stat Counter



Sunday, November 21, 2010

Keerikkadu Vishnu Bhat

ಯಕ್ಷಗಾನ ಧ್ರುವತಾರೆ

ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರು

ಒಂದು ನೆನಪು

- ತಿಲಕನಾಥ ಮಂಜೇಶ್ವರ

ಜೀಪು ಪಯಸ್ವಿನಿ ನದಿಯನ್ನು ಎಡಕ್ಕಿರಿಸಿ ಆಕಾಶಕ್ಕೆ ಮೂತಿಯನ್ನಿಟ್ಟುಕೊಂಡು ಏದುಸಿರು ಬಿಡುತ್ತಾ ಗುಡ್ಡ ಹತ್ತುತ್ತಿತ್ತು. ಎಡ-ಬಲಗಳಲ್ಲಿ ಆಕಾಶವನ್ನು ಚುಂಬಿಸಲೆತ್ನಿಸುತ್ತಿರುವ, ಅವುಗಳನ್ನು ಸುತ್ತುವರಿದ ತೊಡೆ ಗಾತ್ರದ, ಹೆಬ್ಬಾವನ್ನು ನೆನಪಿಸುವಂಥ ಬಳ್ಳಿಗಳು ವಾತಾವರಣಕ್ಕೆ ಒಂದು ಗಂಭೀರದ ಆವರಣವನ್ನು ಸೃಷ್ಟಿಸಿದ್ದವು. ನಾವು ಹೋಗುತ್ತಿದ್ದುದು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು ಆರಂಭಿಸಿದ್ದ ಬನಾರಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವಜ್ರ ಮಹೋತ್ಸವ ಮತ್ತು ವಿಷ್ಣು ಭಟ್ ಸ್ಮಾರಕ ಕಟ್ಟಡ ಪ್ರವೇಶೋತ್ಸವ ಸಮಾರಂಭಕ್ಕೆ. ಜೀಪು ಕ್ರಮಿಸುತ್ತಿದ್ದ ದಾರಿಯನ್ನು ಗಮನಿಸಿದರೆ ಈ ಸಮಾರಂಭಕ್ಕೆ ಎಷ್ಟು ಜನ ಸೇರಬಹುದೆನ್ನುವ ಸಂಶಯ ಮೊಳೆತದ್ದಲ್ಲದೆ ಇಂಥ ಕಗ್ಗಾಡಿನಲ್ಲಿ ಸಮಾರಂಭ ನಡೆಸುವ ಧೈರ್ಯ ಈ ಸಂಘದವರಿಗೆ ಬಂದದ್ದು ಹೇಗೆ ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡಿದ್ದು ನಿಜ. ಆದರೆ ಅಂದಿನ ಗೋಷ್ಠಿಗಳೆಲ್ಲ ಮುಗಿದು ಸಂಜೆ ಏಳು-ಎಂಟು ಗಂಟೆಯ ಹೊತ್ತಿಗೆ ಅಲ್ಲಿ ಸೇರಿದ ಸಾವಿರಕ್ಕೆ ಕಡಿಮೆ ಇಲ್ಲದ ಜನಸಂದಣಿಯನ್ನು ವೀಕ್ಷಿಸಿ ಮೂಗಿನ ಮೇಲೆ ಬೆರಳಿಡುವ ಸರದಿ ನಮ್ಮದು!

ಹೌದು, ಈಗಲ್ಲ; 60 ವರ್ಷಗಳ ಹಿಂದೆಯೇ ನಾಡೆಲ್ಲ ಸೋಜಿಗಪಡುವಂಥ ದೇಲಂಪಾಡಿಯ ಬನಾರಿಯಂಥ ಕುಗ್ರಾಮದಲ್ಲಿ ಅದೂ ಬೆಟ್ಟದ ಮೇಲೆ ತೆಂಕುತಿಟ್ಟಿನ ಯಕ್ಷಗಾನ ತರಬೇತಿ ಶಾಲೆಯೊಂದನ್ನು ತೆರೆದವರು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು. ಅದು ಇಲ್ಲಿಯ ವರೆಗೂ ನಡೆದುಕೊಂಡು ಬಂದು ಈಗ ಅರುವತ್ತರ ಸಂಭ್ರಮ ಕಂಡದ್ದು ಸಾಂಸ್ಕೃತಿಕ ಜಗತ್ತಿನ ಪವಾಡಗಳಲ್ಲಿ ಒಂದು.

ಅಲ್ಲಿಯ ವರೆಗೆ ಯಕ್ಷಗಾನವೆಂದರೆ, ಅಶ್ಲೀಲ ಸಂಭಾಷಣೆಗಳಿಂದಲೇ ಮೆರೆಯುತ್ತಿದ್ದ, ಅನಕ್ಷರಸ್ಥರ ಸೊತ್ತಾಗಿದ್ದ ಆ ಕಲೆಯನ್ನು ಒಂದು ಶಿಸ್ತಿಗೆ ಒಳಪಡಿಸಿ, ಕಲಾವಿದರು ಬೀಡಿ, ಸಿಗರೇಟು, ಮದ್ಯಪಾನ, ಜೂಜುಗಳಿಂದ ದೂರವಿರುವಂತೆ ಪ್ರೇರೇಪಿಸಿ ಅವರಲ್ಲೂ ಕಲೆಯ ಬಗ್ಗೆ ಭಕ್ತಿ, ಗೌರವಗಳನ್ನು ಮೂಡಿಸಿದವರು ವಿಷ್ಣು ಭಟ್ಟರು. ಕಲಾವಿದರು ತಮ್ಮ ಅಂಕೆಯನ್ನು ಮೀರಿದಾಗ ಗಾಂಧೀಜಿಯಂತೆ ತಾನು ಉಪವಾಸ ಕುಳಿತು ಕಲಾವಿದರ ಮನ:ಪರಿವರ್ತನೆಗೆ ಎಳಸಿದವರು ಇವರು. ಆರ್ಥಿಕವಾಗಿ
 ಹಿಂದುಳಿದ ಶಿಷ್ಯರಿಂದ ಶುಲ್ಕವನ್ನು ಅಪೇಕ್ಷಿಸದೆ, ಅವರಿಗೇ ನೆರವಾದರು ವಿಷ್ಣು ಭಟ್ಟರು.

ಅಸಂಖ್ಯ ಶಿಷ್ಯ ಗಡಣವನ್ನು ತಯಾರುಮಾಡಿ ತಾವು ನೆಲೆಸಿದ ಮತ್ತು ಸುತ್ತಮುತ್ತಲ ಊರುಗಳಲ್ಲೂ ಯಕ್ಷ ಸಂಸ್ಕೃತಿಯನ್ನು ಬಿತ್ತಿ ಜನರ ಜೀವನ ಮೌಲ್ಯವನ್ನು ಮತ್ತು ನೈತಿಕ, ಸಾಮಾಜಿಕ ಮಟ್ಟವನ್ನು ಎತ್ತರಿಸಿದ ವಿಷ್ಣು ಭಟ್ಟರದು ಉನ್ನತ ಧ್ಯೇಯಾದರ್ಶದ ಬದುಕು.


ಸ್ವ ಅಧ್ಯಯನದ ಹಿರಿಮೆ

ಯಕ್ಷಗಾನ ಅತಿರಥ-ಮಹಾರಥರಲ್ಲಿ ಪ್ರಮುಖರಾದ ಶೇಣಿ ಗೋಪಾಲಕೃಷ್ಣ ಭಟ್ಟರೇ - 'ಯಕ್ಷಗಾನದಲ್ಲಿ ತನ್ನ ಗುರು ಕೀರಿಕ್ಕಾಡು ವಿಷ್ಣು ಭಟ್ಟರು' ಎಂದು ಹೇಳಿದ್ದಾರೆ.

ಕೀರಿಕ್ಕಾಡು ಮಾಸ್ತರ್ ಜನಿಸಿದ್ದು, ಶಿಕ್ಷಣವನ್ನು ಪಡೆದದ್ದು, ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಯಕ್ಷಗಾನ ಗುರುವಾಗಿ ಮೆರೆದದ್ದು ಪರೆಡಾಲ ಗ್ರಾಮದ ಕೀರಿಕ್ಕಾಡುವಿನಲ್ಲಿ. 1912ರಲ್ಲಿ ಕೀರಿಕ್ಕಾಡು ಕೇಶವ ಭಟ್ಟ-ಲಕ್ಷ್ಮೀ ಅಮ್ಮನವರ ಹಿರಿಯ ಮಗನಾಗಿ ಜನಿಸಿದ ವಿಷ್ಣು ಭಟ್ಟರ ಪಾರಂಪರಿಕ ವಿದ್ಯೆ ಆರನೆಯ ತರಗತಿಗೆ ಮುಕ್ತಾಯವಾಗುತ್ತದೆ. ಉಳಿದಂತೆಲ್ಲ ಅವರದು ಸ್ವ ಅಧ್ಯಯನ. ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯ ಅವರು ಯಕ್ಷಗಾನ ಗುರು.

ವಿಷ್ಣು ಭಟ್ಟರ ಗರಡಿಯಲ್ಲಿ ತಯಾರಾದ ಶಿಷ್ಯರೆಲ್ಲ ತೆಂಕುತಿಟ್ಟಿನ ಯಕ್ಷಗಾನದಲ್ಲಿ ಹೆಸರು ಮಾಡಿರುವುದನ್ನು ಕಾಣಬಹುದು. ವಿವಿಧ ವ್ಯವಸಾಯಿ ಮೇಳಗಳಲ್ಲಿ ಉನ್ನತ ಸ್ಥಾನಕ್ಕೇರಿ ಕೀರ್ತಿಸಂಪಾದಿಸಿದವರಲ್ಲಿ ಕೇದಗಡಿ ಗುಡ್ಡಪ್ಪ ಗೌಡ, ಅಣ್ಣಯ್ಯ ಭಂಡಾರಿ, ಕಂಪ ನಾರಾಯಣ ರೈ, ಗುತ್ತು ನಾರಾಯಣ ರೈ, ಯು.ವಿ. ಗೋವಿಂದಯ್ಯ, ಲಕ್ಷ್ಮೀನಾರಾಯಣ ಕಲ್ಲೂರಾಯ, ಡಿ. ಮಾಲಿಂಗ ಪಾಟಾಳಿ ಮುಂತಾದವರು ಮುಖ್ಯರು. ತನ್ನ ಕೈಲಾಗದ ಸಂದರ್ಭದಲ್ಲಿ ಹಿರಿಯ ಭಾಗವತ ಜತ್ತಪ್ಪ ರೈಗಳ ಮೂಲಕ ಹಾಡುಗಾರಿಕೆ, ಮೃದಂಗ ವಾದನ, ತನ್ನ ಶಿಷ್ಯ ಕಡಾರು ನಾರಾಯಣ ಭಟ್ಟರಿಂದಲೂ ಶಿಕ್ಷಣ ಕೊಡಿಸಿದ್ದಾರೆ.

ವಿಷ್ಣು ಭಟ್ಟರ ಆಸಕ್ತಿ ಯಕ್ಷಗಾನ ಮಾತ್ರವೇ ಆಗಿರಲಿಲ್ಲ. ಒಳ್ಳೆಯ ಕೃಷಿಕ, ಅಧ್ಯಾಪಕ, ಸಾಹಿತಿ, ಯಕ್ಷಗಾನ ಪ್ರಸಂಗಕರ್ತರೂ ಆಗಿದ್ದರು.

ನೂರಕ್ಕೂ ಹೆಚ್ಚು ಪ್ರಸಂಗಗಳನ್ನು ಬರೆದಿದ್ದಾರೆ. 'ಪತ್ತೇದಾರ ರಮಾನಂದ'ವೇ ಮುಂತಾದ ಐದು ಪತ್ತೇದಾರಿ ಕಾದಂಬರಿಗಳನ್ನು ಬರೆದಿದ್ದಾರೆ. 'ವಿಷ್ಣುಶರಣನ ವಚನಗಳು' ಮತ್ತು 'ಯಕ್ಷರಸ ಜೀವನ' ಮಹತ್ತ್ವಪೂರ್ಣವಾದ ಕೃತಿಗಳು. ನಗು ಸೂಸುವ ಅಗಲ ಮುಖ, ತಿದ್ದಿ-ತೀಡಿದ ಮೀಸೆ, ಗಡ್ಡ, ತೀಕ್ಷ್ಣವಾದ ಆದರೆ ಪ್ರೀತಿ ಸೂಸುವ ಕಣ್ಣುಗಳು, ಕಪ್ಪು ಫ್ರೇಮಿನ ಕನ್ನಡಕ, ಹಿಂದಕ್ಕೆ ಬಾಚಿದ, ಕತ್ತಿನ ತನಕ ಇಳಿಬಿಟ್ಟ ಕೂದಲು, ಶುಭ್ರವಾದ ಧೋತಿ, ಅಂಗಿ, ಅದರ ಮೇಲೊಂದು ವಾಸ್ಕೋಟು, ಇವೆಲ್ಲ ಅವರಿಗೆ ಕ್ರಾಂತಿಕಾರಿ ಚೌಕಟ್ಟು ಒದಗಿಸಿದಂತೆ ಯಕ್ಷಗಾನದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದವರು.

ಎಲ್ಲವೂ ಶ್ರೇಷ್ಠ

ಕೀರಿಕ್ಕಾಡು ಮಾಸ್ತರರ ಅಗ್ಗಳಿಕೆಯನ್ನು ಮಂಗಳೂರಿನ ವಕೀಲರಾದ ಎಂ.ಎಸ್. ಭಟ್ ಎದುರಿಸುವುದು ಹೀಗೆ - 'ಯಕ್ಷಗಾನ ಅರ್ಥಗಾರಿಕೆ, ತಾಳಮದ್ದಲೆಯಲ್ಲಿ ಪಾತ್ರ ನಿರ್ವಹಣೆ, ನಾಟ್ಯ, ತಾಳ, ಕುಣಿತ ಯಾವುದರಲ್ಲಿ ಸ್ಪಷ್ಟತೆ, ನಿಖರತೆಗೆ ಎಂಥ ಪಂಡಿತರನ್ನೂ ಮೆಚ್ಚಿಸುವಂಥ ಮೇರು ಕುಶಲತೆ, ನೈಪುಣ್ಯ ಮಾಸ್ತರರಲ್ಲಿತ್ತು. ಅವರ ಪಾಂಡಿತ್ಯ ಅಷ್ಟು ಅಗಾಧ, ಅವರ ಮಾತು, ವೇಷ, ನೃತ್ಯ, ಹಾಸ್ಯ ಪ್ರತಿಯೊಂದೂ ಅಷ್ಟು ಶ್ರೇಷ್ಠ.'

ಪ್ರಶಸ್ತಿ, ಪುರಸ್ಕಾರಗಳ ಮಾತು ಕೇಳಿ ಗೊತ್ತಿಲ್ಲದ ದಿನಗಳಲ್ಲಿ ಜನ ಮೆಚ್ಚುಗೆಯೇ ತಮಗೆ ಸಂದ ಪ್ರತಿಫಲ ಎಂದು ಬಾಳಿದ, ರಂಗಸ್ಥಳವನ್ನು ಆಳಿದ, ಜನಮನದಲ್ಲಿ ನೆಲೆನಿಂತ ಈ ಮಹಾನುಭಾವರ ಹೆಸರಲ್ಲಿ ಅವರೇ ತಮ್ಮ ಕೊನೆಯ ದಿನಗಳಲ್ಲಿ ಆಸೆಪಟ್ಟಂತೆ ಒಂದು ಕಲಾಮಂದಿರ ನಿರ್ಮಾಣಗೊಂಡಿದೆ.

ಸುಮಾರು 600-700 ಜನರು ಕೂಡಬಹುದಾದ ಹೊರ ಗೋಡೆ ಕಿಟಿಕಿಗಳ ಬಂಧನವಿಲ್ಲದ ತೆರೆದ ಮಂದಿರವಾಗಿ ತಲೆ ಎತ್ತಿನಿಂತಿದೆ. ಮಾಸ್ತರ್ ಅವರ ಮಕ್ಕಳಾದ ವನಮಾಲಾ ಕೇಶವ ಭಟ್ಟ, ಡಾ. ರಮಾನಂದ ಬನಾರಿ, ವಿಶ್ವವಿನೋದ ಬನಾರಿ ಅವರ ಕರ್ತೃತ್ವಶಕ್ತಿ, ಊರವರ ಸಹಕಾರದಿಂದ ಸರಕಾರಿ ಸಹಾಯಕ್ಕೆ ಕೈಚಾಚದೆ ನಿರ್ಮಾಣಗೊಂಡ ಕಲಾಮಂದಿರ ಇದು.

ಎರಡು ವರ್ಷಗಳ ಪರ್ಯಂತ ನಡೆದ ಸಂಘದ ವಜ್ರ ಮಹೋತ್ಸವ ಸಮಾರಂಭ, ಯಕ್ಷಗಾನದ ಅಗ್ರಗಣ್ಯರ ಭಾಗವಹಿಸುವಿಕೆಯೊಂದಿಗೆ ಯಕ್ಷಗಾನದ ಬಗ್ಗೆ ವಿವಿಧ ಗೋಷ್ಠಿಗಳು, ಪ್ರಾತ್ಯಕ್ಷಿಕೆಗಳು, ಸನ್ಮಾನ ಸಮಾರಂಭ, ಮಾಸ್ತರ ಹೆಸರಿನಲ್ಲಿ ಸ್ಥಾಪಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭಗಳೊಂದಿಗೆ ಕೊನೆ ಕಂಡಿತು.

(ತರಂಗ, 1 ಜೂನ್, 2006)



ಟಿಪ್ಪಣಿ -

ನನ್ನ ಪತ್ನಿ (ಶಾರದಾ)ಯ ತೌರುಮನೆ ಕೋಟಿಗದ್ದೆ, ಕೀರಿಕ್ಕಾಡು ವಿಷ್ಣು ಭಟ್ಟರ ದೇಲಂಪಾಡಿ ಮನೆಯ ಸಮೀಪದಲ್ಲಿದೆ. ನನ್ನ ಪತ್ನಿಯ ತಾಯಿ-ತಂದೆ (ಕೃಷ್ಣಯ್ಯ-ದೇವಕಿ) ದಂಪತಿಗಳು ಕೌಟುಂಬಿಕ ಸಮಸ್ಯೆಗಳಲ್ಲಿ ಕಂಗಾಲಾಗಿದ್ದಾಗ ಅವರಿಗೆ ನೈತಿಕ ಬೆಂಬಲ ನೀಡಿದವರು ಕೀರಿಕ್ಕಾಡು ವಿಷ್ಣು ಭಟ್ಟರು.

1980ರ ದಶಕದಲ್ಲಿ ನಾನು ಹಲವು ಬಾರಿ ಅವರನ್ನು ಭೇಟಿಯಾಗಿದ್ದೆ. 'ಪರ್ವ'ದಲ್ಲಿರುವ ಪುರಾಣಭಂಜನೆ ಅವರಿಗೆ ಇಷ್ಟವಾಗಿರಲಿಲ್ಲ. ಕೀರಿಕ್ಕಾಡು ಅವರ ಆತ್ಮಕತೆ, ಹಲವು ಯಕ್ಷಗಾನ ಪ್ರಸಂಗಗಳು ಪ್ರಕಟವಾಗಿವೆ.

- ಮುರಳೀಧರ ಉಪಾಧ್ಯ ಹಿರಿಯಡಕ






No comments:

Post a Comment