stat Counter



Saturday, May 18, 2019

ಕೃಷ್ಣಮೂರ್ತಿ ಶ್ರೀನಾಥ --- ವೈ. ಎನ್. ಕೆ

ವೈ ಎನ್ ಕೆ
ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ, ಸಂಗೀತ, ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿದ್ದ ವೈ ಎನ್ ಕೆ ಯವರು 1926 ಮೇ 16ರಂದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಎಂಬ ಗ್ರಾಮದಲ್ಲಿ ಜನಿಸಿದರು. ತಮ್ಮ ಚುರುಕು ಬರಹಗಳಿಂದ PUNಡಿತರೆನಿಸಿದ್ದ ವೈ ಎನ್ ಕೆ ಅವರ ಪ್ರಾರಂಭಿಕ ಶಿಕ್ಷಣ ಹಳ್ಳಿಯಲ್ಲೇ ನೆರವೇರಿತು. ಮುಂದೆ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲು ಸೇರಿದ ಅವರು ಸೆಂಟ್ರಲ್ ಕಾಲೇಜಿನಿಂದ ಉನ್ನತ ದರ್ಜೆಯಲ್ಲಿ ಬಿ.ಎಸ್.ಸಿ ಪದವೀಧರರಾದರು.
ವೈ.ಎನ್. ಕೆ ಅವರು ತಮ್ಮ ಓದಿನ ದಿನಗಳಲ್ಲೇ ‘ಬಾಲಚಂದ್ರ’, ‘ಕುಸುಮ’, ‘ಕಿರಣ’ ಎಂಬ ಹೆಸರಿನ ಕೈಬರಹದ ಪತ್ರಿಕೆಗಳನ್ನು ಮೂಡಿಸುತ್ತಿದ್ದರು. ಮುಂದೆ ಅವರು ಆಯ್ದುಕೊಂಡದ್ದೂ ಪತ್ರಿಕೋದ್ಯಮವೇ ಆಗಿತ್ತು. ‘ದೇಶ ಬಂಧು’ ಮತ್ತು ‘ಛಾಯಾ’ ಮಾಸಪತ್ರಿಕೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ವೈ. ಎನ್. ಕೆ 1949ರ ವರ್ಷದಲ್ಲಿ ‘ಪ್ರಜಾವಾಣಿ’ ಬಳಗವನ್ನು ಕೂಡಿಕೊಂಡರು. ಉಪಸಂಪಾದಕ, ಸುದ್ಧಿಸಂಪಾದಕ, ಸಂಪಾದಕ ಹೀಗೆ ವಿವಿಧ ಹುದ್ಧೆಗಳನ್ನು ಪ್ರಜಾವಾಣಿಯಲ್ಲಿ ನಿರ್ವಹಿಸಿದ ವೈ.ಎನ್.ಕೆ ನಿವೃತ್ತರಾದ ಮೇಲೂ ಆ ಪತ್ರಿಕೆಗಾಗಿ ಒಂದು ವರ್ಷ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದರು. ಅವರ ‘WONDER-ಕಣ್ಣು’ ಮೊದಲು ಮೂಡಿ ಬರುತ್ತಿದ್ದುದು ‘ಉದಯವಾಣಿ’ಯಲ್ಲಿ. ಮುಂದೆ 1991ರಲ್ಲಿ ವೈ.ಎನ್.ಕೆ ‘ಕನ್ನಡ ಪ್ರಭ’ ಬಳಗವನ್ನು ಸೇರಿದರು.
ಪತ್ರಿಕೋದ್ಯಮವೂ ಸಾಹಿತ್ಯದ ಒಂದು ಭಾಗವೆಂದು ಭಾವಿಸಿದ್ದ ವೈ.ಎನ್. ಕೆ ಅವರು, ಪತ್ರಿಕೆಯಲ್ಲಿ ಹೊಸ ಹೊಸ ಅಂಕಣಗಳನ್ನು ಪ್ರಾರಂಭಿಸಿ ಪತ್ರಿಕೆಗಳಲ್ಲಿನ ಸಾಹಿತ್ಯಕ ಮೌಲ್ಯಗಳನ್ನು ಹೆಚ್ಚಿಸಿದರು. ಸಾಹಿತ್ಯ ಸೃಷ್ಟಿಯ ಜೊತೆಗೆ ನವ್ಯ ಸಾಹಿತ್ಯದ ನವ ಸಾಹಿತಿಗಳನ್ನೂ ಹುಟ್ಟುಹಾಕಿದರು. ನವ್ಯ ಕಾವ್ಯವನ್ನು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸಲು ಪ್ರಜಾವಾಣಿ ಪತ್ರಿಕೆಯಲ್ಲಿ ನವ್ಯ ಸಾಹಿತಿಗಳಿಗೆ ಅಗಾಧ ಬೆಂಬಲ ನೀಡಿದರು. ಹೊಸತನ್ನು ಗುರುತಿಸಿ ಪ್ರಚುರ ಪಡಿಸುವಲ್ಲಿ ಅವರು ಯಾವಾಗಲೂ ಮುಂದು.
ವೈ.ಎನ್.ಕೆ ಅವರಿಗೆ ಬರವಣಿಗೆಯ ಜೊತೆಗೆ ಛಾಯಾಗ್ರಹಣ, ಚಿತ್ರಕಲೆ, ಟೇಬಲ್ ಟೆನಿಸ್, ಗಾಲ್ಫ್, ಯೋಗ ಮುಂತಾದ ಅನೇಕ ಹವ್ಯಾಸಗಳಿದ್ದವು. ಶಬ್ದಗಳ ಜೊತೆಗೆ ಆಟವಾಡುವುದೆಂದರೆ ಅವರಿಗೆ ತುಂಬಾಖುಷಿ. ಇವರು ರಚಿಸಿದ ಕೃತಿಗಳು ಸುಮಾರು 28. ಜಾಕ್‌ಲಂಡನ್, ಮೊಮ್ಮಗಳ ಮುಯ್ಯಿ, ಮುಂದೇನು ರಾಮನ್, ಅಮೆರಿಕದ ಚಿತ್ರಕಲೆ ಸಂಕ್ಷಿಪ್ತ ಇತಿಹಾಸದಿಂದ ಹಿಡಿದು ವಂಡರ್‌ಲೋಕ ಸೃಷ್ಟಿಸಿದ WONDER-ಕಣ್ಣು, WONDER-ವಂಡರ್ WONDER-ಥಂಡರ್, WONDER-ಲ್ಯಾಂಪ್ ಹೀಗೆ ಪಟ್ಟಿ ಬೆಳೆಯುತ್ತದೆ. ಇವರ ಜ್ಞಾಪಕ ಶಕ್ತಿಯ ಬಗ್ಗೆ ಕೈಲಾಸಂ ಅವರಿಗೇ ಅಚ್ಚರಿ. ‘ನನ್ನ ಕೃತಿಗಳೆಲ್ಲಾ ಸುಟ್ಟುಹೋದರೂ ವೈ.ಎನ್.ಕೆ. ಎಂಬ ಹುಡುಗನಿದ್ದಾನಲ್ಲಾ’ ಎನ್ನುತ್ತಿದ್ದರಂತೆ.
ವೈ.ಎನ್.ಕೆ ಅಪೂರ್ವ ಸಂವೇದನಾಶೀಲ ಸ್ನೇಹ ಜೀವಿ. ಯು.ಆರ್‌. ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌, ಚಂದ್ರಶೇಖರ ಕಂಬಾರ - ಈ ಮೂರೂ ಜ್ಞಾನಪೀಠ ವಿಜೇತರಿಗೆ ಅವರು ಸ್ಫೂರ್ತಿಯಾಗಿದ್ದವರು. ಗೋಪಾಲಕೃಷ್ಣ ಅಡಿಗ, ಲಂಕೇಶ್‌, ರಾಮಚಂದ್ರ ಶರ್ಮ, ಸುಮತೀಂದ್ರ ನಾಡಿಗ, ಬಿ ಆರ್‌ ಲಕ್ಷ್ಮಣರಾವ್‌, ನಿಸಾರ್‌ ಅಹಮದ್‌ ಮುಂತಾದವರ ನವ್ಯ ಕವಿತೆ ಮತ್ತು ನವ್ಯ ಸಾಹಿತ್ಯಕ್ಕೆ ಅವರೊಬ್ಬ ಪ್ರೇರಕ ಶಕ್ತಿಯಂತಿದ್ದರು. ಹೊಸ ಅಲೆಯ ಚಿತ್ರ ನಿರ್ಮಾಣಕ್ಕೂ ಪ್ರಮುಖ ಕಾರಣಕರ್ತರವರು. ಸಂಸ್ಕಾರ, ವಂಶವೃಕ್ಷ, ಹಂಸಗೀತೆ, ಕನ್ನೇಶ್ವರ ರಾಮ, ಫಣಿಯಮ್ಮ ಈ ಚಿತ್ರಗಳ ಯಶಸ್ಸಿನ ಹಿಂದೆ ಅವರ ಪ್ರೇರಣೆಯಿತ್ತು. ವಿಷ್ಣುವರ್ಧನ್‌, ಶಂಕರ್‌ನಾಗ್‌, ಅನಂತ್‌ನಾಗ್‌, ಸಿ. ಆರ್‌. ಸಿಂಹ ಹೀಗೆ ಅನೇಕ ಸಿನಿಮಾನಟರ ಕಲಾಯಾತ್ರೆಗೆ ಪ್ರಾರಂಭ ಕೊಟ್ಟವರು ವೈ.ಎನ್.ಕೆ. ರಾಮಕೃಷ್ಣ ಹೆಗಡೆ, ಜೆ. ಎಚ್‌ ಪಟೇಲ್‌, ಗುಂಡೂರಾವ್‌, ಜೀವರಾಜ ಆಳ್ವಾ, ನಜೀರ್‌ ಸಾಬ್‌ ಹೀಗೆ ಹಲವಾರು ರಾಜಕಾರಣಿಗಳು ಸಲಹೆ ಕೇಳುತ್ತಿದ್ದುದು ವೈ.ಎನ್.ಕೆ ಅವರನ್ನು. ಮುಂದೆ ಕಂಡ ಹಲವಾರು ಪತ್ರಿಕೋದ್ಯಮಿಗಳು, ಪತ್ರಕರ್ತರು, ಅಂಕಣಕಾರರು ಇವರೆಲ್ಲಾ ರೂಪುಗೊಂಡಿದ್ದು ವೈ.ಎನ್.ಕೆ ಎಂಬ ಛತ್ರದಡಿಯಲ್ಲಿ. ಹಿರಿಕಿರಿಯರಿಗೆಲ್ಲ ಅವರು ಪ್ರೀತಿಯ ವೈ ಎನ್ ಕೆ. ಆಗಿದ್ದರು.
“ಎಪ್ಪತ್ತರ ದಶಕದಲ್ಲಿ ಕನ್ನಡ ಭಾಷೆ ಅನೇಕ ಹೊಸತನಗಳಿಗೆ ತೆರೆದುಕೊಂಡಿತು. ರಂಗಭೂಮಿ, ಸಿನಿಮಾ, ಸಾಹಿತ್ಯ, ಕಲೆ, ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲೂ ವಿಚಿತ್ರ ಹುಮ್ಮಸ್ಸು ಕಾಣಿಸಿಕೊಂಡಿತು. ಲೇಖಕರು ಹೊಸ ಥರ ಬರೆಯತೊಡಗಿದರು, ನಿರ್ದೇಶಕರು ರಂಗಭೂಮಿಯ ಹೊಸ ಸಾಧ್ಯತೆಗಳನ್ನು ಹುಡುಕಾಡುತ್ತಿದ್ದರು, ಸಿನಿಮಾ ಮಂದಿ ಈ ಹಳಸಲು ಸರಕು ಸಾಕಾಗಿ ಹೋಗಿ ಹೊಸ ಅಲೆಯ ಅನ್ವೇಷಣೆಯಲ್ಲಿದ್ದರು. ರಾಜಕಾರಣ ಕೂಡ ಬದಲಾವಣೆಯ ಹಾದಿಯಲ್ಲಿತ್ತು. ಈ ಎಲ್ಲಾ ಬದಲಾವಣೆಗಳಿಗೆ ಸಾಕ್ಷೀಪ್ರಜ್ಞೆ ಆಗಿದ್ದವರು ವೈಎನ್‌ಕೆ. ಸಿನಿಮಾದಿಂದ ಸಾಹಿತ್ಯದ ತನಕ, ಪತ್ರಿಕೋದ್ಯಮದಿಂದ ಪೇಂಟಿಂಗ್‌ ತನಕ, ಕುದುರೆ ರೇಸಿನಿಂದ ಬ್ಲಾಕ್‌ಲೇಬಲ್‌ ತನಕ ಅವರ ಹಬ್ಬಿದ ಆಸಕ್ತಿ, ಎಲ್ಲವನ್ನೂ ವಂಡರ್‌ಕಣ್ಣಿಂದ ನೋಡುವ ಪನ್‌-ಪಾಂಡಿತ್ಯ, ಚುರುಕು ಭಾಷೆ, ಪ್ರತಿಭೆಯನ್ನು ಥಟ್ಟನೆ ಗುರುತಿಸುವ ಶಕ್ತಿ- ಇವೆಲ್ಲವೂ ಇದ್ದ ಅಪೂರ್ವ ಕ್ರಿಯಾಶೀಲ ವ್ಯಕ್ತಿತ್ವ ವೈ.ಎನ್.ಕೆ ಅವರದು” ಎನ್ನುತ್ತಾರೆ ಜೋಗಿ.
ಪತ್ರಿಕೋದ್ಯಮದ ಅಸಾಧಾರಣ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡಮಿ ಪ್ರಶಸ್ತಿ, ಹಾಸ್ಯ ಸಂಕಲನ-ಹಾಸ್ಯಬರಹಗಳಿಗಾಗಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ವೈ.ಎನ್.ಕೆ ಅವರನ್ನು ಅರಸಿ ಬಂದಿದ್ದವು.
ವೈ.ಎನ್. ಕೆ ಅವರು 1999ರ ವರ್ಷದ ಅಕ್ಟೋಬರ್ 16ರಂದು ನ್ಯೂಯಾರ್ಕಿನಿಂದ ಮುಂಬಯಿಗೆ ಬರುವ ದಾರಿಯಲ್ಲಿ ವಿಮಾನದಲ್ಲೇ ಹೃದಯ ಸ್ಥಂಭನಕ್ಕೊಳಗಾಗಿ ಈ ಲೋಕವನ್ನಗಲಿದರು.
2003ರ ವರ್ಷದಲ್ಲಿ ವಿಶ್ವೇಶ್ವರ ಭಟ್ಟರು ‘ಬೆಸ್ಟ್ ಆಫ್ ವಂಡರ್ಸ್‌’ ಕೃತಿಯನ್ನು ಸಂಪಾದಿಸಿರುವುದರ ಜೊತೆಗೆ ‘ನನ್ನ ಪ್ರೀತಿಯ ವೈ.ಎನ್.ಕೆ.’ ಕೃತಿ ಬರೆದು ಗೌರವ ತೋರಿದ್ದಾರ. ಈ ಮಹಾನ್ ವ್ಯಕ್ತಿತ್ವ ವೈ.ಎನ್.ಕೆ ಅವರ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನ.
ಮಾಹಿತಿ ಕೃಪೆ: ಕಣಜ ಮತ್ತು ಜೋಗಿ ಅವರ ವೈ.ಎನ್.ಕೆ ಅವರ ಸ್ಮರಣೆಯ ಬರಹ

No comments:

Post a Comment