ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ ೨೦೦೯
ಕೊಡವೂರು
ಕೊಡವೂರು
೬ ಜೂನ್ ೨೦೦೯
ಸಮ್ಮೇಳನಾಧ್ಯಕ್ಷರ ಭಾಷಣ
ಸಮ್ಮೇಳನಾಧ್ಯಕ್ಷರ ಭಾಷಣ
ಪ್ರೊ ಮುರಳೀಧರ ಉಪಾಧ್ಯ ಹಿರಿಯಡಕ
೧
ಕನಕನ ಕಿಂಡಿಯ ಉಡುಪಿಯಿಂದ ಜಗತ್ತಿನ ಕಂಪ್ಯೂಟರ್ ಕಿಂಡಿಯಾಗಿರುವ ಬೆಂಗಳೂರಿನ ರಾಜಕಾರಣದವರೆಗೆ ಬೆಳೆದಿರುವ ಡಾ| ವಿ. ಎಸ್. ಆಚಾರ್ಯರು, ಆನಂದತೀರ್ಥರ ಉಡುಪಿಯ ಲೋಕಸಭಾ ಸದಸ್ಯರಾಗಿರುವ ಶ್ರೀ ಸದಾನಂದ ಗೌಡರು, ಹೊಸತಲೆಮಾರಿನವರಿಗೆ ಯಕ್ಷಗಾನದ ಅಭಿರುಚಿ ಮೂಡಿಸುವುದರಲ್ಲಿ ಯಶಸ್ವಿಯಾಗಿರುವ ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ಟರು, ಕುಂದಾಪುರದವರು 'ಇವ ನಮ್ಮವ ನಮ್ಮವ' ಎಂದು ಹೆಮ್ಮೆ ಪಡುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು, ನನ್ನ ಪೂರ್ಣಪ್ರಜ್ಞ ಸಂಜೆ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿ ಕಾಪು ಶಾಸಕ ಶ್ರೀ ಲಾಲಾಜಿ ಮೆಂಡನರು, 'ಕುಡ್ಲ'ದಲ್ಲಿ ಕನ್ನಡ ದೀಪಕ್ಕೆ ಎಣ್ಣೆ ಹೊಯ್ಯುತ್ತಿರುವ ಪ್ರದೀಪ್ ಕುಮಾರ್ ಕಲ್ಕೂರರು, ಉಡುಪಿಯ ಪ್ರಥಮ ಪ್ರಜೆ ಶ್ರೀ ದಿನಕರ ಶೆಟ್ಟರು, ಇಂದು ಕನ್ನಡ ಧ್ವಜಾರೋಹಣ ಮಾಡಿದ ನಗರಸಭಾ ಸದಸ್ಯೆ ಶ್ರೀ ಮತಿ ಮೀನಾಕ್ಷಿ ಮಾಧವರವರು, ಸ್ವಾತಂತ್ರ್ಯೋತ್ತರ ವಚನಗಳ ಕವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಬಾತನಯ ಮುದ್ರಾಡಿಯವರು - ಇವರೆಲ್ಲ ಮತ್ತು ನೀವೆಲ್ಲ 'ವರ್ಷಾಕಾಲದಳೊಂದು ದಿನ' ಕೊಡವೂರಿನಲ್ಲಿ ನಡೆಯುತ್ತಿರುವ ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದೀರಿ.
ಈ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ನನಗೆ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ಡಾ| ಗಣನಾಥ ಎಕ್ಕಾರು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಈಶ್ವರ ಚಿಟ್ಪಾಡಿ, ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಶ್ರೀ ರಾಜು ಎನ್. ಆಚಾರ್ಯ ಮತ್ತು ಪದಾಧಿಕಾರಿಗಳು, ಸ್ವಾಗತ ಸಮಿತಿಯ ಅಧ್ಯಕ್ಷ ಶ್ರೀ ಎಂ. ಮಹೇಶ ಕುಮಾರ್ ಮತ್ತು ಸದಸ್ಯರು, ಎಲ್ಲರಿಗೂ ನನ್ನ ಕೃತಜ್ಞತೆಗಳು. ಕೆಲವು ವರ್ಷಗಳ ಹಿಂದೆ ಉಪ್ಪುಂದದಲ್ಲಿ ನಡೆದ ಉಡುಪಿ ಜಿಲ್ಲಾ ಅಧ್ಯಾಪಕರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ನನಗೆ ನೀಡಿದ್ದ ಕೋಟದ ಗೆಳೆಯರ ಬಳಗದವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ.
ನಮ್ಮ ಜಿಲ್ಲೆಯ ಹಾಸ್ಯಕವಿ ಎಚ್. ಡುಂಡಿರಾಜ್
'ವಾಚು ಕಟ್ಟದಿದ್ದರೂ
ಪಶುಪಕ್ಷಿಗಳಿಗೆ ಸಮಯಪ್ರಜ್ಞೆ ಇದೆ'ವಾಚು ಕಟ್ಟದಿದ್ದರೂ
ವಾಚಿದ್ದರೂ ನಾವು ವಾಚಾಳಿಗಳು!'
ಎಂದು ಗೇಲಿಮಾಡುತ್ತಾರೆ.
ಸಮಯದ ಮಿತಿ ಮರೆಯದೆ, ಉಡುಪಿಯ ಸಾಂಸ್ಕೃತಿಕ ಇತಿಹಾಸ, ಗ್ರಂಥಾಲಯ ಚಳುವಳಿ, ಪುಸ್ತಕ ಪ್ರೀತಿ, ಕನ್ನಡದ ಶಾಸ್ತ್ರೀಯ ಸ್ಥಾನಮನ, ಉಡುಪಿಯ ಪ್ರೇಕ್ಷಣೀಯ ಸ್ಥಳಗಳು, ದೈವಸ್ಥಾನದ ವಿಗ್ರಹಗಳ ರಕ್ಷಣೆ, ಸಾಹಿತಿಗಳ ಕನಸುಗಳು ರಾಜಕಾರಣಿಗಳಿಂದ ನನಸಾಗುವ ಬಗೆ ಇವುಗಳ ಕುರಿತು ಕೆಲವು ಟಿಪ್ಪಣಿಗಳನ್ನು ನಿಮ್ಮ ಮುಂದಿರಿಸುತ್ತೇನೆ.
೨
ಕವಿ ಅರುಣಾಬ್ಜ ಸಭಾಂಗಣದಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಕಾವ್ಯದ ಅನಾದರಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ಅರುಣಾಬ್ಜನ ತುಳು ಮಹಾಭಾರತವನ್ನು ಇತ್ತೀಚಿಗೆ ಡಾ| ವೆಂಕಟರಾಜ ಪುಣಿಂಚತ್ತಾಯರು ಸಂಶೋಧಿಸಿ ಸಂಪಾದಿಸಿದರು. ಕುಮಾರವ್ಯಾಸ ಗದುಗಿನ ವೀರನಾರಾಯಣ ಸಾನ್ನಿಧ್ಯದಲ್ಲಿ ಕಾವ್ಯ ಬರೆದರಂತೆ. ಅರುಣಾಬ್ಜ ಕೊಡವೂರಿನ ಶಂಕರನಾರಾಯಣನ ಸಾನ್ನಿಧ್ಯದಲ್ಲಿ ಕೆಲವು ಅಧ್ಯಾಯಗಳನ್ನು ಬರೆದಿರಬಹುದು.
ಈ ಶಂಕರನಾರಾಯಣ ದೇವಸ್ಥಾನಕ್ಕೆ ಸುಮಾರು 1200 ವರ್ಷಗಳ ಇತಿಹಾಸವಿದೆ. ಅರುಣಾಬ್ಜನ ಕೃತಿಯಂತೆ ಇಲ್ಲಿನ ಶಂಕರನಾರಾಯಣ ವಿಗ್ರಹವೂ ಶಿಲ್ಪಶಾಸ್ತ್ರದ ಒಂದು ಕಾವ್ಯ. ಈ ಸ್ಥಳಕ್ಕೆ ಕ್ರೋಡಾಶ್ರಮ ಎಂಬುದು ಇನ್ನೊಂದು ಹೆಸರು. ಕ್ರೋಡಮುನಿ ಇಲ್ಲಿ ತಪಸ್ಸು ಮಾಡುತ್ತಿದ್ದ ಎಂಬ ನಂಬಿಕೆ ಇದೆ. ಕ್ರೋಡ ಎಂದರೆ ಮುಳ್ಳುಹಂದಿ, ಕ್ರೋಡರೂಪಿ ಎಂದುರೆ ವಿಷ್ಣು. ಆ ಮುನಿಯ ಪೂರ್ತಿ ಹೆಸರು ಕ್ರೋಡರೂಪಿ ಎಂದಿತ್ತೋ ಏನೋ. 'ಸುಮಧ್ವವಿಜಯ' ಈ ದೇವಾಲಯವನ್ನು 'ಕಾನನ ದೇವತಾ ಸದನ' (ಕಾಡಿನ ನಡುವಿನ ದೇವಾಲಯ) ಎಂದು ಕರೆಯುತ್ತದೆ. ಆಚಾರ್ಯ ಮಧ್ವರು ನಾಲ್ಕು ವರ್ಷದ ಬಾಲಕನಾಗಿದ್ದಾಗ ಈ ದೇವಾಲಯಕ್ಕೆ ಬಂದಿದ್ದರಂತೆ.
೩
ನಾನು ಹಿರಿಯಡ್ಕದ ಸಿರಿಜಾತ್ರೆ ನೋಡುತ್ತ, ಸಿರಿಯ ವೈಯಕ್ತಿಕ ಬಂಡಾಯಕ್ಕೆ ಸಾಮಾಜಿಕ ಮನ್ನಣೆ ಸಿಕ್ಕಿದ ಜನಪದ ಕಾವ್ಯ ಕತೆಯನ್ನು, ಸಿರಿಯನ್ನು ಆವಾಹನೆ ಮಾಡುವ ಮಹಿಳೆಯರ ಕೌಟುಂಬಿಕ ಸಮಸ್ಯೆಗಳನ್ನು ಕೇಳುತ್ತ ಬೆಳೆದವನು. ಈಗ ನಲುವತ್ತು ವರ್ಷಗಳಿಂದ ನಾನು ಉಡುಪಿ ರಥಬೀದಿಯನ್ನು ನೋಡುತ್ತಿದ್ದೇನೆ. ರಥಬೀದಿಯ ಇತಿಹಾಸವೆ ಉಡುಪಿಯ ಸಾಂಸ್ಕೃತಿಕ ಇತಿಹಾಸ.
'ಮಹಾಭಾರತ ತಾತ್ಪರ್ಯ ನಿರ್ಣಯ' ಎಂಬ ಮಹತ್ವದ ಸಂಶೋಧನ ಗ್ರಂಥವನ್ನು ಬರೆದ ಮಧ್ವಾಚಾರ್ಯರು, 'ತಾಳುವಿಕೆಗಿಂತ ತಪವು ಇಲ್ಲ' ಎಂದು ಹಾಡಿದ ವಾದಿರಾಜ ಸ್ವಾಮಿಗಳು, 'ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?' ಎಂದು ಉಡುಪಿಯ ತನ್ನ ಕಾಲದ ಮಡಿವಂತರನ್ನು ಪ್ರಶ್ನಿಸಿದ ಕನಕದಾಸರು, ಹೊಸಗನ್ನಡ ಕಾಲದಲ್ಲಿ ತನ್ನ ಮನೋರಮೆಯೊಂದಿಗೆ ಹಳಗನ್ನಡದ ದ್ವೀಪದಲ್ಲಿ ಅಡಗಿ ಕೂತ ಮುದ್ದಣ, ತನ್ನ ಅಂತರ್ಜಾತಿಯ ವಿವಾಹವನ್ನು ಗೇಲಿಮಾಡಿ ಲೇಖನ ಬರೆದ ಉಡುಪಿಯ ವ್ಯಕ್ತಿಯೊಬ್ಬರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಜೈಲಿಗೆ ಕಳುಹಿಸಿದ ಶಿವರಾಮ ಕಾರಂತರು, ’ಇಲ್ಲಿ ಕಟ್ಡಿಗೆ ತೇರು, ವರ್ಷ ವರ್ಷಕ್ಕೇರು, ಅಕ್ಕಿ ಮುಡಿಮುಡಿ ವಾದಿರಾಜ ಗುಳ್ಳ' ಎಂದು ರಥಬೀದಿಯನ್ನು ಬಣ್ಣಿಸಿದ ಕವಿ ಗೋಪಾಲಕೃಷ್ಣ ಅಡಿಗರು, 'ಶ್ರೀ ಕೃಷ್ಣ ಸೂಕ್ತಿ' ಪತ್ರಿಕೆಯ ಕಡೇಕಾರು ರಾಜಗೋಪಾಲಕೃಷ್ಣರಾಯರು, ಬಾಲ್ಯದಲ್ಲಿ ಉಡುಪಿ ಮಠದ ಭೋಜನ ಶಾಲೆಯಲ್ಲಿ ಊಟ ಮಾಡುತ್ತ ಅವಮಾನ ಅನುಭವಿಸಿದ 'ಕಸ್ತೂರಿ'ಯ ಪಾ.ವೆಂ. ಆಚಾರ್ಯರು, ಉಡುಪಿಯ ಕೆಲವು ಕುಟುಂಬಗಳ ಮೇಲಾದ ಗಾಂಧೀಜಿಯ ಪ್ರಭಾವವನ್ನು ತನ್ನ 'ಹೆಜ್ಜೆ' ಕಾದಂಬರಿಯಲ್ಲಿ ಚಿತ್ರಿಸಿದ ವ್ಯಾಸರಾಯ ಬಲ್ಲಾಳರು, ಕೃಷ್ಣಮಠದ ಗೋಡೆಯಲ್ಲಿದ್ದ ಯಕ್ಷಗಾನ ಚಿತ್ರಗಳಿಂದ ಬಾಲ್ಯದಲ್ಲಿ ಸ್ಫೂರ್ತಿ ಪಡೆದ ಕೆ.ಕೆ. ಹೆಬ್ಬಾರರು, 'ರಥಬೀದಿ'ಯ ಚಂದ್ರಮೌಳೀಶ್ವರ ದೈವಸ್ಥಾನದ ಜಗಲಿಯಲ್ಲಿ 'ಕಲಾವೃಂದ' ಸ್ಥಾಪಿಸಿದ ಸತ್ಯಕಾಮ ಹಾಗೂ ಬನ್ನಂಜೆ ರಾಮಾಚಾರ್ಯರು, ಹಿರಿಯಡ್ಕದ ಜಾತ್ರೆಯಲ್ಲಿ ಮತಾಂತರ ಪ್ರಚಾರ ಮಾಡುತ್ತಿದ್ದ ವಿದೇಶಿ ಪಾದ್ರಿಗಳಿಗೆ ಪಂಥಾಹ್ವಾನ ನೀಡಿ ಪ್ರತಿಭಟಿಸಿದ ಮಲ್ಪೆ ಶಂಕರನಾರಾಯಣ ಸಾಮಗರು, ಉಡುಪಿಯ 'ರಂಗವಲ್ಲಿ'ಗೆ ವಿಶ್ವಖ್ಯಾತಿ ಗಳಿಸಿಕೊಟ್ಟ ಬಿ.ಪಿ. ಬಾಯರಿಯವರು, ಉಡುಪಿ ಜಿಲ್ಲೆಯ ನೂರಾರು ದೇವಸ್ಥಾನಗಳ ಇತಿಹಾಸ ದಾಖಲಿಸಿದ ಡಾ| ಪಾದೂರು ಗುರುರಾಜ ಭಟ್ಟರು, ಕನ್ನಡದ 'ವಾಗ್ರೂಢಿ'ಗಳನ್ನು ಸಂಪಾದಿಸಿದ ಎಂ. ರಾಜಗೋಪಾಲಚಾರ್ಯರು, ಉಡುಪಿ ಇತಿಹಾಸದ ಕೆಲವು ಅಲಿಖಿತ ಅಧ್ಯಾಯಗಳನ್ನು ತನ್ನ ಅಂತರಂಗದಲ್ಲಿ ಅಡಗಿಸಿಟ್ಟುಕೊಂಡ ಸರಸ್ವತಿಬಾಯಿ ರಾಜವಾಡೆಯವರು, ಉಡುಪಿಯವರ ದೊಡ್ಡ ದೊಡ್ಡ ಮಾತು ಬೆಲೂನುಗಳನ್ನು ತನ್ನ 'ಲೋಕಾಭಿರಾಮ'ದ ಸೂಜಿಮೊನೆಯಿಂದ ಚುಚ್ಚುತ್ತಿದ್ದ ಕು.ಶಿ. ಹರಿದಾಸ ಭಟ್ಟರು, ಉಡುಪಿಯ ಸಾಂಸ್ಕೃತಿಕರಂಗವನ್ನು ಪೋಷಿಸಿದ ಡಾ| ಬಿ.ಬಿ. ಶೆಟ್ಟರು, ಬಾಣಭಟ್ಟ, ಭವಭೂತಿ, ಶೂದ್ರಕರಿಗೆ ಕನ್ನಡದಲ್ಲಿ ಪುನರ್ಜನ್ಮ ನೀಡಿರುವ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು, ಉಡುಪಿಯ ಸಾಮಾಜಿಕ ಪರಿವರ್ತನೆಯ ಕುರಿತು ಅಧಿಕಾರವಾಣಿಯಿಂದ ಮಾತನಾಡಬಲ್ಲ ಪ್ರೊ| ಶ್ರೀಪತಿ ತಂತ್ರಿಯವರು, 'ತುಳು ನಿಘಂಟು' ಸಂಪಾದಿಸಿದ ಡಾ| ಯು.ಪಿ. ಉಪಾಧ್ಯಾಯ-ಡಾ|ಸುಶೀಲಾ ಉಪಾಧ್ಯಾಯ ದಂಪತಿಗಳು, ಇವರೆಲ್ಲ ಉಡುಪಿಯ ರಥಬೀದಿಯಲ್ಲಿ ನಡೆದಾಡುತ್ತ ಬೆಳೆದವರು.
ಉಡುಪಿಯ ಶ್ರೀ ಕೃಷ್ಣಮಠದಲ್ಲಿರುವ ಸುಬ್ರಹ್ಮಣ್ಯ ಗುಡಿಯಲ್ಲಿ ಶ್ರೀ ವಾದಿರಾಜ ಸ್ವಾಮಿಗಳು ಉತ್ತರ ಭಾರತದಿಂದ ತಂದು ಭೂಗತಗೊಳಿಸಿರುವ ಗುಪ್ತನಿಧಿ ಇದೆ ಎಂಬ ನಂಬಿಕೆ ಇದೆ. ಇದರೆ ಸತ್ಯಾಸತ್ಯತೆ ಏನೇ ಇರಲಿ, ಕರಾವಳಿ ಕರ್ನಾಟಕದ ತುಳುನಾಡಿನ ನೂರಾರು ದೇವಸ್ಥಾನಗಳಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಮೂಲವಿಗ್ರಹಗಳು, ಉತ್ಸವಮೂರ್ತಿಗಳು, ಆಭರಣಗಳು ಇರುವದಂತೂ ಸತ್ಯ. ನಿರ್ಜೀವ ಪ್ರದೇಶಗಳಲ್ಲಿರುವ, ದು:ಸ್ಥಿತಿಯಲ್ಲಿರುವ ಅಮೂಲ್ಯ ಕಲಾಶಪತ್ತಿನ ರಕ್ಷಣೆಗಾಗಿ ಕರಾವಳಿ ಕಾವಲು ಪಡೆಯ ರೀತಿಯ ವಿಶೇಷ ಕಾವಲು ಪಡೆಯೊಂದರ ರಚನೆಯಾಗಬೇಕು. ಕೊಲ್ಲೂರು, ಕಟೀಲು, ಸುಬ್ರಹ್ಮಣ್ಯ ದೇವಸ್ಥಾನಗಳ ಕೋಟಿಗಟ್ಟಲೆ ಹಣ ಧಾರ್ಮಿಕ ದತ್ತಿ ಇಲಾಖೆಗೆ ಬರುತ್ತಿರುವುದರಿಂದ ಇದು ಕಷ್ಟಸಾಧ್ಯವೇನೂ ಅಲ್ಲ. ಇತ್ತೀಚಿನ ಹತ್ತು ವರ್ಷಗಳಲ್ಲಿ ಕಳವಾಗಿ ಪತ್ತೆಯಾಗದ ವಿಗ್ರಹಗಳ ಮರುತನಿಖೆಯನ್ನು ಸಿ.ಓ.ಡಿ.ಗೆ ಒಪ್ಪಿಸಬೇಕು.
'
ದಾದಾಭಾಯಿ ನವರೋಜಿಯವರು ಕಲ್ಕತ್ತಾ ಕಾಂಗ್ರೆಸ್‍ನ ಅಧಿವೇಶನದಲ್ಲಿ 'ಸ್ವರಾಜ್ಯ ಕಾಂಗ್ರೆಸ್‍ನ ಗುರಿ' ಎಂದು ಘೋಷಿಸಿದ ವರ್ಷದಲ್ಲೆ - 1906ರಲ್ಲಿ ಉಡುಪಿಯಲ್ಲಿ ಸ್ವರಾಜ್ಯ ಪರಿಕಲ್ಪನೆಯ ಕಾರ್ಪೋರೇಶನ್ ಬ್ಯಾಂಕನ್ನು ಸ್ಥಾಪಿಸಿದ ಹಾಜಿ ಅಬ್ದುಲ್ಲಾ ಸಾಹೇಬರು, ಮಣಿಪಾಲವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಶೈಕ್ಷಣಿಕ ಕೇಂದ್ರವಾಗಿ ಬೆಳೆಸಿದ ಡಾ| ಟಿ.ಎಂ. ಪೈಗಳು, ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲೆ 'ಅಂತರಂಗ' ಪತ್ರಿಕೆ, ತುಳು ಸಾಹಿತ್ಯ ಚಳುವಳಿ ಆರಂಭಿಸಿದ ಎಸ್. ಯು. ಪಣಿಯಾಡಿಯವರು, 'ಸಬ್‍ಕೋ ಸನ್ಮತಿ ದೇ ಭಗವಾನ್' ಎಂಬುದೇ ಗಾಯತ್ರಿ ಮಂತ್ರದ ಅರ್ಥ ಎಂದು ವಿವರಿಸುತ್ತ, ಗಾಂಧೀಜಿಯ ಕನಸಿನಂತೆ ಒಂದು ಹೆಜ್ಜೆ ಮುಂದಿಟ್ಟ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು, ವಿಜ್ಞಾನವನ್ನು ಕುರಿತ ಶತಮಾನದ ಮುನ್ನೋಟದಿಂದ ಉಡುಪಿಯಿಂದ ಡಿಲ್ಲಿಯ ವರೆಗೆ ಪೂರ್ಣಪ್ರಜ್ಞ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿದ ಅದಮಾರು ಮಠದ ಶ್ರೀ ವಿಬುಧೇಶ ತೀರ್ಥರು, ಉಡುಪಿಯ ಸಾಂಸ್ಕೃತಿಕ ವಿಶ್ವಕೋಶದಂತಿದ್ದ ಕೆ.ಕೆ. ಪೈಗಳು, ಬಳಕೆದಾರರ ವೇದಿಕೆಯ ಡಾ| ನಾರಾಯಣರಾಯರು, ಉಡುಪಿಯ ಅನಂತೇಶ್ವರದ ಜಗಲಿ ಶಾಲೆಯಲ್ಲಿ ಕಲಿತ ಮದ್ದಳೆಯ ಮಾಂತ್ರಿಕ ಹಿರಿಯಡ್ಕ ಗೋಪಾಲರಾಯರು, ಉಡುಪಿಯ ರಂಗಭೂಮಿಯನ್ನು ಬೆಳೆಸಿದ ಶ್ರೀ ಆನಂದ ಗಾಣಿಗರು - ಇವರೆಲ್ಲರ ಬಗ್ಗೆ ಉಡುಪಿ ಅಭಿಮಾನಪಡುತ್ತದೆ.
೪
ಉಡುಪಿಯ ಇತಿಹಾಸದಲ್ಲಿ ನನ್ನನ್ನು ಕಾಡುವ ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತೇನೆ. ಮಧ್ವಾಚಾರ್ಯರು ತನ್ನ ಕೊನೆಗಾಲದಲ್ಲಿ ಉಡುಪಿಯಿಂದ ಅದೃಶ್ಯರಾಗಿ ಹಿಮಾಲಯಕ್ಕೆ ಹೋದದ್ದೇಕೆ? 120 ವರ್ಷ ಬದುಕಿದ ಸೋದೆಮಠದ ವಾದಿರಾಜಸ್ವಾಮಿಗಳು ತನ್ನ ಕೊನೆಗಾಲದಲ್ಲಿ ಉಡುಪಿಯನ್ನು ಬಿಟ್ಟು ಸೋದೆಗೆ ಹೋದದ್ದೇಕೆ? ಉಡುಪಿಯ 'ದಾನಶೂರ ಕರ್ಣ' ಎಂದು ಖ್ಯಾತರಾಗಿದ್ದ ಹಾಜಿ ಅಬ್ದುಲ್ಲಾ ಸಾಹೇಬರು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? 1934ರಲ್ಲಿ ಉಡುಪಿಯ ರಥಬೀದಿಗೆ ಬಂದಿದ್ದ ಮಹಾತ್ಮಾ ಗಾಂಧೀಜಿ ಕೃಷ್ಣಮಠಕ್ಕೆ ಭೇಟಿ ನೀಡದೆ ವಾಪಸು ಹೋದದ್ದೇಕೆ? ಕವಿ ಗೋಪಾಲಕೃಷ್ಣ ಅಡಿಗರಿಗೆ 'ಪ್ರಾಣಮುಖ್ಯರ ಮುಟ್ಟುಚಟ್ಟು ತೊಟ್ಟಿಗಳಲ್ಲಿ ನಿಂತ ನೀರಿನ ವಾಸ ಸುತ್ತಲೆಲ್ಲ' ತುಂಬಿದ ನಗರವಾಗಿ ಕಂಡದ್ದೇಕೆ? ಇವು ಕುಹಕದ ಪ್ರಶ್ನೆಗಳಲ್ಲ, ಜಿಜ್ಞಾಸೆ ಮಾಡಬೇಕಾದ ಕಾಡುವ ಪ್ರಶ್ನೆಗಳು.
೫
ಕನ್ನಡಕ್ಕೆ ಕೇಂದ್ರ ಸರಕಾರ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದೆ. ಹಳಗನ್ನಡದ 'ಕವಿರಾಜಮಾರ್ಗ'ದ ಕುರಿತು ಇಂಗ್ಲಿಷ್‍ನಲ್ಲಿ ಸಂಶೋಧನ ಗ್ರಂಥ ಬರೆದಿರುವ ಅಮೇರಿಕದ ವಿದ್ವಾಂಸ ಶೆಲ್ಡನ್ ಪೊಲೊಕ್ ಅವರ ಒಂದು ಲೇಖನ ಇತ್ತೀಚಿಗೆ 'ಹಿಂದೂ' ಪತ್ರಿಕೆಯಲ್ಲಿ ಪ್ರಕಟವಾಯಿತು. ಅಮೇರಿಕದ ಒಂದು ವಿಶ್ವವಿದ್ಯಾನಿಲಯ, ಪ್ರಾಚೀನ ತೆಲುಗಿನ ಒಬ್ಬರು ವಿದ್ವಾಂಸರಿಗಾಗಿ ಮೂರು ವರ್ಷಗಳಿಂದ ಜಾಹೀರಾತು ಪ್ರಕಟಿಸುತ್ತಿದ್ದರೂ, ಒಂದೇ ಒಂದು ಅರ್ಜಿ ಬಂದಿಲ್ಲವಂತೆ.
೫.೧ ಎಲ್. ಬಸವರಾಜು ಅವರ 'ಸರಳ ಪಂಪ ಭಾರತ' ಮಾದರಿಯ, ಹೊಸ ತಲೆಮಾರಿನವರಿಗೆ ಹಳಗನ್ನಡ ಕಾವ್ಯ ಪ್ರವೇಶ ಕ್ಲಿಷ್ಟವಲ್ಲ ಅನ್ನಿಸುವ ಕೆಲಸಗಳು ಆಗಬೇಕು.
೫.೨ ಕಾಲೇಜುಗಳಲ್ಲಿ ಕನ್ನಡ ಐಚ್ಛಿಕ ವಿದ್ಯಾರ್ಥಿಗಳಿಗೆ (ಮುಂದೆ ಕನ್ನಡ ಅಧ್ಯಾಪಕರಾಗುವವರಿಗೆ ವಿಶೇಷ ಸ್ಕಾಲರ್‌ಶಿಪ್ (ವಿದ್ಯಾರ್ಥಿವೇತನ) ನೀಡಬೇಕು. ಸಂಸ್ಕೃತ ವಿದ್ಯಾಥಿಗಳಿಗೆ ಕೇಂದ್ರ ಸರಕಾರದಿಂದ ವಿಶೇಷ ವಿದ್ಯಾರ್ಥಿವೇತನ ಸಿಗುತ್ತಿದೆ.
೫.೨ ಕಾಲೇಜುಗಳಲ್ಲಿ ಕನ್ನಡ ಐಚ್ಛಿಕ ವಿದ್ಯಾರ್ಥಿಗಳಿಗೆ (ಮುಂದೆ ಕನ್ನಡ ಅಧ್ಯಾಪಕರಾಗುವವರಿಗೆ ವಿಶೇಷ ಸ್ಕಾಲರ್‌ಶಿಪ್ (ವಿದ್ಯಾರ್ಥಿವೇತನ) ನೀಡಬೇಕು. ಸಂಸ್ಕೃತ ವಿದ್ಯಾಥಿಗಳಿಗೆ ಕೇಂದ್ರ ಸರಕಾರದಿಂದ ವಿಶೇಷ ವಿದ್ಯಾರ್ಥಿವೇತನ ಸಿಗುತ್ತಿದೆ.
೫.೩ ಕಂಪ್ಯೂಟರ್ ವಿದ್ಯಾರ್ಥಿಗಳು 'ಬರಹ' 'ನುಡಿ' ಮತ್ತಿತರ ಕನ್ನಡ ತಂತ್ರಾಶಗಳನ್ನು ಕಲಿಯಲು ವಿಶೇಷ ಪ್ರೋತ್ಸಾಹ ನೀಡಬೇಕು. ಬಿ.ಎಸ್ಸಿ. ಕಂಪ್ಯೂಟರ್ ಕಲಿಯುವ ವಿದ್ಯಾರ್ಥಿಗಳಿಗೆ ಕನ್ನಡ ತಂತ್ರಾಶಗಳ ಒಂದು ಪತ್ರಿಕೆ ಇರಬೇಕು. ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅಂತರ್ಜಾಲದ ಮೂಲಕ ಸಾವಿರಾರು ಕನ್ನಡ ಗ್ರಂಥಗಳನ್ನು ಓದಲು ಈಗ ಸಾಧ್ಯವಿದೆ.
೫.೪.ಕರ್ನಾಟಕ ಸರಕಾರ ಭಾಷಾಂತರ ಅಕಾಡೆಮಿ ಸ್ಥಾಪಿಸಿರುವುದು ಸಂತೋಷದ ಸಂಗತಿ.ಇದರ ಮುಂದುವರಿಕೆಯಾಗಿ ಚೀನೀ, ಜಪಾನಿ, ಫ್ರೆಂಚ್, ಸ್ಪಾನಿಷ್, ರಷ್ಯನ್, ಜರ್ಮನ್, ಪರ್ಷಿಯನ್ ಭಾಷೆಗಳ ಅಧ್ಯಯನಕ್ಕೆ ಪ್ರತ್ಯೇಕ ವಿಶ್ವವಿದ್ಯಾನಿಲಯವೊಂದನ್ನು ಆರಂಭಿಸಬೇಕು. ಉದ್ಯೋಗ ನಿಮಿತ್ತ ಜಗದಗಲ ಸಂಚಾರ ಹೊರಡುವ ನಮ್ಮ ಕಂಪ್ಯೂಟರ್ ತಜ್ಞರು ಈ ಭಾಷೆಗಳನ್ನು ಕಲಿಯುವುದು ಅನಿವಾರ್ಯ.
೫.೫ ವಿಶ್ವಸಂಸ್ಥೆಯಿಂದ ಶಾಸ್ತ್ರೀಯ ಭಾಷೆಯ ಮನ್ನಣೆ ಪಡೆದಿರುವ ಸಂಸ್ಕೃತದ ಅಧ್ಯಯನಕ್ಕೆ ಕರ್ನಾಟಕ ಸರಕಾರ ಪ್ರತ್ಯೇಕ ವಿಶ್ವವಿದ್ಯಾನಿಯ ಸ್ಥಾಪಿಸಲಿರುವುದು ಅಭಿನಂದಾರ್ಹ. ಈ ವಿಶ್ವವಿದ್ಯಾನಿಲಯದ ಒಂದು ಸ್ನಾತಕೋತ್ತರ ಕೇಂದ್ರ ಉಡುಪಿಯಲ್ಲಿ ಆರಂಭವಾಗುವಂತೆ ಡಾ| ಆಚಾರ್ಯರು ದಯವಿಟ್ಟು ಪ್ರಯತ್ನಿಸಬೇಕು. ಸಂಸ್ಕೃತ ಅಧ್ಯಾಪಕರ ದು:ಸ್ಥಿತಿ ಕಡೆಯತ್ತ ಸರ್ಕಾರ ಶೀಘ್ರ ಗಮನಹರಿಸಬೇಕು. ಉಡುಪಿಯ ಹಲವು ಹೈಸ್ಕೂಲುಗಳಲ್ಲ ಸಂಸ್ಕೃತ ಕಲಿಸುತ್ತಿರುವ ಅಧ್ಯಾಪಕರು ಸಂಸ್ಕೃತ ಕಾಲೇಜಿನಿಂದ ರೂ. 1400 ಗೌರವಧನ (ಅಂದರೆ 46 ರೂ. ದಿನಗೂಲಿ) ಪಡೆಯುತ್ತಿದ್ದಾರೆ! ಅನುದಾನರಹಿತ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಅಧ್ಯಾಪಕರ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಚಿಕ್ಕಮಗಳೂರಿನ ಕೆಲವು ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ಎಂ.ಎ.,ಎಂ.ಎಡ್. ಆದ ಅಧ್ಯಾಪಕರು 2500 ರೂ. ಸಂಬಳ ಪಡೆಯುತ್ತಿದ್ದಾರೆ!
೫.೬ ಕರ್ನಾಟಕ ತುಳು, ಕೊಂಕಣಿ, ಬ್ಯಾರಿ, ಕೊಡವ ಭಾಷೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಈ ಎಲ್ಲಾ ಭಾಷೆಗಳು ಕನ್ನಡ ಲಿಪಿಯನ್ನು ಬಳಸುತ್ತಿವೆ ಎಂಬುದು ಮಹತ್ವದ ಸಂಗತಿ.ಗುಲ್ವಾಡಿ ವೆಂಕಟರಾಯರ 'ಇಂದಿರಾಬಾಯಿ' ಕಾದಂಬರಿಯಲ್ಲಿ ಕೆಲವು ಪಾತ್ರಗಳು ತುಳು, ಕೊಂಕಣಿ ಮಾತನಾಡುತ್ತವೆ. ಇಂಥ ಪ್ರಯೋಗಗಳು ಇಂದಿಗೂ ಪ್ರಸ್ತುತ.
೬
೬.೧ 'ಪುಸ್ತಕ ಪ್ರೀತಿ'ಗೆ ಸಂಬಂಧಪಟ್ಟು ಕೆಲವು ಸಂಗತಿಗಳನ್ನು ನಿಮ್ಮೆದುರು ಮಂಡಿಸುತ್ತೇನೆ. ಕರ್ನಾಟಕ ಸರ್ಕಾರದ ಹಲವು ಸಂಸ್ಥೆಗಳು ಕನ್ನಡ ಸಂಸ್ಕೃತಿ ಇಲಾಖೆ, ಪುಸ್ತಕಪ್ರಾಧಿಕಾರ, ಕಾನೂನು ಇಲಾಖೆ, ಸರ್ಕಾರದ ವಿವಿಧ ಅಕಾಡೆಮಿಗಳು, ವಿಶ್ವವಿದ್ಯಾನಿಲಯಗಳು ಪುಸ್ತಕವನ್ನು ಪ್ರಕಟಿಸುತ್ತಿವೆ. ಇವುಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲ.ಪ್ರತಿ ಜಿಲ್ಲೆಯ ಕೇಂದ್ರ ಗ್ರಂಥಾಲಯದಲ್ಲಿ ಸರ್ಕಾರಿ ಸಂಸ್ಥೆಗಳ ಪುಸ್ತಕ ಮಾರಾಟಕ್ಕೆ ಒಂದು ಮಳಿಗೆ ಸ್ಥಾಪಿಸಬೇಕು. ಪುಸ್ತಕ ಮಾರಾಟದ ಕಮಿಷನ್‍ನಿಂದ ಗ್ರಂಥಾಲಯ ಇಲಾಖೆಯ ಆದಾಯ ಹೆಚ್ಚುತ್ತದೆ. ಉಡುಪಿ ಸೀತಾ ಬುಕ್ ಹೌಸ್, ಮಂಗಳೂರಿನ ಅತ್ರಿ ಬುಕ್ ಸೆಂಟರ್ ಇಂಥ ಪುಸ್ತಕದಂಗಡಿಗಳು ನಮ್ಮ ಹೆಚ್ಚಿನ ಜಿಲ್ಲಾ ಕೇಂದ್ರಗಳಲ್ಲಿ ಇಲ್ಲ.
೬.೨ ಉಡುಪಿಯ ಒಳಕಾಡು ಸರಕಾರಿ ಹೈಸ್ಕೂಲಿನಲ್ಲಿ ಆರಂಭಿಸಿರುವ 'ತರಗತಿಗೊಂದು ಗ್ರಂಥಾಲಯ' 'ಪುಸ್ತಕ ಓದಿ ಬಹುಮಾನ ಗೆಲ್ಲಿ' ಯೋಜನೆಗಳು ಉಡುಪಿ ಜಿಲ್ಲೆಯ, ರಾಜ್ಯದ ಎಲ್ಲ ಶಾಲೆಗಳಲ್ಲಿ ಆರಂಭವಾಗಬೇಕು.
೬.೩ ಉಡುಪಿಯ ಅಂಬಲಪಾಡಿ ದೇವಸ್ಥಾನದಲ್ಲಿ ಒಂದು ಮಾದರಿ ಗ್ರಂಥಾಲಯವಿದೆ.ಇಂಥ ಗ್ರಂಥಾಲಯಗಳು ಆರ್ಥಿಕ ಸ್ಥಿತಿ ಚೆನ್ನಾಗಿರುವ ನಮ್ಮ ಎಲ್ಲ ದೇವಸ್ಥಾನಗಳಲ್ಲೂ ಆರಂಭವಾಗಬೇಕು.
೬.೪ ನಮ್ಮ ಕುಟುಂಬದ ಒಬ್ಬಳು ಬಾಲಕಿ - ನನ್ನ ಅಣ್ಣನ ಮೊಮ್ಮಗಳು ಸಂಹಿತಾ - ಅಮೇರಿಕಾದಲ್ಲಿ ಒಂದು ವರ್ಷ ಇದ್ದು ಬಂದ ಸಂಹಿತಾ - ನಾವೆಲ್ಲ ಆಶ್ಚರ್ಯಪಡುವಂತೆ ಪುಸ್ತಕಪ್ರೀತಿ ಬೆಳೆಸಿಕೊಂಡಿದ್ದಾಳೆ. ಅಮೇರಿಕದ ಗ್ರಂಥಾಲಯಗಳಲ್ಲಿ ವಾರಕ್ಕೊಮ್ಮೆ ಪುಸ್ತಕ ಪ್ರೀತಿ ಬೆಳೆಸುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಅಂಥ ಕಾರ್ಯಕ್ರಮಗಳು ಇಲ್ಲಿ ಆರಂಭವಾಗಲು ಅಮೇರಿಕಕ್ಕೆ ಭೇಟಿ ನೀಡಿರುವ ಉಡುಪಿಯ ಹಿರಿಯ ನಾಗರಿಕರು ಪ್ರೇರಣೆ ನೀಡಬೇಕು.
೬.೫ ನಾನು ವಾಸಿಸುತ್ತಿರುವ ಉಡುಪಿ ದೊಡ್ಡಣಗುಡ್ಡೆಯ ನಾಗರಿಕ ಸಮಿತಿಯವರು ಗ್ರಂಥಾಲಯ ಶಾಖೆಯ ಕಟ್ಟಡವೊಂದನ್ನು ಡಾ| ವಿ.ಎಸ್. ಆಚಾರ್ಯರ ಮಾರ್ಗದರ್ಶನದಲ್ಲಿ ಕಟ್ಟಿಸುತ್ತಿದ್ದಾರೆ. ಇಂಥ ಪ್ರಯತ್ನಗಳು ಉಡುಪಿಯ ಬೇರೆ ಬೇರೆ ಕಡೆ ಆರಂಭವಾಗಬೇಕು.
೬.೬ ಮಣಿಪಾಲದ ಎಫ್.ಎಂ. ರೇಡಿಯೋ ಜನಪ್ರಿಯವಾಗುತ್ತಿದೆ. ಇದನ್ನು ಒಂದರಿಂದ ಐದು ಗಂಟೆಗೆ ವಿಸ್ತರಿಸಿದರೆ ಉಡುಪಿಯ ಸಾಂಸ್ಕೃತಿಕರಂಗದ ಕಲಾವಿದರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ.೬.೭ ಉಡುಪಿಯ ಹೈಸ್ಕೂಲುಗಳಲ್ಲಿ ಆರಂಭವಾಗಿರುವ ಶಾಸಕ ರಘುಪತಿ ಭಟ್ಟರ ಕನಸಿನ ಯಕ್ಷಗಾನ ಕಲಿಸುವ ಯೋಜನೆ, ರಾಮಾಯಣ, ಮಹಾಭಾರತ ಕಾವ್ಯಗಳ ಅಧ್ಯಯನಕ್ಕೆ ಮಕ್ಕಳಿಗೆ ಪ್ರೇರಣೆ ನೀಡುವ ಐತಿಹಾಸಿಕ ಮಹತ್ವದ ಹೆಜ್ಜೆ. ಶಾಸಕ ರಘುಪತಿ ಭಟ್ಟರಿಗೆ ಅಭಿನಂದನೆಗಳು.೬.೮ NDTV PROFITನಂಥ ವಾಣಿಜ್ಯ ಚಾನೆಲ್‍ಗಳಲ್ಲಿ Just Book ನಂಥ ಒಳ್ಳೆಯ ಕಾರ್ಯಕ್ರಮಗಳು ಬರುತ್ತಿವೆ. ನಮ್ಮ ಕನ್ನಡ ವಾಹಿನಿಗಳಲ್ಲಿ ಇಂಥ ಕಾರ್ಯಕ್ರಮಗಳು ಆರಂಭವಾಗುವುದು ಯಾವಾಗ?
೭
ಸಾಹಿತ್ಯ ಪ್ರಕಾರಗಳಲ್ಲಿ ಒಂದಾದ ಪ್ರವಾಸ ಸಾಹಿತ್ಯ ನನ್ನ ಇಷ್ಟದ ಪ್ರಕಾರಗಳಲ್ಲೊಂದು. ಉಡುಪಿಯ ಸೈಂಟ್ ಮೇರೀಸ್ ದ್ವೀಪದಲ್ಲಿ ಕ್ಯಾಬಿನೆಟ್ ಮೀಟಿಂಗ್ ಏರ್ಪಡಿಸಿ, ಅದನ್ನು ಪ್ರವಾಸಿ ಕೇಂದ್ರವನ್ನಾಗಿ ಬೆಳೆಸುವ ಕನಸು ಮಾಜಿ ಮುಖ್ಯಮಂತ್ರಿ ಶ್ರೀ ಗುಂಡೂರಾಯರಿಗೆ ಇತ್ತು. ಈಗಿನ ಸರಕಾರ ಮನಸ್ಸು ಮಾಡಿದರೆ ಸೈಂಟ್ ಮೇರೀಸ್ ದ್ವೀಪ, ಹೂಡೆ-ಬೆಂಗ್ರೆ-ಹಂಗಾರಕಟ್ಟೆ ನಡುವಿನ ಮರವಂತೆಗಿಂತ ಸುಂದರವಾದ ಸಂಗಮಸ್ಥಳ, ಐತಿಹಾಸಿಕ ಸ್ಮಾರಕಗಳು ಹಾಗೂ ಹತ್ತಾರು ದೇಗುಲಗಳಿರುವ ಬಾರ್ಕೂರು ಇವನ್ನೆಲ್ಲ ರಾಷ್ಟ್ರಮಟ್ಟದ ಪ್ರವಾಸಿ ಕೇಂದ್ರಗಳನ್ನಾಗಿ ಬೆಳಸಬಹುದು. ಆಳುಪ ಪ್ರಾಚ್ಯವಸ್ತು ಕೇಂದ್ರವೊಂದು ಉದ್ಯಾವರದಲ್ಲಿ ಸ್ಥಾಪನೆಗೊಳ್ಳಬೇಕು.
'ಉದಯವಾಣಿ' 1970ರಿಂದ ನನ್ನ ಲೇಖನ, ಪುಸ್ತಕ ವಿಮರ್ಶೆಗಳನ್ನು ಪ್ರಕಟಿಸುತ್ತ ನನ್ನನ್ನು ಬೆಳೆಸಿದೆ. ಪತ್ರಿಕೆಯ ಪುಟಮಿತಿಯಲ್ಲಿ ನಾನು ಪ್ರೀತಿ ಮತ್ತು ನಿರ್ಭೀತಿಯಿಂದ ಸಮಕಾಲೀನ ಕೃತಿಗಳನ್ನು ವಿಮರ್ಶಿಸಿದ್ದೇನೆ. ಸಮಕಾಲೀನ ಕೃತಿಗಳ ವಿಮರ್ಶೆ ಕಷ್ಟದ, ನೈತಿಕ ಧೈರ್ಯ ಬೇಕಾದ ಕೆಲಸ. ಒಬ್ಬ ಲೇಖಕ ಸತ್ತು ಇಪ್ಪತ್ತು ವರ್ಷಗಳ ತರುವಾಯ ಅವನ ಕೃತಿಗಳ ನಿಜವಾದ ವಿಮರ್ಶೆ ಬರಬಹುದು ಎಂದು ರಾಷ್ಟ್ರಕವಿ ಗೋವಿಂದ ಪೈಗಳು ಅಭಿಪ್ರಾಯಪಟ್ಟಿದ್ದರು. ನನ್ನ ಪುಸ್ತಕ ವಿಮರ್ಶೆ ಓದಿ ಮೆಚ್ಚಿದ ಲೇಖಕರಿದ್ದಾರೆ, ಅಭಿಮಾನಿಗಳಿದ್ದಾರೆ. ಶಿವರಾಮ ಕಾರಂತರಿಗೆ ಅವರ ಪಠ್ಯಪುಸ್ತಕವನ್ನು ಕುರಿತ ನನ್ನ ವಿಮರ್ಶೆ ಓದಿ ಸಿಟ್ಟು ಬಂದಿತ್ತು. ಆದರೆ ನನ್ನ ವಿಮರ್ಶೆ ಅಲಕ್ಷಿಸಿದ್ದರಿಂದ ಅವರು ಕೆಲವು ಜಾತಿ ಸಂಘಟನೆಗಳ ಪ್ರತಿಭಟನೆ ಎದುರಿಸಬೇಕಾಯಿತು.
ಸಾಹಿತ್ಯಕ್ಕೆ ತನ್ನದೇ ಆದ ಇತಿಮಿತಿಗಳಿವೆ. 'ನನ್ನ ಕವಿತೆಗಳಿಂದ ನಾಜೀ ಕಾನ್ಸೆಂಟ್ರೇಶನ್ ಕ್ಯಾಂಪಿನ ಒಬ್ಬರ ಪ್ರಾಣವನ್ನೂ ಉಳಿಸಲು ಸಾಧ್ಯವಾಗಲಿಲ್ಲ' ಎಂದು ಇಂಗ್ಲಿಷ್ ಕವಿ ಆಡೆನ್ ಬರೆದಿದ್ದಾನೆ. ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಬರ್ಮಾದ ಮಹಿಳೆ ಆಂಗ್‍ನಾಂಗ್ ನೂಯಿಕಿ ಹಲವು ವರ್ಷಗಳಿಂದ ಜೈಲಿನಲ್ಲಿದ್ದಾಳೆ. ನಾವೆಲ್ಲ ಅಸಹಾಯಕರಾಗಿದ್ದೇವೆ. ಸಾಹಿತಿಗಳು ವಿಕ್ಷಿಪ್ತರಂತೆ ಕಾಣುತ್ತಾರೆ, ನಿಜ. ಅವರ ವಿಕ್ಷಿಪ್ತತೆಯ ಹಿನ್ನೆಲೆಯಲ್ಲಿ ಸಾಮಾಜಿಕ ಅತೃಪ್ತಿಗಳು ಹಾಗೂ ಪರಿವರ್ತನೆಯ ಕನಸುಗಳಿರುತ್ತವೆ.
೮
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸಾಹಿತಿಗಳು ರಾಜಕೀಯ ವಿಮರ್ಶೆಯನ್ನು ಬೆಳೆಸಿದ್ದಾರೆ. ತನ್ನ ರಾಜ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿದ ಪಂಪ, ಅರ್ಜುನನ ಬದಲು ಕರ್ಣನನ್ನು ಹೊಗಳುತ್ತಾನೆ. 'ಕರ್ಣ ರಸಾಯನಮಲ್ತೆ ಭಾರತಂ' ಎನ್ನುತ್ತಾನೆ. ಬಿಜ್ಜಳನ ಆಸ್ಥಾನದಲ್ಲಿದ್ದ ಕವಿ-ಮಂತ್ರಿ ಬಸವಣ್ಣನವರು 'ಆನು ಬಿಜ್ಜಳಂಗೆ ಅಂಜುವೆನೆ?' ಎನ್ನುತ್ತಾರೆ. ವಿಜಯನಗರದ ವೈಭವವನ್ನು ಕಂಡ ಪುರಂದರದಾಸರು, 'ಉತ್ತಮ ಪ್ರಭುತ್ವ ಲೊಳಲೊಟ್ಟೆ' ಎನ್ನುತ್ತಾರೆ. 'ಉರಿ ಉರಿವುತಿದೆ ದೇಶ, ಬಡವರ ಬಿನ್ನಹವ ಇನ್ನಾರು ಲಕ್ಷ್ಮೀಪತಿ?' ಎನ್ನುತ್ತಾನೆ ಕುಮಾರವ್ಯಾಸ. ಕಾರಂತ, ಅಡಿಗ, ಲಂಕೇಶ ಇವರೆಲ್ಲ ಪ್ರಖರ ರಾಜಕೀಯ ವಿಮರ್ಶಕರೂ ಆಗಿದ್ದರು.
ಸಾಹಿತಿಗಳ ಕನಸುಗಳು ನನಸಾಗುವುದು ರಾಜಕಾರಣಿಗಳು ಜಾರಿಗೊಳಿಸುವ ಕಾನೂನುಗಳಲ್ಲಿ. ಕಾರಂತರ 'ಚೋಮನ ದುಡಿ'ಯ ಕನಸು ದೇವರಾಜ ಅರಸು ಅವರ ಭೂಸುಧಾರಣೆಯ ಶಾಸನದಲ್ಲಿ ನನಸಾಗುತ್ತದೆ. ಭೂಸುಧಾರಣೆ ನಮ್ಮ ಜಿಲ್ಲೆಯಲ್ಲಿ ತಂದ ಕ್ರಾಂತಿಕಾರಿ ಪರಿವರ್ತನೆಯನ್ನು ನೋಡುತ್ತಾ ಬೆಳೆದ ಶ್ರೀ ಎಂ. ವೀರಪ್ಪ ಮೊಯಿಲಿ ಅವರು ಈಗ ಕೇಂದ್ರದ ಕಾನೂನು ಮಂತ್ರಿಯಾಗಿದ್ದಾರೆ. ಅವರ ಸಾಮಾಜಿಕ ಕನಸುಗಳು ಅವರು ಮಂಡಿಸುವ ಹೊಸ ಕಾನೂನುಗಳಲ್ಲಿ ಕಾಣಿಸಬೇಕು. ಲಾಲ್‍ಕೃಷ್ಣ ಆಡ್ವಾಣಿಯವರ ಆತ್ಮಕತೆಯಲ್ಲಿ ಭಾರತ-ಬಾಂಗ್ಲಾ-ಪಾಕಿಸ್ಥಾನಗಳ - ಯುರೋಪ್ ಮಾದರಿಯ -ಒಕ್ಕೂಟದ ಕನಸಿದೆ. ಒಬ್ಬ ಮಹತ್ವಾಕಾಂಕ್ಷೆಯ ರಾಜಕಾರಣಿಯಿಂದ ಮುಂದೊಂದು ದಿನ ಈ ಕನಸು ಕೂಡ ನನಸಾಗಬಹುದು.
ಘಜ್ನಿ
ಒಡೆದ
ಬುದ್ಧನ
ಕಿವಿಯೊಳಗೆ
ಮೊಟ್ಟೆ ಇಡುತ್ತಿರುವ
ಪಂಚರಂಗಿ ಚಿಟ್ಟೆ'
ಸಾಹಿತ್ಯವಿಮರ್ಶೆ ಒಂದು ಸಮೂಹಶೋಧ ಎಂದು ನಂಬಿದವನು ನಾನು. ಕಾಳಿದಾಸ ತನ್ನ ರಘುವಂಶದಲ್ಲಿ ಚೆಲುವೆ ರಾಣಿ ಇಂದುಮತಿಯನ್ನು 'ಸಂಚಾರಿಣೀ ದೀಪಶಿಖಾ' (ನಡೆದಾಡುವ ದೀವಟಿಗೆ) ಎನ್ನುತ್ತಾನೆ. ಸಾಹಿತ್ಯ ವಿಮರ್ಶೆಯೂ ಒಂದು ನಡೆದಾಡುವ ದೀವಟಿಗೆ. ಅದು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹೋಗುತ್ತ ಮುಂದೆ ಸಾಗಬೇಕು, ಪ್ರಬುದ್ಧವಾಗಿರಬೇಕು.
ಗೋಪಾಲಕೃಷ್ಣ ಅಡಿಗರು ತನ್ನ ’ಆಗ್ಬೋಟ್’ ಕವನದಲ್ಲಿ ಪಶ್ಚಿಮದ ಬಿರುಗಾಳಿ ಬೀಸಿ ಒಡೆದ ಭಾರತ ಎಂಬ ಪ್ರಾಚೀನ ಹಡಗನ್ನು ಚಿತ್ರಿಸುತ್ತಾರೆ. ಆ ಕವನದ ಕೊನೆಯ ಸಾಲುಗಳಿವು -
ಹಳ ಹಲಗೆಗಳ ಹಿಡಿದು, ಮಿಡಿದು ಬಡಿದು ನೋಡುವಗತ್ಯ
ಮತ್ತೆ ಬಂದಿದೆ. ಪುರಾತನ ಹಡಗು ವಿದ್ಯೆಗಳನ್ನು ಇಂದಿನವರಿಗೆ
ಜೋಡಿಸುವ ಕೆಲಸ. ಹೊಸ ಮರ, ಹೊಸ ಕಬ್ಬಿಣ, ಹೊಸ ತಂತ್ರ, ಯಂತ್ರಗಳ
ಬೆಸೆವ ಆಧುನಿಕ 'ಬೋಟು', ಹೊಸ ಲಂಗರು.
ಯಾನ ನಡೆಯಲಿ, ತಂಗಿ ತಂಗಿ ಬಂದರಿನಲ್ಲಿ
ನವಖಂಡಗಳ ಸೋಸಿ ಪಾತಾಳದೆಡೆಗೆ,
ಶಿಖರಗಳನಾಕ್ರಮಿಸಿ ಆಕಾಶದೆಡೆಗೆ.
ಚಲನವೇ ಜೀವನ, ನಿಶ್ಚಲವೆ ಮರಣ.
ನಮಸ್ಕಾರ.
Blog: mupadhyahiri.blogspot.com
E-mail: mhupadhya@gmail.com
'ಹಿತ್ತಲ ಗಿಡ ಮದ್ದಲ್ಲ' ಎಂಬ ಗಾದೆ ಇದೆ. ಉಡುಪಿಯಲ್ಲಿರುವ ಕರ್ನಾಟಕದ ಮಹತ್ವದ ರಾಜಕೀಯ-ಸಾಹಿತ್ಯ ವಿಮರ್ಶಕರೊಬ್ಬರನ್ನು ನಾವು ಅಲಕ್ಷಿಸಬಾರದು. ಜಿ. ರಾಜಶೇಖರ್, ಅಮೇರಿಕದ ಜೋಮ್‍ಸ್ಕಿಯನ್ನು ನೆನಪಿಸುವ ಪ್ರಮುಖ ರಾಜಕೀಯ ವಿಮರ್ಶಕ. ಅವರ ಕೆಲವು ಅಭಿಪ್ರಾಯಗಳು ನಮಗೆ ಅಪ್ರಿಯವಾಗಬಹುದು. ಆದರೆ ಅವರ ಸಂವಾದಗಳನ್ನು ನಾವು ತಳ್ಳಿಹಾಕಬಾರದು. ಅಡಿಗರಂಥ ಹಿರಿಯ ಲೇಖಕರ ಕೃತಿಗಳಿಗೆ ಮುನ್ನುಡಿ ಬರೆದಿರುವ ರಾಜಶೇಖರ್ ಪ್ರಚಾರ ಬಯಸದ ಲೇಖಕ. ಅವರ ಲೇಖನಗಳ ಒಂದೇ ಒಂದು ಸಂಕಲನ ಇದುವರೆಗೆ ಪ್ರಕಟವಾಗಿಲ್ಲ, ಕಾರಣ ಅವರು ಅನುಮತಿ ನೀಡಿಲ್ಲ.
ಸಾಹಿತಿಗಳು 'ಕಾಣದ್ದರ ಜೇನ್ನೊಣಗಳು', ಆಶಾವಾದಿಗಳು. ಎ.ಕೆ. ರಾಮಾಜುನ್ ಬರೆದಿರುವಂತೆ -ಘಜ್ನಿ
ಒಡೆದ
ಬುದ್ಧನ
ಕಿವಿಯೊಳಗೆ
ಮೊಟ್ಟೆ ಇಡುತ್ತಿರುವ
ಪಂಚರಂಗಿ ಚಿಟ್ಟೆ'
ಸಾಹಿತ್ಯವಿಮರ್ಶೆ ಒಂದು ಸಮೂಹಶೋಧ ಎಂದು ನಂಬಿದವನು ನಾನು. ಕಾಳಿದಾಸ ತನ್ನ ರಘುವಂಶದಲ್ಲಿ ಚೆಲುವೆ ರಾಣಿ ಇಂದುಮತಿಯನ್ನು 'ಸಂಚಾರಿಣೀ ದೀಪಶಿಖಾ' (ನಡೆದಾಡುವ ದೀವಟಿಗೆ) ಎನ್ನುತ್ತಾನೆ. ಸಾಹಿತ್ಯ ವಿಮರ್ಶೆಯೂ ಒಂದು ನಡೆದಾಡುವ ದೀವಟಿಗೆ. ಅದು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹೋಗುತ್ತ ಮುಂದೆ ಸಾಗಬೇಕು, ಪ್ರಬುದ್ಧವಾಗಿರಬೇಕು.
೯
ನಾನು ಕೊಡವೂರು ದೇವಸ್ಥಾನದ ಇತಿಹಾಸದೊಂದಿಗೆ ಈ ಭಾಷಣ ಆರಂಭಿಸಿದೆ. 'ದಕ್ಷಿಣಕನ್ನಡದ ದೇವಾಲಯಗಳು' ಎಂಬ ಬೃಹತ್ ಗ್ರಂಥದ ಸಂಪಾದಕರಲ್ಲೊಬ್ಬನಾದ ನಾನು ಮತ್ತೆ ದೇವಾಲಯಗಳ ಕುರಿತು ಒಂದೆರಡು ಸಂಗತಿ ವಿವರಿಸುತ್ತ ಮಾತು ಮುಗಿಸುತ್ತೇನೆ. ಉಡುಪಿಯ ಹಿರಿಯ ವಿಮರ್ಶಕ ದಿ| ಬಿ. ದಾಮೋದರ್ ರಾವ್ ಅವರು ದೇವಸ್ಥಾನಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಧಾರ್ಮಿಕ ಆವರಣ ಭಂಗದ ಭಯ, ದಾಕ್ಷಿಣ್ಯಗಳಿಂದ ದೇವಸ್ಥಾನಗಳಲ್ಲಿ ನಮ್ಮ ಮಾತಿಗೆ ನಾವು ಕಡಿವಾಣ ಹಾಕಿಕೊಳ್ಳಬೇಕಾಗುತ್ತದೆ ಎಂಬುದು ಅವರಿಗಿದ್ದ ಆತಂಕ. ಆದರೆ ದೇವಸ್ಥಾನಗಳ ಬಳಿ ಇರುವ ಕಲ್ಯಾಣ ಮಂಟಪಗಳಲ್ಲಿ ನಡೆಸಬಹುದಲ್ಲವೇ? ನಮ್ಮ ಸಾಹಿತ್ಯ ಕ್ಷೇತ್ರದ ವೈಚಾರಿಕ ಕಾಳಗಗಳು ಕಲ್ಯಾಣಮಂಟಪಗಳಲ್ಲಿ ನಡೆಯಲಿ.ಉಡುಪಿಯ ಶ್ರೀ ಕೃಷ್ಣಮಠದಲ್ಲಿರುವ ಸುಬ್ರಹ್ಮಣ್ಯ ಗುಡಿಯಲ್ಲಿ ಶ್ರೀ ವಾದಿರಾಜ ಸ್ವಾಮಿಗಳು ಉತ್ತರ ಭಾರತದಿಂದ ತಂದು ಭೂಗತಗೊಳಿಸಿರುವ ಗುಪ್ತನಿಧಿ ಇದೆ ಎಂಬ ನಂಬಿಕೆ ಇದೆ. ಇದರೆ ಸತ್ಯಾಸತ್ಯತೆ ಏನೇ ಇರಲಿ, ಕರಾವಳಿ ಕರ್ನಾಟಕದ ತುಳುನಾಡಿನ ನೂರಾರು ದೇವಸ್ಥಾನಗಳಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಮೂಲವಿಗ್ರಹಗಳು, ಉತ್ಸವಮೂರ್ತಿಗಳು, ಆಭರಣಗಳು ಇರುವದಂತೂ ಸತ್ಯ. ನಿರ್ಜೀವ ಪ್ರದೇಶಗಳಲ್ಲಿರುವ, ದು:ಸ್ಥಿತಿಯಲ್ಲಿರುವ ಅಮೂಲ್ಯ ಕಲಾಶಪತ್ತಿನ ರಕ್ಷಣೆಗಾಗಿ ಕರಾವಳಿ ಕಾವಲು ಪಡೆಯ ರೀತಿಯ ವಿಶೇಷ ಕಾವಲು ಪಡೆಯೊಂದರ ರಚನೆಯಾಗಬೇಕು. ಕೊಲ್ಲೂರು, ಕಟೀಲು, ಸುಬ್ರಹ್ಮಣ್ಯ ದೇವಸ್ಥಾನಗಳ ಕೋಟಿಗಟ್ಟಲೆ ಹಣ ಧಾರ್ಮಿಕ ದತ್ತಿ ಇಲಾಖೆಗೆ ಬರುತ್ತಿರುವುದರಿಂದ ಇದು ಕಷ್ಟಸಾಧ್ಯವೇನೂ ಅಲ್ಲ. ಇತ್ತೀಚಿನ ಹತ್ತು ವರ್ಷಗಳಲ್ಲಿ ಕಳವಾಗಿ ಪತ್ತೆಯಾಗದ ವಿಗ್ರಹಗಳ ಮರುತನಿಖೆಯನ್ನು ಸಿ.ಓ.ಡಿ.ಗೆ ಒಪ್ಪಿಸಬೇಕು.
೧೦
ಹಳ ಹಲಗೆಗಳ ಹಿಡಿದು, ಮಿಡಿದು ಬಡಿದು ನೋಡುವಗತ್ಯ
ಮತ್ತೆ ಬಂದಿದೆ. ಪುರಾತನ ಹಡಗು ವಿದ್ಯೆಗಳನ್ನು ಇಂದಿನವರಿಗೆ
ಜೋಡಿಸುವ ಕೆಲಸ. ಹೊಸ ಮರ, ಹೊಸ ಕಬ್ಬಿಣ, ಹೊಸ ತಂತ್ರ, ಯಂತ್ರಗಳ
ಬೆಸೆವ ಆಧುನಿಕ 'ಬೋಟು', ಹೊಸ ಲಂಗರು.
ಯಾನ ನಡೆಯಲಿ, ತಂಗಿ ತಂಗಿ ಬಂದರಿನಲ್ಲಿ
ನವಖಂಡಗಳ ಸೋಸಿ ಪಾತಾಳದೆಡೆಗೆ,
ಶಿಖರಗಳನಾಕ್ರಮಿಸಿ ಆಕಾಶದೆಡೆಗೆ.
ಚಲನವೇ ಜೀವನ, ನಿಶ್ಚಲವೆ ಮರಣ.
ನಮಸ್ಕಾರ.
Blog: mupadhyahiri.blogspot.com
E-mail: mhupadhya@gmail.com
No comments:
Post a Comment