stat Counter



Sunday, August 7, 2011

ದಿ| ರಂಗನಾಥ ಶೆಣೈಯವರ ಒಂದು ಪತ್ರ

ದಿ| ರಂಗನಾಥ ಶೆಣೈಯವರ ಒಂದು ಪತ್ರ
                                                                        -    ಮುರಳೀಧರ ಉಪಾಧ್ಯ ಹಿರಿಯಡಕ
                                   
          ಮಾಜಿ ಲೋಕಸಭಾ ಸದಸ್ಯ ದಿ| ರಂಗನಾಥ ಶೆಣೈಯವರ ಕುರಿತು ಲೇಖನವೊಂದನ್ನು ಬರೆದುಕೊಡಬೇಕೆಂದು ಅವರ ಮಗಳು ಶ್ರೀಮತಿ ಭಾರತಿ ಶೆಣೈ ಅವರು ವಿನಂತಿಸಿದಾಗ ನಾನು ಮೊದಲು ನಿರಾಕರಿಸಿದೆ. ದಿ| ಶೆಣೈ ಅವರ ಕುರಿತು ನನಗೆ ಹೆಚ್ಚಿಗೆ ಏನೂ ತಿಳಿದಿಲ್ಲ ಎಂಬುದೇ ನನ್ನ ನಿರಾಕರಣೆಗೆ ಕಾರಣವಾಗಿತ್ತು. ಆಮೇಲೆ ಭಾರತಿ ಶೆಣೈ ಅವರ ಕೋರಿಕೆಯ ಮೇರೆಗೆ ದಿ| ರಂಗನಾಥ ಶೆಣೈ ಅವರ ಕುರಿತು ಅವರ ನಿಕಟವರ್ತಿಗಳಿಂದ ಮಾಹಿತಿ ಸಂಗ್ರಹಿಸಿ ಒಂದು ಲೇಖನ ಬರೆಯಲು ನಾನು ಒಪ್ಪಿಕೊಂಡೆ.

          ಇನ್ನೆಬ್ಬ ಮಾಜಿ ಲೋಕಸಭಾ ಸದಸ್ಯ ದಿ| ಶ್ರೀನಿವಾಸ ಮಲ್ಯರ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದಂತಕಥೆಗಳಿವೆ. ಆ ದಂತಕಥೆಗಳು ಅವರ ಬಗೆಗಿನ ಅಭಿಮಾನದಿಂದ ಹುಟ್ಟಿವೆ. ರಂಗನಾಥ ಶೆಣೈಯವರ ಕುರಿತು ಅಂತಹ ದಂತಕಥೆಗಳನ್ನು ನಾನು ಕೇಳಿಲ್ಲ. ಅವರನ್ನು ಕುರಿತ ಟೀಕೆ, ಟಿಪ್ಪಣಿಗಳೂ ಲಭ್ಯವಿಲ್ಲ. ನನ್ನ ಸಹಪಾಠಿ, ಗೆಳೆಯ ಉಡುಪಿಯ ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತ ಯು.ಆರ್.ಜಯವಂತರಲ್ಲಿ ರಂಗನಾಥ ಶೆಣೈಯವರ ಕುರಿತು ಒಮ್ಮೆ ಮಾತನಾಡಿದಾಗ ನನಗೊಂದು ಆಶ್ಚರ್ಯ ಕಾದಿತ್ತು. ಅವರು ನನ್ನೊಡನೆ ಮಾತು ಮುಂದುವರಿಸುತ್ತಲೇ, ತನ್ನ ಮೇಜಿನ ಮೇಲಿದ್ದ ಒಂದು ಫೈಲ್ನಿಂದ ಹಳೆಯ ಕಾಗದವೊಂದನ್ನು ಹುಡುಕಿ ತೆಗೆದರು. ಅದನ್ನು ನನ್ನ ಕೈಗಿತ್ತು, ಈ ಕಾಗದವನ್ನು 22 ವರ್ಷದಿಂದ ರಕ್ಷಿಸಿದ್ದೇನೆ. ಓದಿ ಮರೆಯದೆ ಹಿಂದಿರುಗಿಸಿ ಎಂದರು.

          ರಂಗನಾಥ ಶೆಣೈಯವರು 1947ರ ಫೆಬ್ರವರಿ 16ರಂದು ಶ್ರೀ ಯು.ಆರ್.ಜಯವಂತರಿಗೆ ಬರೆದ ಪತ್ರದ ಆಯ್ದ ಭಾಗಗಳನ್ನು ನೀಡಿ, ಅದರ ಕುರಿತು ಕೆಲವು ಮಾತುಗಳನ್ನು ಬರೆಯುತ್ತೇನೆ.

            "ನನ್ನ ಯುವಕ ಗೆಳೆಯರಾದ ಶ್ರೀ ಜಯವಂತನವರಿಗೆ ಮಾಡುವ ಪ್ರೀತಿಯ ನಮಸ್ಕಾರಗಳು. ತರುವಾಯ ನೀವು ನನಗೆ ಉಡುಪಿಯಲ್ಲಿ ಸಿಕ್ಕಿದ ನಂತರ ತಾರೀಕು 30-01-1974ರ ನಿಮ್ಮ ಪತ್ರ ನಿನ್ನೆ ಕೈಸೇರಿತು. ಪತ್ರದಲ್ಲಿ ಇಂದಿನ ರಾಜಕೀಯ ಪರಿಸ್ಥಿತಿ ಮತ್ತು ಅದರಲ್ಲಿ ನನ್ನಂತವರ ಪಾತ್ರದ ಕುರಿತು  ಮಾರ್ಮಿಕವಾಗಿ ಚಿತ್ರಿಸಿದ್ದೀರಿ. ಅಂತರರಾಷ್ಟ್ರೀಯ ಪರಿಸ್ಥಿತಿಯಿಂದಾಗಿಯೋ, ಅಹಿಂಸಾತ್ಮಕ ಪ್ರಜಾಸತ್ತೆಯಲ್ಲಿ ವೇಶ್ಯೆಯರಿಗಿಂತ ಹೆಚ್ಚು ಆಕರ್ಷಕರಾಗಿ ಮೆರೆಯುತ್ತಿರುವ ಹೃದಯಮಾನ್ಯ ಶೋಷಕರಿಗೆ ಸಿಕ್ಕುವ ಸ್ಥಾನಮಾನಗಳಿಂದಲೋ, ಈ ಸ್ಥಾನಮಾನಗಳಿಗಾಗಿ ಮಿತಿ ಮೀರಿದ ಹಣಗಳಿಸಲು ಉಪಯೋಗಿಸುವ ಭ್ರಷ್ಟಾಚಾರದ ರೀತಿನೀತಿಗಳಿಂದಲೋ, ನಮ್ಮ ದೇಶಕ್ಕೆ ಈಗಿನ ಪರಿಸ್ಥಿತಿ ಬಂದಿದೆ. ಇದನ್ನು ಒಬ್ಬಿಬ್ಬರು ಅಥವಾ ಒಂದೆರಡು ಸಾವಿರ ಜನರು ಕೂಡಿ ಪರಿಹರಿಸಲು ಸಾಧ್ಯವಿಲ್ಲ. ಪರಿಹಾರ ಮಾರ್ಗವೇನೆಂಬುದು ಇನ್ನೊಂದು ಪ್ರಶ್ನೆ. ತಗಲುವ ಸಮಯವೆಷ್ಟೆಂಬುದನ್ನು ದೇವರೇ ಹೇಳಬೇಕು. ಸಮೃದ್ಧಿ ಹಾಗೂ ಸಮಭಾಗಿತ್ವ ಇನ್ನೂ ದೂರದ ಕನಸಾಗಿದೆ."

          "ಅನ್ಯಾಯವನ್ನು ಪ್ರತಿಭಟಿಸುವ ಇಲ್ಲವೆ ಎದುರಿಸುವ ಯಾವ ಚೈತನ್ಯವನ್ನೂ ನಾನು ಇಟ್ಟುಕೊಂಡ ಹಾಗಿಲ್ಲ ಎನ್ನುತ್ತೀರಿ. ಇದು ನಿಜವಾದಲ್ಲಿ ಪಕ್ಷದ ನೀತಿಯನ್ನೇ ನಾನು ಅನುಸರಿಸುತ್ತೇನೆಂದು ಹೇಳಬಹುದು."

          "ಹಿರಿಯ ರಾಜಕಾರಣದ ಮರ್ಮವನ್ನು ಇನ್ನೂ ತಿಳಿಯಬೇಕಾದ ನನಗೆ ನಮ್ಮ ಕಾಂಗ್ರೆಸ್ ಪಕ್ಷದ ಹಾಗೂ ಶ್ರೀಮತಿ ಇಂದಿರಾಗಾಂಧಿಯವರ ಕೆಲವೊಂದು ಧೋರಣೆಗಳ ಅರ್ಥವೇ ಆಗುವುದಿಲ್ಲ. ಆದರೆ ಇಷ್ಟನ್ನು ಮಾತ್ರ ಹೇಳಬಲ್ಲೆ, ಇಂದಿನ ಪರಿಸ್ಥಿತಿಯಲ್ಲಿ ಶ್ರೀಮತಿ ಗಾಂಧಿಯವರಿಗೆ ದೇಶ ಬೇಕಾದುದಕ್ಕಿಂತಲೂ ಹೆಚ್ಚಿಗೆ ದೇಶಕ್ಕೆ ಶ್ರೀಮತಿ ಗಾಂಧಿಯವರು ಬೇಕಾಗಿದ್ದಾರೆ. ಆದುದರಿಂದ ನಾವು ಕೆಲವೊಂದು ವಿಷಯಗಳಲ್ಲಿ ಮೌನ ತಾಳಬೇಕಾಗಿದೆ. ನಾನು ದೇಶದ ಆಗುಹೋಗುಗಳ ವಿಷಯ ಚೆನ್ನಾಗಿ ಅಭ್ಯಸಿಸುತ್ತೇನೆಂಬ ವಿಚಾರದಲ್ಲಿ ನಿಮಗೆ ಯಾವ ಸಂಶಯವೂ ಬೇಡ. ಆದರೆ ಈ ಅಭ್ಯಾಸ ಯಾವಾಗ ಯಾವ ರೂಪ ತಾಳುತ್ತದೆ ಎಂದು ಹೇಳುವುದು ನನ್ನ ಯೋಚನೆಗೂ ಮೀರಿದ ವಿಚಾರವಾಗಿರುತ್ತದೆ. ಕುರೂಪ ತಾಳದಿದ್ದರೆ ಸಾಕು ಸದ್ಯಕ್ಕೆ.
ಶ್ರೀ ಕುಶೆಯವರು ತಾವಾಗಿ ಸೋತರೆ ನಾವೇನೂ ಮಾಡಲು ಸಾಧ್ಯವಿಲ್ಲ. ಆದರೆ ಪಕ್ಷ ರಾಜಕೀಯದಲ್ಲಿ ವ್ಯಕ್ತಿಗಿಂತ ಪಕ್ಷವೇ ಮೇಲು. ಆದುದರಿಂದ ಪಕ್ಷದ  ಅಭ್ಯರ್ಥಿಗೆ  ನಾವು ಸಾಧ್ಯವಾದಷ್ಟು ಸಹಾಯ ಮಾಡಬೇಕಾಗಿದೆ."

          "ನಮ್ಮ ಜಿಲ್ಲೆಯಲ್ಲಿ ಅಕ್ಕಿಯ ವಿಚಾರ - (1) ಮಂಗಳೂರು ನಗರ, (2) ಮಂಗಳೂರು ನಗರದ ಸುತ್ತಮುತ್ತಲಿನ ಗ್ರಾಮಗಳು, (3) ಕೇರಳದ ಗಡಿಗೆ ತಾಗಿರುವ ಪ್ರದೇಶ (ಬೆಲ್ಟ್ ಏರಿಯ) ಮತ್ತು (4) ಸುಮಾರು 5 ಮೈಲು ಅಗಲದ ಜಿಲ್ಲೆಯ ಕರಾವಳಿ ಪ್ರದೇಶ ಇಷ್ಟು ಪ್ರದೇಶಗಳಿಗೆ ಅಕ್ಕಿ ಸಿಕ್ಕಲು ಆಗುವ ಕಷ್ಟ ಮತ್ತು ಅಲ್ಲಿಯ ಕೃಷಿಕರಿಗೆ ಸರಕಾರದ ನೆರವಿನಿಂದ ಅಕ್ಕಿ ಹಂಚಬೇಕಾದ ಅವಶ್ಯಕತೆ ನಮ್ಮ ಮೈಸೂರು ಸರಕಾರಕ್ಕೆ ಅರಿವಾದಂತಿದೆ. ಈ ನಾಲ್ಕು ಪ್ರದೇಶಗಳಲ್ಲಿ ಏನಾದರೊಂದು ವ್ಯವಸ್ಥೆ ಮಾಡಬೇಕೆಂದು ಸರಕಾರ ನಿರ್ಧಾರ ಮಾಡಿದಂತಿದೆ. ನಾಲ್ಕನೆಯ ಈ ಪ್ರದೇಶಕ್ಕೆ ನಾನು ಕನಿಷ್ಠ ಎರಡು ಗಂಟೆಗಳ ಕಾಲ (ಎಂ.ಪಿ.ಗಳ ಸಭೆ, ಬೆಂಗಳೂರು 13-02-1974) ಹೋರಾಡಬೇಕಾಯಿತು. ನ್ಯಾಯಬೆಲೆ ಅಂಗಡಿಗಳನ್ನು ಈ ಪ್ರದೇಶದಲ್ಲಿ ತೆರೆದು ಲೆವಿ ಅಕ್ಕಿಯನ್ನು ಸದ್ಯದಲ್ಲೇ ಹಂಚುವ ಭರವಸೆ ಕೊಟ್ಟಿದ್ದಾರೆ - ಮಾನ್ಯ ದೇವರಾಜ ಅರಸು ಅವರು."

          "ಅರ್ಥಿಕ ಅಡಚಣೆಗಳಿಲ್ಲದೆ ಜಿಲ್ಲೆಯ ತರುಣರು ಸ್ವಂತ ಉದ್ಯೋಗದ ಯೋಜನೆ ಹಾಕಿಕೊಂಡರೆ ಜಿಲ್ಲೆಯು ಖಂಡಿತವಾಗಿಯೂ,  ಅರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಮುಂದುವರಿಯುತ್ತದೆ. ಇಂದು ನಮ್ಮ ಜಿಲ್ಲೆಯಲ್ಲಿ ಮತ್ತು ನಮ್ಮ ಜಿಲ್ಲೆಯವರು ಉಳಿಸಿದ ಹಣ ಬೊಂಬಯಿ, ಕಲ್ಕತ್ತ, ಬೆಂಗಳೂರು ಮುಂತಾದ ನಗರಗಳಲ್ಲಿ ಬ್ಯಾಂಕುಗಳ ಮೂಲಕ ದೊಡ್ಡ ವ್ಯಾಪಾರ ಹಾಗೂ ದೊಡ್ಡ ಉದ್ಯಿಮೆಗಳಿಗೆ ಉಪಯೋಗವಾಗುತ್ತದೆ. ನಮ್ಮ ಜಿಲ್ಲೆಯ ಜನರಿಗೆ ಚಿಟ್ಫಂಡ್ ಮತ್ತು ಖಾಸಗಿ ಸಾಲಕೊಡುವವರು (ಇವರಿಗೆಲ್ಲ ಬ್ಯಾಂಕುಗಳ ಬೆಂಬಲವಿದೆ) ಮಾತ್ರ ಗತಿ. ಬ್ಯಾಂಕುಗಳ ತವರು ಮನೆಯಾದ ಉಡುಪಿಯಲ್ಲಿ ಎಷ್ಟು ಚಿಟ್ ಫಂಡ್ಗಳು! ಎಷ್ಟು ಖಾಸಗಿ ಸಾಲ ಕೊಡುವವರು! ಜಿಲ್ಲೆಯಲ್ಲಿ ಹಣವನ್ನು ಉಳಿಸುವ ಪ್ರಯತ್ನ ಮಾಡುವವರಿಗೆ (ಪಿಗ್ಮಿ ಇತ್ಯಾದಿ ಡಿಪೊಸಿಟ್ಗಳ ಮೂಲಕ) ಉಳಿತಾಯಕ್ಕಿಂತಲೂ ಹೆಚ್ಚಿನ ಸಾಲದ ಸೌಲಭ್ಯವಿಲ್ಲ! ಇದನ್ನೆಲ್ಲಾ ನಿಧಾನವಾಗಿ ಸರಿಪಡಿಸಬೇಕೆಂದು ನಮ್ಮ ಸರಕಾರ ಹೇಳುತ್ತದೆ. ಅದೆಷ್ಟು ನಿಧಾನವೋ?"

          "ಉಡುಪಿ ಲೋಕಸಭಾ ಕ್ಷೇತ್ರದ ಕುಂದಾಪುರ ಮತ್ತು ಉಡುಪಿ ತಾಲೂಕುಗಳಲ್ಲಿ ಚಿಕ್ಕ ರೈತರಿಗಾಗಿ ಹಾಗೂ ಭೂಮಿ ಇಲ್ಲದ ಕೃಷಿ ಕಾರ್ಮಿಕರಿಗಾಗಿ  MALF ಯೋಜನೆ ಜಾರಿಯಲ್ಲಿದೆ. ಅಧಿಕಾರಿಗಳು, ಸಹಕಾರಿ ಸಂಸ್ಥೆಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಮನಸ್ಸು ಮಾಡಿದಲ್ಲಿ ಈ ಯೋಜನೆ ಯಶಸ್ವಿಗೊಳಿಸಬಹುದು. ಕುಂದಾಪುರ, ಕಾರ್ಕಳ ತಾಲೂಕುಗಳು ಮಲೆನಾಡು ಪ್ರದೇಶಗಳೆಂದು ಸಾರಲ್ಪಟ್ಟು ಅಲ್ಲಿ Rural Electrification Scheme ಪ್ರಕಾರ ಸುಲಭವಾಗಿ ವಿದ್ಯುತ್ತು ಪಡೆಯಬಹುದು. ಆದರೂ ಹಲವಾರು ಗ್ರಾಮಗಳಿಗೆ ಇನ್ನೂ ವಿದ್ಯುತ್ ಬರಲಿಲ್ಲ. ಬೀಡಿ ಕೆಲಸಗಾರರಿಗೆ minimum wages ನಿರ್ಧರಿಸಿದರೂ, ಕರ್ನಾಟಕ  ಸರಕಾರ, ಕೇರಳ ಸರಕಾರ ಮುಂದುವರಿಸಿದಷ್ಟು ಮುಂದುವರಿಯಲಿಲ್ಲ. ಮೀನುಗಾರಿಕೆಯನ್ನು ಮುಂದಿನ ಐದು ವರ್ಷಗಳಲ್ಲಿ ಹತ್ತು ಪಾಲಿನಷ್ಟು ಅಭಿವೃದ್ಧಿಗೊಳಿಸಬಹುದು. ಭೂಮಸೂದೆ ಜಾರಿಗೆ ಬಂದರೆ ಚಿಕ್ಕ ರೈತರ ಅಭಿವೃದ್ಧಿಗೆ ಇಡೀ ಜಿಲ್ಲೆಯಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಬಹುದು. ಶೇಂದಿಯನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಶೇಂದಿಯನ್ನು ಬಿಟ್ಟು ಉಳಿದ ಮದ್ಯಪಾನಕ್ಕೆ ಮತ್ತೆ ಸಂಪೂರ್ಣ ನಿಷೇಧ ತಂದರೆ ಒಳ್ಳೆಯದೆಂದು ನನ್ನ ಅಭಿಮತ. ನಮ್ಮ ಜಿಲ್ಲೆಗಂತೂ ಇದರಿಂದ ಒಂದಕ್ಕಿಂತ ಹೆಚ್ಚು ರೀತಿಯ ಒಳ್ಳೆಯದಾಗುತ್ತದೆ."

          "ಇರಲು ಮನೆ ಇಲ್ಲದ ಕಾರ್ಮಿಕರಿಗೆ ಸರಕಾರ ಭೂಮಿಕೊಟ್ಟು ಅದರಲ್ಲಿ ಮನೆಕಟ್ಟಲು ನೆರವು ಕೊಡುವ ಯೋಜನೆ ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕು. ಬಂದರದ ಸುತ್ತಲೂ ಉದ್ದಿಮೆಗಳು ಬರಬೇಕು."

         "ಜಿಲ್ಲೆಯ ನಿರ್ಬಲ ಜನರ ಯೋಚನೆ ಬಂದಾಗ ಮೇಲಿನ ವಿಚಾರಗಳು ಬಂದವು. ಹೆಚ್ಚಿಗೆ ಬಂದರೆ ನಿಮಗೆ ಬೇಸರವಾಗಬಹುದು. ಈ ವಿಚಾರಗಳಿಗೆ ನಮ್ಮ ಪಕ್ಷ ಒಂದಲ್ಲ ಒಂದು ರೀತಿಯಲ್ಲಿ ಗಮನ ಕೊಟ್ಟಿರುತ್ತದೆ. ನಾವೆಲ್ಲರೂ ಮುಖ್ಯವಾಗಿ ನಮ್ಮ ಪಕ್ಷದಲ್ಲಿರುವ ನಿಮ್ಮಂತಹ ತರುಣರು ಸದ್ಯಕ್ಕೆ ಈ ವಿಚಾರಗಳಿಗೆ ಪ್ರೋತ್ಸಾಹ ಕೊಡೋಣ. ಕೀರ್ತಿಯ ಕಾಮ ನಮಗೆ ಬೇಡ - ಇದು ಅನವಶ್ಯಕವಾದ ಕಿಚ್ಚಿಗೆ ಕಾರಣವಾಗುತ್ತದೆ. ನಿಷ್ಕಾಮ ಸೇವೆಯ ಮನೋಭಾವವಿದ್ದರೆ ನಾವು ಹೆಚ್ಚಿಗೆ ಪರಿಣಾಮಕಾರಿಗಳಾಗಬಹುದು. ಸಾರ್ವಜನಿಕ ವ್ಯಾಪಾರಿ ಸಂಸ್ಥೆ (Public undertakings)ಗಳಲ್ಲಿ ನಷ್ಟವಾದಾಗ ಟೀಕೆ ಮಾಡುವುದರಲ್ಲಿ ಅರ್ಥವಿರಬಹುದು. ಆದರೆ ಸೇವೆಯೂ ಕೂಡ ವ್ಯಾಪಾರದ ತಳಹದಿಯಲ್ಲಿ ಆಗಬೇಕೆನ್ನುವ ಆಧುನಿಕ ಸೇವಾ ಧುರಂಧರರ ತತ್ವ ನಾವು ಒಪ್ಪುವುದು ಬೇಡ. ಅಂತಹ ತತ್ವವನ್ನು ವಿರೋಧಿಸುವುದರಲ್ಲಿಯೇ ನಾವು ಕಾಲ ಕಳೆಯುವುದೂ ಸರಿಯಲ್ಲ."

          "ನೀವು ಬರೆದ ಪತ್ರಕ್ಕಿಂತಲೂ ಉದ್ದದ ಪತ್ರ ಬರೆಯಬೇಕೆಂದು ಈ ಪತ್ರವನ್ನು ಆರಂಭಿಸಿದೆ, ನಿಮ್ಮಷ್ಟೇ ಸುಂದರವಾದ ಅಕ್ಷರಗಳನ್ನು ಉಪಯೋಗಿಸಬೇಕೆಂದಿದ್ದೆ. ಆದರೆ ಈ ಪತ್ರವನ್ನು ಓಡುವ ಉಗಿಬಂಡಿಯಲ್ಲಿ ಬರೆಯುತ್ತಿದ್ದೇನೆ. ಹಾಗಾಗಿ ಓದಲು ನಿಮಗೆ ಸ್ವಲ್ಪ ಕಷ್ಟವಾಗಬಹುದು."

          "ಶ್ರೀ ಸಭಾಪತಿಯವರೂ ನನಗೆ ಪತ್ರ ಬರೆದಿದ್ದಾರೆ. ಅವರಿಗೆ ಕೆಲವು ದಿನಗಳೊಳಗೆ ಬರೆಯಬೇಕೆಂದಿದ್ದೇನೆ."
         "ನಾವು ನಗರಸಭಾ ಚುನಾವಣೆಯಲ್ಲಿ ಸೋತದ್ದು ನನಗೆ ತುಂಬಾ ಬೇಸರವಾಗಿದೆ. ನಮ್ಮ ಪಕ್ಷದಿಂದ ಹಲವು ರೀತಿಯಲ್ಲಿ ನಿರ್ಲಜ್ಜೆಯ ಉಪಯೋಗ ಪಡೆಯುವವರೇ ನಮ್ಮ ಎದುರಾ ಎದುರಿ ಹಾಗೂ ಬೆನ್ನಿನಲ್ಲಿ ತಿವಿದರು. ಬಹುಶಃ ನಾವು ಗೆದ್ದಿದ್ದರೆ ನಗರಸಭೆಗೆ ದಿನನಿತ್ಯ ಟೀಕೆ ಮಾಡಿ ಉದಯವಾಣಿ ಬರೆಯುತ್ತಿತ್ತು .......ಆದರೆ ನಮ್ಮನ್ನೆಲ್ಲ ಜಾಗ್ರತವಗಿರಿಸಲು ಅದು ತುಂಬಾ ಸಹಾಯ ಮಾಡುತ್ತದೆ."
                                                 -ರಂಗನಾಥ ಶೆಣೈ.

          ದಿ| ರಂಗನಾಥ ಶೆಣೈ ಅವರ ರಾಜಕೀಯ ಸಾಮಾಜಿಕ ವಿಚಾರ ಧಾರೆಯ ಸಾರಾಂಶ ಈ ಪತ್ರದಲ್ಲಿದೆ. ರಾಜಕೀಯ ಸ್ಥಾನಗಳನ್ನು ಗಳಿಸಲು ಅನುಸರಿಸುವ ಭ್ರಷ್ಟ ರೀತಿ-ನೀತಿಗಳ ಬಗ್ಗೆ ಶೆಣೈ ಅವರು ಈ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ತನ್ನ ಪಕ್ಷದ ನಾಯಕಿ ಇಂದಿರಾ ಗಾಂಧಿಯವರ ಧೋರಣೆ ತನಗೆ ಅರ್ಥವಾಗುವುದಿಲ್ಲ ಎಂಬ ತನ್ನ ಪ್ರಾಮಾಣಿಕ ಅನ್ನಿಸಿಕೆಯನ್ನು ಶೆಣೈಯವರು ತನ್ನ ಪಕ್ಷದ ಯುವ ಕಾರ್ಯಕರ್ತರೊಡನೆ ಹಂಚಿಕೊಂಡದ್ದನ್ನು ಗಮನಿಸಬೇಕು. (ಅಲಹಬಾದ್ ಹೈಕೋರ್ಟ್)  ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದು ಗೊಳಿಸಿದಾಗ ಅವರು ರಾಜೀನಾಮೆ ನೀಡಬೇಕೆಂದು ರಂಗನಾಥ ಶೆಣೈಯವರು ಸಲಹೆ ನೀಡಿದ್ದರು. ಶೆಣೈ ಮತ್ತಿತರ ತನ್ನ ಪಕ್ಷದ ಎಂ.ಪಿ.ಗಳ ಸಲಹೆಯನ್ನು ತಿರಸ್ಕರಿಸಿದ ಇಂದಿರಾಗಾಂಧಿಯವರು ಜೂನ್ 26, 1975ರಲ್ಲಿ ದೇಶದಲ್ಲಿ ಆಂತರಿಕ ತುರ್ತು  ಪರಿಸ್ಥಿತಿಯನ್ನು ಘೋಷಿಸಿದರು. ಅದು ಮುಂದಿನ ಚುನಾವಣೆಯಲ್ಲಿ ಅವರು ಸೋಲುವವರೆಗೆ - ಮಾರ್ಚ್ 21, 1977ರ ವರೆಗೆ ಜಾರಿಯಲ್ಲಿತ್ತು.) ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೋಡಿದಾಗ ದಿ| ಶೆಣೈ ಅವರು ಭೂಮಸೂದೆಯ ಪರವಾಗಿದ್ದುದು ಮುಖ್ಯವಾದ ಸಂಗತಿ. ರಾಜಕಾರಣಿಗಳು ಜಾಗೃತರಾಗಿರಲು  ಪತ್ರಿಕೆಗಳು ಸಹಾಯಮಾಡುತ್ತವೆ ಎನ್ನುವ ಶೆಣೈಯವರು ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಟದಲ್ಲಿದ್ದ ದಿನಗಳಲ್ಲಿ ಲೋಕಸಭಾ ಸದಸ್ಯರಾಗಿದ್ದರು.........ಸೇವೆ ವ್ಯಾಪಾರವಾಗಬಾರದು, ಕೀರ್ತಿ ಕಿಚ್ಚಿಗೆ ಕಾರಣವಾಗುತ್ತದೆ ಎಂಬ ಶೆಣೈಯವರ ಕಿವಿಮಾತುಗಳನ್ನು ಯುವಕರು ನೆನಪಿನಲ್ಲಿಡಬೇಕು. ತನ್ನ ಊರಿನ, ಪಕ್ಷದ ಯುವಕರೊಬ್ಬರು ಬರೆದ ಪತ್ರಕ್ಕೆ ಸುದೀರ್ಘವಾದ ಉತ್ತರವನ್ನು ಉಗಿಬಂಡಿಯಲ್ಲಿ ಪ್ರಯಾಣಮಾಡುವಾಗ ಶೆಣೈಯವರು ಬರೆದರು.

          ಈ ಪತ್ರ ದಿ| ರಂಗನಾಥ ಶೆಣೈ ಅವರಲ್ಲಿ ನಮಗೆ ಗೌರವವನ್ನು ಮೂಡಿಸುತ್ತದೆ.
                       

ರಂಗದರ್ಶನ
(ಪರ್ಕಳ ರಂಗನಾಥ ಶೆಣೈ ಸ್ಮೃತಿ ಸಂಚಯ).
ಸಂ.-ಶ್ರೀಮತಿ ಭಾರತೀ ಶೆಣೈ.
ಪ್ರ.-ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ-576102.
ಮೊದಲ ಮುದ್ರಣ.
ಬೆಲೆ ರೂ. 90.00

 Rangadarshana

{ Life and Mission Of  P. Ranganatha Shenoy[1927-1979 ] }
Edited by Smt Bharathi Shenoy
Published by 
Rashtrakavi Govinda Pai Samshodana Kendra , Udupi-576102
First Edition-2004
pages-20+188  + 16
price- rs-90
cover design-
Veda offset printers, Bangalore

No comments:

Post a Comment