stat Counter



Monday, July 9, 2018

ಪಾ. ವೆಂ ಆಚಾರ್ಯರು ಕನ್ನಡಕ್ಕೆ ತಂದ ಬಂಗಾಳಿ ನೀಳ್ಗತೆ -- " ವಾಸನಾ "

ಬಲಾಯಿಚಂದ್ ಮುಖ್ಯೋಪಾಧ್ಯಾಯ { 1899-1979 }  ಠಾಗೋರೋತ್ತರ ಬಂಗಾಳಿ ಸಾಹಿತ್ಯದ ಮುಖ್ಯ ಲೇಖಕರಲ್ಲಿ ಒಬ್ಬರು. ಬನ್ ಫೂಲ್ " ಕಾವ್ಯನಾಮದ ಬಲಾಯಿಚಂದ್ ಅವರು ಬಂಗಾಳಿ ಕಾವ್ಯ , ನಾಟಕ , ಕಾದಂಬರಿ , ಸಣ್ಣಕತೆ ಪ್ರಕಾರಗಳಿಗೆ ಸಮೃದ್ದ ಕೊಡುಗೆ ನೀಡಿದ್ದಾರೆ . ಅವರ 61  ಕಾದಂಬರಿಗಳು , 600 ಸಣ್ಣ ಕತೆಗಳು ಪ್ರಕಟವಾಗಿವೆ .. ಸತ್ಯಚರಣ ಮುಖ್ಯೋಪಾಧ್ಯಾಯ , ಮೃಣಾಲಿನಿದೇವಿ ದಂಪತಿಗಳ ಮಗನಾಗಿ ಬಲಾಯಿಚಂದರು ಹುಟ್ಟಿದ್ದು ಬಿಹಾರದ ಪೂರ್ವೀಯಾ ಜಿಲ್ಲೆಯ ಮೊನಿಹಾರಿಯಲ್ಲಿ{1899}. ಸತ್ಯಚರಣ್ ಬಿಹಾರದ ಪೂರ್ವಿಯಾ ಜಿಲ್ಲಾಸ್ಪತ್ರೆಯಲ್ಲಿ ಡಾಕ್ಟರ್ ಆಗಿದ್ದರು. ಬಲಾಯಿಚಂದರು 1928 ರಲ್ಲಿ  ಕಲ್ಕತ್ತ ಮೆಡಿಕಲ್ ಕಾಲೇಜಿನ ಎಮ್. ಬಿ. ಬಿ. ಎಸ್ ಪದವೀಧರರಾದರು. ಮುನಿರಾಬಾದ್ ನ ಮುನಿಸಿಪಲ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಬಲಾಯಿಚಂದರು ಮುಂದೆ ಭಾಗಲ್ಪುರದಲ್ಲಿ  ಸ್ವಂತ ಕ್ಲಿನಿಕ್ ಆರಂಭಿಸಿದರು .

 ಬಲಾಯಿಚಂದರ ಕಾದಂಬರಿಗಳನ್ನು ಆಧರಿಸಿದ ಎಂಟು ಸಿನಿಮಾಗಳಿವೆ . ಅವುಗಳಲ್ಲಿ " ಭುವನ್ ಶೋಮ್ " { 1960 } , " ಅಗ್ನೀಶ್ವರ " ಮತ್ತು " ಅರ್ಜುನ್ ಪಂಡಿತ್ "  ಪ್ರಸಿದ್ದಿ ಗಳಿಸಿವೆ.   ಮೃಣಾಲ್ ಸೆನ್ ನಿರ್ದೇಸಿದ ’ ಭುವನ್ ಶೋಮ್ "  ರಾಷ್ಟ್ರ ಪ್ರಶಸ್ತಿ ಗಳಿಸಿದೆ. ಮಧುಸೂದನ "{1940 -  ಮೈಖೇಲ್ ಮಧುಸೂಧನ ದತ್ತರ ಜೀವನ ಚರಿತ್ರೆ.} , " ವಿದ್ಯಾ ಸಾಗರ "{ 1941  -ಈಶ್ವರಚಂದ್ರ ವಿದ್ಯಾ ಸಾಗರ ಅವರ ಜೀವನ ಚರಿತ್ರೆ } ಗಳನ್ನು ಬರೆದಿರುವ ಬಲಾಯಿಚಂದರು ತನ್ನ ಆತ್ಮಕತೆಗೆ " ಪಶ್ಚಾತ್ತಾಪ " ಎಂಬ ಶೀರ್ಷಿಕೆ ನೀಡಿದ್ದಾರೆ.. 1975 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡಿದ ಬಲಾಯಿಚಂದರ ಸಮಗ್ರ ಕೃತಿಗಳು ಅಂತರ್ಜಾಲದಲ್ಲಿ ಲಭ್ಯ ಇವೆ.
                                                  ೨
   ಎಮ್. ಹರಿದಾಸ ರಾವ್  ಕನ್ನಡದ ಅಲಕ್ಷಿತ ಲೇಖಕರಲ್ಲೊಬ್ಬರು. ಹರಿದಾಸ ರಾವ್ ಅವರು ಹುಬ್ಬಳ್ಳಿಯಲ್ಲಿ ಆರಂಭಿಸಿದ್ದ  ಸರ್ವೋದಯ ಸಾಹಿತ್ಯಮಾಲೆಯಲ್ಲಿ ಪಿ. ವಿ. ಆಚಾರ್ಯ { ಪಾ. ವೆಂ. ಆಚಾರ್ಯ} ರ  " ವಾಸನಾ "  { ಬನ್ ಫೂಲ್ ಅವರ ಬಂಗಾಳಿ ಕತೆಯ ಆಧಾರದಿಂದ } 1950 ರಲ್ಲಿ ಪ್ರಕಟವಾಗಿದೆ. .ಪಾ. ವೆಂ . ಆಚಾರ್ಯರು { 1915- 1992 }  ತನ್ನ  35  ನೆಯ ವಯಸ್ಸಿನಲ್ಲಿ ಈ ನೀಳ್ಗತೆಯನ್ನು ಭಾಷಾಂತರಿಸಿದ್ದಾರೆ . ಬಂಗಾಳಿ ಭಾಷೆ ಕಲಿತಿದ್ದ ಪಾ.ವೆಂ ಮೂಲ ಬಂಗಾಳಿಯಿಂದಲೇ ಈ ಕೃತಿಯನ್ನು ಅನುವಾದಿಸಿರಬಹುದು.
     ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳಿಯ ಶರತ್ ಚಂದ್ರ , ಬಂಕಿಮ ಚಂದ್ರ , ಮತ್ತು ರವೀಂದ್ರನಾಥ ಟಾಗೋರ ಅವರ ಹಲವು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಪಾ.ವೆಂ .ಆಚಾರ್ಯರು ಬಂಗಾಳಿಯ ಹೊಸ ಲೇಖಕರೊಬ್ಬರನ್ನು - ಬಲಾಯಿಚಂದ ಮುಖ್ಯೋಪಾಧ್ಯಾಯ - ಕನ್ನಡಕ್ಕೆ ಪರಿಚಯಿಸಿದರು .
 ಬಲಾಯಿಚಂದರು ತನ್ನ ಕಥನ ತಂತ್ರ ಮತ್ತು ಪಾತ್ರಗಳ ಅಂತರಂಗ ಶೋಧದದಿಂದ ಖ್ಯಾತರಾದ ಲೇಖಕ . ’ ವಾಸನಾ ’ ನೀಳ್ಗತೆಯಲ್ಲೂ ಒಂದು ವಿನೂತನ ಕಥನ ತಂತ್ರ ಕಾಣಿಸುತ್ತದೆ .’ ವಾಸನಾ ದ ’ ದ ನಿರೂಪಕ ಒಬ್ಬ ಸರಕಾರಿ ಆಸ್ಪತ್ರೆಯ   ಡಾಕ್ಟರ್. ತನ್ನ ಕರ್ತವ್ಯಕ್ಕಾಗಿ  ನೂರಾರು ಹೆಣಗಳ ಮರಣೋತ್ತರ ಪರೀಕ್ಷೆ ಮಾಡಿದ್ದಾನೆ. ನಿದ್ರೆ ಬರದ ಒಂದು ರಾತ್ರಿ ಅವನಿಂದ ಸಿಗಿಸಿಕೊಡ ಹಲವು ಪಾತ್ರಗಳು ಅವನ ಬಳಿ  ಬಂದು ತಮ್ಮ ಕತೆ ವಿವರಿಸುತ್ತವೆ . ಇಲ್ಲಿ ಭಗ್ನ ಪ್ರಣಯ , ದಾಂಪತ್ಯೇತರ ಸಂಬಂಧ , ಬಡತನ , ಹೆಣ್ಣಿನ ಬಣ್ಣವನ್ನು ಕುರಿತ ಪೂರ್ವಗ್ರಹ , ಕೌಟುಂಬಿಕ ಕ್ರೌರ್ಯ , ಬಾಲ್ಯ ವಿವಾಹಗಳಿಗೆ ಸಂಬಂಧಿಸಿದ ಹಲವು ದಾರುಣ ಕತೆಗಳಿವೆ. ವಿದೇಶಿ ಪಸ್ತ್ರಗಳ ಬಹಿಷ್ಕಾರ ಚಳುವಳಿಯಿಂದ ಒಬ್ಬನ ಬಟ್ಟೆ ಅಂಗಡಿ ದಿವಾಳಿಯಾದ ಪ್ರಸ್ತಾಪ - ಇದು ಸ್ವಾತಂತ್ರ್ಯ ಪೂರ್ವದ ಕತೆ ಎಂಬುದನ್ನು ಸೂಚಿಸುತ್ತದೆ . ಪುರುಷ ಪ್ರಧಾನ ಸಮಾಜದ ಗಂಡು  ಹೆಣ್ನಿ ನ ಸಂಕೀರ್ಣ ಸಂಬಂಧಗಳನ್ನು ಈ ನೀಳ್ಗತೆ ಅನಾವರಣ ಗೊಳಿಸುತ್ತದೆ . ಸೇಡು ಹಾಗೂ ಕೇಡಿನ ,’ ಭದ್ರಲೋಕ’ ದ ಅಭದ್ರ ದಾಂಪತ್ಯ ವ್ಯವಸ್ಥೆಯ ವಿವಿಧ ಕರಾಳ ಮುಖಗಳನ್ನು ಈ ನೀಳ್ಗತೆ ಚಿತ್ರಿಸುತ್ತದೆ .
   ಈ ನೀಳ್ಗತೆಯ ಒಬ್ಬಳು , ಹೆಂಗಸರ ಅಸಹಾಯಕ ಸ್ತಿತಿಯನ್ನು ಹೀಗೆ ವಿವರಿಸುತ್ತಾಳೆ --"ನಾನು ಬದುಕಿದ್ದಾಗ ನೋಡಿದ ಮಟ್ಟಿಗೆ   ಗಂಡಸರು ನಮ್ಮನ್ನು ತೆಗೆದುಕೊಂಡು ಬರಿ ಚಿನ್ನಾಟ ಆಡುತ್ತಾರೆ.. ನಾವು ಹೆಂಗಸರು ಫುಟ್ ಬಾಲ್ . ಅವರು ಪಟುಗಲಾದ ಪಂದ್ಯಾಟಗಾರರು . "    ಹದಿಮೂರರ ಹರೆಯದಲ್ಲಿ " ಪತಿದೇವರನ್ನು " ಕಳೆದುಕೊಂದ ಯುವತಿ , ವಿಧವೆಯರರ ಪಾಡನ್ನು ಕುರಿತು  " ನಮ್ಮ ದೇಶದಲ್ಲಿ ಸತೀ ಸಹಗಮನ ಪದ್ದತಿ ಇತ್ತಲ್ಲ ಅದೇ ಸುಖವಿತ್ತು ನೋಡಿರಿ. ಗಂಡನ ಜತೆಗೇ ಹೆಂಡತಿಯೂ ಸುಟ್ಟು ಹೋಗುತ್ತಿದ್ದಳು . ಸರಿ. ಹೀಗೆ ಬೆಂದು ಬೆಂದು ಕೊರಗಿ ಕೊರಗಿ ಸಾಯುವ ಅವಸ್ಥೆ ಯಾರಿಗೆ ಬೇಕಿತ್ತು ? ಈ ದೇಶದ ಮನೆ ಮನೆಯಲ್ಲಿಯೂ ವಿಧವೆಯರು ಬೆಂದು ಬೆಂದು ಸಾಯುತ್ತಿದ್ದಾರೆ. ಬೆಂಕಿಯ ರೂಪ ಮಾತ್ರ ಬೇರೆ- ಅದು ಚಿತಾನಲ , ಇದು ವ್ಯಥಾನಲ " ಹುಚ್ಚಿ ಹೆಂಡತಿಯನ್ನು ಅಟ್ಟದ ಮೇಲೆ ಬಂಧಿಸಿಟ್ಟು , ತನ್ನ ಏಕಮಾತ್ರ ಪುತ್ರನನ್ನು ಮನೆ ಪಾಥದವನಿಗೆ ಒಪ್ಪಿಸಿ , ತನ್ನ ಲಂಪಟಲೀಲೆಗೆ ಹೊರಡುವ ಶ್ರೀಮಂತನ ಚಿತ್ರ ಕಣ್ಣಿಗೆ ಕಟ್ಟುವಂತಿದೆ.
                      ಬಡರೋಗಿಗಳನ್ನು ಅಲಕ್ಷಿಸುವ ಸರಕಾರಿ ಆಸ್ಪತ್ರೆಯ ವರ್ಣನೆಯಲ್ಲಿ , ವೈದ್ಯ ವೃತ್ತಿಯಲ್ಲಿದ್ದ ಲೇಖಕ ಬಲಾಯಿಚಂದರ   ವೃತ್ತಿ ವಿಮರ್ಸೆ ತೀಕ್ಷ್ಣ ವಾಗಿದೆ.’ . ವಾಸನಾದಲ್ಲಿ ’ ದಲ್ಲಿ ಒಂದು ಕಲಾತ್ಮಕ  ಸಿನಿಮಾದ ಪಠಯ ನಿಚ್ಚಳವಾಗಿ ಕಾಣಿಸುತ್ತದೆ..’ ವಾಸನಾ ’ ಶಬ್ದಕ್ಕಿರುವ ಹಿಂದಿನ ಜನ್ಮದ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ , ಕಲ್ಪನೆ , ಬಯಕೆ , ಸುಗಂಧ , ದುರ್ಗಂಧ , ಜಾಡು - ಈ ಎಲ್ಲ ಅರ್ಥಗಳನ್ನೂ ಈ ಕಾದಂಬರಿ  ಧ್ವನಿಸುತ್ತದೆ. ಪಾ. ವೆಂ. ಆಚಾರ್ಯರ ಭಾಷಾಂತರ ಸ್ವತಂತ್ರ ಕೃತಿಯಂತೆ ಓದಿಸಿ ಕೊಂಡು ಹೋಗುತ್ತದೆ. ಮೂಲ ಕೃತಿ ಓದಲು ನನಗೆ ಬಂಗಾಳಿ ಭಾಷೆ ತಿಳಿದಿಲ್ಲ .
                                                             ೩
     ಪಾ. ವೆಂ ಆಚಾರ್ಯರು ಕನ್ನಡಕ್ಕೆ ತಂದಿರುವ ’ ವಾಸನಾ  ದ ವಸ್ತು ಕನ್ನಡದ ಎರಡು ಕೃತಿಗಳನ್ನು ನೆನಪಿಗೆ ತರುತ್ತದೆ.. ಆಸ್ಪತ್ರೆಗಳ ದುಸ್ಥಿತಿಯ ಚಿತ್ರಣ ನೀಡುವ " ಶವದ ಮನೆ " ಚದುರಂಗರ  ಪ್ರಸಿದ್ದ ಕತೆಗಳಲ್ಲಿ ಒಂದು.’ ಸಾವಿನ ದಶಾವತಾರ{ 2017- ಕೆ. ಸತ್ಯನಾರಾಯಣ }  ಕಾದಂಬರಿಯ ನಿರೂಪಕ ಶವ ಸಂಸ್ಕಾರ ನಿರ್ವಹಣೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾನೆ. ಇದೊಂದು ಹೊಸ ವಸ್ತು ಇರುವ,  ಕಾಡುವ ಕಾದಂಬರಿ
            ಈ ಮುನ್ನುಡಿ ಬರಿಯುವ ಅವಕಾಶ ನೀಡಿದ ಪ್ರೊ/ ರಾಥಾ ಕೃಷ್ಣ ಆಚಾರ್ಯರಿಗೆ ಅಭಿವಂದನೆಗಳು .

                                     ಮುರಳೀಧರ ಉಪಾಧ್ಯ ಹಿರಿಯಡಕ
                                        26- 3-2018
  

No comments:

Post a Comment