'ಪಾಚಿ ಕಟ್ಟಿದ ಪಾಗಾರ'
- ಮುರಳೀಧರ ಉಪಾಧ್ಯ ಹಿರಿಯಡಕ
ಕುಂದಾಪುರದ ಶ್ರೀಮತಿ ಮಿತ್ರಾ ವೆಂಕಟ್ರಾಜ್ ಈಗ ಮುಂಬೈ ಮಹಾನಗರದಲ್ಲಿ ನೆಲೆಸಿರುವ ಕನ್ನಡ ಲೇಖಕಿ. 'ರುಕುಮಾಯಿ' 'ಹಕ್ಕಿ ಮತ್ತು ಅವಳು' ಇವರ ಕಥಾಸಂಕಲನಗಳು. 2010ರಲ್ಲಿ ಮನೋಹರ ಗ್ರಂಥಮಾಲೆ ಪ್ರಕಟಿಸಿರುವ ತನ್ನ ಚೊಚ್ಚಲ ಕಾದಂಬರಿ ಕುರಿತು ಲೇಖಕಿ, ಸುಮಾರು ಏಳೆಂಟು ವರ್ಷಗಳಿಂದ ನನ್ನ ಈ ಕಾದಂಬರಿಯ ಬರಹವು ಸಾಗಿಬಂದಿದೆ ಎಂದಿದ್ದಾರೆ.
ಪಾರಳ ಕತೆಯಿಂದ ಆರಂಭವಾಗುವ ಮೊದಲ ಭಾಗದಲ್ಲಿ 15 ಅಧ್ಯಾಯಗಳು. ಕಮಲಿಯ ಕತೆಯಿಂದ ಆರಂಭವಾಗುವ ಎರಡನೆಯ ಭಾಗದಲ್ಲಿ 15 ಅಧ್ಯಾಯಗಳು ಒಟ್ಟು 30 ಅಧ್ಯಾಯಗಳ, 369 ಪುಟಗಳ ಕಾದಂಬರಿ ಇದು. ಕನರ್ಾಟಕದ ಕರಾವಳಿಯ ಬಂಟ್ವಾಳ ತಾಲೂಕಿನ, ಉಡುಪಿ ತಾಲೂಕಿನ ಹಳ್ಳಿಗಳು ಇಲ್ಲಿನ ಕ್ರಿಯಾಕೇಂದ್ರಗಳು. 1920ರಿಂದ 1980ರ ವರೆಗಿನ ಘಟನೆಗಳ ಉಲ್ಲೇಖ ಈ ಕಾದಂಬರಿಯಲ್ಲಿದೆ.
ಪಾರಳ ತಂದೆ ಅಣ್ಣಪ್ಪಯ್ಯ 1920ರ ನೆರೆಗೆ ಬಲಿಯಾಗುತ್ತಾರೆ. ಅಧ್ಯಾಪಕ ಗೋಪಾಲನ ಪತ್ನಿ ಪಾರ, ಶಿವರಾಮ ಕಾರಂತರ 'ಕಿಸಾಗೌತಮಿ' ಗೀತರೂಪಕದಲ್ಲಿ ಕಿಸಾಗೌತಮಿಯ ಪಾತ್ರ ಮಾಡುತ್ತಾಳೆ. ಗೋಪಾಲನ ಗೆಳೆಯ ಸದಾನಂದ, ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾಗಿದ್ದ ಸಮಾಜ ಸುಧಾರಣೆಯ ಚಳುವಳಿಯಲ್ಲಿ ಸಕ್ರಿಯನಾಗಿದ್ದಾನೆ. 1947ರ ಸ್ವಾತಂತ್ರ್ಯ ಕಳೆದು ಎರಡು ವಾರದಲ್ಲಿ ಗೋಪಾಲ ಹಾವು ಕಚ್ಚಿ ಸಾಯುತ್ತಾನೆ. ಕಾದಂಬರಿಯ ಮೊದಲ ಭಾಗದ ಕೊನೆಯಲ್ಲಿ 1950ರ ದಶಕದ ಕೇರಳದ ಕಮ್ಯೂನಿಸ್ಟ್ ಸರಕಾರ ಹಾಗೂ 'ಉಳುವವನೇ ಹೊಲದೊಡೆಯ' ಘೋಷಣೆಯ ಪ್ರಸ್ತಾಪವಿದೆ. ಕೆಮ್ಮಾಡಿ ಮನೆತನದ ಒಕ್ಕಲಿನವನ ಮಗ ಗೋವಿಂದನ ಆಧುನಿಕ ಶಿಕ್ಷಣದ ಕನಸಿಗೆ ಕೇರಳದ ನಾರಾಯಣ ಗುರುಗಳ ಬೋಧನೆ ಪ್ರೇರಣೆ ನೀಡುತ್ತದೆ. ಕೆಮ್ಮಾಡಿ ಮನೆಯ ಜಮೀನ್ದಾರ ಮಾಧವ ಕರ್ನಾಟಕದ ಭೂಸುಧಾರಣೆಯ ಶಾಸನ ಜ್ಯಾರಿಯಾಗುವುದಕ್ಕೆ ಎರಡು ವರ್ಷ ಮೊದಲು ಸಾಯುತ್ತಾನೆ. ಶ್ಯಾನುಭಾಗರು, ಕೃಷ್ಣದೇವರಾಯರಿಗೆ ಹೇಳುವ ಒಂದು ಮಾತನ್ನು ಗಮನಿಸಬೇಕು - "ನಿಮ್ಮ ಕಾಲವೇ ಬೇರೆ. ಈಗಿನ ನಮೂನೆಯೇ ಬೇರೆ. ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ನೀತಿ ಎಂದು ಅಂದು ಶ್ರೀಕೃಷ್ಣ ಪರಮಾತ್ಮ ಹೇಳಿದ್ದಲ್ಲಯೆ......".
'ಪಾಚಿ ಕಟ್ಟಿದ ಪಾಗಾರ' ಕಾದಂಬರಿಯ ವಸ್ತುವನ್ನು ಕುರಿತು ಲೇಖಕಿ ಮಿತ್ರಾ ವೆಂಕಟ್ರಾಜ್, "ಅಣ್ಣ ತಮ್ಮಂದಿರ ನಡುವಣ ಪ್ರೀತಿ-ದ್ವೇಷಗಳ ತಿಕ್ಕಾಟವೇ ಕತೆಯ ಮೂಲವಸ್ತುವಾದರೂ, ಪಾರ ಎಂಬವಳ ಕತೆಯೂ, ಕಾದಂಬರಿಯ ಉದ್ದಕ್ಕೆಲ್ಲ ಹರಿದುಕೊಂಡು ಅದಕ್ಕೆ ಇನ್ನೊಂದು ಆಯಾಮವನ್ನು ಕೊಡುತ್ತದೆ. ಹಾಗೆಯೇ ಇದು, ಪಾರ, ಲಕ್ಷ್ಮೀದೇವಿ ಅವಳ ಸೊಸೆ ಕಮಲಿ - ಈ ಮೂವರು ಹೆಂಗಸರ ಬದುಕಿನ ಹೋರಾಟದ ಕತೆಯೂ ಹೌದು" ಎಂದಿದ್ದಾರೆ.
'ಪಾಚಿ ಕಟ್ಟಿದ ಪಾಗಾರ'ವನ್ನು ಧನಿ-ಒಕ್ಕಲು ಪದ್ಧತಿಯ ಅವಸಾನದ ಕಾಲದ ಕತೆಯಾಗಿ ನೋಡಿದಾಗ, ಸಾಮಾಜಿಕ ಪರಿವರ್ತನೆಯ ಸೂಕ್ಷ್ಮಗಳು ಇಲ್ಲಿ ಕಲಾತ್ಮಕವಾಗಿ ಚಿತ್ರಣಗೊಂಡಿರುವುದು ಕಾಣಿಸುತ್ತದೆ. ಕೃಷ್ಣದೇವರಾಯರಲ್ಲಿ ಧನಿಗಳೊಬ್ಬರ ಒಳ್ಳೆಯತನ ಕಾಣಿಸಿದರೆ, ಅವರ ಮಗ ಮಾಧವನಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯ ಕಾಣಿಸುತ್ತದೆ. ಕೃಷ್ಣದೇವರಾಯರು ತನ್ನ ಒಕ್ಕಲಿನವನಾದ ಮಂಜನ ಮಗ ಗೋವಿಂದನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾರೆ. ತನ್ನ ಮಗ ಮಾಧವ ಮದುವೆಯಾಗಲು ನಿರಾಕರಿಸಿದಾಗ, ಕೃಷ್ಣದೇವರಾಯರು ಮದುಮಗಳ ತಂದೆ ನಾಗಪ್ಪಯ್ಯನವರಲ್ಲಿ ಕ್ಷಮೆಯಾಚಿಸುತ್ತಾರೆ. ಪಾರಳಿಗೆ ಬೇರೆ ಗಂಡು ಹುಡುಕಿ ಅದೇ ಮಂಟಪದಲ್ಲಿ ಒಂದು ವಾರದೊಳಗೆ ಮದುವೆ ಮಾಡಿಸುತ್ತಾರೆ.
ಮಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ತನ್ನ ಮಗ, ಕಾಲೇಜು ಪ್ರಾಧ್ಯಾಪಕರ ಮೇಲೆ ಕೈಮಾಡಿದ ಎಂಬ ಸುದ್ದಿ ಕೇಳಿದ ಕೃಷ್ಣದೇವರಾಯರು, 'ತನ್ನ ಮಗ ಸತ್ತ' ಎಂದು ಉದ್ಗರಿಸುತ್ತಾರೆ. ತಮ್ಮ ಸೀತಾರಾಮನ ಕಣ್ಣಿಗೆ ಅಣ್ಣ ಮಾಧವ 'ಹರಿಕತೆ ದಾಸರು ಬಣ್ಣಿಸುವ ಉಗ್ರ ನರಸಿಂಹನಾಗಿ' ಕಾಣಿಸುತ್ತಾನೆ. ಮಾಧವನ ಕ್ರೌರ್ಯಕ್ಕೆ ಸೋಮ, ತನಿಯರಂಥ ಒಕ್ಕಲುಗಳು ಬಲಿಯಾಗುತ್ತಾರೆ. ಸೋಮನ ಗುಡಿಸಲು ಬೆಂಕಿಗೆ ಆಹುತಿಯಾಗುತ್ತದೆ. ತನಿಯ ನಾಪತ್ತೆಯಾಗುತ್ತಾನೆ. ಮಾಧವನ ಆಶ್ರಯದಲ್ಲಿದ್ದ ವಿಧವೆ ಪಾರಳ ಮಗ ಲಚ್ಚಣ (ಲಕ್ಷ್ಮೀನಾರಾಯಣ) ಜಮೀನ್ದಾರರ ವಿರುದ್ಧ ಕಮ್ಯುನಿಸ್ಟರು
ನಡೆಸುತ್ತಿದ್ದ ಗುಪ್ತ ಸಭೆಗಳಲ್ಲಿ ಭಾಗವಹಿಸುತ್ತಿದ್ದ. ಅವನ ಕೊಲೆಯ ಹಿಂದೆ 'ಹುಲ್ಲೆ ಮೊಗದ ಹುಲಿ'ಯಂತಿರುವ ಮಾಧವನ ಕೈವಾಡ ಕಾಣಿಸುತ್ತದೆ. ತನ್ನ ದುಶ್ಚಟಗಳಿಗೆ ಒಡನಾಡಿಯಾಗಿದ್ದ ಸೋದರಮಾವ ಅನಂತಯ್ಯನನ್ನು ಕೂಡ ಮಾಧವ
ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರಗೆ ಅಟ್ಟುತ್ತಾನೆ; ಪಾರಳಿಗೆ ಅಶನಾರ್ಥ ಕೊಡಿಸಲಿಕ್ಕಾಗಿ ಗೂಂಡಾಗಳನ್ನು ಬಳಸುತ್ತಾನೆ. ಪಾರಳಿಂದ ಹಿಟ್ಲರನ ಕತೆ ಕೇಳಿದ ಲಕ್ಷ್ಮೀದೇವಿ 'ಪ್ರಪಂಚದಲ್ಲಿ ಇಂಥ ರಾಕ್ಷಸರೂ ಇದ್ದಾರೆಯೇ' ಎಂದು ಆಶ್ಚರ್ಯಪಡುತ್ತಾಳೆ. ತನ್ನ ಮಗನೇನೂ 'ಕಮ್ಮಿ ಹಿಟ್ಲರ್ ಅಲ್ಲ' ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾಳೆ. 'ಕೆಮ್ಮಾಡಿ ಮನೆಯಲ್ಲಿ ಜೋರಾಗಿ ಶ್ವಾಸ ಬಿಡುಕ್ಕಾಗ' ಎಂಬ ಕಮಲಿಯ ಸೋದರರಿಯರ ತಮಾಷೆಯ ಮಾತು ಸತ್ಯಸಂಗತಿಯಾಗಿದೆ. 'ಹಸನಬ್ಬನನ್ನು ನಾನೇ ಕೊಲೆಮಾಡಿಸಿದೆ' ಎಂದು ಸುಳ್ಳು ಹೇಳುವ ಮಾಧವ ದ್ವೇಷ, ದರ್ಪ, ಹಿಂಸಾರತಿಯಿಂದ ದುರಂತದತ್ತ ಸಾಗುತ್ತಾನೆ.
ಇಪ್ಪತ್ತನೆಯ ಶತಮಾನದ ಕರಾವಳಿ ಕರ್ನಾಟಕದ ಮಹಿಳೆಯರ ಸ್ಥಿತಿ-ಗತಿಯನ್ನು 'ಪಾಚಿ ಕಟ್ಟಿದ ಪಾಗಾರ' ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ನರ್ಸಪ್ಪಯ್ಯನ ಮೊದಲ ಹೆಂಡತಿ ಚೆನ್ನಮ್ಮ ಎರಡು ಹೆಣ್ಣು ಮಕ್ಕಳ ತಾಯಿ. ತನ್ನ ಗಂಡನ ವಂಶ ಬೆಳೆಸಲು ಗಂಡುಮಕ್ಕಳು ಬೇಕೆಂದು ಅವಳು ತಾನೇ ಗಂಡನಿಗೆ ಸೀತಮ್ಮನೊಡನೆ ಎರಡನೆ ಮದುವೆ ಮಾಡಿಸುತ್ತಾಳೆ. ಇಪ್ಪತ್ತು ವರ್ಷ ಪ್ರಾಯದ ವಿಧವೆ ಸೀತಮ್ಮ ಆಸ್ತಿಯ ಮೇಲ್ವಿಚಾರಣೆ ನೋಡಿಕೊಂಡು, ಗಂಡ ಮಾಡಿಟ್ಟ ಸಾಲ ತೀರಿಸುತ್ತಾಳೆ. ಕೃಷ್ಣದೇವರಾಯನ ಹೆಂಡತಿ ಹೆರುವ ಯಂತ್ರದಂತೆ ಜೀವಿಸುತ್ತಾಳೆ. ಶಂಕರಿ, ಮಾಧವ, ವಿಶಾಲು, ಜಲಜೆ - ಈ ನಾಲ್ವರು ಮಕ್ಕಳ ನಂತರ ಮುಂದೆ ಅವಳ ಏಳು ಮಕ್ಕಳು ಸಾಯುತ್ತಾರೆ. ಶಾಂಭವಿ ಹನ್ನೆರಡನೆಯವಳು. ದೊಡ್ಡ ಮಗಳು ಎರಡನೇ ಹೆರಿಗೆಗೆ ಬಂದಾಗ ಲಕ್ಷ್ಮೀದೇವಿಗೆ ಹದಿನಾಲ್ಕನೆಯ ಹೆರಿಗೆಯಾಗುತ್ತದೆ. ಆ ಮಗುವೇ ಸೀತಾರಾಮ.
ಪಾರು-ಗೋಪಾಲ ದಂಪತಿಗಳು ರಾತ್ರಿ ಕೆರೆಕಟ್ಟೆಗೆ ವಾಯುವಿಹಾರಕ್ಕೆ ಹೋಗುತ್ತಾರೆ. ಆಗ ಗೋಪಾಲನ ದೊಡ್ಡಣ್ಣ ನಾರಾಯಣನು ಅವನನ್ನು ಕರೆದು" ಮಾಣಿ, ಗೋಪಾಲ ಇದು ಚಂದ ಕಾಣ್ತಿಲ್ಯ. ಹೆಂಡ್ತಿಗೆ ಹಲ್ಲೆಲ್ಲ ಲೆಕ್ಕ ಮಾಡೂಕೆ ಬಿಡ್ತೆ. ಯಾವ್ಯಾವುದು ಎಲ್ಲಿರ್ಕೊ ಅಲ್ಲೆ ಇರ್ಕು. ಕಾಲಿಗೆ ಹಾಗೂ ಚಪ್ಪಲಿ ತಲೆಮೇಲೆ ಹಾಕ್ಕಣುಕಾಗ. ಕಂಡವ್ರು ನೆಗಾಡ್ತೊ" ಎಂದುಬಿಟ್ಟ. ಆ ನಾಲ್ವತ್ತರ ದಶಕದಲ್ಲಿ ಕೋಟದ ಆಸುಪಾಸಿನಲ್ಲೆಲ್ಲೂ ಹೀಗೆ ಗಂಡ-ಹೆಂಡಿರು ಜೊತೆಯಲ್ಲಿ ತಿರುಗಾಡುವುದಾಗಲೇ, ಹರಟುವುದಾಗಲೀ ಇದ್ದಿರಲಿಲ್ಲ. (ಪುಟ-55)
ವಿಧವೆ ಪಾರಳಿಗೆ ಅಶನಾರ್ಥ ಕೊಡಲು ಅವಳ ಭಾವಂದಿರು ನಿರಾಕರಿಸುತ್ತಾರೆ. ಪಾರ ಪಾತ್ರೆ ಮಾರಿ 5 ರೂಪಾಯಿ
ಪಡದು ಒಂದು ಕೊಟ್ಟಿಗೆಯಲ್ಲಿ ಬದುಕುತ್ತಾಳೆ. ಮೂರು ಮಕ್ಕಳನ್ನು ಅನಾಥಾಶ್ರಮಕ್ಕೆ ಕಳಿಸುತ್ತಾಳೆ. ಪಾರ, ಕಮಲಿಯಂಥ ಹೆಣ್ಣುಮಕ್ಕಳ ಸ್ವಾಭಿಮಾನ, ಜೀವನೋತ್ಸಾಹ ಈ ಕಾದಂಬರಿಯ ದೃಷ್ಟಿಕೇಂದ್ರ. ಆದರೆ ಶಂಕರಿ ಅವಿಭಕ್ತ ಕುಟುಂಬದ ಅಸೂಯೆ, ದ್ವೇಷಗಳಿಗೆ ಬಲಿಯಾಗುತ್ತಾಳೆ, ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಮಿತ್ರಾ ವೆಂಕಟ್ರಾಜರು ಕೋಟ ಕನ್ನಡದ ಎರಡು ಪ್ರಭೇದಗಳನ್ನು ಇಲ್ಲಿ ಬಳಸಿದ್ದಾರೆ. ಬಂಟ್ವಾಳದ ಆಸುಪಾಸಿನ, ತುಳುವಿನ ಒಡನಾಟದಲ್ಲಿರುವ ಕೋಟ ಕನ್ನಡ ಈ ಕಾದಂಬರಿಗೆ ಪ್ರಾದೇಶಿಕ ಚೆಲುವನ್ನು ನೀಡಿದೆ. ಗುಲ್ವಾಡಿ ವೆಂಟರಾಯರು ತನ್ನ 'ಇಂದಿರಾಬಾಯಿ' ಕಾದಂಬರಿಯಲ್ಲಿ ಬಳಸಿದ್ದ ಕೊಂಕಣಿ, ತುಳು ಒಡನಾಟದ ಕನ್ನಡ ಬಳಕೆಯನ್ನು ಈ ಲೇಖಕಿ ಸೃಜನಶೀಲವಾಗಿ ಮುನ್ನಡೆಸಿದ್ದಾರೆ. ಮೀನಾಕ್ಷಿ ತನ್ನ ಮಗಳು ಪಾರಳನ್ನು ಸಾಕಿದ ರೀತಿಯನ್ನು ಲೇಖಕಿ ವಿವರಿಸುವುದು ಹೀಗೆ -
"ಮೀನಾಕ್ಷಿ ತನ್ನ ಮಗಳನ್ನು ಮುಚ್ಚಟೆಯಿಂದ ಸಾಕಿ ದೊಡ್ಡದು ಮಾಡಿದಳೆನ್ನಬೇಕು. ಒಮ್ಮೆ ಅರಸಿನ ಕುಟ್ಟಿ ಪುಡಿಮಾಡಿ, ಅದಕ್ಕೆ ಕೆನೆ ಬೆರೆಸಿ, ಮಗಳ ಮುಖ ಮೈಗೆ ಹಚ್ಚಿ ಸ್ನಾನ ಮಾಡಿಸಿದರೆ, ಇನ್ನೊಮ್ಮೆ ತೆಂಗಿನ ಹಾಲನ್ನು ಸವರಿ ಅವಳ ಮೈ ತೊಳೆಯುತ್ತಿದ್ದಳು. ಮಗಳ ಕೂದಲಿಗಂತೂ ಮೀನಾಕ್ಷಿ ಮಾಡದ ಉಪಚಾರವಿರಲಿಲ್ಲ. ದಾಸವಾಳದ ಹೂವನ್ನು ಅರೆದು, ತಲೆಗೆ ಹಚ್ಚಿ, ಸೀಗೆಕಾಯಿ ಉಜ್ಜಿ, ಕೂದಲು ತೊಳೆಯುತ್ತಿದ್ದಳು. ನಸು ಹೊಗೆಯಲ್ಲಿ ಕೂದಲು ಒಣಗಿಸಿ, ಒಂದೊಂದೇ ಕೂದಲನ್ನು ಜಡೆ ಕಟ್ಟುತ್ತಿದ್ದಳು. ಆರೈಕೆ ಅನುಪಾನಗಳು ಸಾಕಷ್ಟಿದ್ದರೂ ಒಂದು ಮುದ್ದು ಮಾತಿನಿಂದ ಮೀನಾಕ್ಷಿ ಮಗಳನ್ನು ಕರೆದವಳಲ್ಲ. ಕುಳಿತುಕೊಂಡು ಪ್ರೀತಿಯಿಂದ ಮಗಳೊಡನೆ ಸುಖ ದುಃಖಗಳನ್ನು ಹಂಚಿಕೊಂಡವಳಲ್ಲ. ನಲ್ಮೆಯ ನುಡಿಗಳಿಗಿಂತ ಹೆಚ್ಚು ಬೈಗುಳಗಳನ್ನೇ ಕೇಳಿ ಪಾರಳು ಬೆಳೆದದ್ದೆಂದರೆ ಸರಿಯಾದೀತೇನೋ. ಕೆಲವೊಮ್ಮೆ ಮೀನಾಕ್ಷಿ ಏನೇನೋ ನೆನಪಾಗಿ, ಮಗಳ ತಲೆಗೆ ನೀರು ಹುಯ್ಯತ್ತಿದ್ದಂತೆ ಅನವಶ್ಯಕವಾಗಿ, ಚೊಂಬಿನಿಂದಲೇ ಅವಳ ತಲೆಗೆ ಕುಟ್ಟಿ, 'ಅಯ್ಯೋ ಅಪ್ಪನ್ನ ತಿಂದು ಹುಟ್ಟಿದವಳೆ' ಎಂದು ಕಣ್ಣೀರು ತೆಗೆಸುವುದೂ ಇತ್ತು.
ಈ ಕಾದಂಬರಿಯಲ್ಲಿರುವ 'ಹೆಣೆ' ಎಂಬ ಸಂಬೋಧನೆ ಮುದ್ರಣದೋಷವಲ್ಲ. 'ಹೆಣ್ಣೆ', 'ಹೆಣೆ' ಎಂಬ ಜಾತಿಸೂಚಕ ವ್ಯತ್ಯಾಸವಿರುವ ಎರಡು ಪ್ರಯೋಗಗಳೂ ಕೋಟ-ಕನ್ನಡದಲ್ಲಿವೆ.
'ಪಾಚಿ ಕಟ್ಟಿದ ಪಾಗಾರ' ಎಂಬ ಶೀರ್ಷಿಕೆ, ಕೆಮ್ಮಾಡಿ ಮನೆಯಲ್ಲಿ, ಧನಿಗಳ ಮನೆಯಲ್ಲಿರುವ ಪಾಚಿಕಟ್ಟಿದ ಮನಸ್ಸುಗಳನ್ನು ಸೂಚಿಸುವಂತಿದೆ. ಈ 'ಪಾಚಿ ಕಟ್ಟಿದ ಪಾಗಾರ'ದ ಒಳಗೆ ಕಮಲಿ, ಸೀತಾರಾಮರು ಗೃಹಬಂಧನದಲ್ಲಿದ್ದಂತೆ ಸಂಕಟಪಡುತ್ತಾರೆ. ಕಾದಂಬರಿಯಲ್ಲಿ ಪಾಚಿಯ ಹಸಿರುಬಣ್ಣ ಹಿನ್ನೆಲೆಗೆ ಸರಿದು ಕ್ರಾಂತಿ-ಪರಿವರ್ತನೆಯ ಸಂಕೇತವಾದ ಕೆಂಪು ಮುನ್ನೆಲೆಗೆ ಬರುತ್ತದೆ.
ಶಿವರಾಮ ಕಾರಂತರ 'ಧರ್ಮರಾಯನ ಸಂಸಾರ' ಸ್ವಾತಂತ್ರ್ಯಪೂರ್ವದ ಕರಾವಳಿಯ ಜಮೀನ್ದಾರರ ಕ್ರೌರ್ಯ, ಹಿಂಸಾರತಿ, ವಿಕೃತ ಲೈಂಗಿಕ ಜೀವನವನ್ನು ಚಿತ್ರಿಸುವ ಮಹತ್ವದ ಕಾದಂಬರಿ. 'ಪಾಚಿ ಕಟ್ಟಿದ ಪಾಗಾರ'ದ ಮಾಧವ, 'ಧರ್ಮರಾಯನ ಸಂಸಾರ'ದ ಮಹಾಬಲಯ್ಯನನ್ನು ನೆನಪಿಸುತ್ತಾನೆ. ಮಹಾಬಲಯ್ಯನ ಲೈಂಗಿಕ ದೌರ್ಬಲ್ಯಗಳು ಅವನ ದುರಂತಕ್ಕೆ ಕಾರಣವಾಗುತ್ತವೆ. ಆದರೆ 'ಪಾಚಿ ಕಟ್ಟಿದ ಪಾಗಾರ'ದ ಮಾಧವನ ಅವನತಿಗೆ ಕಾರಣ 'ಭೂ ಸುಧಾರಣೆಯ' ಚಳುವಳಿ. ಅವಸಾನದ ಅಂಚಿನಲ್ಲಿದ್ದ ಧನಿ-ಒಕ್ಕಲು ಪದ್ಧತಿಯ ಆತ್ಮೀಯ, ಕಲಾತ್ಮಕ ಚಿತ್ರಣವನ್ನು ಮಿತ್ರಾ ವೆಂಕಟ್ರಾಜರು ನೀಡಿದ್ದಾರೆ (ಈ ಕಾದಂಬರಿಯ ಹಿನ್ನೆಲೆಯಲ್ಲಿರುವ ಕರ್ನಾಟಕದಭೂಸುಧಾರಣೆಯನ್ನು ಕುರಿತ 'ದಕ್ಷಿಣ ಕನ್ನಡದಲ್ಲಿ ಭೂಸುಧಾರಣೆ' ಎಂಬ ಸಂಶೋಧನಾತ್ಮಕ ಲೇಖನವೊಂದನ್ನು ಜಿ. ರಾಜಶೇಖರ ಬರೆದಿದ್ದಾರೆ).
ಕರಾವಳಿ ಕರ್ನಾಟಕದ ಇಪ್ಪತ್ತನೆಯ ಶತಮಾನದ ಸಾಮಾಜಿಕ, ಕೌಟುಂಬಿಕ, ರಾಜಕೀಯ ಪರಿವರ್ತನೆಯನ್ನು ಸೂಕ್ಷ್ಮ ಒಳನೋಟಗಳೊಂದಿಗೆ ಚಿತ್ರಿಸುವ ಕಾದಂಬರಿ - 'ಪಾಚಿ ಕಟ್ಟಿದ ಪಾಗಾರ'. ಈ ಕಾದಂಬರಿಗೆ ಲೇಖಕಿಯ ಮೊದಲ ಕಾದಂಬರಿ ಎಂದು ರಿಯಾಯತಿ ಅಂಕ ನೀಡಬೇಕಾಗಿಲ್ಲ. ಸಣ್ಣ ಕತೆಯಿಂದ ಕಾದಂಬರಿ ಪ್ರಕಾರಕ್ಕೆ ಜಿಗಿದಿರುವ ಲೇಖಕಿಈ ಕ್ಷೇತ್ರಕ್ಕೆ ಹೊಸಬರೆಂದು ಎಲ್ಲೂ ಅನ್ನಿಸುವುದಿಲ್ಲ. ಮಿತ್ರಾ ವೆಂಕಟರಾಜ್ ತನ್ನ ಪ್ರಬುದ್ಧ ಜೀವನಾನುಭವದಿಂದ ಬರೆದಿರುವ ಈ ಕಾದಂಬರಿ, ಇಪ್ಪತ್ತೊಂದನೆಯ ಶತಮಾನದ, ಮೊದಲ ದಶಕದ ಕನ್ನಡದ ಅತ್ಯುತ್ತಮ ಕಾದಂಬರಿಗಳ ಸಾಲಿಗೆ ಸೇರುತ್ತದೆ.
'ಪಾಚಿ ಕಟ್ಟಿದ ಪಾಗಾರ'
- ಮಿತ್ರಾ ವೆಂಕಟ್ರಾಜ್
ಪ್ರ - ಮನೋಹರ ಗ್ರಂಥಮಾಲಾ, ಧಾರವಾಡ
ಮೊದಲ ಮುದ್ರಣ - 2010
No comments:
Post a Comment