stat Counter



Tuesday, January 25, 2011

Maduveya Album-[girish karnad]book review by- muraleedhara upadhya hiriadka

ಮದುವೆಯ ಆಲ್ಬಮ್

ಮುರಳೀಧರ ಉಪಾಧ್ಯ



'ಅಂಜುಮಲ್ಲಿಗೆ ಗಿರೀಶ ಕಾರ್ನಾಡರ ಮೊದಲ ಸಾಮಾಜಿಕ ನಾಟಕ. ಅದನ್ನು ನಿರ್ದೇಶಕರು ಕೈಗೆತ್ತಿಕೊಳ್ಳದಿರಲು, ವಿಮರ್ಶಕರು ಸಾಕಷ್ಟು ಚರ್ಚಿಸಿದಿರಲು ಕಾರಣವೇನು? ನಿಷಿದ್ಧ ಲೈಂಗಿಕ ಸಂಬಂಧದ ಪರಿಣಾಮವಾದ ಅಸೂಯೆ ಈ ನಾಟಕದ ವಸ್ತು ಆಗಿರುವುದೇ ಕಾರಣವೇ?

ಮದುವೆಯ ಆಲ್ಬಮ್ ಕಾರ್ನಾಡರ ಎರಡನೆಯ ಸಾಮಾಜಿಕ ನಾಟಕ.

ಅಮೇರಿಕದಿಂದ ಆಗಮಿಸಲಿರುವ ಅಶ್ವಿನ್ ಪಂಜೆಯ ನಿರೀಕ್ಷೆಯಲ್ಲಿ ವಿದುಲೆಯ ಮದುವೆ ತಯಾರಿ ಆರಂಭವಾಗುತ್ತದೆ. ವಧು-ವರ ಒಬ್ಬರನ್ನೊಬ್ಬರು ನೋಡುವ ಮೊದಲೇ, ಮದುವೆಯ ಸೀರೆ, ಚಿನ್ನ ತರುತ್ತಾರೆ. ಮದುವೆಯ ಬಗ್ಗೆ ವಿದುಲೆಯ ಸುಪ್ತ ಪ್ರಜ್ಞೆಯಲ್ಲಿ ಭಯವಿದೆ. ಅವಳು ರಾಧಾಬಾಯಿಯ ಮಗಳು ಪರಿತ್ಯಕ್ತೆ ಸಾವಿತ್ರಿಯನ್ನು ಆವಾಹಿಸಿಕೊಂಡು ಮಾತನಾಡುವುದರಲ್ಲಿ ಇದು ಗೊತ್ತಾಗುತ್ತದೆ.

ಇಂಟರ್‌ನೆಟ್ ಕೆಫೆಯಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ನಡೆಸುವ ಚಾಟಿಂಗ್‍ನಲ್ಲಿ ವಿದುಲೆಯ ಹತ್ತಿಕ್ಕಿದ ಲೈಂಗಿಕ ಬಯಕೆಗಳು ಅನಾವರಣಗೊಳ್ಳುತ್ತವೆ. ಅಮೆರಿಕದಲ್ಲಿ ಬಾಸ್ಕೆಟ್ ಬಾಲ್ ಕಂಪೆನಿಯ ಕಾನೂನು ಸಲಹೆಗಾರನಾಗಿ ಅಶ್ವಿನ್ ಪಂಜೆ ವಿವಾಹಪೂರ್ವ ಲೈಂಗಿಕ ಭೋಗದಲ್ಲಿ ಪರಿಣತನಾದರೂ, ಮದುಮಗಳ ಪಾವಿತ್ರ್ಯದಲ್ಲಿ ನಂಬಿಕೆ ಇರುವವನು. ಧಾರವಾಡಕ್ಕೆ ಬಂದ ಅಶ್ವಿನ್ ಪಂಜೆಯ ಅಹಂಭಾವದ ಮಾತಿನ ಮಂಟಪದಲ್ಲಿ ವಿದುಲೆ ನಿರುತ್ತರೆಯಾಗುವ ಆರನೆಯ ದೃಶ್ಯ ಧ್ವನಿಪೂರ್ಣ. ಹಯವದನದಲ್ಲಿ ಗೊಂಬೆಗಳು ಮಾತನಾಡುತ್ತವೆ. ಆದರೆ ಮದುವೆಯ ಆಲ್ಬಮ್ನ ಮದುಮಗಳು ವಿದುಲೆ ಮೂಕಿ ಹೆಣ್ಣು ಗೊಂಬೆಯಂತಿದ್ದಾಳೆ. ಇಪ್ಪತ್ತೊಂದನೆಯ ಶತಮಾನದಲ್ಲಿರೋ ನೀವು ವಿದೂನ ಪಾಪ ಈ ಪರಿಸ್ಥಿತಿಗೆ ಹೇಗೆ ಈಡು ಮಾಡಿದಿರಿ? ಹೇಮಾನ ಪ್ರಶ್ನೆ ಪ್ರೇಕ್ಷಕರನ್ನೂ ಕಾಡುವ ಪ್ರಶ್ನೆ.
 
"India ಅಂದರೆ ಹೀಗಿದೆ. Full of Contradictions" ಎನ್ನುವ ರೋಹಿತ ವಿಮಲೆಯ ಅಣ್ಣ. ಇವನು ತನ್ನ ಪ್ರೇಯಸಿ ಇಸಬೆಲ್‍ಗೆ ವಿಶ್ವಾಸದ್ರೋಹ ಮಾಡುತ್ತಾನೆ. ಇಸಬೆಲ್ ಮಾನಸಿಕ ಆಘಾತದಿಂದ ಬಳಲುತ್ತಾಳೆ. ಹತ್ತಂಗಡಿ ದಂಪತಿಗಳ ಮಗಳು ತಪಸ್ಯಾಳನ್ನು ರೋಹಿತ ಮದುವೆಯಾಗುವುದಕ್ಕೆ ಅವನ ಆರ್ಥಿಕ ಲೆಕ್ಕಾಚಾರವೇ ಕಾರಣ. ತಪಸ್ಯಾ ಈ ನಾಟಕದಲ್ಲಿ ನೇಪಥ್ಯದಲ್ಲಿರುವ ಇನ್ನೊಬ್ಬಳು ಮೂಕಿ ಗೊಂಬೆಯಂಥ ಮದುಮಗಳು. ಅವಳ ದಾಂಪತ್ಯ ಹೇಗಿದೆ? ಎಂಬ ಪ್ರಶ್ನೆಗೆ ಉತ್ತರ ಇಷ್ಟೆ - ಅವಳು ಒಂದು ಮಗುವಿನ ತಾಯಿಯಾಗಿದ್ದಾಳೆ. ರಾಧಾಬಾಯಿಯ-ಸಾವಿತ್ರಿಯ ಬಾಳಿನ ಗೋಳು, ತನ್ನ ತಂಗಿ ವಿಮಲೆಯ ಮದುವೆ ಇವು ರೋಹಿತನಿಗೆ ಟಿ.ವಿ. ಸೀರಿಯಲ್‍ಗೆ ಯೋಗ್ಯ ವಸ್ತುಗಳು. ನಮ್ಮ ಗಂಡಂದಿರು ಜಗತ್ತನ್ನು ಆಳಲಿ, ಆದರೆ ಆಯಿಗಿಂತ ನನ್ನ ಸ್ಥಿತಿ ಒಂದು ಹೆಜ್ಜೆ ಮುಂದೆ ಹೋಗಿಲ್ಲ ಎನ್ನುವ ಹೇಮಾ ವಿದುಲೆಯ ಅಕ್ಕ; ತಾನು ಪ್ರೀತಿಸಿ ಮದುವೆಯಾದ ಗಂಡ ಚಂದ್ರಕಾಂತನೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾಳೆ. ನೆರೆಮನೆಯ ಹುಡುಗ ವಿವಾನ್‍ನ ಕಿಶೋರ ಪ್ರೇಮ ಪತ್ರದಿಂದ ಅವಳಿಗೆ ಸಿಗುವ ತೃಪ್ತಿ ಅವಳ ದಾಂಪತ್ಯ ಜೀವನದ ಅತೃಪ್ತಿಯನ್ನು ಸೂಚಿಸುತ್ತದೆ.
’ 
ವಿಮಲೆಯ ಜನನ ಪ್ರಮಾಣ ಪತ್ರದಲ್ಲಿ ಅಪ್ಪನ ಹೆಸರಿನ ಬದಲು ರಾಮದಾಸ ಕಾಕಾನ ಹೆಸರಿದೆ ಎಂದು ಗೊತ್ತಾದಾಗ ಮದುವೆ ಮನೆಯಲ್ಲಿ ಅಲ್ಲೋಲ ಕಲ್ಲೋಲವೇನೋ ಆಗುವುದಿಲ್ಲ. ಇತಿಹಾಸವನ್ನು ತಿದ್ದಿ ಬರೆಯುವ ಪ್ರಯತ್ನ ನಡೆಯುತ್ತದೆ. ನಾವು ಎಲ್ಲಾ ಸಂಗತಿ ಇದ್ದ ಹಾಗೆ ಇಟ್ಟುಬಿಟ್ಟರೆ ಏನಾಗುತ್ತದೆ? ಎನ್ನುವ ಆಯಿಗೆ ಭೂತಕಾಲದ ಭಯವಿಲ್ಲ, ಭವಿಷ್ಯದ ಕುರಿತು ಆತಂಕವಿದೆ. ಒರಿಸ್ಸಾದಿಂದ ಬೆಂಗಳೂರಿಗೆ ಬಂದಿರುವ ಪ್ರತಿಭಾ ತನ್ನ ನಲವತ್ತೆರಡನೆಯ ವಯಸ್ಸಿನಲ್ಲಿ ತನಗಿಂತ ಹದಿನಾಲ್ಕು ವರ್ಷ ದೊಡ್ಡವನಾದ ಇರಷಾನ್‍ನ್ನು ಮದುವೆಯಾಗಿದ್ದಾಳೆ. ಅವನಿಂದ ನನಗೆ ಮಮತೆ ಸಿಕ್ಕಿತು, ಭದ್ರತೆ ಸಿಕ್ಕಿತು ಎನ್ನುತ್ತಾಳೆ.

ರಾಧಾಬಾಯಿಯ ಮಗಳು ಸಾವಿತ್ರಿಯದು ಮನಕಲದುವ ಕತೆ. ಸೇಠ್‍ಜೀಯೊಬ್ಬನ ಉಪಪತ್ನಿಯಾಗಿದ್ದ ಅವಳು ಅವನ ಸಾವಿನ ಅನಂತರ ಬೀದಿ ಪಾಲಾಗುತ್ತಾಳೆ. ಮಗಳಿಗೆ ಆಶ್ರಯ ನೀಡಿದರೆ ತಾನು ಬೀದಿಪಾಲಾಗುವ ಭಯದಿಂದ ರಾಧಾಬಾಯಿ ಮಗಳನ್ನು ಅಲಕ್ಷಿಸುತ್ತಾಳೆ.
 
’ಮದುವೆಯ ಆಲ್ಬಮ್’ ನಾಟಕದ ನಾಲ್ಕು ದೃಶ್ಯಗಳು ಧಾರವಾಡದ ಒಂದು ಸಾರಸ್ವತರ ಮನೆಯಲ್ಲಿ, ಒಂದು ಹೊಟೇಲಿನಲ್ಲಿ, ಇನ್ನೊಂದು ಇಂಟರ್‌ನೆಟ್ ಕೆಫೆಯಲ್ಲಿ , ಮತ್ತೊಂದು ಬೆಂಗಳೂರಿನ ಸಾಫ್ಟ್‌ವೇರ್ ಕಂಪೆನಿಯೊಂದರ ಆಫೀಸಿನಲ್ಲಿ ನಡೆಯುತ್ತದೆ. ನಾಟಕದ ಕೊನೆಯ ಏಳನೆಯ ದೃಶ್ಯವನ್ನು ನಾಲ್ಕನೆಯ ದೃಶ್ಯವಾಗಿ ಮೊದಲೇ ತೋರಿಸುವ ಮುನ್ನೋಟದ ತಂತ್ರ ಇಲ್ಲಿದೆ. ನಾಲ್ಕನೆಯ ಹಾಗೂ ಏಳನೆಯ ದೃಶ್ಯವನ್ನು ಅದಲು ಬದಲು ಮಾಡಿ ರೀತಿಯ ಪ್ರದರ್ಶನ ಮಾಡಲು ಇಲ್ಲಿ ನಿರ್ದೇಶಕರಿಗೆ ಅವಕಾಶವಿದೆ. ಇಂಟರ್‌ನೆಟ್ ಕೆಫೆಯ ಎರಡನೆಯ ದೃಶ್ಯ ನಟ, ನಿರ್ದೇಶಕರಿಗೆ ಪಂಥಾಹ್ವಾನ ನೀಡಿವ, ಪ್ರಬುದ್ಧ ಪ್ರೇಕ್ಷಕರನ್ನು ನಿರೀಕ್ಷಿಸುವ ದೃಶ್ಯ.
ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಪ್ರಕಟವಾದ ಗುಲ್ವಾಡಿ ವೆಂಕಟರಾಯರ ’ಇಂದಿರಾಬಾಯಿ’ ಕಾದಂಬರಿ ಹಾಗೂ ನಮ್ಮ ಕಾಲದ ಕಾರ್ನಾಡರ ’ಮದುವೆ ಆಲ್ಬಮ್’ ನಾಟಕ ಇವುಗಳನ್ನು ಸಮಾಜಶಾಸ್ತ್ರೀಯ, ಸ್ತ್ರೀವಾದಿ ನೆಲೆಗಳಿಂದ ಅವಲೋಕಿಸಿದಾಗ ಬೆಚ್ಚಿಬೀಳಿಸುವ ಒಳನೋಟಗಳು ಸಿಗುತ್ತವೆ.
’ಲಗ್ನ ಅಂದರೊಂದು ಜೂಜು’ ಎಂಬ ಮಾತು ಈ ನಾಟಕದಲ್ಲಿ ಪುನರುಕ್ತವಾಗಿದೆ. ಲಗ್ನ ಇಲ್ಲಿ ಪುರುಷ ಪ್ರಧಾನ ಸಮಾಜದ ಹೃದಯಹೀನ ಜೂಜು. ಹೊರಗೆ ರೇಷ್ಮೆ ಸೀರೆ, ಚಿನ್ನದ ಒಡವೆಗಳ ಆಡಂಬರ, ಒಳಗೆ ಹತ್ತೊಂಬತ್ತನೆಯ ಶತಮಾನದ ಮಡಿವಂತಿಕೆ, ನಮ್ಮ ಮಧ್ಯಮ ವರ್ಗದ ಮದುವೆ ಬಹಿರಂಗದಲ್ಲಿ ಜಂಗಮಶೀಲ, ಅಂತರಂಗದಲ್ಲಿ ಸ್ಥಾವರ, ವಧು ವಿರೋಧಿ. ಕಾರ್ನಾಡರ ನಾಟಕಗಳ ಭಾಷೆಯನ್ನು ಕುರಿತ ಟೀಕೆಗೆ ಪ್ರತಿಕ್ರಿಯೆ ನೀಡುತ್ತ ಬಿ.ವಿ. ಕಾರಂತರು ’ನನಗನ್ನಿಸುವ ಪ್ರಕಾರ ಕಾರ್ನಾಡ್ ನುಡಿ ಹಿಡಿಯುವ ಬದಲು ನಾಟಕದ ನಾಡಿ ಹಿಡಿದಿದ್ದಾರೆ’ ಎಂದಿದ್ದರು. ’ಮದುವೆಯ ಆಲ್ಬಮ್’ನಲ್ಲಿ ಗಿರೀಶ ಕಾರ್ನಾಡರು ನಮ್ಮ ಸಮಾಜದ ಭದ್ರಲೋಕದ ಮದುವೆ-ದಾಂಪತ್ಯಗಳ ನಾಡಿ ಹಿಡಿದಿದ್ದಾರೆ. ಅಲ್ಲಿರುವ ಅತೃಪ್ತರು, ಅಸಹಾಯಕರ ಅಂತರಂಗದ ಮೇಲೆ ಸರ್ಚ್‍ಲೈಟ್ ಹಾಯಿಸಿದ್ದಾರೆ.
GIRISHA KARNADARA NATAKAGALU: KANNDADA PRATIKRIYE
EDITED BY- K MARURASIDDAPPA, KRISHNAMURTHY HANUR
PUBLISHED BY- SAMVAHANA
12/1,behind evening bazar
shivarampet,mysore-570001
pages- 12+495
first edition- 2010
price- rs- 350
mupadhyahiri.blogspot.com

ಗಿರೀಶ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ
(ಸಂ.) ಕೆ. ಮರುಳಸಿದ್ಧಪ

No comments:

Post a Comment