stat Counter



Monday, August 27, 2018

ರಾಜೇಂದ್ರ ಪ್ರಸಾದ್ - ಬೊಳುವಾರು ಅವರ ಕಾದಂಬರಿ -- " ಉಮ್ಮಾ "



ಇಸ್ಲಾಂ ಭಾರತಕ್ಕೆ ಬಂದು ಹತ್ತತ್ತಿರ ಒಂದೂಕಾಲು ಸಾವಿರ ವರ್ಷಗಳಾಗುತ್ತಿವೆ. ಈ ನೆಲದ ಸಂಸ್ಕೃತಿ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಅಡುಗೆಯಾದಿಯಾಗಿ ಸರ್ವಕ್ಷೇತ್ರಗಳಲ್ಲೂ ಇಸ್ಲಾಂ/ಪರ್ಷಿಯನ್ ನ ಪ್ರಭಾವಗಳನ್ನು ಗುರುತಿಸಬಹುದಾಗಿದೆ. ಆದರೆ ಈ ನೆಲದ ಇಸ್ಲಾಮೇತರರಿಗೆ 'ಇಸ್ಲಾಂ' ಕುರಿತು ಎಷ್ಟು ತಿಳಿದಿದೆಯೆಂದು ಹುಡುಕಿದರೆ ಉತ್ತರ ಬಹಳ ನಿರಾಶದಾಯಕವಾಗಿದೆ. ಭಾರತೀಯ ಪುರಾಣ, ಕಾವ್ಯಗಳು ಬಗ್ಗೆ ಎಲ್ಲಾ ಮತಧರ್ಮದವರೂ ಮಾತಾಡಬಲ್ಲರು.. ರಾಮನ ಬಗ್ಗೆ‌, ಕೃಷ್ಣನ‌ ಬಗ್ಗೆ, ಅವರ‌ ಹೆಂಡತಿಯರ ಬಗ್ಗೆ ; ಆದರೆ ಪೈಗಂಬರ್ ಯಾರು ಅವರ ಹೆಂಡತಿಯರಾರು? ಎಂದು ಕೇಳಿದರೆ ನಮಗೇ ಗೊತ್ತೇ ಇಲ್ಲ. ಇಸ್ಲಾಂ‌ ಇತಿಹಾಸ ನಮಗೆ ಗೊತ್ತಿಲ್ಲ, ಅದನ್ನು ಗೊತ್ತು ಮಾಡಿಕೊಳ್ಳುವುದು ಯಾರಿಗೂ ಬೇಕಾಗಿಲ್ಲ.‌ ಎನ್ನುವ ಮಟ್ಟಿಗೆ ಸಮಾಜವನ್ನು ಭ್ರಷ್ಟಗೊಳಿಸಿ, ಅಮಾನತು ಮಾಡಿಬಿಟ್ಟಿದ್ದೇವೆ.
ಕನ್ನಡದಲ್ಲಂತೂ ಇಸ್ಲಾಂನ ಇತಿಹಾಸ ಕುರಿತಂತೆ ಸೃಜನಶೀಲ ಕೃತಿ ಬಂದಿದ್ದೇ ಇಲ್ಲ. ಯಾಕಂದರೆ ಅಷ್ಟು ಸ್ವಾತಂತ್ರ್ಯ ತೆಗೆದುಕೊಂಡು ಬರೆವ ಲೇಖಕ ನಮ್ಮ‌ ಭಾಷೆಗಷ್ಟೇ ಅಲ್ಲ, ಅನ್ಯ ಭಾಷೆಗಳಲ್ಲೂ ಇಲ್ಲ. ಆದರೆ ಅಂತಹ‌ ಒಂದು ಸಾಹಸವನ್ನು 'ಓದಿರಿ' ಕಾದಂಬರಿಯ ಮೂಲಕ ಮಾಡಿದ್ದು ಬೊಳುವಾರು ಮಹಮದ್ ಕುಂಞ ಅವರು. ಆದಾದ ನಂತರ ಇದೀಗ ' ಉಮ್ಮಾ ' ಮೂಲಕ ಪ್ರವಾದಿ ಮಹಮ್ಮದರ ಕುಟುಂಬದ ಹೆಣ್ಣುಮಕ್ಕಳು ಕಂಡ ಪ್ರವಾದಿಯವರ ಬಗ್ಗೆ/ ಇಸ್ಲಾಂ‌ ಬಗ್ಗೆ , ಅದು ಬೆಳೆದು ಬಂದ ಬಗ್ಗೆ ಬರೆದಿದ್ದಾರೆ. ಅಪಾರ ಓದಿನ- ಅಧ್ಯಯನದ ಶ್ರಮ ಈ ಕಾದಂಬರಿ‌ ಹಿಂದೆ ಇದೆ. ಒಂದೂವರೆ ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಕುರಿತು ಅದು ವ್ಯಕ್ತಿಗತ ನೆಲೆಯಲ್ಲಿ ಕಾವ್ಯದಂತೆ ಕಟ್ಟುತ್ತಾ ಹೋಗುವುದು ಸವಾಲಿನ- ಸಾಹಸದ ಕೆಲಸ. ತೀರಾ ವಿಭಿನ್ನವಾದ ದೇಶ-ಕಾಲ ಎರಡರಲ್ಲೂ ಬದುಕುತ್ತಿರುವ ಹೊತ್ತಿನಲ್ಲಿ ಆವತ್ತಿನ ದೇಶಕಾಲವನ್ನು ಮುಂದಿಟ್ಟುಕೊಟ್ಟು ಭೌಗೋಳಿಕ ವಿವರಗಳು, ವ್ಯಕ್ತಿಗಳು, ಸಂದರ್ಭ ಮುಂತಾದವನ್ನು ಕಟ್ಟೋದು ಅಂತಿಂತಹದಲ್ಲ!‌ ಪ್ರತಿ ಸಂದರ್ಭಕ್ಕೂ ಅದರದೇ ವಿವರಣೆಗಳಿವೆ. ಅದರದೇ ಐತಿಹಾಸಿಕ ಪುರಾವೆಗಳೂ ಇವೆ. ಅದಾಗ್ಯೂ ಲೇಖಕರು ಇದನ್ನು ಕಲ್ಪನೆ ಎನ್ನುತ್ತಾರೆ. ಓದುಗನಿಗೆ ಯಾವುದು ವಾಸ್ತವ ಯಾವುದು ಕಲ್ಪನೆ ಎಂದು ಕಂಡುಹಿಡಿಯುವುದು ಕಷ್ಟವಿಲ್ಲ.‌ ಮತ್ತು ಕಲ್ಪನೆಯ ಭಾಗವಿಲ್ಲದೆ ಇತಿಹಾಸವನ್ನು ಬರೆಯಲಾಗದು.
ಉಮ್ಮಾ - ಕಾದಂಬರಿಗೆ ಇರುವ ವಿಶೇಷ 'ಹೆಣ್ಣು'. ಪ್ರವಾದಿಯವರ ಹೆಂಡತಿಯರು, ಮಕ್ಕಳು, ಸಂಬಂಧಿಗಳು, ಕೆಲಸದವರು ಹೀಗೆ ಸಾಲುಸಾಲು ಮಹಿಳೆಯರ ಪಟ್ಟಿಯೇ ಈ ಕಾದಂಬರಿಯ ಉದ್ದಕೂ ನಮಗೆ ಸಿಗುತ್ತಾ ಹೋಗುತ್ತದೆ. ಈ ಒಂದೊಂದು ಪಾತ್ರವೂ 'ಪ್ರವಾದಿಯವರ ಜೀವನದಲ್ಲಿ ಎಂತಹ ಮುಖ್ಯಪಾತ್ರವನ್ನು ವಹಿಸಿದೆ' ಎಂಬುದನ್ನು ಓದಿಯೇ ತಿಳಿಯಬೇಕು. ಅರೇಬಿಕ್ ಭಾಷೆ ಮತ್ತು ಪರಿಸರಕ್ಕೆ ದೂರದಲ್ಲಿರುವ ನಮಗೆ ವ್ಯಕ್ತಿಗತ ಹೆಸರುಗಳನ್ನು, ಭೌಗೋಳಿಕ ಪ್ರದೇಶಗಳ ಹೆಸರುಗಳನ್ನು ಮೊದಲ ಓದಿಗೆ ನೆನೆಪಿಟ್ಟುಕೊಳ್ಳುವುದು ಕಷ್ಟ. ಮೊದಲೇ ಹೇಳಿದಂತೆ ಈ ಇಡೀ ಪರಿಸರವೇ ನಮಗೆ ಹೊಸದು. ಮರಳು, ಬಿಸಿಗಾಳಿ, ಅಡುಗೆ, ಉಡುಗೆ, ಹೆಸರು, ಸಂಪ್ರದಾಯಗಳು, ಹೋರಾಟಗಳು ಎಲ್ಲವೂ ನಮಗೆ ಹೊಸವು. ಯಾಕಂದರೆ ಈ ಒಂದೂಕಾಲು ಸಾವಿರ ವರ್ಷಗಳಲ್ಲಿ ಇಷ್ಟು ಅಚ್ಚಕಟ್ಟಾದ ಪ್ರಯತ್ನವು ನಡೆದಿರಲಿಕ್ಕಿಲ್ಲ. ಅದರಲ್ಲೂ ಇಸ್ಲಾಂ ಮತಸ್ಥರು ಹೆಣ್ಣುಮಕ್ಕಳ ಮೂಲಕ ಪ್ರವಾದಿಯವರ ಜೀವನವನ್ನು ನೋಡುವ ಪಯತ್ನ ಮಾಡುವುದು ಕಷ್ಟಸಾಧ್ಯ! ಅದಕ್ಕಿರುವ ಕಾರಣಗಳು ನಮಗೆಲ್ಲಾ ಗೊತ್ತಿರುವಂತವೇ ಆಗಿವೆ.
ಕನ್ನಡ ಅಥವಾ ಸಂಸ್ಕೃತ ಮಹಾಕಾವ್ಯಗಳಿಗಿರುವಂತೆ ಈ ಕಥನಕ್ಕೆ ' ಕಥನಕಾರನ ಮೂಲಕ ಸಿಗುವ ಪ್ರವೇಶಿಕೆ ಕೊನೆಯಲ್ಲಿ ಅವನ‌ ಮೂಲಕವೇ ಮುಕ್ತಾಯವಾಗುತ್ತದೆ.‌ ಇಡೀ ಕಥನವನ್ನು ಇತಿಹಾಸದ ಪುಟಗಳನ್ನು ಆಯ್ದು ನಿಧಾನವಾಗಿ ಸಜ್ಜುಗೊಳಿಸಿದ ಸಜ್ಜಿಗೆಯಂತೆ ನಿರೂಪಿಸಲಾಗಿದೆ. ಪ್ರತಿಭಾಗವೂ ಒಬ್ಬೊಬ್ಬ ಹೆಣ್ಣುಮಗಳ ಮೂಲಕ ಕಥನವನ್ನು ಕಟ್ಟಿಕೊಂಡಿದೆ. ಅವರೆಲ್ಲಾ ಮಾತಾಡಿದಂತೆಯೇ ಕಥನ ಸಾಗುತ್ತಲೇ ಇರುತ್ತದೆ.
ಸಾಹಿತ್ಯಕ ಮಹತ್ವ ಮತ್ತು ವಿಮರ್ಶೆಯ ದೃಷ್ಟಿಯಿಂದ ಹೇಳಬೇಕಾದ ಮಾತುಗಳು ಬಹಳ ಇವೆ. ಹತ್ತತ್ತಿರ ಹತ್ತು ತಿಂಗಳ ಹಿಂದೆ ಅರ್ಧವಾಗಿದ್ದ ಈ ಕಾದಂಬರಿಯನ್ನು ಓದಿದ್ದೆ. ನನ್ನ ಒಂದಷ್ಟು ಮಾತು ತಿಳಿಸಿದ್ದೆ. ಇದೀಗ ಪೂರ್ಣವಾಗಿ ಫೆಬ್ರವರಿಯಲ್ಲಿ ಬಂದು ತಲುಪಿದ 'ಉಮ್ಮಾ' ಕಾದಂಬರಿಯನ್ನು ಪೂರ್ಣವಾಗಿ ಓದಲು ಸಾಧ್ಯವಾಗಿರಲಿಲ್ಲ. ಅರ್ಧಕ್ಕೆ ಬರುವುದು ನಂತರ ನಿಲ್ಲುವುದು ಹೀಗೇ ಈಗಲೂ ಮತ್ತೊಮ್ಮೆ ನಿಲ್ಲದ ನಿರಂತರವಾದ ಒಂದು ಪೂರ್ಣವಾದ ಮತ್ತೆ ಬೇಕು ಅನಿಸಿದೆ.
ಸಂಕಥನದಲ್ಲಿ ಈ ಕುರಿತ ಬರಹ ಪ್ರಕಟವಾಗುವುದು. ಅಷ್ಟರೊಳಗೆ ಕಾದಂಬರಿಯೂ ನಿಮಗೆಲ್ಲಾ ಓದಲು ಸಿಗುವುದು.‌
 {Rajendra Prasad ಅವರ Face Book  ನಿಂದ }

No comments:

Post a Comment