stat Counter



Sunday, December 2, 2018

ವಿಕಾಸ್ ನೇಗಿಲೋಣಿ - ಜೋಗಿ ಅವರ ಕಾದಂಬರಿ-- ಸಲಾಂ ಬೆಂಗಳೂರು

ಜೋಗಿ ಅವರ ಬೆಂಗಳೂರು ಕಾದಂಬರಿ ಸರಣಿಯ ನಾಲ್ಕನೇ ಕಾದಂಬರಿ 'ಸಲಾಂ ಬೆಂಗಳೂರು' ಹೆಸರಲ್ಲಿ ಪ್ರಕಟವಾಗಿದೆ. ಅದನ್ನು ಓದಿದ ತಕ್ಷಣ ಬರೆಯಬೇಕೆನ್ನಿಸಿದ್ದು ಇದು:
ಕರುಣಾಕರ ನೀನೆಂಬುವುದ್ಯಾತಕೋ ಭರವಸೆ ಇಲ್ಲೆನಗೆ...
*ಯಾವ ದೇವಸ್ಥಾನದ ಕಟ್ಟೆ ಮೇಲೆ ದೇವರು ಉತ್ತರಿಸದ ಯಾರ ಪ್ರಾರ್ಥನೆಗಳಿವೆಯೋ?
*ಯಾವ ಆಸ್ಪತ್ರೆಯಲ್ಲಿ ಯಾರ ಬದುಕಿ ಬರುವ ಪ್ರಾಣಗಳಿವೆಯೋ, ಮಸಣಕ್ಕೆ ಹೋಗುವ ಜೀವಗಳಿವೆಯೋ?
*ಯಾವ ರಸ್ತೆಯಲ್ಲಿ ಯಾವ ಗಾಲಿಗಳ ಮೇಲೆ ಯಾವ ವೇಗ ಯಾರಿಗೆ ಖುಷಿ ಕೊಡಲಿದೆಯೋ?
*ಯಾವ ಬಾಲ್ಕನಿಯ ಮೇಲೆ ಒಣಗಿಸಿದ ಬಟ್ಟೆಯ ಒಳಗೆ ಯಾರ ಹರಯದ ಗುಟ್ಟುಗಳಿವೆಯೋ?
-ಪಾಮಜ್ಜಿ ಬೆಂಗಳೂರಿಗೆ ಬಂದಿದ್ದಾಳೆ. ಕುಂಟಿನಿ ಆ ಅಜ್ಜಿಯನ್ನು ಬೆಂಗಳೂರಿಗೆ ತಂದು ಬಿಟ್ಟಿದ್ದಾರೆ, ಅವಳು ತನ್ನ ಮೊಮ್ಮಗನನ್ನು ಹುಡುಕಲು ಬೆಂಗಳೂರಿಗೆ ಬಂದಿಳಿದಿದ್ದಾಳೆ, ಆ ಮೊಮ್ಮಗನನ್ನು ಹುಡುಕಿಕೊಡುವ ಜವಾಬ್ದಾರಿ ಈ ಕಥಾಲೇಖಕನ ಹೆಗಲ ಮೇಲೆ ಬಿದ್ದಿದೆ. ಯಾಕೆಂದರೆ ಹಿಂದೊಮ್ಮೆ ಕಾದಂಬರಿಯಲ್ಲಿ ವೆಂಕಟರಮಣ ಎಂಬ ವ್ಯಕ್ತಿದ ಬಗ್ಗೆ ಈ ಕಥಾಲೇಖಕ ಬರೆದಿದ್ದ. ಯಾವತ್ತೋ ಊರು ಬಿಟ್ಟು ಓಡಿ ಬಂದಾತ, ಇಲ್ಲೆಲ್ಲೋ ಬಾರೊಂದರಲ್ಲಿ ಭೇಟಿಯಾಗಿದ್ದ ಅಂತ ಈ ಲೇಖಕ ಬರೆದಿದ್ದ ವಿವರವದು. ಆ ಕಥಾಸಂಗ್ರಹ ಯಾರ ಕೈಯಿಂದ ಯಾರ ಕೈಗೋ ಹೋಗಿ ಆಕೆಗೆ ತಲುಪಿದೆ. ಇವನು ತನ್ನ ಮೊಮ್ಮಗ ಅಂತ ಪರಮೇಶ್ವರಿ ಅಲಿಯಾಸ್ ಪಾಮಜ್ಜಿಗೆ ಗೊತ್ತಾಗಿದೆ. ಹಾಗೆ ಬೆಂಗಳೂರು ಸೇರಿರುವ ಮೊಮ್ಮಗನನ್ನು ಕರೆದೊಯ್ಯಲೇಬೇಕು ಅನ್ನುವ ತುಡಿತದಿಂದ ಬೆಂಗಳೂರಿನ ಮೇಲೆ ವೃದ್ಧ ಪರಮೇಶ್ವರಿ ಕಾಲಿಟ್ಟಿದ್ದಾಳೆ, ಕಳೆದವರೆಲ್ಲಾ ಸಿಗುತ್ತಾರೆಂಬ ನಂಬಿಕೆ ಬೆಂಗಳೂರಿಗೂ ಇಲ್ಲ, ಲೇಖಕನಿಗೂ ಇಲ್ಲ. ಆದರೆ ಕಳೆದವರನ್ನೆಲ್ಲಾ ಬೆಂಗಳೂರಲ್ಲಿ ಹುಡುಕಿಕೊಂಡೇ ಹೋಗುತ್ತೇವೆಂಬ ನಂಬಿಕೆ ಹಳ್ಳಿಗಿದೆ, ಹಳ್ಳಿಗರಿಗೂ ಇದೆ.
ನಿಜ ಹೇಳಬೇಕೆಂದರೆ ಕಥಾಲೇಖಕ ಎಂದೋ ಬರೆದ ಕಥೆಯಲ್ಲಿ ಬಂದ ವೆಂಕಟರಮಣ ಎಂಬ ಪಾತ್ರ ಪಾತ್ರವೇ ಹೊರತೂ ನಿಜವಾದ ವ್ಯಕ್ತಿಯೇ ಅಲ್ಲ. ಓಡಿ ಬಂದವರು ಬೆಂಗಳೂರಲ್ಲಿ ಹೇಗೆ ಮಾರು ವೇಷದಲ್ಲಿ ಬದುಕನ್ನು ಕಂಡುಕೊಳ್ಳುತ್ತಿರುತ್ತಾರೆ ಅನ್ನುವುವುದನ್ನು ಹೇಳಲು ರೂಪಕವಾಗಿ ಬಳಸಿಕೊಂಡ ಪಾತ್ರ ಅದು. ಆ ರೂಪಕಕ್ಕೆ ಥಟ್ಟನೆ ಹೊಳೆದ ಹೆಸರು ವೆಂಕಟರಮಣ. ಆದರೆ ಈ ಕತೆಗೂ, ನಿಜವಾದ ವ್ಯಕ್ತಿಗೂ ಸಂಬಂಧವಿಲ್ಲ ಅಂತ ಸಾವು ಮತ್ತು ಮೊಮ್ಮಗನನ್ನು ಅರಸುತ್ತಿರುವ ಮುದುಕಿಗೆ ಹೇಗೆ ಹೇಳುವುದು?
-ಹೀಗೆ ಬದುಕಿಯೇ ಇರದ ಕಾಲ್ಪನಿಕ ವ್ಯಕ್ತಿಯನ್ನು ನಿಜ ಬದುಕಿನಲ್ಲಿ, ಮಹಾನಗರದಂಥ ಭೀಕರ ರಿಯಾಲಿಟಿಯ ಪಾತಳಿ ಮೇಲೆ ಹುಡುಕುತ್ತಾ ಹೋಗುವ ನಾಟಕೀಯ ಕಾದಂಬರಿ ಸಲಾಂ ಬೆಂಗಳೂರು. ಈ ಸಲ ಕತೆ ಹೇಳುವುದಿಲ್ಲ ಅಂತ ಪಣ ತೊಟ್ಟು ಜೋಗಿ ಈ ಕಾದಂಬರಿಯನ್ನು ಬರೆಯಲು ಕುಳಿತಾಗ ಶುರುವಿನ ಕೆಲ ಪುಟಗಳಲ್ಲಿ ಕತೆ ಹೇಳಲಿಲ್ಲ. ತಾವು ಮಾಡಲಿರುವ ಸಿನಿಮಾ, ಅದಕ್ಕಾಗಿ ಬರೆಯಬೇಕಿರುವ ಚಿತ್ರಕತೆ, ಆ ಪ್ರಾಸೆಸ್ ತಮ್ಮನ್ನೂ, ನಿರ್ದೇಶಕರನ್ನೂ ಕಾಡುತ್ತಿರುವ ಹತಾಶೆ, ಚಿನ್ಮಯಿ ಎಂಬ ಕಥಾಪಾತ್ರವನ್ನು ದಕ್ಕಿಸಿಕೊಳ್ಳದೇ ನುಣಿಚಿಕೊಳ್ಳುತ್ತಿದೆಯೆಂಬ ನಿರಾಶೆ-ಇವೆಲ್ಲವೂ ಲೇಖಕನನ್ನು ‘ಕ್ರಿಯೆಟಿವ್ ಬ್ಲಾಕ್’ ಆಗಿ ಕಾಡುತ್ತಿರುವಾಗಲೇ ಪಾಮಜ್ಜಿ ಬೆಂಗಳೂರಿಗೆ ಬರುತ್ತಾಳೆ ಮತ್ತು ಕತೆಯಾಗುತ್ತಾಳೆ. ಅವಳು ಹುಡುಕುವ ಮೊಮ್ಮಗ ಅವಳಿಗೆ ಯಾಕೆ ಬೇಕು ಅಂತ ಪಾಮಜ್ಜಿ ಬಾಯ್ಬಿಟ್ಟು ಹೇಳಿದರೂ ಅದೂ ನಿಜವೋ, ಸುಳ್ಳೋ ಎನ್ನುವ ಅನುಮಾನ ಅವಳ ಮೌನದಲ್ಲಿ ಹುದುಗಿದೆ. ವೆಂಕಟರಮಣ ಎಂಬ ವ್ಯಕ್ತಿ ಬೆಂಗಳೂರಿನ ಕೋಶದಲ್ಲಿ ಬದುಕಿದ್ದಾನಾ, ಇಲ್ಲವಾ ಅನ್ನುವ ನಿಗೂಢವೂ ಬೆಂಗಳೂರಿನ ಅಂತರಂಗದಲ್ಲಿ ರಹಸ್ಯವಾಗೇ ಉಳಿದಿದೆ. ಕತೆಯಾಗಬೇಕಾದ ಚಿನ್ಮಯಿ ಎನ್ನುವ ಪಾತ್ರದ ಒಳತೋಟಿ ಏನು ಎನ್ನುವುದು ಕಥೆಗಾರನ ಮನಸ್ಸೊಳಗೆ ಹುದುಗಿದೆ. ಹಾಗೆ ನೋಡಿದರೆ ಒಂದು ನಾಟಕೀಯ ಹುಡುಕಾಟ ಕತೆಗಾರನ ಮನಸ್ಸೊಳಗೂ, ಕತೆಯೊಳಗೂ ಏಕಕಾಲಕ್ಕೆ ನಡೆಯುತ್ತಿದೆ. ಮೊಮ್ಮಗ ಸಿಗುವುದಕ್ಕೆ ಸಾಧ್ಯವೇ ಇಲ್ಲ ಅಂತ ಎಲ್ಲರೂ ಒಳಗೊಳಗೇ ನಂಬಿಕೊಂಡರೂ ಎಲ್ಲರೂ ವೆಂಕಟರಮಣನನ್ನು ಹುಡುಕುವ ನಾಟಕ ಮಾಡುವುದರಲ್ಲೇ ಮಹಾನಗರದ ದುರಂತವಿದೆ.
ಮನೆಯವರಿಗೆ ಹೇಳಿಯೇ ಬಂದರೂ ಯಾವತ್ತೋ ಓಡಿ ಬಂದಂತೇ ಇರುವ ನಾವು ನೀವುಗಳು, ಈ ಬೆಂಗಳೂರಲ್ಲಿ ವೆಂಕಟರಮಣನ ಪ್ರತಿರೂಪಗಳು. ನೋಡುವ ಸಿನಿಮಾ, ಓದುವ ಫಾರ್ವರ್ಡ್ ಮೆಸೇಜು, ಶೇರ್ ಮಾಡುವ ಪೋಸ್ಟ್ ಗಳನ್ನು ಆ ಕ್ಷಣಕ್ಕಷ್ಟೇ ಅನುಭವಿಸಿ ಅಥವಾ ಅನುಭವಿಸಿದಂತೆ ನಾಟಕವಾಡಿ ಇನ್ನೇನನ್ನೋ ಕಾಯುತ್ತಿರುವಂತೆ ಮುಂದಕ್ಕೆ ಓಡುತ್ತಲೇ ಇರುವ ನಮ್ಮಂಥವರ ಒಟ್ಟುರೂಪ ಮಹಾನಗರ. ಅದನ್ನು ಪದೇಪದೇ ಈ ಕಾಲ್ಪನಿಕ ಕಥಾನಕದಲ್ಲಿ ನಿಜಜೀವನದ ನೈಜ ಪಾತ್ರಗಳಾದ ಕುಂಟಿನಿ, ಲಿಂಗದೇವರು, ಜೋಗಿ, ಸಚಿನ್ ಇವರೆಲ್ಲಾ ಹೇಳುತ್ತಲೇ, ವಿವರಿಸುತ್ತಲೇ ಹೋಗುತ್ತಾರೆ. ಹಾಗಾಗಿ ಇದು ಮಹಾನಗರದ ಸ್ವಗತವೋ, ಪಿಸುಮಾತೋ, ಗಿಲ್ಟೋ, ತಪ್ಪೊಪ್ಪಿಗೆಯೋ- ಎನ್ನುವುಂತೆ ಕಾಣುತ್ತದೆ, ಕಾಡುತ್ತದೆ.
ಜೋಗಿ ಅವರು ಬಗೆದ ಬೆಂಗಳೂರು ಓದುಗರಿಗೆ ಹೊಸತಲ್ಲ. ಇನ್ ಫ್ಯಾಕ್ಟ್ ಅವರೇ ಬೆಂಗಳೂರನ್ನು ಹೀಗೆ ಆಮೂಲಾಗ್ರವಾಗಿ ನಮಗೆ ತೋರಿಸಿದವರು. ಬೆಂಗಳೂರು, ‘ಬಿ ಕ್ಯಾಪಿಟಲ್’, ‘ಮಹಾನಗರ’ ಈ ಎಲ್ಲಾ ಕೃತಿಗಳಲ್ಲೂ ಇರುವುದು ಅರ್ಥವಾಗದ ಬೆಂಗಳೂರು. ಬೆಂಗಳೂರನ್ನ ಅರ್ಥಮಾಡಿಕೊಳ್ಳಲು ಹೋದಾಗೆಲ್ಲಾ ಆ ನಗರ ಆಮೆಯಂತೆ ತನ್ನ ಕೈಕಾಲುಗಳನ್ನು ಒಳಕ್ಕೆಳೆದುಕೊಂಡು ಕೋಶದೊಳಗೆ ಬಂಧಿಯಾಗಿದೆ. ಮಿಂಚಿ, ಮಾಯವಾದ ಮಾಯಾಜಿಂಕೆಯನ್ನು ಕಾಯುತ್ತಿರುವ ಸೀತೆ, ಹುಡುಕಲು ಹೋದ ಶ್ರೀರಾಮಚಂದ್ರ ಮತ್ತು ಅದು ಮಾಯಾಜಿಂಕೆಯೇ ಅಂತ ಅನುಮಾನಿಸುವ ಲಕ್ಷ್ಮಣ- ಈ ಮೂವರೂ ಒಬ್ಬರೇ ಆದವರಂತೆ ನಾಲ್ಕೂ ಕೃತಿಗಳಲ್ಲೂ ಜೋಗಿ ಈ ಮಹಾನಗರದ ಆತ್ಮವನ್ನು ಹಿಡಿದೇ ತೀರುವ ಹಠದಿಂದ ಮಹಾನಗರದ ತುಂಬ ಅಕ್ಷರಪಥ ಹಿಡಿದು ನಡೆದೇ ಇದ್ದಾರೆ. ‘ಸಲಾಂ ಬೆಂಗಳೂರು’ ಕೂಡ ಅಂಥ ಒಂದು ನಿಲ್ದಾಣ. ಮತ್ತೆ ಇದೂ ನಿಗೂಢ ನಿಲ್ದಾಣ. ಕಡೆಗೂ ಚಿನ್ಮಯಿ ಸಿಕ್ಕರೆ ಪಾಮಜ್ಜಿ ತಪ್ಪಿಸಿಕೊಳ್ಳುತ್ತಾಳೆ, ಪಾಮಜ್ಜಿ ಸಿಕ್ಕರೆ ಪಾಮಜ್ಜಿಯ ಮೊಮ್ಮಗನ ಹುಡುಕಾಟ ಮುಗಿಯುವುದಿಲ್ಲ, ಮೊಮ್ಮಗ ಸಿಕ್ಕರೆ ಅವನಿಗೆ ಪಾಮಜ್ಜಿ ಸಿಗದೇ ಹೋದರೇ ಕ್ಷೇಮವೆಂಬ ಭಾವ ಇದ್ದರೂ ಇರಬಹುದು.
ನನಗೆ ಯಾವತ್ತೂ ಬೆಂಗಳೂರು ಎಂದರೆ ಇದೊಂದು ಇಮೇಜು ತುಂಬ ಕಾಡುತ್ತದೆ, ಕಂಗೆಡಿಸುತ್ತದೆ. ಒಂದು ಸಲ ನಾವು ಉದಯವಾಣಿಯಲ್ಲಿದ್ದಾಗ ಪಕ್ಕದ ಅಡಿಗಾಸ್ ಹೊಟೇಲ್ ಗೆ ಕಾಫಿ ಕುಡಿಯಲು ಹೋಗಿದ್ದೆವು. ಅದು ಬೇಸಗೆ ಸಮಯ. ಕಾಫಿ ಕುಡಿಯುತ್ತಾ ನಿಂತಿದ್ದಾಗ ಹಸುವೊಂದು ಅದೆಲ್ಲಿಂದನೋ ದಿಕ್ಕೆಟ್ಟು ಓಡಿ ಹೊಟೇಲಿಗೆ ನುಗ್ಗಿತು. ನಾವೆಲ್ಲಾ ಕಂಗಾಲಾಗಿ ಅದರಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದಾಗ ಇದೆಲ್ಲಾ ಆಗಲೇ ಅನುಭವವಿರುವ ಹೊಟೇಲ್ ಕಾರ್ಮಿಕ, ಅದನ್ನು ಹೊಡೆದು ಅಟ್ಟಿದ. ಅದು ರಸ್ತೆಗೆ ಧಾವಿಸಿತು, ಜೋರಾಗಿ ನುಗ್ಗುತ್ತಿರುವ ವಾಹನಗಳನ್ನು ಅಚಾಮಕ್ ಅಡ್ಡಗಟ್ಟಿತು, ಅವರೆಲ್ಲಾ ದಿಕ್ಕಾಪಾಲಾದಾಗ ಅದಕ್ಕೂ ತನಗೂ ಸಂಬಂಧಪಡದಂತೆ ಆ ಹಸು ಇನ್ನೊಂದು ದಿಕ್ಕು ಹಿಡಿದು ಓಡುತ್ತಾ ಕಾಣೆಯಾಯಿತು.
ಕಾರ್ಮಿಕನ ಹತ್ತಿರ ಏನಾಗಿದೆ ಅದಕ್ಕೆ ಅಂತ ಕೇಳಿದೆವು.
‘ಬಾಯಾರಿಕೆ ಸರ್’ ಅಂತ ಹೇಳಿ ಆ ಕೆಲಸಗಾರ ಯಾವುದೇ ಪಾಪಪ್ರಜ್ಞೆ ಇಲ್ಲದೇ ತನ್ನ ಕೆಲಸಕ್ಕೆ ಹೋದ.
ನಮಗೂ ಬಾಯಾರಿಕೆ.
ಓಡಿ ಬಂದಿದ್ದು ಯಾವ ದಿಕ್ಕು ಅಂತ ಗೊತ್ತು, ಏನಕ್ಕೆ ಓಡಿ ಬಂದೆವು ಅಂತಲೂ ಗೊತ್ತು, ಎಲ್ಲಿ ತಮ್ಮ ಬದುಕಿದೆ ಅಂತನೂ ಬಹುಶಃ ಗೊತ್ತು. ಆದರೆ ಅದು ಸಿಗುತ್ತದೆಂಬ ಭರವಸೆ ಇಲ್ಲ, ಹೋಗುವುದು ಯಾವ ದಿಕ್ಕಿಗೋ ಗೊತ್ತಿಲ್ಲ.
ಈ ಬೆಂಗಳೂರಿಗೆ ಬಾಯಾರಿಕೆ ನಿಲ್ಲುವುದಿಲ್ಲ, ಬಾಯಾರಿ ಬಂದವರ ಪ್ರವಾಹಕ್ಕೂ ತಡೆ ಇಲ್ಲ.
ಥ್ಯಾಂಕ್ಯೂ ಸರ್, ಪ್ರತಿ ಸಲ ಕಾದಂಬರಿ ಕೊಟ್ಟ ಮೇಲೂ ಅದೇನೋ ಹಿಂಗದ ಬಾಯಾರಿಕೆಯನ್ನು ನಮ್ಮೊಳಗೆ ಇರಿಸಿ ಹೋಗುತ್ತಿರುವುದಕ್ಕೆ.

No comments:

Post a Comment