ಉದಯಿಸುವ ಸೂರ್ಯನೇ
ನಿಧಾನಿಸು ಒಂದಿಷ್ಟು,
ಅವಳಿಗೂ ಸಿಗಲಿ
ಮುಂಜಾವಿನ ಸವಿನಿದ್ದೆ ಇನ್ನಷ್ಟು.
ಓ ಬಾನ ಚಂದಿರನೇ
ಓಡುತ್ತಿರುವೆ ಎಲ್ಲಿಗೋ?
ಚೆಲ್ಲು ಬೆಳದಿಂಗಳ
ಅವಳ ಕನಸುಗಳೊಳಗೂ.
ಹೀಗೊಂದು ಕೋರಿಕೆ
ಬೀಸುವ ತಂಗಾಳಿಗೆ,
ನೇವರಿಸಿ ನೀಡು ಚೇತರಿಕೆ
ಸೋತ ಅವಳ ಕೈಗಳಿಗೆ.
ಅಡುಗೆಮನೆಯ
ಪ್ರೀತಿಯ ಸಂಗಾತಿಗಳೇ,
ಅವಳ ಏಕಾಂತದ ಭಾವಲಹರಿ
ನಿಮಗಷ್ಟೇ ಮೀಸಲೇ?
ಆಕೆ ತಬ್ಬಿದ ಮುದ್ದಿನ ದಿಂಬೇ,
ನೀಡಿದೆಯಾ ಸಾಂತ್ವನ?
ನಿತ್ಯವೂ ಕೇಳಿ
ಅವಳ ಕಣ್ಣೀರ ಕವನ.
ಗಡಿಯಾರವೇ ಅರಿಯಲಾರೆಯಾ
ಸಮಯದ ಪರಿವೆಯಾ?
ನೀಡಲಾರೆಯೇಕೆ ಅವಳಿಗೆಂದಷ್ಟೇ
ಸ್ವಲ್ಪ ಸಮಯವಾ?
ನೋವೆಲ್ಲಾ ನುಂಗಿ ನಿನ್ನೆದುರು
ನಗುವಾಗ ಅಚ್ಚರಿ,
ಓ ಕನ್ನಡಿಯೇ, ತಡವೇಕೆ?
ಹೇಳಿಬಿಡು ಅವಳಿಗೆ ’ನೀನೇ ಸುಂದರಿ’.
No comments:
Post a Comment