stat Counter



Saturday, November 13, 2010

In conversation with Dr S.L..BHAIRAPPA[ kannada novelist]---Muraleedhara Upadhya

ಡಾ| ಎಸ್.ಎಲ್. ಭೈರಪ್ಪ ಅವರೊಂದಿಗೆ ಸಂವಾದ



ಪ್ರೊ| ಮುರಳೀಧರ ಉಪಾಧ್ಯ:

30 ವರ್ಷಗಳ ಕೆಳಗೆ ನಾನು ಎಂ.ಎ. ಮುಗಿಸಿ ಮಣಿಪಾಲದ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದಾಗ
ಡಾ| ಭೈರಪ್ಪನವರು ಮೈಸೂರಿನ ತಮ್ಮ ಬಿ.ಎಡ್. ವಿದ್ಯಾರ್ಥಿಗಳನ್ನು ಕರೆದುಕೊಂಡು ಪ್ರತಿವರ್ಷ ಉಡುಪಿಗೆ ಬರುತ್ತಾ ಇದ್ದರು. ನಮಗೆ ಮಾತನಾಡಲಿಕ್ಕೆ ಸಿಗುತ್ತಾ ಇದ್ದರು. ಅವರಿಗೆ ಕಬ್ಬಿನ ಹಾಲು ಇಷ್ಟ ಅಂತ ಕಬ್ಬಿನ ಹಾಲು ಕುಡಿಯೋಣವಾ? ಇಂಥವರ ಮನೆಯಲ್ಲಿ ಒಂದು ಹೊಸ ಕ್ಯಾಸೆಟ್ಟಿದೆ. ಅದನ್ನು ಕೇಳಲಿಕ್ಕೆ ಹೋಗೋಣವಾ? ಅಂತ ಅವರ ಜತೆಯಲ್ಲಿ ವಾಕಿಂಗ್ ಹೋಗಿದ್ದನ್ನೆಲ್ಲ ನೆನಪು ಮಾಡಿಕೊಳ್ಳುತ್ತಿದ್ದೇನೆ. ಇಂಥದ್ದೇ ಒಂದು ಸಂವಾದ ಕಾರ್ಯಕ್ರಮವನ್ನು ನಾನು ಇದ್ದ ಮಣಿಪಾಲ ಜೂನಿಯರ್ ಕಾಲೇಜಿಗೆ ಬಂದು ಅವರು ನಡೆಸಿಕೊಟ್ಟಿದ್ದರು. ಅದರ ನೆನಪು ಮಾಡಿಕೊಂಡು - ನನ್ನ ವಿಚಾರ ಮಂಡನೆ ಏನಿಲ್ಲ, ನಾನು ಇಂಥ ವಿಚಾರ ಮಂಡನೆಗೆ ಅವಕಾಶ ಇರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ ನನ್ನ ಕೆಲವು ಪ್ರಶ್ನೆಗಳನ್ನು ಓದಿ ಅವರಿಗೆ ಕೊಟ್ಟುಬಿಡುತ್ತೇನೆ. ಅವರಿಗೆ ಯಾವ ಪ್ರಶ್ನೆಯ ಬಗ್ಗೆ ಸ್ಪಂದಿಸಬೇಕು ಅಂತ ಅನ್ನಿಸುತ್ತದೆಯೋ ಅದರ ಬಗ್ಗೆ ಅವರು ಉತ್ತರ ಹೇಳಬಹುದು.

ಪ್ರಶ್ನೆ 1: ನಿಮ್ಮ ಕಾದಂಬರಿಯನ್ನು ಕುರಿತ ಓದುಗರ ಪ್ರತಿಕ್ರಿಯೆಗಳಲ್ಲಿ ನಿಮಗೆ ಬಹಳ ಕುತೂಹಲಕಾರಿ ಅಂತ ಅನ್ನಿಸಿದ ವಿಚಾರಗಳ ಬಗ್ಗೆ ತಿಳಿಸಿ. ಓದುಗರ ಅಪೇಕ್ಷೆಗಳಿಗೆ ಆಘಾತವುಂಟುಮಾಡಿದ ನಿಮ್ಮ ಕೃತಿ ಯಾವುದು?

ನಿಮ್ಮ ಕಾದಂಬರಿಗಳು ಹಲವಾರು ಭಾಷೆಗಳಿಗೆ ಭಾಷಾಂತರಗೊಂಡಿದ್ದಾವೆ. ಆ ಬೇರೆ ಭಾಷೆಗಳ ಓದುಗರ ಪ್ರತಿಕ್ರಿಯೆಗಳು ಕನ್ನಡಿಗರ ಪ್ರತಿಕ್ರಿಯೆಗಳಿಗಿಂತ ಹೇಗೆ ಭಿನ್ನವಾಗಿವೆ?

ಪ್ರಶ್ನೆ 2: ಬೆಳಿಗ್ಗೆ ಪುರುಷಾರ್ಥಗಳ ಬಗ್ಗೆ ಪ್ರಸ್ತಾಪ ಬಂತು. ಡಾ| ಗಣೇಶ್‍ರವರು ಪ್ರಸ್ತಾಪ ಮಾಡಿದರು. ಪುರುಷಾರ್ಥಗಳ ಈ ಪಟ್ಟಿಯ ಅನುಕ್ರಮಣಿಕೆ ಬದಲಾಗಬೇಕು ಎಂದು ನಿಮಗೆ ಅನ್ನಿಸುತ್ತಿದೆಯೇ? ನಿಮ್ಮ ಕಾದಂಬರಿಗಳ ಓದುಗನಾಗಿ ಇದು ನನ್ನ ಜಿಜ್ಞಾಸೆ. ಬೆಳಿಗೆ ಡಾ|ಗಣೇಶ್ ರವರು ಭಾರತೀಯ ಕಾವ್ಯ ಮೀಮಾಂಸೆಯ ಹಿನ್ನೆಲೆಯಲ್ಲಿ ನಿಮ್ಮ ಕಾದಂಬರಿಗಳ ವಿಮರ್ಶೆ
ಮಾಡಿದರು. ನೀವು ದಿಲ್ಲಿಯಲ್ಲಿ ಸಾಹಿತ್ಯ ಅಕಾಡೆಮಿಯ ಒಂದು ವಿಶೇಷ ಉಪನ್ಯಾಸದಲ್ಲಿ ಭಾರತೀಯ ಸಾಹಿತ್ಯ ಮೀಮಾಂಸೆಯನ್ನಿಟ್ಟುಕೊಂಡೇ ನಮ್ಮ ಸಾಹಿತ್ಯ ವಿಮರ್ಶೆಗಳನ್ನು ಯಾಕೆ ಮಾಡಬಾರದು ಅಂತ ಹೇಳಿದ್ದನ್ನು ನಾನು ಕೇಳಿದ್ದೆ. ಭಾರತೀಯ ಸಾಹಿತ್ಯ ಮೀಮಾಂಸೆಯ ನೆಲೆಯಿಂದ ನಮ್ಮ ಸಾಹಿತ್ಯವನ್ನು ವಿಮರ್ಶಿಸಿದರೆ ಹೊಸಗನ್ನಡದ ಲೇಖಕರ ಸ್ಥಾನಪಲ್ಲಟ ಆಗುತ್ತದೆ ಎಂದು ನೀವು ಅಭಿಪ್ರಾಯಪಡುತ್ತೀರಾ?

ಪ್ರಶ್ನೆ 3: ನೀವು ತತ್ವಶಾಸ್ತ್ರದ ವಿದ್ವಾಂಸರಾಗಿ ಕಾದಂಬರಿ ಕ್ಷೇತ್ರಕ್ಕೆ ಬಂದಿರಿ. ತತ್ವಶಾಸ್ತ್ರಜ್ಞರಲ್ಲಿ ನಿಮಗೆ ಯಾರು ಇಷ್ಟ? ಜೆ. ಕೃಷ್ಣಮೂರ್ತಿಯವರು ಭಾರತೀಯ ತತ್ವಶಾಸ್ತ್ರವನ್ನು ಸೃಜನಶೀಲವಾಗಿ ಬೆಳೆಸಿದ್ದಾರೆಂದು ನಿಮಗೆ ಅನ್ನಿಸುತ್ತದೆಯೆ? ಸ್ಥಾವರಕ್ಕಳಿವುಂಟು, ಆದರೆ ಸ್ಥಾವರ ನಿರ್ಮಾಣದ ಪ್ರವೃತ್ತಿಗೆ ಅಳಿವಿಲ್ಲ ಅಂತ 'ಸಾರ್ಥ'ದ ಗುರು ಹೇಳುತ್ತಾನೆ. ಮತ್ತೆ ಮತ್ತೆ ದೇವಸ್ಥಾನಗಳನ್ನು ನಾಶಮಾಡುತ್ತಾ ಹೋಗುತ್ತಾರೆ. ಮತ್ತೆ ಮತ್ತೆ ಕಟ್ಟುವ ಪ್ರಯತ್ನ ನಡೆಯುತ್ತಾ ಹೋಗುತ್ತದೆ. ಅವನ ಸಂದೇಶದ ಒಳ ಅರ್ಥ ಏನು? ಬರೇ ಒಂದು ಇತಿಹಾಸದ ಪುನರುಕ್ತಿ ಆಗುತ್ತದೆ ಇರುತ್ತದೆ ಅಂತಲೇ? ಅಥವಾ ಒಂದು ಸಂಸ್ಕೃತಿಯನ್ನು ಉಳಿಸಬೇಕಾದರೆ ನಿರಂತರ ಹೋರಾಟ ಅಗತ್ಯ ಅಂತಲೇ? ಅದರ ಬಗ್ಗೆ ನಿಮ್ಮ ವಿವರಣೆ ನೀಡುವಿರಾ?

ಕೊನೆಯದಾಗಿ, ಬೆಂಗಳೂರಿನಲ್ಲಿ ನೀವು ಮಾಡಿದ ಇತ್ತೀಚೆಗಿನ ಭಾಷಣ, ಅದನ್ನು misquote ಮಾಡಿದ್ದಾರೋ ಏನೋ ಗೊತ್ತಿಲ್ಲ. ಇವತ್ತು ಕೂಡಾ ಒಂದು ಪತ್ರಿಕೆಯಲ್ಲಿ ಅದರ ಬಗ್ಗೆ ಪ್ರತಿಕ್ರಿಯೆ ಕೇಳಿದೆ. ನನ್ನ ಪ್ರಶ್ನೆ ಇಷ್ಟೇ. ಬುದ್ಧ ಅಥವಾ ಬೌದ್ಧ ಧರ್ಮವನ್ನು ಕುರಿತು ನಿಮ್ಮ ತಕರಾರುಗಳು ಏನು?

ಭೈರಪ್ಪ: 'ನಿಮ್ಮ ಕಾದಂಬರಿಗಳ ಕುರಿತು ಓದುಗರ ಪ್ರತಿಕ್ರಿಯೆ ತಿಳಿಸಿ. ಓದುಗರಿಗೆ ಆಘಾತವುಂಟುಮಾಡಿದ ನಿಮ್ಮ ಕೃತಿ ಯಾವುದು? - ಇದು ವಾಸ್ತವವಾಗಿ ನನಗೆ ಗೊತ್ತಿಲ್ಲ. ಓದುಗರ ಪ್ರತಿಕ್ರಿಯೆಗಳೆಲ್ಲ ನಿಮಗೇ ಬಿಟ್ಟದ್ದು. ಬೇರೆ ಬೇರೆ ಥರದ ಪ್ರತಿಕ್ರಿಯೆ ಇರತ್ತೆ.

ಉಪಾಧ್ಯ: ಆ ಪ್ರಶ್ನೆಯನ್ನು ನಾನು ಯಾವ ಹಿನ್ನೆಲೆಯಲ್ಲಿ ಕೇಳಿದೆ ಅಂದರೆ - ಇಲ್ಲಿ ಯಕ್ಷಗಾನದ ಹಿನ್ನೆಲೆ ಇರುವವರಿಗೆ ಪುತ್ತೂರಿನ ಒಬ್ಬರು ಯಕ್ಷಗಾನ ಪ್ರೇಮಿಗೆ ನಾನು 'ಪರ್ವ' ತೆಗೆದುಕೊಂಡುಹೋಗಿ ಕೊಟ್ಟಿದ್ದೆ. ಅವರು ಒಂದು ವಾರದಲ್ಲಯೇ ಅದನ್ನು return ಮಾಡಿದರು. 'ನನಗೆ ಪರ್ವ ಓದಲಿಕ್ಕೆ ಸಾಧ್ಯವೇ ಆಗಲಿಲ್ಲ' ಅಂತ. ಅಂಥ ಪ್ರತಿಕ್ರಿಯೆಗಳು ಏನಾದರೂ........

ಭೈರಪ್ಪ: ಆದರೆ ಕೆಲವರು - ಯಕ್ಷಗಾನದ ಅರ್ಥ ಹೇಳುವವರು - 'ಪರ್ವ' ಓದಿ ಆದನಂತರ ಅದರಿಂದ ಎಷ್ಟೋ ಅಂಶಗಳನ್ನು ಸೇರಿಸ್ಕೊಂಡಿದ್ದಾರೆ ಅಂತಾನೂ ನಾನು ಕೇಳಿದೀನಿ. ನಿಮಗೆ ಇನ್ನೊಂದು ಉದಾಹರಣೆ ಕೊಡುತ್ತೇನೆ - ನಮ್ಮ ಆರ್. ಎಲ್. ಅನಂತರಾಮಯ್ಯ ಅಂತ ಇದ್ದರು. ಅವರು ಗದುಗಿನ ಭಾರತಕ್ಕೆ ಚೆನ್ನಾಗಿ ಅರ್ಥ ಹೇಳುತ್ತಿದ್ದರು. 'ಪರ್ವ' ಪ್ರಕಟವಾದ ಮೇಲೆ ಅವರು ಅದನ್ನು ಓದಿದರು. ಆ ಮೇಲೆ ಅವರು ನನ್ನ ಹತ್ತಿರ ಹೇಳಿದರು, ನಿಮ್ಮ 'ಪರ್ವ' ಓದಿದ ನಂತರ ನನಗೆ ಗದುಗಿನ ಭಾರತಕ್ಕೆ ಅರ್ಥ ಹೇಳೋಕೆ ಬಹಳ ಕಷ್ಟ ಆಗುತ್ತೆ. ಪ್ರತಿಯೊಂದು ಹೆಜ್ಜೆಯೂ ನಿಮ್ಮ 'ಪರ್ವ'ದ ಕಡೆಗೆ ಎಳೀತಾ ಇದೆ. ನಾನು ಹೇಳಬೇಕಾದ ಅರ್ಥ ಆಭಾಸವಾಗಿ ನಾನು ಅದನ್ನು ಬಿಟ್ಟುಬಿಟ್ಟೆ ಅಂದರು.

ಇನ್ನು ಪುರುಷಾರ್ಥಗಳ ಕ್ರಮದ ಬಗ್ಗೆ. ಧರ್ಮ, ಅರ್ಥ, ಕಾಮ, ಮೋಕ್ಷ ಅಂತ ಹೇಳುತ್ತಾರೆ. ಆದರೆ ಕಾಮ, ಅರ್ಥ, ಧರ್ಮ ಇದು ಸಹಜವಾದ ಮನಶ್ಶಾಸ್ತ್ರಕ್ಕನುಗುಣವಾದ ಕ್ರಮ. ಕಾಮ ಅಂದರೆ ಮನುಷ್ಯನಲ್ಲಿ ಬಯಕೆ ಅಂತ ಮೂಲಭೂತವಾಗಿರುವಂಥದ್ದು. ಕಾಮವನ್ನು ತಣಿಸಿಕೊಳ್ಳುವಂತಹ ಸಾಧನ ಅರ್ಥ. ಆಮೇಲೆ ಉಳಿದದ್ದು ಧರ್ಮ. ತಣಿಸಿಕೊಳ್ಳಬೇಕಾದದ್ದಕ್ಕೆ ಒಂದು ಮಾನದಂಡ ಇರತ್ತೆ. ಒಂದು norm ಇರತ್ತೆ. ಈ ಮೂರೇ ಬಹಳ ಮುಖ್ಯವಾದದ್ದು. ಮೋಕ್ಷ ಅನ್ನುವುದು ಎಲ್ಲರಿಗೂ ಅನ್ವಯಿಸುವುದಕ್ಕೆ, ಸಾಧಿಸುವುದಕ್ಕೆ ಸಾಧ್ಯವಿಲ್ಲ ಅನ್ನುವುದು ನಮ್ಮ ಎಷ್ಟೋ ತತ್ತ್ವಜ್ಞಾನಿಗಳು ಹೇಳಿದ್ದಾರೆ.

ಭಾರತೀಯ ಕಾವ್ಯ ಮೀಮಾಂಸೆ ಮತ್ತು ಹೊಸಗನ್ನಡ ಲೇಖಕರ ಸ್ಥಾನಪಲ್ಲಟ - ನಾನು ಇದರ ಬಗ್ಗೆ ಈ ವರೆಗೆ ಯೋಚನೆ ಮಾಡಿಲ್ಲ. ಆದರೆ ಇಷ್ಟು ಮಾತ್ರ ಹೇಳಬಲ್ಲೆ. ನನ್ನ ಮೇಲೆ ಭಾರತೀಯ ಕಾವ್ಯಮೀಮಾಂಸೆ ಸಾಕಷ್ಟು ಪ್ರಭಾವ ಬೀರಿದೆ. ಪಾಶ್ಚಾತ್ಯ ಕಾವ್ಯ ಮೀಮಾಂಸೆಯೂ ಬೀರಿದೆ. ಯಾವ ಥರದಲ್ಲಿ ಪಾಶ್ಚಾತ್ಯ ಕಾವ್ಯ ಮೀಮಾಂಸೆ ಪ್ರಭಾವ ಬೀರಿದೆ ಅಂದರೆ ನಾನು ಬರೆಯುವ ಕಾದಂಬರಿಯಲ್ಲಿ ಅದರ ತಂತ್ರ, ಅದರ ಬಂಧ - ಇವುಗಳಲ್ಲಿ ಹಲವು ಅಂಶಗಳನ್ನು ಅಲ್ಲಿಂದಾನೇ ತಗೊಂಡದ್ದು. ನಾನು ಸಾಕಷ್ಟು ಪಾಶ್ಚಾತ್ಯ ಕಾದಂಬರಿಗಳನ್ನು ಓದಿದ್ದೀನಿ. ಅವುಗಳಿಂದ ಸಾಕಷ್ಟು ಪ್ರಭಾವಿತನಾಗಿದ್ದೀನಿ. ಎಷ್ಟೋ ಸಾರಿ ಈ ತಂತ್ರ ಚೆನ್ನಾಗಿದೆಯಲ್ಲಾ ಅಂತ ಅನ್ನಿಸಿದ್ದಿದೆ. ಚೆನ್ನಾಗಿದೆ ಅನ್ನುವ ಕಾರಣಕ್ಕೋಸ್ಕರ ಅದನ್ನು ನಾನು ಉಪಯೋಗಿಸುವುದಿಲ್ಲ. ಆದರೆ ಯಾವ ಸಂದರ್ಭದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹೇಳಬೇಕಾದರೆ ಇದನ್ನು ನಾನು ಉಪಯೋಗಿಸಬಹುದು, ಆದರೆ ನಾನು ಹೇಗೆ ಆರಂಭ ಮಾಡಿದೀನಿ, ಅದು ಹ್ಯಾಗೆ ಬೆಳೀತಾ ಇದೆ, ಅದರ ಮಧ್ಯೆ ಈ ತಂತ್ರ ಉಪಯೋಗಿಸಿಕೊಂಡರೆ ಅದು ಹೇಗೆ ಹೊಂದಿಕೆಯಾಗುತ್ತೆ ಅನ್ನುವ ಔಚಿತ್ಯಪ್ರಜ್ಞೆ ಇಲ್ಲದೇನೇ ಯಾವುದೋ ತಂತ್ರವನ್ನು ತಂದುಕೊಂಡು ನಾವು ಏನೂ ಮಾಡಲಿಕ್ಕ್ಕಾಗೋದೇ ಇಲ್ಲ. ಇದನ್ನ ಅರಿತೇ ನಾನು ಅದನ್ನ ಬಳಸ್ಕೋತಾ ಇರ್ತೇನೆ. ಎಷ್ಟೋ ಸಾರಿ ನಾಟಕದ ತಂತ್ರ, ನಾಟಕಗಳನ್ನು ನಾನು ಸಾಕಷ್ಟು ಓದುತ್ತಾ ಇರ್ತೀನಿ. ಅದು ನನಗೇನೇ ಗೊತ್ತಿಲ್ಲದ ಹಾಗೆ ಎಲ್ಲೆಲ್ಲೋ ಉಪಯೋಗಿಸ್ತಾ ಇರ್ತೀನಿ. ನಾವು ಒಳ್ಳೆ ಸಿನಿಮಾ ನೋಡಿದರೆ ಅದರ ತಂತ್ರ ಒಬ್ಬ ಸೃಷ್ಟಿಶೀಲ ಲೇಖಕನಿಗೆ ಅವನಿಗೇ ಗೊತ್ತಿಲ್ಲದ ಹಾಗೆ ಎಲ್ಲೋ ಬಳಕೆ ಆಗುತ್ತೆ. ಆದರೆ ಸಾಹಿತ್ಯ ನಾನು ಬರೆಯುವಾಗ, ಆ ಬರವಣಿಗೆಯ ಹದ ಯಾವುದು ಅನ್ನುವುದನ್ನು ನಾನು ಯೋಚನೆ ಮಾಡಿದರೆ, ನನ್ನದೇ ಒಂದು ಸೂತ್ರ, ಅಂದರೆ ಅನುಭವದಿಂದ ಬರುವಂತಹ ಒಂದು ಸೂತ್ರ. ಯಾವುದೇ ಒಂದು ಭಾಗವನ್ನು ನಾನು ಇವತ್ತು ಬರೆದೆ ಅಂತ ಇಟ್ಟುಕೊಳ್ಳಿ. ನನಗೆ ಗೊತ್ತಿಲ್ಲದ ಹಾಗೆ ಬರೆಸಿಕೊಂಡು ಹೋಗಿಬಿಡತ್ತೆ. ಶುರುಮಾಡಿದರೆ ಒಂದು-ಒಂದೂವರೆ, ಎರಡು ಗಂಟೆ ಕುಳಿತು ಬರೆಯಬಹುದು. ಒಂದೊಂದು ಸಾರಿ ಮೂರು ಗಂಟೇನೂ ಬರೀತೀನಿ. ಏನು ಬರೆದೆ ಅಂತ ಸೂಕ್ಷ್ಮ ವಿವರ ನನಗೆ ಜ್ಞಾಪಕ ಇರುವುದಿಲ್ಲ. ಅಷ್ಟೂನೂ ಕುಳಿತು ಬರೆದುಬಿಟ್ಟಿರುತ್ತೀನಿ. ಬರೆದ ಮೇಲೆ ನನಗೇ ಗೊತ್ತಿಲ್ಲದ ಹಾಗೆ ಯಾವುದೋ ಒಂದು ರಾಗ ಗುನುಗುಟ್ಟುಕ್ಕೆ ಶುರುಮಾಡ್ತೀನಿ. ಆವಾಗ ನನಗೆ ಅನ್ಸುತ್ತೆ ಆ ರಾಗ ಗುನುಗ್ತಾ ಇರಬೇಕಾದರೆ ಆ ರಾಗದ ಯಾವುದೋ ಒಂದು ಭಾವ ಇರುತ್ತೆ. ಅದೇ ನನ್ನನ್ನ ಗುನುಗುಟ್ಟಿಸುತ್ತಾ ಇರುತ್ತೆ. ಆ ರಾಗ ಬಿಟ್ಟು ಇನ್ನೊಂದು ರಾಗ ನಾನು ಯಾಕೆ ಗುನುಗುನಿರುಲ್ಲ ಅಂದರೆ ಆ ರಸ ನನ್ನನ್ನ ಹಿಡ್ಕೊಂಡಿರುತ್ತೆ. ಇದು ಯಾವುದರ ಸೂಚನೆ ಅಂದರೆ ಆ ರಸ ನನ್ನನ್ನ ಪ್ರಧಾನವಾಗಿ ನಡೆಸಿರುತ್ತೆ. ಆ ಭಾಗ ನಿಜವಾಗಲೂ ಉತ್ಕೃಷ್ಟವಾಗಿ ಬಂದಿರುತ್ತೆ. ಆ ಕಾದಂಬರಿ - ಎಲ್ಲಾ ಒಟ್ಟು ಪೂರ್ತಿಯಾಗಿ ಮುಗಿದಾಗ ಆ ಭಾಗ ಬಹಳ ಚೆನ್ನಾಗಿ ಬಂದಿರುತ್ತೆ. ಅಂದರೆ ಆ ಭಾವ, ಆ ರಸ, ನನ್ನನ್ನು ಮುಂದಕ್ಕೆ ಕರೆದುಕೊಂಡು ಹೋಗಿರತ್ತೆ.

ಸಾಹಿತ್ಯದ ವಿಮರ್ಶೆಗೆ, ನನ್ನ ಮಟ್ಟಿಗೆ ಇರುವ ಒಂದು ಅಂತಿಮ ಮಾನದಂಡ ಅಂದರೆ ರಸ. ಧ್ವನಿ ಇದ್ದೇ ಇರುತ್ತೆ. ಧ್ವನಿ ಇಲ್ಲದಿದ್ದರೆ ರಸ ಬರುವುದಿಲ್ಲ. ಧ್ವನಿಯಲ್ಲಿ ವಕ್ರೋಕ್ತಿ ಇತ್ಯಾದಿ ಇವೆಲ್ಲಾನೂ ಬಂದಿರುತ್ತೆ. ಇವೆಲ್ಲ ಕೇವಲ ಬಾಹ್ಯಗಳು. ಅಂದರೆ ರಸಕ್ಕೆ ಒಯ್ಯವಂತಹ ಕೆಲವು ಹಾದಿಗಳು ಅಥವಾ ರೀತಿಗಳು ಅನ್ನಬಹುದು. ರಸ ಇಲ್ಲದಿದ್ದರೆ ಅದು ಕಲೆ ಆಗೋದೇ ಇಲ್ಲ, ನನ್ನ ಮಟ್ಟಿಗೆ. ರಸವನ್ನು ಸೃಷ್ಟಿ ಮಾಡಬೇಕು. ರಸ ಅಂದರೇನು, ಅದು ಹ್ಯಾಗಿರುತ್ತೆ ಅಂದರೆ ನಿಜವಾಗ್ಲೂನೂ ಒಂದು ಥರದ ಔಪಚಾರಿಕೆ ವ್ಯಾಖ್ಯೆ ಅಷ್ಟೇ. ಅದು ಔಪಚಾರಿಕವಾಗಿಯೇ ಇರಬೇಕು, ಅದನ್ನು ಬಿಟ್ಟು ಬೇರೆ ಯಾವುದೇ ಸೂತ್ರವನ್ನು ನೀವು ಸಾಹಿತ್ಯಕ್ಕೆ ಇಟ್ಟುಕೊಂಡರೆ ಅದು ಸಂಪೂರ್ಣವಾಗಿ ಸಾಹಿತ್ಯವಾಗಲು ಸಾಧ್ಯವಿಲ್ಲ, ನಾನಿವತ್ತು ಬೆಳಿಗ್ಗೆ ಹೇಳಿದ್ದು ಅಷ್ಟೇ. ನೀವು ಸಾಹಿತ್ಯದ ಮೂಲಕ ಸಮಾಜ ಉದ್ಧಾರ ಮಾಡ್ತೀವಿ ಅನ್ನಬಹುದು, ಧರ್ಮಪ್ರಸಾರ ಮಾಡ್ತೀವಿ ಅನ್ನಬಹುದು, ನೈತಿಕ ಉನ್ನತಿ ಸಾಧಿಸುತ್ತೀನಿ ಅನ್ನಬಹುದು, ಏನಾದರೂ ಹೇಳಿಕೊಂಡು ಹೋಗಬಹುದು. ಆದರೆ ಇವೆಲ್ಲ ಪ್ರಜ್ಞಾಪೂರ್ವಕ ಆಗಿಹೋಗಿ ಬಿಡುತ್ತೆ. ರಸ ಅನ್ನುವುದು ಸುಮ್ಮಸುಮ್ಮನೆ ಬರುವುದಿಲ್ಲ. ನಿಜವಾದ ಒಂದು ಅನನ್ಯ ಕೋನದಿಂದ ಮನುಷ್ಯ ಜೀವನದ ಸನ್ನಿವೇಶದ ಶೋಧನೆ ಮಾಡಿದಾಗ ಆ ಪರಿಕ್ರಮದಲ್ಲಿ ಉತ್ಪತ್ತಿಯಾಗುವ ಭಾವ ಇದೆಯಲ್ಲ ಅದು ರಸ ಅಂತ ನನಗನ್ಸುತ್ತೆ ಅಷ್ಟೆ. ಈ ದೃಷ್ಟಿಯಿಂದ ನನ್ನ ಕೊನೆಯ ಸೂತ್ರಕೋನ ರಸ ಸಿದ್ಧಾಂತವೇನೇ. ಆದರೆ ರಸ ಸಿದ್ಧಾಂತ ಅಂದ ತಕ್ಷಣ ಯಾವುದೋ ಒಂದು ಸಿದ್ಧಾಂತದ ಬಗ್ಗೆ ಮಾತನಾಡಿದರೆ - ಆ ಸಿದ್ಧಾಂತದ ದೀರ್ಘ ಇತಿಹಾಸದಲ್ಲಿ ಅದಕ್ಕೆ ನೂರು ಜನ ಶತ್ರುಗಳಿರುತ್ತಾರೆ. ನೀವು ಈ ಶಬ್ದ ಉಪಯೋಗಿಸಿದ ತಕ್ಷಣ ನೂರು ಜನ ಎದ್ದು ನಿಂತುಕೊಂಡು ಬಿಡುತ್ತಾರೆ - 'ಹ್ಞಾಂ, ನೀವು ಅದನ್ನು ಹಾಗೆ ಹೇಳಿದ್ದು', 'ಇಲ್ಲ, ನಾನಲ್ಲ ಹೇಳಿದ್ದು, ಹಿಂದಿನ ಶತಮಾನದಲ್ಲಿಯೇ ಅವನು ಹೇಳಿ ಮುಗಿಸಿದ್ದಾನೆ'. 'ಹಾಗಾದರೆ ನೀವು ಅದನ್ನು ಯಾಕೆ ಹೇಳಿದಿರಿ?' ಅಂತ ವಾಗ್ವಾದಗಳು ನಡೀತಾನೇ ಇರ್ತಾವೆ. ಇದ್ಯಾವ ವಾಗ್ವಾದಕ್ಕೂ ಸಿಕ್ಕಲು ನಾನು ಸಿದ್ಧನಿಲ್ಲ. ನಾನೀ ಶಬ್ದ ಯಾಕೆ ಬಳಸ್ತೀನಿ ಅಂದ್ರೆ ನಮ್ಮ ಕಾವ್ಯ ಮೀಮಾಂಸೆಯ ಇತಿಹಾಸದಿಂದ ಸೃಷ್ಟಿಯಾಗಿ ಬೆಳೆದು ಅದು ನನಗೆ ಅನುಕೂಲಕರವಾಗಿದೆ ಅಷ್ಟೆ. ನಿಮ್ಮ ಈ ಒಣ ವಾಗ್ವಾದವಾಗಲಿ, ನಿಮ್ಮ ಜಗಳವಾಗಲಿ ನನಗೆ ಬೇಡ. ಈ ವಿದ್ವಾಂಸರ, ವಿಮರ್ಶಕರ ಜಗಳಗಳು ನನಗೆ ಬೇಕಿಲ್ಲ. ಅಂತಹ ಜಗಳಕ್ಕೆ ಸಿಕ್ಕಿಹಾಕಿಕೊಂಡವನು ಸೃಜನಶೀಲ ಲೇಖಕ ಆಗಲಾರ. ಆದ್ದರಿಂದ ನಾನು ಸೃಜನಶೀಲ ಲೇಖಕಮಿತ್ರರಿಗೆ ಹೇಳುವುದು ಏನು ಅಂದರೆ - ಈ ಜಗಳಗಳಿಗೆ ನೀವು ಸಿಕ್ಕಿಹಾಕಿಕೊಳ್ಳಬೇಡಿ. ಅವನ್ನು ಸುಮ್ಮನೆ ಉಪೇಕ್ಷಿಸಿ ಅಂತ ಅಷ್ಟೆ.

ತತ್ತ್ವಶಾಸ್ತ್ರದಲ್ಲಿ ನಿಮಗೆ ಯಾರು ಇಷ್ಟ - ಜೆ.ಕೆ. ಇತ್ಯಾದಿ. ನಾನು ಜೆ.ಕೆ.ನ ಹೆಚ್ಚಿಗೆ ಓದಿಲ್ಲ. ತತ್ತ್ವಶಾಸ್ತ್ರದಲ್ಲಿ ಯಾರು ಇಷ್ಟ ಅಂದರೆ ನಾನು ಒಬ್ಬರನ್ನ ಮಾತ್ರ ಸೂಚಿಸಲಾರೆ. ನನಗೆ ತುಂಬ ಇಷ್ಟವಾಗಿರುವುದು ಉಪನಿಷತ್ತು. ಉಪನಿಷತ್ತುಗಳಲ್ಲಿ ಮೂಲ ಒಳನೋಟಗಳಿವೆ, ಮೂಲ ಮಿಥ್‍ಗಳಿವೆ. ತುಂಬ ಇವೆ. ಕಠೋಪನಿಷತ್ತಿನಲ್ಲಿ ಮನುಷ್ಯನ ವ್ಯಕ್ತಿತ್ವದ ಚಿತ್ರ ಕಟ್ಟಿದ್ದಾರೆ. 'ಆತ್ಮನಾಂ ರಥಿನಂ, ವಿದ್ಧಿ ಶರೀರಂ ರಥಮೇವತು ಬುದ್ಧಿಂತು ಸಾರಥಿಂ ವಿದ್ಧಿ ಮನ: ಪ್ರಗ್ರಹ ಮೇವಚ' ಅಂತ ಹೇಳ್ತಾರೆ. ಇಡೀ ಮಾನವ ವ್ಯಕ್ತಿತ್ವವನ್ನು ಐದು ಕುದುರೆಗಳು ಎಳೀತಾವೆ. ಅಂದರೆ ಐದು ಇಂದ್ರಿಯಗಳು ಎಳ್ಕೊಂಡು ಹೋಗ್ತಾ ಇವೆ. ಈ ಶರೀರ ಅನ್ನೋದೇ ಒಂದು ರಥ. ಆ ಐದು ಕುದುರೆಗಳಿಗೂ ಒಂದು ಕಡಿವಾಣ ಅನ್ನೋದು ಇರುತ್ತೆ. ಅದು ಮನಸ್ಸು. ಮನಸ್ಸನ್ನು ಹಿಡಿದೆಳೆದು ಸರಿಯಾದ ದಾರಿಯಲ್ಲಿ ತಗೊಂಡು ಹೋಗುವುದು ಬುದ್ಧಿ. ನಿಮ್ಮ ಬುದ್ಧಿ ಶಕ್ತವಾಗಿ ಇಲ್ಲದೇ ಹೋದರೆ ಎತ್ತೆತ್ತಲಾಗೋ ಎಳೆಯಲ್ಪಟ್ಟು ರಥವು ಜಜ್ಜಿಹೋಗುತ್ತೆ. ಇದೊಂದು ಸುಂದರವಾದ ಕಲ್ಪನೆ. ಹೀಗೆ ಹಲವು ಮೂಲ ಕಲ್ಪನೆಗಳು, ಮೂಲ ಮಿಥ್‍ಗಳು - ಇಂತಹ ಬೇಕಾದಷ್ಟು ಮಿಥ್‍ಗಳುಉಪನಿಷತ್ತುಗಳಲ್ಲಿ ಸಿಗ್ತಾವೆ. ವೇದಗಳಲ್ಲೂ ಸಹ. ವೇದ-ಉಪನಿಷತ್ತು ಅಂತ ವಿಘಟನೆ ಮಾಡಿದ್ದು ಪಶ್ಚಿಮದ ವಿದ್ವಾಂಸರು. ವೇದದ ಕರ್ಮಕಾಂಡಕ್ಕೆ ಬಂಡಾಯವಾಗಿ ಉಪನಿಷತ್ತುಗಳು ಹುಟ್ಟಿದವು ಅಂತೆಲ್ಲಾ ವ್ಯಾಖ್ಯಾನಗಳಲ್ಲಿ ನನಗಂತೂ ನಂಬಿಕೆಯಿಲ್ಲ. ಡಾ| ಗಣೇಶ್ ಏನು ಹೋಳ್ತಾರೋ ನೋಡಬೇಕು. ಹಾಗೆ ಉಪನಿಷತ್ತುಗಳು ನನಗೆ ತುಂಬಾ ಮೆಚ್ಚಿಗೆಯಾದವು. ಯಾಕೆಂದರೆ ಅವೆಲ್ಲ ಮೂಲ ಬೀಜರೂಪದ ಕಲ್ಪನೆಗಳು. ಆನಂತರದಲ್ಲಿ ಬಂದಂತಹ ಸಾಂಖ್ಯ ಅಂತೂ ಬಹಳ ಬೀಜರೂಪದ ಕಲ್ಪನೆ. ಆನಂತರ ಬಂದ ನಮ್ಮ ದರ್ಶನಗಳಿಗೆ ಸಾಂಖ್ಯವೇ ಆಧಾರ. ನೀವು ಈಶ್ವರಕೃಷ್ಣನ ಸಾಂಖ್ಯಕಾರಿಕೆಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡರೆ ಭಗವದ್ಗೀತೆಯನ್ನು ಓದಕ್ಕೆ ಸುಲಭವಾಗುತ್ತೆ. ಯೋಗ ಅಂದರೆ ಬರೇ ಪತಂಜಲಿ ಯೋಗ ಮಾತ್ರ ಅಲ್ಲ. ಪತಂಜಲಿ ಒಂದು ಕಾಲಕ್ಕೆ ಪ್ರಚಲಿತವಾಗಿದ್ದದ್ದನ್ನೆಲ್ಲ ಕ್ರೋಢೀಕರಿಸಿದವನು. ಎಲ್ಲ ತತ್ತ್ವಜ್ಞಾನಿಗಳೂ, ಬೌದ್ಧರು, ಜೈನರು, ವೈದಿಕರು ಹೀಗೆ ಎಲ್ಲಾ ಸಾಧಕರೂ ಯೋಗವನ್ನು ಬೆಳೆಸಿದರು. ಈ ಎಲ್ಲಾ ಸೇರಿ ಬೇರೆ ಬೇರೆ ತರಹದ ಯೋಗ - ಬೇರೆ ಬೇರೆ ಥರದ ಹೆಸರುಗಳೂ ಬಂದವು. ಒಟ್ಟಿನಲ್ಲಿ ಅದರಲ್ಲಾದ ಸಿದ್ಧಿ ನಿಜವಾಗಿಯೂ ತುಂಬ ದೊಡ್ಡದು. ಹೀಗೆ ಭಗವದ್ಗೀತೆ ಬಂತು. ಮಾಯೆ ಒಂದು ಸುಂದರೆ ಮತ್ತು ದೊಡ್ಡ ಕಲ್ಪನೆ. ಅದು ಬರೇ ಶಂಕರಾಚಾರ್ಯರು ಮಾತ್ರ ಸೃಷ್ಟಿಸಿದ್ದಲ್ಲ, ಬೌದ್ಧರಿಂದಲೂ ಬೆಳೆಯಿತು.

ಈಗ ಉದಾಹರಣೆಗೆ ಐನ್‌ಸ್ಟೈನ್ಏನು ಹೇಳುತ್ತಾನೆ - Time ಅನ್ನೋದು ಯಾವಾಗ ಆಯ್ತು - Existence or the Universe was created in Time ಅನ್ನುವುದು ತಪ್ಪು ಕಲ್ಪನೆ. Time and the Universe are coeval. ನೀವು Big Bang Theory ಓದಿದ್ದರೆ Time ಯಾವಾಗ ಆಯ್ತು ಅಂದರೆ ಈ ಮಹಾಸ್ಫೋಟ ಆಗುತ್ತಲ್ಲಾ, ಅಲ್ಲಿಂದ ಕಾಲದ ಗಣನೆ ಶುರು ಆಗುತ್ತೆ. ಈ ಮಹಾಸ್ಫೋಟದ ಮೊದಲು ಕಾಲ ಹೇಗಿತ್ತು ಅಂತ ಹೇಳುಕ್ಕಾಗುಲ್ಲ ಅಂತ ವಿಜ್ಞಾನಿಗಳೇ ಹೇಳ್ತಾರೆ. ಇದೇ ಥರದ ಕಲ್ಪನೆಯನ್ನು ಶಂಕರಾಚಾರ್ಯರು ಹೇಳಿದ್ದರು. ಸೃಷ್ಟಿ ಅನ್ನೋದು ಆದಾಗ ಕಾಲ ದೇಶಗಳು ಹುಟ್ಟಿಕೊಂಡವು. ಅವು coeval ಅಂತ ಹೇಳ್ತಾರೆ. ಕಾಲದೇಶಗಳನ್ನು ನಿಯಂತ್ರಿಸುವ, ಸೃಷ್ಟಿಸುವ ತತ್ತ್ವವನ್ನೇ ಮಾಯೆ ಅಂತ ಹೇಳಿದ್ರು. ಮಾಯೆ ಅಂದರೆ - ಬೆಳಿಗ್ಗೆ ಡಾ| ಗಣೇಶ್ ಹೇಳಿದ ಹಾಗೆ ಯಾರನ್ನೂ ಮೋಸ ಮಾಡುವಂತಹ magical principle ಅಲ್ಲ. ಅದೊಂದು ದೊಡ್ಡ ವೈಜ್ಞಾನಿಕ ತತ್ತ್ವ. ನಮ್ಮ ಪರಂಪರೆಯಲ್ಲಿ ಯಾವ ಯಾವದೋ ಹಂತದಲ್ಲಿ, ಯಾವ ಯಾವದೋ ಹೊಸ ಕಲ್ಪನೆಗಳು ಬಂದು ಹಳೆಯವನ್ನೇ ಮರುವ್ಯಾಖ್ಯಾನ ಮಾಡಿ ಬೆಳೆದಿವೆ, ಬೆಳೆಸಿವೆ. ನಮ್ಮ ಇವತ್ತಿನ ಆಚಾರಸಂಹಿತೆಯನ್ನು ವಿವರಿಸಬೇಕಾದರೆ ಅದು ಒಂದು ಬರೀ ಆಚಾರ ಸಂಹಿತೆ ಅಂತ ಇಟ್ಕೊಳ್ಳೋಕಾಗೋದಿಲ್ಲ. ಹಾಗೆ ಮಾಡಿದರೆ ನಾವು ಅಧ್ಯಾತ್ಮ, ದರ್ಶನಶಾಸ್ತ್ರಗಳನ್ನು ಬಿಟ್ಟು ಸಮಾಜಶಾಸ್ತ್ರ ಅಥವಾ ಮನಶಾಸ್ತ್ರದ ಮಟ್ಟಕ್ಕೆ ಇಳಿದುಬಿಡ್ತೀವಿ.

ಹಾಗಿದ್ರೆ ನಾವು ಸಾಹಿತ್ಯ ಯಾಕೆ ಓದಬೇಕು? ಸಾಹಿತ್ಯವು ಸಮಾಜಶಾಸ್ತ್ರ ಅಥವಾ ಮನಶ್ಶಾಸ್ತ್ರಕ್ಕಿಂತ ಮೇಲ್ಮಟ್ಟಕ್ಕೆ ಅಂದರೆ ತತ್ತ್ವದರ್ಶನದ ಎತ್ತರಕ್ಕೆ ಹೋಗಬೇಕಾಗುತ್ತೆ. ಅದಕ್ಕೆ ನಮ್ಡ ದರ್ಶನದ ಆಧಾರ ಇರಲೇ ಬೇಕು. ಆ ದರ್ಶನದ ಆಧಾರವನ್ನು ಮುಟ್ಟಬೇಕಾದರೆ ನಮ್ಮ ನೀತಿಯ ಪ್ರಶ್ನೆ ಕೊನೆಗೆ ಎಲ್ಲಿಗೆ ಹೋಗುತ್ತೆ ಅಂದರೆ ನಮಗೆ ಅರ್ಥವೇ ಆಗೋದಿಲ್ಲ ಅನ್ನೋ ಒಂದು ಮಟ್ಟಕ್ಕೆ ಹೋಗಿ ನಿಂತು ನಾವು ಒಂಥರ ದಿಙ್ಮೂಢರಾಗ್ತೀವಿ. 'ಪರ್ವ'ದಲ್ಲಿ ಬರುವಂತಹ ಭೀಷ್ಮ - ಅಲ್ಲಿ ಕೊನೆಗೆ ಹೋಗಿ ನಿಂತುಕೊಂಡು ಬಿಡ್ತಾನಲ್ಲ - ಸುತ್ತುಮುತ್ತ ಇರುವ ಹದ್ದುಗಳು ಅವನ ಹತ್ತಿರ ಹತ್ತಿರಕ್ಕೆ ಬರ್ತಾ ಇರ್ತಾವೆ. ಆಮೇಲೆ ಏನು ಅಂತ ಪ್ರಶ್ನೆಗೆ ನೇರವಾಗಿ ಭೀಷ್ಮನ ಮೂಲಕವಾಗಿ ಉತ್ತರ ಹೇಳಿಸಲಿಕ್ಕೆ ತಾಂತ್ರಿಕವಾಗಿ ಕಾದಂಬರಿಕಾರನಿಗೆ ಸಾಧ್ಯವಿಲ್ಲ. ಆವಾಗ ನಾನು ಏನು ಮಾಡಿದ್ದೀನಿ ಅಂದರೆ ಸುತ್ತ ಇರುವ ಭೀಷ್ಮನನ್ನು ನೋಡಿಕೊಳ್ಳಲಿಕ್ಕೆ ನೇಮಿಸಿದ ಅಂಗರಕ್ಷಕರು ಇದನ್ನು ನೋಡಿ - ಏನು ಈ ಮುದುಕನೇ ರಣಹದ್ದು ಅಂದರೆ ಮೃತ್ಯವೇ ಆಗ್ತಿದ್ದಾನೆಯೊ? ಅಂದುಕೊಳ್ತಾರೆ. ಅಂದರೆ ಭೀಷ್ಮನು ಕಾಲದ ಪ್ರತಿಬಿಂಬ ಆಗ್ತಿದ್ದಾನೆಯೊ? ಅದು ಒಂದು ತತ್ತ್ವಶಾಸ್ತ್ರದ ಪ್ರಶ್ನೆ. ಅಂದರೆ ನಿಮ್ಮ ನೀತಿಯ ನಿಯಮವು ತತ್ತ್ವಶಾಸ್ತ್ರದ ಪ್ರಶ್ನೆಯಾಗಿ ಪರ್ಯವಸಾನವಾಗಿ ಬಿಡುತ್ತೆ. ಒಂಥರಾ ಮಸುಕಾಗಿ ಬಿಡುತ್ತೆ. ಸಾಹಿತ್ಯ ಆ ಮಸುಕು ಮುಟ್ಟುತ್ತಲ್ಲ, ಅದು ಅತ್ಯಂತ ಎತ್ತರಕ್ಕೆ ಹೋಗುವಂತಹ ಸಾಹಿತ್ಯದ ಮಟ್ಟ ಅಂತ ನಾನು ತಿಳ್ಕೊಂಡಿದೀನಿ. ಭವ್ಯ ಅಂತ ಕರೆಯೋದು ಅದನ್ನೇ. ಆದ್ದರಿಂದ ಬರೇ ನೀತಿಯನ್ನು ಇಟ್ಕೊಂಡು ನೀವು ಅದನ್ನು ಸಮಾಜಶಾಸ್ತ್ರ, ಅರ್ಥಶಾಸ್ತ್ರ ಅಥವಾ ಮನಶಾಸ್ತ್ರಗಳಿಂದ ವಿವರಿಸುಕ್ಕೆ ಆಗುವುದಿಲ್ಲ. ಈ ಶಾಸ್ತ್ರಗಳಲ್ಲಿ ತನ್ನ ಬರವಣಿಗೆಯ ಅರ್ಥ ಹುಡುಕುಕ್ಕೆ ಹೋಗಿ ಬಲಿ ಬಿದ್ದವನು ಸಾಹಿತಿ ಆಗುಲ್ಲ. ಇದು ನನ್ನ ಅನುಭವ.

ಮುಂದಿನ ಪ್ರಶ್ನೆ: ಸ್ಥಾವರಕ್ಕಳಿವುಂಟು - ಆದರೆ ಸ್ಥಾವರ ನಿರ್ಮಾಣ ಇತ್ಯಾದಿ. 'ಸಾರ್ಥ'ಕ್ಕೆ ಸಂಬಂಧಪಟ್ಟ ಹಾಗೆ. ಅದೊಂದು ಬರವಣಿಗೆಯ ತಂತ್ರ ಅಷ್ಟೆ. ಎಂಟನೇ ಶತಮಾನದಲ್ಲಿ ಅಂತ ಕಲ್ಪಿಸಿ ನಾನಿದನ್ನು ಬರೆದಿರುವುದು. ಅಲ್ಲಿ ಆಗಲೇ ಒಂದು ಪರಿಸ್ಥಿತಿ ಬಂದುಬಿಟ್ಟಿದೆ. ಆ ಮುಲ್ತಾನದಲ್ಲಿದ್ದಂತಹ, ಮೂಲಸ್ಥಾನಕ್ಕೆ ಆಮೇಲೆ ಮುಲ್ತಾನ ಅಂತ ಕರೆದರು. ಅರಬರು ಮುಲ್ತಾನ್ ಅಂತ ಆಗಲೇ ಕರೀತಾ ಇದ್ರು. ದೇವಸ್ಥಾನವನ್ನು ಒಡೆದುಹಾಕ್ತೀವಿ ಅಂತ ಅವರು ಬೆದರಿಸಿದರು. ಅದನ್ನೆಲ್ಲ ನಾನು ಕಾದಂಬರಿಯಲ್ಲೇ ಬರೆದಿದ್ದೀನಿ. ಆಮೇಲೆ ದೇವಸ್ಥಾನ ಉಳಿಯುತ್ತದೆಯೇ ಎಂಬುದು ಇವನ ಕುತೂಹಲ ಪ್ರಶ್ನೆ. ಭವಿಷ್ಯ ನೋಡುವಂತಹ ಶಕ್ತಿ ಅವರಿಗಿದೆ ಅಂತ. ಎಷ್ಟೋ ಬಾರಿ ಈ ಭವಿಷ್ಯ ನೋಡುವಂಥದ್ದು, ಬೇರೆಯೋರ ಮನಸ್ಸಿನಲ್ಲಿರುವ, ದೂರದಲ್ಲಿರುವಂಥದ್ದನ್ನು ನೋಡುವುದನ್ನೆಲ್ಲ ನಾನು ಬಹಳ ಮಟ್ಟಿಗೆ ಅಲ್ಲಿ ತಂತ್ರವಾಗಿ ಉಪಯೋಗಿಸಿದ್ದೇನೆ. ನಾನು ನೇರವಾಗಿ ಹೇಳುಕ್ಕೆ ಹೋದ್ರೆ 50 ಪುಟ ಆಗಿಬಿಡ್ತಾ ಇತ್ತು. ಆಮೇಲೆ ಕಾದಂಬರಿಯ ಅಗಲ ಎಲ್ಲಿಂದೆಲ್ಲಿಗೋ ಹೋಗಿ ಅದರ ಬಂಧ ಉಳೀತಾ ಇರಲಿಲ್ಲ. ಅದಕ್ಕೇ ಆ ತಂತ್ರವನ್ನು ಉಪಯೋಗಿಸಿದ್ದೀನಿ. ಅವನು ಧ್ಯಾನಸ್ಥಿತಿಗೆ ಹೋಗಿ ಹೇಳ್ತಾನೆ - ದೇವಸ್ಥಾನಗಳನ್ನು ಒಡೆದುಕೊಂಡು ಹೋಗ್ತಾರೆ. ಆದರೆ ಕಟ್ಟುವ ಪ್ರವೃತ್ತಿ ಮಾತ್ರ ನಿಲ್ಲುವುದಿಲ್ಲ ಅಂತ. ಭವಿಷ್ಯದ ಇತಿಹಾಸವನ್ನು ಅವನು ಆ ರೂಪದಲ್ಲಿ ಹೇಳ್ತಾನೆ ಅಷ್ಟೆ.

^^^^^

'ಭೈರಪ್ಪನವರ ಕಾದಂಬರಿಗಳು: ಒಂದು ಅಧ್ಯಯನ' ಪುಸ್ತಕದಿಂದ

1 comment:

  1. "bhairappanavara kadambarigalu :ondu adhyayana"- edited by dr h. v. narasimhamoorthy,pro parvati aithal'[2005]published by BHANDARKARS" COLLEGE ,KUNDAPURA-576201-karnataka. copies @ saahitya bhandara bengaluru[080-22877618]

    ReplyDelete