೆನು ತಾಯೇ..*
ನಮಿಸುವೆನು ತಾಯೇ,ಹಸಿರುಡೆಯ ಮಾಯೇ
ಜೀವಜಲವೂಡಿ ನೀನೆಮ್ಮ ಕಾಯೇ..
ಸಪ್ತವರ್ಣದ ಸೆರಗ ನೀನು ಹೊದೆದಿರುವೆ
ತಾರೆಗಳ ಪೋಣಿಸುತ ಮುಡಿಗೇರಿಸಿರುವೆ
ಹಕ್ಕಿಗಳ ಸಂಗೀತ ನಿನ್ನ ಕೊರಳಲ್ಲಿ
ಜೀವಕೋಟಿಗಳೆಲ್ಲ ನಿನ್ನ ಮಡಿಲಲ್ಲಿ.
ಕನಸುಗಳು ಕರಗುತಿವೆ ಮಂಜಳಿವ ಹಾಗೆ
ಎದುರಿಗಿದೆ ಉಸಿರಿರದ ಬಿರು ಬಿಸಿಲ ಬೇಗೆ
ಹಸುರಿರದ ಬೆಟ್ಟಗಳು ಒಣಗಿರುವ ಕಣಿವೆ
ಮೃಗಜಲದ ಕುಣಿತಕ್ಕೆ ಸಾಕ್ಷಿಯಾಗುತಿವೆ.
ಮಾನವರ ದುಷ್ಕೃತಿಗೆ ನೊಂದಿರುವೆಯೇನು?
ಹನಿಯೊಡೆದ ಕಂಗಳಲಿ ನೋಡುತಿದೆ ಬಾನು
ಜೀವಜಲ ಬತ್ತಿದರೂ ನಿನ್ನ ಆಳದಲಿ
ಕಾಪಿಡುವೆ ನೀ ನಮ್ಮ ಎಲ್ಲ ಸಹಿಸುತಲಿ.
ಅಂತರಾಳದ ಬೆಂಕಿ ಭುಗಿಲೇಳದಿರಲಿ
ನಿನ್ನ ಕರುಣೆಯ ಕೈಯ ನೆರಳು ಹರಡಿರಲಿ
ನೆಲಬಾನ ನಡುವಿರಲಿ ನೀ ಹೊಳೆವ ಕಾನು
ನಿನ್ನ ಆಸರೆಯಿರಲು ಬೇಕು ಬೇರೇನು?
- ಸುಬ್ರಾಯ ಚೊಕ್ಕಾಡಿ.

No comments:

Post a Comment