stat CounterSunday, December 4, 2016

"ಚಂದಮಾಮ " ಅಭಿಯಾನ

*ಚಂದಮಾಮ ಅಭಿಯಾನ*


Image result for ಚಂದಮಾಮ

*ನಮ್ಮ ಬಳಿ ಇರುವ ಚಂದಮಾಮ ಹಂಚಿಕೊಳ್ಳೋಣ*
*ಬಾಲ್ಯದ ಬೆಳದಿಂಗಳನ್ನು ಜಾಲತಾಣ ಮಾಡುವುದರಲ್ಲಿ ಕೈ ಜೋಡಿಸೋಣ*

ನಮ್ಮೆಲ್ಲರ ಪ್ರೀತಿಯ ಚಂದಮಾಮ ಪತ್ರಿಕೆಯು ಆರು ದಶಕಗಳ ಕಾಲ ಕನ್ನಡದಲ್ಲಿ ಅರಳಿತ್ತು. ಇದೊಂದು ಸುಂದರ ನೆನಪು. 

 ಈಗ ಅದರ ಕಂಪನಿಯು ಮುಚ್ಚಿಹೋಗಿದೆ. ಕನ್ನಡ ಚಂದಮಾಮಗಳ ಎಲ್ಲ ಅಂತರ್ಜಾಲ ಲಿಂಕುಗಳು  ಸತ್ತುಹೋಗಿವೆ. ಅಂತರ್ಜಾಲದಲ್ಲಿ ಸ್ವಲ್ಪ ತೆಲುಗು ಇಂಗ್ಲಿಷ್ ಚಂದಮಾಮಗಳಿವೆ. ಆದರೆ ಕನ್ನಡ ಚಂದಮಾಮ ಎಂಬುದು ಕಾಣುವುದೇ ಕಡಿಮೆ. 

ಎಂ ಟಿ ವಿ ಆಚಾರ್ಯ, ನಾ.ಕಸ್ತೂರಿ, ನವಗಿರಿನಂದ ಮೊದಲಾದ ಕನ್ನಡಿಗರ ಪ್ರತಿಭೆಯ ಕೊಡುಗೆ ಚಂದಮಾಮಕ್ಕೆ ಸಂದಿದೆ. ಇಂದಿನ ಬಹುಪಾಲು ಕನ್ನಡ ಸೃಜನಶೀಲತೆಯ ಬೇರುಗಳೆಲ್ಲ ಪರೋಕ್ಷವಾಗಿ ಅವರವರ ಬಾಲ್ಯಪ್ರಭಾವವಾಗಿ ಈ ಚಂದಮಾಮಗಳಲ್ಲಿ ಊರಿಕೊಂಡಿದೆ. ಇಂತಹ ಚಂದಮಾಮವನ್ನು ಉಳಿಸಲು ಏನು ಸುಲಭದ ಪರಿಹಾರ?

ಜಗದ ಕನ್ನಡಿಗರು ತಾವು ಸಂಗ್ರಹಿಸಿಟ್ಟುಕೊಂಡ ಹಳೆಯ ಚಂದಮಾಮ ಪಿಡಿಎಫ್ ಪ್ರತಿಗಳನ್ನು ಇನ್ನೊಮ್ಮೆ ಅಂತರ್ಜಾಲಕ್ಕೆ ಹರಿಯಬಿಡುವುದೆ ಇದಕ್ಕೆ ಡಿಜಿಟಲ್ ಪರಿಹಾರ. ಆಗ ಆ ಬೆಳದಿಂಗಳ ಲೋಕವು ಕನ್ನಡಿಗರಿಗೆ ಶಾಶ್ವತವಾಗಿ ಉಚಿತವಾಗಿ ಸಿಗುತ್ತದೆ. ಚಿತ್ರಕಲಾವಿದರು, ಶಿಲ್ಪಿಗಳು, ರಂಗಕರ್ಮಿಗಳು, ಮಕ್ಕಳ ಸಾಹಿತಿಗಳು, ಶಿಕ್ಷಣ ತಜ್ಞರು, ಸಂಶೋಧಕರು, ಸಾಹಿತ್ಯ ಚರಿತ್ರೆಕಾರರು, ಸಂಸ್ಕೃತಿಚಿಂತಕರು - ಹೀಗೆ ಅದೆಷ್ಟೊ ಕ್ಷೇತ್ರದ ಜನರು ಈ ಶೇರ್ ನಿಂದ ಅಮೂಲ್ಯ ಪ್ರಯೋಜನ ಪಡೆಯುತ್ತಲೇ ಇರುತ್ತಾರೆ. ಕನ್ನಡದ ಈ ಆಂಟಿಕ್ ಸಂಪತ್ತು ನಮ್ಮ ಬಳಿ ನಾಶವಾಗದೆ ಉಳಿದುಕೊಂಡಿದೆ ಎಂಬ ಭಾವನೆ ನಮಗೆ ದೊಡ್ಡ ಧನ್ಯತೆ ತರುತ್ತದೆ. ಏಳುನೂರಕ್ಕು ಮಿಕ್ಕಿದ ಚಂದಮಾಮಗಳು ಅಂತರ್ಜಾಲದಲ್ಲಿ ಒಂದೆಡೆ ಒಟ್ಟಾಗಿ ಉಚಿತವಾಗಿ ಲಭ್ಯವಾಗಿ ಮೆರೆಯುತ್ತವೆ. 

ಕಾಗದ ಸ್ವರೂಪದ ಚಂದಮಾಮವು ಅದರ ಮೂಲ ಸಂಗ್ರಾಹಕನಲ್ಲೆ ಇರುತ್ತದೆ. ಕೇವಲ ಪಿ ಡಿ ಯಪ್ ಪ್ರತಿ ಅಂತರ್ಜಾಲಕ್ಕೆ ಬೇಕಾದುದು. ನಮ್ಮದು ಅಧ್ಯಯನಾತ್ಮಕ ಸಂಗ್ರಹ, ವಾಣಿಜ್ಯಾತ್ಮಕ ಅಲ್ಲ.

ಇದು ಅತ್ಯಗತ್ಯದ ಕನ್ನಡ ಕೆಲಸ ಎಂಬುದಾಗಿ ಶತಾವಧಾನಿ ಡಾ. ಆರ್. ಗಣೇಶ್ ಮೊದಲಾದ ವಿದ್ವಾಂಸರು ಸಾರಸ್ವತಪ್ರಪಂಚಕ್ಕೆ ವಿನಂತಿಸಿಕೊಂಡಿದ್ದಾರೆ. ಇದರ ಅಗತ್ಯ ಮನಗಂಡ ಅಮೆರಿಕದಲ್ಲಿರುವ ಪ್ರಸಿದ್ಧ ಬರಹಗಾರ ಶ್ರೀವತ್ಸ ಜೋಶಿಯವರು ತಮ್ಮ ಸಂಗ್ರಹದಲ್ಲಿದ್ದ ಹಲವು ವರುಷಗಳ ಹಳೆಯ ಚಂದಮಾಮಗಳ ಗೂಗಲ್ ಡ್ರೈವ್ ಲಿಂಕ್‌ಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿ ಅದ್ಭುತ ಆರಂಭ ಮಾಡಿದ್ದಾರೆ.

ಆದರೆ ಸುಮಾರು ಆರುನೂರಕ್ಕೂ ಹೆಚ್ಚು ಕನ್ನಡ ಚಂದಮಾಮಗಳು ಸಿಗುವುದಕ್ಕೆ ಇನ್ನು ಬಾಕಿ ಉಳಿದಿವೆ. ಇವೆಲ್ಲ ಒಂದೇ ಕಡೆ ಒಟ್ಟಾಗಿ ಅಂತರ್ಜಾಲತಾಣವಾಗಲು ಲಭ್ಯತೆಯ ಮಾಹಿತಿಯು ವಿನಿಮಯವಾಗಬೇಕು. ಇದಕ್ಕಾಗಿ ಆಸಕ್ತ ಅಂತರ್ಜಾಲ ಸ್ವಯಂಸೇವಕರು

chandamamaproject@gmail.com 

ಎಂಬ ಇಮೇಲ್ ಮೂಲಕ ಕನ್ನಡ ಚಂದಮಾಮಗಳ ಲಿಂಕ್ ಸಂಪಾದಿಸುತ್ತಿದ್ದಾರೆ. ಚಂದಮಾಮದ ಅಭಿಮಾನಿಯಾದ ಚಿತ್ರ ನಿರ್ದೇಶಕ ಅಭಯಸಿಂಹರು ಇದರ ತಾಂತ್ರಿಕ ಸಹಕಾರ ನೀಡುತ್ತಿದ್ದಾರೆ.

* ದಯವಿಟ್ಟು ಈ ಕೆಳಗಿನ ಇಮೇಲ್‌ಗೆ ಕನ್ನಡ ಚಂದಮಾಮಗಳ ಜೀವಂತ ಲಿಂಕ್‌ಗಳನ್ನು ಕಳುಹಿಸಿಕೊಡಿ. ನಿಮ್ಮಲ್ಲಿ ಕಾಗದದ ಮೂಲ ಚಂದಮಾಮ ಪ್ರತಿ ಇದ್ದರೆ ಅದನ್ನು ಪಿಡಿಎಫ್ ಮಾಡಿ ಅಂತರ್ಜಾಲಕ್ಕೆ ದಯಮಾಡಿ ಒದಗಿಸಿ. ನಿಮ್ಮ ಬಳಿ ಒಂದೇ ಒಂದು ಚಂದಮಾಮ ಇದ್ದರೂ ಅದರ ಅಗತ್ಯ ಇದೆ. ಚಂದಮಾಮವು ನಿಮ್ಮ ಬಳಿಯಿಂದ ಅಂತರ್ಜಾಲಕ್ಕೆ ಬರಬೇಕೆ ಹೊರತು ಮುದ್ರಣಾಲಯದಲ್ಲಿ ಅದು ಇನ್ನೊಮ್ಮೆ ಹುಟ್ಟಲಾರದು.*

 ಚಂದಮಾಮ ದಾನಿಯ ಹೆಸರು ತಾಣದಲ್ಲಿ‌ ಕೃತಜ್ಞತೆಯೊಡನೆ ನಮೂದಾಗುತ್ತದೆ. ಮರಳಿ ಚಂದಮಾಮವನ್ನು ಓದುವ ಓದಿಸುವ ಅಭಿಯಾನ ನಮ್ಮ ಮಕ್ಕಳ ವ್ಯಕ್ತಿತ್ವ ವಿಕಸನವಲ್ಲವೇ ? ನಮ್ಮೆಲ್ಲರ ಬಾಲ್ಯದ ಆ ಸುಂದರ ಬೆಳದಿಂಗಳು ನಾಳೆಗೆ ಉಳಿಯುವಂತಾಗಬೇಡವೇ?

ನಮಸ್ಕಾರಗಳು

chandamamaproject@gmail.com

ದಯವಿಟ್ಟು ಚಂದಮಾಮ ಅಭಿಯಾನದ ಈ ವಿನಂತಿಯನ್ನು ಪೇಸ್ ಬುಕ್, ವಾಟ್ಸ್ ಅಪ್ ಗಳಿಂದ ತೊಡಗಿ ಎಲ್ಲ ಸಾಮಾಜಿಕ ಜಾಲತಾಣ, ಬ್ಲಾಗ್ ಮತ್ತು ಮುದ್ರಣ ಸ್ವರೂಪದ ಪತ್ರಿಕಾ ಪ್ರಚಾರ, ಓದುಗರ ಓಲೆ ಹೀಗೆ ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲ ಅಪಾರವಾಗಿ ಶೇರ್ ಮಾಡಿ ಜಗದ ಮೂಲೆಗಳಿಗೆ ತಲುಪಿಸಿ.

No comments:

Post a Comment