ಕನ್ನಡದಲ್ಲಿ ಚಿನುವ ಅಚಿಬೆ
'ಥಿಂಗ್ಸ್ ಫಾಲ್ ಅಪಾರ್ಟ್ನೈಜೀರಿಯದ ಕಾದಂಬರಿಕಾರ ಚಿನುವ ಅಚಿಬೆ (ಜನನ-1930) ಅವರು 1958ರಲ್ಲಿ ಬರೆದ ವಿಶ್ವವಿಖ್ಯಾತ ಕಾದಂಬರಿ. ನೈಜೀರಿಯದಲ್ಲಿ ಈ ಕಾದಂಬರಿಯ ಎರಡು ಲಕ್ಷಕ್ಕಿಂತ ಹೆಚ್ಚು ಪ್ರತಿಗಳು ಮಾರಾಟಗೊಂಡಿವೆ. ಬ್ರಿಟಿಷರ ವಸಾಹತುವಾಗಿದ್ದ ನೈಜೀರಿಯಾ 1960ರಲ್ಲಿ ಸ್ವಾತಂತ್ರ್ಯ ಪಡೆಯಿತು. ಹದಿನಾರನೆಯ ಶತಮಾನದಲ್ಲಿ ನೈಜೀರಿಯಾ ಪ್ರವೇಶಿಸಿದ ಬ್ರಿಟಿಷರು ಮುಂದೆ ಅಲ್ಲಿ ನಿಧಾನವಾಗಿ ಕ್ರೈಸ್ತ ಮತ ಪ್ರಚಾರ ಆರಂಭಿಸಿದರು. ಪ್ರಾರಂಭದಿಂದಲೇ ಧರ್ಮ ಮತ್ತು ಶಿಕ್ಷಣ ಒಟ್ಟೊಟ್ಟಿಗೆ ಹೆಜ್ಜೆ ಇಟ್ಟವು. 'ಇಬೋ', 'ಹೌಸಾ' ಮತ್ತು 'ಯೊರೂಬಾ' ನೈಜೀರಿಯಾದ ಮೂರು ಬುಡಕಟ್ಟಿನವರು. ಅಚಿಬೆ 'ಇಬೋ' ಬುಡಕಟ್ಟಿನವರು. ನೊಬೆಲ್ ಪ್ರಶಸ್ತಿ ವಿಜೇತ ವೊಲೆ ಶೊಯಿಂಕ ಯೊರುಬಾ ಬುಡಕಟ್ಟಿನವರು.
'ಕಬ್ಬಿಣದ ಕುದುರೆ'ಗಳನ್ನೇರಿ ಬಂದ ಪರಂಗಿ ಪಾದ್ರಿಗಳು ಸುವರ್ಣಗಡ್ಡೆಯ ಕೃಷಿಕರಾಗಿದ್ದ 'ಇಬೋ' ಬುಡಕಟ್ಟಿನವರು ಸಂಸ್ಕೃತಿಯನ್ನು ನಾಶಗೊಳಿಸುವುದು 'ಥಿಂಗ್ಸ್ ಫಾಲ್ ಅಪಾರ್ಟ್' ಕಾದಂಬರಿಯ ವಸ್ತು. 1983ರಲ್ಲಿ ಮೈಸೂರಿಗೆ ಭೇಟಿ ನೀಡಿದ ಚಿನುವಾ ಅಚಿಬೆ ಡಾ| ಯು. ಆರ್. ಅನಂತಮೂರ್ತಿ ಅವರೊಂದಿಗಿನ ಸಂವಾದದಲ್ಲಿ ತನ್ನ ಈ ಕಾದಂಬರಿಯ ಕುರಿತು, ನಾನು ಆ ಸಂಸ್ಕೃತಿ, ನಾಗರಿಕತೆ ಸುಸಂಪೂರ್ಣವಾದದ್ದು, ಪರಿಪಕ್ವವಾದದ್ದು, ಸಂವೇದನಾರಹಿತ ವಿದೇಶೀ ದಾಳಿಕೋರರ ಕೈಯಲ್ಲಿ ಅದು ಧ್ವಂಸವಾಯಿತು ಎಂದೇನೂ ಹೇಳುವುದಿಲ್ಲ. ಬದಲಿಗೆ, ಅಲ್ಲಿನ ಸಾಂಪ್ರಾದಾಯಿಕ ಬದುಕಿನಲ್ಲಿ ಅದಾಗಲೇ ಬಿರುಕುಗಳಿದ್ದುದರಿಂದಲೇ ಕ್ರೈಸ್ತಧರ್ಮ ಅಷ್ಟರಮಟ್ಟಿಗೆ ಪ್ರಭಾವ ಬೀರಿ ಅಂಥ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ನನ್ನ ವಾದ. ಸಂಸ್ಕೃತಿ ಎಲ್ಲರಿಗೂ ಸುಖ, ಸಂತೋಷ ಭದ್ರತೆಗಳನ್ನು ದೊರಕಿಸಿಕೊಟ್ಟಿರಲಿಲ್ಲ. ಹಾಗಾಗಿ ಅಲ್ಲಿ ಅತೃಪ್ತರಾದವರೇ ಹೊಸ ವ್ಯವಸ್ಥೆಯನ್ನು ಬರಮಾಡಿಕೊಳ್ಳಲು ಮೊದಲಾದರು ('ಪೂರ್ವಾಪರ'-1990) ಎಂದಿದ್ದಾರೆ. 'ಥಿಂಗ್ಸ್ ಫಾಲ್ ಅಪಾರ್ಟ್' 'ಉಮೋಫಿಯಾ' ಎಂಬ ಇಬೋಗಳ ಹಳ್ಳಿಯ ಮೂರು ತಲೆಮಾರಿನ ಕತೆ. ಒಕೊಂಕೊನ ತಂದೆ ಯನೋಕ ಕೊಳಲು ವಾದಕನಾಗಿದ್ದ, ಸೋಮಾರಿಯಾಗಿದ್ದ. ಸಾಲಗಾರನಾಗಿದ್ದ ಅವನು ಊದಲು ರೋಗಿಯಾದಾಗ ಅವನ್ನು 'ಕೇಡಿನ ಕಾಡಿ'ನಲ್ಲಿ ಬಿಟ್ಟುಬಂದರು. ಸತ್ತ ಮೇಲೆ ಅವನನ್ನು ಸಮಾಧಿ ಮಾಡಲಿಲ್ಲ. ನಿಮ್ಮ ಕೋಳಿಗೆ ತೋಳು ಹೊಂಚುಹಾಕುತ್ತಿದ್ದರೆ ಮೊದಲು ತೋಳ ಓಡಿಸು, ಆ ಮೇಲೆ ಕೋಳಿಗೆ ಬುದ್ದಿ ಹೇಳಬಹುದು ಎಂಬ ಆಫ್ರಿಕನ್ ಗಾದೆಯಂತೆ ಬ್ರಿಟಿಷರ ಓಲೆಕಾರನ್ನು ಕೊಂದ ಒಕೊಂಕೊ ಆತ್ಮಹತ್ಯೆ ಮಾಡಿಕೊಂಡ. ಆತ್ಮಹತ್ಯೆ ಮಹಾಪಾಪವಾದ್ದರಿಂದ ಅವನ ಕುಲಬಾಂಧವರು ಅವನ್ನು ಹೂಳುವಂತಿರಲಿಲ್ಲ. ಒಕೊಂಕೊನ ಮಗ ನೋಯೆ ಕ್ರೈಸ್ತನಾಗಿ ಮತಾಂತರಗೊಂಡ.
'ಮೊರೆಯುವ ಜ್ವಾಲೆ'ಯಂತಿದ್ದ ಒಕೊಂಕೊ, ಸಮಷ್ಟಿ ಹಿತದ ನಿಷ್ಠೆಯಲ್ಲಿ ಮೂರು ವರ್ಷ ತನ್ನ ಸಾಕುಮಗನಾಗಿದ್ದ ಬಾಲಕ ಇಕೆಮೆಷೂನಾನನ್ನು ಕೊಂದ. ಈ ಕೊಲೆಯಿಂದಾಗಿ ಅವನ ಮಗ ನೋಯೆಗೆ ತನ್ನ ಬುಡಕಟ್ಟಿನವರ ನಂಬಿಕೆಗಳು ಅಸಹ್ಯ ಹುಟ್ಟಿಸಿದುವು. ಮುಂದೆ 'ಹೊಸ ಧರ್ಮದ ಕಾವ್ಯ' ಅವನನ್ನು ಸೆರೆಹಿಡಿಯಿತು. ಒಕೊಂಕೊನ ಆತ್ಮಹತ್ಯೆ ಪರಂಗಿ ಕ್ರೈಸ್ತರ ಎದುರು ಇಬೋ ಬುಡಕಟ್ಟು ಸೋತದ್ದರ ಸಂಕೇತ, ಕಾದಂಬರಿಯ ಕೊನೆಯಲ್ಲಿ ಪರಂಗಿ ಜಿಲ್ಲಾಧಿಕಾರಿ ನೈಜೀರಿಯದ ಕುರಿತು ತಾನು ಬರೆಯಬೇಕೆಂದಿರುವ ಪುಸ್ತಕದ ಶೀಷರ್ಿಕೆಯನ್ನು ನಿರ್ಧರಿಸುತ್ತಾನೆ -ನೈಜರ್ ಕೆಳದಂಡೆಯ ಆದಿವಾಸಿ ಜನರ ಶಾಂತೀಕರಣ.
ಒಗ್ಬಾಫಿ ಉದೋನ ಹೆಂಡತಿಯ ಕೊಲೆಯ ಪ್ರಕರಣ, ಹೆಂಡತಿಯ ಮೇಲೆ ಹಾದರದ ಆರೋಪ ಹೊರಿಸಿದ ಉಜೋವುನಲುನ ಪ್ರಸಂಗ, ಒಕೊಂಕೊನ ಬಂದೂಕು ಸಿಡಿದು ಬಾಲಕನೊಬ್ಬ ಆಕಸ್ಮಿಕವಾಗಿ ಸತ್ತ ಘಟನೆ - ಇವುಗಳಲ್ಲಿ ಇಬೋ ಸಂಸ್ಕೃತಿಯ ಪ್ರಬುದ್ಧತೆ ಕಾಣಿಸುತ್ತದೆ. ಆದರೆ 'ಓಸು'ಗಳನ್ನು ಅಸ್ಪೃಶ್ಯರೆಂದು ಪರಿಗಣಿಸುವುದು, ಅವಳಿ-ಜವಳಿ ಮಕ್ಕಳನ್ನು ಕೊಲ್ಲುವುದು - ಇಂಥಅನಿಷ್ಟ ಸಂಪ್ರದಾಯಗಳೂ ಅವರಲ್ಲಿದ್ದುವು.
ಅಚಿಬೆಯವರ ಈ ಕಾದಂಬರಿಯ ಶೀರ್ಷಿಕೆ ಯೇಟ್ಸ್‌ನ 'ದಿ ಸೆಕಂಡ್ ಕಮಿಂಗ್' ಕವನದ ಸಾಲು. (ರಾಮಚಂದ್ರ ಶರ್ಮರು ಈ ಸಾಲನ್ನು ಎಲ್ಲ ಛಿದ್ರ, ಅಭದ್ರ, ಕೂಡಿ ಹಿಡಿಯುವ ಕೇಂದ್ರ, ಕಟ್ಟು ಕಿತ್ತೊಗೆದಂತೆ ಅವ್ಯವಸ್ಥೆ ಎಂದು ಭಾಷಾಂತರಿಸಿದ್ದಾರೆ). ಸಿ. ನಾಗಣ್ಣನವರು ಈ ಕಾದಂಬರಿಗೆ ನೀಡಿರುವ 'ಭಂಗ' ಎಂಬ ಶೀರ್ಷಿಕೆ ಔಚಿತ್ಯಪೂರ್ಣ. 'ಭಂಗ' ಶಬ್ದದ ಮುರಿಯುವಿಕೆ, ತುಂಡು, ನಾಶ, ಸೋಲು, ಅಪಮಾನ, ಕಷ್ಟ, ಅಲೆ, ಕುಂದು, ಕೊಂಕು, ಕಪಟ, ವಿಕಲ್ಪಗಣಿತ, ನಾಟ್ಯದಲ್ಲಿ ದೇಹವನ್ನು ನಿಲ್ಲಿಸುವ ಭಂಗಿ - ಎಂಬ ಎಲ್ಲ ಅರ್ಥಗಳೂ ಈ ಕಾದಂಬರಿಗೆ ಹೊಂದಿಕೊಳ್ಳುತ್ತವೆ. ಅಚಿಬೆಯವರು ತನ್ನ ಬುಡಕಟ್ಟಿನ ಭಾಷೆಯ ಬದಲು ಇಂಗ್ಲಿಷಿನಲ್ಲಿ ಈ ಕಾದಂಬರಿ ಒಕೊಂಕೊನ ಆತ್ಮಹತ್ಯೆಯ ಮುಂದಿನ ಹಂತದಂತೆ ಕಾಣಿಸುತ್ತದೆ.
ಡಾ| ಬಿ. ದಾಮೋದರ ರಾವ್ ಅವರು ಗುರುತಿಸಿರುವಂತೆ ಅಚಿಬೆಯವರ ಈ ಕಾದಂಬರಿಯಲ್ಲಿ ಇಬೋ ಅನುಭವ ಮತ್ತು ಇಂಗ್ಲಿಷ್ ಮಾಧ್ಯಮಗಳು ಕುತೂಹಲಕರವಾಗಿ ಬೆಸೆದುಕೊಂಡಿವೆ. ಸಿ. ನಾಗಣ್ಣನವರು ನಂಜನಗೂಡಿನ ಕನ್ನಡದಲ್ಲಿ ಭಾಷಾಂತರಿಸಿರುವ ಈ ಕಾದಂಬರಿ 'ಕುಸುಮಬಾಲೆ'ಯಂಥ ಕನ್ನಡದ ಸ್ವತಂತ್ರ ಕಾದಂಬರಿಯಂತೆ ಓದಿಸಿಕೊಂಡುಹೋಗುತ್ತದೆ "Once upon a time" she began, all the birds were invited to a feast in the sky. They were very happy and began to prepare themselves for the great day. They painted their bodies with red cam wood and drew beautiful patterns on them with uli." ಈ ಸಾಲುಗಳನ್ನು ಸಿ. ನಾಗಣ್ಣ ಹೀಗೆ ಅನುವಾದಿಸಿದ್ದಾರೆ - ಒಂದಾನೊಂದು ಕಾಲ್ದಲಿ ಅವಳು ಶುರುಮಾಡಿದಳು ಆಕಾಶದಲ್ಲಿ ಔತ್ನಕ್ಕ ಅಂತ ಎಲ್ಲ ಹಕ್ಕಿ ಪಕ್ಷಿಗಳಿಗೂ ಕರಬಂತು. ಅವೆಲ್ಲಕ್ಕೂ ಕುಸಿಯಾಯ್ತು. ಹೊರಡಾ ದಿವಸನ್ನ ಭಾಳ ಸಡಗರದಲ್ಲಿ ಕಾಯ್ತಾ ತಯಾರಿ ನಡೆಸಿದೊ. ತಮ್ಮ ಮೈಮೇಲೆಲ್ಲ ಕೆಂಪು ಬಣ್ಣ ಬಳಕೊಂಡಿದ್ದವು. ಆ ಮ್ಯಾಲ ಉಲಿ ಬಣ್ಣದಿಂದ ಬೇಕ್ಬೇಕಾದ ಚಿತ್ತಾರ ಬರೆಕೊಂಡಿದ್ದೊ
ಇಬೋಗಳ ಒಂದು ಹಾಡಿನ ಭಾಷಾಂತರ ಹೀಗಿದೆ -
ಷ್‍ನಲ್ಲಿ
ನಾನವಳ ಕೈ ಹಿಡಕಂಡರ
ಮುಟ್ಟಬ್ಯಾಡ ಅಂತಾಳ
ನಾನವಳ ಕಾಲು ಹಿಡಕಂಡರ
ಮುಟ್ಟಬ್ಯಾಡ ಅಂತಾಳ
ಆದರೆ ಅವಳ ಸೊಂಟದ ಮಣಿಗಳ ಹಿಡಕೊಂಡರ
ಗೊತ್ತಿಲ್ಲದ ಹಾಗೆ ನಟನ ಮಾಡ್ತಾಳ.
ವಾಸ್ತವವಾಗಿ ಅವರು ಗಾದೆಗಳೆಂಬ ತಾಳೆಯೆಣ್ಣೆಯಲ್ಲಿ ಅದ್ದಿಯೇ ಮಾತುಗಳನ್ನು ನುಂಗುವುದು ಎನ್ನುವ ಅಚಿಬೆಯವರು ಒಂದು ಬೆರಳಿಗೆ ಎಣ್ಣೆಯಾದರೆ ಮಿಕ್ಕ ಬೆರಳುಗಳೂ ಜಿಡ್ಡಾಗುವುವು - ಇಚಿಥ ಹತ್ತಾರು ಗಾದೆಗಳನ್ನು ಈ ಕಾದಂಬರಿಯಲ್ಲಿ ಬಳಸಿದ್ದಾರೆ. ಈ ಗಾದೆಗಳಲ್ಲಿ ನೈಜೇರಿಯಾದ ಮಣ್ಣಿನ ವಾಸನೆ ಹೊಡೆಯುತ್ತದೆ.
ಸಿ. ನಾಗಣ್ಣರವರ 'ಭಂಗ'ದ ಭಾಷಾಂತರ ಎಷ್ಟು ಚೆನ್ನಾಗಿದೆ ಎಂದರೆ - ನಾಟ್ಯ ವಿದುಷಿಯೊಬ್ಬರು ತನ್ನ 'ನಾಟ್ಯದಲ್ಲಿ ದೇಹವನ್ನು ನಿಲ್ಲಿಸುವ ಭಂಗಿ'ಯಂತಿದೆ.
- ಮುರಳೀಧರ ಉಪಾಧ್ಯ ಹಿರಿಯಡಕ
ಪುಸ್ತಕ ಸಮೀಕ್ಷೆ
'ಉದಯವಾಣಿ' (2001)
ಪುಸ್ತಕ ಸಮೀಕ್ಷೆ
'ಉದಯವಾಣಿ' (2001)
ಭಂಗ
'ಥಿಂಗ್ಸ್ ಫಾಲ್ ಅಪಾರ್ಟ್'
ಮೂಲ- ಚಿನುವ ಅಚಿಬೆ
ಅನುವಾದ- ಸಿ. ನಾಗಣ್ಣ
ಪ್ರ.: ಆರ್ ಡಿ ಕ್ರಿಯೇಟಿವ್ ಕಂಪನಿ
ಮಹಡಿ, 'ಮಾರುತಿ ನಿಲಯ'
ಸಿ.ಬಿ. ನಗರ, ಎರಡನೇ ಕ್ರಾಸ್
ಉಪ್ಪಾರಹಳ್ಳಿ, ತುಮಕೂರು-2
ಮೊದಲ ಮುದ್ರಣ - 2001
ಬೆಲೆ: ರೂ.35
bhanga
[kannada translation of' Things Fall Apart'
-chinua achebe
translated by-
C. Naganna
PUBLISHED BY-
r. d. creative company
maruti nilaya
c. b. nagar, 2nd cross,
upaarahalli,
tumkur-2,
first edition- 2001
price- rs- 35
review by- muraleedhara upadhya hiriadka
mupadhyahiri.blogspot.com
No comments:
Post a Comment