stat Counter



Sunday, March 20, 2011

secular tradition in kannada literature- G. Rajashekhar

ಕನ್ನಡ ಸಾಹಿತ್ಯ ಜಾತ್ಯಾತೀತ ಪರಂಪರೆ
                                                                - ಜಿ. ರಾಜಶೇಖರ್.
                       
                                   
          ಪಂಪನಿಂದ ದಾಸರನ್ನು ಒಳಗೊಂಡಂತೆ ಕನ್ನಡ ಸಾಹಿತ್ಯ ಪರಂಪರೆ ಒಂದು ಜಾತ್ಯಾತೀತ ಪರಂಪರೆ. ಈ ಪರಂಪರೆಯಲ್ಲಿ ಧರ್ಮ ಅಥವಾ ಮೂಲಭೂತವಾದ ನೆರಳು ಬಿದ್ದದ್ದೇ ಇಲ್ಲ. ಕನ್ನಡ ಸಾಹಿತಿಗಳೆಲ್ಲರೂ, ಕವಿಗಳೆಲ್ಲರೂ ಮನುಷ್ಯನ ಘನತೆ, ಮನುಷ್ಯನ ಗೌರವ ಮತ್ತು ಮನುಷ್ಯನ ಸ್ವಾತಂತ್ರ್ಯ ಮತ್ತು ಸಮಾನತೆ - ಈ ಮೌಲ್ಯಗಳನ್ನೇ ಒತ್ತಿ ಹೇಳಿದರು. ಅದಕ್ಕೆ ವಿರುದ್ಧವಾದ ಒಂದು ಉದಾಹರಣೆ ಎಲ್ಲೂ ಸಿಗದು. ಬಹುಶಃ ಇದಕ್ಕೆ ಒಂದೇ ಒಂದು ಅಪವಾದವಾಗಿ ನಿಲ್ಲುವುದು ಎಸ್. ಎಲ್. ಭೈರಪ್ಪ ಒಬ್ಬರೇ. ಅಂದರೆ ನೇರವಾಗಿ ಮತೀಯ ಸಂಘರ್ಷ ಮತ್ತು ಮತೀಯ ದ್ವೇಷವನ್ನು ಪ್ರತಿಪಾದಿಸದ ಒಂದು ಕೃತಿ ಇದ್ದರೆ ಅದು ಭೈರಪ್ಪನವರ 'ಆವರಣ'. ಅದು ಅವರ ಒಂದು ಕೃತಿಯಷ್ಟೇ. ಅವರ ಬೇರೆ ಕೃತಿಗಳ ಬಗ್ಗೆ ಹೇಳುತ್ತಿಲ್ಲ. ಭೈರಪ್ಪ ಪ್ರತಿಭಾವಂತ ಲೇಖಕ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರ 'ಗೃಹಭಂಗ' ಒಳ್ಳೇ ಕಾದಂಬರಿ. ಅವರ ಆತ್ಮಚರಿತ್ರೆ ಬಹಳ ಒಳ್ಳೇ ಬರವಣಿಗೆ. ಆ 'ಆವರಣ' ಎನ್ನುವ ಒಂದು ಕೃತಿಯನ್ನು ಬಿಟ್ಟರೆ ಕನ್ನಡ ಸಾಹಿತ್ಯದಲ್ಲಿ ಮನುಷ್ಯನ ಘನತೆ, ಮನುಷ್ಯನ ಗೌರವ ಮತ್ತು ಮನುಷ್ಯನ ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು ವಿರೋಧಿಸುವ ಲೇಖಕರು ಅಥವಾ ಕೃತಿಗಳು ಇಲ್ಲ. ಕನ್ನಡದ ಪರಂಪರೆ ಆ ದೃಷ್ಟಿಯಿಂದ ನೋಡಿದರೆ ಮನುಷ್ಯನ ವಿಮೋಚನೆಗೆ ಏನು ಬೇಕೋ ಅದನ್ನು ಕೊಡುವಂತಹದ್ದು.

          ಎಡ ಅಥವಾ ಬಲ ಎನ್ನುವ ತಾಕಲಾಟ ಇರುವ ಚಚರ್ೆಗಳು, ಬರಹಗಳು ಇರಬಹುದು. ಅದು ಅನಿವಾರ್ಯ. ನಿಜವಾದ ವಿಮೋಚನೆಯ ದಾರಿ ಯಾವುದು ಎನ್ನುವುದರ ಕುರಿತ ಭಿನ್ನಾಭಿಪ್ರಾಯವೇ ಹೊರತು ವಿಮೋಚನೆಗೆ ಮೂಲಭೂತವಾಗಿ ವಿರೋಧವಾದ ವಾಗ್ವಾದವಲ್ಲ. ಬಲಪಂಥೀಯ ಚಟುವಟಿಕೆಗಳು ಒಂದು ಅಖಿಲ ಭಾರತ ವಿದ್ಯಮಾನ. ಮಹಾತ್ಮ ಗಾಂಧಿಯವರಿಗೆ ಜನ್ಮ ಕೊಟ್ಟ ಗುಜರಾತ್ ಇಂದು ಯಾವ ಕಾರಣಕ್ಕೆ ಕೋಮುವಾದದ ಕೇಂದ್ರವಾಗಿದೆಯೋ, ಬುದ್ಧನಿಗೆ ಜನ್ಮ ಕೊಟ್ಟ ಬಿಹಾರ ಇಂದು ಯಾವ ಕಾರಣಕ್ಕೆ ಬಿಜೆಪಿಯ ನೆಲೆಯಾಗಿದೆಯೋ ಅದೇ ಕಾರಣಕ್ಕೆ ಕರಾವಳಿಯೂ, ಕನರ್ಾಟಕವೂ ಇಂದು ಬಿಜೆಪಿಯ ನೆಲೆಯಾಗಿದೆ. ಆದರೆ ಈ ಬಲಪಂಥೀಯ ಚಟುವಟಿಕೆಗಳು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಂಡು ಬಂದದ್ದಿಲ್ಲ.

          ಇನ್ನು ಜಾತಿಯ ಕುರಿತ ವಿವಾದ. ಜಾತೀಯತೆಯ ಪಕ್ಷಪಾತದಿಂದಾಗಿ ತಮಗೆ ಅನ್ಯಾಯವಾಗಿದೆ ಎಂದು ದೂರುತ್ತಿರುವವರು ಅತೃಪ್ತರು. ವೈಯಕ್ತಿಕ ಕಾರಣಕ್ಕೆ ಅವರು ಜಾತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಜಾತೀಯತೆ ಕೆಲಸ ಮಾಡಿದೆ ಎನ್ನುವುದು ಪೊಳ್ಳು ಮಾತು. ಜಾತಿ ಹಿಡಿದು ಮಾತನಾಡುವುದಾದರೆ ಕನ್ನಡದಲ್ಲಿ ಜಾತಿಯ ವ್ಯವಸ್ಥೆ ಬಗ್ಗೆ, ಬ್ರಾಹ್ಮಣ್ಯವನ್ನು ವಿರೋಧಿಸಿ ಮೊದಲು ಮಾತಾಡಿದವರು ತಮ್ಮ ಹುಟ್ಟಿನ ಜಾತಿಯಿಂದ ಬ್ರಾಹ್ಮಣರೇ ಆಗಿದ್ದರು. ಅದೇ ರೀತಿ ಜಾತಿ ತಾರತಮ್ಯದ ಆರೋಪ ಮಾಡುವವರ ಜಾತಕವನ್ನು ಗಮನಿಸಿದರೆ ಸ್ವತಃ ಅಷ್ಟೇನೂ ಪ್ರತಿಭಾವಂತ ಲೇಖಕರು ಅಲ್ಲ. ಪ್ರತಿಭಾವಂತ ವಿಮರ್ಶಕರಲ್ಲ. ಅಲಕ್ಷ್ಯಕ್ಕೆ ಒಳಗಾದ ಲೇಖಕರು ಅದಕ್ಕೆ ಅರ್ಹರು. ಇಡೀ ಸಾಹಿತ್ಯ ಮತ್ತು ಜಾತೀಯತೆ ಎನ್ನುವ ಚಚರ್ೆಯೇ ಪೊಳ್ಳು.



ದ ಸಂಡೆ ಇಂಡಿಯನ್ | 20 ಫೆಬ್ರುವರಿ 2011

No comments:

Post a Comment