stat Counter



Friday, August 10, 2018

ಸುಬ್ರಾಯ ಚೊಕ್ಕಾಡಿ---ಮನೆ



Image may contain: 1 person, smiling









ಸುಬ್ರಾಯ ಚೊಕ್ಕಾಡಿ --- ಮನೆ




ನೀಟಾಗಿ ಕತ್ತರಿಸಿದ ಹೂಗಿಡಗಳ ನಡುವೆ
ಒಡ್ಡೋಲಗಸ್ಥ ಮಹಾರಾಜನ ಹಾಗೆ
ವಿರಾಜಮಾನವಾಗಿದೆ ಆ ಮನೆ.
ಶೆಡ್ಡಿನಲಿ ಮಲಗಿದ ಕಾರು,ಪಕ್ಕದಲೆ
ಆಳೆತ್ತರದ ಆಲ್ಸೇಶನ್ ನಾಯಿ-ಗೇಟಿನಲಿ
*ನಾಯಿಗಳಿವೆ ಎಚ್ಚರಿಕೆ* ಫಲಕ.
ಒಳ ಹೊಕ್ಕರೆ ಸ್ವಾಗತಿಸುವ ಭವ್ಯ ದಿವಾನಖಾನೆ
ಬೃಹದ್ಗಾತ್ರದ ಟಿ.ವಿ.ಮೂಲೆಗಳಲ್ಲಿ ಸೈನಿಕರಂತೆ ನಿಂತ
ಎತ್ತರದ ವಿಗ್ರಹಗಳು;ಹೂ ಕುಂಡಗಳು.
ಕುಳಿತರೆ ಪಾತಾಳಕ್ಕೆಸೆವ ಸೋಫಾಗಳು.ಅದರಾಚೆ
ಹೊಕ್ಕರೆ ಹೊರಡಲು ದಾರಿ ಸಿಗದಂತೆ ಹತ್ತಾರು
ಕೊಠಡಿಗಳು,ಮುಚ್ಚಿರುವ ಬಾಗಿಲುಗಳು,ತಿರುವುಗಳಲ್ಲಿ
ಮಾಯವಾಗುವ ಪುಟ್ಟ ಹಾದಿಗಳು.ಎಲ್ಲಿಂದಲೋ
ಕೇಳಿಸುವ ಹಾಡಿನ ತುಣುಕುಗಳು,ಅಹಹಾ!ಈ
ಮಯನರಮನೆ ತುಂಬ ವಿದೇಶೀ ಸೆಂಟಿನ ಘಮಲು.
ತಾಯಿ,ಮಕ್ಕಳು,ಸೊಸೆಯಂದಿರು,ಮೊಮ್ಮಕ್ಕಳು
ಅವರವರ ಕೋಣೆಗಳಲ್ಲಿ.ನಡುವೆ
ಸಂಪರ್ಕ ಆಗೀಗಮೊಬೈಲ್ ಗಳ ಮೂಲಕವೇ
ಇಳಿದನಿಯ ತುಂಡು ಮಾತುಗಳು.ಕಂಪ್ಯೂಟರಲ್ಲಿ
ಕೀಲಿಸಿದ ಕಣ್ಣುಗಳು.ಆಗೀಗೊಮ್ಮೆ ಆಚೀಚೆ
ಸರಿದಾಡುವ ನೆರಳುಗಳು;ಹೆಜ್ಜೆ ಸದ್ದುಗಳು.
ಇನ್ನೂ ಒಳಗೆ-ಅನಾಥ ಎಂಬಂತೆ
ತೆರೆದುಕೊಂಡೇ ಇರುವ ಡೈನಿಂಗ್ ಹಾಲ್ ,ಮೇಜಿನ ಮೇಲೆ
ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವ
ವಿಧವಿಧದ ತಿಂಡಿ ತಿನಿಸುಗಳು;ಹಣ್ಣುಗಳು.ಯಾವಾಗ
ಯಾರು ಇಲ್ಲಿಗೆ ಬರುತ್ತಾರೆ;ಯಾವಾಗ
ಇವೆಲ್ಲ ಖಾಲಿಯಾಗುತ್ತವೆ-ಯಾರಿಗೂ ಗೊತ್ತಿಲ್ಲ.
ಒಮ್ಮೊಮ್ಮೆ ಕೇಳಿಸುವ ನಗುವಿನ ಸದ್ದು,ಗದರುವ ಸದ್ದು
ಪಿಸುದನಿಯ ಗೊಣಗಿನ ಸದ್ದು-ಸದ್ದಿನ ಆಚೆ
ಸದಾ ನೆಲೆ ನಿಂತಿರುವ ಗಾಢ ನಿಗೂಢ ಮೌನ.
ಹೊರಗೆ,
ಎಲೆಯುದುರಿಸಿದ ಮರದ ಕೊಂಬೆಯಲಿ
ಕುಳಿತ ಆ ಒಂಟಿ ಹಕ್ಕಿ ಉಲಿಯುತ್ತದೆ:
ಆಹ!ಎಷ್ಟು ಸುಂದರ!ಆಹ!
ಅಲ್ಲಿರುವುದು ಅಂಥ ಮನೆ,
ಇಲ್ಲಿರುವುದು ಸುಮ್ಮನೆ!
--ಸುಬ್ರಾಯ ಚೊಕ್ಕಾಡಿ

No comments:

Post a Comment