ಸಂಶೋಧನೆಯನ್ನು ಒಂದು ಪದವಿಯಷ್ಟೆ ಎನ್ನುವ ಕಾರಣಕ್ಕೆ ಸರ್ಟಿಫಿಕೇಟ್ ಗಾಗಿ ರಿಸರ್ಚ್ ಮಾಡುವವರ ಸಂಖ್ಯೆ ದೊಡ್ಡದಿದೆ. ಹಾಗಾಗಿ ಎಂ.ಎಂ.ಕಲ್ಬುರ್ಗಿಯವರು ಹಿಂದೊಮ್ಮೆ ''ಪಿಹೆಚ್ ಡಿ ಮಾಡುವವರ ಸಂಖ್ಯೆ ದೊಡ್ಡದಿದೆ ಆದರೆ ಸಂಶೋಧಕರು ಕಾಣುತ್ತಿಲ್ಲ'' ಎಂದಿದ್ದರು.
ಹೀಗಿರುವಾಗ ಬೆರಳೆಣಿಕೆಯ ಕೆಲವರು ಸಂಶೋಧನೆಯೆಂಬುದು ಸಾಮಾಜಿಕ ಹೊಣೆಗಾರಿಕೆಯ ಕೆಲಸ, ಇದರಿಂದ ಲೋಕದ ಗ್ರಹಿಕೆಗಳಲ್ಲಿ ಚೂರಾದರೂ ಬದಲಾಗಲಿ, ಅರಿವಿನ ಬಗೆಗಿನ ದುಂಡು ಹೇಳಿಕೆಗಳು ಪರೀಕ್ಷೆಗೆ ಒಳಗಾಗಿ ಹೊಸ ಬಗೆಯ ನೋಟಕ್ರಮಗಳು ಕಾಣಿಸಿಕೊಳ್ಳಲಿ ಎಂದು ಬದ್ಧತೆಯಿಂದ ಸಂಶೋಧನೆ ಮಾಡುವವರೂ ಇದ್ದಾರೆ. ಅಂತವರ ಸಂಖ್ಯೆ ವಿರಳ.
ಕನ್ನಡ ವಿಶ್ವವಿದ್ಯಾಲಯ ಹಂಪಿ ಗೆ 2001-02 ರ ಸಾಲಿನಲ್ಲಿ ಎಂ.ಎ.ಪಿಹೆಚ್.ಡಿ ಸಂಯೋಜಿತ ಕೋರ್ಸಿಗೆ ಸೇರಿದ ನಮ್ಮ ಬ್ಯಾಚನಲ್ಲಿಯೂ ಕೆಲವರು ಗಮನಾರ್ಹ ಸಂಶೋಧನೆಗಳನ್ನು ಪೂರೈಸಿದರು. ಹಾಗೆ ಬಂದ ಸಂಶೋಧನೆಗಳಲ್ಲಿ ಡಾ.ಟಿ.ಎಂ.ಉಷಾರಾಣಿ Usharani HadagaliUsharani Nirusha ಅವರ ಸಂಶೋಧನ ಪ್ರಬಂಧವೂ ಒಂದು. ಅದೀಗ ಪುಸ್ತಕ ರೂಪದಲ್ಲಿ Pallava Venkatesh ಅವರ #ಪಲ್ಲವಪ್ರಕಾಶನ ದಿಂದ ಪ್ರಕಟವಾಗಿದೆ. ನಾಳೆಯೇ ಪುಸ್ತಕದ ಬಿಡುಗಡೆ ಹೊಸಪೇಟೆಯಲ್ಲಿ ನಡೆಯಲಿದೆ. ಈ ಕಾರಣಕ್ಕೆ #ಉಷಾರಾಣಿಯವರಿಗೆ_ಅಭಿನಂದನೆಗಳು.
ಮುಖ್ಯವಾಗಿ ಸುಮಾರು ನೂರು ವರ್ಷಗಳ ವ್ಯಾಪ್ತಿಗೆ ಒಳಪಡುವ ಕನ್ನಡದ ಮಹಿಳಾ ಸಾಹಿತ್ಯವನ್ನು ಅಧ್ಯಯನದ ತೆಕ್ಕೆಗೆ ತೆಗೆದುಕೊಂಡು ಪ್ರಾತಿನಿಧಿಕ ಲೇಖಕಿಯರನ್ನು ಗುರುತಿಸಿಕೊಂಡು 'ಮಹಿಳಾಸಾಹಿತ್ಯ ಅಭಿವ್ಯಕ್ತಿ ಕ್ರಮದ ತಾತ್ವಿಕ ಸ್ವರೂಪದ' ಬಗ್ಗೆ ವ್ಯಾಪಕ ಅಧ್ಯಯನದ ಮೂಲಕ ಹೊಸ ಒಳನೋಟಗಳ ವಿಶ್ಲೇಷಣೆ ಮಾಡಿದ್ದಾರೆ. ಇಡೀ ಕೃತಿಯಲ್ಲಿ ಸಂಶೋಧಕರ ಅಪಾರ ಶ್ರಮ ಮತ್ತು ತುಂಬಾ ಸೂಕ್ಷ್ಮ ವಿಶ್ಲೇಷಣೆ ಗಮನಸೆಳೆಯುತ್ತದೆ.
ಮುಖ್ಯವಾಗಿ ಈತನಕ ಬಂದ ಮಹಿಳಾ ಸಾಹಿತ್ಯದ ಬಗೆಗಿನ ಬೀಸುಹೇಳಿಕೆಗಳನ್ನು ಒಡೆದು ಪಠ್ಯಕೇಂದ್ರಿತ ವಿಮರ್ಶೆಯ ಮೂಲಕ ಕೆಲವು ಹೊಸ ಸಂಗತಿಗಳನ್ನು ಗುರುತಿಸಿದ್ದಾರೆ. ಇಲ್ಲಿ ಮಹಿಳಾ ಲೇಖಕಿಯರ ಕೃತಿಗಳ ಒಳಗಿಂದಲೇ ಹೊಮ್ಮಿರುವ ಮಾದರಿಗಳನ್ನೂ ತಾತ್ವಿಕ ಸ್ವರೂಪವನ್ನೂ ಕಾಣಿಸಿದ್ದಾರೆ. ಮಹಿಳಾ ಸಾಹಿತ್ಯವನ್ನು ಕೇಂದ್ರವಾಗಿಸಿಕೊಂಡು ಅಧ್ಯಯನ ಸಂಶೋಧನೆ ಕೈಗೊಂಡ ಪ್ರತಿಯೊಬ್ಬರೂ ಒಮ್ಮೆ ಗಮನಿಸಬೇಕಾದ ಕೃತಿ ಇದಾಗಿದೆ. ಅಂತೆಯೇ ಮಹಿಳಾ ಲೇಖಕಿಯರು ಮತ್ತವರ ಸಾಹಿತ್ಯದ ಬಗ್ಗೆ ಕುತೂಹಲ ಇರುವವರೂ ಒಮ್ಮೆ ಗಮನಿಸಬಹುದಾಗಿದೆ.
No comments:
Post a Comment