'ಚಿಲ್ಲರೆ ಅಂಗಡಿ'ಯಲ್ಲಿ ಸುವರ್ಣದ ಪತ್ರಾವಳಿ
ಪ್ರೊ| ಮುರಳೀಧರ ಉಪಾಧ್ಯ
ಸೇಡಿಯಾಪು ಕೃಷ್ಣ ಭಟ್ಟರು (ಜ - 1902) ಆಧುನಿಕ ಕನ್ನಡ ಸಾಹಿತ್ಯಲೋಕದ ಶ್ರೇಷ್ಠ ಛಾಂದಸ, ವೈಯಾಕರಣರಲ್ಲೊಬ್ಬರು. 'ಕನ್ನಡ ವರ್ಣಗಳು', 'ಕೆಲವು ದೇಶನಾಮಗಳು', 'ಛಂದೋಗತಿ', 'ಕನ್ನಡ ಛಂದಸ್ಸು', 'ತಥ್ಯದರ್ಶನ'ಗಳನ್ನು ವಿದ್ವಾಂಸರನ್ನು ಸಂವಾದಕ್ಕೆ ಆಹ್ವಾನಿಸುವ, ಚಿಂತನೆಗೆ ದಿಕ್ಸೂಚಿಯಾಗಬಲ್ಲ ಕೃತಿಗಳು. ಶಿವರಾಮ ಕಾರಂತರು ಹೇಳುವಂತೆ, ಪಂಡಿತರು ಹೀಗಿರುತ್ತಾರೆ ಎಂದು ನಾನು ಬೆರಳೆತ್ತಿ ತೋರಬಹುದಾದವರು ಕೃಷ್ಣಭಟ್ಟರು. 'ಸೇಡಿಯಾಪು' 'ಪದವಿಟ್ಟಳಿಸದೊಂದಗ್ಗಳಿಕೆ'ಯವರಲ್ಲ. 'ತಿದ್ದಿ ತೀಡಿ ಬರೆವೆ' ಎನ್ನುವ ಕುಸುರಿಗೆಲಸದವರು. 'ಚಂದ್ರಖಂಡ ಮತ್ತು ಇತರ ಸಣ್ಣ ಕಾವ್ಯ'ಗಳಲ್ಲಿ 'ಪಳಮೆಗಳು' ಕಥಾಸಂಕಲನದಲ್ಲಿ ಅವರ ಸೃಜನಶೀಲ ಪ್ರತಿಭೆ ಹೊಳೆಯುತ್ತದೆ. ಅವರು ವಿನಯದಿಂದ, ವಿನೋದದಿಂದ ಆಡಿದ ಮಾತಿದು ಸಾಹಿತ್ಯದ ಸಂತೆಯಲ್ಲಿ ನನ್ನದು ಚಿಲ್ಲರೆ ಅಂಗಡಿ. ಸ್ವಲ್ಪ ಛಂದಸ್ಸು, ಸ್ವಲ್ಪ ವ್ಯಾಕರಣ, ಸ್ವಲ್ಪ ಕಥೆ, ಸ್ವಲ್ಪ ಕವಿತೆ ಎಲ್ಲವೂ ಸ್ವಲ್ಪ, ಗಿರಾಕಿಗಳೂ ಸ್ವಲ್ಪವೇ!
ಸ್ಯಾಮ್ಯಯಲ್ ಜಾನ್ಸನ್‍ಗೆ ಬಾಸ್ವೆಲ್ ಇದ್ದಂತೆ ಸೇಡಿಯಾಪು ಕೃಷ್ಣ ಭಟ್ಟರಿಗೆ ಎಂ. ರಾಮಚಂದ್ರ. 'ಪತ್ರಾವಳಿ'ಯನ್ನು ಸಂಪಾದಿಸಿರುವ ಎಂ. ರಾಮಚಂದ್ರ ಸೇಡಿಯಾಪು ಕೃಷ್ಣ ಭಟ್ಟರ ಶಿಷ್ಯೋತ್ತಮ. ಅಂತರಂಗದ ಸಖ, ಪತ್ರಮಿತ್ರ. ಶ್ರೀ ಸೇಡಿಯಾಪು ನನಗೆ ಬರೆದಿರುವ ಸುಮಾರು ಐನೂರು ಪತ್ರಗಳ ದೊಡ್ಡ ರಾಶಿಯಿಂದ ಅದರ ಐದನೆಯ ಒಂದು ಪಾಲಿನಷ್ಟು - ಒಂದು ನೂರ ಆರನ್ನು' - ಆರಿಸಿ ಒಂದು 'ಪತ್ರಾವಳಿ'ಯಾಗಿ ಹೆಣೆದಿದ್ದೇನೆ ಎನ್ನುತ್ತಾರೆ ರಾಮಚಂದ್ರ. ಈ ಪತ್ರಗಳನ್ನು ಅವರು ಲೋಕಾಭಿರಾಮ, ಸಾಹಿತ್ಯ ಕಲೆ, ಮುದ್ರಣಾಸಕ್ತಿ, ವ್ಯಕ್ತಿ ವಿಚಾರ ಮತ್ತು ಸ್ಥಳ ವರ್ಣನೆ ಎಂದು ಐದು ಭಾಗಗಳಲ್ಲಿ
ವರ್ಗೀಕರಿಸಿದ್ದಾರೆ.ಸೇಡಿಯಾಪು ಕೃಷ್ಣ ಭಟ್ಟರ ಶಬ್ದ ಜಿಜ್ಞಾಸೆ ಸಂಶೋಧನ ಪ್ರವೃತ್ತಿ, ತಲಸ್ಪರ್ಶಿ ವಿಮರ್ಶೆ, ಪುಸ್ತಕಪ್ರೀತಿ, ಮುದ್ರಣಾಸಕ್ತಿ, ತಿದ್ದಿ ನೀಡಿ ಬರೆವ ಗುಣ, ಕಿರಿಯರಿಗೆ ಅಪ್ರಿಯವಾಗದಂತೆ ಮಾರ್ಗದರ್ಶನ ನೀಡುವ ಸಜ್ಜನಿಕೆಗಳಿಗೆ ಇಲ್ಲಿಯ ಪತ್ರಗಳಲ್ಲಿ ಸಾಕಷ್ಟು ದೃಷ್ಟಾಂತಗಳು ಸಿಗುತ್ತವೆ. ಸೇಡಿಯಾಪು ಅವರ ನಶ್ಯದ ಚಟ, ಹಾಸ್ಯಪ್ರವೃತ್ತಿಗಳೂ ಇಲ್ಲಿ ಕಾಣಸಿಗುತ್ತವೆ. ತಮ್ಮ 'ಪ್ರೀತಿಯ ಚಂದ್ರಮಾ' (ರಾಮಚಂದ್ರ)ರಿಗೆ ಒಂದು ಪತ್ರದಲ್ಲಿ ಸೇಡಿಯಾಪು ಹೀಗೆ ಹೇಳುತ್ತಾರೆ - "ನಿನ್ನ ತಪ್ಪನ್ನು ನಿನಗೆ ತೋರಿಸಿ ತಿದ್ದುವ ಪ್ರಯತ್ನವನ್ನು ಮಾಡಿದ್ದೇನೆಂದು ಮನಸ್ಸಾಕ್ಷಿಯನ್ನು ಪರಿಶೋಧಿಸಿ 'ಪಿತೇವ ಪುತ್ರಸ್ಯ' ಹೇಳುತ್ತೇನೆ."
ಅನೇಕ ಶಬ್ಷಗಳ ಪೂರ್ವಾಪರಗಳನ್ನು, ಅರ್ಥವ್ಯತ್ಯಾಸಗಳನ್ನು ಸೇಡಿಯಾಪು ಸೂಕ್ಷ್ಮವಾಗಿ ಗ್ರಹಿಸಿ ವಿವರಿಸಿದ್ದಾರೆ. ನಮ್ಮ ದೇಶದಲ್ಲಿ 'ವಿಧಿ' ಎಂದರೆ ಪುರಾಕೃತ ಸ್ವಕರ್ಮ (ಫಲ). ಪಾಶ್ಚಾತ್ಯರಲ್ಲಿ ವಿಧಿ ಎಂದರೆ ನಾನು ತಿಳಿದಷ್ಟರ ಮಟ್ಟಿಗೆ ಮನುಷ್ಯನನ್ನು ಮೇಲೇರದಂತೆ ಒತ್ತಿ ಹಿಡಿಯುವ ಅವರ ದೇವತೆ (ಭೂತ?)ಗಳ ಇಚ್ಛೆ ಪ್ರಯತ್ನ. ಆದರೆ ನಮ್ಮೂರವರಿಗೆ ಈ ಶಬ್ಬ (ಬನಿ) ಕಷ್ಟದ್ದೇ. ನಮ್ಮ ಸುತ್ತಮುತ್ತ ಇರುವವರಿಗೆ ಅರ್ಥ ಸುಗಮವಾಗಿ ತಿಳಿಯುವಂತಿದ್ದರೆ ಮಾತ್ರ ಅಂಥವುಗಳನ್ನು ಬಳಸುವುದು ಹಿತವೆಂದು ನನ್ನ ಮತ.
ಉಜ್ಜಯನಿ ಪ್ರವಾಸದ ತಮ್ಮ ಅನುಭವಗಳನ್ನು ಕವಿ ಸೇಡಿಯಾಪು ಹೀಗೆ ಬಣ್ಣಿಸಿದ್ದಾರೆ:" ತುಂಬಿದ ಮನೆಯಲ್ಲಿ ಸುಳಿಯುತ್ತಿರುವ ಸೆಳೆನಡುವಿನ ಗೃಹಿಣಿಯಂತೆ ನಗರದೊಳಗೆ ಹೊರಗೆ ಸಿಪ್ರಾ ನದಿ ಇಂದೂ ಅಲ್ಲಿ ಸುತ್ತಿ ಸುಳಿದು ಹರಿಯುತ್ತಿದೆ. ಅದರ ದಡದಲ್ಲಿ ನಿಂತು ಅಲ್ಲಿಯ ಗತವೈಭವವನ್ನು ಮನಸ್ಸಿಗೆ ಆವಾಹಿಸಿಕೊಂಡೆ. ವಿಕ್ರಾಮದಿತ್ಯನು ಖಡ್ಗಹಸ್ತನಾಗಿ ಒಂಟಿಯಾಗಿ ರಾತ್ರಿ ಸುಳಿಯುತ್ತಿದ್ದ ಪ್ರದೇಶಗಳಲ್ಲಿ, ಕಾಳಿದಾಸನಿಗೆ ರಘುವಂಶಸ್ತವನ ಮಾಡಲು ಪ್ರೇರೇಪಿಸಿದ ವಾತಾವರಣದಲ್ಲಿ, ವಸಂತಸೇನೆಯನ್ನು ಶಕಾರನು ಅಟ್ಟಿಕೊಂಡು ಹೋದ ಬೀದಿಗಳಲ್ಲಿ, ವಾಸದತ್ತೆಯನ್ನು ಉದಯನನು ಹಾರಿಸಿಕೊಂಡು ಹೋದ ಉದ್ಯಾನ ಸ್ಥಳದಲ್ಲಿ - ನಾನೂ ಒಂದು ಸಣ್ಣ ಹಕ್ಕಿಯೋ, ಪತಂಗವೋ ಆಗಿ ಸಂಚರಿಸಿದೆ. ಮೇಲಾಗಿ ಮೇಘದೂತದಲ್ಲಿ ಪೂಜಾಕಾಲದ ಪಟಹಧ್ವನಿಯನ್ನು ಇಂದಿಗೂ ಕೇಳಿಸುತ್ತಿರುವ, ಶ್ರೀ ಮಹಾಕಾಲೇಶ್ವರನ
ಜ್ಯೋರ್ತಿಲಿಂಗವನ್ನುಕಣ್ಣಾರೆ ನೋಡಿದೆ! ಕೈಯಾರೆ ಮುಟ್ಟಿ ನೋಡಿದೆ! ತಲೆಯಾರೆ ಮಣಿದು ನೋಡಿದೆ! ನೋಡಿದೆ!!.
ತಮ್ಮ 'ನಾಗರಬೆತ್ತ' ಕತೆಯಲ್ಲಿ ವಸಾಹತುಶಾಹಿಯ ಕ್ರೌರ್ಯವನ್ನು ಸಾಂಕೇತಿಕವಾಗಿ ಚಿತ್ರಿಸಿರುವ ಸೇಡಿಯಾಪು ಕೃಷ್ಣ ಭಟ್ಟರು 'ಪುರೋಹಿತ ನೆಚ್ಚಿ ಪಶ್ಚಿಮಬುದ್ಧಿಯಾದವರಲ್ಲ; 'ಫರಂಗಿರೋಗ'ದ ಉನ್ಮಾದಕ್ಕೆ ಚಿಕಿತ್ಸೆ ನೀಡುವ ಚೊಕ್ಕ ದೇಶೀವಾದಿ, ಗಾಂಧೀವಾದಿ. ಅವರೆನ್ನುವಂತೆ, ಆ ಹರ್ಕ್ಯುಲಿಯಸ್, ಕೊಲೇಸಸ್ ಮುಂತಾದವು ನನ್ನ ಮನಸ್ಸಿಗೆ ನುಗುವುದಿಲ್ಲ. ನಮ್ಮ ಅಗೊಳಿಮಂಞಣ, ನಮ್ಮ ಭೀಮ, ನಮ್ಮ ಮಾರುತಿ, ನಮ್ಮ ವಾಮನ, ನಮ್ಮ ಗೋವರ್ಧನೋದ್ಧಾರಿ, ನಮ್ಮ ಗೋಮಟ - ಇವರೆಲ್ಲ ನನ್ನೆದೆಯಲ್ಲಿ ನೆಲಸಿದ್ದಾರೆ. ಹರ್ಕ್ಯುಲಿಯಸ್ ಮುಂತಾದವರನ್ನು ಕಂಡರೆ ಇವರು 'ಉ:ಫ್' ಎಂದು ಓಡಿಸುತ್ತಾರೆ. ಹಾಗೆಯೇ ನಾನು ಕಂಡ ಕಾರ್ಕಳ, ನಾನು ಕಂಡ ಶೃಂಗೇರಿ, ನಾನು ಕಂಡ ಹರಿದ್ವಾರ, ಮಸ್ಸೂರಿ, ನೀಲಗಿರಿ ಇತ್ಯಾದಿಗಳೆಲ್ಲ ನಾನು ಕಾಣದ ಸ್ವಿಜರ್ಲೆಂಡನ್ನು ಸ್ಮರಿಸುವುದಕ್ಕೆ ಬಿಡುವುದಿಲ್ಲ.
ತಾವು ಪದಪ್ರಯೋಗದಲ್ಲಿ 'ಕಂಜೂಸ್' ಎಂದು ಸೇಡಿಯಾಪು ಹೇಳಿಕೊಂಡಿದ್ದಾರೆ. ಈ ಜಿಪುಣತನ, ಫ್ರೆಂಚ್ ಲೇಖಕ
ವಾಲ್ಟೇರ್‌ನ, "ತಪ್ಪು ಸ್ಥಾನದಲ್ಲಿರುವ ಒಂದು ಪದ ಒಂದು ಹೊಳಹನ್ನು ನಾಶ ಮಾಡುತ್ತದೆ" ಎಂಬ ಮಾತನ್ನು ನೆನಪಿಗೆ ತರುತ್ತದೆ. ಸೇಡಿಯಾಪು, ಸುರಗಿ ಹೂವಿನ ಮಾಲೆ ಕಟ್ಟಿದಂತೆ ಪದಗಳನ್ನು ಎಚ್ಚರದಿಂದ ಪೋಣಿಸುವ ಲೇಖಕ.
ಪತ್ರಸಾಹಿತ್ಯ, ಚಿಲ್ಲರೆ ಅಂಗಡಿಯಲ್ಲಿ ಪಾವಲಿಗಳು ಒಂದೊಂದಾಗಿ ಹೆಚ್ಚುತ್ತ ರಾಶಿಯಾಗುವಂತೆ ಬೆಳೆಯುವ ಸಾಹಿತ್ಯ. ಲೇಖಕ ಮುಖವಾಡ ಹಾಕಿಕೊಳ್ಳದೆ ತನ್ನ ಅಂತರಂಗದ ಅಳಲು ಆಲೋಚನೆಗಳನ್ನು ಪತ್ರದಲ್ಲಿ ಬರೆದರೆ ಪತ್ರ-ಸಾಹಿತ್ಯವಾಗುತ್ತದೆ; ಬರೆದವನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಅಮೂಲ್ಯ ಆಕರವಾಗುತ್ತದೆ. ಕನ್ನಡದಲ್ಲಿ ಪತ್ರಸಾಹಿತ್ಯ ಸೃಷ್ಟಿಯಾಗಿ ಪ್ರಥಮ ದರ್ಜೆಯ ಕೃತಿಗಳು ಸಾಕಷ್ಟು ಬಂದಾಗ ಆ ಪ್ರಕಾರ ಮನ್ನಣೆ ಪಡೆಯುತ್ತದೆ. ಕನ್ನಡ ಪತ್ರಸಾಹಿತ್ಯದ 'ಚಿಲ್ಲರೆ ಅಂಗಡಿಗೆ' ಬಂದಿರುವ ಸುವರ್ಣದ 'ಪತ್ರಾವಳಿ' ಒಂದು ಅನನ್ಯ ಕೃತಿ. ಸಜ್ಜನ ಸಾಹಿತಿ ಸೇಡಿಯಾಪು ಕೃಷ್ಣ ಭಟ್ಟರ ಪತ್ರ-ಮಿತ್ರತ್ವದಲ್ಲಿ ತಾವು ಪಡೆದ ಹೆಜ್ಜೇನನ್ನು ಗುಪ್ತನಿಧಿಯಾಗಿ ಬಚ್ಚಿಡದೆ ಸಹೃದಯರಿಗೆ ಹಂಚಿರುವ 'ಪತ್ರಾವಳಿ'ಯ ಸಂಪಾದಕ ಎಂ. ರಾಮಚಂದ್ರರಿಗೆ ಅಭಿನಂದನೆಗಳು.
No comments:
Post a Comment