"ಚಿರವಿರಹಿ" - ಮಹತ್ವದ ಕಾದಂಬರಿ
(ಯುಗಧರ್ಮ ಹಾಗೂ ಸಾಹಿತ್ಯ ದರ್ಶನ - 1962)
- ಕೀರ್ತಿನಾಥ ಕುರ್ತಕೋಟಿ
"ಬೆಳ್ಳೆ ರಾಮಚಂದ್ರರಾಯರ ’ಚಿರಂಚೀವಿ’ ಕಾದಂಬರಿ ಮೊದಲನೆಯ ನೋಟಕ್ಕೆ ಪರಿಪೂರ್ಣವಾಗಿದೆಯೆಂದೇ ತೋರುತ್ತದೆ. ವಕೀಲ ರಾಘವೇಂದ್ರರಾಯರ ಹೆಂಡತಿಯಾದ ಮಾಲತಿ, ಗಂಡನ ಸ್ನೇಹಿತನಾದ ಗೋಪಿನಾಥನನ್ನು ಕ್ರಮೇಣ ಪ್ರೀತಿಸತೊಡಗುತ್ತಾಳೆ. ಚಿಕ್ಕ ವಯಸ್ಸಿನಲ್ಲಿಯೇ ಹೆಂಡತಿಯನ್ನು ಕಳೆದುಕೊಂಡು ಮಗಳ ಆಟಪಾಠಗಳಲ್ಲಿ ಎದೆಯ ದುಃಖವನ್ನು ಮರೆತಿರುವ ಗೋಪಿನಾಥ ಒಂದು ದುರ್ಬಲ ಕ್ಷಣದಲ್ಲಿ ಮಾಲತಿಗೆ ಮರುಳಾಗುತ್ತಾನೆ. ಪರಿಚಯ ಸ್ನೇಹವಾಗಿ, ಕೊನೆಗೆ ಪ್ರೀತಿಯಲ್ಲಿ ಪರ್ಯಾವಸನವಾಗುತ್ತದೆ. ಆದರೆ ಇಬ್ಬರಿಗೂ ಸಮಸ್ಯೆಯ ದುರಂತದ ಅರಿವಾಗಿ ತಂತಮ್ಮ ವಿವೇಕವನ್ನು ಜಾಗೃತಗೊಳಿಸಿ ದೂರವಾಗುತ್ತಾರೆ. ಸಂಸ್ಕಾರ ಅಂತಃಪ್ರವೃತ್ತಿಯನ್ನು ಗೆಲ್ಲುತ್ತದೆ. ಪ್ರೀತಿ ಅಂತಃಕರಣದ ಉಸಿರಾಗಿ ಮಾತ್ರ ಉಳಿಯುತ್ತದೆ. ಪಾತ್ರರಚನೆ, ವಾತಾವರಣ, ಮಿತವಾದ ಭಾವನಿರ್ಮಿತಿ ಇವುಗಳಿಂದ ಕಾದಂಬರಿ ಸುಂದರವಾಗಿಯೇ ಬಂದಿದೆ. ಆದರೆ ರಾಮಚಂದ್ರರಾಯರು ಪ್ರೀತಿಯ ಸಮಸ್ಯೆಯನ್ನು ತೀರ ಶಾಸ್ತ್ರೀಯವಾಗಿ, ತರ್ಕಬದ್ಧವಾಗಿ ಬಿಡಿಸಿದಂತೆ ಕಾಣುತ್ತದೆ. ಅಂಥಹ ಪರಿಹಾರಕ್ಕೆ ಅನುಕೂಲವಾಗಲೆಂದೇ ಮಾಲತಿ-ಗೋಪಿನಾಥರ ಪಾತ್ರಗಳನ್ನು ಸುಸಂಸ್ಕೃತರಾಗಿ ಮಾಡಿದರೆಂಬ ಸಂಶಯ ಸುಳಿಯುತ್ತದೆ. ಆದರೆ ಮನೋಹರವಾದ ಕಥನಶೈಲಿ, ಸರಸವಿನೋದ ಹಾಗೂ ನಿರ್ದುಷ್ಟವಾದ ಪಾತ್ರಸೃಷ್ಟಿಯ ಮೂಲಕ ಕಾದಂಬರಿ ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ."
No comments:
Post a Comment