stat Counter



Friday, August 18, 2017

ರಾಮದಾಸ್ -- ಕೊಡುತ್ತೀರ , ಯಾರಾದರೂ ನನಗೆ ನನ್ನ ದೇವರನ್ನು ?

*ಕೊಡುತ್ತೀರ, ಯಾರಾದರೂ ನನಗೆ, ನನ್ನ ದೇವರನ್ನು ?
ಕೊಡುತ್ತೀರ, ಯಾರಾದರೂ ನನಗೆ, ನನ್ನ ದೇವರನ್ನು
ಕಳೆದುಕೊಂಡಿದ್ದೇನೆ, ಹೆತ್ತವಳು ನನ್ನ ಹೃದಯದಲ್ಲಿ ಬಿತ್ತಿದ್ದನ್ನು
ಬಾಲಿಶ ಕಲ್ಪನೆಗಳು ಹದವಾಗಿ ಉತ್ತಿದ್ದನ್ನು ?
ಹರಿಕಥೆ ಗೊಬ್ಬರವಾಗಿ, ದಾಸರ ಹಾಡು ಮಳೆಯ ಜೋಗುಳವಾಗಿ
ಅಲ್ಲಿ ಕಾಮನ ಬಿಲ್ಲು, ಇಲ್ಲಿ ಹುಣ್ಣಿಮೆ ಚಂದ್ರ, ಮುರಲೀನಾದ !
ಬಟಾನ ಬಯಲಿನೇಕಾಂತದಲ್ಲಿ ಗೋಪಾಲಬಾಲಸಖ್ಯ !
ಎಲ್ಲಿ..ಎಲ್ಲಿ..ಎಲ್ಲಿ ಹೋಯಿತು ಅವನ ಕೊಳಲ ಗಾನ ?
ಅಂದು ಪಂಚಕೋಶವ ತುಂಬಿ ಝೇಂಕರಿಸಿದ್ದು
ಅನ್ನವಾಗದೆ, ಬಟ್ಟೆಯಾಗದೆ, ನೀರು ನೆಳಲಾಗದೆ, ಕಡೆಗೆ
ಕಣ್ಣೊರೆಸುವ ಕೈಯೂ ಆಗದೆ.....ಏನೇನೂ ಆಗದೆ, ಆಗುತ್ತದೆಯೆ
ವರಾಹನ ದಾಡೆ, ಉಗುರು, ಪಾದ, ಕೊಡಲಿ, ಬಾಣ, ಚಕ್ರ ?
ಇಲ್ಲಿ ರಾವಣಸ್ಪರ್ಶಕ್ಕೆ ಮುರಿಯುತ್ತಾವೆ ಲಟಲಟನೆ ಶಿವನ ಬಿಲ್ಲು
ಪೂತನಿ ಹಾಲು ಸಮೃದ್ಧ ಸರಬರಾಜಾಗುತ್ತದೆ, ಮುಗ್ಧರಿಗೆ
ನೆಲ ನೀರು ಆಕಾಶಗಳಲ್ಲಿ ರಾರಾಜಿಸುತ್ತವೆ ಶಕಟಗಳು.
ಕೊಡುತ್ತೀರ, ಯಾರಾದರೂ ನನಗೆ, ನನ್ನ ಬಾಲ್ಯವನ್ನು ?
ಲಂಗೋಟಿ ಎಳೆದೋ, ಕೊರಳ ಪಟ್ಟಿ ಹಿಡಿದೋ
ಹೆಡೆಮುರಿ ಕಟ್ಟಿ ಬೆನ್ನಿಗೆರಡು ಗುದ್ದಿಯೋ ಕೇಳುತ್ತೇನೆ : ಯಾಕೋ ಕತ್ತೆ
ನಿನ್ನ ವಿನಾ ಇಲ್ಲಿ ಏನೇನೂ ಆಗುವುದಿಲ್ಲ ಅಂದೆಯಂತೆ, ಹೌದೆ ?
ಮಳೆ ಪ್ರವಾಹ ಕ್ಷಾಮ ಜ್ವಾಲಾಮುಖೀಸ್ಫೋಟ ಹಿಮಪಾತ ಬಿರುಗಾಳಿ ಬಿಟ್ಟರೂ
ಮಗನೆ, ಹೇಗೆ ಬಿಡಲೋ ನಾನು, ಚಾಕು ಚೂರಿ ಗುಂಡು ಆಟಂಬಾಂಬು, ಜಾತಿ
ಜಾತಿಗಳನ್ನ ?
ಧನಪಿಶಾಚಿಯ ಸಹಸ್ರಶೀರ್ಷ, ಸಹಸ್ರಬಾಹು-ಪಾದಗಳನ್ನ ?
ನನ್ನ ತಾಯಿ ಎಲ್ಲ ನದಿ ಸಮುದ್ರ ಸೇರುವ ಹಾಗೆ, ಸರ್ವಾಂತರ್ಯಾಮಿ
ನನ್ನೆದೆಯ ಸೇರುವ ಹಾಗೆ ಮಾಡಿದ್ದಳಯ್ಯ---ಕಳೆದುಕೊಂಡಿದ್ದೇನೆ.
ಏ ಸಾಧು, ಸಂನ್ಯಾಸಿ ಸ್ವಾಮೀಜಿ ಬೂದೀಬಾಬ ಮೌಲ್ವೀ ಪೋಪ್
ಕೊಡುತ್ತೀರ, ಯಾರಾದರೂ ನನಗೆ, ನನ್ನ ದೇವರನ್ನ
ಭಯವಿಲ್ಲದೆ ಬೆರಗಿಲ್ಲದೆ ಮುಚ್ಚುಮರೆಯಿಲ್ಲದೆ
ನನ್ನ ಕೈ ಹಿಡಿದು, ತಾನು ನಡೆದು
ನನ್ನನ್ನು ನಡೆಸುವವನನ್ನ ?

Image may contain: one or more people

Like
Comment
Share
Jyoti Ballal and 4 others

No comments:

Post a Comment