stat Counter



Wednesday, February 9, 2011

ಬಿ.ಪಿ. ಜನಾರ್ದನ ಉಪಾಧ್ಯ - ಗೆಳೆಯ ಕೆ. ಗೋಪಾಲಕೃಷ್ಣ ಉಪಾಧ್ಯರ ಸವಿನೆನಪು



ಕೆ ಗೋಪಾಲಕೃಷ್ಣ ಉಪಾಧ್ಯರ ಸವಿನೆನಪು

ಕಲ್ಮಂಜೆ ಗೋಪಾಲಕೃಷ್ಣ ಉಪಾಧ್ಯಾಯ (K.G.K. Upadhyaya) ನನ್ನ ಮರೆಯಲಾಗದ ಮಿತ್ರ ಹಾಗೂ ಸಹಪಾಠಿ. ನಾವು ಬಾಲ್ಯ ಸಹಪಾಠಿಗಳೇನಲ್ಲ. ಅವರು ಬೆಳೆದು ಓದಿದ್ದು, ಪೆರ್ಡೂರು ಮತ್ತು ಇನ್ನಂಜೆಯಲ್ಲಿ. ನಾನು ಬಾಲ್ಯದಲ್ಲಿ ಓದಿದ್ದು ಕೊಳ್ಳೇಗಾಲದಲ್ಲಿ.
ಕಾಲೇಜು ಶಿಕ್ಷಣಕ್ಕಾಗಿ ನಾವಿಬ್ಬರೂ ಮೈಸೂರಿಗೆ ಹೋಗಿದ್ದಾಗ ಭೇಟಿ, ಪರಿಚಯ. ಅವರು ಮೈಸೂರಿನ ಮಹಾರಾಜಾ ಕಾಲೇಜಿನ ವಿದ್ಯಾರ್ಥಿ- 1951ರಿಂದ 1955ರ ವರೆಗೆ. ನಾನು 1950ರಿಂದ 1954ರ ವರೆಗೆ ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ - ಅಂದಿನ ನಮ್ಮ ಸಂಪರ್ಕಕ್ಕೆ ಮುಖ್ಯವಾಗಿ ದಿ. ಪ್ರೊಫೆಸರ್ ನಾರಾಯಣರಾಯರ ಅಧ್ಯಕ್ಷತೆಯ ದ.. ವಿದ್ಯಾರ್ಥಿಗಳ ಸಂಘ ಹಾಗೂ ಚಟುವಟಿಕೆ. ಅದರಿಂದಾಗಿ, ಸಹಪಾಠಿ ವಿಶ್ವನಾಥ ಬಿಳಿರಾಯ, ಕೆ. ರಾಮಚಂದ್ರ, ಹಾಗೂ ಗೋಪಾಲಕೃಷ್ಣ ಉಪಾಧ್ಯಾಯ ನನ್ನ ಅಚ್ಚುಮೆಚ್ಚಿನ ಗೆಳೆಯರಾದರು. ನಾನು ಕಾಲೇಜಿನ ಹಾಸ್ಟೆಲ್‍ನಲ್ಲಿದ್ದರೆ ಅವರು ಕೊತ್ವಾಲ್ ರಾಮಯ್ಯ ಬೀದಿಯಲ್ಲಿ ಒಂದು ರೂಂ ಮಾಡಿಕೊಂಡು, ಬಿಳಿರಾಯನ ಸಂಗಾತಿಯಾಗಿದ್ದರು. ಆಗಾಗ್ಗೆ ಭೇಟಿಯಾಗುತ್ತಿದ್ದೆವು, ಪುಸ್ತಕ ವಿನಿಮಯ, ಚರ್ಚೆ ಮುಂದುವರಿಯಿತು. ಮಹಾರಾಜಾ ಕಾಲೇಜಿನ ಹಲವಾರು ಕಾರ್ಯಗಳಿಗೆ ಉಪಾಧ್ಯಾಯರು ನನ್ನನ್ನು ಕರೆದೊಯ್ಯುತ್ತಿದ್ದರು. ಅಲ್ಲಿ ಕುವೆಂಪು, ಬೇಂದ್ರೆಯವರನ್ನು ನೋಡಿ ಕೇಳಿದ್ದು ಮನದಾಳದಲ್ಲಿದೆ. ಗೋಪಾಲಕೃಷ್ಣ ಅಡಿಗರ ಪರಿಚಯವಾದದ್ದು ಇವರಿಂದಾಗಿಯೇ. ಎಲ್ಲರಲ್ಲೂ ನೇರವಾದ ಮಾತುಕತೆ, ಅಳುಕಿಲ್ಲ. ಅವರ ನಡೆ, ನುಡಿ ನನ್ನ ಮೇಲೆ ಪ್ರಭಾವ ಬೀರುತ್ತಿತ್ತು.ರಲ್ಲಿ ನಾನು ಮೈಸೂರಿನ ವ್ಯಾಸಂಗ ಮುಗಿಸಿ, ಹಿರಿಯಡ್ಕಕ್ಕೆ ಬಂದು ವಾಸಿಸತೊಡಗಿದೆ. 1954ರ ಅಕ್ಟೋಬರ್‍ನಲ್ಲಿ ಡಿಗ್ರಿ ಪಡೆಯಲು ನಾನು ಮೈಸೂರಿಗೆ ಹೋದಾಗ, ಉಪಾಧ್ಯಾಯರ ಆಶ್ರಯ. ಅವರು ಡಿಗ್ರಿ ಪಡೆದದ್ದು 1955ರಲ್ಲಿ. ಡಿಗ್ರಿ ಮುಗಿಸಿ ಅವರು ಪೆರ್ಡೂರಿಗೆ ಬಂದಾಗ ನಾನು ನಿರುದ್ಯೋಗಿಯಾಗಿ ಮನೆಯಲ್ಲೇ ಇದ್ದೆ. ಅವರು B.T. ವಿದ್ಯಾರ್ಥಿಯಾಗಲು ನಿರ್ಧರಿಸಿ, ನನ್ನನ್ನು ಬಡಿದೆಬ್ಬಿಸಿದರು. ಅಂತೂ ಅವರಿಂದಾಗಿ, ನಾನು ಅವರ ಸಹಪಾಠಿಯಾಗಿ ಮಂಗಳೂರಿನ ಬಿ.ಟಿ. ಕಾಲೇಜು ಸೇರಿದೆನು. ಅವರು ಆಗಾಗ್ಗೆ ಹೇಳುತ್ತಿದ್ದಂತೆ, ಅಂದಿನ ತರಬೇತಿ ಶಾಲೆ ಬಿದಿರು ತಟ್ಟಿ (B.T) ಕಾಲೇಜು ಅಕ್ಷರಶಃ ಸತ್ಯ. ಮೈದಾನು ರಸ್ತೆಯಲ್ಲಿದ್ದ ಸರಳಾಯರ ಊಟದ ಹೋಟೆಲ್‍ನ ಹಿಂದಿನ ಕೋಣೆಯಲ್ಲಿ ವಾಸ್ತವ್ಯ. ಅವರ ಬೀಡಿ ಚಟ ನನ್ನನ್ನು ಕಂಗೆಡಿಸಿತ್ತು. ಆದರೂ ಅವರ ಸಹವಾಸ ನನ್ನನ್ನು ಶಿಕ್ಷಕನನ್ನಾಗಿ ರೂಪಿಸುತ್ತಿತ್ತು. ಮಂಗಳೂರಿನ ವಾಸ್ತವ್ಯ 1955-56ರಲ್ಲಿ. ನಾವು ಪರಸ್ಪರ ಬಿಟ್ಟಿರಲೇ ಇಲ್ಲ. ದಿನಾ ತಿರುಗಾಟವೂ ಒಟ್ಟಿಗೇ.ಒಮ್ಮೆ ದಿನಾ ಸಿಕ್ಕಿ ಮಾತನಾಡುತ್ತಿದ್ದ ಇದ್ದಿನಬ್ಬ ಇವರು ನನ್ನನ್ನು ನೋಡಿ, ಹಿಂದೆಮುಂದೆ ನೋಡತೊಡಗಿದರು. ಏಕೆಂದು ಕೇಳಲು, ನಿನ್ನ ಸಂಗಾತಿ ಕಾಣಲಿಲ್ಲ ಎಂದು ಹುಡುಕಾಡಿದರು. ಉಪಾಧ್ಯಾಯರು ಜನರ ಮಧ್ಯೆ ಅವರಿಗೆ ಕಾಣಲಿಲ್ಲ, ಅಷ್ಟೆ. ಕಾಲೇಜಿನ ಅಂಗಳದಲ್ಲಿ ಉಪಾಧ್ಯಾಯರದ್ದೇ ಗಟ್ಟಿ ಧ್ವನಿ. ಎಲ್ಲರಿಗೂ ಬೇಕಾದವರು. ಗೋವಾ ಚಳುವಳಿಯ ಸಭೆಗೆ ನನ್ನನ್ನು ಕರೆದೊಯ್ಯುತ್ತಿದ್ದರು. ಒಂದು ಸವಿ, ಕಹಿ ನೆನಪು. ನಮ್ಮೊಟ್ಟಿಗೆ ಪುತ್ತೂರಿನ ರಾಮಚಂದ್ರ ಭಟ್ಟ ಎಂಬ ಸೆಕಂಡರಿ ಟ್ರೈನಿಂಗ್‍ನ ವಿದ್ಯಾರ್ಥಿ ಒಬ್ಬರು ವಾಸ್ತವ್ಯ ಇದ್ದರು. ಅವರಿಗೆ ಜುಟ್ಟು ಇತ್ತು. ಬೆಳಿಗ್ಗೆ ಏಳುವಾಗ ಅದು ಮಾಯ. ಅದು ಉಪಾಧ್ಯಾಯರು ಪ್ರಯೋಗಿಸಿದ ಕತ್ತರಿ ಆಟ, ತಮಾಷೆ. ಇನ್ನೊಮ್ಮೆ ನಾವು ನಿದ್ರೆಯಲ್ಲಿದ್ದಾಗ ಬೀಡಿ ಸೇದಿ ಮೂಲೆಗೆ ಬಿಸಾಡಿದುದರ ಪರಿಣಾಮ ಕೊಡೆ ಬೆಂಕಿಗೆ ಆಹುತಿ. ಇದು ತಿಳಿದದ್ದು ಬೆಳಗಾದ ಮೇಲೆ ಹೋಗಿ ನೋಡಿದಾಗಲೇ. ಇದಕ್ಕೆ ಉಪಾಧ್ಯಾಯರ ನಗು. ಆರ್ಥಿಕವಾಗಿ ನಾವು ಅನುಕೂಲವಾಗಿರಲಿಲ್ಲ. ಆದರೂ ಇಬ್ಬರ ಕಿಸೆಯಲ್ಲಿದ್ದುದರ ಸಮಪಾಲು. ಕೊನೆಯ ತಿಂಗಳುಗಳ ಹೋಟೆಲ್ ಬಾಕಿ ಕೆಲಸ ಸಿಕ್ಕಿದ ಮೇಲೆ ಕೊಡುವ ಆಶ್ವಾಸನೆಯೊಂದಿಗೆ ಮಂಗಳೂರು ವಿದ್ಯಾಭ್ಯಾಸ ಮುಗಿಸಿ ಹಿಂದಿರುಗಿದೆವು. ನಿರುದ್ಯೋಗ ಸಮಸ್ಯೆ; ಕೆಲಸದ ಹುಡುಕಾಟ ಇಬ್ಬರಿಗೂ ಸಾಕುಬೇಕೆನಿಸಿತು. ಡಿಸ್ಟ್ರಿಕ್ಟ್ ಬೋರ್ಡಿನ ಕರೆಯಂತೆ ಮಂಗಳೂರಿಗೆ ಹೋದಾಗ ಇಬ್ಬರಿಗೂ ದಕ್ಕಲಿಲ್ಲ ಉದ್ಯೋಗ. ಕಾರಣ, ನಾವು ಬ್ರಾಹ್ಮಣರು ಮತ್ತು ಮೈಸೂರು ವಿಶ್ವವಿದ್ಯಾನಿಲಯದವರು. ಅದೇ ವರ್ಷ ಅವರು ಮದುವೆಗೆ ಮುಂದಾದರು. ಪ್ರಾಯಶಃ ಅವರ ತಾಯಿಯ ಒತ್ತಡ. ಶಿರೂರು ಮಠದಲ್ಲಿ ಮದುವೆಗೆ ಹೋಗಿದ್ದೆ. ಈ ಮಧ್ಯೆ ನಾನು ಹಲವಾರು ಅರ್ಜಿ ಹಾಕಿ, ಧಾರವಾಡದ ಹಾನಗಲ್ಲಿನಲ್ಲಿ ಉದ್ಯೋಗ ದೊರಕಿತ್ತು. ಕೇಳಿ, ಉಪಾಧ್ಯಾಯರು ಮದುವೆಯ ಮಂಟಪದಲ್ಲಿಯೇ ಸುದ್ದಿಯನ್ನು ಬಿತ್ತರಿಸಿಬಿಟ್ಟರು. ನಾನು ಹಾನಗಲ್ಲಿಗೆ ಹೋದರೆ, ಅವರೂ ದ.. ಬಿಟ್ಟು ಉತ್ತರ ಕನ್ನಡದ ಹಳದೀಪುರ ಸೇರಿದರು. ಆ ವರ್ಷವೂ ನಾವು ಸಂಪರ್ಕದಲ್ಲಿದ್ದೆವು. ೧೯೫೭ರಲ್ಲಿ ಪೆರ್ಡೂರಿನಲ್ಲಿ ಪ್ರಾರಂಭವಾದ ಶಾಲೆ ಅವರನ್ನು ಕೈಬೀಸಿ ಕರೆದು, ಸ್ಥಾಪಕ ಮುಖ್ಯೋಪಾಧ್ಯಾಯರನ್ನಾಗಿಸಿತು. ಅಲ್ಲಿಂದ ನಿರಂತರವಾಗಿ ಅವರು ಆ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತರು. ನಿವೃತ್ತಿಯ ವರೆಗೆ ಸೇವೆಯಿಂದ ಶಾಲೆಯನ್ನು ಜಿಲ್ಲೆಯಲ್ಲಿ ಹೆಸರುಗಳಿಸುವಂತೆ ಮಾಡಿದರು. ಪೆರ್ಡೂರಿನ ಕಲಾಮಂಡಳಿಯ ನಾಟಕಗಳು, ಯಕ್ಷಗಾನದ ಆಟಗಳು, ಸಿನೇಮಾ ನಟನೆ - ಇವೆಲ್ಲದರಲ್ಲೂ ಕೈಯಾಡಿಸಿದರು.ನಾನು ಅವರ ಹಿಂದೆ, ಅವರು ಕಲಿತಿದ್ದ ಇನ್ನಂಜೆ ಶಾಲೆಗೆ ಶಿಕ್ಷಕನಾಗಿ ೧೯೫೭ರಲ್ಲಿ ಸೇರಿದೆ. ಶಿಕ್ಷಕನಾಗಿ ಅವರಿಂದ ಸಲಹೆ ಸೂಚನೆ ಯಾವಾಗಲೂ ದೊರಕುತ್ತಿತ್ತು. ಶಿಕ್ಷಕನಾಗಿ ನಿವೃತ್ತನಾದ ಮೇಲೂ, ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾಪ್ರಸಾರಕ್ಕಾಗಿ, ಜಿಲ್ಲೆಯ ಹಳ್ಳಿಗಳಿಗೆಲ್ಲಾ ಸ್ವಂತ ಸ್ಕೂಟರ್‌ನಲ್ಲಿ ಪ್ರವಾಸಮಾಡಿ ವಿದ್ಯಾಪ್ರಸಾರ ಆಂದೋಳನದಲ್ಲಿ ಬಹಳಷ್ಟು ದುಡಿದರು. ಆಗೊಮ್ಮೆ, ಈಗೊಮ್ಮೆ ಅವರೊಡನೆ ಸ್ಕೂಟರ‍್ನಲ್ಲಿ ಪ್ರಯಾಣಮಾಡುವ ಅವಕಾಶ ಒದಗಿಸುತ್ತಿದ್ದರು. ಅವರ ಮೀಸೆಯಿಂದಾಗಿ ನಮ್ಮ ಮನೆಯ ಮಕ್ಕಳು ಅದ್ವಾನಿಜಿ ಎಂದು ಗುರುತಿಸಿದ್ದು ಉಂಟು. ನಿವೃತ್ತಿಯ ನಂತರ ಸ್ಕೂಟರ‍್ನಲ್ಲಿ ಅವರು ಹೋಗದಿದ್ದ ಜಿಲ್ಲೆಯ ದೇವಸ್ಥಾನವೇ ಇಲ್ಲ. ಸ್ಕೂಟರ‍್ನಿಂದ ಬಿದ್ದು ಅದರ ಸಹವಾಸ ಬಿಟ್ಟರು. ಬಸ್‍ನಲ್ಲಿ ಪ್ರಯಾಣಮಾಡದ ದಿನವಿಲ್ಲ. ಎಂ.ಜಿ.ಎಂ. ಕಾಲೇಜಿನ ಕಾರ್ಯಕ್ರಮಗಳಿಗೂ ಉಪಾಧ್ಯಾಯರು ಹಾಜರ್.ಸರಳ ಸ್ವಭಾವ, ಹಿಡಿದಿದ್ದನ್ನು ಮಾಡುವ ಛಲ, ಆಡಂಬರ ಇಲ್ಲದ ಜೀವನ ನನಗೆ ಅವರು ಹಾಕಿಕೊಟ್ಟ ಮೇಲ್ಪಂಕ್ತಿ. ಇನ್ನಂಜೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ 1947ರಲ್ಲಿ ಹಾಸ್ಟೆಲ್‍ನಲ್ಲಿ ವಿರೋಧದ ನಡುವೆಯೂ ಪ್ರತ್ಯೇಕ ಧ್ವಜಾರೋಹಣದ ನೇತೃತ್ವ ವಹಿಸಿ, ವಿದ್ಯಾರ್ಥಿಗಳ ಮುಖಂಡರಾಗಿದ್ದರು ಎಂದು ಹೇಳಬಲ್ಲೆ.ಮೇ ತಿಂಗಳಲ್ಲಿ ಅವರ 80ನೇ ಶಾಂತಿಯಂದು ನನ್ನ ಅವರ ಕಡೆಯ ಭೇಟಿ. ಬೆಂಗಳೂರಿಗೆ ಹೋಗಿ ಬಾ ಎಂದು ನಗುಮುಖದಿಂದ ನನ್ನನ್ನು ಬೀಳ್ಕೊಟ್ಟಿದ್ದರು. ಅಕ್ಟೋಬರ್ ತಿಂಗಳಲ್ಲಿ ಅವರ ಮರಣ ವಾರ್ತೆ ತಿಳಿದು, ನನಗೆ ತಡೆಯಲಾರದ ದುಃಖದಿಂದ ಸುರಿದ ಹನಿ ಕಣ್ಣೀರು, ನನ್ನ ನೆನಪಿನ ಅವರ ಚಿತ್ರವನ್ನು ಮರೆಯದಂತೆ ಮಾಡಿದೆ.ಗೆಳೆಯ ಬಿ.ಪಿ. ಜನಾರ್ದನ)ಟಿಪ್ಪಣಿ:
ನನ್ನ ಅಣ್ಣ ಬಿ
.ಪಿ. ಜನಾರ್ದನ ಉಪಾಧ್ಯರ ಸಹಪಾಠಿ-ಗೆಳೆಯ ಶ್ರೀ ಗೋಪಾಲಕೃಷ್ಣ ಉಪಾಧ್ಯಾಯರು ಶ್ರೇಷ್ಟ ಅಧ್ಯಾಪಕ ಹಾಗೂ ಪುಸ್ತಕಪ್ರೀತಿಯ ಸಹೃದಯರಾಗಿದ್ದರು. ಕೆಲವು ದಶಕಗಳ ಉಡುಪಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದ ಅವರು ಈಗ ನಮ್ಮನಗಲಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ನನ್ನ ಅಣ್ಣನ ಈ ಲೇಖನ ಪ್ರಕಟಿಸುತ್ತಿದ್ದೇನೆ.
ಮುರಳೀಧರ ಉಪಾಧ್ಯ ಹಿರಿಯಡಕ
1954
2010

(

No comments:

Post a Comment