ಗಂಗಾಧರ ಚಿತ್ತಾಲ (೧೯೨೩-೧೯೮೭) ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯವರು. ಪಾರ್ಕಿನ್ಸನ್ ಕಾಯಿಲೆಯಿಂದ ತಮ್ಮ ಜೀವಿತದ ಕೊನೆಯ ಹತ್ತು ವರ್ಷಗಳನ್ನು ತೀವ್ರ ನೋವು, ನಿಶ್ಚಲತೆ, ಅನಿಯಂತ್ರಣ, ನಡುಕದಲ್ಲಿ ಕಳೆದರು. ಈ ತಿಂಗಳ ಕಾವ್ಯಬೋಧಿ ಕಾರ್ಯಕ್ರಮ ಅಂಕೋಲಾದಲ್ಲಿ ನಡೆಯುತ್ತಿದ್ದು ಅದರಲ್ಲಿ ಚಿತ್ತಾಲರ ಕವಿತೆಗಳ ಓದು-ವಿಶ್ಲೇಷಣೆ ನಡೆಯಲಿದೆ. ಜಿ. ಕೆ. ರವೀಂದ್ರ ಕುಮಾರ್ ಇದನ್ನು ನಡೆಸಿಕೊಡುತ್ತಾರೆ. ಅದರ ಜೊತೆ ಡಾ. ವಿನಯಾ, ಶಾಂತಾರಾಮ ನಾಯಕ ಹಿಚ್ಕಡ ಅವರ ಕವಿತೆಗಳನ್ನೂ ಓದಲಾಗುತ್ತದೆ.
ಗಂಗಾಧರ ಚಿತ್ತಾಲರ ಸಮಗ್ರ ಕವನ ಸಂಕಲನ ಸುಲಭ ಲಭ್ಯವಿಲ್ಲ. ಕಾರಣ ಅವರ ನಾಲ್ಕು ಕವಿತೆಗಳು ನಮ್ಮೆಲ್ಲರ ಓದಿಗೆ:
ಕವನ
೧
ಹತ್ತು ದಿನದಿಂದ ಹುಡುಕಾಟ ಮಿಲಿಮಿಲಿ ಮಿಡುಕಿ ತಡಕಾಟ
ಬಾಯಿಗೆ ಬಾರದು
ಎಲ್ಲೋ ಒಳಗೇ ನಟ್ಟು
ಮುಳ್ಳೂರಿ ಕಾಡಿಸುವ ಬೆತ್ತದಂತಹದೇನೋ
ಮೊಳಕೆ ತೋರದು
ಕಾವು ಕೂತದ್ದಾಯ್ತು ಸಿಡುಕಿ ಶತಪಥ ತುಳಿದು
ಕಾಲು ಸೋತದ್ದಾಯ್ತು ಏನೋ ಲವಲವಿಸಿ
ಕೊರಳವರೆಗೆ ಬಂದಂತಾಗಿ ಕರುಳು ತಳಮಳವಾಯ್ತು
ಕದಲಲಾರದು
ಮಿದುಳ ಮೊದ್ದು ಮನಸಿಗೆ ಹೊದ್ದು
ಬಿಗಿದ ಗುಮ್ಮನ ಗುಸುಕ ಮುಸುಕು
ನಾಲಗೆಯು ಬಿದ್ದಿದೆ ಜೊಳ್ಳು
ಈ ಮಸಕುಮಸಕಲ್ಲೂ ಏನೋ ಚಳುವಳಿ ಸುಳಿವು
ದೂಡಿ ಬರಲಿದೆ ಮೂಡಿ ಕೂಡಿ ಬರಲಿದೆ ಎಂಬ
ಹೊಂಚು ಒಳಸಂಚು ಕೇಳಿಸುವ ಮುಂಚಿನ ಸೊಲ್ಲು
ಎಂದು ಮುಗಿವುದೋ ಹೊಸ್ತಿಲಂಚಿಗೂ ಬಂದು ಮುಖ
ಮರೆಸಿ ತಡವರಿಸುವೀ ಇದಕೆ ಕತ್ತಲ ವಾಸ
೨
ಅಲೆ ಉಲಿ ಮೆಲ್ಲನ್ನ ಉಲುಹು ಅಲ್ಲಲ್ಲಿ
ಮಿನುಗು ಮಾತಿನ ಮಿಸುನಿ ಹೊಳಪು
ಒಮ್ಮೆಲೇ
ತಾನಾಗಿ ನಾಲ್ಕಾರು ನುಡಿ ಸಾಲು
ಹೊಯ್ದಾಟ
ಕಲುಕುಮಲಕಲ್ಲಿ
ಕೂಡಿ ಮೂಡಿ ಕದಡಿ ಮತ್ತೆ ಕೂಡಿ ಮೂಡಿ
ತೇಲುವ ಬಿಂಬ
ಚುಂಬಕ ಸೆಳೆತ ಹಿಡಿವ ಪಡೆಯುವ ತುಡಿತ
ನೆತ್ತರಲ್ಲೆಲ್ಲ ಒತ್ತು ಒತ್ತಡದ ಎದೆ ಬಡಿತ
ಕೊಕ್ಕೆಗೆ ಸಿಕ್ಕಿದ್ದೇ ತಡ ಎಷ್ಟು ತಡಪಡಿಸಿದರೂ
ಬಿಡಿಸಿಕೊಳ್ಳದ ಬಿಗಿತ
ಹಿಡಿತ ಸಾಕಾದೀತೇ ಮಿಡಿತ ಸಾಕಾದೀತೇ - ಅಳುಕು
ಆಮೇಲೆ ಒಂದೇ ಒಂದು - ಮಾತು ಮಿದ್ದುವ ಮಸಕ
ಕಂಡದ್ದು ಉಂಡದ್ದು ಅನಿಸಿದ್ದು ಕನಸಿದ್ದು
ಮೂಡಿ ಮೈಗೂಡಿದ್ದು ಮೊಳಗಿ ತೊಳಗುವ ತನಕ
ಕೈ ಬಾಯ್ಗೆ ಬರುವನಕ
ಸ್ಪಂದಿಸುವ ಹೊಸತೊಂದು!
೩
ಬಂದಾದ ಮೇಲೆ ಬರಿ ಬಂದುದಷ್ಟೆ ಬಂತು
ಯಾಕೆ ಬಂತು ಹ್ಯಾಗೆ ಬಂತು ಅದರ ಗತ್ತು ಅದರ ಗಮ್ಮತ್ತು
ಎಲ್ಲಾ ಊಹಾಪೋಹ
ಇಷ್ಟು ನಿಜ ಬರಲು ಹಿಡಿದಷ್ಟೂ ಹೊತ್ತು
ಮತ್ತು ತಲೆಗೇರಿತ್ತು
ತಡೆಯಲಾರದೆ ಬಾಯಿಬಾಯಿ ಬೇಡುತ್ತಿತ್ತು
ಗರಡಿಯಲ್ಲಿಳಿದು ಹಿಡಿತಕ್ಕೆ ಸಿಕ್ಕಿಯೂ ಸಿಗದೆ
ನುಸುಳಿ ಜಾರುವ ಯಾತರೊಡನೆಯೋ
ಪಟ್ಟು ಹಿಡಿದಂತಿತ್ತು
ಇದು ಬರಿಯ ಹಿಡಿದಾಟ? ಬರಿಯ ಪಟ್ಟಾಟ?
ಒಂದರೊಳಗಿನ್ನೊಂದು ಹೊಕ್ಕು ಕೂಡುವ ಪರಿಯೋ?
ಕತ್ತಲೊತ್ತಡದಲ್ಲೆ ಪಿಂಡ ಬಲಿಯುತಲಿತ್ತು
ಗರ್ಭ ಭಾರಕೆ ಬಸಿರು ಬೀಗಿ ನಲಿಯುತಲಿತ್ತು
ಕೊನೆಗೊಮ್ಮೆ ಬಾಯೊಡೆದು
ಒಂದು ಜೀವಕ್ಕೆ ಎರಡು ಜೀವವಾಗಿ
ಬಿಡುಗಡೆಯಾಯ್ತು.
೪
ಈ ಮುಖೋದ್ಗತ ನಿನ್ನ ಹೃದ್ಗತವೇ ಆದ ದಿನ
ಸುದಿನ
ಆವರೆಗೂ ಇದು
ತಕ್ಕ ಮಣ್ಣಿನ ತೇವಕಾಗಿ ಕಾದೇ ಇರುವ
ಬೀಜ
ವ್ಯಾಧಿ
೧
ತಜ್ಞರೆಲ್ಲ ಹೇಳಿದರು..
‘ಇದು ಬುನಾದಿಯಲ್ಲೇ ಎಲ್ಲೋ
ಆಯಕಟ್ಟಿನ ಸ್ಥಳದಲ್ಲಿ ಮೂಡಿದ ಬಿರುಕಿನ ಫಲ
ಆಶ್ಚರ್ಯವೆಂದರೆ ಹೀಗೆ ಆಗುವುದು -
ಅದರಲ್ಲೂ ನಿಮ್ಮಂಥ ಧೃಢಕಾಯ ತರುಣರಿಗೆ ಅತ್ಯಂತ ವಿರಲ.
ನಿಮಗಷ್ಟೆ ಹೀಗೇಕೆ ಆಗಬೇಕೋ?
ಅದನ್ನು ಸೃಷ್ಟಿಕರ್ತನೊಬ್ಬನೇ ಬಲ್ಲ.
ನಮಗೆ ತಿಳಿದಿರುವ ಮಟ್ಟಿಗೆ
ಇದಕೆ ಯಾವ ಇಲಾಜೂ ಇಲ್ಲ.
ಇದೀಗ ಕಾಣುತಿದೆಯಲ್ಲ ಒಂದಿಷ್ಟು ಕಾಲೆಳೆತ
ಒಂದಿಷ್ಟು ಕೈ ನಡುಕ
ಇದು ಅನಿಷ್ಟ ಸೂಚಿ ಮಾತ್ರ.
ಇದೇ ಮುಂದೆ ಇಂದಿಗಿಂತ ನಾಳೆ ಹೆಚ್ಚು
ಇಂದಿಗಿಂತ ನಾಳೆ ಹೆಚ್ಚು ಆಗುತ್ತಾ ಹೋಗಿ
ಯಾವ ಹಂತದಲ್ಲಿ ಅಂಗವೈಕಲ್ಯದ
ಎಂಥಾ ಭಾರೀ ದುರಂತಕ್ಕೆ ಕೈಹಾಕೀತೋ
ಹೇಳುವುದು ಕಷ್ಟ.
ಕಳ್ಳ ಹೆಜ್ಜೆಗಳಿಂದ ಮುಂದುವರೆಯುತ್ತ
ಮರ್ಮಸ್ಥಾನಗಳನೆಲ್ಲ ಒಂದೊಂದಾಗಿ
ಆಕ್ರಮಿಸಿ ಹಾಳುಗೆಡವುವದು
ಇದರ ಲಗ್ಗೆಯ ವಿಶಿಷ್ಟ ದುಷ್ಟ ವಿಧಾನ.
ಮೊದಮೊದಲು ಅಸ್ಪಷ್ಟ ನಿಧಾನ.
ಆಮೇಲೆ ಒಮ್ಮೆಲೇ ವಿಧವಿಧದ ವಿಘಟನ.
ಇಷ್ಟೆಲ್ಲ ಇದ್ದೂ ಇದು
ತಾನಾಗಿ ಎಂದೂ ಕೊಲ್ಲುವುದಿಲ್ಲ.
ಅಡ್ಡ ಕೆಡವಬಹುದು, ಚಿತ್ರಹಿಂಸೆ ಕೊಡಬಹುದು, ಆದರೆ ಕೊಲ್ಲುವುದಿಲ್ಲ.’
ತಜ್ಞರೆಲ್ಲ ಒಂದೊಂದಾಗಿ ತಮ್ಮದೇ ಆದ
ಅಪ್ಪಟ ಪರಿಭಾಷೆಯಲ್ಲಿ ಪಾಠ
ಒಪ್ಪಿಸಿ ವಿರಮಿಸಿದಾಗ
ಇದು ತಜ್ಞರ ವರದಿಯೋ, ಮೇಲಿಂದ ಬಂದ
ಆಮರಣ ದೇಹದಂಡನೆಯ ಫರ್ಮಾನೋ?
ತಿಳಿಯಲೇ ಇಲ್ಲ.
ಆರೋಪ ಹೊರಿಸದೇ ಅಪರಾಧ ತಿಳಿಸದೇ
ಗುಟ್ಟಿನಲ್ಲೇ ನ್ಯಾಯ ನಿರ್ಣಯವನ್ನೆಲ್ಲ
ಮುಗಿಸಿ
ಜಾರಿಯಲ್ಲೂ ತಂದು ತೀರ್ಮಾನ
ಇಂಥ ಬಡಜೀವವನು ಹೀಗೆ ತೊತ್ತಳ ತುಳಿದು
ಸತ್ತೇ ಮೆರೆಯಿಸಿದ ಸರ್ವತಂತ್ರ
ಸ್ವತಂತ್ರ ಸೃಷ್ಟಿಕರ್ತನ ಈ ಅಗಾಧ
ಅಬೋಧ ವರ್ತನಕೆ
ಯಾವ ದನಿಯೂ ಹೊರಡಲಿಲ್ಲ.
ನರನಾಡಿಯಲ್ಲಿಳಿದು ಗದಗದ ನಡುಗಿಸಿದ
ಭಯಕ್ಕೆ ಮಾತ್ರ ಬರೀ ಚೀರಬೇಕು ಎನ್ನಿಸಿತು.
ಅಷ್ಟೇ.
೨
ದೇಹದ ಇಡೀ ಇಮಾರತ್ತೇ ಕುಸಿಯುತ್ತಿದೆ
ಇಷ್ಟು ದಿನ ಭದ್ರ ಬಿಗಿ ಹಿಡಿದ
ಜೀವದ ಬಂಧ ಹಿಸಿಯುತ್ತಿದೆ.
ಇದ ತಡೆಯಬಲ್ಲಂಥ ದೋರ್ದಂಡ ಬಲವೆಲ್ಲಿ?
ಸಾವರಿಸಿ ಹಿಡಿವಂಥ ಭೀಮಬಾಹು?
ಅಂಜಿ ಹೌಹಾರಿ ಕಂಗಾಲಾದ ಜೀವಕ್ಕೆ ಮೊರೆಯಿಡಲು ಎಲ್ಲಿ ಠಾವು?
ನೆತ್ತಿ ಮೇಲೆ ಸದಾ ನಿಶ್ಶಬ್ದ ಪತನ ಭಯ
ದಿನದಿನವೂ ಬಳಿಸಾರೆ ಕೊನೆಯ ಪ್ರಹರ
ಯಾವ ಅಗೋಚರನ ಆಸರೆಗೆ ಅಂಗಲಾಚಲಿ
ಉರುಳಿದರೆ ಪ್ರಾಣಘಾತಕ ಪ್ರಹಾರ?
ಯಾವರ್ಥಪೂರ್ಣ ಸಂಕೇತಗಳ ಯೋಜಿಸಲಿ
ಈ ಅನರ್ಥವ ಮೂರ್ತಗೊಳಿಸೆ
ಯಾವ ಸಮರ್ಥ ಪ್ರತಿಮಾ ವಿಧಾನ?
ಮಾತು ಸಾಲದು ಇಲ್ಲಿ. ನಾಲಗೆಯು
ಸೋಲುತ ಬಂತು.
ಬದುಕಾಗುತಿದೆ ಅರ್ಥಹೀನ.
ಬಾಯಿಗೆ ಬಂದಂತೆ ಬೈಗುಳ ಮಸೆದು
ಎಸೆಯಲೆ ಕಾಣದ ನಿಯತಿಯ ಮುಖಕ್ಕೆ?
ರೋಸಿ ಪ್ರತಿಭಟಿಸಲೆ ಪ್ರಾಣದಾತನ
ಈ ಅಕಾರಣ ನಿರ್ದಯತನಕೆ.
ಈ ಸಣ್ಣ ದನಿಯನ್ನು ಕೇಳುವವರಾರಿಲ್ಲಿ?
ಸುತ್ತಲೂ ನಿರುತ್ತರ ಮೌನ
ಈ ಪ್ರಪಂಚದ ಭಾರ ಹೊತ್ತವಗಾದರೂ ಗೊತ್ತೆ
ನಾನಿಲ್ಲಿ ಪಡುತ್ತಿರುವ ಬನ್ನ?
೩
ಬರೀ ಕಪೋಲಕಲ್ಪಿತವಲ್ಲವು ಈ ಕುತ್ತು
ಇದು ಪ್ರತ್ಯಕ್ಷ, ಇದು ಸಾಕ್ಷಾತ್ತು.
ಚಹರೆಯೇ ಇಲ್ಲದ ಇದರ ವಿಕರಾಳ ಮುಖ
ಹೆಜ್ಜೆಹೆಜ್ಜೆಗೂ ಹುಟ್ಟಿಸುವ ಎದೆ ನಡುಕ
ವ್ಯಾಧಿಗ್ರಸ್ತನೊಬ್ಬನಿಗೇ ಗೊತ್ತು.
ಇದ ಬಣ್ಣಿಸಲೆಳಸುವ ಬರಿ ಮಾತು
ಏನನ್ನೂ ಹಿಡಿಯಲು ಬಾರದು ಕೂತು.
ಸಂಪರ್ಕ
ಕಳೆದ ವಾರ, ಕುಣಿಯುತ್ತಲೆ ಬಂದಳು ನಮ್ಮ ಸರಿತೆ
ಸಾಲೆಯಲ್ಲಿ ಹೇಳಿದರಂತೆ
’ಒಂದಿಷ್ಟು ಗೋಧಿ, ಒಂದಿಷ್ಟು ಜೋಳ, ಭತ್ತ,
ಹೀಗೆಯೇ ಮತ್ತೇನೇನೊ
ಮನೆಯಲ್ಲೆ ನೆಟ್ಟು ಸಸಿ ಬೆಳೆಸಿ ತರಬೇಕು’.
ಸರಿ, ಶುರುವಾಯ್ತು ಮಕ್ಕಳೋಡಾಟ, ಲಗುಬಗೆ, ಗಲಭೆ
ನಾವಿರುವ ಐದನೇ ಮಜಲಿನೆತ್ತರದಲ್ಲೆ ಭರದ ಬಿತ್ತನೆ ಕೆಲಸ!
ಮೋಜೆನಿಸಿ ನೋಡುತ್ತ ಕುಳಿತೆ-
ಹೊಲಗದ್ದೆ ಕಾಣದೀ ಮರಿ ಕೃಷೀವಲರೆಲ್ಲ
ಖಾಲಿ ಟಿನ್ನುಗಳಲ್ಲಿ ಬೀದಿಧೂಳನು ತಂದು ಪಾತಿ ಕಟ್ಟಿ
ಸುಕ್ಕಿದೊಣಕಲು ಬೀಜವಿಷ್ಟು ಹೂಳಿ,
ಬಾಟ್ಲಿ ನೀರಿನಲೆ ಪರ್ಜನ್ಯ ಸುರಿಸಿ,
ಕೃತಕೃತ್ಯರಂತೆ ಸುಗ್ಗಿ ಕನಸ ಕಾಣುತ ನಿಂತ ಮುಗ್ಧಜೀವಿ!
ಐದಾರು ದಿನ, ಬೆಳಿಗ್ಗೆ ಎದ್ದು ಕೂತರು
ಯಾವ ಸುದ್ದಿ ಸುಳಿವೂ ಇಲ್ಲ ಮೊದ್ದು ಮಣ್ಣಲ್ಲಿ.
ಮೊನ್ನೆ ಮಾತ್ರ,
ಒಂದೆರೆಡು ಕಣ ಅಲ್ಲಿ ಇಲ್ಲಿ ಅಲುಗಿದ ಕುರುಹು.
ನಿನ್ನೆಯೋ
ಒಳಗಿನೊಳಗೇ ಏನೋ
ಮೈಮುರಿದು ನಿದ್ದೆತಿದೇಳ್ವ ಥರ.
ಇಂದೋ-
ಕಣ್ಣಮುಂದೇ ತೆರೆದ ಅದ್ಭುತೋದ್ಭವ ಪ್ರಹಾರ!
ಚಿಣ್ಣರೊಲು ದೂಡಿ ಕೊಂಬೂದಿ ಹಣಕಿಕ್ಕಿ
ಇಣುಕಿವೆ ಸುತ್ತ ನೂರಾರು ಅಂಕುರ!
ನೀರ್ಮಣ್ಣ ಆರೈಕೆಗೆದ್ದ ಆಗಂತುಕರ
ಈ ಸೋಜಿಗದ ಸುತ್ತ ನೆರೆದ ಮಕ್ಕಳ ಮಧ್ಯೆ
ಸೇರಿ ನಾನೂ ಕುಳಿತೆ, ಮೈಮರೆತೆ ಮಗುವಾಗಿ.
ನಿಯಾಳಿಸುತ ಕುಳಿತೆ
ಮುದ್ದಾದ ಮೊಳಕೆಗಳ ಹಸುಳೆ ಮಿದು ನಯ ನುಣುಪ.
ತೊರೆಯೆ ಅಕ್ಕರೆಯೊರತೆ
ಹತ್ತಿರಕೆ ಬಾಗಿದೆ. ತಟ್ಟಿ ಬೆರಳಾಡಿಸಿದೆ. ಖುಶಿಪಟ್ಟೆ.
ಕುತೂಹಲದಿಂದ
ಬದಿಯ ಮಣ್ಣನ್ನಿಷ್ಟು ಸರಿಸಿ ನೋಡಿದೆ-
ಹಿಗ್ಗಿ ದುಂಡಗೆ ಗಬ್ಬವಾಗಿ ಬಿರಿದಿವೆ ಬೀಜ:
ಕೆಳಕ್ಕೆ ಬಾಯೂರಿದಲ್ಲಿ ಇಳಿಸಿವೆ ಬೇರು-ಸೂಜಿಮೊನೆ ಐದಾರು.
ಒಡಲು ಬಿರಿದಲ್ಲಿ ಮೇಲಕ್ಕೆ ಕಳಿಸಿವೆ ದೇಟು-
ಸಸಿಯ ಮೂಲಸ್ತಂಭ!
ಖಾಲಿಟಿನ್ನುಗಳ ಬೀದಿಧೂಳಲ್ಲು ಮೈತಳೆದ
ಸೃಜನದೀ ಕೌತುಕವ
ನಿಯಾಳಿಸುತ ಕುಳಿತೆ, ಸೋಕಿ-ಸೋಕಿ-ಬೆರಳಾಡಿಸಿದೆ.
ಉರದಲುಮ್ಮಳ, ಮತ್ತೆ ಮತ್ತೆ ಜೀಕಳಿ ಪುಳಕ
ಇಷ್ಟು ಹತ್ತಿರದ ಜೀವ ಸೃಷ್ಟಿಸಂಪರ್ಕಕ್ಕೆ!
ಅಣ್ಣ
೧
ಮಣ್ಣ ಹಣತೆಯ ಸಣ್ಣ ಸೊಡರ ಮಿಣಿಮಿಣಿ ಬದುಕು
ಎಂದರೇ ತಾತ್ಸಾರ ಇವಗೆ.
ಎನುತಿದ್ದ
ಈ ತೆರನ ಬತ್ತಿ ಸೊರಗಿಸಿ ಎಣ್ಣೆ ಜಿಡ್ಡು ಸರಿಸುವ
ಜಿಪುಣ ಗತ್ತು
ಯಾವ ನರಜೀವಕೂ ಗೊತ್ತು.
ತಾನೊ
ಉರಿಸಬೇಕು ಮಶಾಲು
ಇದ್ದಷ್ಟು ಕಾಲ ಇರುವಷ್ಟು ಪ್ರಾಣದ ತೈಲ-
ವೆರೆದು ಝಗಝಗ ಬೆಳಗಿ ಬೆಳಕ ಸುರಿಸಿ
ಎದಗೆದೆಯ ಬೆಸೆವ ಕಣ್ಗೆಸೆವ ಜೀವಜ್ವಾಲೆ!
ದುಂದು ಮೆರೆವವಗೆ ಅರವಾಸಿ ಆಯುಷ್ಯವೇ?
ಅದರದೇನು ಬಿಶಾತು
ಕರೆಬಂದ ಕ್ಷಣಕೆ ಮರಳಲೆಂದೆ ಬಂದವರಲ್ಲೆ
ಇಲ್ಲೆ ನಾವೂ ನೀವೂ?
೨
ಕೆಲವರಿಗೆ ಈ ಜಗತ್ತು ಅವಲೋಕನಕ್ಕೆ ವಸ್ತು
ಕೆಲವರಿಗೆ ತಬ್ಬಿಕ್ಕಿ ತುಟಿಯೂರಿ ಚೀಪಬೇಕೆನಿಸುವ
ಮಾಂಸಲ ವಕ್ಷ.
ಇನ್ನು ಕೆಲವರಿಗೆ ಕಡೆಯಬೇಕು, ಮಿದಿಸಬೇಕು,
ಮೂರ್ತಿಸಲೇಬೇಕೆಂಬ ಧ್ಯಾಸ ಹಿಡಿಸುವ ಕಲ್ಲು, ಕೈಮಣ್ಣು.
ತಮ್ಮಣ್ಣಗೋ ಇದೆಲ್ಲ ತನ್ನ ಕುಟುಂಬ
ಯಾರು ಸಿಕ್ಕರೂ ಗೆಳೆಯ ಸಂಗಾತಿಯೇ ಎಂಬ
ಹುರುಪು, ಬೆಚ್ಚಗೆ ಬೆಳೆದ ಬಂಧುಭಾವ
ಹೊತ್ತಾರೆ ಎದ್ದವಗೆ ಒಂದರಲ್ಲೆ ಜೀವ:
ಜನಕರೆಸಿ, ಜನನೆರೆಸಿ, ಮನಮುಟ್ಟಿ ಒಲಿಸೋದು
ಹತ್ತು ಯೋಜನೆ ಹೂಡಿ ಹುರಿದುಂಬಿ ನಿಲಿಸೋದು
ಅದನೆತ್ತೋದು, ಇದ ಕಟ್ಟೋದು, ಹಿಗ್ಗೋದು
ಪ್ರಾಣ ಸಾಲದ ದೇಹ ಬಿರಿಕುಂಟೆಯಂತೆ ಕೊರಳಿಗೆ
ಜೋತುಬಿದ್ದರೂ
ಕರೆಬಂದ ಕಡೆಗೆಲ್ಲ ನುಗ್ಗೋದು!
ಆಡುವವರೆಲ್ಲ ಆಡಿಕೊಂಡರು:
ಹೊಟ್ಟೆಮಕ್ಕಳಿಗಾಗಿ ಘಳಿಗೆ ಪುರುಸೊತ್ತಿಲ್ಲ,
ಲೋಕ ಕಟ್ಟುತ್ತಾನೆ.
ಇವನೆ ತರಬೇತಿಸಿದ ನಿನ್ನೆಮೊನ್ನೆಯ ಹುಡುಗ
ಮಹಲು ನಿಲ್ಲಿಸಿದರೂ, ಇವಗೆ ಬಾಡಿಗೆಯ ಮನೆ.
ತಂದ ನೆಣ ತೀರುತ್ತಬಂದರೂ ಹೊತ್ತಿಸಿದ ಬತ್ತಿ
ಇಬ್ಬದಿಗೂ ಉರಿಸುತ್ತಾನೆ.
ತನ್ನ ಪಾಡಿಗೆ ತಾನು ಸುಮ್ಮನಿರಬಾರದೇ,
ಒಂದು ಕಾಸೂ ಬರದ ಈ ಎಲ್ಲ ವ್ಯಾಪ
ಹೆಗಲಿಗೆ ಹೇರಿದವರ್‍ಯಾರು?
ಜಾಗರೂಕರ ಹಿಶೇಬಿ ಲೆಕ್ಕಾಚಾರ ಸಾಹಸಕೆ ತುಡಿವ
ಜೀವಕ್ಕೆ ಹಿಡಿಸೀತೆ?
ಹುಟ್ಟಿನಿಂದಲೆ ತಂದ ಒಡನಾಟದೀ ಹಸಿವು ಉಸಿರಾಟವಿರುವನಕ
ಇವಗೆ ಬಿಡಿಸೀತೆಂತು?
೩
ಓಡೋಡಿ ಬಂದವನೆ ನೇರ ಕೋಣೆಗೆ ನುಗ್ಗಿ
ಅಣ್ಣಾ ಎಂದೆ.
ಕಣ್ಣರೆಪ್ಪೆಯು ಕೂಡ ಅಲುಗಲಿಲ್ಲ.
ಅಂಗಾತ ಬಿದ್ದಿತ್ತು ದೇಹ ಗೊರಗೊರಿಸುತ್ತ.
ನೋಟವಿಲ್ಲದ ಗಾಜುಗಣ್ಣು, ಬಿಸಿಕಳಕೊಂಡು
ಊದಿ ನೆಟ್ಟಗೆ ಸೆಟೆದ ಕೈಕಾಲು. ಉಸಿರ ತಿದಿ ಮಾತ್ರ
ಅತಂತ್ರ ಒತ್ತುತ್ತಿತ್ತು ಕೊನೆಯ ಉಬ್ಬಸ ಹತ್ತಿ.
ಬೆನ್ನುಹುರಿಯಲ್ಲಿ ತಣ್ಣೀರು ಸುರಿದಂತಾಯ್ತು
ತಟ್ಟನೆ ಅರಿವು ಮೂಡಿ:
ಈ ಜೀವ ಇನ್ನಿಲ್ಲ
ಹುಡುಗನಂತೋಡಾಡಿ
ಕನಸುಗಳ ಬೆನ್ನಟ್ಟಿದೀ ನಿರಾಗಸ ಪ್ರಾಣಿ ಇನ್ನಿಲ್ಲ
ಕಂಡ ಕಂಡವರೊಡನೆ ಮಮತೆ ಬೆಳೆಸಿ, ಬಳಗ ಕಟ್ಟಿದ
ನಿತಾಂತ ಸ್ನೇಹಿ ಇನ್ನಿಲ್ಲ.
ದೇಹದ ಸ್ವಾಸ್ಥ್ಯ ಧಿಕ್ಕರಿಸಿ ತೊಳಗಿದವ
ಜೀವನೋತ್ಸಾಹ ಪುಟಿಪುಟಿದು ಜೀಕಳಿಸಿದವ
ಗಡಿಗೆರೆಯ ದಾಟಿ ಕತ್ತಲಲ್ಲಿ ಕೂಡಿದ್ದಾನೆ
ಇನ್ನು ಎಂದೆಂದಿಗೂ ಮರಳಿಬಾರ!
ಮೊನ್ನೆ ಓಡಾಡಿದವನಿಂದಿನೀ ಹೆಣ ಹೊತ್ತು
ಮಸಣ ಮುಟ್ಟಿಸಿ ಸುಟ್ಟು ಬೂದಿ ಮಾಡಿ
ಬೊಕ್ಕತಲೆ ಬರಿಗೈಲೆ ಮನೆಗೆ ಮರಳಿ
ಇವನ ಕೋಣೆಯ ಖಾಲಿ ಖಾಲಿ ಕಂಡು
ತಡೆಯಲಾರದೆ ಕೋಡಿಯೊಡೆದು ಹೋ ಹೋ ಎಂದು
ಕೂಡಿ ಅತ್ತೆವು.
೪
ಮತ್ತೆ ಗಾಳಿಗೆ ಗಾಳಿ ಬಯಲಿಗೆ ಬಯಲು
ಆದಮೇಲೂ
ನಾಲಗೆಯ ಮೇಲೆಲ್ಲ ಇವನದೇ ಹೆಸರು, ಎದೆಯಲೆಲ್ಲ
ಇವ ಬಿಟ್ಟು ಹೋದ ಅಕ್ಕರೆಯ ಸವಿ,
ಮಕ್ಕಳ ಕಣ್ಣ ಹೊಳಪಲ್ಲಿ, ಮುಳುಗುವ ನಗೆಯಲ್ಲಿ, ಮಾತಲ್ಲಿ
ಹಣಕಿಕ್ಕುವ ಇವನದೇ ರೂಪ.
ಕೈಕುಸಿಯುವನಕವೂ ಎತ್ತಿ ಮೆರೆಸಿ ಮಶಾಲು
ಕತ್ತಲೆಗೆ ಎದುರಾಳಿಯಾಗಿ ನಿಂತ ಪ್ರತಾಪ!
ಮತ್ತೆ ಕಾಡುವ ಒಂದೇ ಪ್ರಶ್ನೆ:
ಕೊನೆಕೊನೆಯ ದಿನದಲ್ಲಿ ಹೊತ್ತೇ ಇಲ್ಲದವನಂತೆ ಓಡಾಡಿದನಲ್ಲ-
ನೆರಳಿದ್ದು ಬರುವುದು ಕಂಡಿದ್ದನೇ?
ಹೊರಡಬೇಕಾದವನು ಒಬ್ಬಂಟಿ ಎನಿಸಿ ಎದೆಗುಂದಿದ್ದನೇ?
No comments:
Post a Comment