ಅಮೆರಿಕನರೆಂದೂ ಸೋಲುವುದಿಲ್ಲ
ಅಮೆರಿಕನ್ ಕಾದಂಬರಿಕಾರ ಅನರ್ೆಸ್ಟ್ ಹೆಮಿಂಗ್ವೇಯ (1968-1961) 'ದಿ ಓಲ್ಡ್ ಮ್ಯಾನ್ ಆ್ಯಂಡ್ ದಿ ಸೀ' 1952ರಲ್ಲಿ ಪ್ರಕಟವಾದ 112 ಪುಟಗಳ ಕಿರು ಕಾದಂಬರಿ. 1954ರಲ್ಲಿ ಹೆಮಿಂಗ್ವೇ ಈ ಕಾದಂಬರಿಗಾಗಿ ನೊಬೆಲ್ ಪ್ರಶಸ್ತಿ ಪಡೆದು 1961ರಲ್ಲಿ ಆತ್ಮಹತ್ಯೆ ಮಾಡಿಕೊಂಡ. ಹೆಮಿಂಗ್ವೇಯ ಇತರ ಮುಖ್ಯ ಕಾದಂಬರಿಗಳು - 'ಐಲಾಂಡ್ಸ್ ಇನ್ ದಿ ಸ್ಟ್ರೀಮ್' (1970), 'ಎ ಫಾರವೆಲ್ ಟು ಆರ್ಮ್ಸ್' (1927), 'ಫಾರ್ ಹೂಮ್ ದಿ ಬೆಲ್ ಟೋಲ್ಸ್' (1940).
ಎಂಬತ್ತನಾಲ್ಕು ದಿನಗಳ ಕಾಲ ಪ್ರಯತ್ನಿಸಿದರೂ ಮುದುಕ ಸಾಂಟಿಯಾಗೋಗೆ ಗಲ್ಫ್ ಸ್ಟ್ರೀಮ್
ಕಡಲಲ್ಲಿ ಒಂದೇ ಒಂದು ಮೀನು ಸಿಗುವುದಿಲ್ಲ. ಬಾಲಕ ಮನೋಲಿನ್ ಮೊದಲ ನಲುವತ್ತ ದಿನಗಳ ವರೆಗೆ ಅವನ ಜತೆಯಲ್ಲಿದ್ದ. ಆ ಮೇಲೆ ಮುದುಕ ಒಂಟಿಯಾಗಿ ಕಡಲಿಗೆ ಹೋಗುತ್ತಿದ್ದ. ದೊಡ್ಡ ಮಾರ್ಲಿನ್ ಮೀನೊಂದು ಸಾಂಟಿಯಾಗೋನ ಬಲೆಗೆ ಬೀಳುತ್ತದೆ. ಅವನು ಹೋರಾಡಿ ಅದನ್ನು ಕೊಂದು ದೋಣಿಗೆ ಕಟ್ಟುತ್ತಾನೆ. ಆದರೆ ಏಳು ಶಾರ್ಕ್
ಮೀನುಗಳು ಏಳು ಬಾರಿ ದಾಳಿ ಮಾಡಿ ಮಾರ್ಲಿನ್‍ನ ಮಾಂಸವನ್ನೆಲ್ಲ ತಿಂದು ಮುಗಿಸುತ್ತವೆ. ಮುದುಕ ಸಾಂಟಿಯಾಗೋ, ಮಾರ್ಲಿನ್‍ನ ಅಸ್ಥಿಪಂಜರದೊಂದಿಗೆ ಕಡಲತೀರಕ್ಕೆ ಬರುತ್ತಾನೆ. ನಲ್ವತ್ತು, ಏಳು, ಮೂರು - ಈ ಸಂಖ್ಯೆಗಳನ್ನು ವಿಮರ್ಶಕರು
ಧಾರ್ಮಿಕ ಸಂಕೇತಗಳೆಂದು ಗುರುತಿಸಿದ್ದಾರೆ. 'ನಾನು ಧಾರ್ಮಿಕ ಸ್ವಭಾವದ ಮನುಷ್ಯನಲ್ಲ' 'ಪಾಪವೆಂದರೇನು ತನಗೆ ಗೊತ್ತಿಲ್ಲ, ಅಂಥ ವಿಷಯಗಳಲ್ಲಿ ತನಗೆ ನಂಬಿಕೆಯಿದೆ ಎನಿಸುವುದಿಲ್ಲ' ಎಂದು ಸಾಂಟಿಯಾಗೋ ಯೋಚಿಸುತ್ತಾನೆ.
ಹೆಮಿಂಗ್ವೇ ಎರಡನೆಯ ಮಹಾಯುದ್ಧದ ಕ್ರೌರ್ಯ, ಹಿಂಸೆ, ಸೇಡು, ಸರ್ವನಾಶಗಳನ್ನು ಕಂಡಿದ್ದ ಕಾದಂಬರಿಕಾರ. ಧ್ವನಿಪೂರ್ಣವಾಗಿರುವ ಅವನ ಈ ಕಿರುಕಾದಂಬರಿಗೆ ರಾಜಕೀಯ ವ್ಯಾಖ್ಯಾನವೊಂದನ್ನು ನೀಡಲು ಸಾಧ್ಯವೇ? ಎಂದು
ಚರ್ಚಿಸಬೇಕಾಗಿದೆ. 'ಅಮೆರಿಕರೆಂದಿಗೂ ಸೋಲುವುದಿಲ್ಲ' ಎಂದು ಸಾಂಟಿಯಾಗೊ ಬೇಸ್ ಬಾಲ್ ಆಟದ ಕುರಿತು ಹೇಳುತ್ತಾನೆ. ಈ ಮಾತು ನವವಸಾಹತುಶಾಹಿಯ ಸಂದರ್ಭದಲ್ಲಿ ರಾಜಿಕೀಯ ಅರ್ಥಾಂತರಗಳನ್ನು ಪಡೆಯಬಹುದಲ್ಲವೇ? ದೊಡ್ಡ ಮೀನನ್ನು ಹಿಡಿದು ಕೊಲ್ಲುವ ಸಾಂಟಿಯಾಗೊ ಗೆದ್ದು ಸೋಲುತ್ತಾನೆ. ಅವನ ಜಯದ ಹಿಂದೆ ಅಪಜಯವೂ ಇದೆ. ಜಪಾನಿನ ಮೇಲೆ ಅಣುಬಾಂಬು ಹಾಕಿದ ಅಮೆರಿಕ ಹಿರೋಶಿಮಾದ ಭಸ್ಮ ಕರಂಡಕಗಳನ್ನಲ್ಲದೆ ಇನ್ನೇನನ್ನು ಪಡೆಯಿತು? ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕನ್ನರಿಗೆ ಸಿಕ್ಕಿದ್ದು ಅಸ್ಥಿಪಂಜರಗಳು, ಶವಪಟ್ಟಿಗೆಗಳು ಮಾತ್ರವಲ್ಲವೇ? ಕಾದಂಬರಿಯ ಕೊನೆಯ ವಾಕ್ಯ ಹೀಗಿದೆ - 'ವೃದ್ಧ ಸಾಂಟಿಯಾಗೋ ಸಿಂಹಗಳ ಬಗ್ಗೆ ಕನಸುಕಾಣುತ್ತಿದ್ದ'. ಹೌದು, ಅಮೆರಿಕ ಯಾವಾಗಲೂ ತಾನು ಮೃಗರಾಜನಾಗಬೇಕೆಂದು ಕನಸು ಕಾಣುತ್ತದೆ. ಆ ಕನಸನ್ನು ನನಸಾಗಿಸಲು ಆಗಾಗ ಕೆಲವು ಹೊಸ ಹೆಸರಿನ ಬಲೆಗಳನ್ನು ಹಿಡಿದುಕೊಂಡು ಹೊರಡುತ್ತದೆ. ಮೀನಿನ ಅಸ್ಥಿಪಂಜರದೊಂದಿಗೆ ಹಿಂದಿರುಗಿದ ಮುದುಕನ ಕತೆ ಓದಿದಾಗ ನನಗೆ ಇದು ಒಬ್ಬ ಮುದುಕನ ಕತೆಯಲ್ಲ; ಒಂದು ದೇಶದ ಸೊಕ್ಕಿನ, ಅರ್ಥಹೀನ ಯುದ್ಧಗಳ ಕತೆ ಅನ್ನಿಸಿತು.
ಎ.ಕೆ. ರಾಮಾನುಜನ್ ಬರೆದಿರುವವಂತೆ "ಕವಿ ಬೆಸ್ತ. ನಿರಂತರದ ಹೊಳೆಯಲ್ಲಿ ಹಿಡಿದ ಮೀನು, ಐದು ನಿಮಿಷದ ಹಿಂದೆ ಬಳುಕಿ ಮಿಂಟಿದ ಮೀನು, ಹೊರಗೂ ಬದುಕಬೇಕೆನ್ನುವ ನಿಮಿಷದಾಚೆಯ ಬೆಸ್ತ. ಹೆಮಿಂಗ್ವೇ ಸಾಯದ ಸುಂದರ ಮೀನುಗಳನ್ನು ಹಿಡಿದ ಕಾದಂಬರಿಕಾರ". ಸಿದ್ಧರಾಜ ಪೂಜಾರಿ ಅವರ ಅನುವಾದ ತೃಪ್ತಿಕರವಾಗಿದೆ.
- ಮುರಳೀಧರ ಉಪಾಧ್ಯಾಯ
ಪುಸ್ತಕ ಸಮೀಕ್ಷೆ
ಉದಯವಾಣಿ (2000)
ವೃದ್ಧ ಸಾಂಟಿಯಾಗೊ ಮತ್ತು ಸಮುದ್ರ
(ನೊಬೆಲ್ ಪ್ರಶಸ್ತಿ ವಿಜೇತ ಕಾದಂಬರಿ)
ಇಂಗ್ಲಿಷ್ ಮೂಲ: ಅರ್ನೆಸ್ಟ್ ಹೆಮಿಂಗ್ವೇ
ಕನ್ನಡಕ್ಕೆ - ಸಿದ್ದರಾಜ ಪೂಜಾರಿ
ಪ್ರ: ಕವಿ ಚಕ್ರವರ್ತಿ ರನ್ನ ಪ್ರಕಾಶನ
ಮಹಾಲಿಂಗಪುರ - 587312
ಮೊದಲ ಮುದ್ರಣ: 2000 ರೂ.65
No comments:
Post a Comment