stat Counter



Friday, July 27, 2018

ಜಿ. ಎನ್. ಆಶೋಕ ವರ್ಧನ - - ಜಿ. ಆರ್. ಉಪಾಧ್ಯಾಯರ - { ವಿ } ಚಿತ್ರ ಜೀವನ

ಸಂಗ್ರಾಹ್ಯ ಪುಸ್ತಕ - (ವಿ)ಚಿತ್ರ ಜೀವನ, जी.Are. ಉಪಾಧ್ಯಾಯ
ನಾಲ್ಕೈದು ವಾರಗಳ ಹಿಂದೆ ಸಾಹಿತ್ಯಪ್ರೇಮಿ ಗೆಳೆಯ ಹಿರಿಯಡಕ ಮುರಳೀಧರ ಉಪಾಧ್ಯರು ಚರವಾಣಿಸಿ ಮೇಲ್ಕಾಣಿಸಿದ ವಿಚಿತ್ರ ಪುಸ್ತಕ ಮತ್ತು ಲೇಖಕರನ್ನು ಎರಡು ಮಾತಿನಲ್ಲಿ ಪರಿಚಯಿಸಿದರು. ಮುಂದುವರಿದು, "ಉಪಾಧ್ಯಾಯರಿಗೆ ತನ್ನ ಪುಸ್ತಕವನ್ನು ಅಂತರ್ಜಾಲಕ್ಕೂ ಏರಿಸಿ, ಸಾರ್ವಜನಿಕರಿಗೆ ಚಿರಕಾಲ ಮುಕ್ತವಾಗುವಂತೆಯೂ ಮಾಡಬೇಕೆಂಬ ಬಯಕೆಯಿದೆ. ಏನು ಮಾಡಬಹುದು?" ನಾನು ಸಹಜವಾಗಿ "ಪಠ್ಯದ ಬೆರಳಚ್ಚು ಲೇಖಕರು ಕೊಡುವುದಿದ್ದರೆ, ನನ್ನ ಜಾಲತಾಣದ (www.athreebook.com) ಪುಸ್ತಕ ವಿಭಾಗದಲ್ಲಿ ಈಗಾಗಲೇ ಇರುವ ಹದಿನಾರು ವಿದ್ಯುನ್ಮಾನ ಪುಸ್ತಕಗಳೊಡನೆ ಇದನ್ನೂ ಸೇರಿಸಬಲ್ಲೆ. ಅಲ್ಲಿಗೆ ಹದಿನೇಳು ಪುಸ್ತಕಗಳು ಉಚಿತವಾಗಿ ಸಾರ್ವಜನಿಕರಿಗೆ ಸಿಗುವಂತಾಗುತ್ತದೆ" ಎಂದೆ. ಮರುದಿನವೇ ಜೀಯಾರ್ ಉಪಾಧ್ಯಾಯರೊಡನೇ ದೂರವಾಣಿ ಮಾತುಕತೆಯಾಯ್ತು. ಬೆರಳಚ್ಚಿನ ಸಮಸ್ಯೆಯೂ ಬಾರದಂತೆ, ಅವರ ಬಳಿ ಇಡೀ ಪುಸ್ತಕದ ಪೀಡಿಯೆಫ್ (ಸರಳವಾಗಿ ಹೇಳುವುದಿದ್ದರೆ ಶುದ್ಧ ಛಾಯಾನಕಲು) ಕಡತ ಇತ್ತು. ಅದನ್ನು ಒಂದು ಕ್ಷಣದ ಮಿಂಚಂಚೆಯಲ್ಲಿ ನನಗೆ ಕಳಿಸಿದರು. ನನ್ನ ಜಾಲತಾಣ ಹಾಗೂ ಮುಂದುವರಿದ ಎಲ್ಲ ಗಣಕ ಚಟುವಟಿಕೆಗಳ ನಿರ್ವಾಹಕ ಅಭಯ, ಅಷ್ಟೇ ಚುರುಕಿನಲ್ಲಿ ಅದನ್ನು ಅಂತರ್ಜಾಲಕ್ಕೇರಿಸಿ, ನನ್ನ ಜಾಲತಾಣದಲ್ಲಿ ನೆಲೆಗೊಳಿಸಿಬಿಟ್ಟ. ಮುರಳೀಧರ ಉಪಾಧ್ಯರು ಹೇಳಿದ ಎರಡು ಮಾತಿನ ಪರಿಚಯದಿಂದಾಚೆ ಲೇಖಕ, ಕೃತಿಯನ್ನು ನಾನು ನೋಡದೇ ನನ್ನ ಪ್ರಕಟಣ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದೆ!
ಜಿಯಾರ್ ಉಪಾಧ್ಯಾಯರು ಬಲು ದಾಕ್ಷಿಣ್ಯದವರಿರಬೇಕು. ನಮ್ಮೊಳಗಿನ ಚರವಾಣಿ ಮಾತುಕತೆಯಲ್ಲಿ ಮತ್ತೆ ಮತ್ತೆ "ನಾನೆಷ್ಟು (ಖರ್ಚು) ಕೊಡಬೇಕು" ಎಂದೇ ವಿಚಾರಿಸಿದ್ದರು. ನಾನೂ ಅಷ್ಟೇ ಖಡಕ್ಕಾಗಿ "ಏನೂ ಇಲ್ಲ" ಎಂದಿದ್ದೆ. ಆದರೂ "ಕನಿಷ್ಠ ಮುದ್ರಿತ ಪುಸ್ತಕದ ಒಂದು ಪ್ರತಿಯಾದರೂ ನಿಮ್ಮಲ್ಲಿರಲಿ" ಎಂದು ಒಂದು ಪುಸ್ತಕವನ್ನು ಉಚಿತವಾಗಿ ಅಂಚೆಯಲ್ಲಿ ಕಳಿಸಿಯೇಬಿಟ್ಟರು. ಹಾಗೆ ಬಂದ ಪುಸ್ತಕದ ಮುಖಪುಟ ನೋಡಿದ್ದೇ "ಅರೆ, ಇವರು ನನ್ನಂಗಡಿಗೆ ಬರುತ್ತಿದ್ದರು...." ಎಂಬಲ್ಲಿಂದ ತೊಡಗಿ, ನನ್ನಂಗಡಿ ಎದುರಿನ ಸರಕಾರೀ ಶಿಕ್ಷಕರ ಶಿಕ್ಷಣ ಸಂಸ್ಥೆಯಲ್ಲೇ ಹದಿಮೂರು ವರ್ಷ ಸೇವೆ ಬೇರೆ ಸಲ್ಲಿಸಿದವರು ಎಂದೆಲ್ಲ ತಿಳಿಯುತ್ತಿದ್ದಂತೆ ಸಂತೋಷವೇನೋ ಆಯ್ತು. ಆದರೆ ತನ್ನ ಹೆಸರು ಮುದ್ರಿಸುವಲ್ಲಿ ಮೂರು ಭಾಷೆಗಳ ಮಿಶ್ರಣ, ರಟ್ಟು ತಿರುಗಿಸಿದ್ದೇ ದೇವದೇವಿಯರೂ ಅಸಂಖ್ಯ ಕೌಟುಂಬಿಕ ಚಿತ್ರಗಳೂ ವಂಶವೃಕ್ಷಗಳೂ ಕಾಣಿಸಿತು. ಇಡಿಯ ಪುಸ್ತಕದಲ್ಲಿ ಲೆಕ್ಕವಿಲ್ಲದಷ್ಟು ಚಿಕಣಿ ಚಿತ್ರಗಳು, ಕೊನೆಯ ಸುಮಾರು ಇಪ್ಪತ್ತೈದು ಪುಟಗಳಂತೂ ಪೂರ್ಣ ವರ್ಣಮಯ ಆಲ್ಬಂನಂತೇ ಇರುವುದು ನೋಡಿದ ಮೇಲೆ ಮನಸ್ಸು ಸ್ವಲ್ಪ ಮುದುಡಿತು. ಎಲ್ಲೋ ನಗಣ್ಯ ಹಿನ್ನೆಲೆಯಿಂದ ಮೇಲೆ ಬಂದ ವ್ಯಕ್ತಿ ಆತ್ಮಸಂತೋಷಕ್ಕೆ ಪ್ರಕಟಿಸಿಕೊಂಡ ಸಾಹಿತ್ಯ, ಕಿರಿದಕ್ಕೆ ಹಿಡಿದ ಭೂತಗನ್ನಡಿ, ಮದುವೆ ವಿಡಿಯೋದ ಹಾಗೇ ಇರಬಹುದು ಎಂದೆಲ್ಲ ಯೋಚಿಸುತ್ತ ಅರೆಮನಸ್ಸಿನಲ್ಲಿ ಪುಟ ಮಗುಚಿದೆ. ಒಂದು ಲೆಕ್ಕದಲ್ಲಿ ನಗಣ್ಯ ಹಿನ್ನೆಲೆ ಹೌದು. ಆರ್ಥಿಕವಾಗಿ ಬಡಬ್ರಾಹ್ಮಣ ಕುಟುಂಬ, ವೈಯಕ್ತಿಕವಾಗಿ (ಕಾರಣ ಏನೇ ಇರಲಿ) ಎಸ್ಸೆಸ್ಸೆಲ್ಸಿಯಿಂದ ಮೇಲೆ ಬಿದ್ದದ್ದೇ ದೊಡ್ಡದು, ಹೆಚ್ಚುಕಮ್ಮಿ ಮನೆಯಿಂದ ಓಡಿಹೋಗಿ ಧಾರವಾಡದಲ್ಲಿ ಹೋಟೆಲ್ ಮಾಣಿ.....ಇತ್ಯಾದಿ. ಆದರೆ ಯಾವುದೇ ಉತ್ಪ್ರೇಕ್ಷೆಗಳಿಲ್ಲದೆ, ಪುಟ್ಟಪುಟ್ಟ ಟಿಪ್ಪಣಿಗಳಂಥ ಕಥನಗಳಲ್ಲಿ ಬಿಡಿಸಿಕೊಳ್ಳುತ್ತಾ ಹೋದ ಉಪಾಧ್ಯಾಯರ ಜೀವನಾನುಭವ ನನ್ನ ಪೂರ್ವಾಗ್ರಹವನ್ನು ಬಹಳ ಬೇಗನೇ ಹುಸಿಗೊಳಿಸಿಬಿಟ್ಟಿತು.
ಹುಟ್ಟಾ ಸಂಗೀತಗಾರ, ವಿಜ್ಞಾನಿ, ಕ್ರೀಡಾಳು ಎಂದೆಲ್ಲಾ ಹೇಳುತ್ತಾರಲ್ಲ ಹಾಗೇ - ಹುಟ್ಟಾ ಚಿತ್ರಕಾರರು ಗೋಪಾಲಕೃಷ್ಣ ರಾಮ ಉಪಾಧ್ಯಾಯ. ಆದರೆ ಯಾವುದೇ ದೊಡ್ಡ ಆಯಾಮದ ಹಪಹಪಿಯಿಲ್ಲದೇ ಸರಳ, ಸಾಂಪ್ರದಾಯಿಕ ಚಿತ್ರ ಬಿಡಿಸುವ ಒಲವನ್ನು ಜೀವನಶೈಲಿಗೆ ಹೊಂದಿಸಿಕೊಂಡು, (‘ಡ್ರೋಯಿಂಗ್ ಮಾಸ್ಟರ್’) ವೃತ್ತಿಯಾಗಿ ರೂಢಿಸಿಕೊಂಡು, ನಿವೃತ್ತಿಯಲ್ಲೂ ಸಮಾಜಸೇವೆಯಾಗಿ ಉಳಿಸಿಕೊಂಡೇ ಆರ್ಥಿಕ ಯಶಸ್ಸು, ಕೌಟುಂಬಿಕ ಸಂತೋಷಗಳನ್ನು ಗಳಿಸಿದವರು ಈ ಜೀಯಾರ್ ಉಪಾಧ್ಯಾಯ. ಮೇಲೆ ನಾನು ಹೇಳಿದ ವಿಶೇಷಣಗಳೆಲ್ಲವನ್ನು ೨೮೦ಕ್ಕೂ ಮಿಕ್ಕಿದ ಪುಟಗಳಲ್ಲಿ, ನೂರಾರು ರೇಖಾ, ವರ್ಣ, ಛಾಯಾ ಚಿತ್ರಗಳ ಸಾಂಗತ್ಯದಲ್ಲಿ ನಿರ್ಮಮ ಆತ್ಮಕಥಾನಕದ ದಾರದಲ್ಲಿ ಸುಂದರವಾಗಿ ಪ್ರಸ್ತುತಪಡಿಸುತ್ತದೆ - (ವಿ)ಚಿತ್ರ ಜೀವನ. ಆತ್ಮಕಥೆಯಾದ್ದರಿಂದ ಅದು ನುಡಿಚಿತ್ರವೇ ಇರಲಿ, ನಿಜಚಿತ್ರವೇ ಇರಲಿ, ನಿಸ್ಸಂದೇಹವಾಗಿ ಕೌಟುಂಬಿಕ ಅಂಶಗಳು ಇದ್ದೇ ಇವೆ. ಆದರೆ ನುಡಿಚಿತ್ರಗಳಲ್ಲಿ ಎಪ್ಪತ್ನಾಲ್ಕಕ್ಕೂ ಮಿಕ್ಕು ವರ್ಷಗಳ ಈ ಜೀವನಯಾನದಲ್ಲಿ ಸಾಂಪ್ರದಾಯಿಕ ಕಲಿಕೆಯಲ್ಲಿ ದಂಡಭಯದಿಂದ ಕುಗ್ಗಿದ ಎಳೆಯ, ಮನಸ್ಸಿನ ಉಮ್ಮಳಕ್ಕೆ ಚಿತ್ರರಚನೆಯ ಮರಸು ಬಯಸಿ ದೇಶಾಂತರ ಓಡಿ ದಕ್ಕಿಸಿಕೊಂಡ ಸಾಹಸ, ನೆಲೆಕೊಟ್ಟವರಿಗೆ ಹೊರೆಯಾಗದ ಸ್ವಾಭಿಮಾನ, ಹಾಗೆಂದು ತನ್ನ ಮಿತಿಯಲ್ಲಿ ಇತರರಿಗೆ ಒದಗುವಲ್ಲಿನ ಔದಾರ್ಯ, ವೃತ್ತಿಯಲ್ಲಿ ತರತಮ ಕಾಣದ ಶ್ರಮ, ವಿಶ್ವಾಸಕ್ಕೆ ಎರಡು ಬಗೆಯದ ಪ್ರಾಮಾಣಿಕತೆ, ಗೆಲುವಿನಂತೆ ಸೋಲನ್ನೂ ತೆರೆದಿಡುವ ನಿಸ್ಸಂಕೋಚ ಸಮಭಾವ, ಇದ್ದುದರಲ್ಲಿ ಸಮೃದ್ಧವಾಗಿರುವ ತೃಪ್ತಿ....... ಪಟ್ಟಿ ಮಾಡಿದಷ್ಟೂ ಮುಗಿಯದ ಕುಸುರಿ ಕೆಲಸವನ್ನು ನೀವು ಓದಿಯೇ ಸವಿಯಬೇಕು. ಎಲ್ಲೂ ವಾಚಾಳಿಯಲ್ಲ, ಹಾಗೆಂದು ಮುಚ್ಚುಮರೆಯೂ ಇಲ್ಲದ ಟಿಪ್ಪಣಿಗಳ ಓಟದಲ್ಲಿ ಓದು ನಮ್ಮನ್ನು ಹಲವು ಮಜಲುಗಳಲ್ಲಿ ಸೆಳೆಯುತ್ತದೆ. ಉಪಾಧ್ಯಾಯರು ದಿನಚರಿ ಬರೆಯುವ ಹವ್ಯಾಸಿಗಳೋ ಅಥವಾ ಚಿತ್ರಕಾರನ ಮನೋಭಿತ್ತಿ ಅಷ್ಟೂ ವಿವರಗಳನ್ನು ಹಿಡಿದಿಟ್ಟುಕೊಂಡಿತ್ತೋ ಎಂದು ಕೆಲವೊಮ್ಮೆ ಆಶ್ಚರ್ಯಪಡುವಷ್ಟು ಸೂಕ್ಷ್ಮಗಳನ್ನು ಗೆಲುವಿನಲ್ಲಿ ಹಮ್ಮು, ಸೋಲಿನಲ್ಲಿ ಸಂಕೋಚದ ರಂಗುಗಳಿಲ್ಲದೆ ಪ್ರಸ್ತುತಪಡಿಸುತ್ತಾರೆ. ಒಂದು ಸಣ್ಣ ಕೊರತೆ - ಇದನ್ನು ಪ್ರಕಟಣಪೂರ್ವ ಅನುಭವೀ ಗ್ರಂಥಕರ್ತರಿಂದ ತುಸು ಪರಿಷ್ಕರಣೆಗೊಳಪಡಿಸಿದಂತಿಲ್ಲ. ಇದು ಕೆಲವು ಪ್ರಸಂಗಗಳು ಮರುಕಳಿಸುವುದನ್ನು ತಪ್ಪಿಸುತ್ತಿತ್ತು, ಕೆಲವೆಡೆಗಳ ಪ್ರಯೋಗ ಶುದ್ಧಿಯನ್ನು ಹೆಚ್ಚಿಸುತ್ತಿತ್ತು. ಮುದ್ರಣ ಕಾಲದಲ್ಲಿ ಅಕ್ಷರ ಸ್ಖಾಲಿತ್ಯ (ಮುದ್ರಾರಾಕ್ಷಸ) ನಿವಾರಿಸುವಲ್ಲೂ ಭಾವನಾತ್ಮಕ ಓದುಗನಿಗಿಂತ ವೃತ್ತಿಪರ ‘ಛಿದ್ರಾನ್ವೇಷಿ’ ಹೆಚ್ಚು ಉಪಯೋಗಕ್ಕೊದಗುತ್ತಾನೆ. ಪುಸ್ತಕದ ಗುಣಗಳ ಕುರಿತು ಇನ್ನೂ ಹೆಚ್ಚು ಹೇಳಿ ನಿಮ್ಮ ಸ್ವಾರಸ್ಯಗೆಡಿಸುವುದಿಲ್ಲ. ಬದಲಿಗೆ........
ಶಿಕ್ಷಕರ ಶಿಕ್ಷಕನಾಗಿದ್ದ ಬಲದಲ್ಲಿ ಉಪಾಧ್ಯಾಯರು ಬರಹದಲ್ಲಿ ಅಸಂಖ್ಯ ಸುಭಾಷಿತಗಳನ್ನು ಉದ್ಧರಿಸುತ್ತಾರೆ, ಉಪದೇಶಗಳನ್ನೂ ಮಾಡುತ್ತಾರೆ. ಅವೆಲ್ಲವನ್ನೂ ಮೀರಿ ಗ್ರಹಿಸಬಲ್ಲ ಸಹೃದಯಿಗಳಿಗೆ ಅವರ ಜೀವನಶೈಲಿಯೇ ಒಂದು ಆದರ್ಶ ಎಂದರೆ ತಪ್ಪಾಗದು. ಅದಲ್ಲದೆ ಪುಸ್ತಕದೊಳಗಿನ ಅಸಂಖ್ಯ ಜನಪದ ಮತ್ತು ಸಾಂಪ್ರದಾಯಿಕ ಸಲಕರಣೆ ಮತ್ತು ಚಟುವಟಿಕೆಗಳ ಚಿತ್ರಗಳು ಪಲ್ಲಟಿಸುವ ಕಾಲಮಾನದಲ್ಲಿ ದಾಖಲೀಕರಣ ಮತ್ತು ಪುನರುತ್ಥಾನಕ್ಕೆ ಮುಖ್ಯ ಆಕರದ ಆವಶ್ಯಕತೆಯನ್ನು ಪೂರೈಸುತ್ತದೆ. (ವಿ)ಚಿತ್ರ ಜೀವನವನ್ನು ಉಪಾಧ್ಯಾಯರು ಕಳೆದ ವರ್ಷವಷ್ಟೇ ಸ್ವಂತ ಹೆಸರು ವಿಳಾಸದಲ್ಲಿ ಪ್ರಕಟಿಸಿದ್ದಾರೆ. ಆದರೆ ಸಾರ್ವಜನಿಕರ ಅನುಕೂಲಕ್ಕೋಸ್ಕರ ಮಂಗಳೂರು, ಪುತ್ತೂರು ಹಾಗೂ ಉಡುಪಿಯ ಖ್ಯಾತ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರುವಂತೆ ನೋಡಿಕೊಂಡಿದ್ದಾರೆ. ಇದರ ಘನ ಮಹತ್ತಿಗೆ ಮುದ್ರಿತ ಬೆಲೆ ರೂಪಾಯಿ ಮುನ್ನೂರು ತುಂಬ ತುಂಬಾ ಕಡಿಮೆಯೇ ಸರಿ. ಅವರು ಮುದ್ರಿಸಿರುವ ಕೆಲವೇ ಪ್ರತಿಗಳು ಮುಗಿಯುವ ಮುನ್ನ ಅವಸರಿಸಿ ಕೊಂಡುಕೊಳ್ಳಿ. ಏನಲ್ಲದಿದ್ದರೂ........
ಜೀಯಾರ್ ಉಪಾಧ್ಯಾಯರು ಹೇಳಿಕೇಳಿ ಹಳೆಗಾಲದ ಉಪಾಧ್ಯಾಯರೇ! ಇವರಿಗೆ ತನಗೆ ತಿಳಿದೆಲ್ಲವನ್ನೂ ಬಯಸಿ ಬಂದವರಿಗೆ ಮುಕ್ತವಾಗಿ ಕೊಟ್ಟೇ ಗೊತ್ತು. ಸಹಜವಾಗಿ ತಾನು ಮುದ್ರಿಸಿಟ್ಟುಕೊಂಡ ಪುಸ್ತಕಗಳ ಬಗ್ಗೆ ಚಿಂತೆ ಹಚ್ಚಿಕೊಳ್ಳದೇ, ಕಾಲಧರ್ಮಕ್ಕೆ ಒಗ್ಗುವಂತೆ ಈ ಎಲ್ಲ ಮಾಹಿತಿ ಅಂತರ್ಜಾಲದಲ್ಲೂ ಲಭ್ಯವಿರಬೇಕೆಂದು ಬಯಸಿ ನನ್ನಲ್ಲಿಗೆ ಮುಟ್ಟಿಸಿದರು. ಇಂದು ಅದು ನನ್ನ ಜಾಲತಾಣ - www.athreebook.com ಇದರ ‘ಪುಸ್ತಕ ವಿಭಾಗ’ದಲ್ಲಿ ಹದಿನೇಳನೇ ವಿ-ಪುಸ್ತಕವಾಗಿ ಸೇರ್ಪಡೆಗೊಂಡಿದೆ. ನನ್ನ ಇತರ ಪುಸ್ತಕಗಳಂತೆ ಇದನ್ನೂ ಆಸಕ್ತರು ಮುಕ್ತವಾಗಿ (ಪಾವತಿ, ಅನುಮತಿಗಳ ವಿನಾ) ಅಂತರ್ಜಾಲದಲ್ಲಿ ಓದಬಹುದು, ತಂತಮ್ಮ ವಿದ್ಯುನ್ಮಾನ ಸಲಕರಣೆಗಳಿಗೆ ಇಳಿಸಿಕೊಂಡು ಸ್ವಾಂತ ಸುಖಾಯ (ವಾಣಿಜ್ಯ ಅಲ್ಲ) ಧಾರಾಳ ಬಳಸಬಹುದು. ಸದ್ಯ ಯಾವುದಕ್ಕೂ (ವಿ)ಚಿತ್ರ ಜೀವನದ ಪ್ರಾಥಮಿಕ ನೋಟಕ್ಕಾದರೂ ಈ ಸೇತಿನ ಮೇಲೆ ಚಿಟಿಕೆ ಹೊಡೆಯಿರಿ.
Comments
Muralidhar N Prabhu ಸರ್ ಇವರು ನಮ್ಮ ಹೈಸ್ಕೂಲ್ ನ ಡ್ರಾಯಿಂಗ್ ಮೇಸ್ಟ್ರು. ಸಾರ್. ನನ್ನಂಥವನಿಗೂ ಡ್ರಾಯಿಂಗ್ ಕಲಿಸುವ ಕ

No comments:

Post a Comment