ಹುಣಸೆಯ ಮರವ ನೋಡವ್ವ ಕಣ್ಣಿಗೆ ಕಟ್ಟಿ ನಿಲ್ಲುವ ಹುಣಸೆ ಮರವ ನೋಡವ್ವ ಶ್ರಾವಣ ಮಾಸದ ಕಡು ಹಸಿರು ಎಲೆ ಎಲೆಗಳಲ್ಲಿ ದಟ್ಟೈಸಿ ನಿಂತಿರುವ ಹುಣುಸೆಯ ಮರವ ನೋಡವ್ವ ನೋಡುವುದಕ್ಕೆರಡು ಕಣ್ಣು ಸಾಲದವ್ವ
ಜಾತರೆ ಯಾತರೆ ಬಿಟ್ಟಿಲ್ಲಿ ಬಾರವ್ವ ನಿಂತ ನಿಲುವಿಗೆ ಲೋಕವ ಕೈಮಾಡಿ ಕರೆದಿರುವ ಹುಣಸೆಯ ಮರವ ನೋಡವ್ವ ಅವ್ವ ನಾನು ಚಿಕ್ಕವನಿರುವಾಗ ನೀನು ಚಿಕ್ಕವಳಿರುವಾಗ ಮುದ್ರೆಯ ಹೊಲದ ತಿಪ್ಪೆಯ ಗುಂಡಿಯ ಹತ್ತಿರವಿದ್ದ ಹುಣಸೆಯ ಮರವ ನೋಡವ್ವ
ಕೊಂಬೆ ರೆಂಬೆ ಟೊಂಗೆ ಟಿಸಿಲುಗಳ ಹೊಕ್ಕು ಒಳ ಹೊಕ್ಕು ಮರದೊಳ ಹೊಕ್ಕು ದಟ್ಟೈಸಿರುವ ಹಸಿರು ಎಲೆಗಳ ನುಸಿದು ಮರದ ಒಳಹೊಕ್ಕು ನಿಗೂಢ ಕತ್ತಲ ಒಳಾಯಕ್ಕೆ ಹೋಗವ್ವ ಹುಣಸೆಯ ಮರಾಂತರಂಗಕ್ಕೆ ಹೋಗವ್ವ
ಬಳ್ಳಿ ಬಿಳಲುಗಳಂತದರ ಇಳಿ ಬೀಳುವ ಟಿಸಿಲುಗಳು ವಾಲಾಡುವ ಪರಿಯ ನೋಡವ್ವ ಅವ ಹಸುರು ಶಿಶುಗಳ ಜೀವವಾಡುವ ಪರಿಯ ನೋಡವ್ವ
ಅವ್ವ ಲೋಕ ಯಾತ್ರೆಯಿದು ಮುಗಿತಾಯ ಕ್ಕೆ ಬರುವ ವೇಳೆಯಾಯಿತು ಬಂದಿಲ್ಲಿ ನಿಲ್ಲವ್ವ
ಅವ್ವ ಲೋಕ ಯಾತ್ರೆಯಿದು ಮುಗಿತಾಯ ಕ್ಕೆ ಬರುವ ವೇಳೆಯಾಯಿತು ಬಂದಿಲ್ಲಿ ನಿಲ್ಲವ್ವ
ಹುಣುಸೆಯ ಬೀಜ ಹುಣಸೆಯ ಹಣ್ಣು ಹುಣಸೆಯ ಕಾಯಿ ಹುಣಸೆಯ ಬರಲು ಹುಣಸೆಯ ಹುಳಿ ಹುಣಸೆಯ ಮರದ ಜೊತೆ ಬದುಕಿ ಬಂದಿದ್ದೇವವ್ವ ಹುಣಸೆಯ ಮರ ಮುಪ್ಪು ಹುಣಸೇಯ ಹುಳಿ ಮುಪ್ಪೆ ಗಾದೆಯ ರಸದ ಹೆಸರುವಾಸಿ ಮರವ ನೋಡವ್ವ
ಊರು ಓಡಾಡುವ ಜಾಗದಲ್ಲಿರುವ ಮೂರು ಹಾದಿ ಕೂಡುವ ಜಗದ್ಜಾಗದಲ್ಲಿರುವ ಲೌಕಿಕಕು ಅಲೌಕಿಕಕು ಆಗಿಬರುವ ಹುಣಸೆಯ ಮರಕೆ ಬಾರವ್ವ ಅರಸಿ ಬಾರವ್ವ
No comments:
Post a Comment