stat Counter



Saturday, February 26, 2011

Kanthabare-Boodabare-by muddu moodubelle[2011][kannada- english]


ಮುದ್ದು ಮೂಡುಬೆಳ್ಳೆ ಅವರ - ಕಾಂತಬಾರೆ ಬೂದಬಾರೆ


ಪು. ಶ್ರೀನಿವಾಸ ಭಟ್ಟ
ನನ್ನ ನಿಡುಗಾಲದ ಗೆಳೆಯರಾದ, ಶ್ರೀ ಮುದ್ದು ಮೂಡುಬೆಳ್ಳೆಯವರು,ಸಂಗ್ರಹಿಸಿ, ಸಂಶೋಧಿಸಿ ಪ್ರಕಟಿಸುತ್ತಿರುವ ಕಾಂತಬಾರೆ - ಬೂದಬಾರೆಯರ ಜೀವನ ಚರಿತ್ರೆಯ ಅಪೂರ್ವ ಕೃತಿಗೆ, ನಾಲ್ಕು ವಾಕ್ಯಗಳ ಹರಕೆ ನುಡಿಗಳನ್ನು ಬರೆಯಲು ನನಗೆ ಬಹಳ ಸಂತೋಷವಾಗುತ್ತಿದೆ. ಅವರು ಹಲವಾರು ವರ್ಷಗಳ ಮೊದಲೊಮ್ಮೆ ಈ ಬಗ್ಗೆ ಕೃತಿಯನ್ನು ಬರೆದಿದ್ದರು. ಅದನ್ನು ಸಂಪೂರ್ಣ ಓದಿ ನೋಡಿದ್ದೇನೆ. ಇದೀಗ ಪ್ರಕಟವಾಗುತ್ತಿರುವ ಕೃತಿಯನ್ನು ಕೂಡ ಆಮೂಲಾಗ್ರ ಓದಿದ್ದೇನೆ. ಮೊದಲ ಮುದ್ರಣದಲ್ಲಿ ಇದ್ದ ಅಪೂರ್ಣತೆಯನ್ನು ಇದರಲ್ಲಿ ಪೂರ್ಣವಾಗಿಸಿದ್ದಾರೆ. ಅದಕ್ಕಾಗಿ ಈಗ ಮತ್ತೆ ಪುನಃ ಒಂದು ವರ್ಷ ಕ್ಷೇತ್ರ ಕಾರ್ಯ ನಡೆಸಿದ್ದಾರೆ. ಬಿಟ್ಟು ಹೋದ ವಿಷಯಗಳನ್ನು ಸೇರಿಸಿಕೊಂಡಿದ್ದಾರೆ. ಸಂಪನ್ಮೂಲ ಮಹನೀಯರ ಸಂದರ್ಶನ ಮಾಡಿದ್ದಾರೆ. ಯಾರುಯಾರೋ ಬರೆದ ಪುಸ್ತಕಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಓದಿ, ಮಾಡಿದ ಅಧ್ಯಯನವಿದಲ್ಲ. ವಿಷಯ ಸಂಗ್ರಹಕ್ಕಾಗಿ ಮೂಲ್ಕಿ ಸೀಮೆಯ ಮೂಲೆ, ಮೂಲೆಗಳಿಗೆ, ಅವರ ಜೈತ್ರ ಯಾತ್ರೆ ನಡೆದಿದೆ. ಸಂಗ್ರಹ ಕಾರ್ಯ ಸಣ್ಣ ಕೆಲಸವಲ್ಲ. ಸಮಸ್ಯೆಗಳು ಒಂದೆರಡಲ್ಲ, ಹತ್ತು ಹಲವು. ಹಳ್ಳಿಯ ಜನರು, ಒಮ್ಮೆ ಕೊಟ್ಟ ಅಭಿಪ್ರಾಯವನ್ನು ಮಗದೊಮ್ಮೆ ಕೇಳುವಾಗ ಬೇರೆಯೇ ಹೇಳುವುದಿದೆ, ಒಬ್ಬ ಹೇಳಿದ್ದನ್ನು ಬೇರೊಬ್ಬ ಅದು ತಪ್ಪೆಂದು ವಾದಿಸುವುದೂ ಇಲ್ಲವೆಂದಿಲ್ಲ. ಇಂತಹ ಸಂದರ್ಭಗಳಲ್ಲಿ ಸಂದರ್ಶಕನಿಗೆ ಅದ್ಭುತ ಸಹನೆ ಇರಬೇಕಾಗುತ್ತದೆ. ಎಲ್ಲವನ್ನೂ ಕೇಳಿ ಕೊನೆಗೆ ನಮ್ಮ ವೈಚಾರಿಕತೆಯ ಬೆಳಕಿನಲ್ಲಿ ಖಚಿತ ಸ್ವರೂಪವನ್ನು ನೀಡಬೇಕಾಗುತ್ತದೆ. ಈ ವಿಚಾರದಲ್ಲಿ ಮೂಡುಬೆಳ್ಳೆಯವರು ಎತ್ತಿದೆ ಕೈಯೆಂದು ಪ್ರತ್ಯೇಕ ಹೇಳಬೇಕೆಂದಿಲ್ಲ. ಕೃತಿ ಓದುವಾಗಲೇ ತಿಳಿದುಬರುತ್ತದೆ.



 ಮುಖ್ಯವಾಗಿ ಈ ಉಭಯ ವೀರರ ಕುರಿತು, ಮಾತಾಡುವುದು, ಬರೆಯುವುದು, ಓದುವುದು, ಕೇಳುವುದೆಂದರೆ ನನಗೆ ಬಹಳ ಖುಶಿ. ಯಾಕೆಂದರೆ ಅವರು ಓಡಾಡಿದ ಸೀಮಂತೂರು, ಅಲ್ಲಿರುವ ಕೆಳದಿರಾಜರ ಕೋಟೆ, ಕಂದಕ, ಕಂಬಳ, ಬಾಕಿಮಾರು, ಬ್ರಹ್ಮಸ್ಥಾನ, ಜನಾರ್ದನ ದೇವಸ್ಥಾನ, ಕುಬೇರು, ಪುನರೂರು ಇವೆಲ್ಲ ನಾನು ಬಾಲ್ಯದಲ್ಲಿ ನಡೆದಾಡಿದ ನೆಲ, ನನ್ನ ಜಾನಪದ ಆಸಕ್ತಿ ದಾಂಗುಡಿಯಿಟ್ಟದ್ದು, ಹಿರಿಯರಿಂದ ಈ ವೀರ ಸೋದರರ ಕತೆ ಕೇಳುವಲ್ಲಿಂದ ಎನ್ನುವುದು ಸತ್ಯವಚನ. ಸೀಮಂತೂರಿನ ಕೋಟೆ ಕಟ್ಟಿಸಿದ್ದು ಕೆಳದಿ ವೆಂಕಟಪ್ಪ ನಾಯಕನೆಂದು ಹೇಳುತ್ತಾರೆ. ಆ ಕಾಲದಲ್ಲಿ ಕೋಟೆಗಾವಲಿಗೆ ಬಂದಿದ್ದ ರಾಮರಾಜ ಕ್ಷತ್ರಿಯರ ಒಂದು ಮನೆ, ಕಳೆದ ಶತಮಾನದ ಆದಿಭಾಗದವರೆಗೆ ಸೀಮಂತೂರಿನಲ್ಲಿತ್ತು. ಅವರ ಕೊನೆಯ ಕುಡಿ ರಾಯಪ್ಪ ಎಂಬವರಿದ್ದರು. ಸೀಮಂತೂರು ದೇವಳದ ಬಡಗು ಬದಿಯ ಸಣ್ಣ ಹೊಳೆ ದಾಟುವ ಸ್ಥಳಕ್ಕೆ ’ಕನಡೆರ್ ಕಡ" ಎಂದು ಹೆಸರು. ವೆಂಕಟಪ್ಪ ನಾಯಕನು ಸೀಮಂತೂರಿಗೆ ಒಮ್ಮೆ ಭೇಟಿ ಕೊಟ್ಟಿದ್ದನೆಂಬ ಮಾತೊಂದಿದೆ. ತುಳುನಾಡಿನಲ್ಲಿ ಬೇಸಾಯಕ್ಕೆ ಪ್ರೋತ್ಸಾಹ ಕೊಟ್ಟವರು ಕೆಳದಿ ಸಂಸ್ಥಾನದ ಅರಸರು (1526-1763). ನೀರಿನ ಹರಿವುಗಳಿಗೆ ಕಟ್ಟ ಕಟ್ಟುವುದು, ಕೆರೆಗಳನ್ನು ತೋಡಿಸುವುದು, ಮದಕಗಳನ್ನು ನಿರ್ಮಿಸುವುದು ಇಂತಹ ಅಭಿವೃದ್ಧಿ ಕಾರ್ಯಗಳು ಆ ಕಾಲದಲ್ಲಿ ನಡೆದಿವೆ. ಈ ಅವಳಿ ವೀರರು ಇದೇ ಅವಧಿಯಲ್ಲಿ ಬದುಕಿದ್ದರೆಂದು ಭಾವಿಸಬಹುದು. ಅವರ ಬೀರ ಪಾಡ್ದನದಲ್ಲಿ ಉರಿ ನರ್ಸ’ (ಉಗ್ರ ನರಸಿಂಹ) ದೇವರ ಸ್ಮರಣೆಯಿದೆ. ಉಗ್ರ ನರಸಿಂಹ ದೇವರು ಕ್ರಿ.. 1500ರ ಬಳಿಕ ಮೂಲ್ಕಿಯಲ್ಲಿ ಪ್ರತಿಷ್ಠೆಯಾದದ್ದು. ಆದಕಾರಣ ಬಾರೆಯರು ಆ ಬಳಿಕ ಹುಟ್ಟಿ ಬೆಳೆದಿರಬಹುದಲ್ಲವೆ?
 ಮೂಲ್ಕಿ ಸೀಮೆಯಲ್ಲಿ ನೂರಾರು ಎಕ್ರೆ ಜಮೀನುಗಳಿಗೆ ನೀರುಣಿಸುವ ಅನೇಕ ಕಟ್ಟಗಳಿವೆ. ಮದಕ, ಕೆರೆ, ಬಾವಿಗಳಿವೆ. ಇವೆಲ್ಲ ಕಾಂತಬಾರೆ, ಬೂದಬಾರೆಯರ ಪ್ರಯತ್ನಗಳಿಂದ ಆರಂಭಗೊಂಡಿರಬಹುದು. ಕಾರ್ನಾಡು ಬೀದಿಸಾನ, ನಡಿಸಾಲು ಬಾಕ್ಯಾರ ಕೋಡಿ, ಸೀಮಂತೂರ ಭಾವಗಳಲ್ಲಿ ಅವರು ತೋಡಿದ ಬಾವಿಗಳಿವೆ. ಅವರ ಚರಿತ್ರೆಯಲ್ಲಿ ಪುಟ್ಟಾಡಿ ಕಟ್ಟ, ಪುನಾರ ಕಟ್ಟ, ಒಂಬರ್ತಲ (ಪಲಿಮಾರು) ಕಟ್ಟಗಳ ಉಲ್ಲೇಖಗಳಿವೆ. ಇಲ್ಲಿರುವ ಕಟ್ಟಗಳಿಗೆಲ್ಲ ದೈವೀಕ ಹಿನ್ನೆಲೆಗಳ ನಾಗ, ಬ್ರಹ್ಮ, ರಕ್ತೇಶ್ವರಿ, ಪಂಜುರ್ಲಿ ದೈವಗಳ ಸಂಪರ್ಕವಿದೆ, ಅವರು ಬದುಕಿದ್ದ ಅವಧಿಯ ಸಾಮಾಜಿಕ, ರಾಜಕೀಯ ಸ್ಥಿತಿಗಳನ್ನು ಅವಲೋಕಿಸಿದಾಗ, ಅದೊಂದು ಗೊಂದಲದ ಗೂಡಾಗಿತ್ತು. ಪರಂಪರೆಯಿಂದ ಆಡಳಿತೆ ಮಾಡಿಕೊಂಡಿದ್ದ ಸ್ಥಳೀಯ ಅರಸರು, ಕೆಳದಿಯರಸರ, ಹಾಗೂ ಹೈದರಾಲಿ, ಟಿಪ್ಪು ಸುಲ್ತಾನರ ಪ್ರಭಾವದಿಂದ, ಉಪಟಳದಿಂದ ಅವನತಿಯ ಪಥ ಹಿಡಿದಿದ್ದರು. ಹಳೆಯ ನೆನಪಿನಲ್ಲಿ, ಪ್ರಜೆಗಳಲ್ಲಿ ಕೆಲವರು ಅವರಿಗೆ ಒಂದಿಷ್ಟು ಗೌರವ ಕೊಡುತ್ತಿದ್ದರು. ಸಾಮಾಜಿಕ ರಂಗದಲ್ಲಿ ಸಭಾ ಮರ್ಯಾದೆ ಪಡೆಯಲು ಮತ್ತೆ ಕೆಲವು ಸಮಯ ಸಾಧಕರು ಪ್ರಯತ್ನ ನಡೆಸುತ್ತಿದ್ದರು. ಈವೊಂದು ತುಮುಲದಲ್ಲಿ ಈ ಸೋದರರು ಅರಸರ ಪಕ್ಷ ಹಿಡಿದುದರಿಂದ ಇನ್ನೊಂದು ವರ್ಗದ ವಿರೋಧ ಕಟ್ಟಿಕೊಂಡಂತಾಯಿತು. ಅವರ ಅವಸಾನದ ಬಳಿಕ ಅವರನ್ನು ದೈವೀಕ ಪುರುಷರೆಂದು ಆರಾಧಿಸಲು ಒಂದು ವರ್ಗ ವ್ಯವಸ್ಥಿತವಾಗಿ ಉತ್ಸಾಹ ತೋರಿಸಲಿಲ್ಲ. ಆದಕಾರಣ ಅವರು ಮೂಲ್ಕಿ ಸೀಮೆಯಲ್ಲಿ ನಿಶ್ಚಿತ ಸ್ಥಳಗಳಲ್ಲಿ ಮಾತ್ರ ಪೂಜಿಸಲ್ಪಡುವಂತಾಯಿತೆನ್ನಬಹುದು. ಇದೊಂದು ನನ್ನ ಊಹೆ ಮಾತ್ರ.
 ಇದೀಗ ಕಾಂತಬಾರೆ-ಬೂದಬಾರೆಯರ ಕುರಿತು ಅಧ್ಯಯನ ಕೃತಿಯೊಂದು ಸಂಪನ್ನಗೊಂಡಿರುವುದು ಒಂದು ಸಾರ್ಥಕ ಪ್ರಯತ್ನ. ಮೂಡುಬೆಳ್ಳೆಯವರು ಜಾನಪದ ವಿದ್ವಾಂಸರ ಪಂಕ್ತಿಯಲ್ಲಿ ಅಗ್ರಮಾನ್ಯರು. ಅವರಿಗಿಂತ ಮೊದಲು ಬಿಡಿ ಲೇಖನಗಳಲ್ಲದೆ ಇಡಿಯಾಗಿ ಈ ಅವಳಿ ವೀರರ ಕೃತಿ ಬಂದಿಲ್ಲ. ಇವರು ಮಾಹಿತಿ ಸಂಗ್ರಹಕ್ಕಾಗಿ ಮೂಲ್ಕಿ ಸೀಮೆಯ ಹಳ್ಳಿಗಳಲ್ಲಿ, ಈ ಪರಿಸರದಲ್ಲೆಲ್ಲ ಸುತ್ತಾಡುತ್ತಲೇ ಬಂದಿದ್ದಾರೆ. ಕೇಳಿಕೊಂಡು ಹೋದರೆ ಇನ್ನೂ ಕೂಡ ಕೆಲವು ವಿಚಾರಗಳು ಕೇಳಿ ಬರಬಹುದು. ಅದೇನಿದ್ದರೂ ಈಗ ಇದನ್ನು ಪರಿಪೂರ್ಣ ಕೃತಿಯೆಂದು ಒಪ್ಪಬೇಕಾಗುತ್ತದೆ. ಈ ಕೃತಿಗೆ ಎಲ್ಲರಿಂದಲೂ ಪ್ರೋತ್ಸಾಹ ಒದಗಿಬರಲೆಂದು ತುಳುನಾಡಿನ ಮಣ್ಣಿನ ದೇವರಾದ ನಾಗಬ್ರಹ್ಮರಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ.
 
ಜನಪದ ಅವಳಿ ವೀರರು ಕಾಂತಬಾರೆ ಬೂದಬಾರೆ
(ಪರಿಷ್ಕೃತ ಅಧ್ಯಯನ)
(Along with abridged English version)
ಮುದ್ದು ಮೂಡುಬಳ್ಳೆ

ಪ್ರ -
 GELEYARA BALAGA PRAKASHANA
C-2, Akashavani Quarters,
Urva Stores, MANGALORE - 575 006
First Impression - 2011
Pages - XN+4+246
Price 150
Mobile 9972170192
 

KANTHABARE-BOODABARE

No comments:

Post a Comment