stat Counter



Monday, January 22, 2018

ಶುಭಶ್ರೀಪ್ರಸಾದ್ ಮಂಡ್ಯ -- ಬಿಳಿ ಹಣ ಮತ್ತು ಕೆಂಪು ಬಣ್ಣ

*ಬಿಳಿ ಹಣ ಮತ್ತು ಕೆಂಪು ಬಣ್ಣ..*

ಚಂದ್ರ ಮುಕುಟ ಧರಿಸಿ
ಉಯ್ಯಾಲೆ ತೂಗುತ್ತಿದ್ದ,
ವಿಷಮದ ವಿಷಯ
ಭಿನ್ನರಾಶಿಯ ಹಾಸಿನ ಮೇಲೆ ಕಾಲಾಡುತ್ತ
ಪಗಡೆಯಾಡುವ
ಹೊತ್ತು
ಬೆಳಗೊಳದ ದೇವ
ತಣ್ಣಗೆ ಒಳಗೊಳಗೆ ನಗುತಿದ್ದ.

ಸಿಡಿ ಹಬ್ಬಕ್ಜೆ
ಬಾಯಿಬೀಗ, ಪೂಜಾಕುಣಿತ,
ವೀರಗಾಸೆ ನರ್ತನ,
ಹುಲಿ ವೇಷ ಒಳಗೊಳಗೇ ಹುಟ್ಟಿಸುವ ಅರುಯದ ಹೊಸ ಭಯ,,
ಕಣ್ಮುಚ್ಚಿ ಅಡಗಿದರೂ
ಹೂಬಾಣ ಚುಚ್ಚಿ
ಎದೆಗೂಡು ನಡುನಡುಗಿ
ಮಂಜುಗಡ್ಡೆ ಹೊದಿಕೆಯ
ಸರಿಸಿ ಬಿಸಿ ಹಬೆಯ‌ ಉಸಿರ
ಬಿಡುಗಡೆಗೆ ಕಾತರಿಸಿ ನೋಯುತಿದೆ.
ಚಕ್ರವಾಕ ರಾಗ ಸೂಸುವ‌ ಮೊದಲೇ ಶ್ರೀರಾಗ ತಾಳಹಾಕಿ  ಹೊಸ್ತಿಲು ಮೆಟ್ಟಿ.

ರೈಲು ಹಳಿಗಳ ಮೇಲೆಯೇ
ಓಡುತ್ತದೆ ಎನ್ನುವ ನಂಬಿಕೆ
ಮುರಿದು ಕಣ್ಣು‌ ತೇವ ಆಗಿತ್ತು
ಮಾರಿಕೊಂಡ ನನ್ನ
ಮನಸ್ಸು ಹಿಗ್ಗುವಿಕೆಯ
ಗುಣವನ್ನೇ ಕಳೆದುಕೊಂಡು.

ಹಾರುವ ಬಿಳಿ ಪಾರಿವಾಳಗಳ
ರೆಕ್ಕೆಗೆ ಹಸಿದಾರ ಕಟ್ಟಿ
ಗಾಳಿಪಟ ಹಾರಿಸುವ
ಹಣದ  ತಣ್ಣಗಿನ‌ ಕ್ರೌರ್ಯ
ಹಸಿದ ಹೊಟ್ಟೆಗಳ ತಣಿಸುವುದಿಲ್ಲ.

ಮಂಚಗಳ ಸದ್ದ ಲಾಲಿಸುವ
ಬಿಳಿ ಹಣದ ಕೆಂಡದಂಥ ಕೆಂಪು ಮೂಗಿಗೆ
ನತ್ತು ಹಾಕುವರಿಲ್ಲ,

ಬಿಳಿ ಹಣವೂ 
ಬಣ್ಣ ಬಣ್ಣ ಬಳಿದುಕೊಂಡು
ಮುಖವಾಡ ತೊಟ್ಟಿವೆ.
ರೆಕ್ಕೆ ಬಿಚ್ಚಿ ಚಂದದೆ ಹಾರುವ ಗಿಳಿಮರಿಗಳ ಹಾರಿಸಿಕೊಂಡು ಕಚ್ಚಿ‌ ಚುಚ್ಚಿ ಕೊಲ್ಲುವ ರಣಗಿಡುಗಗಳಿಗೆ ಉಣಿಸುವ ಬೆಳ್ಳಿ‌ ನಾಣ್ಯಗಳ  ನಗು,
ಕಣ್ಣೀರಿಗೆ ಕಟ್ಟೆ ಕಟ್ಟಿ ನೆಲದೊಡಲ ಸೇರಿಸಿದೆ.

ಸದ್ದಡಗಿದ ಬಂದೂಕಿನ‌ ನಳಿಕೆಯಲಿ ಗುಬ್ಬಿ ಗೂಡುಕಟ್ಟಿ‌ ಮೊಟ್ಟೆಯಿಕ್ಕಿದೆ.
ಮರಿಗಳು ಚಿಲಿಪಿಲಿ ಎನುವ ವೇಳೆ  ಹಣದ ಗೆಜ್ಜೆಲಾಲಿತ್ಯಕೆ ಮಣಿದು‌ ಆರ್ಭಟಿಸುವ ನಳಿಕೆಯ ಬಿಸಿಗೆ ಮರಿಗಳೆಲ್ಲ ಕರ್ರಗಾಗಿ ರಕ್ತದ ಕಮಟು ವಾಸನೆ ಸುತ್ತಮುತ್ತ..

ಕಪ್ಪು‌ ಹಣದ ಬಿಳಿ‌ ಮುಖವ ಅರಸುತ್ತ ಅಂಡಲೆಯುತಿಹೆ
ಕಂಡರೊಂದು ದಿನ‌ ಕಾಣಿಸುವೆ.
ಬುದ್ಧ ಎಂದೂ ನಗೆಮುಖವನೇ‌ ಹೊರುತ್ತಾನೆ

ಹಳೇ ಪೇಪರ್ ಖಾಲಿ ಸೀಸೆ ಕೂಗು ರಸ್ತೆಯಾಚೆಗೂ ಹಬ್ಬಿದೆ
ಪ್ಲಾಸ್ಟಿಕ್ ಕವರ್ ಆಯುವ ಹೊಟ್ಟೆ ಬೆನ್ನುಹುರಿ ಒಂದಾದ ಪುಟ್ಟ ಹುಡುಗ 
ಜೇಬಿನಿಂದ ಜಾರಿ‌ ಉರುಳಿ ಕವರಿನ ಸೆರಗಿನಡಿ ಅವಿತಿರಬಹುದಾದ ಐದು ಪೈಸೆ ನಾಣ್ಯವ ಹುಡುಕುತ್ತಲೇ ಇದ್ದಾನೆ 
ಇನ್ನೂ....


-✍ಶುಭಶ್ರೀಪ್ರಸಾದ್, ಮಂಡ್ಯ

No comments:

Post a Comment