stat Counter



Monday, April 25, 2016

ತನ್ನನ್ನು ತಾನೇ ಕೆತ್ತಿಕೊಂಡ ಶಿಲ್ಪ - ಎಚ್.ಎಸ್. ರಾಘವೇಂದ್ರ ರಾವ್


       ಕನ್ನಡ ಸಾಹಿತ್ಯಲೋಕದಲ್ಲಿ ನಿಷಿದ್ಧವಾಗಿಯೇ ಉಳಿದಿದ್ದ ದನಿಗಳ, ಅನುಭವಲೋಕಗಳ ಅನಾವರಣವಾಗುತ್ತಿರುವುದು ಅದರ ಆರೋಗ್ಯವನ್ನು ಹೆಚ್ಚಿಸುತ್ತಿದೆ. ಅವು ಇನ್ನೂ ಖಚಿತವಾದ ರೂಪರೇಷೆಗಳನ್ನು ಪಡೆಯದ ಮೊದಮೊದಲ ಮಿಸುಕಾಟಗಳಿಬಹುದು. ಸ್ವಾನುಭವದಿಂದ ಅಂತೆಯೇ ತಮ್ಮ ಸಂಗಾತಿಗಳ ಅನುಭವದಿಂದ ಅವರಿಗೆ ಪ್ರೇರಣೆ ದೊರೆತಿರಬಹುದು. ಆದರೆ ನಿರಾಕರಣೆ ಮತ್ತು ತಿರಸ್ಕಾರಗಳಿಂದ ಮುರುಟಿಹೋಗಿದ್ದ ವ್ಯಕ್ತಿತ್ವಗಳಿಗೆ ಅಭಿವ್ಯಕ್ತಿಯ ಬಾಗಿಲುಗಳು ತೆಗೆಯುವುದಕ್ಕಿಂತ ದೊಡ್ಡದು ಬೇರೇನೂ ಇಲ್ಲ. ವರ್ಣ, ಜಾತಿ, ವರ್ಗ, ಲಿಂಗ ಮುಂತಾದ ಕಾರಣಗಳಿಂದ ಮೂಕವಾಗಿ ಉಳಿದಿದ್ದ ಗುಂಪುಗಳಿಗೆ ಮಾತನಾಡುವ ಅವಕಾಶಗಳು ಅಷ್ಟಿಷ್ಟು ದೊರಕಿ ದಶಕಗಳೇ ಕಳೆದವು. ಆದರೆ ಉಭಯಲಿಂಗಿಗಳ, ಪರಿವರ್ತಿತ ಲಿಂಗಿಗಳ ಮತ್ತು ಸಲಿಂಗಕಾಮಿಗಳ ಲೋಕವು ನಿಗೂಢವಾಗಿಯೇ ಉಳಿದಿತ್ತು. ಅವರು ಮತ್ತು ಅವರ ಅಭಿವ್ಯಕ್ತಿಯು ಸಂಪೂರ್ಣವಾಗಿ ನಿರ್ಲಕ್ಷಿತರಾಗುತ್ತಾರೆ ಅಥವಾ ಗೇಲಿ ಮತ್ತು ನಿಂದೆಗೆ ಗುರಿಯಾಗುತ್ತಾರೆ. ಆದರೆ, ಅನ್ಯಭಾಷೆಗಳಲ್ಲಿ ಅಂಥದೊಂದು ಬರವಣಿಗೆ ಮೊದಲಿನಿಂದಲೂ ಇದೆ. ಗ್ರೀಕ್ ಭಾಷೆಯ ಕವಯತ್ರಿಯಾದ ಸಾಫೋ ಕವಿತೆಗಳು ಪ್ರಸಿದ್ಧವಾಗಿವೆ. ಹಾಗೆಯೇ ಫ್ರೆಂಚ್ ಭಾಷೆಯ ಜೀನ್ ಜೆನೆ ಬರೆದಥೀಫ್ಸ್ ಜರ್ನಲ್ಈ ಜಗತ್ತನ್ನು ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದೆ. ಕನ್ನಡದಲ್ಲಿ ತಮಿಳಿನಿಂದ ಕನ್ನಡಕ್ಕೆ ಬಂದಿರುವ ರೇವತಿಯವರ ‘ಬದುಕು-ಬಯಲು’, ಸ್ಮೈಲಿಂಗ್ ವಿದ್ಯಾ ಅವರಅವಳು ನಾನು ಅವನಲ್ಲ ಅವಳಲ್ಲ’ ಕೃತಿಗಳು ಹೆಸರುವಾಸಿಯಾಗಿವೆ. ಕುಂವೀ ಅವರಭಗವತಿ ಕಾಡುಕಥೆ, ವಸುಧೇಂದ್ರ ಅವರಮೋಹನಸ್ವಾಮಿಮತ್ತು ಇತರ ಕಥೆಗಳುಹಾಗೆಯೇ ಗಿರಿ ಅವರ ‘ಕಂಡದ್ದು ಕಾಣದ್ದು’ ಕಾದಂಬರಿಗಳು ಇಂತಹ ಅನುಭವಗಳ ಹಿನ್ನೆಲೆಯಲ್ಲಿ ರೂಪಿತವಾಗಿವೆ. ಆದರೆ, ಕನ್ನಡದಲ್ಲಿ ಇಂಥ ಕವಿತೆಗಳು ನನ್ನ ಗಮನಕ್ಕೆ ಬಂದಿರಲಿಲ್ಲ. ಆದ್ದರಿಂದ ಶ್ರೀಮತಿ ಚಾಂದಿನಿ ಅವರ ಈ ಕವಿತೆಗಳು ಈ ನಿಟ್ಟಿನಲ್ಲಿ ಮೊದಲ ಪ್ರಯತ್ನಗಳು. ಒಂದು ಇಡೀ ಸಂಕಲನವಂತೂ ಖಂಡಿತವಾಗಿಯೂ ಬಂದಿಲ್ಲ. ಇವುಗಳ ಬಗ್ಗೆ ಕೆಲವು ಮಾತುಗಳನ್ನು ಬರೆಯುವುದು ನನಗೆ ಸಂತೋಷದ ಸಂಗತಿ. ಏಕೆಂದರೆ, ಇವು ತಿರಸ್ಕಾರವನ್ನು ಹೇಗೋ ಹಾಗೆಯೇ ಅನುಕಂಪ, ‘ಪಿಟಿಗಳನ್ನು ಕೂಡ ಬಯಸುವುದಿಲ್ಲ. ಏಕೆಂದರೆ ತಮಗೆ ಸರಿಯೆನಿಸಿದಂತೆ ಬದುಕುವುದು, ಬಗೆಯುವುದು ಮತ್ತು ಬರೆಯುವುದು ಅವರ ಹಕ್ಕು. ಆ ಹಕ್ಕುಗಳನ್ನು ಅವರಿಗೆ ನೀಡದ ಸಮಾಜವೇ ಅಪರಾಧಿಯೇ ಹೊರತು ಅವರಲ್ಲ. ಇಡೀ ಜಗತ್ತಿನ ಸಲಿಂಗಕಾಮಿಗಳ ರಾಜಧಾನಿಯೆನಿಸಿರುವ ಮತ್ತು ಆ ಬಗೆಯ ಹಲವು ವರ್ತನೆಗಳಲ್ಲಿ ತೊಡಗಿಕೊಂಡಿರುವವರನ್ನು ಒಂದಿಷ್ಟೂ ಭೇದಭಾವವಿಲ್ಲದೆ ನೋಡುವ, ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಕುಳಿತು ನಾನು ಈ ಮುನ್ನುಡಿಯನ್ನು ಬರೆಯುತ್ತಿರುವುದು ಕಾಕತಾಳೀಯವೆಂದೇ ಹೇಳಬೇಕು.
        ಮೊದಲಿಗೆ ಹೇಳಬೇಕಾದ ಮಾತೆಂದರೆ, ಈ ಕವಿತೆಗಳು ‘ತನ್ನನ್ನು ತಾನೇ ಕಟ್ಟಿಕೊಳ್ಳುವ ಕೆಲಸದ’ ಭಾಷಿಕ ನಿರೂಪಣೆಗಳು ಎನ್ನುವುದು. ಪ್ರತಿಯೊಬ್ಬ ಕವಿಯೂ, ಅಷ್ಟೇಕೆ ಪ್ರತಿಯೊಬ್ಬ ಮನುಷ್ಯನೂ ಒಂದೇ ಸಮನೆ ಈ ಕೆಲಸದಲ್ಲಿ ತೊಡಗಿರುತ್ತಾನೆ. ಆದರೆ ಈ ಕವಿ ತನ್ನ ಮನಸ್ಸನ್ನು ಮಾತ್ರವಲ್ಲ ದೇಹವನ್ನೇ ಮರುಕಟ್ಟಿಕೊಳ್ಳುವ ಸವಾಲನ್ನು ಎದುರಿಸಿದವರು,

“:ನನ್ನ ದೇಹದ ರಚನೆಗೆ                                                                                                     ಒಂದು ಅರ್ಥ ತಂದುಕೊಂಡಿದ್ದೆ                                                                                                    ನನ್ನ ಮಾಡಿದ ದೇವರಿಗೆ                                     Transgender Chandini’s ‘Manada Kannu’ will be released on Sunday at Jain University.— Photo: V. Sreenivasa Murthy                                                               ನನ್ನ ಗುರುತು ಸಿಗಲಿಲ್ಲ                                                                                             ಮಲ್ಲಿಕಾರ್ಜುನಸ್ವಾಮಿ ಆದ
ನಾನು ಸ್ವಾಮಿಯಲ್ಲ                                                                                                               ನನ್ನನ್ನು ನಾನೇ ಕೆತ್ತಿದ ಶಿಲೆಯಾಗಿಬಿಟ್ಟೆ”

      ಹೀಗೆ ಕೆತ್ತಿಕೊಳ್ಳುವ ಹಾದಿಯಲ್ಲಿ ತಿಂದ ಉಳಿಯ-ಚಾಣದ ಏಟುಗಳ ಫಲವಾಗಿ ಮೂಡಿರುವುದು, ಆತ್ಮವಿಶ್ವಾಸವನ್ನು ಪಡೆದುಕೊಂಡ ಚಾಂದಿನಿಯವರು ಮಾತ್ರವಲ್ಲ, ಅವರು ಕೆತ್ತಿಕೊಟ್ಟಿರುವ ಕವಿತೆಗಳು ಕೂಡ. ಯಾರಿಗೆ ಗೊತ್ತು? ಕಲ್ಲನ್ನು ಅಹಲ್ಯೆಯಾಗಿ ಬದಲಾಯಿಸುವ ರಾಮನೂ ಕವಿತೆಯೇ ಇರಬಹುದು? ಸಂಗೀತದ ನೆರವು ಇರದಿದ್ದರೆ ಎಂ.ಎಸ್. ಸುಬ್ಬಲಕ್ಷ್ಮಿಯವರು ಕೂಡ ಲಕ್ಷಾಂತರ ದೇವದಾಸಿಯರ ಸಾಲಿನಲ್ಲಿಯೇ ಉಳಿಯುತ್ತಿದ್ದರೇನೋ! ಅಲ್ಲವೇ?

        ಇಲ್ಲಿನ ಕವಿತೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ತನಗಿರುವ ‘ವಿಶಿಷ್ಟ’ ಐಡೆಂಟಿಟಿ ಮತ್ತು ಅದರ ಫಲವಾದ ಹಾಡುಪಾಡುಗಳನ್ನು ಹೇಳಿಕೊಳ್ಳುವ ಕವಿತೆಗಳು. ಎರಡನೆಯದು ಅದರಾಚೆಗಿನ ಬದುಕನ್ನು ಕಾಣುವ ಕಟ್ಟುವ ಪ್ರಯತ್ನಗಳು. ಹಲವು ಕಡೆ ಇವೆರಡು ಪರಸ್ಪರ ಹೆಣೆದುಕೊಳ್ಳುತ್ತವೆ. ಭಾಷೆಯೆಂಬ ಮಾಧ್ಯಮವಂತೂ ಎಲ್ಲರ ಎಲ್ಲ ಬಗೆಯ ಅನುಭವಗಳನ್ನು ಹಿಡಿಯಲು ಇರುವ ಮಾಧ್ಯಮಗಳಲ್ಲಿ ಒಂದು. ಅದರಲ್ಲಿ ‘ಸರ್ವ ಸಾಮಾನ್ಯತೆ’ ಮತ್ತು ‘ವಿಶಿಷ್ಟತೆ’ಗಳು ಸಹಜವಾಗಿಯೇ ಇರುತ್ತವೆ. ಚಾಂದಿನಿಯವರ ಕವಿತೆಗಳಲ್ಲಿ ಮೊದಲನೆಯ ಗುಂಪಿನವು ಹೆಚ್ಚಾಹಿ ಇರುವುದರಲ್ಲಿ ಅಚ್ಚರಿಯೇನೂ ಇಲ್ಲ. ಅವರೇ ಹೇಳಿಕೊಂಡಿರುವಂತೆ,
“ಕ್ಷಮಿಸಿ ನನ್ನ ಬಗೆಗೆ ಯಾರೂ ಬರೆಯದ ನನ್ನ ಬಗ್ಗೆ ನಾನೇ ಬರೆದುಕೊಂಡೆ”

ಇಂಥ ಕಡೆ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಎಲ್ಲ ಕವಿಗಳ ಮನವಿಯೂ ವಾಸ್ತವದಲ್ಲಿ ಇದೇ ಆಗಿರುತ್ತದೆ. ದಲಿತ ಸಾಹಿತ್ಯದಿಂದ ಮೊದಲಾಗಿ ಹೆಣ್ಣುಮಕ್ಕಳ ಬರವಣಿಗೆಯವರೆಗೆ ಇಂಥದೊಂದು ಸ್ವಕೇಂದ್ರಿತ ನೆಲೆಯು ಏರ್ಪಡುತ್ತದೆ. ಏಕೆಂದರೆ, ಈವರೆಗೆ ಪಡೆದಿರುವ ಅನುಭವಗಳು ಹೊಸ ಅನುಭವಗಳನ್ನು ಕಾಣುವ ಬಗೆಯನ್ನೂ ನಿರ್ಧರಿಸುತ್ತವೆ.

        ಚಾಂದಿನಿಯವರು ಕವಿಯಷ್ಟೇ ಅಲ್ಲ, ಕತೆಗಾರ್ತಿಯೂ ಹೌದು. ಅವರ ಕವಿತೆಗಳಲ್ಲಿಯೇ ಈ ಕಥನದ ಗುಣವೂ ಎದ್ದು ಕಾಣುತ್ತದೆ. ವಿವರಗಳು ಕೇವಲ ವಿವರಗಳಾಗಿ ಉಳಿಯದೆ ಸಂಕೇತಗಳಾಗುವುದು ಅನೇಕ ಕಡೆ ಸಾಧ್ಯವಾಗುತ್ತದೆ. ‘ಗಾಳಿಪಟ’ ಇಡೀ ಸಮುದಾಯದ ಹೋರಾಟಕ್ಕೆ ಮತ್ತು ಹಿಂಸೆ/ಕೀಳರಿಮೆಗಳನ್ನು ಮೀರಿ ನಿಲ್ಲುವ ಚೇತನಕ್ಕೆ ಸಂಕೇತವಾಗುವುದು ಹೀಗೆಯೇ. “ಸುಳುವಿನಲ್ಲಿ ನುಸುಳಿಕೊಂಡು ದೂರದಿಕ್ಕ ಅರಸಿಕೊಂಡು ಸಿಕ್ಕಿದೆಡೆಯ ಸವೆಸಿ ಎಲ್ಲರನ್ನು ಅಪ್ಪಿ ಬಳಸಿ ತಿಳಿಯನ್ನು ತೇಲಿಸುತ್ತಾ, ಅಹಂಕಾರ ಅದುಮಿಟ್ಟು ತುಳಿಯುತ್ತಾ ನಿಜದತ್ತೆಡೆ” ಸಾಗುತ್ತಿರುವ ನದಿಯು ಇಂಥ ಪರಿತ್ಯಕ್ತರಾಗಿ ಬಾಯಾರಿದವರಿಗೆ ಸಂಕೇತವಾಗುತ್ತದೆ.

“ಮಣ್ಣು ಮುಚ್ಚಿದ ತೆರೆ ಸರಿಸಲು ಮಳೆಯೆ ಬರಬೇಕು’
ಎನ್ನುವ ಸುಂದರ ಪ್ರತಿಮೆಯೂ ಹೀಗೆಯೇ ಪರಿಣಾಮಕಾರಿಯಾಗಿದೆ.

      ಅಂತರಂಗದಲ್ಲಿ ಹೆಣ್ಣಾಗಿ, ದೇಹರಂಗದಲ್ಲಿ ಗಂಡಾಗಿ ಇವೆರಡು ಅಸ್ತಿತ್ವಗಳ ಸಂಘರ್ಷದಲ್ಲಿ ನಲುಗಿಹೋಗುವ ಬದುಕು ‘ಅಪರಾಧ ಮಾಡದೆಯೂ’ ಅಪರಾಧಿಗಳಿಗಿಂತ ಹೆಚ್ಚು ಅವಮಾನವನ್ನೂ ಅನುಭವಿಸುತ್ತದೆ. ಕೊನೆಗೂ ಮನುಷ್ಯನಿಗೆ ಭಿನ್ನವಾದುದರ ಬಗ್ಗೆ ಅಸಹನೆ, ಕ್ರೌರ್ಯ ಮತ್ತು ಗೇಲಿಗಳು ಒಳಗೆ ಹೊರಗೆ ತುಂಬಿರುತ್ತವೆ. ಆದರೆ, ‘ಕಳ್ಳತನ’ಕ್ಕಿಂತ ‘ಬೇರೆತನ’ವೇ ದೊಡ್ಡ ಅಪರಾಧವಾಗುವುದು ಬಹು ದೊಡ್ಡ ವ್ಯಂಗ್ಯ. ಈ ಕವಿತೆಗಳು ಕೋಪವನ್ನು ಕಳೆದುಕೊಂಡು ದುಃಖ ಮತ್ತು ಪ್ರೀತಿಗಳನ್ನು ಮಾತ್ರ ಅಭಿವ್ಯಕ್ತಿಸಿರುವುದು ಬಹಳ ಅಪರೂಪದ ಗುಣ. ‘ಇಕ್ರಲಾ ಒದೀರ್ಲಾ’ ಎನ್ನುವ ಕ್ರೋಧಕ್ಕಿಂತ ಬಹಳ ಭಿನ್ನವಾದ ಭಾವಲೋಕ ಇಲ್ಲಿನದು. ಹೇಳಿಕೆಗಳಂತೆ ಕಂಡರೂ ಈ ಸಾಲುಗಳು ಒಂದು ಸಮುದಾಯದ ಮ್ಯಾನಿಫೆಸ್ಟೋ ಕೂಡ ಹೌದು:

“ರೌಡಿಯಿಂದ ಬೆದರಿಕೆ ಪೋಲೀಸರಿಂದ ಲಾಠಿ ಏಟುಕಾನೂನಿಂದ ಸುಳ್ಳು ಕೇಸು ಜನರಿಂದ ಅಪಹಾಸ್ಯ                     ಭಿಕ್ಷೆ ಬೇಡ್ತೀವಿ ಸೆಕ್ಸ್ ವರ್ಕ್ ಮಾಡ್ತೀವಿ                                                                                          ಪ್ರತಿದಿನ ಹಿಂಸೆಯನ್ನು ಅನುಭವಿಸ್ತೀವಿ                                                                                           ಆಸೆ ಇಡ್ತೀವಿ ನಾವು ಪ್ರೀತಿ ಮಾಡ್ತೀವಿ                                                                                         ಮನುಜರಂತೆ ಬಾಳಬೇಕು ಅಂತ ಕನಸು ಕಾಣ್ತೀವಿ                                                                              ಅಮ್ಮ”

ಇಂತಹ ಮಾತುಗಳು ನಿರಾಭರಣವಾಗಿಯೂ ಕವಿತೆಯ ಕಡೆಗೆ ನಡೆಯವುದು ಅವುಗಳ ಪ್ರಾಮಾಣಿಕತೆಯಂದ. ಈ ಸಂಕಲನದಲ್ಲಿ ಸಾಕಷ್ಟು ಕವಿತೆಗಳು ಈ ಬಗೆಯವು. ಇಲ್ಲಿ ಹೇಳಿಕೆಗಳಿಗೆ ಬೇರಾವುದೋ ಉಡುಗೆಯನ್ನು ಕೊಡುವ ಪ್ರಯತ್ನ ನಡೆದಿಲ್ಲ. ಆದರೆ, ಈ ಹಾದಿಯಲ್ಲಿ ಬಹಳ ದೂರ ನಡೆಯುವುದು ಕಷ್ಟ. ಹೇಳಬೇಕಾದ್ದು ಮುಗಿಯುತ್ತದೆ. ಹೇಳುವವರ ಸಂಖ್ಯೆ ಹೆಚ್ಚುತ್ತದೆ. ‘ಹೊಸತನ’ದ ಜಾಗದಲ್ಲಿ ‘ಸಾದಾತನ’ವು ಬಂದುಬಿಡುತ್ತದೆ.

ಆದರೆ, ಚಾಂದಿನಿಯವರ ಕವಿತೆಗಳ ಇನ್ನೆರಡು ಲಕ್ಷಣಗಳು ಅವುಗಳಿಗೆ ಶಕ್ತಿ ಮತ್ತು ಸೌಂದರ್ಯಗಳನ್ನು ಕೊಟ್ಟಿವೆ. ಮೊದಲನೆಯದು ಅವರ ಬಾಲ್ಯಾನುಭವಗಳ ಐಂದ್ರಿಯಿಕವಾದ ವಿಶಿಷ್ಟ ಲೋಕ ಮತ್ತು ಎರಡನೆಯದು ಅವರಿಗಿರುವ ಗ್ರಾಮೀಣ ಹಿನ್ನೆಲೆ. ಎಲ್ಲ ಕವಿಗಳ ಖಜಾನೆಯೂ ಕಾವ್ಯವೇ. ಆದರೆ, ಇಲ್ಲಿನ ಅನ್ಯತನ ಮತ್ತು ಒಂಟಿತನಗಳು ಬೇರೆ ಬಗೆಯವು.

“ಗೊಬ್ಬಳಿಯ ಬೀಜವನ್ನು                                                                                                      ಕಾಲಿಗೆ ಚೈನು ಮಾಡಿ ನಡೆಯುವಾಗ ಬರುವ ಶಬ್ದವನ್ನು ಕೇಳಿ ಆನಂದಿಸುತ್ತಿದ್ದೆ                                                  ಯಾರೂ ಇಲ್ಲದ ಕಾಡು ಬಯಲಿನಲ್ಲಿಭಯದಲ್ಲಿ                                                                                   ತುಳಸಿರಸ ಕುಡಿದು ಹಾಡುತ್ತಿದ್ದೆ ಹೆಣ್ಣಾಗಿ                                                                                      ಜನರಿಲ್ಲದ ಸಮಯದಲ್ಲಿ                                                                                                              ಪಾಪಸ್ ಕಳ್ಳಿ ಹಣ್ಣು ನನ್ನ ತುಟಿಯ ಬಣ್ಣವಾಗಿತ್ತು                                                                                 ಗೊಂಡೆ ಹೂಗಳು ನನ್ನ ಕತ್ತಿನ ಪದಕವಾಗಿತ್ತು                                                                                     ಹಸಿ ಮಣ್ಣು ನನ್ನ ಅಡುಗೆಯ ಪಾತ್ರೆಗಳಾಗಿದ್ದವು.                                                                    ......... ............                                                                                                       ಕ್ಯಾಸೆಟ್ ಟೇಪು ನನ್ನ ಕೂದಲಾಗಿತ್ತು                                                                                             ನನ್ನ ಮುಖದಲ್ಲಿನ ಕೂದಲನ್ನು ಉಜ್ಜಿ ಉಜ್ಜಿ ತೆಗೆಯುತ್ತಿದ್ದ ಕಲ್ಲು ನನ್ನ ಹಿತೈಷಿಯಾಗಿತ್ತು                                       ನನ್ನ ಸುತ್ತಲು ಇದ್ದ ಮರ ಗಿಡ ಗದ್ದೆ ಹಸು ಕರು ಮೇಕೆ ನನ್ನ ಬಂಧುಗಳಾಗಿದ್ದವು” (‘ನನ್ನ ಆಸ್ತಿ’)       
                                  
ಈ ಕವಿತೆಯಲ್ಲಿ ನಿರೂಪಿತವಾಗುವ ಸಂಗತಿಯು ಬೇರೆ ಯಾರದೋ ಅನುಭವವಾಗಿ ಓದುಗರಿಗೆ ತಲುಪುವುದಿಲ್ಲ. ಓದುತ್ತಿರುವ ನಮ್ಮದೇ ಭಾವಸ್ಥಿತಿಯೇನೋ ಎನ್ನುವಷ್ಟು ತೀವ್ರವಾಗಿ ನಮ್ಮೊಳಗೆ ಸೇರಿಕೊಂಡುಬಿಡುತ್ತದೆ. ಆ ಭಾವಸ್ಥಿತಿಯನ್ನು ಮರುಕಳಿಸುವ ಶಕ್ತಿಯು ಇಲ್ಲಿನ ಚಿತ್ರಗಳಿಗೆ ಮತ್ತು ಭಾಷಿಕ ರಚನೆಗಳಿಗೆ ಇದೆ ಎನ್ನುವುದು ಬಹಳ ಮುಖ್ಯ. ಅಷ್ಟೇ ಅಲ್ಲ, ಯಾವುದೇ ಸಂವೇದನಶೀಲ ಮನುಷ್ಯನು ಅನುಭವಿಸಬಹುದಾದ ಒಂಟಿತನ ಮತ್ತು ಅನ್ಯತನಗಳಿಗೆ ಸಂಕೇತವಾಗಿಯೂ ನಿಲ್ಲುತ್ತದೆ. ಕಾಫ್ಕಾ ಕತೆಗಳ ಅ-ವಾಸ್ತವ ಅನುಭವಗಳು ನಮ್ಮದಲ್ಲದೆಯೂ ನಮ್ಮದೇ ಆಗುವ ಹಾಗೆ. ಆತ್ಮಕಥನಾತ್ಮಕವಾದ ಅನುಭವ ನಿರೂಪಣೆಯಲ್ಲಿ ಈ ಗುಣ ಅಷ್ಟಾಗಿ ಇರುವುದಿಲ್ಲ. ಆದ್ದರಿಂದಲೇ ಇಲ್ಲಿನ ಪ್ರೀತಿ-ಗೀತೆಗಳನ್ನು ಯಾವುದೇ ಗಂಡು-ಹೆಣ್ಣುಗಳ ನಡುವಿನ ಭಾವಸಂಬಂಧದ ಹಾಗೆಯೇ ಗುರುತಿಸಲು ಸಾಧ್ಯವಾಗಬೇಕು. ತನ್ನ ಗಂಡ ಆಗಿ ಸಿಕ್ಕಿರುವವನು ತನಗೆ ಈಡುಜೋಡಲ್ಲ, ಕುಳ್ಳ, ಮುದುಕ ಎಂದೆಲ್ಲ ಗೊತ್ತಿದ್ದರೂ ಅವನನ್ನು ಅರ್ಥ ಮಾಡಿಕೊಳ್ಳುವ ಔದಾರ್ಯವೂ ಇಲ್ಲಿದೆ. ಈ ಭಾವನೆಗಳನ್ನು ‘ಅಬ್ನಾರ್ಮಲ್’ ಎಂದು ತಿಳಿಯಬಾರದು ಎಂಬ ತಿಳಿವಳಿಕೆಯನ್ನು ಮೂಡಿಸುವುದರಲ್ಲಿ ಈ ಕವಿತೆಗಳು ಯಶಸ್ವಿಯಾಗಿವೆ. ಕೊನೆಗೂ ಯಾವುದು, ಯಾರು ಹೇಗೆ ನಾರ್ಮಲ್ ಎಂಬ ಪ್ರಶ್ನೆ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡಬೇಕು
.
        ಈ ಕವಿತೆಗಳನ್ನು ಸಾಹಿತ್ಯವಿಮರ್ಶೆಯ ಮಾನದಂಡಗಳಿಂದ ಅಳೆಯಬಾರದು. ಚಾಂದಿನಿಯವರಿಗೆ ಕನ್ನಡ ಕಾವ್ಯವನ್ನು ಓದುವ ಅವಕಾಶ ಎಷ್ಟರ ಮಟ್ಟಿಗೆ ಹೇಗೆ ಸಿಕ್ಕಿದೆಯೋ ನನಗೆ ತಿಳಿಯದು. ಓದು-ಬರಹವನ್ನು ಪಡೆಯುವುದೇ ದುಸ್ತರವಾದ ಸನ್ನಿವೇಶದಲ್ಲಿ ಬೇಂದ್ರೆ-ಅಡಿಗರ ಮಾತು ತೆಗೆಯುವುದು ಅಪರಾಧ. ಆದರೆ, ಅವರ ಇಂದಿನ ಸನ್ನಿವೇಶದಲ್ಲಿ ಈ ಬಗೆಯ ಓದು ಅವರಿಗೆ ಸಾಧ್ಯ. ಅದು ಅವರನ್ನು ಇನ್ನಷ್ಟು ಬೆಳೆಸುತ್ತದೆ ಎಂಬ ಭರವಸೆ ನನಗೆ ಇದೆ. ‘ನುಡಿದಂತೆ ನಡೆದರೆ ನುಡಿ ನಡೆಗೆ ಕಡೆಯಲ್ಲ’, ‘ಕತ್ತಲ ಆಕಾಶಕ್ಕೆ ಮಿನುಗು ಚಿಟ್ಟೆಯಾಗು’, “ಸೌಂದರ್ಯವೆಂಬುದು ಸವಿಯಲಾಗದ ರುಚಿ”, “ಸೌಂದರ್ಯವೆಂಬುದು ಮರಳಿ ಬಾರದ ಕ್ಷಣ” ಮುಂತಾದ ಸಾಲುಗಳನ್ನು ಬರೆದಿರುವ ಚಾಂದಿನಿಯವರಿಗೆ ಕವಿಹೃದಯ ಮತ್ತು ಕವಿಲೇಖನಿ ಎರಡೂ ಇವೆ. ಅವರಿಂದ ಇಂತಹ ಹಲವು ಕವಿತೆಗಳು ಬರುತ್ತವೆ ಎಂಬ ನಂಬಿಕೆ ನನಗಿದೆ.

        ನನಗೆ ಒಂದಿಷ್ಟೂ ಪರಿಚಯವಿಲ್ಲದ ಶ್ರೀಮತಿ ಚಾಂದಿನಿಯವರು, ಈ ಕವಿತೆಗಳನ್ನು ಕೊಟ್ಟು ಸಲಹೆ ಸೂಚನೆಗಳನ್ನು, ಮುನ್ನಡಿಯನ್ನು ಕೇಳಿದಾಗ, ನನಗೆ ಅಚ್ಚರಿ ಮತ್ತು ಸಂತೋ಼ಷ ಎರಡೂ ಆಯಿತು. ಅವರಿಗೆ ನನ್ನ ಹೆಸರು ಸೂಚಿಸಿದ ಪ್ರೀತಿಯ ಗೆಳೆಯ ಬಿ. ಸುರೇಶ ಅವರಿಗೆ ನಾನು ಋಣಿ. ನನ್ನ ದಿನ ಗೋಜಲುಗಳ ಕಾರಣದಿಂದ  ಕೆಲಸ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ. (ಎಂದಿನಂತೆ) ತಾಳ್ಮೆಯಿಂದ ಕಾದಿದ್ದಕ್ಕೆ ಮತ್ತು ತಮ್ಮ ಕವಿತೆಗಳೊಂದಿಗೆ ನನ್ನ ಮಾತುಗಳನ್ನು ಸೇರಿಸಿಕೊಂಡಿದ್ದಕ್ಕೆ ಚಾಂದಿನಿಯವರಿಗೆ ನನ್ನ ವಂದನೆಗಳು.

ಎಚ್.ಎಸ್. ರಾಘವೇಂದ್ರ ರಾವ್
10-06-2014  


                              

No comments:

Post a Comment