stat Counter



Saturday, December 28, 2013

ಮಾಸ್ತಿ ಅವರ ಆಂಗ್ಲ ನೌಕಾ ಕ್ಯಾಪ್ಟನ್ -ಟಿ. ಪಿ. ಅಶೋಕ

ಮಾಸ್ತಿ ಅವರಆಂಗ್ಲ ನೌಕಾ ಕ್ಯಾಪ್ಟನ್

ಗಂಡು-ಹೆಣ್ಣಿನ, ಗಂಡ-ಹೆಂಡತಿಯ ಸಂಬಂಧಗಳಲ್ಲಿನ ಇಕ್ಕಟ್ಟು-ಬಿಕ್ಕಟ್ಟುಗಳ ಶೋಧ ಮಾಸ್ತಿ ಅವರಕಥಾಸಾಹಿತ್ಯದ ಪ್ರಧಾನ ಆಶಯಗಳಲ್ಲಿ ಒಂದು. ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಧಾಮರ್ಿಕ ಹಿನ್ನೆಲೆಗಳಿಗೆ ಸೇರಿದ ಹಲವಾರು ದಂಪತಿಗಳ ದಾಂಪತ್ಯದ ಸ್ವರೂಪವನ್ನು ಮಾಸ್ತಿ ತಮ್ಮ  ಅನೇಕ ಕತೆಗಳಲ್ಲಿ ನಿರೂಪಿಸಿದ್ದಾರೆ. ವಿವಾಹಪೂರ್ವ, ವಿವಾಹೇತರ ಸಂಬಂಧಗಳ ಹಿಂದಿನ ಪ್ರೇರಣೆಗಳನ್ನೂ ಅವುಗಳ ಪರಿಣಾಮವನ್ನೂಅವರುತುಂಬ ಸಮಾಧಾನ-ಸಹಾನುಭೂತಿಗಳಿಂದ ಗಮನಿಸಿದ್ದಾರೆ.ಯಾವುದೇ ಸರಳ ನೈತಿಕ ತೀಮರ್ಾನಗಳಿಗೆ ಧಾವಿಸದೆ ಮನುಷ್ಯನ ಲೈಂಗಿಕ ನಡಾವಳಿಯಲ್ಲಿರುವ ಸಮಸ್ಯಾತ್ಮಕ ಅಂಶಗಳನ್ನು ಅವರುತುಂಬ ಉದಾರವಾಗಿ ಪರಿಶೀಲಿಸುವ ವ್ಯವಧಾನವನ್ನುತೋರಿದ್ದಾರೆ. ಮನುಷ್ಯನ ಲೈಂಗಿಕ ವರ್ತನೆಗಳ ಹಿಂದಿನ ಒತ್ತಡಗಳನ್ನು ತೆರೆದ ಮನಸ್ಸಿನಿಂದ ಅರ್ಥಮಾಡಿಕೊಳ್ಳುವ ಮಾಸ್ತಿಯವರು ಸಂಬಂಧಗಳನ್ನು ಉಳಿಸಿಕೊಳ್ಳುವವರ ಬಗ್ಗೆ ಹೆಚ್ಚಿನ ಮೆಚ್ಚುಗೆಯನ್ನುತೋರುವುದಾದರೂ ಅನಿವಾರ್ಯವಾಗಿ ಬಿಡುವ ವಿಚ್ಛೇದನಗಳನ್ನು ತಿರಸ್ಕಾರದಿಂದ ನೋಡುವುದಿಲ್ಲ. ದಾಂಪತ್ಯದ ನಿಯಮಗಳನ್ನು ಮೀರಬಾರದುಎಂಬುದು ಮಾಸ್ತಿಯವರ ಒಟ್ಟಾರೆ ನಿಲುವಾಗಿದ್ದರೂ, ಕೆಲವು ಜೀವನ ಸಂದರ್ಭಗಳಲ್ಲಿ ಹಾಗೆ ಮೀರುವುದುಯಾಕೆ ಅನಿವಾರ್ಯವಾಯಿತು, ಅದರ ಹಿಂದಿನ ಪರಿಸ್ಥಿತಿ-ಮನಸ್ಥಿತಿ ಏನು ಎಂದುಅವರು ನೈತಿಕಧಾಷ್ಟ್ರ್ಯವಿಲ್ಲದ ಮನುಷ್ಯಾನುಕಂಪದ ನೆಲೆಯಲ್ಲಿ ವಿಚಾರಿಸುತ್ತಾರೆ. 'ಕೆಡುವುದೆಂದರೇನು'ಎಂಬುದುತಮಗೆಇನ್ನೂ ತಿಳಿಯದೆಂದು ಮಾಸ್ತಿ ಉದ್ಗರಿಸುವಲ್ಲಿ ಮನುಷ್ಯನ ಲೈಂಗಿಕ ಬದುಕನ್ನುಕುರಿತಒಂದು ಬಗೆಯ ವಿಸ್ಮಯವೇಧ್ವನಿತವಾಗಿಬಿಡುತ್ತದೆ.

ಈ ದೃಷ್ಟಿಯಿಂದಆಂಗ್ಲ ನೌಕಾ ಕ್ಯಾಪ್ಟನ್ ಮಾಸ್ತಿಯವರ ಅತ್ಯಂತ ಪ್ರಾತಿನಿಧಿಕ ಕತೆಗಳಲ್ಲಿ ಒಂದು.ಈ ಬಗೆಯಇಂಥ ಹಲವಾರು ಕತೆಗಳೊಂದಿಗೆ ಸಾಮ್ಯವನ್ನುಇಟ್ಟುಕೊಂಡೂ ಈ ಕತೆ ಮಾಸ್ತಿಯವರ ಉಳಿದ ಹಲವಾರು ರಚನೆಗಳಿಗಿಂತ ತುಸು ಭಿನ್ನವಾಗಿಯೂಇದೆ.ಕತೆಯು ಆರಂಭಗೊಳ್ಳುವುದು ಇಬ್ಬರು ಪ್ರಯಾಣಿಕರುರೇಲ್ವೆಕಂಪಾಟರ್್ಮೆಂಟ್ಒಂದರಲ್ಲಿಅನಿರೀಕ್ಷಿತವಾಗಿ ಭೇಟಿಯಾಗುವುದರಿಂದಒಬ್ಬನು ಭಾರತೀಯ, ಬ್ರಾಹ್ಮಣ; ರಕ್ಷಣಾ ಶಾಖೆಯ ವ್ಯಯಪರಿಶೀಲಕನಾಗಿ ಕೆಲಸದಲ್ಲಿದ್ದವನು. ಮತ್ತೊಬ್ಬನುಓರ್ವಆಂಗ್ಲ, ಬಿಳಿಯ, ಕ್ರಿಶ್ಚಿಯನ್; ನೌಕಾದಳದ ಅಧಿಕಾರಿಯಾಗಿದ್ದವನು.ಈ ಕತೆ ನಡೆಯುವುದು ಮಹಾಯುದ್ಧಗಳ ಸಮಯದಲ್ಲಿ; ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಎಷ್ಟೋ ವರ್ಷಗಳ ಪೂರ್ವದಲ್ಲಿ. ಹಾಗಾಗಿ ಮೊದಲಿನವನು ಆಳಿಸಿಕೊಳ್ಳುತ್ತಿದ್ದ ವರ್ಗಕ್ಕೆಸೇರಿದವನಾಗಿದ್ದರೆಎರಡನೆಯವನು ಆಳುವ ವರ್ಗಕ್ಕೆ ಸೇರಿದವನು. ಇವರಿಬ್ಬರ ಸಹಜ-ಸಾಧಾರಣ  ಭೇಟಿ ಮತ್ತು ಮಾತುಕತೆಗಳಲ್ಲಿ ಎರಡು ಸಂಸ್ಕೃತಿಗಳ ಮುಖಾಮುಖಿಯೂ ನಡೆದುಹೋಗುತ್ತದೆ.   ಮಾಸ್ತಿಯವರ ಈ ಕತೆರಚನೆಯಾದದ್ದು 1950-57ರ ಅವಧಿಯಲ್ಲಿ.ಅದುಅವರ ಹನ್ನೊಂದನೆಯಕಥಾ ಸಂಕಲನ ಆರು ಸಣ್ಣಕತೆಗಳು(1957) ಎಂಬಲ್ಲಿ ಸೇರ್ಪಡೆಯಾಗಿದೆ.
ಈ ಕತೆಯು ಭಾರತೀಯನಉತ್ತಮಪುರುಷ ನಿರೂಪಣೆಯಲ್ಲಿದೆ.ಪುಣೆಗೆ ಹೋಗಲು ಅವಸರವಸರವಾಗಿ ಇವನು ಒಂದು ಬೋಗಿಯನ್ನು ಪ್ರವೇಶಿಸುವಷ್ಟರಲ್ಲಿ ಆಂಗ್ಲಅಧಿಕಾರಿಯುಅದಾಗಲೇತನ್ನಜಾಗದಲ್ಲಿ ಕುಳಿತು ಉಪಾಹಾರ ಮತ್ತು ಮದ್ಯಪಾನಗಳಲ್ಲಿ ಮಗ್ನನಾಗಿರುತ್ತಾನೆ.ನಾನು ಹಠಾತ್ತಾಗಿ ಕೂಪೆಯೊಳಗೆ ಹೊಕ್ಕಾಗ ಕ್ಯಾಪ್ಟನ್ ನನ್ನಕಡೆಗೆ ನೋಡಿದನು;ಸ್ವಲ್ಪಕಕಮಕನಾದಂತೆಕಂಡನು. ಒಂದೇಕ್ಷಣತಡೆದು ಅವನು ತನ್ನಎಡಕ್ಕಿದ್ದ ಪೊಟ್ಟಣಗಳನ್ನು ತನ್ನಕಡೆಗೆ ಸೆಳೆದುಕೊಂಡು ನನಗೆ ಸ್ಥಳ ಮಾಡಿಕೊಟ್ಟು, 'ಕ್ಷಮಿಸಬೇಕು, ಸ್ವಾಮಿ. ನಾನು ಬಹಳ ಸ್ಥಳವನ್ನು ಆಕ್ರಮಿಸಿಕೊಂಡಿದ್ದೇನೆ, ತಮಗೆ ಅನನುಕೂಲ', ಎಂದನು.ಅಂಥದೇನೂಇಲ್ಲವೆಂದೂ, ಸ್ಥಳ ತನಗೆ ಸಾಕು ಎಂದೂ ನಿರೂಪಕನುಉತ್ತರಿಸುತ್ತಾನೆ. ಅಂದರೆಇಬ್ಬರೂ ಉದಾರಿಗಳು, ಸುಸಂಸ್ಕೃತರು.ಇದುಅವರ ಮುಂದಿನ ಸೌಜನ್ಯಪೂರ್ಣ ಮಾತುಕತೆಗೆ ನಾಂದಿಯಾಗುತ್ತದೆ. ಮೊದಮೊದಲುತನ್ನೊಂದಿಗೆ ಮಾತನಾಡದಿದ್ದರೂಆಂಗ್ಲನುತನ್ನನ್ನುಕುತೂಹಲದಿಂದ ನೋಡುತ್ತಿದ್ದುದು ನಿರೂಪಕನ ಗಮನಕ್ಕೆ ಬರುತ್ತದೆ. ಆ ಕಾಲದಲ್ಲಿ ಸ್ಥಳೀಯರು ತಮ್ಮೊಂದಿಗೆಒಂದೇ ಬೋಗಿಯಲ್ಲಿ ಪ್ರಯಾಣ ಮಾಡುವುದನ್ನು ಬಿಳಿಯರು ತಮ್ಮ ಮಯರ್ಾದೆಗೆಕುಂದುಎಂದುಎಣಿಸುತ್ತಿದ್ದುದು ನಿರೂಪಕನಿಗೆ ತಿಳಿದ ವಿಷಯವೇಆಗಿತ್ತು.ಆದರೆ ಈ ಅಧಿಕಾರಿಯ ನೋಟದಲ್ಲಿಅಸಹನೆಯ ಲಕ್ಷಣವಿರದೆ ನಿಜವಾಗಿ ವಿಶ್ವಾಸವೇಇದ್ದುದನ್ನು ನಿರೂಪಕನು ಗಮನಿಸುತ್ತಾನೆ. ಬಿಳಿಯರ ಬದಲಾದ ಈ ವರ್ತನೆಯ ಹಿಂದೆ ಮಹಾಯುದ್ಧದ ಪ್ರಭಾವವೂಇರಬಹುದೆಎಂದು ಅವನು ತಕರ್ಿಸುತ್ತಾನೆ. ತಾನು ಮದ್ಯಪಾನ ಮಾಡುವುದಕ್ಕೆ, ಹೊಗೆ ಹಿಡಿಯುವುದಕ್ಕೆತನ್ನ ಸಹಪ್ರಯಾಣಿಕನಆಕ್ಷೇಪಣೆಯೇನೂಇರದಿದ್ದುದಕ್ಕೆಆಂಗ್ಲನುಅವನನ್ನು ವಂದಿಸುತ್ತಾನೆ ಮತ್ತು ಭಾರತೀಯನ ಸೌಜನ್ಯವನ್ನು ಶ್ಲಾಘಿಸುತ್ತಾನೆ. ಅದರಲ್ಲಿಅಂಥ ಸೌಜನ್ಯವೇನೂಇಲ್ಲವೆಂದೂ, 'ನಮ್ಮಪ್ರಭುಗಳು ಯಾವುದನ್ನು ಮಾಡಿದರೂ ನಾವು ಅದಕ್ಕೆಅಡ್ಡಿ ಹೇಳುವಂತಿಲ್ಲ, ಈಗ ನಮಗೆ ಇದೆಲ್ಲ ವಾಡಿಕೆಯಾಗಿ ಹೋಗಿದೆ. ಏಕೆ, ನಾವೇ ಅನೇಕರುಇದನ್ನೆಲ್ಲ ಮಾಡುತ್ತೇವೆ'ಎಂದು ನಿರೂಪಕನುಉತ್ತರಿಸುತ್ತಾನೆ. ತಾನು ಭಾರತೀಯರನ್ನುಅಪಾರವಾಗಿ ಪ್ರೀತಿಸುತ್ತೇನೆಂದೂ, ಪ್ರಪಂಚದಯಾವುದೇಜನಾಂಗದವರಿಗಿಂತಅವರುಕಡಿಮೆಇಲ್ಲವೆಂದೂಆಂಗ್ಲನು ಭಾರತದ ಬಗ್ಗೆ ಭಾರತೀಯರ ಬಗ್ಗೆ ಅನೇಕ ಮೆಚ್ಚುಗೆಯ ಮಾತುಗಳನ್ನು ಆಡುತ್ತಾನೆ. ಈ ಬಗ್ಗೆ ಅನೇಕ ಬಿಳಿಯರಿಗೆ ಇರುವ ಪೂರ್ವಗ್ರಹಗಳು ಇವನಿಗೆ ಇಲ್ಲವೆಂದು ಅವನ ಬಗ್ಗೆ ನಿರೂಪಕನಿಗೂ ಮೆಚ್ಚುಗೆಯಾಗುತ್ತದೆ. ಇವರಿಬ್ಬರಒಟ್ಟು ಮಾತುಕತೆಯಲ್ಲಿಇಬ್ಬರಿಗೂ ಅನ್ಯಸಂಸ್ಕೃತಿಗಳಲ್ಲಿರಬಹುದಾದ ಒಳ್ಳೆಯ ಅಂಶಗಳ ಬಗ್ಗೆ ಪರಸ್ಪರ ವಿಶ್ವಾಸವೂತಮ್ಮ ಸಂಸ್ಕೃತಿಗಳಲ್ಲಿ ಇರಬಹುದಾದ ಕೊರತೆಗಳ ಬಗ್ಗೆ ಒಂದು ಮಟ್ಟದ ವಿಮಶರ್ಾತ್ಮಕದೃಷ್ಟಿಯೂ ವ್ಯಕ್ತವಾಗುತ್ತ ಹೋಗುತ್ತದೆ.'ಜೀವನದಲ್ಲಿಗಾಂಧಿ ಮಾರ್ಗವೇಉನ್ನತ ಮಾರ್ಗ'ಎಂದುಕ್ಯಾಪ್ಟನ್ ಹೇಳಿದರೆ 'ನಾನು ಒಬ್ಬಗಾಂಧಿ ಮನುಷ್ಯನಲ್ಲ'ಎಂದು ನಿರೂಪಕನು ತಿಳಿಸುತ್ತಾನೆ. 'ನೀವು ಸರಕಾರದೊಂದಿಗೆ ಸಹಕರಿಸುತ್ತಿದ್ದೀರಿ'ಎಂದುಕ್ಯಾಪ್ಟನ್ ಸರಿಯಾಗಿಯೇಗುರುತಿಸುತ್ತಾನೆ. ಬ್ರಿಟಿಷ್ ಆಡಳಿತಶಾಹಿಯು ಭಾರತೀಯರ ಬಗ್ಗೆ ಮಾತ್ರ ಪಕ್ಷಪಾತಧೋರಣೆಇಟ್ಟುಕೊಂಡಿದೆಎಂದು ನಿರೂಪಕನು ಭಾವಿಸಿದ್ದರೆ ಕ್ಯಾಪ್ಟನ್ತನ್ನಉದಾಹರಣೆಯನ್ನೇಕೊಟ್ಟುಉನ್ನತಅಧಿಕಾರವರ್ಗ ಬಿಳಿಯರಲ್ಲೂ ತನಗೆ ಬೇಕಾದವರನ್ನು ಮಾತ್ರ ಪ್ರೋತ್ಸಾಹಿಸುತ್ತದೆಎಂದು ಹೇಳಿ ನಿರೂಪಕನನ್ನು ಚಕಿತಗೊಳಿಸುತ್ತಾನೆ.  ತಮ್ಮ ನಡುವೆ ಎಷ್ಟೇ ಭಿನ್ನತೆಇದ್ದರೂ ಮನುಷ್ಯರಾಗಿ ಸೌಜನ್ಯದಿಂದ ನಡೆದುಕೊಳ್ಳಲು ಸಾಧ್ಯವೆಂಬುದನ್ನುಅವರಿಬ್ಬರೂತಮ್ಮ ನಡವಳಿಕೆಯಲ್ಲಿ ತೋರುತ್ತಾರೆ.ಅಂದರೆ ಈ ಘಟ್ಟದಲ್ಲಿಕ್ಯಾಪ್ಟನ್ಗೆ   ನಿರೂಪಕನ ಮುಂದೆತನ್ನಅಂತರಂಗವನ್ನು ತೋಡಿಕೊಳ್ಳಬಹುದಾದಂಥ ವಾತಾವರಣವನ್ನು ಸೃಷ್ಟಿಸಲು ಲೇಖಕರು ಸಫಲರಾಗುತ್ತಾರೆ.
ತಾನುತರುಣ ಅಧಿಕಾರಿಗಳಿಗೆ ತರಬೇತಿಕೊಡುವಒಂದು ನೌಕೆಯಕ್ಯಾಪ್ಟನ್ಎಂದೂಅದುಜಪಾನಿ ಬಾಂಬಿಗೆ ಸಿಕ್ಕಿ ಧ್ವಂಸವಾಯಿತೆಂದೂ, ತಾನು ಹೇಗೋ ಬಚಾವಾಗಿ ಪುಣೆಗೆ ಹೋಗುತ್ತಿದ್ದೇನೆಂದೂ, ಅಲ್ಲಿತನ್ನ ಪತ್ನಿ ಇರುವಳೆಂದೂ ಕ್ಯಾಪ್ಟನ್ ನಿರೂಪಕನಿಗೆ ತಿಳಿಸುತ್ತಾನೆ. ಈ ಹಂತದಲ್ಲಿಕ್ಯಾಪ್ಟನ್ತನ್ನ ಖಾಸಗಿ ಬದುಕಿನ ಬಗ್ಗೆ ಮಾತನಾಡುತ್ತ ಹೋಗುತ್ತಾನೆ. ತಾನು ಹೆಚ್ಚಿನ ಸಮಯ ನೀರಿನ ಮೇಲೆಯೇ ಕಳೆಯಬೇಕಾಗುತ್ತದೆ ಎಂದೂ, ತನಗೆತನ್ನ ಪತ್ನಿಯೊಂದಿಗೆ ಬೇಕೆನಿಸುವಷ್ಟು ಸಮಯ ಕಳೆಯಲು ಅವಕಾಶವಿರುವುದಿಲ್ಲವೆಂದೂಕ್ಯಾಪ್ಟನ್ ನಿರೂಪಿಸುತ್ತಾನೆ. ಕೆಲವೇ ದಿನಗಳ ಮಟ್ಟಿಗೆ ಭೂಮಿಗೆ ಬಂದರೂ ಕೆಲವೊಮ್ಮೆತನಗಾಗದ ಅಧಿಕಾರಿಗಳು ಏನಾದರೂ ನೆಪದಿಂದತನ್ನನ್ನು ಮತ್ತೆ ನೀರಿಗೆ ಕಳಿಸಿಬಿಡುತ್ತಾರೆಂದೂ ಅವನು ಬ್ರಿಟಿಷ್ ಆಡಳಿತಶಾಹಿಯ ಒಳಸ್ವರೂಪವನ್ನು ನಿರೂಪಕನ ಮುಂದೆ ಬಿಚ್ಚಿಡುತ್ತಾನೆ.  ಇದರಿಂದಾಗಿತನ್ನ ಲೈಂಗಿಕ ಬದುಕೂಒತ್ತಡಕ್ಕೆ ಸಿಕ್ಕಿದೆ ಎಂಬುದನ್ನು ಅವನು ಸೂಚಿಸುತ್ತಾನೆ. ತಾನುತನ್ನ ಹೆಂಡತಿಯನ್ನುತುಂಬ ಪ್ರೀತಿಸುತ್ತೇನೆಂದೂ, ಅವಳು ತುಂಬ ಮಧುರಸ್ವಭಾವದವಳೆಂದೂ.ಒಳ್ಳೆಯ ಸ್ತ್ರೀ ಎಂದೂಕ್ಯಾಪ್ಟನ್ಅಭಿಮಾನದಿಂದ ಹೇಳಿಕೊಳ್ಳುತ್ತಾನೆ. 'ಒಂದು ಸಲ ಅಲ್ಲ, ಹತ್ತು ಸಲ ಅಲ್ಲ, ನಾನು ನನ್ನ ಹಡಗಿನ ನನ್ನಕೋಣೆಯಲ್ಲಿ ಹಾಸಿಗೆಯ ಮೇಲೆ ಮೈಚಾಚಿ ಸುಮ್ಮನೇ ಅವಳನ್ನೇ ನೆನೆದು ಹೊತ್ತು ಕಳೆದಿದ್ದೇನೆ'.  ಹಾಗೆಯೇ ಹೆಣ್ಣೂಕೂಡತನ್ನಗಂಡನನ್ನು ಸದಾಕಾಲ ನೆನೆಯುತ್ತಾಳೆ ಎಂದು ನಿರೂಪಕ ನುಡಿದಾಗಕ್ಯಾಪ್ಟನ್ ಹೇಳುತ್ತಾನೆ: ಆದರೆ ಹೆಣ್ಣಿಗೆ ಈ ಕಷ್ಟ ಗಂಡಿಗೆಇರುವಷ್ಟು ಇರಲಾರದು..ದೇಹಗಳ ವ್ಯತ್ಯಾಸಆಸೆಯನ್ನು ತಡೆದುಕೊಳ್ಳುವ ಶಕ್ತಿಯಲ್ಲಿ ವ್ಯತ್ಯಾಸ ಮಾಡುತ್ತದಲ್ಲ? ಗಂಡಿಗೆಇದು ಬಹು ಕಷ್ಟ'.ನಿರೂಪಕನು ಈ ಮಾತಿಗೆಒಪ್ಪಿ'ನಮ್ಮ ಪುರಾಣಗಳ ತುಂಬ ಆಸೆಗೆ ಸೋತ ಮುನಿಗಳ ಚರಿತ್ರೆಯೇಇದೆ'ಎಂದುಉದ್ಗರಿಸುತ್ತಾನೆ. 'ಆದರೆ ಹೆಣ್ಣಿಗಾದರೂಇದುಕಷ್ಟದ ಸ್ಥಿತಿಯೇ.ಅವಳ ರೀತಿಯನ್ನುಗಂಡುಕಾಣ ಅಷ್ಟೆ!'ಎಂದು  ಈ ಬಗ್ಗೆ ಕ್ಯಾಪ್ಟನ್ನಿಗಿಂತತುಸು ಭಿನ್ನವಾದ ನಿಲುವನ್ನು ತಾಳುತ್ತಾನೆ. ಅದರೂ ನನ್ನ ಆಶೆ ನನ್ನನ್ನು ಭೂಗತ ಮಾಡಿದಂತೆಒಬ್ಬ ಹೆಣ್ಣಿನ ಆಸೆ ಅವಳನ್ನು ಭೂಗತ ಮಾಡೀತುಎಂದು ನನಗೆ ತೋಚುವುದಿಲ್ಲ. ಮುಚ್ಚುಮರೆಯೇನು ಸ್ವಾಮಿ. ನಾನು ನಿಮ್ಮೆದುರು ಒಪ್ಪಿಕೊಳ್ಳುತ್ತೇನೆ. ಹಲವು ಸಲ ನನಗೆ ಆಸೆಯಿಂದ ಬಿಡುಗಡೆ ಪಡೆದಲ್ಲದೆ ನಿಲ್ಲಲಾಗದೆ ಹೋಯಿತು. ನಾನು ಅದರಿಂದ ಬಿಡಿಸಿಕೊಂಡೆನುಎಂದುಕ್ಯಾಪ್ಟನ್ ನಿರೂಪಕನೆದುರುತನ್ನಅಂತರಂಗವನ್ನು ಬಿಚ್ಚಿಡುತ್ತಾನೆ. ವಿವಾಹೇತರ ಸಂಬಂಧ ಮಾತ್ರವಲ್ಲ, ಕೇವಲ ಗಂಡುಗಳೇ ಇದ್ದ ನೌಕೆಯಲ್ಲಿಕ್ಯಾಪ್ಟನ್ ಸಲಿಂಗ ಕಾಮವನ್ನೂ ಅನುಭವಿಸಿರಬಹುದು ಎಂಬ ಸೂಚನೆ ಇಲ್ಲಿ ಸುಳಿದು ಹೋಗುತ್ತದೆ.ನಿರೂಪಕಓರ್ವ ಸಭ್ಯ, ಸುಸಂಸ್ಕೃತ ಗೃಹಸ್ಥ.ಕ್ಯಾಪ್ಟನ್ತನ್ನ ಖಾಸಗಿ ಬದುಕನ್ನು ಎಷ್ಟು ಸಭ್ಯವಾಗಿ ಇವನ ಮುಂದೆತೆರೆದಿಡುತ್ತಾನೋ ಅಷ್ಟೇ ಸಭ್ಯವಾಗಿ ಪ್ರತಿಕ್ರಿಯಿಸುತ್ತಾನೆ: ಹೇಗೆ ಅಂತ ನಾನು ಕೇಳುವುದಿಲ್ಲ..ಸರಿ.ಇದು ನಿಮ್ಮರೀತಿ.ಬೇರೆ ಮನುಷ್ಯಅದನ್ನು ಬೇರೆಯರೀತಿಯಲ್ಲಿ ಪಡೆಯುತ್ತಾನೆ.ಈ ಕ್ರಮಅಕ್ರಮವೆಂದುಕ್ಯಾಪ್ಟನ್ ಸ್ವತಃ ಹೇಳಿದಾಗ ನಿರೂಪಕನು'ನಿಮ್ಮ ಸಂಕೋಚ ಉಚ್ಚ ಸ್ವಭಾವದ ಸಂಕೋಚ'ಎಂದು ಶ್ಲಾಘಿಸುತ್ತಾನೆ.
ಪ್ರಯಾಣದ ಕೊನೆ ಗಳಿಗೆ ಸಮೀಪಿಸಿದಾಗ ನಿರೂಪಕನು ಪುಣೆಯಲ್ಲಿ ಮತ್ತೊಮ್ಮೆಕ್ಯಾಪ್ಟನ್ನನನ್ನು ಭೇಟಿಯಾಗುವಅಪೇಕ್ಷೆಯನ್ನು ವ್ಯಕ್ತಪಡಿಸಿ ತನ್ನಕ್ಲಬ್ಬಿಗೆಆಹ್ವಾನಿಸುತ್ತಾನೆ. ಕ್ಯಾಪ್ಟನ್ಆಹ್ವಾನವನ್ನು ಒಪ್ಪಿಕೊಳ್ಳುತ್ತಾನೆ. ಆದರೆ ನಿಗದಿತ ದಿನ ಕ್ಯಾಪ್ಟನ್ಕ್ಲಬ್ಬಿಗೆ ಬರುವುದಿಲ್ಲ, ಒಂದೆರಡು ದಿನ ಆ ಬಗ್ಗೆ ಯೋಚಿಸಿ ನಿರೂಪಕನೂ ಆ   ವಿಷಯವನ್ನು ಮರೆತುಬಿಡುತ್ತಾನೆ. ಐದನೆಯ ದಿನ, ತಾನುಕಛೇರಿಯಿಂದ ಮರಳುತ್ತಿದ್ದಾಗ, ಅನಿರೀಕ್ಷಿತವಾಗಿ ಮಾರ್ಗ ಮಧ್ಯೆ ಆ ಕ್ಯಾಪ್ಟನ್ ಕಾಣಿಸಿಕೊಳ್ಳುತ್ತಾನೆ. ಕ್ಲಬ್ಬಿಗೆ ಹೋಗಿ ಕೂಡುತ್ತಾರೆ.  'ನನ್ನಜೊತೆಯಇಬ್ಬರು ಮೂವರು ಅಧಿಕಾರಿಗಳು ಹಿಂದಿನ ಸಲ ನಾನು ನೆಲ ಮುಟ್ಟಿದಾಗ ಪ್ರಯತ್ನಪೂರ್ವಕವಾಗಿ ನನ್ನನ್ನುಒಂದು ವಾರದಲ್ಲಿ ನೀರಿಗೆಅಟ್ಟಿದರು.ಈ ಕೃತ್ರಿಮವನ್ನು ಮಾಡಿದಜನರಲ್ಲಿಒಬ್ಬನಿಂದ ನನ್ನ ಹೆಂಡತಿ ಕಷ್ಟಕ್ಕೆ ಈಡಾದಳು'ಎಂದುಕ್ಯಾಪ್ಟನ್ ಸೂಚ್ಯವಾಗಿತನ್ನ ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ನಿರೂಪಕನಲ್ಲಿ ನಿವೇದಿಸಿಕೊಳ್ಳುತ್ತಾನೆ. ಅವಳು ಗಭರ್ಿಣಿಯೂ ಆದಳು. ಹೆರಿಗೆಯಲ್ಲಿ ಮಗು ಸತ್ತು ಹೋಯಿತು. ಈಗ ಅವಳು ಹೆರಿಗೆಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾಳೆ.ತನ್ನನ್ನುಕಾಣಬೇಕೆಂದು ಅವಳು ತನ್ನಗಂಡನಿಗೆಒತ್ತಾಯಪೂರ್ವಕವಾಗಿ ಹೇಳಿಕಳುಹಿಸಿದ್ದಾಳೆ. ಹ್ಯಾರೀ, ನಿನ್ನ ವಿಷಯದಲ್ಲಿ ನಾನು ತಪ್ಪಿ ನಡೆದಿದ್ದೇನೆ. ನನ್ನನ್ನು ಮನ್ನಿಸು..ನಾನು ಎಲ್ಲ ಹೊತ್ತೂ ನಿನ್ನಲ್ಲೆ ಅನುರಕ್ತಳಾಗಿದ್ದೆ.ಆದರೆ ಹೀಗೆಂದು ಫಲವೇನು. ನನ್ನನ್ನುಒಪ್ಪಿ ಮತ್ತೆಕಟ್ಟಿಕೊಎಂದು ನಾನು ಹೇಳುತ್ತಿಲ್ಲ. ಚರಿತ ಒಳ್ಳೆಯದಲ್ಲ ಎಂದು ತಿಳಿಸಿ ದಾಂಪತ್ಯ ವಿಚ್ಛೇದನವನ್ನು ಪಡೆದುಕೋ, ನನಗಿಂತ ಒಳ್ಳೆಯ ಹೆಂಗಸೊಬ್ಬಳನ್ನು ಮದುವೆಯಾಗುಎಂದುತನ್ನ ಹೆಂಡತಿ ಹೇಳಿದ್ದಾಗಿ ಕ್ಯಾಪ್ಟನ್ ನಿರೂಪಕನಿಗೆ ತಿಳಿಸುತ್ತಾನೆ. ತನಗೆ ಅವಳ ಬಗ್ಗೆ ಕನಿಕರ ಹುಟ್ಟಿತೆಂದೂ, ಆದರೆತಾನು ಅಷ್ಟು ಅಗ್ಗವಾದೆನೇ ಎಂಬ ಆಗ್ರಹವೂತನ್ನನ್ನುಕಾಡುತ್ತಿದೆಎಂದುಕ್ಯಾಪ್ಟನ್ ನಿವೇದಿಸಿಕೊಳ್ಳುತ್ತಾನೆ. ತನ್ನ ಈ ಮನಸ್ಥಿತಿಯಲ್ಲಿ ಯಾವ ನಿಧರ್ಾರವನ್ನೂಗಡಿಬಿಡಿಯಲ್ಲಿ ತೆಗೆದುಕೊಳ್ಳಬಾರದೆಂದೇ ಅವನು ನಿರೂಪಕನ ಬಳಿ ಬಂದಿದ್ದಾನೆ. ನಡೆದಿರುವ ಸಂಗತಿಯನ್ನು ಸಮಾಧಾನವಾಗಿ ನೋಡಿ ಪ್ರಜ್ಞೆಯಿಂದ ನಿಶ್ಚಯಿಸುವುದು ಅವನಿಗೆ ಬೇಕಾಗಿದೆ.  ಈ ಸಂದರ್ಭದಲ್ಲಿತಾನೇನು ಮಾಡಬೇಕೆಂಬುದರ ಬಗ್ಗೆ ತುಂಬ ತಿಳುವಳಿಕಸ್ಥನಾದ ನಿರೂಪಕನಿಂದ ಅವನಿಗೆ ಸಲಹೆ ಬೇಕಾಗಿದೆ.ಯಾವ ಒಣ ಸಮಾಧಾನವನ್ನೂ ಹೇಳುವ ಆತುರವನ್ನು ನಿರೂಪಕತೋರಿಸುವುದಿಲ್ಲ. 'ಯಾವ ಕಷ್ಟವೇ ಬರಲಿ ಸಹಿಸಿಕೊಳ್ಳಬೇಕು ಎಂಬುದನ್ನು ನೀವು ಬಲ್ಲಿರಿ'ಎಂದಷ್ಟೇ ಹೇಳುತ್ತಾನೆ. ಅಷ್ಟೇ ಅಲ್ಲ, ಕ್ಯಾಪ್ಟನ್ ಸಾಹೇಬರೇ, ಬೇರೊಬ್ಬರುಕಷ್ಟದಲ್ಲಿ ಸಿಕ್ಕಿದಾಗ ಸಮಾಧಾನದಿಂದ ಪ್ರಜ್ಞೆಯಿಂದ ನಡೆಯುವುದುದೊಡ್ಡ ಮಾತಲ್ಲ. ನಿಮಗೆ ಅಡಸಿರುವ ವ್ಯಸನ ನನಗೆ ಅಡಸಿದ್ದರೆ ನಾನು ನಿಮ್ಮ ಈ ವಿವೇಕದಿಂದ ನಡೆದುಕೊಳ್ಳುತ್ತಿದ್ದೆನೇ ನಾನು ಹೇಳಲಾರೆ. ನಮ್ಮಜನವನ್ನು ನೀವು ಇಷ್ಟ ಬಂದಷ್ಟು ಹೊಗಳಿ; ಇಂಥ ಮಾತಿನಲ್ಲಿ ಈ ದೇಶದ  ನಾವು ಪಶ್ಚಿಮದೇಶಗಳ ನಿಮಗಿಂತಕಠಿಣ ಮನಸ್ಸಿನ ಜನಎಂದುತಾನೂಆತ್ಮವಿಮಶರ್ೆ ಮಾಡಿಕೊಳ್ಳುತ್ತಾನೆ. ಅವನಿಗೆ ಕ್ಯಾಪ್ಟನ್ ಸ್ವತಃತಾನು ಹಡಗಿನಲ್ಲಿದ್ದಾಗ ಏನು ಮಾಡಿದ್ದಾನೆಂದುಅವನಿಂದಲೇ ಕೇಳಿ ಗೊತ್ತು. ಹಾಗೆಯೇ ಸ್ವಭಾವದಿಂದ ಅವನು ಎಷ್ಟು ಕರುಣಾಮಯಿಎಂಬುದನ್ನೂ ಗಮನಿಸಿದ್ದಾನೆ. ಹಾಗೆಯೇ ಅವನ ಗೃಹಿಣಿ ಹಲವು ವರ್ಷ ಅವನಿಗೆ ಅತ್ಯಂತ ಸಾಧ್ವಿ ಹೆಂಡತಿಯಾಗಿ  ನಡೆದಿರುವ ನೆನಪನ್ನು ನಿರೂಪಕಕ್ಯಾಪ್ಟನ್ನಿನಲ್ಲಿ ಜಾಗೃತಗೊಳಿಸುತ್ತಾನೆ. ಅಂದರೆತಾನು ಹೊರಗಿನಿಂದ ಏನೂ ಹೇರದೆಕ್ಯಾಪ್ಟನ್ನ ವ್ಯಕ್ತಿತ್ವದ ಒಳಗೇ ಇರುವ ಒಳಿತಿನ, ಕರುಣೆಯ ಸಾಧ್ಯತೆಯನ್ನು ಸ್ಪಶರ್ಿಸಿಬಿಡುತ್ತಾನೆ. ಕೊನೆಗೆ ನಿರೂಪಕನುಕ್ಯಾಪ್ಟನ್ಗೆ ಹೇಳುವ ಮಾತುಗಳು ಇವು: ಗಂಡು ಬರಿಯಗಂಡಾಗಿ ಯೋಗ್ಯತೆಯನ್ನಳೆಯದೆ ಮಾನವನಾಗಿ ನೋಡುವುದಾದರೆ, ಒಂದು ಹೆಣ್ಣಿನತಪ್ಪುಒಂದುಗಂಡಿನತಪ್ಪಿಗಿಂತ ಹೆಚ್ಚಿನತಪ್ಪು ಆಗುವುದಿಲ್ಲ. ನಾನು ಕ್ರೈಸ್ತನಲ್ಲ. ಆದರೂತಪ್ಪಿ ನಡೆದಳೆಂಬ ಒಬ್ಬ ಹೆಂಗಸನ್ನು ಎಳೆದುತಂದು ಎದುರಲ್ಲಿ ನಿಲ್ಲಿಸಿದಾಗ ಕ್ರೈಸ್ತಗುರು ಮಾಡಿದಉಪದೇಶ ಹಿರಿಯಉಪದೇಶಎಂದು ನನಗೆ ಎಲ್ಲ ವೇಳೆಯೂ ಕಂಡಿದೆ. ಅಂದರೆ ನಿರೂಪಕನುತನ್ನ, ತನ್ನಧರ್ಮ-ಸಂಸ್ಕೃತಿಗಳ ಗರ್ವವನ್ನು ಮೆರೆಯದೆಯಾವಧರ್ಮದ ಹಿನ್ನೆಲೆಯಿಂದಕ್ಯಾಪ್ಟನ್ ಬಂದಿದ್ದಾನೋಅದರ ಸ್ಮೃತಿಯನ್ನೇಅವನಲ್ಲಿ ಜಾಗೃತಗೊಳಿಸಿ ಸಮಯೋಚಿತವಾದ ಪ್ರತಿಕ್ರಿಯೆಯನ್ನು ನೀಡುತ್ತಾನೆ. ಈ ಇಂಗಿತಕ್ಯಾಪ್ಟನ್ನನ ಮನಸ್ಸನ್ನು ನಾಟುತ್ತದೆ.ಅವನು ತನ್ನ ಹೆಂಡತಿಯನ್ನುಒಪ್ಪಿಕೊಂಡುತನ್ನ ಬಾಳನ್ನು ಮುಂದುವರೆಸುತ್ತಾನೆ ಎಂಬ ಸೂಚನೆಯಲ್ಲಿಕತೆ ಮುಕ್ತಾಯಗೊಳ್ಳುತ್ತದೆ.
ಈ ಮುಕ್ತಾಯ ಮಾಸ್ತಿಯವರ ಹಲವು ಇಂಥ ಕತೆಗಳ-'ವೆಂಕಟಿಗನ ಹೆಂಡತಿ', 'ಪಕ್ಷಿಜಾತಿ'ಇತ್ಯಾದಿ-ಮುಕ್ತಾಯದಂತೆಯೇಇದೆ.ಆದರೆ ಈ ಕತೆಗೆ ಮತ್ತೂಒಂದು ವಿಶೇಷವಿದೆ. ಏಷನ್ನರೂಆಫ್ರಿಕನ್ನರೂದೇವರು-ಧರ್ಮ-ವಿದ್ಯೆ-ವ್ಯವಸ್ಥೆಯಾವುದೂಇಲ್ಲದೆಅನಾಗರೀಕರಾಗಿದ್ದಾರೆಂದೂಇವರನ್ನೆಲ್ಲ ನಾಗರಿಕರನ್ನಾಗಿ ಮಾಡುವ ಹೊಣೆಯನ್ನುದೇವರುತಮ್ಮ ಹೆಗಲುಗಳ ಮೇಲೆ ಹೊರಿಸಿದ್ದಾನೆಂದೂ ತರ್ಕಮಾಡಿಕೊಂಡು ಬ್ರಿಟಿಷರು ಈ ದೇಶಕ್ಕೆ ಬಂದುಅದನ್ನುತಮ್ಮ ವಸಾಹತುವನ್ನಾಗಿ ಮಾಡಿಕೊಂಡುತಮ್ಮ ವಿಚಾರಗಳನ್ನು ನಮ್ಮ ಮೇಲೆ ಹೇರಿದ ಹಲವು ಪ್ರಸಂಗಗಳು ಮಾಸ್ತಿಯವರ ಕತೆ-ಕಾದಂಬರಿಗಳಲ್ಲಿ ನಿರೂಪಿತವಾಗಿವೆ. ಇಲ್ಲಿಆಂಗ್ಲಅಧಿಕಾರಿಯೊಬ್ಬ ಭಾರತೀಯನಿಂದತಾನೇಚಿಕಿತ್ಸೆ ಪಡೆಯುವ ಪ್ರಸಂಗದಲ್ಲಿ ವಸಾಹತುಶಹಿ ಅನುಭವದ ಮತ್ತೊಂದು ಮಗ್ಗುಲನ್ನೇ ಮಾಸ್ತಿಯವರು ಅನಾವರಣಗೊಳಿಸುತ್ತಿರುವಂತೆ ಭಾಸವಾಗುತ್ತದೆ.
                                   ***
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228



No comments:

Post a Comment