stat Counter



Friday, August 26, 2011

ಕಲಬೆರಕೆಯ ಹುಡುಗನೂ ಶಾಂತಸಾಗರದ ಹುಡುಗಿಯೂ (ಡೊಂಬಯ್ಯ ಇಡ್ಕಿದು)

'ಕಲಬೆರಕೆಯ ಹುಡುಗ'ನ ಕನಸುಗಳು 
 (ಪುಸ್ತಕ ವಿಮರ್ಶೆ)
                                                   - ಮುರಳೀಧರ ಉಪಾಧ್ಯ ಹಿರಿಯಡಕ

1

       
          ಪುಸ್ತಕದಂಗಡಿಗಳಿಂದ ಕಾವ್ಯ ನಾಪತ್ತೆಯಾಗುತ್ತಿದೆ ಎಂದೊಡನೆ ಕಾವ್ಯ ಅಕಾಲಿಕವಾಗಿದೆ ಎಂದು ಅರ್ಥವಲ್ಲ. ಕವಿಗಳಿಗೆ ಕಾವ್ಯ ಅಡಗು ತಾಣ. ಕಾವ್ಯಕ್ಕೆ ಯಾವುದು ಅಡಗುತಾಣ ಎಂದು ನಾವು ಹುಡುಕಬೇಕಾಗಿದೆ. ಈ ಹುಡುಕಾಟ 'ಗೂಗಲ್' 'ಯಾಹೂ' ಹುಡುಕಾಟದಷ್ಟು ಸುಲಭವಲ್ಲ. ಬೇಂದ್ರೆಯವರ 'ಜೋಗಿ' ಕವನದಲ್ಲಿ ಊರ ಹೊರಗಿನ ತೋಪಿನಲ್ಲಿ ಒಂದು ಮಾವಿನಮರ. ಅದರ ಕೆಳಗೆ ಹುತ್ತ. ಆ ಹುತ್ತದಲ್ಲಿ ಒಂದು ಏಳು ಹೆಡೆಯ ಹಾವು. ಆ ಮಾವಿನ ಮರದಲ್ಲಿ ಒಂದು ಕೋಗಿಲೆ ಕೂಗುತ್ತಿದೆ. ಬೇಂದ್ರೆಯವರ ಕವನ ಕಾವ್ಯದ ಇಂದಿನ ಸ್ಥಿತಿಯ ರೂಪಕ. ನಮ್ಮ ಮನೆಯ ಬಳಿ ಮಾವಿನಮರವಿಲ್ಲ. ಹಾಗಾಗಿ ಕೋಗಿಲೆಯ ಹಾಡು ಆಗಾಗ ಟಿ.ವಿ.ಯಲ್ಲಿ ರೇಡಿಯೋದಲ್ಲಿ ಕೇಳಿಸುತ್ತದೆ.


          ಪುಸ್ತಕದಂಗಡಿಯಲ್ಲಿ ಸಿಗದ ಕಾವ್ಯ ಪಠ್ಯ ಪುಸ್ತಕಗಳಲ್ಲಿದೆ. ಶಾಲಾ ಕಾಲೇಜುಗಳಲ್ಲಿ ಲಕ್ಷಗಟ್ಟಲೆ ವಿದ್ಯಾರ್‍ಥಿಗಳು ನೂರಾರು ಹಳೆಯ ಹೊಸ ಕವಿಗಳ ಕಾವ್ಯ ಭಾಗಗಳನ್ನು, ಕವನಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಕಾವ್ಯದ ಅರ್ಥ ಎಂಬುದು ಮಾಡುಕಟ್ಟೆಯಲ್ಲಿ ಸಿಗುವ ಪದಾರ್ಥ ಅಲ್ಲ ಎಂದು ಅವರಲ್ಲಿ ಕೆಲವರಿಗಾದರೂ ಅರಿವಾಗುತ್ತಿದೆ. ಅಜ್ಜನ ಹೆಗಲ ಮೇಲೆ ಕುಳಿತ ಮೊಮ್ಮಗುವಿನಂತೆ ಹೊಸ ಕಾಲದ ಯುವಕ-ಯುವತಿಯರು ಕಾವ್ಯ ರಚನೆ ಮಾಡುತ್ತಿದ್ದಾರೆ. 'ಇಂಟರ್ನೆಟ್'ನಂಥ ಹೊಸ ಮನೆಗಳು ಕಾವ್ಯಕ್ಕೆ ಆಶ್ರಯ ನೀಡುತ್ತಿವೆ.

2



          ಡೊಂಬಯ್ಯ ಇಡ್ಕಿದು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಇಡ್ಕಿದು ಎಂಬ ಹಳ್ಳಿಯಲ್ಲಿ ಬೆಳೆದವರು. ಮಣಿಪಾಲದಲ್ಲಿ ಪತ್ರಿಕೋದ್ಯಮ ಕಲಿಸುತ್ತಿರುವ ಕಾಲೇಜು ಉಪನ್ಯಾಸಕರು. ನಾಟಕ  ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತರು. ಇವರ ಅಂತರಂಗದಲ್ಲಿ ಕಾವ್ಯ ಅಡಗಿ ಕುಳಿತಿದೆ ಎಂದು ಗೊತ್ತಾದಾಗ ನನಗೆ ಆಶ್ಚರ್ಯದ ಜೊತೆಗೆ ಸಂತೋಷ.



          'ಇರುದೆಲ್ಲವ ಬದಿಗಿರಿಸಿದ್ದೇವೆ' ಎಂದು ವಿಷಾದಿಸುವ ಈ ಕವಿಗೆ ನಮ್ಮ ಪರಂಪರೆಯ ಸಾತತ್ಯದಲ್ಲಿ ನಂಬಿಕೆ ಇದೆ. ಇಲ್ಲಿರುವ ಹುಡುಗ ವಸಾಹತ್ತೋತರ ಸಮಾಜದ ತಲ್ಲಣಗಳನ್ನು ಅನುಭವಿಸುತ್ತಿರುವ 'ಕಲಬೆರಕೆಯ ಹುಡುಗ!' ಅವನ ಜೊತೆಯಲ್ಲಿ 'ಶಾಂತ ಸಾಗರದ ಹುಡುಗಿ' ಇರುವುದು ಸಮಾಧಾನದ ಸಂಗತಿ. 'ಕಲಬೆರಕೆಯ ಹುಡುಗ'ನಿಗೆ ಅಧೋಮುಖ ಸಮಾಜದ ಭಯಾನಕ ಕನಸುಗಳು ಬೀಳುತ್ತವೆ. ಆದರೆ ಈತ ಗಾಂಧೀಜಿಯನ್ನು ಮರೆತಿಲ್ಲ. ತನ್ನ ಅಜ್ಜನಲ್ಲೆ ಗಾಂಧೀಜಿಯನ್ನು ಹುಡುಕುತ್ತಿದ್ದಾನೆ.



          ಯೌವನ ಸಹಜವಾದ ಪ್ರೇಮಗೀತೆಗಳ ಬದಲು ಈ ಕವಿ ಚಿಂತನಶೀಲ ಕವನಗಳನ್ನು ಬರೆದಿದ್ದಾನೆ. 'ನಡೆವವರೆಡಹದೆ ಕುಳಿತವರೆಡಹುವರೆ?' ಎನ್ನುತ್ತ ನಾವು ಈ ಉದಯೋನ್ಮುಖ ಕವಿಯ ಬೆನ್ನು ತಟ್ಟೋಣ. ಮನೋರಮೆ ಮುದ್ದಣನನ್ನು ಕಾಡಿದಂತೆ, ಪ್ರಶ್ನಿಸಿದಂತೆ, ಡೊಂಬಯ್ಯನವರು ತನ್ನ ಕಾವ್ಯಾನುಭವವನ್ನು ತಾನೇ ಪ್ರಶ್ನಿಸಿದರೆ, ತಿದ್ದಿ ತೀಡಿದರೆ, ಅವರೊಳಗಿನ ಕಸುಗಾಯಿ ಕವಿ ಬೆಳೆಯುತ್ತಾನೆ. ಚಿಪ್ಪೊಡೆದು ಬರಲಿ ವಿನತಾಪುತ್ರ.


3

          ರಾಷ್ಟ್ರಕವಿ ಜಿ. ಎಸ್.ಶಿವರುದ್ರಪ್ಪನವರ 'ಕವಿತೆಯೆಂದರೆ ......' ಕವನದ ಕೆಲವು ಸಾಲುಗಳನ್ನು ನೆನಪಿಸಿಕೊಳ್ಳುತ್ತ ಈ ಮುನ್ನುಡಿಯನ್ನು ಮುಗಿಸುತ್ತೇನೆ.

ಕೆಲವು ಕವಿತೆಗಳು ಮುಂಜಾನೆ ಗಿಡದ ಮೈತುಂಬ
ಸಮೃದ್ಧವಾಗಿ ಅರಳುವ ಹೂವು
ಇನ್ನೂ ಕೆಲವು ಎಷ್ಟು ಪುಂಗಿಯೂದಿದರೂ
ಹುತ್ತ ಬಿಟ್ಟು ಹೊರಕ್ಕೆ ಬಾರದ ಹೂವು
ಮತ್ತೆ ಕೆಲವು ಮಬ್ಬುಗತ್ತಲಲ್ಲಿ ಮಲಗಿರುವ
ಆಕಾರವಿರದ ನೋವು.
ಕವಿಮಿತ್ರ ಡೊಂಬಯ್ಯ ಇಡ್ಕಿದು ಅವರಿಗೆ ಶುಭಾಶಯಗಳು.
'ಸಖೀಗೀತ'
ಎಂ.ಜಿ.ಎಂ.-1
ಹುಡ್ಕೊ 1 ಮೈನ್, ದೊಡ್ಡಣಗುಡ್ಡೆ,
ಉಡುಪಿ-576102.

Kalaberakeya Huduga,Shantasagarada Hudugi
{ A Collection of poems }
by Dombaiyya Idkidu
Published by
Swikrithi,
1-146
Idkidu
Bantwal-574220
First Impression- 2009
Price- Rs.25
Pages-43
Cover Page-Prasad Rao, Manipal
mobile-Dombaiyya Idkidu-9449162096

.......

         

         




 

1 comment:

  1. ನಾನು ಬರೆದ ಕವಿತೆ ಓದಿದೆ. ಖುಷಿಯಾಯಿತು

    ReplyDelete