stat Counter



Tuesday, March 22, 2011

Samara Saugandhike (Yakshagana)

ಗಣೇಶ ಕೊಲೆಕಾಡಿ ಅವರ ಯಕ್ಷಗಾನ ಪ್ರಸಂಗ
'ಸಮರ ಸೌಗಂಧಿಕೆ'

ಚಿನ್ನದ ಚಿಕ್ಕ ತುಂಡಿನಂತಿರುವ ಮಹಾಭಾರತದ ಈ ಪುಟ್ಟ ಕಥೆ ಗಣೇಶ ಕೊಲೆಕಾಡಿಯ ಪ್ರತಿಭಾಗ್ನಿಯಲ್ಲಿ ಪುಟಗೊಂಡು ಪುತ್ಥಳಿಗೊಂಬೆಯಾಗಿ ಮೂಡಿಬಂದಿದೆ.  ಸತ್ಯವನ್ನು ಸುಂದರಗೊಳಿಸುವವನೇ ಕವಿ.  ಮೂಲವು ಹೇಗೆ ಹೊಸ ದೃಷ್ಟಿಯ-ಸೃಷ್ಟಿಯ ಪ್ರಸಂಗವಾಗಿದೆ ಎಂಬುದು 'ಸಮರ ಸೌಗಂಧಿಕೆ ಅರಳುವ ಬಗೆ' ಎಂಬ ಕವಿಯ ಬಿನ್ನಹವನ್ನು ಓದಿದರೆ
ಮಂದಟ್ಟಾಗುತ್ತದೆ.  ಮೂಲದ ಭಾವ ಪ್ರಸಂಗದಲ್ಲಿ ಇನ್ನಷ್ಟು ದಟ್ಟವಾಗಿ ಮೂಡಿಬಂದಿದೆ.  ಅಣ್ಣನ ಅಪ್ಪಣೆಯಂತೆಯೇ ಭೀಮನು ಆತನ ಕಿವಿಯಿಂದ ಹೊರಬಂದು ಹನುಮನಂತೆಯೇ ಈತನು ವಜ್ರಗಾತ್ರನಾಗುವ ಹೊಚ್ಚ ಹೊಸ ಕಲ್ಪನೆಯು ಹೃದ್ಯ, ಅನವದ್ಯ, ಆಸ್ವಾಧ್ಯ, ಆರಾಧ್ಯ.

'ತಿಂದಬೋನಕ್ಕಿಂತಲಧಿಕನೋವುಂಟೆ' ಎಂಬುದು ಕೇವಲ ಕೌಂತೇಯ ಮಧ್ಯಮ (ಭೀಮ)ನೊಬ್ಬನ ಕೊರಳ ಕೂಗಲ್ಲ.  ಈ ಮಣ್ಣಿನಲ್ಲಿ ಹುಟ್ಟಿ ಮೆಟ್ಟಿ ಸಂಸಾರದ ಸಂಕಟ ಸಂತಾಪಗಳನ್ನು ಹೊಟ್ಟಯಲ್ಲಿಟ್ಟುಕೊಂಡ ಪ್ರತಿ ಜೀವದ ಕರುಳ ಕೂಗು.
ಕನ್ನವಿಕ್ಕಿದ ಕೈಗೆ ಚಿನ್ನ ತೊಡಿಸಬೇಕೆಂಬ ಚಿತ್ತವೃತ್ತಿಯ ಧರ್ಮಜ ಕುರುಪತಿಗೆ ಸನ್ಮತಿ ದೊರಕಿ ಸುಖವಾಗಿರಲೆಂದು ಹರಿಯನ್ನು ಬೇಡುವುದು ಅಜಾತಶತ್ರುವೆನಿಸಿಕೊಂಡ ಆತನಿಗೆ ಸಮುಚಿತವಾದ ರೀತಿಯೇ ಸರಿ.  ಭೀಮ ದ್ರೌಪದಿಯರ ಸಾಂಗತ್ಯ-ದಾಂಪತ್ಯಗಳ ತಾದಾತ್ಮ್ಯವು ಸುಂದರ ಸಂವಾದವಾಗಿ ಮೈದಾಳಿದೆ.  'ನಲಿಯುತಿರೆ ದುಂಬಿಗಳು' 'ಚೆಲುವಿಕೆಯ ಯಾವಾಯ್ತೊ ವನದಲಿ' ಎಂಬೆರಡು ಭಾಮಿನಿಗಳು, ಸರಸಿಯೆ ಬಾಂದಲವಾದುದು ಎಂಬ ಕಂದಗರ್ಭಿತಸಾಂಗತ್ಯ ಇವು ಮೂರು, ಈ ಕವಿ ಬಣ್ಣಿಸಹೊರಟರೆ ಎಷ್ಟು ಬಂಧುರವಾಗಿ ಬಣ್ಣಿಸಬಲ್ಲನೆಂಬುದಕ್ಕೆ ಸೂರ್ಯಸಾಕ್ಷಿಗಳಾಗಿವೆ.
ಸಂವಾದದಲ್ಲೂ ವಾದ ಮಾಡುವವರೇ ಬಹಳ.  ವಾದದಲ್ಲಿ ಸಂವಾದ ಮಾಡುವವರು ವಿರಳ.  ಹನುಮ ಭೀಮರ ನುಡಿ ಪಡಿನುಡಿಗಳು ಒಲವಿನ ಕುಡಿಗಳು, ಚೆಲುವಿನ ಗುಡಿಗಳು.  ಭೀಮ ಮಡದಿಗೆ ಹೂಗೊಡಲು ಮುಂದಾದಾಗ - ಆಕೆ ನಕ್ಕು ಮುಡಿ ತೋರಿಸಿದಳು - ಎಂಬಲ್ಲಿ ಇಡಿಯ ಪ್ರಸಂಗದ ಧ್ವನಿ ಸಮಗ್ರವಾಗಿ, ಸಾಂಗೋಪಾಂಗವಾಗಿ ಸಪರಿವಾರವಾಗಿ, ಸುಪ್ರತಿಷ್ಠಿತವಾಗಿದೆ.  ಆ ಮಾತು ಈ ಪ್ರಸಂಗದ ಜೀವಕೇಂದ್ರ.  ಯಕ್ಷಗಾನ ಪ್ರಸಂಗಸಾಹಿತ್ಯವು ಇತರ ಕಾವ್ಯಪ್ರಕಾರಗಳಿಗಿಂತ ವಿಭಿನ್ನವೂ, ವಿಶಿಷ್ಟವೂ, ಆರಾಧನೀಯವೂ, ಆದರಣೀಯವೂ ಆಗಿರುವುದು ಅಲ್ಲಿಯ ಕಥಾಸಂವಿಧಾನ - ಸಂವಾದ - ಕಲ್ಪನೆ - ವರ್ಣನೆ - ನಿರೂಪಣೆ - ನಿರ್ವಹಣೆ - ಪದಪ್ರಯೋಗದ ಆಕರ್ಷಣಿಗಳಿಂದಲ್ಲ -
ಸಂದರ್ಭೋಚಿತವಾಗಿ ಬಳಸುವ ಛಂದೋಬಂಧಗಳಿಂದ.  ಯಕ್ಷಗಾನ ಪ್ರಸಂಗದ ಪ್ರಾಣ-ತ್ರಾಣಗಳಿರುವುದೇ ಛಂದೋವೈವಿಧ್ಯದಲ್ಲಿ.

ಸುಮಾರು ನೂರು ಪದ್ಯಗಳ ಈ ಪುಟ್ಟ ಪ್ರಸಂಗದಲ್ಲಿಯೇ ಮೂವತ್ತನಾಲ್ಕು ಬಗೆಯ ಛಂದೋಬಂಧಗಳನ್ನು ಈತ ಬಳಸಿದ್ದಾನೆಂದರೆ ಪ್ರಸಂಗ ಹಿರಿದಾಗಿದ್ದರೆ ಇನ್ನೆಷ್ಟು ಬಳಸುತ್ತಿದ್ದನೋ?........ ಈ ಪ್ರಸಂಗವನ್ನು ಬರೆದೀತ ಎಳೆಯವನಿರಬಹುದು.  ಈತನ ಕವಿತ್ವ ಎಳೆಯದಲ್ಲ.

'ಸಮರಸೌಗಂಧಿಕೆ' ಕೇವಲ ತಾಳಮದ್ದಲೆಗೆ ಸೀಮಿತವಾಗಬೇಕಾದ ಪ್ರಸಂಗವಲ್ಲವೇ ಅಲ್ಲ.  ವನಪಾಲಕನಿಂದ ತೊಡಗಿ ಸ್ತ್ರೀಪಾತ್ರದ ವರೆಗೆ ಉತ್ತಮ ರಂಗಪ್ರದರ್ಶನಕ್ಕೆ ಬೇಕಾದ ಎಲ್ಲ ಬಗೆಯ ಪಾತ್ರ ಪ್ರಸಂಗ ಪರಿಕರಗಳೂ ಇಲ್ಲಿವೆ.  ಬಣ್ಣದ ವೇಷ ಬೇಕೆಂಬ ಹಂಬಲವಿದ್ದರೆ ಕುಬೇರನ ಬಲವಾಗಿ ಒಬ್ಬ ರಾಕ್ಷಸನನ್ನು ಯುದ್ಧಕ್ಕೆ ನಿಯೋಜಿಸಬಹುದು.


- ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ
'ಪ್ರಜ್ಞಾದೀಪ್ತಿ'
ಕಟೀಲು - 574148 (ದ.ಕ.)
ದೂರವಾಣಿ - ಸ್ಥಿರ 08242200070
  ಚರ 9448840053
ಸಮರ ಸೌಗಂಧಿಕೆ (ಯಕ್ಷಗಾನ)
- ಗಣೇಶ ಕೊಲೆಕಾಡಿ
ಪ್ರ - ಗಾಯತ್ರೀ ಪ್ರಕಾಶನ
ಅನಂತ ಪ್ರಕಾಶ, ಕಿನ್ನಿಗೋಳಿ (ದ.ಕ.)
ಮೊದಲ ಮುದ್ರಣ - 2009
ಬೆಲೆ ರೂ.50/-
ಮೊಬೈಲ್ - 9341763655


No comments:

Post a Comment